Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಐಟಿ ಮದ್ರಾಸ್‌ನ ಸಮಾವೇಶದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಪಠ್ಯ


ತಮಿಳುನಾಡಿನ ರಾಜ್ಯಪಾಲರಾದ ಶ್ರೀ ಬನ್ವಾರಿಲಾಲ್ ಪುರೋಹಿಗ್ ಜಿ, ತಮಿಳುನಾಡಿನ ಮುಖ್ಯಮಂತ್ರಿಯವರಾದ  ಶ್ರೀ ಎಡಪ್ಪಾಡಿ ಕೆ ಪಳನಿಸ್ವಾಮಿಜಿ, ನನ್ನ ಸಹೋದ್ಯೋಗಿ, ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್ ಜಿ’,  ಉಪ ಮುಖ್ಯಮಂತ್ರಿಯವರಾದ ಶ್ರೀ  ಓ ಪನ್ನೀರ್ಸೆಲ್ವಂ ಜಿ, ಅಧ್ಯಕ್ಷರೇ, ಐಐಟಿ ಮದ್ರಾಸ್, ಆಡಳಿತ ಮಂಡಳಿ ಸದಸ್ಯರೆ , ನಿರ್ದೇಶಕರೆ, ಈ ಮಹಾನ್ ಸಂಸ್ಥೆಯ ಅಧ್ಯಾಪಕರೆ, ವಿಶೇಷ ಅತಿಥಿಗಳೆ, ಮತ್ತು,  ಭವ್ಯ ಭವಿಷ್ಯದ ಹೊಸ್ತಿಲಲ್ಲಿ ನಿಂತಿರುವ ನನ್ನ ಯುವ ಸ್ನೇಹಿತರೆ, ಇಂದು ಈ ಸಮಾರಂಭದಲ್ಲಿರುವುದು ಬಹಳ ಸಂತೋಷದ ವಿಷಯವಾಗಿದೆ.

 

ಸ್ನೇಹಿತರೆ,

ನನ್ನ ಮುಂದೆ ಮಿನಿ ಭಾರತವಿದೆ  ಹಾಗು ಹೊಸ ಭಾರತದ ಉತ್ಸಾಹವಿದೆ.  ಶಕ್ತಿ, ಸ್ಪಂದನೆ ಮತ್ತು ಸಕಾರಾತ್ಮಕತೆ ಇಲ್ಲಿವೆ.  ನಾನು ನಿಮಗೆ ಪದವಿಗಳನ್ನು ಪ್ರದಾನ ಮಾಡುತ್ತಿದ್ದಾಗ,  ಭವಿಷ್ಯದ ಕನಸುಗಳನ್ನು ನಿಮ್ಮ ಕಣ್ಣುಗಳಲ್ಲಿ ನೋಡಿದೆನು.  ನಿಮ್ಮ ಕಂಗಳಲ್ಲಿ ಭಾರತದ ಭವಿಷ್ಯವನ್ನು ನಾನು ನೋಡಿದೆ.

 

ಸ್ನೇಹಿತರೆ,

ಪದವಿ ಪಡೆದವರ ಪೋಷಕರನ್ನು ನಾನು ಅಭಿನಂದಿಸುತ್ತೇನೆ. ಅವರ ಹೆಮ್ಮೆ ಮತ್ತು ಸಂತೋಷವನ್ನು ಕಲ್ಪಿಸಿಕೊಳ್ಳಿ. ಅವರು ಕಷ್ಟಪಟ್ಟಿದ್ದಾರೆ, ನಿಮ್ಮ ಜೀವನದಲ್ಲಿ ಈ ಹಂತಕ್ಕೆ ನಿಮ್ಮನ್ನು ಕರೆತರಲು ಅವರು ತ್ಯಾಗ ಮಾಡಿದ್ದಾರೆ. ಅವರು ನಿಮಗೆ ರೆಕ್ಕೆಗಳನ್ನು ಕೊಟ್ಟಿದ್ದಾರೆ, ಇದರಿಂದಾಗಿ ನೀವು ಹಾರಾಟ ನಡೆಸಬಹುದು.  ಈ ಹೆಮ್ಮೆಯು ನಿಮ್ಮ ಶಿಕ್ಷಕರ ದೃಷ್ಟಿಯಲ್ಲಿಯೂ ಪ್ರತಿಫಲಿಸುತ್ತಿದೆ.  ಅವರು ತಮ್ಮ ನಿರಂತರ ಪ್ರಯತ್ನಗಳ ಮೂಲಕ ಉತ್ತಮ ಎಂಜಿನಿಯರ್‌ಗಳನ್ನು ಮಾತ್ರವಲ್ಲದೆ ಉತ್ತಮ ನಾಗರಿಕರನ್ನೂ  ಸಹ ಸೃಷ್ಟಿಸಿದ್ದಾರೆ.

