ಏಪ್ರಿಲ್ 3,2016ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸೌದಿ ಅರೇಬಿಯಾ ಭೇಟಿ ವೇಳೆ ನೀಡಿದ ಜಂಟಿ ಹೇಳಿಕೆ
03 Apr, 2016
1. ಎರಡು ಪವಿತ್ರ ಮಸೀದಿಗಳ ಸಂರಕ್ಷಕರಾದ ಗೌರವಾನ್ವಿತ ದೊರೆ ಸಲ್ಮಾನ್ ಬಿನ್ ಅಬ್ದುಲ್‍ಅಜೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ ಭಾರತ ಗಣರಾಜ್ಯದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 2 ಮತ್ತು 3, 2016ರಂದು ಸೌದಿ ಅರೇಬಿಯಾಕ್ಕೆ ಅಧಿಕೃತ ಭೇಟಿ ನೀಡಿದ್ದರು.
2.ಎರಡು ಪವಿತ್ರ ಮಸೀದಿಗಳ ಸಂರಕ್ಷಕರಾದ ದೊರೆಯು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಏಪ್ರಿಲ್ 3 ರಂದು ಆಸ್ಥಾನದಲ್ಲಿ ಬರಮಾಡಿಕೊಂಡರು. ಎರಡು ದೇಶಗಳು ಮತ್ತು ಅದರ ಪ್ರಜೆಗಳ ನಡುವಿನ ಬಲಿಷ್ಠ ಸ್ನೇಹಬಂಧದ ಚೈತನ್ಯದ ಹಿನ್ನೆಲೆಯಲ್ಲಿ ಇಬ್ಬರು ನಾಯಕರ ನಡುವೆ ಚರ್ಚೆಗಳು ನಡೆದವು. ತಮ್ಮ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಯುವರಾಜ, ಉಪ ಮುಖ್ಯಸ್ಥ ಮತ್ತು ಆಂತರಿಕ ವ್ಯವಹಾರಗಳ ಸಚಿವರಾದ ಗೌರವಾನ್ವಿತ ಮೊಹಮ್ಮದ್ ಬಿನ್ ಲಾಯಿಫ್ ಬಿನ್ ಅಬ್ದುಲ್‍ಅಜೀಜ್ ಅಲ್ ಸೌದ್ ಮತ್ತು ಯುವರಾಜ, ಎರಡನೇ ಉಪ ಮುಖ್ಯಸ್ಥ ಮತ್ತು ರಕ್ಷಣಾ ಸಚಿವರಾದ ಗೌರವಾನ್ವಿತ ಮೊಹಮ್ಮದ್ ಬಿನ್ ಸಲಾಮ್ ಬಿನ್ ಅಬ್ದುಲ್‍ಅಜೀಜ್ ಅಲ್ ಸೌದ್ ಅವರನ್ನೂ ಭೇಟಿ ಮಾಡಿದರು. ಪ್ರಧಾನಿ ಮೋದಿ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವ, ಆರೋಗ್ಯ ಸಚಿವ ಮತ್ತು ಸೌದಿ ಅರಾಮ್‍ಕೋದ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರೂ ಬರಮಾಡಿಕೊಂಡರು.
3. ಎರಡು ಪವಿತ್ರ ಮಸೀದಿಗಳ ಸಂರಕ್ಷಕರಾದ ದೊರೆ ಸಲ್ಮಾನ್ ಬಿನ್ ಅಬ್ದುಲ್‍ಅಜೀಜ್ ಅಲ್ ಸೌದ್ ಮತ್ತು ಪ್ರಧಾನಿ ಮೋದಿ ಅವರು ಎರಡು ದೇಶಗಳಿಗೂ ಆಸಕ್ತಿ ಇರುವ ದ್ವಿಪಕ್ಷೀಯ, ಪ್ರಾಂತ್ಯ ಮತ್ತು ಬಹುಪಕ್ಷೀಯ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಸಿದರು. ಎರಡು ದೇಶಗಳ ನಡುವಿನ ಗಾಢವಾದ ಹಂಚಿಕೊಂಡ ಇತಿಹಾಸ ಹಾಗೂ ಆರ್ಥಿಕ ಸಹಭಾಗಿತ್ವದ ಹೆಚ್ಚಳ, ಬಹುಮುಖ ಸಹಕಾರ ಮತ್ತು ಜನರ ಪರಸ್ಪರ ಸಂಪರ್ಕದ ಮೂಲಕ ಉಳಿಸಿಕೊಂಡು, ವೃದ್ಧಿಗೊಂಡ ತೀರ ಹತ್ತಿರದ ಮತ್ತು ಸ್ನೇಹತ್ವದ ದ್ವಿಪಕ್ಷೀಯ ಒಪ್ಪಂದಗಳನ್ನು ಇಬ್ಬರೂ ನಾಯಕರು ಉಲ್ಲೇಖಿಸಿದರು. ವಿಶಾಲ ವ್ಯಾಪ್ತಿಯ ಮತ್ತು ರಚನಾತ್ಮಕ ಮಾತುಕತೆಯು ಸೌಹಾರ್ದದ ವಾತಾವರಣದಲ್ಲಿ ನಡೆದಿದ್ದು, ಎರಡೂ ದೇಶಗಳ ಕಾಳಜಿಗಳು ಹಾಗೂ ಪರಿಪ್ರೇಕ್ಷಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಶ್ಲಾಘಿಸಲು ನೆರವಾಯಿತು. ಗಲ್ಫ್ ಪ್ರಾಂತ್ಯ ಮತ್ತು ಭಾರತೀಯ ಉಪ ಖಂಡದ ಸುರಕ್ಷತೆ ಮತ್ತು ಸ್ಥಿರತೆಗೆ ಎರಡೂ ದೇಶಗಳ ನಡುವಿನ ತೀರ ಸಾಮೀಪ್ಯದ ಸಂಬಂಧವನ್ನು ಪರಿಗಣಿಸಬೇಕಿದೆ ಹಾಗೂ ಈ ಪ್ರಾಂತ್ಯದ ದೇಶಗಳ ಅಭಿವೃದ್ಧಿಗೆ ಸುರಕ್ಷಿತ ಮತ್ತು ಸುಭದ್ರ ವಾತಾವರಣವನ್ನು ಕಾಯ್ದುಕೊಳ್ಳಬೇಕಿದೆ ಎಂಬುದನ್ನು ಗುರುತಿಸಲಾಯಿತು.
4. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ, ಆರ್ಥಿಕ, ರಕ್ಷಣೆ, ಸುರಕ್ಷತೆ, ಮಾನವ ಸಂಪನ್ಮೂಲ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಂಬಂಧವನ್ನು ಹಾಗೂ ಜನರ ಪರಸ್ಪರ ವಿನಿಮಯವನ್ನು ಯಶಸ್ವಿಯಾಗಿ ಪರಿವರ್ತಿಸಿರುವುದಕ್ಕೆ ಇಬ್ಬರು ನಾಯಕರೂ ಶ್ಲಾಘನೆ ವ್ಯಕ್ತಪಡಿಸಿದರು. ಇದರಿಂದ ದ್ವಿಪಕ್ಷೀಯ ಸಂಬಂಧವು ಶ್ರೀಮಂತಗೊಂಡಿದೆ ಎಂದರು. ಎರಡು ದೇಶಗಳ ನಡುವಿನ ಉನ್ನತಾಧಿಕಾರಿಗಳ ನಿಯಮಿತ ವಿನಿಮಯಕ್ಕೆ ಇಬ್ಬರೂ ತೃಪ್ತಿ ವ್ಯಕ್ತಪಡಿಸಿದ್ದು, ದಿಲ್ಲಿ ಘೋಷಣೆ(2006) ಮತ್ತು ರಿಯಾದ್ ಘೋಷಣೆ(2010)ಗಳು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವು “ಆಯಕಟ್ಟಿನ ಸಹಭಾಗಿತ್ವ” ವಾಗಿ ಬದಲಾಗಿದೆ ಎಂದು ಪ್ರಶಂಸಿಸಿದರು.
5. ಪ್ರಾಂತ್ಯ ಮತ್ತು ಜಗತ್ತಿನಲ್ಲಿ ಶಾಂತಿ, ಸ್ಥಿರತೆ ಮತ್ತು ಸುರಕ್ಷತೆಯನ್ನು ಉತ್ತೇಜಿಸುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ರಕ್ಷಣಾ ಸಹಕಾರ ಸೇರಿದಂತೆ ದ್ವಿಪಕ್ಷೀಯ ಆಯಕಟ್ಟಿನ ಸಹಭಾಗಿತ್ವವನ್ನು ಇನ್ನಷ್ಟು ಸುಭದ್ರಗೊಳಿಸುವ ಮೂಲಕ ಎರಡೂ ದೇಶಗಳ ಮತ್ತು ಪ್ರಜೆಗಳ ಸಾಮಾನ್ಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಇಬ್ಬರು ನಾಯಕರೂ ಎತ್ತಿ ಹಿಡಿದರು.
6. ಫೆಬ್ರವರಿ 2014ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಆಗಿನ ಯುವರಾಜ, ಉಪ ಮುಖ್ಯಸ್ಥ ಮತ್ತು ರಕ್ಷಣಾ ಸಚಿವರಾಗಿದ್ದ ದೊರೆ ಸಲ್ಮಾನ್ ಬಿನ್ ಅಬ್ದುಲ್‍ಅಜೀಜ್ ಅಲ್ ಸೌದ್ ಅವರು ಸಹಿ ಹಾಕಿದ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಎಂಓಯು ಎರಡೂ ದೇಶಗಳ ನಡುವಿನ ಆಯಕಟ್ಟಿನ ಸಹಭಾಗಿತ್ವವನ್ನು ಬಲಗೊಳಿಸುವಲ್ಲಿನ ಪ್ರಮುಖ ಮೈಲುಗಲ್ಲು ಎಂದು ಪ್ರಧಾನಿ ಮೋದಿ ಅವರು ಒಪ್ಪಿಕೊಂಡರು. ಸೇನಾಧಿಕಾರಿಗಳು ಮತ್ತು ತಜ್ಞರ ಭೇಟಿ, ಜಂಟಿ ಸೇನಾ ಚಟುವಟಿಕೆ, ಹಡಗುಗಳು ಮತ್ತು ವಿಮಾನಗಳ ವೀಕ್ಷಣೆಗೆ ವಿನಿಮಯ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಪೂರೈಕೆ ಮತ್ತು ಜಂಟಿ ಅಭಿವೃದ್ಧಿ ಮೂಲಕ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಇನ್ನಷ್ಟು ತೀವ್ರಗೊಳಿಸಲು ಇಬ್ಬರೂ ನಿರ್ಧರಿಸಿದರು. ಪ್ರಧಾನಿ ಮೋದಿ ಅವರ ಭೇಟಿಯ ಬಳಿಕ ರಿಯಾದ್‍ನಲ್ಲಿ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಜಂಟಿ ಸಮಿತಿಯ ಎರಡನೇ ಸಭೆಯನ್ನು ನಡೆಸುವ ನಿರ್ಧಾರವನ್ನು ಇಬ್ಬರೂ ಸ್ವಾಗತಿಸಿದರು.
7. ಎರಡೂ ದೇಶಗಳ ಸುರಕ್ಷತೆ ಮತ್ತು ಸಮೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ, ಗಲ್ಫ್ ಮತ್ತು ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸಾಗರ ಸಂಬಂಧಿ ಸುರಕ್ಷತೆಯನ್ನು ಬಲಗೊಳಿಸಲು ಪರಸ್ಪರ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಇಬ್ಬರು ನಾಯಕರೂ ಸಮ್ಮತಿಸಿದರು. ಸ್ವಾಭಾವಿಕ ಅವಘಡ ಮತ್ತು ಸಂಕಷ್ಟದ ಸಮಯದಲ್ಲಿ ತೆರವುಗೊಳಿಸುವಿಕೆ ಹಾಗೂ ಮಾನವೀಯ ನೆರವು ನೀಡಲು ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಸಮ್ಮತಿಸಿದರು.
8. ಇಬ್ಬರು ನಾಯಕರೂ ಭಯೋತ್ಪಾದಕತೆಯ ನಾನಾ ಸ್ವರೂಪಗಳು ಮತ್ತು ವಿಧಾನಗಳನ್ನು ಕಟುವಾಗಿ ಖಂಡಿಸಿದ್ದು, ಯಾರೇ ಆಗಿರಲಿ ಮತ್ತು ಉದ್ದೇಶ ಯಾವುದೇ ಇರಲಿ, ಉಗ್ರವಾದ ಖಂಡನೀಯ ಎಂದರು.
