Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏ.12ರಂದು ಗುಜರಾತ್ ನ ಅದಾಲಜ್ ನ ಶ್ರೀ ಅನ್ನಪೂರ್ಣಧಾಮದ ವಿದ್ಯಾರ್ಥಿ ನಿಲಯ ಮತ್ತು ಶೈಕ್ಷಣಿಕ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ; ಜನಸಹಾಯಕ್ ಟ್ರಸ್ಟ್ ನ ಹಿರಾಮಣಿ ಆರೋಗ್ಯಧಾಮ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಕೆ

ಏ.12ರಂದು ಗುಜರಾತ್ ನ ಅದಾಲಜ್ ನ ಶ್ರೀ ಅನ್ನಪೂರ್ಣಧಾಮದ ವಿದ್ಯಾರ್ಥಿ ನಿಲಯ ಮತ್ತು ಶೈಕ್ಷಣಿಕ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ; ಜನಸಹಾಯಕ್ ಟ್ರಸ್ಟ್ ನ ಹಿರಾಮಣಿ ಆರೋಗ್ಯಧಾಮ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಅದಾಲಜ್‌ನಲ್ಲಿ ಶ್ರೀ ಅನ್ನಪೂರ್ಣಧಾಮ ಟ್ರಸ್ಟ್‌ನ ವಿದ್ಯಾರ್ಥಿ ನಿಲಯ ಮತ್ತು ಶೈಕ್ಷಣಿಕ ಸಂಕೀರ್ಣವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಜನಸಹಾಯಕ್ ಟ್ರಸ್ಟ್‌ನ ಹಿರಾಮಣಿ ಆರೋಗ್ಯಧಾಮದ ಭೂಮಿಪೂಜೆಯನ್ನೂ ಸಹ ನೆರವೇರಿಸಿದರು. ಈ ವೇಳೆ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಸೇರಿ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಶ್ರೀ ಅನ್ನಪೂರ್ಣಧಾಮ ಅವರ ದೈವಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಉದ್ಯಮಗಳೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು. ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕಾಂಶ ಕ್ಷೇತ್ರದಲ್ಲಿ ಕೊಡುಗೆ ನೀಡುವುದು ಗುಜರಾತ್‌ನ ಸ್ವಭಾವವಾಗಿದೆ ಎಂದು ಅವರು ಹೇಳಿದರು. ಎಲ್ಲಾ ಸಮುದಾಯಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ ಮತ್ತು ಸಮಾಜಕ್ಕಾಗಿ ತಮ್ಮ ಪಾತ್ರ ನಿರ್ವಹಣೆಯಲ್ಲಿ ಪಾಟಿದಾರ್ ಸಮುದಾಯವು ಎಂದಿಗೂ ಹಿಂದೆ ಉಳಿಯುವುದಿಲ್ಲ ಎಂದರು.

ಸಮೃದ್ಧಿಯ ಅಧಿದೇವತೆ ಮಾತೆ ಅನ್ನಪೂರ್ಣೆಯನ್ನು ಎಲ್ಲರೂ ಮತ್ತು ವಿಶೇಷವಾಗಿ ಪಾಟಿದಾರ್ ಸಮುದಾಯವು ದೈನಂದಿನ ಜೀವನದ ನೈಜತೆಗಳೊಂದಿಗೆ ಆಳವಾಗಿ ಸಂಪರ್ಕಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇತ್ತೀಚೆಗಷ್ಟೇ ಕೆನಡಾದಿಂದ ಕಾಶಿಗೆ ಮಾತೆ ಅನ್ನಪೂರ್ಣ ಅವರ ಪ್ರತಿಮೆಯನ್ನು ತರಲಾಗಿದೆ ಎಂದು ಪ್ರಧಾನಿ ಹೇಳಿದರು. “ನಮ್ಮ ಸಂಸ್ಕೃತಿಯ ಇಂತಹ ಡಜನ್ ಗಟ್ಟಲೆ ಸಂಕೇತಗಳನ್ನು ಕಳೆದ ಕೆಲವು ವರ್ಷಗಳಿಂದೀಚೆಗೆ ವಿದೇಶದಿಂದ ವಾಪಸ್ ತರಲಾಗಿದೆ’’ ಎಂದು ಅವರು ಹೇಳಿದರು.

