ರೈಲ್ವೇ ನಿಲ್ದಾಣಗಳ ಮರು ಅಭಿವೃದ್ದಿ ದೊಡ್ಡ ಪ್ರಮಾಣದಲ್ಲಿ ಆಧುನೀಕರಣಕ್ಕೆ ಹಾದಿ ತೆರೆಯಲಿದೆ ಮತ್ತು ವಿಶ್ವ ದರ್ಜೆಯ ರೈಲ್ವೇ ಮೂಲಸೌಕರ್ಯವನ್ನು ಖಾತ್ರಿಗೊಳಿಸುತ್ತದೆ. ನಿಲ್ದಾಣದಲ್ಲಿಯ ಮತ್ತು ಸುತ್ತಮುತ್ತಲಿನ ತನ್ನ ಭೂಮಿ ಮತ್ತು ವಾಯು ಅವಕಾಶವನ್ನು ವಾಣಿಜ್ಯ ಬಳಕೆಗಾಗಿ ಅಭಿವೃದ್ದಿಪಡಿಸುವ ಮೂಲಕ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳು ದೊರೆಯುವಂತೆ ಮಾಡುತ್ತದೆ. 99 ವರ್ಷಗಳವರೆಗಿನ ಧೀರ್ಘಾವಧಿ ಲೀಸ್, ಹಲವು ಉಪ ಲೀಸಿಂಗ್ ವ್ಯವಸ್ಥೆ, ಸರಳೀಕೃತ ಹರಾಜು ಪ್ರಕ್ರಿಯೆಗಳೂ ಸೇರಿದಂತೆ ಸರಳ ಕಾರ್ಯಕ್ರಮ , ವಿನ್ಯಾಸಗಳ ಮೂಲಕ ನಡೆಯುವ ಈ ಮರು ಅಭಿವೃದ್ದಿ ಅತ್ಯಾಧುನಿಕ ಸ್ಮಾರ್ಟ್ ನಿಲ್ದಾಣಗಳನ್ನು ನಿರ್ಮಿಸಲಿದೆ ಮತ್ತು ಅವು ಮಿನಿ ಸ್ಮಾರ್ಟ್ ಸಿಟಿಗಳಂತೆ ಕಾರ್ಯನಿರ್ವಹಿಸುತ್ತವೆ. ರೈಲ್ವೇ ನಿಲ್ದಾಣಗಳ ಮರು ಅಭಿವೃದ್ದಿ ಹೆಚ್ಚಿನ ಉದ್ಯೋಗ ಸೃಷ್ಟಿ ಮತ್ತು ಸುಧಾರಿತ ಆರ್ಥಿಕ ಬೆಳವಣಿಗೆಯ ಮೂಲಕ ಆರ್ಥಿಕತೆಯ ಮೇಲೆ ಬಹು ಆಯಾಮದ ಪರಿಣಾಮ ಉಂಟು ಮಾಡಲಿದೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತೀಯ ರೈಲ್ವೇ ನಿಲ್ದಾಣಗಳ ನಿಗಮ ನಿಯಮಿತ ( ಐ.ಆರ್. ಎಸ್.ಡಿ.ಸಿ.) ವನ್ನು ನೋಡಲ್ ಏಜೆನ್ಸಿ ಮತ್ತು ಮುಖ್ಯ ಯೋಜನಾ ಅಭಿವೃದ್ದಿ ಏಜೆನ್ಸಿಯಾಗಿಸಿಕೊಂಡು, ಸರಳೀಕೃತ ಪ್ರಕ್ರಿಯೆಗಳು ಹಾಗು ವಿವಿಧ ವ್ಯಾಪಾರೋದ್ಯಮ ಮಾದರಿಗಳನ್ನು ಅಳವಡಿಸಿಕೊಂಡು ಹಾಗು 99 ವರ್ಷಗಳವರೆಗೆ ಧೀರ್ಘಾವಧಿ ಲೀಸ್ ನೀಡುವ ಅವಕಾಶಗಳ ಮೂಲಕ ರೈಲ್ವೇ ನಿಲ್ದಾಣಗಳ ಮರು ಅಭಿವೃದ್ದಿಗೆ ತನ್ನ ಅನುಮೋದನೆ ನೀಡಿತು. ಈ ಮೂಲಕ ಅದು ದೊಡ್ಡ ಪ್ರಮಾಣದಲ್ಲಿ ಆಧುನೀಕರಣಕ್ಕೆ ಹಾದಿ ತೆರೆಯಿತು ಮತ್ತು ವಿಶ್ವದರ್ಜೆಯ ಮೂಲಸೌಕರ್ಯವನ್ನು ಖಾತ್ರಿಪಡಿಸಿತು.