9. ಭಯೋತ್ಪಾದಕತೆ ಹಾಗೂ ತೀವ್ರವಾದವು ಎಲ್ಲ ದೇಶ ಮತ್ತು ಸಮಾಜಗಳಿಗೂ ಆಪತ್ತು ಎಂದು ಒಪ್ಪಿಕೊಂಡ ಅವರು, ಇದನ್ನು ಯಾವುದೇ ಧರ್ಮ, ಕುಲ ಇಲ್ಲವೇ ಸಂಸ್ಕೃತಿಗೆ ತಳಕು ಹಾಕುವುದನ್ನು ತಿರಸ್ಕರಿಸಿದರು. ಯಾವುದೇ ದೇಶ ಮತ್ತೊಂದು ದೇಶದ ವಿರುದ್ಧ ಭಯೋತ್ಪಾದಕ ಚಟುವಟಿಕೆ ನಡೆಸುವುದನ್ನು ಒಪ್ಪಬಾರದು: ಇದಕ್ಕೆ ಬಳಸಲ್ಪಡುವ ಮೂಲಸೌಲಭ್ಯಗಳನ್ನು ಕಳಚಿ ಹಾಕಬೇಕು ಮತ್ತು ತಮ್ಮ ನೆಲದಿಂದ ಬೇರೆ ದೇಶದ ವಿರುದ್ಧ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವವರಿಗೆ ಬೆಂಬಲ ಮತ್ತು ಆರ್ಥಿಕ ನೆರವು ನೀಡಬಾರದು: ಹಾಗೂ ಭಯೋತ್ಪಾದನೆ ಚಟುವಟಿಕೆಗಳನ್ನು ಕಾನೂನಿನನ್ವಯ ಶಿಕ್ಷೆಗೆ ಒಳಪಡಿಸಬೇಕು ಎಂದು ಕರೆ ನೀಡಿದರು.
10. ದ್ವಿಪಕ್ಷೀಯ ಹಂತದಲ್ಲಿ ಮತ್ತು ವಿಶ್ವ ಸಂಸ್ಥೆಯ ಬಹುಪಕ್ಷೀಯ ಹಂತದಲ್ಲಿ ಕೂಡ ಉಗ್ರವಾದದ ವಿರುದ್ಧ ಹೋರಾಟಕ್ಕೆ ಪರಸ್ಪರ ಸಹಕಾರವನ್ನು ಬಲಪಡಿಸಲು ಇಬ್ಬರು ನಾಯಕರೂ ಒಪ್ಪಿಕೊಂಡರು. ಉಗ್ರವಾದ ಒಡ್ಡುವ ಸವಾಲನ್ನು ಎದುರಿಸಲು ಬಹುರಾಷ್ಟ್ರೀಯ ಒಪ್ಪಂದಗಳನ್ನು ಬಲಪಡಿಸಬೇಕೆಂದು ಅಂತಾರಾಷ್ಟ್ರೀಯ ಸಮುದಾಯವನ್ನು ಕೋರಿದರು. ವಿಶ್ವ ಸಂಸ್ಥೆಯಲ್ಲಿ ಭಾರತವು ಮಂಡಿಸಿರುವ ಅಂತಾರಾಷ್ಟ್ರೀಯ ಉಗ್ರವಾದ ಕುರಿತ ಸಮಗ್ರ ಪ್ರಸ್ತಾವವನ್ನು ಅಂಗೀಕರಿಸಲು ಒಟ್ಟಾಗಿ ಕೆಲಸ ಮಾಡಲು ಇಬ್ಬರು ನಾಯಕರೂ ನಿರ್ಧರಿಸಿದರು. ಭಯೋತ್ಪಾದಕತೆಯ ನಾನಾ ರೂಪಗಳ ವಿರುದ್ಧ ಸೌದಿ ಅರೇಬಿಯದ ಹೋರಾಟವನ್ನು ಮತ್ತು ಇಂಥ ಅಂತಾರಾಷ್ಟ್ರೀಯ ಪ್ರಯತ್ನಗಳಲ್ಲಿ ಪಾಲುಗೊಳ್ಳುವಿಕೆಯನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದರು. ಭಯೋತ್ಪಾದಕತೆ ವಿರುದ್ಧ ಇಸ್ಲಾಮಿಕ್ ಒಕ್ಕೂಟದ ಸ್ಥಾಪನೆಯಲ್ಲಿ ಸೌದಿ ಅರೇಬಿಯದ ಪಾತ್ರ ಕುರಿತು ಭಾರತದ ಪ್ರತಿನಿಧಿಗಳಿಗೆ ವಿವರಣೆ ನೀಡಲಾಯಿತು.
11. ಎರಡು ದೇಶಗಳ ನಡುವಿನ ಸದೃಢ ರಕ್ಷಣಾ ಸಹಕಾರವನ್ನು ಒಪ್ಪಿಕೊಂಡ ಹಾಗೂ ಶ್ಲಾಘಿಸಿದ ಮುಖಂಡರು, ಭಯೋತ್ಪಾದಕತೆ ವಿರುದ್ಧ ಕಾರ್ಯಾಚರಣೆಯಲ್ಲಿ ಸಹಕಾರವನ್ನು ಹೆಚ್ಚಿಸಲು, ಮಾಹಿತಿ ಹಂಚಿಕೆ ಮತ್ತು ಸಾಮರ್ಥ್ಯ ನಿರ್ಮಾಣದಲ್ಲಿ ಸಹಕಾರವನ್ನು ಹೆಚ್ಚಿಸಲು ಹಾಗೂ ಕಾನೂನು ಜಾರಿ, ಅಕ್ರಮ ಹಣ ಹೂಡಿಕೆ ವಿರುದ್ಧ, ಮಾದಕ ದ್ರವ್ಯಗಳ ಸಾಗಣೆ ಮತ್ತು ಇನ್ನಿತರ ಅಂತರ್‍ಖಂಡ ಅಪರಾಧ ಕೃತ್ಯಗಳನ್ನು ತಡೆಯಲು ಸಹಕಾರವನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿದರು. ಅಕ್ರಮ ಹಣ ಹೂಡಿಕೆ, ಇದಕ್ಕೆ ಸಂಬಂಧಿಸಿದ ಅಪರಾಧಗಳು ಮತ್ತು ಉಗ್ರವಾದಕ್ಕೆ ಹಣ ನೀಡಿಕೆಗೆ ಸಂಬಂಧಿಸಿದ ಮಾಹಿತಿಯ ವಿನಿಮಯಕ್ಕೆ ಸಹಿ ಹಾಕಿದ ಎಂಓಯು ಅನ್ನು ಇಬ್ಬರೂ ಸ್ವಾಗತಿಸಿದರು. ಹಣದ ಅಕ್ರಮ ವರ್ಗಾವಣೆ ವಿರುದ್ಧ ಕ್ರಮ ತೆಗೆದುಕೊಳ್ಳಲು ಎರಡೂ ಪಕ್ಷಗಳು ಒಪ್ಪಿದವು.