ಶಿಕ್ಷಣೇತರ ಸಿಬ್ಬಂದಿಯವರ ಪಾತ್ರದ ಬಗ್ಗೆ ವಿಶೇಷವಾಗಿ ಹೇಳಲು ಬಯಸುತ್ತೇನೆ.   ಇವರು ತೆರೆಮರೆಯಲ್ಲಿ ಕೆಲಸ ಮಾಡುವವರು ನಿಮ್ಮ ಆಹಾರವನ್ನು ಸಿದ್ಧಪಡಿಸಿದವರು, ತರಗತಿಗಳನ್ನು  ಸ್ವಚ್ಛ ಮಾಡಿದವರು, ಹಾಸ್ಟೆಲ್‌ಗಳನ್ನು ಸ್ವಚ್ಛ ಮಾಡಿದವರು.  ನಿಮ್ಮ ಯಶಸ್ಸಿನಲ್ಲಿ, ಅವರಿಗೂ ಸಹ ಒಂದು ಪಾತ್ರವಿದೆ.  ಮುಂದುವರಿಯುವ ಮೊದಲು, ನಿಮ್ಮ ಶಿಕ್ಷಕರು, ಪೋಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ಶ್ಲಾಘಿಸಿಲು ನಾನು ನನ್ನ ವಿದ್ಯಾರ್ಥಿ ಸ್ನೇಹಿತರನ್ನು  ಎದ್ದು ನಿಂತು ಚಪ್ಪಾಳೆ ತಟ್ಟಬೇಕೆಂದು ಕೋರುತ್ತೇನೆ.

 

ಸ್ನೇಹಿತರೆ,

ಇದೊಂದು ವಿಶಿಷ್ಟವಾದ ಸಂಸ್ಥೆ.  ಇಲ್ಲಿ, ಪರ್ವತಗಳು ಚಲಿಸುತ್ತವೆ ಮತ್ತು ನದಿಗಳು ಸ್ಥಿರವಾಗಿವೆ ಎಂದು ನನಗೆ ಹೇಳಲಾಗಿದೆ. ನಾವು ವಿಶೇಷ ಸ್ಥಾನವನ್ನು ಹೊಂದಿರುವ ತಮಿಳುನಾಡು ರಾಜ್ಯದಲ್ಲಿದ್ದೇವೆ. ತಮಿಳು, ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ ಮತ್ತು  ಇದು ಭಾರತದ ಹೊಸ ಭಾಷೆಗಳಲ್ಲಿ ಒಂದಾಗಿದೆ ಅದ್ಯಾವುದೆಂದರೆ ಐಐಟಿ-ಮದ್ರಾಸ್ ಭಾಷೆ.  ನೀವು ನಂತರ ನೆನೆಪಿಸಿಕೊಳ್ಳುವ ಬಹಳಷ್ಟು ಸಂಗತಿಗಳಿವೆ. ನೀವು ಖಂಡಿತವಾಗಿಯೂ ಸಾರಂಗ್ ಮತ್ತು ಶಾಸ್ತ್ರವನ್ನು ನೆನಪಿಸಿಕೊಳ್ಳುತ್ತೀರಿ. ನಿಮ್ಮ ಸಹಪಾಠಿಗಳನ್ನು ನೆನೆಯುತ್ತೀರಿ.  ಮತ್ತು ನೀವು ನೆನಪಿನಿಂದ ತಪ್ಪಿಸಿಕೊಳ್ಳಲಾಗದಿರುವ ಕೆಲವು ವಿಷಯಗಳಿವೆ.  ಮುಖ್ಯವಾಗಿ, ನೀವು ಈಗ ಯಾವುದೇ ಭಯವಿಲ್ಲದೆ ಉನ್ನತ ಗುಣಮಟ್ಟದ ಪಾದರಕ್ಷೆಗಳನ್ನು ಖರೀದಿಸಬಹುದು.

 

ಸ್ನೇಹಿತರೆ,

ನೀವು ನಿಜವಾಗಿಯೂ ಅದೃಷ್ಟವಂತರು.  ಭಾರತವನ್ನು ಅನನ್ಯ ಅವಕಾಶಗಳ ಸ್ಥಳವಾಗಿ ಪ್ರಪಂಚವು ನೋಡುತ್ತಿರುವ ಸಮಯದಲ್ಲಿ ನೀವು ಒಂದು ಅದ್ಭುತ ಕಾಲೇಜಿನಿಂದ ಹೊರಬರುತ್ತಿದ್ದೀರಿ.  ಅಮೆರಿಕಾದ ಪ್ರವಾಸದ ನಂತರ ನಾನು ಮನೆಗೆ ಮರಳಿದ್ದೇನೆ.  ಈ ಭೇಟಿಯ ಸಮಯದಲ್ಲಿ, ನಾನು ಅನೇಕ ರಾಷ್ಟ್ರ ಮುಖ್ಯಸ್ಥರು, ವ್ಯಾಪಾರ ಮುಖಂಡರು, ಹೊಸ ಸಂಶೋಧಕರು, ಉದ್ಯಮಿಗಳು, ಹೂಡಿಕೆದಾರರನ್ನು ಭೇಟಿಯಾದೆ. ನಮ್ಮ ಚರ್ಚೆಗಳಲ್ಲಿ, ಒಂದು ವಿಷಯ ಸಾಮಾನ್ಯವಾಗಿತ್ತು. ಅದು – ಹೊಸ ಭಾರತದ ಬಗ್ಗೆ ಇರುವ ಆಶಾವಾದ. ಮತ್ತು, ಭಾರತದ ಯುವ ಜನರ ಸಾಮರ್ಥ್ಯಗಳಲ್ಲಿಟ್ಟಿರುವ ವಿಶ್ವಾಸ.

