Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಸಿಎ ಜಾಗತಿಕ ಸಹಕಾರ ಸಮ್ಮೇಳನ 2024 ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಐಸಿಎ ಜಾಗತಿಕ ಸಹಕಾರ ಸಮ್ಮೇಳನ 2024 ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿಂದು ಆಯೋಜಿಸಲಾಗಿದ್ದ ಐಸಿಎ ಜಾಗತಿಕ ಸಹಕಾರಿ ಸಮ್ಮೇಳನ-2024 ಅನ್ನು ಉದ್ಘಾಟಿಸಿದರು. ಶ್ರೀ ಮೋದಿ ಅವರು ಸಮ್ಮೇಳನಕ್ಕೆ ಆಗಮಿಸಿದ್ದ ಭೂತಾನ್‌ ಪ್ರಧಾನಮಂತ್ರಿ ಗೌರವಾನ್ವಿತ ದಾಶೋ ಶೆರಿಂಗ್ ಟೊಬ್ಗೆ, ಫಿಜಿಯ ಉಪಪ್ರಧಾನ ಮಂತ್ರಿ ಮನೋವಾ ಕಾಮಿಕಾಮಿಕಾ, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಭಾರತದಲ್ಲಿ ವಿಶ್ವಸಂಸ್ಥೆಯ ಸ್ಥಾನಿಕ ಸಂಚಾಲಕ ಶ್ರೀ ಶೋಂಬಿ ಶಾರ್ಪ್, ಅಂತಾರಾಷ್ಟ್ರೀಯ ಸಹಕಾರಿ ಮೈತ್ರಿಕೂಟದ ಅಧ್ಯಕ್ಷ ಏರಿಯಲ್ ಗೌರ್ಕೊ ಅಲೈಯನ್ಸ್,  ವಿವಿಧ ದೇಶಗಳ ಗಣ್ಯರು, ಮಹಿಳೆಯರು ಮತ್ತು ಮಹನೀಯರನ್ನು ಸ್ವಾಗತಿಸಿದರು.

ಈ ಸ್ವಾಗತ ನನ್ನೊಬ್ಬನಿಂದ ಮಾತ್ರ ಆಗುತ್ತಿಲ್ಲ, ದೇಶದ ಸಾವಿರಾರು ರೈತರು, ಹೈನುಗಾರರು, ಮೀನುಗಾರರು, 8 ಲಕ್ಷಕ್ಕೂ ಹೆಚ್ಚು ಸಹಕಾರ ಸಂಘಗಳು, ಸ್ವ-ಸಹಾಯ ಸಂಘಗಳಿಗೆ ಸಂಬಂಧಿಸಿದ 10 ಕೋಟಿ ಮಹಿಳೆಯರು ಮತ್ತು ಸಹಕಾರಿ ಸಂಸ್ಥೆಗಳೊಂದಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ತೊಡಗಿಸಿಕೊಂಡಿರುವ ಯುವಕರು ಸಮ್ಮೇಳನದ ಎಲ್ಲ ಗಣ್ಯರನ್ನು ಸ್ವಾಗತಿಸುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಭಾರತದಲ್ಲಿ ಸಹಕಾರ ಚಳುವಳಿ ವಿಸ್ತರಣೆಯಾಗುತ್ತಿರುವಾಗಲೇ, ಭಾರತದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟದ ಜಾಗತಿಕ ಸಹಕಾರ ಸಮ್ಮೇಳನ ಆಯೋಜಿಸಲಾಗಿದೆ. ಈ ಜಾಗತಿಕ ಸಹಕಾರ ಸಮ್ಮೇಳನದಿಂದ ಭಾರತದ ಸಹಕಾರಿ ಪಯಣದ ಭವಿಷ್ಯದ ಅಗತ್ಯ ಒಳನೋಟಗಳು ಸಿಗಲಿವೆ. ಇದಕ್ಕೆ ಪ್ರತಿಯಾಗಿ, ಜಾಗತಿಕ ಸಹಕಾರ ಚಳುವಳಿಯು ಭಾರತದ ಸಹಕಾರಿಗಳ ಶ್ರೀಮಂತ ಅನುಭವದಿಂದ 21ನೇ ಶತಮಾನದ ಹೊಸ ಚೈತನ್ಯ ಮತ್ತು ಇತ್ತೀಚಿನ ಸಾಧನಗಳನ್ನು ಪಡೆಯುತ್ತದೆ. 2025 ನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷ ಎಂದು ಘೋಷಿಸಿದ್ದಕ್ಕಾಗಿ ಶ್ರೀ ಮೋದಿ ವಿಶ್ವಸಂಸ್ಥೆಗೆ ಧನ್ಯವಾದ ಅರ್ಪಿಸಿದರು.