12. ಭಯೋತ್ಪಾದಕ ಚಟುವಟಿಕೆಗಳಲ್ಲಿ ಸೈಬರ್ ಬಳಕೆಯ ತಡೆಯಲ್ಲದೆ, ಸಾಮಾಜಿಕ ಸೌಹಾರ್ದವನ್ನು ಹಾಳುಗೆಡವಲು ಮತ್ತು ತೀವ್ರಗಾಮಿ ಚಿಂತನೆಯನ್ನು ಹರಡಲು ಸೈಬರ್ ಕ್ಷೇತ್ರವನ್ನು ಬಳಸುವುದನ್ನು ತಡೆಯಲು ಪರಸ್ಪರ ಸಹಕರಿಸಲು ಇಬ್ಬರು ಮುಖಂಡರೂ ಒಪ್ಪಿದರು. ತೀವ್ರಗಾಮಿತ್ವದ ಹರಡುವಿಕೆ ಪ್ರಯತ್ನವನ್ನು ತಡೆಯಲು, ಗುಂಪುಗಳು ಮತ್ತು ದೇಶಗಳು ದ್ವೇಷವನ್ನು ಹರಡಲು ಧರ್ಮವನ್ನು ಬಳಸುವುದನ್ನು, ರಾಜಕೀಯ ಉದ್ದೇಶಕ್ಕಾಗಿ ಭಯೋತ್ಪಾದಕತೆಯ ಬಳಕೆ ಹಾಗೂ ಸಮರ್ಥಿಸಿಕೊಳ್ಳುವುದನ್ನು ತಡೆಯಲು ಅಗತ್ಯವಿರುವುದನ್ನು ಮಾಡಬೇಕೆಂದು ಸಂಬಂಧಿಸಿದ ಏಜೆನ್ಸಿಗಳಿಗೆ ಸೂಚಿಸಿದರು. ಎರಡೂ ದೇಶಗಳ ಧಾರ್ಮಿಕ ಮುಖಂಡರು ಮತ್ತು ಚಿಂತಕರ ನಡುವಿನ ಸಂವಾದ ಮತ್ತು ವಿನಿಮಯವನ್ನು ಸ್ವಾಗತಿಸಿದ ಮುಖಂಡರು, ಎಲ್ಲ ಧರ್ಮಗಳೂ ಹೇಳುವ ಶಾಂತಿ, ಸಹಿಷ್ಣುತೆ, ಒಳಗೊಳ್ಳುವಿಕೆ ಮತ್ತು ಸರ್ವರ ಒಳಿತು ಎಂಬ ಮೌಲ್ಯಗಳನ್ನು ಪ್ರೋತ್ಸಾಹಿಸಲು ಚರ್ಚಾಗೋಷ್ಠಿಗಳು ಮತ್ತು ಸಮಾವೇಶಗಳನ್ನು ಸಂಘಟಿಸಬೇಕೆಂದು ತಿಳಿಸಿದರು.
13. ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವಲ್ಲಿ ನಿರಂತರ ವಿನಿಮಯ ಕ್ರಿಯೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದ ಮುಖಂಡರು, ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ಉನ್ನತಾಧಿಕಾರಿ ಮಟ್ಟದ ವಿನಿಮಯಗಳ ಹೆಚ್ಚಳಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಸಚಿವರು ಮತ್ತು ಹಿರಿಯ ಅಧಿಕಾರಿಗಳ ಮಟ್ಟದ ಭೇಟಿ ಸೇರಿದಂತೆ ನಿರಂತರ ವಿನಿಮಯದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದರು.
14. ವಾಣಿಜ್ಯ ಮತ್ತು ಹೂಡಿಕೆ, ಇಂಧನ, ರಕ್ಷಣೆ ಮತ್ತು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಾಂಸ್ಥಿಕ ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಇಬ್ಬರು ಮುಖಂಡರೂ ಶ್ಲಾಘಿಸಿದರು. ಇಂಥ ಸಭೆಗಳಲ್ಲಿ ಸಹಕಾರದ ಸಾಧ್ಯತೆಯಿರುವ ಹೊಸ ಮತ್ತು ಸಂಭಾವ್ಯ ಕ್ಷೇತ್ರಗಳನ್ನು ಗುರುತಿಸಿರುವುದು ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸುವಲ್ಲಿ ರಚನಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ಇಬ್ಬರೂ ಗುರುತಿಸಿದರು. ಈ ಕುರಿತು ತೆಗೆದುಕೊಂಡ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಸೂಚಿಸಿದರು.
15. ಮೇ 2015ರಲ್ಲಿ ದಿಲ್ಲಿಯಲ್ಲಿ ನಡೆದ ಜಂಟಿ ಸಮಿತಿಯ 11ನೇ ಸಮಾವೇಶ ಹಾಗೂ ರಿಯಾದ್‍ನಲ್ಲಿ ಡಿಸೆಂಬರ್ 2015ರಲ್ಲಿ ನಡೆದ ಸಮಾಲೋಚನಾ ಸಭೆಯ ಸಕಾರಾತ್ಮಕ ಫಲಿತಾಶವನ್ನು ಇಬ್ಬರು ಮುಖಂಡರು ಸ್ವಾಗತಿಸಿದರು. ದ್ವಿಪಕ್ಷೀಯ ಆಯಕಟ್ಟಿನ ಸಹಭಾಗಿತ್ವವನ್ನು ದೃಢಗೊಳಿಸುವುದಕ್ಕೆ ಸಂಬಂಧಿಸಿದಂತೆ ಉನ್ನತಾಧಿಕಾರ ಸಮಿತಿ ತೆಗೆದುಕೊಂಡ ನಿರ್ಧಾರಗಳನ್ನು ಮುನ್ನಡೆಸಬೇಕೆಂದು ಸೌದಿ-ಭಾರತ ಜಂಟಿ ಸಮಿತಿಗೆ ಸೂಚಿಸಿದರು.
16. ಭಾರತ ಮತ್ತು ಸೌದಿ ಅರೇಬಿಯದ ಆರ್ಥಿಕತೆಗಳು ಸಕಾರಾತ್ಮಕವಾಗಿ ಪರಿವರ್ತನೆಗೊಳ್ಳುತ್ತಿವೆ ಎಂಬುದನ್ನು ಒಪ್ಪಿಕೊಂಡ ಮುಖಂಡರು, ಈ ಆಯಕಟ್ಟಿನ ಒಪ್ಪಂದಗಳನ್ನು ಮುಂದಕ್ಕೆ ಒಯ್ಯಲು ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದ ವಿಸ್ತರಣೆಯ ಪ್ರಾಮುಖ್ಯವನ್ನು ಒತ್ತಿಹೇಳಿದರು. ದ್ವಿಪಕ್ಷೀಯ ಹೂಡಿಕೆಯ ಹೆಚ್ಚಳ ಮತ್ತು ವ್ಯಾಪಾರ ಒಪ್ಪಂದಗಳನ್ನು ಗಮನಾರ್ಹವಾಗಿ ಅಧಿಕಗೊಳಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಎರಡೂ ದೇಶಗಳ ವಿತ್ತ ಮತ್ತು ವಾಣಿಜ್ಯ ಸಚಿವರು ಒಟ್ಟಾಗಿ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು.