 

ಸ್ನೇಹಿತರೆ,

ಭಾರತೀಯ ಸಮುದಾಯವು ಪ್ರಪಂಚದಾದ್ಯಂತ ತನ್ನದೇ ಆದ ಛಾಪು ಮೂಡಿಸಿದೆ. ವಿಶೇಷವಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ. ಇದಕ್ಕೆ ಯಾರು ಶಕ್ತಿ ನೀಡುತ್ತಿದ್ದಾರೆ? ಅವರಲ್ಲಿ ಬಹಳಷ್ಟು ಮಂದಿ ನಿಮ್ಮ ಐಐಟಿ ಹಿರಿಯರು. ಹೀಗಾಗಿ, ನೀವು ಜಾಗತಿಕವಾಗಿ ಬ್ರಾಂಡ್ ಇಂಡಿಯಾವನ್ನು ಬಲಪಡಿಸುತ್ತಿದ್ದೀರಿ. ಇತ್ತೀಚೆಗೆ, ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಯುವ ಅಧಿಕಾರಿಗಳೊಂದಿಗೆ ನಾನು ಮಾತುಕತೆ ನಡೆಸುತ್ತೇನೆ. ಐಐಟಿ ಪದವೀಧರರ ಸಂಖ್ಯೆ ತಿಳಿದರೆ ನಿಮಗೆ ಮತ್ತು ನನಗೆ ಇಬ್ಬರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ!  ಹೀಗಾಗಿ, ನೀವೂ ಕೂಡ ಭಾರತವನ್ನು ಹೆಚ್ಚು ಅಭಿವೃದ್ಧಿ ಹೊಂದಿದ ದೇಶನ್ನಾಗಿ ಮಾಡುತ್ತಿದ್ದೀರಿ.  ಮತ್ತು, ಕಾರ್ಪೊರೇಟ್ ಜಗತ್ತಿನಲ್ಲಿ  ನೋಡಿದರೆ ಐಐಟಿಯಲ್ಲಿ ಅಧ್ಯಯನ ಮಾಡಿದ ಅನೇಕರನ್ನು ನೀವು ಕಾಣುತ್ತೀರಿ. ಹೀಗಾಗಿ, ನೀವು ಭಾರತವನ್ನು ಹೆಚ್ಚು ಸಮೃದ್ಧಗೊಳಿಸುತ್ತಿದ್ದೀರಿ.

 

ಸ್ನೇಹಿತರೆ,

21 ನೇ ಶತಮಾನದ ಅಡಿಪಾಯವು ಹೊಸಶೋಧಗಳು,  ತಂಡದ ಕೆಲಸ ಮತ್ತು ತಂತ್ರಜ್ಞಾನದ ಮೂರು ನಿರ್ಣಾಯಕ ಸ್ತಂಭಗಳ ಮೇಲೆ ನಿಂತಿರುವುದನ್ನು ನಾನು ನೋಡುತ್ತೇನೆ. ಇವುಗಳಲ್ಲಿ ಪ್ರತಿಯೊಂದೂ ಪರಸ್ಪರ ಪೂರಕವಾಗಿರುತ್ತವೆ.

 

ಸ್ನೇಹಿತರೆ,

ನಾನು ಸಿಂಗಾಪುರ್-ಇಂಡಿಯಾ ಹ್ಯಾಕಥಾನ್‌ನಿಂದ ಬಂದಿದ್ದೇನೆ. ಭಾರತ ಮತ್ತು ಸಿಂಗಾಪುರದ ಹೊಸ ಶೋಧಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸಮಾನವಾದ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುತ್ತಿದ್ದರು. ಇವರೆಲ್ಲರೂ ತಮ್ಮ ಸಾಮರ್ಥ್ಯವನ್ನು ಒಂದೇ ಗುರಿಗಾಗಿ ಮುಡಿಪಾಗಿಟ್ಟರು. ಈ ನಾವೀನ್ಯಕಾರರು ವಿಭಿನ್ನ ಹಿನ್ನೆಲೆಯಿಂದ ಬಂದವರು. ಅವರ ಅನುಭವಗಳು ವಿಭಿನ್ನವಾಗಿದ್ದವು. ಆದರೆ ಅವರೆಲ್ಲರೂ ಭಾರತ ಮತ್ತು ಸಿಂಗಾಪುರದಲ್ಲಿ ಮಾತ್ರವಲ್ಲದೆ ಜಗತ್ತಿಗೆ ಸಹಾಯ ಮಾಡುವ ಪರಿಹಾರಗಳನ್ನು ರಚಿಸಬೇಕು.  ಇದು ನಾವೀನ್ಯತೆ, ತಂಡದ ಕೆಲಸ ಮತ್ತು ತಂತ್ರಜ್ಞಾನದ ಶಕ್ತಿ.  ಇದು ಕೆಲವೇ  ಕೆಲವರಿಗೆ ಮಾತ್ರವಲ್ಲ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ.