ಶತಮಾನಗಳ ಹಳೆಯ ಸಂಸ್ಕೃತಿಗೆ ಒತ್ತು ನೀಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, “ಇಡೀ ಜಗತ್ತಿಗೆ ಸಹಕಾರಿ ಸಂಸ್ಥೆಗಳು ಮಾದರಿಯಾಗಿವೆ, ಆದರೆ ಭಾರತಕ್ಕೆ ಇದು ಸಂಸ್ಕೃತಿಯ ಆಧಾರಸ್ತಂಭವಾಗಿದೆ, ಜೀವನ ವಿಧಾನವಾಗಿದೆ”. ಭಾರತದ ಧರ್ಮಗ್ರಂಥಗಳ ಶ್ಲೋಕಗಳನ್ನು ಪಠಿಸಿದ ಶ್ರೀ ಮೋದಿ, ನಾವೆಲ್ಲರೂ ಒಟ್ಟಾಗಿ ನಡೆಯಬೇಕು ಮತ್ತು ಒಗ್ಗಟ್ಟಿನಿಂದ ಮಾತನಾಡಬೇಕು ಎಂದು ನಮ್ಮ ವೇದಗಳಲ್ಲಿ ಹೇಳಲಾಗಿದೆ, ಆದರೆ ನಮ್ಮ ಉಪನಿಷತ್ತುಗಳು ಶಾಂತಿಯುತವಾಗಿ ಬದುಕುವುದನ್ನು  ಹೇಳುತ್ತವೆ, ಸಹಬಾಳ್ವೆಯ ಮಹತ್ವವನ್ನು ನಮಗೆ ಕಲಿಸುತ್ತವೆ, ಅದರ ಮೌಲ್ಯವೂ ಸಹ. ಭಾರತೀಯ ಕುಟುಂಬಗಳು ಮತ್ತು ಅದೇ ರೀತಿ ಸಹಕಾರಿಗಳ ಮೂಲಕ್ಕೆ ಅವಿಭಾಜ್ಯ ಅಂಗವಾಗಿದೆ ಎಂದರು.

ಭಾರತದ ಸ್ವಾತಂತ್ರ್ಯ ಹೋರಾಟವೂ ಸಹ ಸಹಕಾರಿ ಸಂಸ್ಥೆಗಳಿಂದ ಪ್ರೇರಿತವಾಗಿದೆ, ಇದು ಆರ್ಥಿಕ ಸಬಲೀಕರಣ ಮಾತ್ರವಲ್ಲದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಸಾಮಾಜಿಕ ವೇದಿಕೆ ನೀಡಿದೆ. ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಆಂದೋಲನವು ಸಮುದಾಯದ ಸಹಭಾಗಿತ್ವಕ್ಕೆ ಹೊಸ ಉತ್ತೇಜನ ನೀಡಿತು. ಖಾದಿ ಮತ್ತು ಗ್ರಾಮೋದ್ಯೋಗಗಳ ಸಹಕಾರಿಗಳ ಸಹಾಯದಿಂದ ಹೊಸ ಕ್ರಾಂತಿ ಪ್ರಾರಂಭಿಸಿತು. ಇಂದು ಸಹಕಾರಿ ಸಂಸ್ಥೆಗಳು, ಖಾದಿ ಮತ್ತು ಗ್ರಾಮೋದ್ಯಮಗಳು ಪೈಪೋಟಿಯಲ್ಲಿ ದೊಡ್ಡ ಬ್ರಾಂಡ್‌ಗಳಿಗಿಂತ ಮುಂದೆ ಸಾಗಲು ಸಹಾಯ ಮಾಡಿವೆ. ಸರ್ದಾರ್ ಪಟೇಲ್ ಅವರು ಹಾಲು ಸಹಕಾರಿ ಸಂಘಗಳನ್ನು ಬಳಸಿಕೊಂಡು ರೈತರನ್ನು ಒಗ್ಗೂಡಿಸಿದರು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. “ಭಾರತದ ಸ್ವಾತಂತ್ರ್ಯ ಹೋರಾಟದ ಉತ್ಪನ್ನವಾದ ಅಮೂಲ್, ಅಗ್ರ ಜಾಗತಿಕ ಆಹಾರ ಬ್ರಾಂಡ್‌ಗಳಲ್ಲಿ ಒಂದಾಗಿದೆ”. ಭಾರತದಲ್ಲಿನ ಸಹಕಾರಿ ಸಂಸ್ಥೆಗಳು ಕಲ್ಪನೆಯಿಂದ ಚಲನೆಗೆ, ಚಳುವಳಿಯಿಂದ ಕ್ರಾಂತಿಗೆ ಮತ್ತು ಕ್ರಾಂತಿಯಿಂದ ಸಬಲೀಕರಣಕ್ಕೆ ಪ್ರಯಾಣಿಸಿದೆ ಎಂದು ಪ್ರಧಾನಿ ಹೇಳಿದರು.