ರೈಲ್ವೇ ನಿಲ್ದಾಣಗಳಲ್ಲಿ ಮತ್ತು ಸುತ್ತಮುತ್ತಲಿನಲ್ಲಿರುವ ಭೂಮಿ ಹಾಗು ವಾಯು ಅವಕಾಶವನ್ನು ಬಳಸಿಕೊಂಡು ವಾಣಿಜ್ಯ ಅಭಿವೃದ್ದಿ ಮಾಡುವ ಯೋಜನೆ ಮೂಲಕ ದೇಶಾದ್ಯಂತ ಪ್ರಮುಖ ನಿಲ್ದಾಣಗಳ ಮರು ಅಭಿವೃದ್ದಿಗೆ ಯೋಜಿಸಲಾಗಿದೆ. ಈ ಕಾರ್ಯಕ್ರಮವು ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡಲಿದೆ ಮತ್ತು ಹೆಚ್ಚುವರಿ ಆದಾಯವನ್ನು ತರಲಿದೆ ಹಾಗು ರೈಲ್ವೇ ಸಚಿವಾಲಯಕ್ಕೆ (ಎಂ.ಒ.ಆರ್.) ಯಾವುದೇ ಹೆಚ್ಚುವರಿ ಖರ್ಚು ತಗಲುವುದಿಲ್ಲ. ಇದಲ್ಲದೆ ದೇಶಾದ್ಯಂತ ರೈಲ್ವೇ ನಿಲ್ದಾಣಗಳ ಅಭಿವೃದ್ದಿಯಿಂದ ಆರ್ಥಿಕತೆಯ ಮೇಲೆ ಬಹು ಆಯಾಮದ ಪರಿಣಾಮಗಳಾಗಲಿವೆ , ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಆರ್ಥಿಕ ಬೆಳವಣಿಗೆ ಸುಧಾರಿಸಲಿದೆ.
ಐ.ಆರ್.ಎಸ್.ಡಿ.ಸಿ.ಯು ನೋಡಲ್ ಏಜೆನ್ಸಿಯಾಗಿ ಒಟ್ಟು ಸಮಗ್ರ ವ್ಯೂಹಾತ್ಮಕ ಯೋಜನೆಯನ್ನು ರೂಪಿಸಲಿದೆ ಮತ್ತು ಈ ಕಾರ್ಯಕ್ರಮದ ವೆಚ್ಚ ತಾಟಸ್ಥ್ಯ ಅಥವಾ ಹೆಚ್ಚುವರಿ ಹಣಕಾಸು ಹೊರೆ ಬಾರದಂತೆ ಖಾತ್ರಿಪಡಿಸಿ ಏಕ ಅಥವಾ ಗುಂಪು ನಿಲ್ದಾಣಗಳ ವ್ಯಾಪಾರೋದ್ಯಮ ಯೋಜನೆಯನ್ನು ರೂಪಿಸಲಿದೆ. ವ್ಯಾಪಾರೋದ್ಯಮ ಯೋಜನೆಗೆ ಎಂ.ಒ.ಆರ್. ಅನುಮೋದನೆ ದೊರೆತ ಬಳಿಕ ಐ.ಆರ್.ಎಸ್.ಡಿ.ಸಿ. ಅಥವಾ ಇತರ ಯೋಜನಾ ಅಭಿವೃದ್ದಿ ಏಜೆನ್ಸಿಗಳು ನಿಲ್ದಾಣ ಅಭಿವೃದ್ದಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತವೆ. ರೈಲ್ವೇ/ಆರ್.ಎಲ್.ಡಿ.ಎ./ ಐ.ಆರ್.ಎಸ್.ಡಿ.ಸಿ. ಗಳು ಸ್ಥಳೀಯ ಪ್ರಾಧಿಕಾರಗಳು/ಡಿ.ಡಿ.ಎ. ಅಥವಾ ಇತರ ಯು.ಟಿ.ಗಳ ಜೊತೆ ಸಮಾಲೋಚನೆ ಬಳಿಕ ರೈಲ್ವೇ ಉಚಿತವಾಗಿ ನಿಯಂತ್ರಣ ಸಾಧಿಸುವ ಆಧಾರದ ಮೇಲೆ ಭೂಮಿ ವರ್ಗಾವಣೆ ಮಾಡುವುದೂ ಸೇರಿದಂತೆ ರೈಲ್ವೇ ಭೂಮಿಯ ಯೋಜನೆ ಮತ್ತು ಅಭಿವೃದ್ದಿಯ ಪ್ರಾಧಿಕಾರಗಳಾಗಿರಲಿವೆ. ಇದರಿಂದ ರೈಲ್ವೇ ಸಚಿವಾಲಯಕ್ಕೆ ದೇಶಾದ್ಯಂತ ಪ್ರಮುಖ ನಿಲ್ದಾಣಗಳ ಮರು ಅಭಿವೃದ್ದಿಯನ್ನು ಹೆಚ್ಚುವರಿ ವೆಚ್ಚವಿಲ್ಲದೆ ತ್ವರಿತಗೊಳಿಸಲು ಸಹಾಯವಾಗಲಿದೆ. ಈ ಮರು ಅಭಿವೃದ್ದಿ ಪ್ರಯತ್ನಗಳು ಮಿನಿ ಸ್ಮಾರ್ಟ್ ಸಿಟಿಗಳಂತೆ ಕಾರ್ಯನಿರ್ವಹಿಸುವ ಅತ್ಯಾಧುನಿಕ ಮಾದರಿಯ ಸ್ಮಾರ್ಟ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಿವೆ.