ಇಂದು, ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಸ್ಪೂರ್ತಿದಾಯಕವಾಗಿದೆ.  ನಿಮ್ಮ ನಾವೀನ್ಯತೆ, ಆಕಾಂಕ್ಷೆ ಮತ್ತು ತಂತ್ರಜ್ಞಾನವು ಈ ಕನಸನ್ನು ಉತ್ತೇಜಿಸುತ್ತದೆ.  ಇದು ಅತ್ಯಂತ ಸ್ಪರ್ಧಾತ್ಮಕ ಆರ್ಥಿಕತೆಯತ್ತ ಭಾರತದ ದೊಡ್ಡ ಹಾದಿಯ ತಳಹದಿಯಾಗಿದೆ.

 

ಸ್ನೇಹಿತರೆ,

21 ನೇ ಶತಮಾನದ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ದಶಕಗಳಷ್ಟು ಹಳೆಯದಾದ ಸಂಸ್ಥೆ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದಕ್ಕೆ ಐಐಟಿ ಮದ್ರಾಸ್ ಒಂದು ಪ್ರಮುಖ ಉದಾಹರಣೆಯಾಗಿದೆ. ಸ್ವಲ್ಪ ಸಮಯದ ಹಿಂದೆ, ನಾನು ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ ಸಂಶೋಧನಾ ಉದ್ಯಾನವನಕ್ಕೆ ಭೇಟಿ ನೀಡಿದ್ದೆ.  ದೇಶದಲ್ಲಿ ಇಂತಹ ಮೊದಲ ಪ್ರಯತ್ನ ಇದಾಗಿದೆ. ನಾನು ಇಂದು ಅತ್ಯಂತ ರೋಮಾಂಚಕ ನವೋದ್ಯಮದ ಪರಿಸರ ವ್ಯವಸ್ಥೆಯನ್ನು ನೋಡಿದೆ. ಇಲ್ಲಿಯವರೆಗೆ ಸುಮಾರು 200 ಸ್ಟಾರ್ಟ್ ಅಪ್ ಗಳನ್ನು ಇಲ್ಲಿ ಬೆಳೆಸಲಾಗಿದೆ ಎಂದು ನನಗೆ ತಿಳಿಸಲಾಯಿತು. ಅವುಗಳಲ್ಲಿ ಕೆಲವನ್ನು ನೋಡುವ ಅದೃಷ್ಟ ನನ್ನದಾಗಿತ್ತು.  ವಿದ್ಯುತ್ ಚಲನಶೀಲತೆ, ವಸ್ತುಗಳ ಅಂತರ್ಜಾಲ, ಆರೋಗ್ಯ ರಕ್ಷಣೆ, ಕೃತಕ ಬುದ್ಧಿಮತ್ತೆ ಮತ್ತು ಇನ್ನೂ ಹೆಚ್ಚಿನವುಗಳಲ್ಲಿನ ಪ್ರಯತ್ನಗಳನ್ನು ನಾನು ನೋಡಿದೆ.  ಈ ಎಲ್ಲಾ ಸ್ಟಾರ್ಟ್ ಅಪ್‌ಗಳು ಭವಿಷ್ಯದಲ್ಲಿ ವಿಶ್ವ ಮಾರುಕಟ್ಟೆಗಳಲ್ಲಿ ತಮ್ಮದೇ ವಿಶೇಷ ಸ್ಥಾನಗಳನ್ನು ಗಳಿಸುವಂತಹ ಅನನ್ಯ ಭಾರತೀಯ ಬ್ರಾಂಡ್‌ಗಳನ್ನು ರಚಿಸಬೇಕು.