ಇಂದು ನಾವು ಸಹಕಾರದೊಂದಿಗೆ ಆಡಳಿತವನ್ನು ಒಟ್ಟುಗೂಡಿಸುವ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. “ಇಂದು, ಭಾರತವು 8 ಲಕ್ಷ ಸಹಕಾರಿ ಸಮಿತಿಗಳನ್ನು ಹೊಂದಿದೆ, ಅಂದರೆ ಪ್ರಪಂಚದ ಪ್ರತಿ 4ನೇ ಸಮಿತಿಯು ಭಾರತದಲ್ಲಿದೆ”. ಅವುಗಳ ವ್ಯಾಪ್ತಿಯು ಅವುಗಳ ಸಂಖ್ಯೆಯಷ್ಟು ವೈವಿಧ್ಯಮಯ ಮತ್ತು ವಿಶಾಲವಾಗಿದೆ. ಸಹಕಾರಿ ಸಂಸ್ಥೆಗಳು ಗ್ರಾಮೀಣ ಭಾರತದ ಸುಮಾರು 98 ಪ್ರತಿಶತ ಒಳಗೊಂಡಿದೆ. “ಸುಮಾರು 30 ಕೋಟಿ (300 ದಶಲಕ್ಷ) ಜನರು, ಅಂದರೆ ಪ್ರತಿ 5 ಭಾರತೀಯರಲ್ಲಿ ಒಬ್ಬರು ಸಹಕಾರಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದಾರೆ”. ಭಾರತದಲ್ಲಿ ನಗರ ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳೆರಡೂ ಸಾಕಷ್ಟು ವಿಸ್ತರಿಸಿವೆ. ಸಕ್ಕರೆ, ರಸಗೊಬ್ಬರ, ಮೀನುಗಾರಿಕೆ ಮತ್ತು ಹಾಲು ಉತ್ಪಾದನಾ ಉದ್ಯಮಗಳಲ್ಲಿ ಸಹಕಾರಿ ಸಂಸ್ಥೆಗಳು ದೊಡ್ಡ ಪಾತ್ರ ವಹಿಸುತ್ತಿವೆ. ದೇಶದಲ್ಲಿ ಸುಮಾರು 2 ಲಕ್ಷ (200 ಸಾವಿರ) ವಸತಿ ಸಹಕಾರಿ ಸಂಸ್ಥೆಗಳಿವೆ. ಭಾರತದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರವನ್ನು ಬಲಪಡಿಸುವಲ್ಲಿ ಮಹತ್ವದ ದಾಪುಗಾಲು ಹಾಕಲಾಗಿದೆ. ದೇಶಾದ್ಯಂತ ಸಹಕಾರಿ ಬ್ಯಾಂಕ್‌ಗಳಲ್ಲಿ ಈಗ 12 ಲಕ್ಷ ಕೋಟಿ ರೂ.ಗೂ ಹೆಚ್ಚು ಠೇವಣಿ ಇಡಲಾಗಿದೆ, ಇದು ಈ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. “ನಮ್ಮ ಸರ್ಕಾರವು ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೆಚ್ಚಿಸಲು ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದೆ, ಅವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವ್ಯಾಪ್ತಿಗೆ ತರಲಾಗಿದೆ ಮತ್ತು ಠೇವಣಿ ವಿಮಾ ರಕ್ಷಣೆಯನ್ನು ಪ್ರತಿ ಠೇವಣಿದಾರರಿಗೆ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ”. ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆ ಮತ್ತು ಪಾರದರ್ಶಕತೆಯ ವಿಸ್ತರಣೆ ಆಗಿದೆ. ಈ ಸುಧಾರಣೆಗಳು ಭಾರತೀಯ ಸಹಕಾರಿ ಬ್ಯಾಂಕುಗಳನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ಹಣಕಾಸು ಸಂಸ್ಥೆಗಳಾಗಿ ಇರಿಸಲು ಸಹಾಯ ಮಾಡಿದೆ ಎಂದು ಹೇಳಿದರು.

“ಭಾರತವು ತನ್ನ ಭವಿಷ್ಯದ ಬೆಳವಣಿಗೆಯಲ್ಲಿ ಸಹಕಾರಿಗಳ ದೊಡ್ಡ ಪಾತ್ರವನ್ನು ನೋಡುತ್ತಿದೆ”. ಆದ್ದರಿಂದ, ಕಳೆದ ವರ್ಷಗಳಲ್ಲಿ, ಅನೇಕ ಸುಧಾರಣೆಗಳ ಮೂಲಕ ಸಹಕಾರಿಗಳಿಗೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಲು ಸರ್ಕಾರವು ಕೆಲಸ ಮಾಡಿದೆ. ಸಹಕಾರಿ ಸಂಘಗಳನ್ನು ಬಹುಪಯೋಗಿಯನ್ನಾಗಿ ಮಾಡುವುದು ಸರ್ಕಾರದ ಪ್ರಯತ್ನವಾಗಿದೆ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪಿಸಿದೆ. ಸಹಕಾರ ಸಂಘಗಳನ್ನು ವಿವಿಧೋದ್ದೇಶ ಮಾಡಲು ಹೊಸ ಮಾದರಿಯ ಉಪ-ಕಾನೂನುಗಳನ್ನು ರೂಪಿಸಲಾಗಿದೆ. ಸರ್ಕಾರವು ಸಹಕಾರ ಸಂಘಗಳನ್ನು ಮಾಹಿತಿ ತಂತ್ರಜ್ಞಾನ-ಶಕ್ತ ಪರಿಸರ ವ್ಯವಸ್ಥೆಗೆ ಸಂಪರ್ಕಿಸಿದೆ. ಅಲ್ಲಿ ಸಹಕಾರಿಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಹಕಾರ ಬ್ಯಾಂಕಿಂಗ್ ಸಂಸ್ಥೆಗಳೊಂದಿಗೆ ಸಂಪರ್ಕಿಸಲಾಗಿದೆ. ಈ ಸಹಕಾರಿ ಸಂಘಗಳು ಭಾರತದಲ್ಲಿ ರೈತರಿಗೆ ಸ್ಥಳೀಯ ಪರಿಹಾರಗಳನ್ನು ಒದಗಿಸುವ ಕೇಂದ್ರಗಳಾಗಿವೆ. ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಮಳಿಗೆಗಳನ್ನು ನಿರ್ವಹಿಸುವುದು, ನೀರು ನಿರ್ವಹಣೆ ಕೆಲಸ ಮತ್ತು ಸೌರಫಲಕಗಳ ಸ್ಥಾಪನೆಯನ್ನು ನೋಡಿಕೊಳ್ಳುವ ಮೂಲಕ ಹಳ್ಳಿಗಳಾದ್ಯಂತ ಅನೇಕ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ವೇಸ್ಟ್ ಟು ಎನರ್ಜಿ ಎಂಬ ಮಂತ್ರದೊಂದಿಗೆ ಇಂದು ಸಹಕಾರಿ ಸಂಘಗಳು ಗೋಬರ್ಧನ್ ಯೋಜನೆಗೆ ಸಹಾಯ ಮಾಡುತ್ತಿವೆ. ಸಹಕಾರ ಸಂಘಗಳು ಈಗ ಸಾಮಾನ್ಯ ಸೇವಾ ಕೇಂದ್ರಗಳಾಗಿ ಹಳ್ಳಿಗಳಲ್ಲಿ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿವೆ. ಸಹಕಾರವನ್ನು ಬಲಪಡಿಸುವುದು ಮತ್ತು ಆ ಮೂಲಕ ಅವರ ಸದಸ್ಯರ ಆದಾಯವನ್ನು ಹೆಚ್ಚಿಸುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ಯಾವುದೇ ಸೊಸೈಟಿ ಇಲ್ಲದಿರುವ 2 ಲಕ್ಷ ಹಳ್ಳಿಗಳಲ್ಲಿ ಸರ್ಕಾರ ವಿವಿಧೋದ್ದೇಶ ಸಹಕಾರ ಸಂಘಗಳನ್ನು ಸ್ಥಾಪಿಸುತ್ತಿದೆ. ಸಹಕಾರಿ ಸಂಸ್ಥೆಗಳನ್ನು ಉತ್ಪಾದನೆಯಿಂದ ಸೇವಾ ಕ್ಷೇತ್ರಕ್ಕೆ ವಿಸ್ತರಿಸಲಾಗುತ್ತಿದೆ. “ಇಂದು, ಭಾರತವು ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ”. ಈ ಯೋಜನೆಯನ್ನು ಸಹಕಾರಿ ಸಂಸ್ಥೆಗಳು ಕಾರ್ಯಗತಗೊಳಿಸುತ್ತಿದ್ದು, ಭಾರತದಾದ್ಯಂತ ಗೋದಾಮುಗಳನ್ನು ನಿರ್ಮಿಸಲಾಗಿದೆ, ಇದರಲ್ಲಿ ರೈತರು ತಮ್ಮ ಬೆಳೆಗಳನ್ನು ಸಂಗ್ರಹಿಸಬಹುದು, ಇದು ಸಣ್ಣ ರೈತರಿಗೆ ಹೆಚ್ಚು ಪ್ರಯೋಜನ ನೀಡುತ್ತದೆ ಎಂದು ಅವರು ಹೇಳಿದರು.