17.ಕಳೆದ ಕೆಲವು ವರ್ಷಗಳಿಂದ ದ್ವಿಪಕ್ಷೀಯ ವ್ಯಾಪಾರ ಗಮನಾರ್ಹವಾಗಿ ಹೆಚ್ಚುತ್ತಿರುವುದನ್ನು ಒಪ್ಪಿಕೊಂಡ ಮುಖಂಡರು, 2014-15ರಲ್ಲಿ 39 ಶತಕೋಟಿ ಅಮೆರಿಕನ್ ಡಾಲರ್ ವಹಿವಾಟು ನಡೆದಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಎರಡೂ ದೇಶಗಳು ಪರಸ್ಪರ ಉನ್ನತ ವ್ಯಾಪಾರ ಸಹವರ್ತಿಗಳಾಗಿರುವುದನ್ನು ಹಾಗೂ ವ್ಯಾಪಾರ ಮತ್ತು ಆರ್ಥಿಕತೆಯಲ್ಲಿ ಉತ್ತಮ ಒಪ್ಪಂದಗಳನ್ನು ಮಾಡಿಕೊಂಡಿರುವುದನ್ನು ಒಪ್ಪಿಕೊಂಡ ಮುಖಂಡರು, ತೈಲವಲ್ಲದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಈ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಸಮ್ಮತಿಸಿದರು.
18. ಪರಸ್ಪರರ ಮಾರುಕಟ್ಟೆಯಲ್ಲಿ ಸೌದಿ ಮತ್ತು ಭಾರತೀಯ ಕಂಪನಿಗಳ ಇರುವಿಕೆಯ ಹೆಚ್ಚಳಕ್ಕೆ ತೃಪ್ತಿ ವ್ಯಕ್ತಪಡಿಸಿದ ಮುಖಂಡರು, ವ್ಯಾಪಾರ ಉತ್ತೇಜನ ಕ್ರಮಗಳನ್ನು ಇನ್ನಷ್ಟು ಪ್ರೋತ್ಸಾಹಿಸಲು ಮತ್ತು ಮೇಳ ಹಾಗೂ ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದರು. ಡಿಸೆಂಬರ್ 2015ರಲ್ಲಿ ಹೊಸ ದಿಲ್ಲಿಯಲ್ಲಿ ನಡೆದ ಸೌದಿ ಭಾರತ ವ್ಯಾಪಾರ ಮಂಡಳಿಯ ಸಭೆಯನ್ನು ಸ್ವಾಗತಿಸಿದ್ದು, ಮಂಡಳಿಯು ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕೆ ಉಪಯುಕ್ತ ವೇದಿಕೆಯಾಗಲಿದೆ ಎಂದು ಒಪ್ಪಿಕೊಂಡರು.
19. ನವೆಂಬರ್ 2015ರಲ್ಲಿ ಜೆಡ್ಡಾದ ಕಿಂಗ್ ಅಬ್ದುಲ್ಲಾ ಆರ್ಥಿಕ ನಗರದಲ್ಲಿ 4ನೇ ಭಾರತ ಜಿಸಿಸಿ ಕೈಗಾರಿಕಾ ಸಮಾವೇಶವನ್ನು ಹಮ್ಮಿಕೊಂಡಿರುವುದಕ್ಕೆ ಎರಡೂ ತಂಡಗಳು ತೃಪ್ತಿ ವ್ಯಕ್ತಪಡಿಸಿದವು. ರಿಯಾದ್ ಮತ್ತು ಜೆಡ್ಡಾದಲ್ಲಿ ನಡೆದ ಅಂತಾರಾಷ್ಟ್ರೀಯ ಮೇಳಗಳು ಮತ್ತು ಪ್ರದರ್ಶನಗಳಲ್ಲಿ ಭಾರತೀಯ ಕಂಪನಿಗಳು ಹೆಚ್ಚು ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕೆ ಸೌದಿ ತಂಡವು ಧನ್ಯವಾದ ಸಲ್ಲಿಸಿತು.
20. ಎರಡು ಪವಿತ್ರ ಮಸೀದಿಗಳ ಸಂರಕ್ಷಕರಾದ ಗೌರವಾನ್ವಿತ ದೊರೆ ಸಲ್ಮಾನ್ ಬಿನ್ ಅಬ್ದುಲ್‍ಅಜೀಜ್ ಅಲ್ ಸೌದ್ ಅವರು ಭಾರತದ ಆರ್ಥಿಕತೆಯ ಪ್ರಬಲ ಬೆಳವಣಿಗೆಯನ್ನು ಶ್ಲಾಘಿಸಿದ್ದು, ದೇಶದ ಭವಿಷ್ಯ ಕುರಿತ ಪ್ರಧಾನಿ ಮೋದಿ ಅವರ ದರ್ಶನವನ್ನು ಹೊಗಳಿದರು. ಪ್ರಧಾನಿ ಮೋದಿ ಅವರ ಉಪಕ್ರಮಗಳಾದ “ಸ್ಟಾರ್ಟ್ ಅಪ್ ಇಂಡಿಯಾ”,”ಮೇಕ್ ಇನ್ ಇಂಡಿಯಾ”,”ಸ್ಮಾರ್ಟ್ ಸಿಟಿ” ಮತ್ತು “ಸ್ವಚ್ಛ ಭಾರತ”ವನ್ನು ಪ್ರಶಂಸಿಸಿದ ಅವರು, ಇವು ಭಾರತದ ಆರ್ಥಿಕತೆಗೆ ಸಕಾರಾತ್ಮಕ ಉತ್ತೇಜನವನ್ನು ನೀಡುವ ಸಾಮಥ್ರ್ಯವನ್ನು ಹೊಂದಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
21. ದೇಶದಲ್ಲಿ ವ್ಯಾಪಾರದ ಉತ್ತೇಜನಕ್ಕೆ ಆರಂಭಿಸಿರುವ ಪ್ರಮುಖ ಉಪಕ್ರಮಗಳ ಕುರಿತು ವಿವರ ನೀಡಿದ ಭಾರತ ತಂಡವು, ಚಾಲ್ತಿಯಲ್ಲಿರುವ ಕಾನೂನು ಮತ್ತು ನಿಯಮಗಳನ್ನು ಸರಳಗೊಳಿಸಿ ಹಾಗೂ ಪ್ರಗತಿಗೆ ಪೂರಕವಾಗಿಸಲು ನಡೆಸಿದ ಪ್ರಯತ್ನಗಳ ಕುರಿತು ಹಾಗೂ ರೈಲ್ವೆ, ರಕ್ಷಣೆ ಮತ್ತು ಜೀವವಿಮೆಯಂಥ ಪ್ರಮುಖ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಿಯಮಗಳನ್ನು ಸುಲಭ ಗೊಳಿಸಲಾಗಿದೆ ಎಂದು ವಿವರಣೆ ನೀಡಿತು. ಭಾರತದ ಯಶಸ್ಸಿನ ಕಥನದಲ್ಲಿ ಪಾಲುದಾರರಾಗಬೇಕೆಂದು ಸೌದಿ ಅರೇಬಿಯವನ್ನು ಆಹ್ವಾನಿಸಿದ ಪ್ರಧಾನಿ ಮೋದಿ ಅವರು, ಸೌದಿ ಅರಾಮ್‍ಕೋ, ಸಬಿಕ್ ಮತ್ತು ಇತರ ಸೌದಿ ಕಂಪನಿಗಳು ಭಾರತದ ಮೂಲಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ಬಂಡವಾಳ ಹೂಡಬೇಕೆಂದು ಉತ್ತೇಜಿಸಿದರಲ್ಲದೆ, ಭಾರಿ ಕೈಗಾರಿಕಾ ಉತ್ಪಾದನಾ ಕಾರಿಡಾರ್‍ಗಳು, ಸ್ಮಾರ್ಟ್ ಸಿಟಿ ಹಾಗೂ ಡಿಜಿಟಲ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗಳಲ್ಲಿ ಪಾಲ್ಗೊಳ್ಳಬೇಕೆಂದು ಸೌದಿ ಕಂಪನಿಗಳನ್ನು ಆಹ್ವಾನಿಸಿದರು.