 

ಸ್ನೇಹಿತರೆ,

ಭಾರತದ ಆವಿಷ್ಕಾರವು ಅರ್ಥಶಾಸ್ತ್ರ ಮತ್ತು ಉಪಯುಕ್ತತೆಯ ಉತ್ತಮ ಮಿಶ್ರಣವಾಗಿದೆ.  ಐಐಟಿ ಮದ್ರಾಸ್ ಈ ಸಂಪ್ರದಾಯದಲ್ಲಿ ಜನ್ಮ ತಾಳಿದೆ.  ಇಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಕಠಿಣ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತಾರೆ ಮತ್ತು ಎಲ್ಲರಿಗೂ ಕೈಗೆಟುಕಬಹುದಾದಂತಹ ಮತ್ತು ಕಾರ್ಯಸಾಧ್ಯವಾಗುವಂತಹ ಪರಿಹಾರವನ್ನು ನೀಡುತ್ತಾರೆ.  ನನಗೆ ಇಲ್ಲಿನ ವಿದ್ಯಾರ್ಥಿಗಳು  ನಿದ್ರಾಹಾರವನ್ನು ತೆಗೆದುಕೊಳ್ಳದೆ ಸ್ಟಾರ್ಟ್ ಅಪ್‌ಗಳೊಂದಿಗೆ ಕಾಲಕಳೆಯುತ್ತಾರೆ ಮತ್ತು ಅವರ ಕೋಣೆಗಳಿಂದಲೇ ಕೋಡ್‌ಗಳನ್ನು ಬರೆಯುತ್ತಾರೆ ಎಂದು ಹೇಳಲಾಗುತ್ತದೆ. ಇದೇ ರೀತಿಯ ಹುಮ್ಮಸ್ಸು ಭವಿಷ್ಯದಲ್ಲೂ ಕೂಡ ಇರುತ್ತದೆಂದು ಭಾವಿಸುತ್ತೇನೆ,

 

ಸ್ನೇಹಿತರೆ,

ನಮ್ಮ ದೇಶದಲ್ಲಿ ಸಂಶೋಧನೆಯ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ,  ನಾವೀನ್ಯತೆಗಾಗಿ ಧೃಡವಾದ ಪರಿಸರ ವ್ಯವಸ್ಥೆಯನ್ನು ರಚಿಸಲು ನಾವು ಕೆಲಸ ಮಾಡಿದ್ದೇವೆ.  ಮೆಷಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೊಟಿಕ್ಸ್, ಸ್ಟೇಟ್ ಆಫ್ ದಿ ಆರ್ಟ್ ಟೆಕ್ನಾಲಜೀಸ್ ಅನ್ನು ಈಗ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊದಲೇ ಪರಿಚಯಿಸಲಾಗುತ್ತಿದೆ. ನಾವು ದೇಶಾದ್ಯಂತ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ರಚಿಸಲು ಕಾರ್ಯ ನಿರ್ವಹಿಸುತ್ತಿದ್ದೇವೆ.

ಒಮ್ಮೆ ವಿದ್ಯಾರ್ಥಿಯು ನಿಮ್ಮಂತಹ ಸಂಸ್ಥೆಗೆ ಬಂದು ನಾವೀನ್ಯತೆಗಳ ಬಗ್ಗೆ ಕೆಲಸ ಮಾಡಲು ಬಯಸಿದರೆ, ಅವರಿಗೆ ಬೆಂಬಲ ನೀಡಲು ಅನೇಕ ಸಂಸ್ಥೆಗಳಲ್ಲಿ ಅಟಲ್ ಇನ್ಕ್ಯೂಬೇಷನ್ ಸೆಂಟರ್ ಗಳನ್ನು ರಚಿಸಲಾಗುತ್ತಿದೆ. ಮುಂದಿನ ಸವಾಲು ನವೋದ್ಯಮವನ್ನು  ಅಭಿವೃದ್ಧಿಪಡಿಸಲು ಮಾರುಕಟ್ಟೆಯನ್ನು ಕಂಡುಹಿಡಿಯುವುದು, ಈ ಸವಾಲನ್ನು ಎದುರಿಸಲು ನಿಮಗೆ ಸಹಾಯ ಮಾಡಲು ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ಮಾರುಕಟ್ಟೆಗೆ ದಾರಿ ಕಂಡುಕೊಳ್ಳಲು ನಾವೀನ್ಯತೆಗಳನ್ನು ಬೆಂಬಲಿಸುತ್ತದೆ.  ಇದಲ್ಲದೆ, ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ, ನಾವು ಪ್ರೈಮ್ ಮಿನಿಸ್ಟರ್ಸ್ ರೀಸರ್ಚ್ ಫೆಲೋ ಸ್ಕೀಮ್ ಅನ್ನು  ರಚಿಸಿದ್ದೇವೆ.

 