ನಮ್ಮ ಸಂಸ್ಕೃತಿಯಲ್ಲಿ ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕೆ ಯಾವಾಗಲೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಮತ್ತು ಇಂದು ಶ್ರೀ ಅನ್ನಪೂರ್ಣಧಾಮ ಈ ಅಂಶಗಳನ್ನು ವಿಸ್ತರಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ ದಿನಗಳಲ್ಲಿ ಲಭ್ಯವಾಗಲಿರುವ ಹೊಸ ಸೌಲಭ್ಯಗಳು ಗುಜರಾತ್‌ನ ಸಾಮಾನ್ಯ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ, ವಿಶೇಷವಾಗಿ 14 ವ್ಯಕ್ತಿಗಳಿಗೆ ಏಕಕಾಲದಲ್ಲಿ ಡಯಾಲಿಸಿಸ್ ಸೌಲಭ್ಯ, 24 ಗಂಟೆಗಳ ರಕ್ತ ಪೂರೈಕೆಯೊಂದಿಗೆ ಬ್ಲಡ್ ಬ್ಯಾಂಕ್ ಹೆಚ್ಚಿನ ಅಗತ್ಯವನ್ನು ಪೂರೈಸುತ್ತದೆ ಎಂದರು. ಕೇಂದ್ರ ಸರ್ಕಾರ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೌಲಭ್ಯವನ್ನು ಆರಂಭಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಗುಜರಾತಿ ಭಾಷೆಯಲ್ಲಿ ಮಾತು ಮುಂದುವರಿಸಿದ ಪ್ರಧಾನಮಂತ್ರಿ, ಟ್ರಸ್ಟ್ ಮತ್ತು ಅದರ ನಾಯಕತ್ವದ ಉತ್ತಮ ಕೆಲಸಕ್ಕಾಗಿ ಪ್ರಶಂಸಿಸಿದರು. ರಚನಾತ್ಮಕ ಕೆಲಸಗಳೊಂದಿಗೆ ಚಳವಳಿಯನ್ನು (ಆಂದೋಲನ) ನಡೆಸುವುದು ಈ ಮಹನೀಯರ ಶ್ರೇಷ್ಠ ಲಕ್ಷಣವಾಗಿದೆ ಎಂದು ಹೇಳಿದರು. “ಮೃದು ಆದರೆ ದೃಢ ನಿರ್ಧಾರ’ ಕೈಗೊಳ್ಳುವ ಮುಖ್ಯಮಂತ್ರಿ ಅವರ ನಾಯಕತ್ವಕ್ಕಾಗಿ ಮತ್ತು ನೈಸರ್ಗಿಕ ಕೃಷಿಗೆ ಒತ್ತು ನೀಡಿದಕ್ಕಾಗಿ ಶ್ಲಾಘಿಸಿದ ಪ್ರಧಾನಿ, ಸಾಧ್ಯವಿರುವ ಕಡೆಗಳಲ್ಲೆಲ್ಲಾ ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕೆಂದು ಸಭೆಯನ್ನು ಕೋರಿದರು. ಗುಜರಾತ್‌ನಲ್ಲಿ ಅಭಿವೃದ್ಧಿಯ ಶ್ರೀಮಂತ ಸಂಪ್ರದಾಯವನ್ನು ಉಲ್ಲೇಖಿಸಿದ ಪ್ರಧಾನಿ ಅವರು, ಅಲ್ಲಿ ಅಭಿವೃದ್ಧಿಯ ಹೊಸ ಮಾನದಂಡಗಳನ್ನು ನಿಗದಿಪಡಿಸಲಾಗಿದೆ, ಅಭಿವೃದ್ಧಿಯ ಈ ಪರಂಪರೆಯನ್ನು ಮುಖ್ಯಮಂತ್ರಿ ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಏಕತಾ ಪ್ರತಿಮೆಯ ಮೂಲಕ ಸರ್ದಾರ್ ಪಟೇಲ್ ಅವರ ಹೆಸರನ್ನು ವಿಶ್ವದಾದ್ಯಂತ ತಲುಪಿಸಿದ ಭಾರತವು ಅವರಿಗೆ ಬಹು ದೊಡ್ಡ ಗೌರವವನ್ನು ಸಲ್ಲಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಮಾತೆ ಅನ್ನಪೂರ್ಣೆಯ ನಾಡಾಗಿರುವ ಗುಜರಾತ್‌ನಲ್ಲಿ ಅಪೌಷ್ಟಿಕತೆಗೆ ಯಾವುದೇ ಜಾಗ ಇರಬಾರದು ಎಂದು ಪ್ರಧಾನಮಂತ್ರಿ ಹೇಳಿದರು. ಆಗಾಗ್ಗೆ ಎದುರಾಗುವ ಅಪೌಷ್ಟಿಕತೆಗೆ ಅಜ್ಞಾನವೂ ಕಾರಣ ಎಂದು ಅವರು ಹೇಳಿದರು. ಸಮತೋಲಿತ ಆಹಾರಾಭ್ಯಾಸದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಆಹಾರವು ಆರೋಗ್ಯದ ದಿಕ್ಕಿನಲ್ಲಿಡುವ  ಮೊದಲ ಹೆಜ್ಜೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಅಪೌಷ್ಟಿಕತೆಯು ಆಹಾರದ ಕೊರತೆಗಿಂತ ಹೆಚ್ಚಾಗಿ ಆಹಾರದ ಬಗ್ಗೆ ಜ್ಞಾನದ ಕೊರತೆಯ ಪರಿಣಾಮವಾಗಿದೆ ಎಂದು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು 80 ಕೋಟಿಗೂ ಅಧಿಕ ಜನರಿಗೆ ಉಚಿತ ಆಹಾರಧಾನ್ಯವನ್ನು ಖಾತ್ರಿಪಡಿಸಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಕಳೆದ ರಾತ್ರಿ ಅಮೆರಿಕ ಅಧ್ಯಕ್ಷರ ಜತೆಗಿನ ಮಾತುಕತೆಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ವಿಶ್ವ ವ್ಯಾಪಾರ ಸಂಸ್ಥೆ  (ಡಬ್ಲ್ಯುಟಿಒ) ನಿಯಮಗಳನ್ನು ಸಡಿಲಿಸಿದರೆ ಭಾರತವು ಇತರ ದೇಶಗಳಿಗೆ ಆಹಾರ ಧಾನ್ಯಗಳನ್ನು ಕಳುಹಿಸಬಹುದು ಎಂದು ಅಮೆರಿಕ ಅಧ್ಯಕ್ಷರಿಗೆ ತಿಳಿಸಿರುವುದಾಗಿ ಹೇಳಿದರು. ಅನ್ನಪೂರ್ಣ ಮಾತೆಯ ಅನುಗ್ರಹದಿಂದ ಭಾರತೀಯ ರೈತರು ಈಗಾಗಲೇ ಜಗತ್ತನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಗುಜರಾತ್‌ನಲ್ಲಿ ನಡೆದ ಲಸಿಕಾ ಅಭಿಯಾನವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಕೈಗಾರಿಕಾ ಅಭಿವೃದ್ಧಿಯ ಇತ್ತೀಚಿನ ಪ್ರವೃತ್ತಿಗಳ ಅಗತ್ಯಗಳಿಗೆ ತಕ್ಕಂತೆ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವ ಅಗತ್ಯವನ್ನು ಅವರು ಪುನರುಚ್ಚರಿಸಿದರು. ಫಾರ್ಮಾ ಉದ್ಯಮದಲ್ಲಿ ರಾಜ್ಯದ ಪ್ರಮುಖ ಪಾತ್ರಕ್ಕೆ ಕಾರಣವಾದ ಫಾರ್ಮಸಿ ಕಾಲೇಜು ರಚಿಸಲು ಆರಂಭಿಕ ಒತ್ತು ನೀಡಿದ್ದನ್ನು ಉಲ್ಲೇಖಿಸಿದ ಅವರು ಕೌಶಲ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಸಮುದಾಯ ಮತ್ತು ಸರ್ಕಾರದ ಪ್ರಯತ್ನಗಳು ಹಲವು ಪಟ್ಟು ಹೆಚ್ಚಾದಾಗ ಪರಿಣಾಮ ಬೀರುತ್ತವೆ ಎಂದು ಹೇಳಿದರು. ಕೈಗಾರಿಕೆ 4.0 ಮಾನದಂಡಗಳನ್ನು ಸಾಧಿಸಲು ಗುಜರಾತ್  ದೇಶವನ್ನು ಮುನ್ನಡೆಸಬೇಕು, ರಾಜ್ಯಕ್ಕೆ ಹಾಗೆ ಮಾಡುವ ಸಾಮರ್ಥ್ಯ ಮತ್ತು ಮನೋಧರ್ಮ ಹೊಂದಿದೆ ಎಂದು ಅವರು ಹೇಳಿದರು.