ರೈತ ಉತ್ಪಾದಕ ಸಂಸ್ಥೆಗಳ(ಎಫ್‌ಪಿಒ) ಸ್ಥಾಪನೆಯ ಮೂಲಕ ಸಣ್ಣ ರೈತರನ್ನು ಬೆಂಬಲಿಸಲು ಸರ್ಕಾರ ಬದ್ಧತೆ ಹೊಂದಿದೆ. “ನಾವು ನಮ್ಮ ಸಣ್ಣ ರೈತರನ್ನು ಎಫ್‌ಪಿಒಗಳಾಗಿ ಸಂಘಟಿಸುತ್ತಿದ್ದೇವೆ, ಈ ಸಂಸ್ಥೆಗಳನ್ನು ಬಲಪಡಿಸಲು ಅಗತ್ಯ ಹಣಕಾಸಿನ ನೆರವು ನೀಡುತ್ತಿದ್ದೇವೆ”. ಕೃಷಿ ಸಹಕಾರಿ ಸಂಸ್ಥೆಗಳಿಗೆ ಫಾರ್ಮ್‌ನಿಂದ ಅಡುಗೆಮನೆ ಮತ್ತು ಮಾರುಕಟ್ಟೆಯವರೆಗೆ ದೃಢವಾದ ಪೂರೈಕೆ ಮತ್ತು ಮೌಲ್ಯ ಸರಪಳಿ ನಿರ್ಮಿಸುವ ಗುರಿ ಹೊಂದಿರುವ ಸುಮಾರು 9,000 ಎಫ್‌ಪಿಒಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. “ನಮ್ಮ ಪ್ರಯತ್ನವು ಕೃಷಿ ಉತ್ಪನ್ನಗಳಿಗೆ ತಡೆರಹಿತ ಸಂಪರ್ಕ ಸೃಷ್ಟಿಸುವುದು, ದಕ್ಷತೆ ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವುದಾಗಿದೆ”. ಈ ಸಹಕಾರಿ ಸಂಸ್ಥೆಗಳ ವ್ಯಾಪ್ತಿಯನ್ನು ಕ್ರಾಂತಿಕಾರಿಗೊಳಿಸುವಲ್ಲಿ ಡಿಜಿಟಲ್ ವೇದಿಕೆಗಳ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, ತಮ್ಮ ಸರ್ಕಾರವು ತಮ್ಮ ಉತ್ಪನ್ನಗಳನ್ನು ಸಾರ್ವಜನಿಕ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್(ಒಎನ್ ಡಿಸಿ) ಮೂಲಕ ಮಾರಾಟ ಮಾಡಲು ಸಹಕಾರಿಗಳನ್ನು ಸಕ್ರಿಯಗೊಳಿಸುತ್ತಿದೆ. ಇದರಿಂದ ಉತ್ಪನ್ನಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ನೇರವಾಗಿ ಗ್ರಾಹಕರನ್ನು ತಲುಪುತ್ತವೆ. ಸಹಕಾರಿ ಸಂಸ್ಥೆಗಳಿಗೆ ತಮ್ಮ ಮಾರುಕಟ್ಟೆ ಅಸ್ತಿತ್ವ ವಿಸ್ತರಿಸಲು ಹೊಸ ಚಾನೆಲ್ ಸರ್ಕಾರದ ಇ-ಮಾರುಕಟ್ಟೆ ಸ್ಥಳ(ಜಿಇಎಂ) ಸ್ಥಾಪಿಸಲಾಗಿದೆ. “ಈ ಉಪಕ್ರಮಗಳು ಕೃಷಿಯನ್ನು ಆಧುನೀಕರಿಸುವಲ್ಲಿ ಸರ್ಕಾರದ ಗಮನವನ್ನು ಪ್ರತಿಬಿಂಬಿಸುತ್ತವೆ. ಅಲ್ಲದೆ ಸ್ಪರ್ಧಾತ್ಮಕ, ಡಿಜಿಟಲ್ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಸಾಧನಗಳೊಂದಿಗೆ ರೈತರನ್ನು ಸಬಲೀಕರಣಗೊಳಿಸುತ್ತವೆ” ಎಂದು ಅವರು ಹೇಳಿದರು.