22. ಭಾರತದ ಮೂಲಸೌಲಭ್ಯ ಅಭಿವೃದ್ಧಿ ಕ್ಷೇತ್ರದಲ್ಲಿ, ಅದರಲ್ಲೂ ಆದ್ಯತೆಯ ಕ್ಷೇತ್ರಗಳಾದ ರೈಲ್ವೆ, ರಸ್ತೆಗಳು, ಬಂದರುಗಳು ಮತ್ತು ಹಡಗು ನಿರ್ಮಾಣ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸೌದಿ ತಂಡ ಆಸಕ್ತಿ ವ್ಯಕ್ತಪಡಿಸಿತು. ಸೌದಿಯಲ್ಲಿ, ವಿಶೇಷವಾಗಿ, ಸೌದಿ ಆರ್ಥಿಕ ಮತ್ತು ಕೈಗಾರಿಕಾ ನಗರಗಳಲ್ಲಿ ಹೂಡಿಕೆಗೆ ಸ್ಪರ್ಧಾತ್ಮಕ ಅವಕಾಶವಿದ್ದು, ಭಾರತವು ಹೂಡಿಕೆಗೆ ತೋರಿಸಿರುವ ಆಸಕ್ತಿಯನ್ನು ಸೌದಿ ತಂಡವು ಸ್ವಾಗತಿಸಿತು.
23. ಎರಡೂ ದೇಶಗಳ ಖಾಸಗಿ ಕ್ಷೇತ್ರದಲ್ಲಿ ಹೂಡಿಕೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಚನೆಯಾದ ಇನ್ವೆಸ್ಟ್ ಇಂಡಿಯಾ ಮತ್ತು ಸೌದಿ ಅರೇಬಿಯದ ಜನರಲ್ ಇನ್ವೆಸ್ಟ್‍ಮೆಂಟ್ ಪ್ರಾಧಿಕಾರ ಮಾಡಿಕೊಂಡಿರುವ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರು ಮುಖಂಡರೂ ಸ್ವಾಗತಿಸಿದರು.
24. ಆಯಕಟ್ಟಿನ ಸಹಭಾಗಿತ್ವದಲ್ಲಿ ಇಂಧನ ಸುರಕ್ಷೆಯ ಪ್ರಾಮುಖ್ಯವನ್ನು ಗಮನದಲ್ಲಿ ಇರಿಸಿಕೊಂಡು, ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ವ್ಯಾಪಾರ ಹೆಚ್ಚುತ್ತಿರುವುದಕ್ಕೆ ಮುಖಂಡರು ತೃಪ್ತಿ ವ್ಯಕ್ತಪಡಿಸಿ
ದರು. ಇದೇ ವೇಳೆ, ಸೌದಿ ಅರೇಬಿಯವು ಭಾರತದ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರ ಎಂಬ ಅಂಶವನ್ನು ಒಪ್ಪಿಕೊಂಡರು.
25. ಇಂಧನ ಕ್ಷೇತ್ರದಲ್ಲಿ ಎರಡು ದೇಶಗಳ ನಡುವಿನ ಪೂರೈಕೆದಾರ-ಖರೀದಿದಾರ ಸಂಬಂಧವನ್ನು ಪರಿವರ್ತಿಸಿ, ಪೆಟ್ರೋಕೆಮಿಕಲ್ ಸಂಕೀರ್ಣಗಳಲ್ಲಿ ಜಂಟಿ ಯೋಜನೆ ಹಾಗೂ ಹೂಡಿಕೆಯ ಸಹಭಾಗಿತ್ವ ದತ್ತ ಗಮನ ಹರಿಸಬೇಕು, ಭಾರತ, ಸೌದಿ ಅರೇಬಿಯ ಮತ್ತು ಇತರ ದೇಶಗಳಲ್ಲಿ ಜಂಟಿಯಾಗಿ ತೈಲ ಅನ್ವೇಷಣೆಗೆ ಮುಂದಾಗಬೇಕು ಎಂಬ ಕುರಿತು ಮುಖಂಡರಿಂದ ಸಹಮತ ವ್ಯಕ್ಯವಾಯಿತು. ಇಂಧನ ಕ್ಷೇತ್ರದಲ್ಲಿ ತರಬೇತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಂಶೋಧನೆ-ಅಭಿವೃದ್ಧಿಯಲ್ಲಿ ಸಹಕಾರ ಕುರಿತು ಗಮನ ಹರಿಸಲು ಎರಡೂ ದೇಶಗಳು ಸಮ್ಮತಿಸಿದವು. ಈ ದೆಸೆಯಲ್ಲಿ ಭಾರತ-ಸೌದಿ ಅರೇಬಿಯದ ಇಂಧನ ಸಂವಾದದ ಅಡಿ ನಿಯಮಿತವಾಗಿ ಸಭೆಗಳನ್ನು ನಡೆಸುವ ಅಗತ್ಯವಿದೆ ಎಂದು ಇಬ್ಬರು ಮುಖಂಡರೂ ಒಪ್ಪಿಕೊಂಡರು.