ಸ್ನೇಹಿತರೆ,

ಈ ಅವಿರತ ಪ್ರಯತ್ನಗಳ ಫಲವೇ ಭಾರತ ಇಂದು ಮೊದಲ ಮೂರು ನವೋದ್ಯಮ ಸ್ನೇಹಪರ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ.  ಸ್ಟಾರ್ಟ್ ಅಪ್ ಗಳಲ್ಲಿ ಭಾರತದ ಪ್ರಗತಿಯ ಉತ್ತಮ ಭಾಗ ಯಾವುದು ಎಂದು ನಿಮಗೆ ತಿಳಿದಿದೆಯೇ?  ಈ ಏರಿಕೆಯು ಶ್ರೇಣಿ -2, ಶ್ರೇಣಿ -3ನೆಯ ನಗರಗಳು ಮತ್ತು ಗ್ರಾಮೀಣ ಭಾರತದ ಜನರಿಂದಾಗಿ ಆಗಿದೆ,  ಸ್ಟಾರ್ಟ್-ಅಪ್‌ಗಳ ಜಗತ್ತಿನಲ್ಲಿ, ನೀವು ಮಾತನಾಡುವ ಭಾಷೆ ನೀವು ಕೋಡ್ ಮಾಡಬಹುದಾದ ಭಾಷೆಗಿಂತ ಕಡಿಮೆ ಇರುತ್ತದೆ.  ನಿಮ್ಮ ಉಪನಾಮದ ಶಕ್ತಿಯು ಅಪ್ರಸ್ತುತವಾಗುತ್ತದೆ. ನಿಮ್ಮದೇ ಸ್ವಂತ ಹೆಸರನ್ನು ಗಳಿಸಲು ನಿಮಗೆ ಅವಕಾಶವಿದೆ.  ಇಲ್ಲಿ ಮುಖ್ಯವಾಗುವುದು ನಿಮ್ಮ ಅರ್ಹತೆ.

 

ಸ್ನೇಹಿತರೆ,

ನೀವು ಮೊದಲು ಐಐಟಿಗಳಿಗಾಗಿ ತಯಾರಿ ಮಾಡಲು ಪ್ರಾರಂಭಿಸಿದ ದಿನಗಳು ನಿಮಗೆ ನೆನಪಿದೆಯೇ?  ಎಷ್ಟು ಕಠಿಣವಾಗಿದೆ ಎಂದು ಅನಿಸಿತ್ತು ಎಂಬುದನ್ನು ನೆನಪಿಡಿ. ಆದರೆ, ನಿಮ್ಮ ಕಠಿಣ ಪರಿಶ್ರಮವು ಅಸಾಧ್ಯವನ್ನು ಸಾಧ್ಯವಾಗಿಸಿತು. ನಿಮಗಾಗಿ ಅನೇಕ ಅವಕಾಶಗಳು ಕಾಯುತ್ತಿವೆ, ಅವೆಲ್ಲವೂ ಸುಲಭವಲ್ಲ.  ಆದರೆ, ಇಂದು ಅಸಾಧ್ಯವೆಂದು ತೋರುತ್ತಿರುವುದು ನಿಮ್ಮ ಮೊದಲ ಹೆಜ್ಜೆ ಇಡಲು ಕಾಯುತ್ತಿದೆ. ತಲೆಕೆಡಿಸಿಕೊಳ್ಳಬೇಡಿ.  ಹಂತ ಹಂತಗಳಲ್ಲಿ ವಿಷಯಗಳನ್ನು ಭಾಗ ಮಾಡಿರಿ.  ನೀವು ಒಂದು ಹೆಜ್ಜೆಯಿಂದ ಇನ್ನೊಂದಕ್ಕೆ ಚಲಿಸುವಾಗ, ನಿಮ್ಮ ಮುಂದೆ  ಸಮಸ್ಯೆಯ ಕಗ್ಗಂಟು ಬಿಡಿಸಿಕೊಳ್ಳುವುದನ್ನು  ನೀವು ನೋಡುತ್ತೀರಿ. ಮಾನವ ಪ್ರಯತ್ನದ ಮಾಂತ್ರಿಕತೆ ಸಾಧ್ಯತೆಗಳಲ್ಲಿದೆ.  ಆದ್ದರಿಂದ, ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡಿ ಮತ್ತು ನಿಮಗೆ ನೀವೇ ಸವಾಲು ಒಡ್ಡಿಕೊಳ್ಳಿ. ಆ ರೀತಿಯಲ್ಲಿ ನೀವು ವಿಕಸನಗೊಳ್ಳುತ್ತಲೇ ಇರುತ್ತೀರಿ ಮತ್ತು ಸ್ವತಃ ನಿಮ್ಮದೇ ಉತ್ತಮ ಆವೃತ್ತಿಯಾಗುತ್ತೀರಿ.

 

ಸ್ನೇಹಿತರೆ,

ಈ ಸಂಸ್ಥೆಯಿಂದ ಹೊರಬಂದಾಗ ನಿಮಗಾಗಿ ಉತ್ತಮ, ಆಕರ್ಷಕ ಅವಕಾಶಗಳಿರುತ್ತವೆ ಎಂದು ನನಗೆ ತಿಳಿದಿದೆ. ಅವುಗಳನ್ನು ಬಳಸಿಕೊಳ್ಳಿ.  ಆದರೂ, ನಿಮ್ಮೆಲ್ಲರಲ್ಲೂ ನನ್ನ  ಒಂದು ವಿನಂತಿ.  ನೀವು ಎಲ್ಲೇ ಕೆಲಸ ಮಾಡುತ್ತಿರಲಿ, ನೀವು ಎಲ್ಲೇ ವಾಸಿಸುತ್ತಿರಲಿ ನಿಮ್ಮ ತಾಯಿನಾಡು, ಭಾರತದ ಅಗತ್ಯಗಳನ್ನು ಸಹ ನೆನಪಿನಲ್ಲಿಡಿ.  ನಿಮ್ಮ ಕೆಲಸ, ಆವಿಷ್ಕಾರಗಳು ಮತ್ತು ನಿಮ್ಮ ಸಂಶೋಧನೆಯು ಭಾರತೀಯರಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ಯೋಚಿಸಿ. ಇದು ನಿಮ್ಮ ಸಾಮಾಜಿಕ ಜವಾಬ್ದಾರಿ ಮಾತ್ರವಲ್ಲ, ಇದು ಅಪಾರ ವ್ಯಾಪಾರಕ್ಕೂ ದಾರಿ ಮಾಡಿಕೊಡುತ್ತದೆ.