ಈ ಶತಮಾನದ ಜಾಗತಿಕ ಬೆಳವಣಿಗೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮುಖ ಅಂಶವಾಗಲಿದೆ. ಒಂದು ದೇಶ ಅಥವಾ ಸಮಾಜವು ಮಹಿಳೆಯರಿಗೆ ಎಷ್ಟು ಭಾಗವಹಿಸುವಿಕೆಗೆ ಅವಕಾಶ ನೀಡುತ್ತದೆಯೋ, ಅದು ಅಷ್ಟೇ ವೇಗವಾಗಿ ಬೆಳೆಯುತ್ತದೆ. ಇಂದು ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ಯುಗವಾಗಿದೆ. ಸಹಕಾರಿ ಕ್ಷೇತ್ರದಲ್ಲಿಯೂ ಮಹಿಳೆಯರು ದೊಡ್ಡ ಪಾತ್ರ ಹೊಂದಿದ್ದಾರೆ. ಇಂದು ಮಹಿಳೆಯರು ಭಾರತದ ಸಹಕಾರ ಕ್ಷೇತ್ರದ ಶಕ್ತಿಯಾಗಿ ಅನೇಕ ಮಹಿಳಾ ನೇತೃತ್ವದ ಸಹಕಾರಿಗಳೊಂದಿಗೆ ಶೇಕಡ 60ಕ್ಕಿಂತ ಹೆಚ್ಚು ಭಾಗವಹಿಸುವಿಕೆಯನ್ನು ಹೊಂದಿದ್ದಾರೆ ಎಂದರು.

“ಸಹಕಾರಿ ಸಂಸ್ಥೆಗಳ ನಿರ್ವಹಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ನಮ್ಮ ಪ್ರಯತ್ನವಾಗಿದೆ”. ಈ ನಿಟ್ಟಿನಲ್ಲಿ ಸರ್ಕಾರ ಬಹುರಾಜ್ಯ ಸಹಕಾರ ಸಂಘದ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಬಹು ರಾಜ್ಯ ಸಹಕಾರ ಸಂಘದ ಮಂಡಳಿಯಲ್ಲಿ ಮಹಿಳಾ ನಿರ್ದೇಶಕರು ಇರುವುದನ್ನು ಕಡ್ಡಾಯಗೊಳಿಸಿದೆ ಎಂದರು. ಹಿಂದುಳಿದ ವರ್ಗಗಳ ಭಾಗವಹಿಸುವಿಕೆಗಾಗಿ ಮತ್ತು ಸಮಾಜಗಳನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು ಮೀಸಲಾತಿಗಳನ್ನು ಸಹ ಮಾಡಲಾಗಿದೆ ಎಂದು ಅವರು ಹೇಳಿದರು.

ಸ್ವ-ಸಹಾಯ ಗುಂಪುಗಳ ರೂಪದಲ್ಲಿ ಮಹಿಳಾ ಸಹಭಾಗಿತ್ವದ ಮೂಲಕ ಮಹಿಳಾ ಸಬಲೀಕರಣದ ಬೃಹತ್ ಆಂದೋಲನ ನಡೆಸಲಾಗಿದೆ. ಸ್ವಸಹಾಯ ಗುಂಪುಗಳಲ್ಲಿ ಭಾರತದ 10 ಕೋಟಿ ಅಥವಾ 100 ದಶಲಕ್ಷ ಮಹಿಳೆಯರು ಸದಸ್ಯರಾಗಿದ್ದಾರೆ.  ಕಳೆದ ದಶಕದಲ್ಲಿ ಈ ಸ್ವಸಹಾಯ ಗುಂಪುಗಳಿಗೆ 9 ಲಕ್ಷ ಕೋಟಿ ರೂ. ಅಗ್ಗದ ಸಾಲವನ್ನು ಸರಕಾರ ನೀಡಿದೆ. ಇದರಿಂದ ಹಳ್ಳಿಗಳಲ್ಲಿ ಸ್ವಸಹಾಯ ಗುಂಪುಗಳು ಅಪಾರ ಸಂಪತ್ತು ಗಳಿಸಿವೆ. ಪ್ರಪಂಚದ ಅನೇಕ ದೇಶಗಳು ಮಹಿಳಾ ಸಬಲೀಕರಣದ ಬೃಹತ್ ಮಾದರಿಯಾಗಿ ಇದನ್ನು ಅನುಕರಿಸಬಹುದು ಎಂದು ಅವರು ಹೇಳಿದರು.