26. ಎರಡೂ ದೇಶಗಳ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಉನ್ನತ ಸಂಶೋಧನಾ ಸಂಸ್ಥೆಗಳ ನಡುವಿನ ಸಹಕಾರವನ್ನು ಇನ್ನಷ್ಟು ಬಲಗೊಳಿಸಲು ಇಬ್ಬರು ಮುಖಂಡರೂ ಸಮ್ಮತಿಸಿದರು.
27. ಸೌರ ವಿದ್ಯುತ್ ಸೇರಿದಂತೆ ಮರುಬಳಸಬಹುದಾದ ಇಂಧನ ಕ್ಷೇತ್ರ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಅಂತರಿಕ್ಷ ತಂತ್ರಜ್ಞಾನ, ಸುಸ್ಥಿರ ಅಭಿವೃದ್ಧಿ, ಒಣ ಬೇಸಾಯ, ಮರುಭೂಮಿ ಪರಿಸರ,ನಗರಾಭಿವೃದ್ಧಿ, ಆರೋಗ್ಯ ರಕ್ಷಣೆ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರವೂ ಸೇರಿದಂತೆ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರದ ಉತ್ತೇಜನದ ಮುಂದುವರಿಕೆಯ ಪ್ರಾಮುಖ್ಯವನ್ನು ಇಬ್ಬರೂ ಎತ್ತಿ ಹಿಡಿದರು.
28. ಅಂತಾರಾಷ್ಟ್ರೀಯ ಸೌರ ಮೈತ್ರಿಯ ರಚನೆಯಲ್ಲಿ ಪ್ರಧಾನಿ ಮೋದಿ ಅವರು ವಹಿಸಿದ ಪಾತ್ರವನ್ನು ಸೌದಿ ತಂಡವು ಪ್ರಶಂಸಿಸಿತು. ಜಗತ್ತಿನೆಲ್ಲೆಡೆ ನವೀನ ಸೌರ ತಂತ್ರಜ್ಞಾನವನ್ನು ಉತ್ತೇಜಿಸುವಲ್ಲಿ ಈ ಉಪಕ್ರಮವು ಪ್ರಮುಖ ಪಾತ್ರ ವಹಿಸಲಿದೆ ಎಂದು ಸೌದಿ ತಂಡ ಒಪ್ಪಿಕೊಂಡಿತು.
29. ಎರಡೂ ದೇಶಗಳ ನಡುವಿನ ಬಲಿಷ್ಠ ಬಂಧದಲ್ಲಿ ಜನರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯ ಪಾತ್ರವನ್ನು ಗುರುತಿಸಿದ ಮುಖಂಡರು, ಸೌದಿ ಅರೇಬಿಯದಲ್ಲಿ ಭಾರತೀಯ ಸಮುದಾಯದ ಮೌಲ್ಯಯುತ ಪಾತ್ರವನ್ನು ಹಾಗೂ ಭಾರತ ಮತ್ತು ಸೌದಿ ಅರೇಬಿಯದ ಪ್ರಗತಿ-ಅಭಿವೃದ್ಧಿಯಲ್ಲಿ ಅವರ ಪಾಲನ್ನು ಶ್ಲಾಘಿಸಿದರು. ಸಾಮಾನ್ಯ ದರ್ಜೆಯ ನೌಕರರ ನೇಮಕಕ್ಕೆ ಸಂಬಂಧಿಸಿದಂತೆ ಒಪ್ಪಂದವೊಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ಸ್ವಾಗತಿಸಿದರು. ರಾಯಭಾರ ವಿಷಯಗಳಿಗೆ ಸಂಬಂಧಿಸಿದಂತೆ ನಿಯಮಿತವಾಗಿ ಚರ್ಚೆ ನಡೆಸಲು ನೆರವಾಗಲು ಭಾರತ-ಸೌದಿ ಅರೇಬಿಯ ಜಂಟಿ ಆಯೋಗದಡಿ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿರುವುದಕ್ಕೆ ಶ್ಲಾಘನೆ ವ್ಯಕ್ತವಾಯಿತು.
30.ಭಾರತದಿಂದ ಆಗಮಿಸುವ ಹಜ್ ಮತ್ತು ಉಮ್ರಾ ಯಾತ್ರಿಗಳಿಗೆ ಉತ್ತಮ, ಅಗತ್ಯ ಸೌಲಭ್ಯ ನೀಡುವಲ್ಲಿ ಸೌದಿ ಅಧಿಕಾರಿಗಳು ವಹಿಸಿದ ಶ್ರಮವನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದರು.
31. ಭಾರತ ಮತ್ತು ಸೌದಿ ಅರೇಬಿಯ ದೇಶಗಳು ಹಿಂದಿನಿಂದಲೂ ನಾಗರಿಕ ಸಂಬಂಧ ಹೊಂದಿದ್ದು, ಸರಕುಗಳು, ಜನರು ಮತ್ತು ಆಲೋಚನೆಗಳ ಸಂವಹನದಿಂದ ಅದು ಸಮೃದ್ಧಗೊಂಡಿದೆ ಎಂದು ಇಬ್ಬರು ನಾಯಕರೂ ಗುರುತಿಸಿದರು. ಸಮಕಾಲೀನ ಸವಾಲುಗಳನ್ನು ಎದುರಿಸಲು ಅಗತ್ಯವಾದ ಬಲವನ್ನು ಈ ಸಾಮಾನ್ಯ ಚಾರಿತ್ರಿಕ ಹಿನ್ನೆಲೆಯಿಂದ ಪಡೆದುಕೊಳ್ಳಬಹುದು. ವಿಶಾಲ ವ್ಯಾಪ್ತಿಯ ಮಾನವೀಯತೆ ಮತ್ತು ಸಹಿಷ್ಣುತೆ ಹಾಗೂ ಧರ್ಮ ಎಂಬುದು ಒಟ್ಟುಗೂಡಿಸುವುದೇ ಹೊರತು ಛಿದ್ರಗೊಳಿಸುವುದಿಲ್ಲ ಎಂಬ ನಂಬಿಕೆಯು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸಕಾರಾತ್ಮಕ ಅಂಶವಾಗಲಿದೆ ಎಂದರು.