ಶುದ್ಧ ನೀರಿನ ಹೊರತೆಗೆಯುವಿಕೆ ಮತ್ತು ಬಳಕೆ ಕಡಿಮೆ ಮಾಡುವುದಕ್ಕಾಗಿ,.ನಮ್ಮ ಮನೆಗಳು, ಕಚೇರಿಗಳು, ಕೈಗಾರಿಕೆಗಳಲ್ಲಿ ಬಳಸುವ ನೀರನ್ನು ಮರುಬಳಕೆ ಮಾಡಲು ಕಡಿಮೆ ವೆಚ್ಚದ ಮತ್ತು ನವೀನ ಮಾರ್ಗಗಳನ್ನು ನೀವು ಕಂಡು ಹಿಡಿಯಬಹುದೇ?  ಇಂದು, ಒಂದು ಸಮಾಜವಾಗಿ, ನಾವು ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌ಗಳನ್ನು ಮೀರಿ ಯೋಚಿಸಬೇಕಿದೆ. ಪರಿಸರ ಸ್ನೇಹಿಯಾಗಿ ಇತರ ಯಾವುದು ಅದೇ ರೀತಿಯ ಅನುಕೂಲವನ್ನು ನೀಡುತ್ತದೆ ಆದರೆ ಅದೇ ರೀತಿಯ ಅನಾನುಕೂಲಗಳಿಲ್ಲ? ನಿಮ್ಮಂತಹ ನಮ್ಮ ಯುವ ನಾವೀನ್ಯಕಾರರ ಕಡೆಯಿಂದ ಇದನ್ನೇ ನಾವು ನಿರೀಕ್ಷಿಸುವುದು.

ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಹೆಚ್ಚಿನ ಭಾಗದ ಮೇಲೆ ಪರಿಣಾಮ ಬೀರುವ ಅನೇಕ ರೋಗಗಳು ಸಾಂಪ್ರದಾಯಿಕ ಸಾಂಕ್ರಾಮಿಕ ರೋಗಗಳಾಗಿರುವುದಿಲ್ಲ. ಇದು ಹೈಪರ್-ಟೆನ್ಷನ್, ಟೈಪ್ 2 ಡಯಾಬಿಟಿಸ್, ಬೊಜ್ಜು, ಒತ್ತಡದಂತಹ ಜೀವನಶೈಲಿಯ ಕಾಯಿಲೆಗಳಾಗಿರುತ್ತದೆ. ದತ್ತಾಂಶ ವಿಜ್ಞಾನ ಕ್ಷೇತ್ರವು ಪಕ್ವವಾಗುವುದರೊಂದಿಗೆ ಮತ್ತು ಈ ರೋಗಗಳ ಸುತ್ತ ದತ್ತಾಂಶಗಳ ಉಪಸ್ಥಿತಿಯೊಂದಿಗೆ, ತಂತ್ರಜ್ಞರು ಅವುಗಳಲ್ಲಿ ಮಾದರಿಗಳನ್ನು ಕಂಡುಹಿಡಿಯಲು ಒಂದು ಮಾರ್ಗವನ್ನು ಕಂಡುಕೊಳ್ಳಬಹುದು.

ದತ್ತಾಂಶ ವಿಜ್ಞಾನ, ರೋಗನಿರ್ಣಯ, ನಡವಳಿಕೆಯ ವಿಜ್ಞಾನ ಮತ್ತು ಔಷಧದೊಂದಿಗೆ ತಂತ್ರಜ್ಞಾನವು ಸೇರಿದಾಗ, ಆಸಕ್ತಿದಾಯಕ ಒಳನೋಟಗಳು ಹೊರಹೊಮ್ಮಬಹುದು. ಅವುಗಳ ಹರಡುವಿಕೆಯನ್ನು ಹಿಮ್ಮೆಟ್ಟಿಸಲು ಮಾಡಬಹುದಾದ ಕೆಲಸಗಳಿವೆಯೇ? ನಾವು ಎಚ್ಚರದಿಂದಿರಬೇಕಾದ ಮಾದರಿಗಳಿವೆಯೇ? ತಂತ್ರಜ್ಞಾನವು ಈ ಪ್ರಶ್ನೆಗಳಿಗೆ ಉತ್ತರಿಸಬಹುದೇ? ಐಐಟಿ ವಿದ್ಯಾರ್ಥಿಗಳು ಇದರ ಬಗ್ಗೆ  ಯೋಚಿಸುತ್ತಾರೆಯೇ ?