21ನೇ ಶತಮಾನದಲ್ಲಿ ಜಾಗತಿಕ ಸಹಕಾರ ಚಳವಳಿಯ ದಿಕ್ಕು ನಿರ್ಧರಿಸುವ ಅಗತ್ಯವಿದೆ. ಸಹಕಾರಿ ಸಂಸ್ಥೆಗಳಿಗೆ ಸುಲಭ ಮತ್ತು ಪಾರದರ್ಶಕ ಹಣಕಾಸು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಹಕಾರಿ ಆರ್ಥಿಕ ಮಾದರಿಯ ಬಗ್ಗೆ ಯೋಚಿಸಬೇಕಾಗಿದೆ. ಸಣ್ಣ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಸಹಕಾರಿಗಳನ್ನು ಬೆಂಬಲಿಸಲು ಆರ್ಥಿಕ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮಹತ್ವವಿದೆ. ಇಂತಹ ಹಂಚಿಕೆಯ ಹಣಕಾಸು ವೇದಿಕೆಗಳು ದೊಡ್ಡ ಯೋಜನೆಗಳಿಗೆ ಧನಸಹಾಯ ಮತ್ತು ಸಹಕಾರಿ ಸಂಸ್ಥೆಗಳಿಗೆ ಸಾಲ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉತ್ಪಾದನೆ, ಖರೀದಿ ಮತ್ತು ವಿತರಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪೂರೈಕೆ ಸರಪಳಿಯನ್ನು ಹೆಚ್ಚಿಸುವಲ್ಲಿ ಸಹಕಾರಿಗಳ ಸಾಮರ್ಥ್ಯ ಬಹುದೊಡ್ಡದು ಎಂದರು.

ಜಗತ್ತಿನಾದ್ಯಂತ ಸಹಕಾರಿ ಸಂಸ್ಥೆಗಳಿಗೆ ಹಣಕಾಸು ಒದಗಿಸುವ ಜಾಗತಿಕ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸುವ ಅಗತ್ಯವಿದೆ. ಐಸಿಎ ಇದರಲ್ಲಿ ಬೃಹತ್ ಪಾತ್ರ ವಹಿಸಿದೆ. ಆದರೂ ಭವಿಷ್ಯದಲ್ಲಿ ಇದನ್ನು ಮೀರಿ ಮುನ್ನಡೆಯುವುದು ಅತ್ಯಗತ್ಯ. ವಿಶ್ವದ ಪ್ರಸ್ತುತ ಪರಿಸ್ಥಿತಿಯು ಸಹಕಾರ ಚಳುವಳಿಗೆ ದೊಡ್ಡ ಅವಕಾಶ ಒದಗಿಸುತ್ತದೆ. ವಿಶ್ವದಲ್ಲಿ ಸಹಕಾರಿ ಸಂಸ್ಥೆಗಳನ್ನು ಸಮಗ್ರತೆ ಮತ್ತು ಪರಸ್ಪರ ಗೌರವದ ಧ್ವಜಧಾರಿಗಳನ್ನಾಗಿ ಮಾಡುವ ಅಗತ್ಯವಿದೆ. ಇದಕ್ಕಾಗಿ, ನೀತಿಗಳನ್ನು ಆವಿಷ್ಕರಿಸುವ ಮತ್ತು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ. ಸಹಕಾರಿಗಳನ್ನು ಹವಾಮಾನ ಹೊಂದಾಣಿಕೆಗೆ ರೂಪಿಸಲು ಪ್ರಾಮುಖ್ಯತೆ ನೀಡಬೇಕಾಗಿದೆ. ನೀಲಿ ಆರ್ಥಿಕತೆಗೆ ಸಂಪರ್ಕ ಹೊಂದಿರಬೇಕು ಮತ್ತು ಸಹಕಾರಿಗಳಲ್ಲಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸುವ ತಕ್ಷಣದ ಅವಶ್ಯಕತೆಯಿದೆ ಎಂದು ಹೇಳಿದರು.

“ಸಹಕಾರ ಸಂಸ್ಥೆಗಳು ಜಾಗತಿಕ ಸಹಕಾರಕ್ಕೆ ಹೊಸ ಶಕ್ತಿ ನೀಡಬಲ್ಲವು ಎಂಬುದನ್ನು ಭಾರತವು ಸದಾ ನಂಬುತ್ತದೆ”. ಜಾಗತಿಕ ದಕ್ಷಿಣ ದೇಶಗಳಿಗೆ ನಿರ್ದಿಷ್ಟವಾಗಿ, ಅವರಿಗೆ ಅಗತ್ಯವಿರುವ ರೀತಿಯ ಬೆಳವಣಿಗೆ ಸಾಧಿಸಲು ಸಹಕಾರಿಗಳು ಸಹಾಯ ಮಾಡಬಹುದು. ಆದ್ದರಿಂದ ಸಹಕಾರಿ ಸಂಸ್ಥೆಗಳ ಅಂತಾರಾಷ್ಟ್ರೀಯ ಸಹಯೋಗಕ್ಕಾಗಿ ಹೊಸ ಮಾರ್ಗಗಳನ್ನು ಆವಿಷ್ಕರಿಸುವುದು ಇಂದಿನ ಅಗತ್ಯವಾಗಿದೆ. ಇಂದಿನ ಜಾಗತಿಕ ಸಮ್ಮೇಳನವು ಈ ವಿಚಾರದಲ್ಲಿ ಹೆಚ್ಚಿನ ಸಹಾಯ ನೀಡುತ್ತದೆ ಎಂದು ಅವರು ಹೇಳಿದರು.

ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ಭಾರತ ಹೊಂದಿರುವ ಬದ್ಧತೆಗೆ ಒತ್ತು ನೀಡಿದ ಪ್ರಧಾನ ಮಂತ್ರಿ, “ಭಾರತವು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಈ ಬೆಳವಣಿಗೆಯ ಪ್ರಯೋಜನಗಳು ಬಡವರ ಬಡವರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ”. “ನಮ್ಮ ಎಲ್ಲಾ ಕೆಲಸಗಳಲ್ಲಿ ಮಾನವ ಕೇಂದ್ರಿತ ಭಾವನೆಗಳು ಮೇಲುಗೈ ಸಾಧಿಸಬೇಕು”. ಭಾರತದೊಳಗೆ ಮತ್ತು ಜಾಗತಿಕವಾಗಿ ಮಾನವ ಕೇಂದ್ರಿತ ದೃಷ್ಟಿಕೋನದಿಂದ ಬೆಳವಣಿಗೆ ನೋಡುವ ಪ್ರಾಮುಖ್ಯತೆ ಇದೆ. ಜಾಗತಿಕ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಸ್ಪದನೆಯನ್ನು ಪ್ರಸ್ತಾಪಿಸಿದ ಅವರು, ಭಾರತವು ಹೇಗೆ ಪ್ರಪಂಚದೊಂದಿಗೆ ನಿಂತಿತ್ತು ಎಂಬುದನ್ನು ನೆನಪು ಮಾಡಿದರು. ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳೊಂದಿಗೆ ಅಗತ್ಯ ಔಷಧಗಳು ಮತ್ತು ಲಸಿಕೆಗಳನ್ನು ಹಂಚಿಕೊಳ್ಳುವ ಮೂಲಕ. ಬಿಕ್ಕಟ್ಟಿನ ಸಮಯದಲ್ಲಿ ಸಹಾನುಭೂತಿ ಮತ್ತು ಒಗ್ಗಟ್ಟಿಗೆ ಭಾರತ ತನ್ನ ಬದ್ಧತೆ ಪ್ರದರ್ಶಿಸಿತು. “ಆರ್ಥಿಕ ತರ್ಕವು ಪರಿಸ್ಥಿತಿಯ ಲಾಭ ಪಡೆಯಲು ಸಲಹೆ ನೀಡಿದ್ದರೂ, ನಮ್ಮ ಮಾನವೀಯತೆಯ ಪ್ರಜ್ಞೆಯು ಸೇವೆಯ ಮಾರ್ಗವನ್ನು ಆಯ್ಕೆ ಮಾಡಲು ನಮಗೆ ಕಾರಣವಾಯಿತು” ಎಂದು ಹೇಳಿದರು.

ಸಹಕಾರಿಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದು ಕೇವಲ ರಚನೆ, ನಿಯಮಗಳು ಮತ್ತು ನಿಬಂಧನೆಗಳಿಂದ ಅಲ್ಲ, ಅವುಗಳಿಂದ ಸಂಸ್ಥೆಗಳನ್ನು ಸ್ಥಾಪಿಸಬಹುದು, ಅದು ಮತ್ತಷ್ಟು ಅಭಿವೃದ್ಧಿ ಮತ್ತು ವಿಸ್ತರಣ ಆಗಬಹುದು. ಸಹಕಾರಿಗಳ ಮನೋಭಾವ ಅತ್ಯಂತ ಮಹತ್ವದ್ದಾಗಿದ್ದು, ಈ ಸಹಕಾರಿ ಮನೋಭಾವವು ಈ ಚಳುವಳಿಯ ಜೀವಶಕ್ತಿಯಾಗಿದೆ ಮತ್ತು ಸಹಕಾರ ಸಂಸ್ಕೃತಿಯಿಂದ ಬಂದಿದೆ ಎಂದು ಅವರು ಹೇಳಿದರು. ಸಹಕಾರಿ ಸಂಸ್ಥೆಗಳ ಯಶಸ್ಸು ಅದರ ಸದಸ್ಯರ ನೈತಿಕ ಬೆಳವಣಿಗೆಯ ಮೇಲೆ ಅವಲಂಬಿತವಾಗಿದೆ ಎಂದು ಮಹಾತ್ಮ ಗಾಂಧಿ ಹೇಳಿದ್ದ ಸಂದೇಶವನ್ನು ಉಲ್ಲೇಖಿಸಿದ ಶ್ರೀ ಮೋದಿ, ನೈತಿಕತೆ ಇದ್ದಾಗ ಮಾನವೀಯತೆಯ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಂತಾರಾಷ್ಟ್ರೀಯ ಸಹಕಾರಿ ವರ್ಷದಲ್ಲಿ ಈ ಭಾವನೆಯನ್ನು ಬಲಪಡಿಸುವ ಕೆಲಸ ನಿರಂತರವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಹಿನ್ನೆಲೆ

ಐಸಿಎ ಜಾಗತಿಕ ಸಹಕಾರಿ ಸಮ್ಮೇಳನ ಮತ್ತು ಐಸಿಎ ಸಾಮಾನ್ಯ ಸಭೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ. 130 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇಂಟರ್ ನ್ಯಾಷನಲ್ ಕೋಆಪರೇಟಿವ್ ಅಲೈಯನ್ಸ್(ಐಸಿಎ), ಜಾಗತಿಕ ಸಹಕಾರ ಚಳುವಳಿಯ ಪ್ರಧಾನ ಸಂಸ್ಥೆಯಾಗಿದೆ. ಐಸಿಎ ಮತ್ತು ಭಾರತ ಸರ್ಕಾರದ ಸಹಭಾಗಿತ್ವದೊಂದಿಗೆ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್(ಇಫ್ಕೊ) ಮತ್ತು ಭಾರತೀಯ ಸಹಕಾರಿ ಸಂಸ್ಥಎಗಳಾದ ಅಮೂಲ್ ಮತ್ತು ಕ್ರಿಭ್ಕೊ ಸಹಯೋಗದಲ್ಲಿ ಆಯೋಜಿಸಲಾದ ಜಾಗತಿಕ ಸಮ್ಮೇಳನವು ನವೆಂಬರ್ 25ರಿಂದ 30ರ ವರೆಗೆ ನಡೆಯಲಿದೆ.

