Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶ ಸಿದ್ಧಾರ್ಥನಗರದಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ಉತ್ತರ ಪ್ರದೇಶ ಸಿದ್ಧಾರ್ಥನಗರದಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿಂದು 9 ಹೊಸ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು. 9 ವೈದ್ಯಕೀಯ ಕಾಲೇಜುಗಳು ಸಿದ್ದಾರ್ಥನಗರ, ಇಟಾ, ಹರ್ದೋಯ್, ಪ್ರತಾಪಗಢ, ಫತೇಪುರ್, ಡಿಯೋರಿಯಾ, ಘಾಜಿಪುರ, ಮಿರ್ಜಾಪುರ ಮತ್ತು ಜೌನಪುರ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿವೆ. ಉತ್ತರ ಪ್ರದೇಶದ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಹಲವು ಕರ್ಮಯೋಗಿಗಳ ದಶಕಗಳ ಫಲದಿಂದ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ ಎಂದರು. ದಿವಂಗತ ಮಾಧವ್ ಪ್ರಸಾದ್ ತ್ರಿಪಾಠಿ ಜಿ ಅವರ ಮೂಲಕ ಸಿದ್ದಾರ್ಥನಗರ ದೇಶಕ್ಕೆ ಬದ್ಧತೆಯುಳ್ಳ ಸಾರ್ವಜನಿಕ ಜನಪ್ರತಿನಿಧಿಯನ್ನು ನೀಡಿದೆ. ಅವರ ದಣಿವರಿಯದ ಶ್ರಮ ಇಂದು ರಾಷ್ಟ್ರಕ್ಕೆ ಸಹಾಯ ಮಾಡುತ್ತಿದೆ ಎಂದರು. ಸಿದ್ದಾರ್ಥನಗರದ  ಹೊಸ ವೈದ್ಯಕೀಯ ಕಾಲೇಜಿಗೆ ಮಾಧವ್ ಬಾಬು ಹೆಸರಿಡುವುದು ಅವರ ಸಾರ್ವಜನಿಕ ಸೇವೆಗೆ ನಿಜವಾದ ಗೌರವ ಸಲ್ಲಿಸಿದಂತಾಗಿದೆ. ಮಾಧವ್ ಬಾಬು ಅವರ ಹೆಸರು ವೈದ್ಯಕೀಯ ಕಾಲೇಜುಗಳಿಂದ ಹೊರಬರುವ ಯುವ ವೈದ್ಯರಿಗೆ ಸಾರ್ವಜನಿಕ ಸೇವೆ ಕೈಗೆತ್ತಿಕೊಳ್ಳಲು ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

9 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯೊಂದಿಗೆ ಸುಮಾರು ಎರಡೂವರೆ ಸಾವಿರ ಹೊಸ ಹಾಸಿಗೆಗಳನ್ನು ಸೃಷ್ಟಿಸಲಾಗುತ್ತಿದೆ, 5 ಸಾವಿರಕ್ಕೂ ಅಧಿಕ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹೊಸದಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. “ಇದರೊಂದಿಗೆ ಪ್ರತಿ ವರ್ಷ ನೂರಾರು ಯುವಕರಿಗೆ ವೈದ್ಯಕೀಯ ಶಿಕ್ಷಣದ ಹೊಸ ಮಾರ್ಗ ತೆರೆದುಕೊಂಡಿದೆಎಂದು ಅವರು ಹೇಳಿದರು.

ಮೆನಿಂಜೈಟಿಸ್ ನಿಂದಾಗಿ ಸಂಭವಿಸಿದ ದುರಂತ ಸಾವುಗಳಿಂದ ಹಿಂದಿನ ಸರ್ಕಾರಗಳು ಪೂರ್ವಾಂಚಲದ ವರ್ಚಸ್ಸನ್ನು ಹಾಳುಮಾಡಿದ್ದವು ಎಂದು ಪ್ರಧಾನಮಂತ್ರಿ ಹೇಳಿದರು. ಅದೇ ಪೂರ್ವಾಂಚಲ, ಅದೇ ಉತ್ತರ ಪ್ರದೇಶ ಇದೀಗ ಪೂರ್ವ ಭಾರತದಲ್ಲಿ ಆರೋಗ್ಯ ವಲಯದಲ್ಲಿ ಹೊಸ ಬೆಳಕು ನೀಡಲಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಸದ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಜಿ ಅವರು ಸಂಸದರಾಗಿದ್ದಾಗ ರಾಜ್ಯದ ಕಳಪೆ ವೈದ್ಯಕೀಯ ವ್ಯವಸ್ಥೆಯ ದುಸ್ಥಿತಿಯನ್ನು ಸಂಸತ್ತಿನಲ್ಲಿ ವಿವರಿಸಿದ್ದ ಪ್ರಸಂಗವನ್ನು ಪ್ರಧಾನಮಂತ್ರಿ ನೆನಪು ಮಾಡಿಕೊಂಡರು. ಆದರೆ ಇಂದು ಉತ್ತರ ಪ್ರದೇಶದ ಜನತೆ ಯೋಗಿ ಜಿ ಅವರನ್ನು ನೋಡುತ್ತಿದ್ದಾರೆ. ಅವರಿಗೆ ಜನತೆಯ ಸೇವೆ ಸಲ್ಲಿಸಲು ಅವಕಾಶ ದೊರೆತಿದೆ. ಅವರು ಮೆದುಳುಜ್ವರ ಹರಡುವುದನ್ನು ನಿಯಂತ್ರಿಸಿದ್ದಾರೆ ಮತ್ತು ಪ್ರದೇಶದಲ್ಲಿ ಸಾವಿರಾರು ಮಕ್ಕಳ ಜೀವವನ್ನು ಉಳಿಸಿದ್ದಾರೆ ಎಂದರು. “ಸರ್ಕಾರ ಸೂಕ್ಷ್ಮ ಸಂವೇದನೆ ಹೊಂದಿದ್ದರೆ ಅದು ಬಡವರ ನೋವನ್ನು ಅರ್ಥೈಸಿಕೊಂಡು ಅನುಕಂಪದಿಂದ ಸ್ಪಂದಿಸಿದಾಗ ಇಂತಹ ಸಾಧನೆಗಳನ್ನು ಮಾಡಲು ಸಾಧ್ಯ ಎಂದು ಪ್ರಧಾನಮಂತ್ರಿ ಹೇಳಿದರು.