ಡಯಾಲಿಸಿಸ್ ರೋಗಿಗಳ ಹಣಕಾಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ದೇಶದ ಎಲ್ಲಾ ಜಿಲ್ಲೆಗಳಲ್ಲಿ ಉಚಿತ ಡಯಾಲಿಸಿಸ್ ಸೌಲಭ್ಯವನ್ನು ಒದಗಿಸಿಕೊಡಲು ಒತ್ತು ನೀಡಿದರು. ಅದೇ ರೀತಿ ಜನೌಷಧಿ ಕೇಂದ್ರವು ಕೈಗೆಟಕುವ ದರದಲ್ಲಿ ಔಷಧ ನೀಡುವ ಮೂಲಕ ರೋಗಿಗಳಿಗೆ ವೆಚ್ಚವನ್ನು ಕಡಿಮೆ ಮಾಡುತ್ತಿದೆ. ಸ್ವಚ್ಛತೆ, ಪೋಷಣೆ, ಜನೌಷಧಿ, ಡಯಾಲಿಸಿಸ್ ಅಭಿಯಾನ, ಸ್ಟೆಂಟ್ ಮತ್ತು ಮೊಣಕಾಲು ಅಳವಡಿಕೆಯ ಚಿಪ್ಪಿನ ಬೆಲೆ ಇಳಿಕೆಯಂತಹ ಕ್ರಮಗಳು ಸಾಮಾನ್ಯ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಿದೆ. ಅಂತೆಯೇ, ಆಯುಷ್ಮಾನ್ ಭಾರತ್ ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದೆ ಎಂದು ಪ್ರಧಾನಮಂತ್ರಿ ಸೇರಿಸಿದರು.