“ಸಹಕಾರಿ ಸಂಸ್ಥೆಗಳು ಎಲ್ಲರಿಗೂ ಸಮೃದ್ಧಿ ತರುತ್ತವೆ” ಎಂಬ ಸಮ್ಮೇಳನದ ವಿಷಯವು ಭಾರತ ಸರ್ಕಾರದ “ಸಹಕಾರ್ ಸೇ ಸಮೃದ್ಧಿ”(ಸಹಕಾರದ ಮೂಲಕ ಸಮೃದ್ಧಿ)ಯ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ವಿಶ್ವಾದ್ಯಂತ ಸಹಕಾರಿ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳನ್ನು ಪರಿಹರಿಸುವ ವಿಶೇಷವಾಗಿ ಬಡತನ ನಿವಾರಣೆ, ಲಿಂಗ ಸಮಾನತೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯಂತಹ ಕ್ಷೇತ್ರಗಳ ಮೇಲೆ ಚರ್ಚೆಗಳು, ಸಂವಾದ ಕಲಾಪಗಳು ಮತ್ತು ಕಾರ್ಯಾಗಾರಗಳು ಈ ಸಮ್ಮೇಳನದಲ್ಲಿ ನಡೆಯಲಿವೆ.

ಪ್ರಧಾನ ಮಂತ್ರಿ ಅವರು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಹಕಾರಿ ವರ್ಷ 2025ಕ್ಕೆ ಚಾಲನೆ ನೀಡಿದರು. ಇದು “ಸಹಕಾರಿ ಸಂಸ್ಥೆಗಲುಗಳು ಉತ್ತಮ ಜಗತ್ತು ನಿರ್ಮಿಸುತ್ತವೆ” ಎಂಬ ವಿಷಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಇದು ಸಾಮಾಜಿಕ ಸೇರ್ಪಡೆ, ಆರ್ಥಿಕ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರಿಗಳು ವಹಿಸುವ ಪರಿವರ್ತನೀಯ ಪಾತ್ರವನ್ನು ಒತ್ತಿಹೇಳುತ್ತದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ವಿಶೇಷವಾಗಿ ಅಸಮಾನತೆ ಕಡಿಮೆ ಮಾಡುವಲ್ಲಿ, ಯೋಗ್ಯವಾದ ಕೆಲಸ ಉತ್ತೇಜಿಸುವಲ್ಲಿ ಮತ್ತು ಬಡತನ ನಿವಾರಿಸುವಲ್ಲಿ ಸಹಕಾರಿ ಸಂಸ್ಥೆಗಳನ್ನು ಸುಸ್ಥಿರ ಅಭಿವೃದ್ಧಿಯ ನಿರ್ಣಾಯಕ ಚಾಲನಾ ಶಕ್ತಿಯಾಗಿವ ಎಂದು ಗುರುತಿಸುತ್ತವೆ, 2025ರ ವರ್ಷವು ವಿಶ್ವದ ಅತ್ಯಂತ ಗುರುತರ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರಿ ಉದ್ಯಮಗಳ ಶಕ್ತಿಯನ್ನು ಪ್ರದರ್ಶಿಸುವ ಗುರಿ ಹೊಂದಿರುವ ಜಾಗತಿಕ ಉಪಕ್ರಮವಾಗಿದೆ.

ಸಹಕಾರಿ ಆಂದೋಲನಕ್ಕೆ ಭಾರತದ ಬದ್ಧತೆಯನ್ನು ಸಂಕೇತಿಸುವ ಸ್ಮರಣಾರ್ಥ ಅಂಚೆ ಚೀಟಿಯನ್ನು ಪ್ರಧಾನಿ ಬಿಡುಗಡೆ ಮಾಡಿದರು. ಸ್ಟಾಂಪ್ ಕಮಲವನ್ನು ಪ್ರದರ್ಶಿಸುತ್ತದೆ, ಶಾಂತಿ, ಶಕ್ತಿ, ಹೊಂದಾಣಿಕೆ ಮತ್ತು ಬೆಳವಣಿಗೆಯನ್ನು ಇದು ಸಂಕೇತಿಸುತ್ತದೆ, ಸುಸ್ಥಿರತೆ ಮತ್ತು ಸಮುದಾಯ ಅಭಿವೃದ್ಧಿಯ ಸಹಕಾರ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಕಮಲದ 5 ದಳಗಳು ಪ್ರಕೃತಿಯ 5 ಅಂಶಗಳನ್ನು ಪ್ರತಿನಿಧಿಸುತ್ತವೆ(ಪಂಚತತ್ವ). ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸುಸ್ಥಿರತೆಗೆ ಸಹಕಾರಿಗಳ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ವಿನ್ಯಾಸವು ಕೃಷಿ, ಡೇರಿ, ಮೀನುಗಾರಿಕೆ, ಗ್ರಾಹಕ ಸಹಕಾರ ಸಂಘಗಳು ಮತ್ತು ವಸತಿಗಳಂತಹ ಕ್ಷೇತ್ರಗಳನ್ನು ಸಹ ಒಳಗೊಂಡಿದೆ, ಕೃಷಿಯಲ್ಲಿ ಡ್ರೋನ್‌ನೊಂದಿಗೆ ಆಧುನಿಕ ತಂತ್ರಜ್ಞಾನದ ಪಾತ್ರವನ್ನು ಸಹ ಸಂಕೇತಿಸುತ್ತದೆ.

 

 

*****