ರಾಜ್ಯಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯ ವೈದ್ಯಕೀಯ ಕಾಲೇಜುಗಳನ್ನು ಲೋಕಾರ್ಪಣೆ ಮಾಡುತ್ತಿರುವುದು ಅಭೂತಪೂರ್ವ ಕೆಲಸವಾಗಿದೆ. ಹಿಂದೆಂದೂ ರೀತಿ ಕಂಡಿರಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. “ಇದು ಹಿಂದೆ ಏಕಾಗಲಿಲ್ಲ ಮತ್ತು ಈಗ ಏಕೆ ಆಗುತ್ತಿದೆ ಎಂಬುದಕ್ಕೆ ಒಂದೇ ಒಂದು ಕಾರಣ ಎಂದರೆರಾಜಕೀಯ ಇಚ್ಛಾಶಕ್ತಿ ಮತ್ತು ರಾಜಕೀಯ ಆದ್ಯತೆಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. 7 ವರ್ಷಗಳ ಹಿಂದೆ ದೆಹಲಿಯಲ್ಲಿದ್ದ  ಸರ್ಕಾರ ಮತ್ತು ಉತ್ತರ ಪ್ರದೇಶದಲ್ಲಿ 4 ವರ್ಷಗಳ ಹಿಂದೆ ಇದ್ದ ಸರ್ಕಾರ ಮತಗಳಿಗಾಗಿ ಕಾರ್ಯ ನಿರ್ವಹಿಸುತ್ತಿತ್ತು ಮತ್ತು ಅದು ಕೆಲವು ಡಿಸ್ಪೆನ್ಸರಿ ಅಥವಾ ಸಣ್ಣ ಆಸ್ಪತ್ರೆಗಳನ್ನು ಘೋಷಿಸುವ ಮೂಲಕ ಜನರನ್ನು ಅಷ್ಟಕ್ಕೆ ತೃಪ್ತಿಪಡಿಸುತ್ತಿತ್ತು. ದೀರ್ಘಕಾಲದ ವರೆಗೆ ಕಟ್ಟಡವನ್ನು ನಿರ್ಮಿಸಲಿಲ್ಲ, ಒಂದು ವೇಳೆ ಕಟ್ಟಡವಿದ್ದರೂ ಅದರಲ್ಲಿ ಯಂತ್ರೋಪಕರಣಗಳಿರಲಿಲ್ಲ, ಎರಡೂ ಇದ್ದರು ಅಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರಲಿಲ್ಲ. ಭ್ರಷ್ಟಾಚಾರದ ವರ್ತುಲ ಬಡವರಿಂದ ಸಹಸ್ರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದೆ. ಅದಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದರು

2014ಕ್ಕೂ ಮುನ್ನ ದೇಶಾದ್ಯಂತ ವೈದ್ಯಕೀಯ ಸೀಟುಗಳ ಸಂಖ್ಯೆ 90,000ಕ್ಕಿಂತ ಕಡಿಮೆ ಇತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ 7 ವರ್ಷಗಳಲ್ಲಿ ದೇಶದಲ್ಲಿ 60,000ಕ್ಕೂ ಅಧಿಕ ವೈದ್ಯಕೀಯ ಸೀಟುಗಳನ್ನು ಸೇರ್ಪಡೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲೂ ಸಹ 2017 ವರೆಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ 1900 ವೈದ್ಯಕೀಯ ಸೀಟುಗಳಿದ್ದವು, ಆದರೆ ಡಬಲ್ ಇಂಜಿನ್ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ 1900ಕ್ಕೂ ಅಧಿಕ ಸೀಟುಗಳನ್ನು ಸೇರ್ಪಡೆ ಮಾಡಿದೆ ಎಂದು ಅವರು ಹೇಳಿದರು.

***