ನಾನು ಫಿಟ್‌ನೆಸ್ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಮಾತನಾಡುತ್ತೇನೆ, ಏಕೆಂದರೆ ನಿಮ್ಮಂತಹ ಉನ್ನತ ಸಾಧಕರು ನಿಮ್ಮ ಸ್ವಂತ ಆರೋಗ್ಯವನ್ನು ನಿರ್ಲಕ್ಷಿಸುವ ಅಪಾಯವನ್ನು ಎದುರಿಸಬಹುದು ಏಕೆಂದರೆ ನೀವು ಕೆಲಸದಲ್ಲಿ ಮುಳುಗಿರುತ್ತೀರಿ. ವೈಯಕ್ತಿಕ ಫಿಟ್‌ನೆಸ್‌ಗೆ ಒತ್ತು ನೀಡುವ ಮೂಲಕ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೊಸತನವನ್ನು ಹೆಚ್ಚಿಸುವ ಮೂಲಕ ಫಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ನಾನು ನಿಮ್ಮನ್ನು ಕೋರುತ್ತೇನೆ.

 

ಸ್ನೇಹಿತರೆ,

ಎರಡು ವಿಧದ ಜನರಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ,   ಜೀವಿಸುವವರು ಮತ್ತು ಕೇವಲ ಬದುಕುವವರು. ನೀವು ನಿರ್ಧರಿಸಬೇಕು, ನೀವು ಕೇವಲ ಬದುಕಲು ಬಯಸುತ್ತೀರಾ ಅಥವಾ ಜೀವನವನ್ನು ಸಂಪೂರ್ಣವಾಗಿ ಬದುಕಲು ಬಯಸುವಿರಾ?  ಅವಧಿ ಮುಗಿದ ಔಷಧದ ಬಾಟಲಿಯನ್ನು ನೋಡಿರಿ. ಬಹುಶಃ ಒಂದು ವರ್ಷ ಕೂಡ ಆಗಿದೆ ಅದರ ಅವಧಿ ಮುಗಿದು. ಬಾಟಲ್ ಇರುತ್ತದೆ. ಬಹುಶಃ ಪ್ಯಾಕೇಜಿಂಗ್ ಇನ್ನೂ ಸಹ ಆಕರ್ಷಕವಾಗಿ ಕಾಣುತ್ತದೆ. ಒಳಗೆ ಔಷಧಿ ಇನ್ನೂ ಇದೆ, ಆದರೆ ಏನು ಪ್ರಯೋಜನ?, ಜೀವನವು ಇದೇ ರೀತಿಯಾಗಿರಬೇಕಾ?. ಜೀವನವು ಉತ್ಸಾಹಭರಿತ ಮತ್ತು ಉದ್ದೇಶಪೂರ್ವಕವಾಗಿರಬೇಕು.   ಒಂದು ಸಂಪೂರ್ಣ ಜೀವನವನ್ನು ನಡೆಸುವ ಅತ್ಯುತ್ತಮ ವಿಧಾನವೆಂದರೆ ತಿಳಿದುಕೊಳ್ಳುವುದು, ಕಲಿಯುವುದು, ಅರ್ಥಮಾಡಿಕೊಳ್ಳುವುದು ಮತ್ತು ಇತರರಿಗಾಗಿ ಬದುಕುವುದು.

 

ವಿವೇಕಾನಂದರು ಹೇಳಿದಂತೆ, “ಇತರರಿಗಾಗಿ ಬದುಕುವವರೇ ನಿಜಕ್ಕೂ ಬದುಕುವವರು”

 

ಸ್ನೇಹಿತರೆ,

ನಿಮ್ಮ ಸಮ್ಮೇಳನ ಸಮಾರಂಭವು ನಿಮ್ಮ ಪ್ರಸ್ತುತ ಅಧ್ಯಯನದ ಮುಕ್ತಾಯವನ್ನು ಸೂಚಿಸುತ್ತದೆ. ಆದರೆ ಅದು ನಿಮ್ಮ ಶಿಕ್ಷಣದ ಅಂತ್ಯವಲ್ಲ. ಶಿಕ್ಷಣ ಮತ್ತು ಕಲಿಕೆ ನಿರಂತರ ಪ್ರಕ್ರಿಯೆ. ನಾವು ಬದುಕಿರುವವರೆಗೂ ನಾವು ಕಲಿಯುತ್ತಲೇ ಇರುತ್ತೇವೆ. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಿರಲಿ, ಮಾನವತೆಯ ಒಳಿತಿಗಾಗಿ ಸಮರ್ಪಿತವಾಗಿರಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ.

ಧನ್ಯವಾದಗಳು.

ಬಹಳ ಧನ್ಯವಾದಗಳು.