Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉದ್ಯೋಗ ಮೇಳದ ಅಡಿಯಲ್ಲಿ ಹೊಸದಾಗಿ ಸೇರ್ಪಡೆಯಾದವರಿಗೆ ನವೆಂಬರ್ 22ರಂದು  ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸಲಿರುವ ಪ್ರಧಾನಿ


ಉದ್ಯೋಗ ಮೇಳದ ಅಡಿಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 22 ರಂದು ಬೆಳಗ್ಗೆ 10:30ಕ್ಕೆ ಹೊಸದಾಗಿ ಸೇರ್ಪಡೆಯಾದವರಿಗೆ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಲಿದ್ದಾರೆ. ನೇಮಕಗೊಂಡವರನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ.

ಉದ್ಯೋಗ ಸೃಷ್ಟಿಗೆ ಅತ್ಯುನ್ನತ ಆದ್ಯತೆ ನೀಡುವ ಪ್ರಧಾನ ಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ʻಉದ್ಯೋಗ ಮೇಳʼವು ಒಂದು ಮಹತ್ವದ ಹೆಜ್ಜೆಯಾಗಿದೆ. ಉದ್ಯೋಗ ಮೇಳವು ಮುಂದಿನ ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಕರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನೇರವಾಗಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆ ಅಕ್ಟೋಬರ್‌ನಲ್ಲಿ ಉದ್ಯೋಗ ಮೇಳದಡಿ ಹೊಸದಾಗಿ ಸೇರ್ಪಡೆಗೊಂಡ 75,000 ಮಂದಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗಿತ್ತು.

ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳ ಭೌತಿಕ ಪ್ರತಿಗಳನ್ನು ದೇಶಾದ್ಯಂತ 45 ಸ್ಥಳಗಳಲ್ಲಿ (ಗುಜರಾತ್ ಮತ್ತು ಹಿಮಾಚಲ ಪ್ರದೇಶವನ್ನು ಹೊರತುಪಡಿಸಿ) ಹಸ್ತಾಂತರಿಸಲಾಗುವುದು. ಈ ಹಿಂದೆ ಭರ್ತಿಯಾಗಿದ್ದ ವಿವಿಧ ವರ್ಗಗಳ ಹುದ್ದೆಗಳ ಜೊತೆಗೆ ಶಿಕ್ಷಕರು, ಉಪನ್ಯಾಸಕರು, ನರ್ಸ್‌ಗಳು, ನರ್ಸಿಂಗ್ ಅಧಿಕಾರಿಗಳು, ವೈದ್ಯರು, ಫಾರ್ಮಾಸಿಸ್ಟ್‌ಗಳು, ರೇಡಿಯೋಗ್ರಾಫರ್‌ಗಳು ಮತ್ತು ಇತರ ತಾಂತ್ರಿಕ ಹಾಗೂ ಅರೆವೈದ್ಯಕೀಯ ಹುದ್ದೆಗಳನ್ನು ಸಹ ಭರ್ತಿ ಮಾಡಲಾಗುತ್ತಿದೆ. ಗೃಹ ವ್ಯವಹಾರಗಳ ಸಚಿವಾಲಯವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಗಮನಾರ್ಹ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಪ್ರಧಾನಮಂತ್ರಿಯವರು ʻಕರ್ಮಯೋಗಿ ಪ್ರಾರಂಭ್ʼ ಮಾಡ್ಯೂಲ್‌ಗೂ ಚಾಲನೆ ನೀಡಲಿದ್ದಾರೆ. ಇದು ಎಂಬುದು ವಿವಿಧ ಸರಕಾರಿ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡ ಎಲ್ಲಾ ಅಭ್ಯರ್ಥಿಗಳಿಗೆ ಆನ್‌ಲೈನ್ ಪರಿಚಯಾತ್ಮಕ ಕೋರ್ಸ್ ಆಗಿದೆ. ಇದು ಸರಕಾರಿ ನೌಕರರಿಗೆ ನೀತಿ ಸಂಹಿತೆ, ಕೆಲಸದ ಸ್ಥಳದ ನೈತಿಕತೆ ಮತ್ತು ಸಮಗ್ರತೆ, ಮಾನವ ಸಂಪನ್ಮೂಲ ನೀತಿಗಳು ಮತ್ತು ಇತರ ಪ್ರಯೋಜನಗಳು ಹಾಗೂ ಭತ್ಯೆಗಳ ಕುರಿತಾದ ಶಿಕ್ಷಣವನ್ನು  ಒಳಗೊಂಡಿರುತ್ತದೆ. ಇದು ನೀತಿಗಳಿಗೆ ಒಗ್ಗಿಕೊಳ್ಳಲು ಮತ್ತು ಹೊಸ ಪಾತ್ರಗಳಿಗೆ ಸರಾಗವಾಗಿ ಪರಿವರ್ತನೆಗೊಳ್ಳಲು ಅಭ್ಯರ್ಥಿಗಳಿಗೆ ಸಹಾಯ ಮಾಡುತ್ತದೆ.  ತಮ್ಮ ಜ್ಞಾನ, ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು igotkarmayogi.gov.in ವೇದಿಕೆಯಲ್ಲಿ ಇತರ ಕೋರ್ಸ್‌ಗಳನ್ನು ಅನ್ವೇಷಿಸುವ ಅವಕಾಶವನ್ನು ಸಹ ಈ ಅಭ್ಯರ್ಥಿಗಳು ಪಡೆಯುತ್ತಾರೆ.

*****