32. ಪಶ್ಚಿಮ ಏಷ್ಯಾ, ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ಸುರಕ್ಷತೆ ಪರಿಸ್ಥಿತಿ ಸೇರಿದಂತೆ, ಪ್ರಾಂತ್ಯ ಮತ್ತು ಅಂತಾರಾಷ್ಟ್ರೀಯ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಗೆ ಸಂಬಂಧಿಸಿದಂತೆ ಎರಡೂ ದೇಶಗಳಿಗೆ ಸಾಮಾನ್ಯ ಆಸಕ್ತಿ ಇರುವ ಎಲ್ಲ ವಿಷಯಗಳ ಬಗ್ಗೆ ಇಬ್ಬರು ಮುಖಂಡರೂ ಚರ್ಚಿಸಿದರು. ಯೆಮೆನ್ ಮತ್ತು ಸಿರಿಯಾದಲ್ಲಿನ ಪರಿಸ್ಥಿತಿ ಕುರಿತ ತಮ್ಮ ಈ ಮೊದಲಿನ ಘೋಷಣೆಯನ್ನು ಉಲ್ಲೇಖಿಸಿದ ಮುಖಂಡರು, ವಿಶ್ವಸಂಸ್ಥೆಯ ರಕ್ಷಣಾ ಸಮಿತಿಯ ಗೊತ್ತುವಳಿ(2216, 2254 ಮತ್ತು 2268)ಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಲಿಬಿಯಾ ಮತ್ತು ಇರಾಕ್‍ನಲ್ಲಿರುವ ಗಂಭೀರ ಪರಿಸ್ಥಿತಿ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಮಾತುಕತೆ ಮತ್ತು ರಾಜಕೀಯ ಸಂಧಾನದ ಮೂಲಕ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದರು.
33. ಪ್ರಾದೇಶಿಕ ಸಮಸ್ಯೆಗಳ ಕುರಿತ ಚರ್ಚೆ ವೇಳೆ, ಉತ್ತಮ ನೆರೆಹೊರೆ ಸಂಬಂಧ, ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದೆ ಇರುವುದು, ಸ್ವಾತಂತ್ರ್ಯ, ಸಾರ್ವಭೌಮತ್ವ ಮತ್ತು ಗಡಿಯ ಸಮಗ್ರತೆಯನ್ನು ಗೌರವಿಸುವುದು ಹಾಗೂ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ನಿರ್ಧರಿಸಲಾಯಿತು.
34. ಅರಬ್ ಶಾಂತಿ ಉಪಕ್ರಮ ಮತ್ತು ಅಂತಾರಾಷ್ಟ್ರೀಯ ಶಾಸನಾತ್ಮಕ ನಿರ್ಣಯಗಳಿಗೆ ಅನುಗುಣವಾಗಿ, ನ್ಯಾಯಸಮ್ಮತ, ಸಮಗ್ರ ಮತ್ತು ಸದಾಕಾಲ ಶಾಂತಿ ನೆಲೆಸುವಂತೆ ಆಗಲಿದೆ ಎಂಬ ಭರವಸೆಯನ್ನು ಎರಡೂ ತಂಡಗಳು ವ್ಯಕ್ತಪಡಿಸಿದವು. ಪೂರ್ವ ಜೆರುಸಲೇಂ ರಾಜಧಾನಿಯಾಗುಳ್ಳ ಸ್ವತಂತ್ರ, ಸಂಯುಕ್ತ ಮತ್ತು ಚಲನಶೀಲ ಪ್ಯಾಲೆಸ್ತೀನ್ ರಾಜ್ಯದ ಸ್ಥಾಪನೆ ಜತೆಗೆ ಪ್ಯಾಲೆಸ್ತೀನ್ ಪ್ರಜೆಗಳ ಶಾಸನಾತ್ಮಕ ಹಕ್ಕುಗಳ ರಕ್ಷಣೆ ಆಗಬೇಕು ಎಂದು ಭರವಸೆ ವ್ಯಕ್ತಪಡಿಸಿದರು.
35. ಜಾಗತಿಕ ಸವಾಲುಗಳನ್ನು ಎದುರಿಸಲು ಸಮಕಾಲೀನ ವಾಸ್ತವಗಳನ್ನು ಪ್ರತಿಫಲಿಸುವ, ವಿಶ್ವಸಂಸ್ಥೆಯನ್ನು ಕೇಂದ್ರವಾಗುಳ್ಳ ಪರಿಣಾಮಕಾರಿಯಾದ ಬಹುಪಾಶ್ವ ಗಳುಳ್ಳ ವ್ಯವಸ್ಥೆಯೊಂದರ ಪ್ರಾಮುಖ್ಯವನ್ನು ಇಬ್ಬರು ಮುಖಂಡರೂ ಪ್ರತಿಪಾದಿಸಿದರು. ವಿಶ್ವಸಂಸ್ಥೆಯ ರಕ್ಷಣಾ ಮಂಡಳಿಯನ್ನು ಇನ್ನಷ್ಟು ಪ್ರಾತಿನಿಧಿಕ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿಯಾಗಿಸುವುದಲ್ಲದೆ, ಸದಸ್ಯತ್ವವನ್ನು ವಿಸ್ತರಿಸುವ ಮೂಲಕ ಶೀಘ್ರವೇ ಸುಧಾರಣೆ ಮಾಡಬೇಕಿದೆ ಎಂದು ಇಬ್ಬರೂ ಒಪ್ಪಿಕೊಂಡರು.
36. ಪ್ರಧಾನಿ ಮೋದಿ ಅವರ ಭೇಟಿಯು ಎರಡೂ ದೇಶಗಳ ನಡುವಿನ ಆಯಕಟ್ಟಿನ ಸಹಭಾಗಿತ್ವವನ್ನು ಇನ್ನಷ್ಟು ಗಾಢಗೊಳಿಸುವಲ್ಲಿ ಮತ್ತು ಕ್ರೋಢೀಕರಿಸುವಲ್ಲಿ ನೆರವಾಗಿದೆ. ಎರಡೂ ದೇಶ ಮತ್ತು ಪ್ರಜೆಗಳ ಹಿತರಕ್ಷಣೆಗೆ ಎಲ್ಲ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಂಬಂಧದ ಉತ್ತಮ ಬೆಳವಣಿಗೆ ಕಾರಣವಾಗಲಿದೆ ಎಂದು ಇಬ್ಬರು ನಾಯಕರೂ ಒಪ್ಪಿಕೊಂಡರು.
37. ತಮಗೆ ನೀಡಿದ ಬೆಚ್ಚನೆಯ ಸ್ವಾಗತ ಮತ್ತು ಹಾರ್ದಿಕ ಆತಿಥ್ಯಕ್ಕೆ ಪ್ರಧಾನಿ ಮೋದಿ ಅವರು ಗೌರವಾನ್ವಿತ ದೊರೆಗೆ ಧನ್ಯವಾದ ಹೇಳಿದರು. ಇಬ್ಬರಿಗೂ ಸಮರ್ಪಕವಾದ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಬೇಕೆಂದು ದೊರೆಯನ್ನು ಆಹ್ವಾನಿಸಿದರು. ಅವರು ಅದಕ್ಕೆ ಸಮ್ಮತಿಸಿದರು.