ರೈಲ್ವೇ ಪ್ರಯಾಣಿಕರು ಮತ್ತು ಉದ್ಯಮಕ್ಕೆ ಇದರಿಂದ ಬಹಳ ದೊಡ್ದ ಪ್ರಮಾಣದಲ್ಲಿ ಲಾಭವಾಗಲಿದೆ. ಪ್ರಯಾಣಿಕರು ಇದರಿಂದ ಅಂತಾರಾಷ್ಟ್ರೀಯ ರೈಲ್ವೇ ನಿಲ್ದಾಣಗಳಲ್ಲಿ ಇರುವಂತಹ ಸೌಲಭ್ಯಗಳಿಗೆ ಸಮನಾದ ಸೌಕರ್ಯಗಳನ್ನು ಪಡೆಯುತ್ತಾರೆ ಮತ್ತು ಈ ಕಾರ್ಯಕ್ರಮದ ಬಾಹ್ಯ ಫಲಶ್ರುತಿಯಾಗಿ ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
ಹಿನ್ನೆಲೆ:
‘ಎ1’ ಮತ್ತು ‘ಎ’ ಶ್ರೇಣಿಯ ನಿಲ್ದಾಣಗಳನ್ನು ವಲಯ ರೈಲ್ವೇಗಳ ಮೂಲಕ ಮರು ಅಭಿವೃದ್ದಿ ಮಾಡಲು 2015 ರ ಜೂನ್ 24ರಂದು ಸಂಪುಟ ಅನುಮೋದನೆ ನೀಡಲಾಗಿತ್ತು. ಇದಕ್ಕೆ ಸಂಪುಟ ಅನುಮೋದಿಸಿದ ಪ್ರಕ್ರಿಯೆಗಳು ಮತ್ತು 45 ವರ್ಷದ ಲೀಸ್ ಅವಧಿಯನ್ನು ನಿಗದಿ ಮಾಡಲಾಗಿತ್ತು. ಆದಾಗ್ಯೂ ಹರಾಜಿಗೆ ಬಿಡ್ಡರುಗಳಿಂದ ಹೆಚ್ಚಿನ ಒಲವು ವ್ಯಕ್ತವಾಗಲಿಲ್ಲ. ಡೆವಲಪರ್ ಗಳು , ಹೂಡಿಕೆದಾರರು ಮತ್ತು ಇತರ ಭಾಗೀದಾರರ ಜೊತೆ ಹಲವಾರು ಬಾರಿ ಸಂವಾದ ನಡೆಸಿದ ಬಳಿಕ ಬಹು ಉಪ ಗುತ್ತಿಗೆ, ಸರಳ ಹರಾಜು ಪ್ರಕ್ರಿಯೆಗಳು ಇತ್ಯಾದಿ ಸಹಿತ ವಿವಿಧ ವಿಷಯಗಳನ್ನು ಪದೇ ಪದೇ ಚರ್ಚಿಸಲಾಯಿತು. ಇದರಿಂದಾಗಿ ಈ ಎಲ್ಲ ವಿಷಯಗಳಿಗೆ ಸಂಬಂಧಿಸಿ ಸುಧಾರಿತ ಮತ್ತು ಸರಳೀಕೃತ ಕಾರ್ಯಕ್ರಮ ವಿನ್ಯಾಸ ಮತ್ತು ವಿಶೇಷ ಅನುಷ್ಟಾನ ಏಜೆನ್ಸಿ (ಐ.ಆರ್.ಎಸ್.ಡಿ.ಸಿ.) ಅಡಿಯಲ್ಲಿ ಸೂಕ್ತ ರಚನಾತ್ಮಕ, ಪ್ರಕ್ರಿಯಾತ್ಮಕ, ಮತ್ತು ಮಾನದಂಡಗಳ ಬದಲಾವಣೆಗಳನ್ನು ನಿಲ್ದಾಣ ಮರುಅಭಿವೃದ್ದಿ ಕಾರ್ಯಕ್ರಮಕ್ಕೆ ಪುನಃಶ್ಚೇತನ ನೀಡುವುದಕ್ಕಾಗಿ ಅಂಗೀಕರಿಸಲಾಯಿತು.