ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭುವನೇಶ್ವರ, ಗಾಂಧಿ ನಗರ, ಹೈದ್ರಾಬಾದ್, ಇಂದೋರ್, ಜೋದ್ಪುರ್, ಮಂಡಿ, ಪಟ್ನಾ ಮತ್ತು ರೋಪಾರ್ ಗಳಲ್ಲಿ ಹೊಸ ಎಂಟು ಐಐಟಿ ಸ್ಥಾಪನೆಗೆ ಪರಿಷ್ಕೃತ ಅಂದಾಜು ವೆಚ್ಚಕ್ಕೆ ತನ್ನ ಅನುಮೋದನೆ ನೀಡಿದೆ. ಎಂಟು ಹೊಸ ಐಐಟಿ ಸ್ಥಾಪನೆಯ ಪರಿಷ್ಕೃತ ಅಂದಾಜು ವೆಚ್ಚ 2008-09 ರಿಂದ 2018-19ರ 11 ವರ್ಷಗಳ ಅವಧಿಯಲ್ಲಿ 13,990 ಕೋಟಿ ರೂಪಾಯಿಗಳಾಗಿವೆ. ಮೂಲ ಯೋಜನಾ ವೆಚ್ಚ 6080 ರೂಪಾಯಿಗಳಾಗಿತ್ತು. ಕಾಲ ಮತ್ತು ವೆಚ್ಚದ ಹೆಚ್ಚಳದಿಂದಾಗಿ 7910 ಕೋಟಿ ರೂಪಾಯಿ ವೆಚ್ಚ ಹೆಚ್ಚಳವಾಗಿದೆ.
ಈ ಯೋಜನೆ ಪೂರ್ಣಗೊಂಡ ಬಳಿಕ ಪ್ರತಿಯೊಂದು ಐಐಟಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 2360 ಆಗಲಿದೆ. ಎಲ್ಲ 8 ಐಐಟಿಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಾಮರ್ಥ್ಯ 11ನೇ ವರ್ಷದ ಅಂತ್ಯಕ್ಕೆ ಅಂದರೆ 2019ರ ಮಾರ್ಚ್ ಗೆ 12880 ಆಗಲಿದೆ.
ನೇರ ಫಲಾನುಭವಿಗಳು ಸಂಖ್ಯೆಯ ಆಧಾರದಲ್ಲಿ ಸುಮಾರು 12880 ವಿದ್ಯಾರ್ಥಿಗಳಾಗಿದ್ದಾರೆ. ಆದಾಗ್ಯೂ, ಪರೋಕ್ಷವಾಗಿ ಹೊಸ 8 ಐಐಟಿಗಳು ಸಂಶೋಧನೆ, ಪುಸ್ತಕ ಪ್ರಕಾಶನ ಮತ್ತು ಸಂಶೋಧನಾ ಪ್ರಬಂಧ, ಪೇಟೆಂಟ್ ನೋಂದಣಿ /ಟ್ರೇಡ್ ಮಾರ್ಕ್ / ವಿನ್ಯಾಸ, ಗುಣಮಟ್ಟ ಸುಧಾರಣೆ ಕಾರ್ಯಕ್ರಮ ಕ್ಷೇತ್ರದಲ್ಲಿ ಗುಣಮಟ್ಟ ಮತ್ತು ಗಾತ್ರ ಎರಡರಲ್ಲೂ ಪ್ರಗತಿಯನ್ನು ತರುವ ನಿರೀಕ್ಷೆ ಇದೆ. ಈ ಹೊಸ ಸಂಸ್ಥೆಗಳಲ್ಲಿ ತರಬೇತಿ ಹೊಂದಿದ ಸಿಬ್ಬಂದಿ ಮತ್ತು ಪ್ರತಿಭಾವಂತರಿಂದಾಗಿ ನುರಿತ ತಾಂತ್ರಿಕ ಮಾನವ ಶಕ್ತಿಗೆ ಸಂಬಂಧಿಸಿದಂತೆ ಕೈಗಾರಿಕೆಗಳ ಮತ್ತು ಆರ್ಥಿಕತೆಯ ಅಗತ್ಯಗಳನ್ನು ಪೂರೈಸಲಿವೆ, ಇದರ ಜೊತೆಗೆ ಈ ಸಂಸ್ಥೆಗಳು ದೇಶದ ಇತರ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೂ ಸೂಕ್ತ ಮೂಲಸೌಕರ್ಯದೊಂದಿಗೆ ಸಂಶೋಧನೆ ಮತ್ತು ಹೊಸ ನಾವಿನ್ಯ ಮತ್ತು ಉತ್ತಮ ಸೌಕರ್ಯವನ್ನೊಳಗೊಂಡ ಅಭಿವೃದ್ಧಿ ವಾತಾವರಣ ಒದಗಿಸಲಿವೆ. ಐಐಟಿಗಳು ರಾಷ್ಟ್ರೀಯ ಮಹತ್ವದ ಸಂಸ್ಥೆಗಳಾಗಿವೆ ಮತ್ತು ವಿಶ್ವದಾದ್ಯಂತ ಇದಕ್ಕೆ ಉತ್ತಮ ಹೆಸರಿದೆ, ಐಐಟಿಯಿಂದ ಹೊರಬರುವ ಪದವೀಧರರಿಗೆ ಉತ್ತಮ ಗೌರವ ವೇತನವಿದೆ ಮತ್ತು ಅವರು ಈಗಾಗಲೇ ದೇಶಕ್ಕೆ ಗೌರವ ತಂದಿದ್ದಾರೆ. ಈ ಸಂಸ್ಥೆಯಲ್ಲಿ ಹಿಂದೆ ಓದಿದವರು ದೇಶಕ್ಕೆ ಉದ್ಯೋಗ ಸೃಷ್ಟಿ, ಆಸ್ತಿ ನಿರ್ಮಾಣ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಮೂಲಕ ಕೊಡುಗೆ ನೀಡಿದ್ದಾರೆ. ಇದರ ಜೊತಗೆ ಈ ಐಐಟಿಗಳು ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ನಾವಿನ್ಯತೆ ಮತ್ತು ಉದ್ಯಮಶೀಲತೆಯ ಸ್ಫೂರ್ತಿಯಿಂದ ದೇಶದ ಆರ್ಥಿಕ ಪ್ರಗತಿಗೂ ಕೊಡುಗೆ ನೀಡಿದ್ದಾರೆ.
ಹಿನ್ನೆಲೆ:
2008ರ ಜುಲೈನಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭುವನೇಶ್ವರ, ಗಾಂಧಿ ನಗರ, ಹೈದ್ರಾಬಾದ್, ಇಂದೋರ್, ಜೋದ್ಪುರ್, ಮಂಡಿ, ಪಟ್ನಾ ಮತ್ತು ರೋಪಾರ್ ಗಳಲ್ಲಿ ಹೊಸ ಎಂಟು ಐಐಟಿ ಸ್ಥಾಪನೆಗೆ ಅನುಮೋದನೆ ನೀಡಿತ್ತು. ಡಿಪಿಆರ್ ಮತ್ತು ಸಂಪುಟ ಅನುಮೋದನೆಯ ರೀತ್ಯ ಪ್ರತಿಯೊಂದು ಸಂಸ್ಥೆಯೂ ಒಟ್ಟು 760 ಕೋಟಿ ರೂಪಾಯಿ ವೆಚ್ಚದೊಂದಿಗೆ ಹಾಗೂ ಎಲ್ಲ ಎಂಟು ಐಐಟಿಗಳೂ ಒಟ್ಟು 6080 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪನೆಯಾಗಬೇಕಿತ್ತು.