ವಿದ್ಯಾರ್ಥಿನಿಲಯ ಮತ್ತು ಶೈಕ್ಷಣಿಕ ಸಂಕೀರ್ಣವು 600 ವಿದ್ಯಾರ್ಥಿಗಳಿಗೆ 150 ಕೊಠಡಿಗಳ ವಸತಿ ಮತ್ತು ಬೋರ್ಡಿಂಗ್ ಸೌಕರ್ಯ ಒದಗಿಸಲಿದೆ. ಇತರ ಸೌಲಭ್ಯಗಳಲ್ಲಿ ಜಿಪಿಎಸ್ ಸಿ, ಯುಪಿಎಸ್ ಸಿ ಪರೀಕ್ಷೆಗಳ ತರಬೇತಿ ಕೇಂದ್ರ, ಇ-ಲೈಬ್ರರಿ, ಕಾನ್ಫರೆನ್ಸ್ ಕೊಠಡಿ, ಕ್ರೀಡಾ ಕೊಠಡಿ, ಟಿವಿ ಕೊಠಡಿ ಮತ್ತು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಇತ್ಯಾದಿ ಒಳಗೊಂಡಿವೆ.

ಜನಸಹಾಯಕ್ ಟ್ರಸ್ಟ್ ಹಿರಾಮಣಿ ಆರೋಗ್ಯಧಾಮವನ್ನು ಅಭಿವೃದ್ಧಿಪಡಿಸಲಿದೆ. ಇದು ಏಕಕಾಲದಲ್ಲಿ 14 ಜನರಿಗೆ ಡಯಾಲಿಸಿಸ್ ಸೌಲಭ್ಯ, 24 ಗಂಟೆಗಳ ರಕ್ತ ಪೂರೈಕೆಯೊಂದಿಗೆ ರಕ್ತನಿಧಿ, 24 ಗಂಟೆ ಕೆಲಸ ಮಾಡುವ ಔಷಧದ ಅಂಗಡಿ, ಆಧುನಿಕ ರೋಗಶಾಸ್ತ್ರ ಪ್ರಯೋಗಾಲಯ ಮತ್ತು ಆರೋಗ್ಯ ತಪಾಸಣೆಗಾಗಿ ಉನ್ನತ ದರ್ಜೆಯ ಸಾಧನಗಳು ಸೇರಿದಂತೆ ಇತ್ತೀಚಿನ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುತ್ತದೆ. ಇದು ಆಯುರ್ವೇದ, ಹೋಮಿಯೋಪತಿ, ಅಕ್ಯುಪಂಕ್ಚರ್, ಯೋಗ ಥೆರಪಿ ಇತ್ಯಾದಿಗಳಿಗೆ ಸುಧಾರಿತ ಸೌಲಭ್ಯಗಳನ್ನು ಹೊಂದಿರುವ ಡೇ-ಕೇರ್ ಸೆಂಟರ್ ಆಗಿರುತ್ತದೆ. ಇದು ಪ್ರಥಮ ಚಿಕಿತ್ಸಾ ತರಬೇತಿ, ತಾಂತ್ರಿಕ ತರಬೇತಿ ಮತ್ತು ವೈದ್ಯರ ತರಬೇತಿಯ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

***