Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಪ್ರಧಾನ ಮಂತ್ರಿಗಳ ಭಾಷಣದ ಇಂಗ್ಲಿಷ್ ಅವತರಿಣಿಕೆ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಪ್ರಧಾನ ಮಂತ್ರಿಗಳ ಭಾಷಣದ ಇಂಗ್ಲಿಷ್ ಅವತರಿಣಿಕೆ


ನಮಃ ಪಾರ್ವತಿ ಪತಯೇ…

ಹರ ಹರ ಮಹಾದೇವ!

ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಕಾರ್ಯಕ್ರಮಕ್ಕೆ ತಂತ್ರಜ್ಞಾನದ ನೆರವಿನಿಂದ ವರ್ಚುವಲ್‌ ಆಗಿ ಪಾಲ್ಗೊಂಡಿರುವ ಗೌರವಾನ್ವಿತ ರಾಜ್ಯಪಾಲರುಗಳೇ ಮತ್ತು ನಾನಾ ರಾಜ್ಯಗಳ ಮುಖ್ಯಮಂತ್ರಿಗಳೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ನಾಯ್ಡು ಅವರೇ, ವರ್ಚ್ಯುವಲ್‌ ಆಗಿ ಪಾಲ್ಗೊಂಡಿರುವ ಇತರೆ ಸಂಪುಟ ಸಹೋದ್ಯೋಗಿಗಳೇ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್, ಉತ್ತರ ಪ್ರದೇಶ ಸರ್ಕಾರದ ನಾನಾ ಸಚಿವರೇ, ಸಂಸದರೇ, ಶಾಸಕರೇ ಮತ್ತು ಬನಾರಸ್‌ನ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!

ಇಂದು, ನನಗೆ ಮತ್ತೊಮ್ಮೆ ಬನಾರಸ್‌ಗೆ ಭೇಟಿ ನೀಡುವ ಅವಕಾಶ ಒದಗಿ ಬಂದಿದೆ… ಇಂದು ಚೇತ್‌ಗಂಜ್‌ನಲ್ಲಿ ನಕ್ಕತೈಯಾ ಮೇಳ ನಡೆಯುತ್ತಿದೆ… ಧಂತೇರಸ್, ದೀಪಾವಳಿ ಮತ್ತು ಛತ್ ಹಬ್ಬಗಳು ಸಮೀಪಿಸುತ್ತಿವೆ… ಇಂದು ಬನಾರಸ್ ಈ ಸರಣಿ ಹಬ್ಬಗಳ ಆಚರಣೆಗೂ ಮೊದಲೇ ಅಭಿವೃದ್ಧಿಯ ಸಂಭ್ರಮಾಚರಣೆಗೆ ಸಾಕ್ಷಿಯಾಗಿದೆ. ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಸ್ನೇಹಿತರೇ,

ಬನಾರಸ್‌ಗೆ ಇಂದು ಬಹಳ ಮಹತ್ವದ ಶುಭ ದಿನ. ಈಗಷ್ಟೇ ದೊಡ್ಡ ಕಣ್ಣಿನ ಆಸ್ಪತ್ರೆ ಉದ್ಘಾಟಿಸಿ ಇಲ್ಲಿಗೆ ಬಂದಿದ್ದೇನೆ, ಹಾಗಾಗಿ ಸ್ವಲ್ಪ ತಡವಾಗಿ ಬಂದಿದ್ದೇನೆ. ಶಂಕರ ಕಣ್ಣಿನ ಆಸ್ಪತ್ರೆಯು ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಉತ್ತನ ಸೇವೆ ನೀಡಲಿದೆ. ಬಾಬಾ ವಿಶ್ವನಾಥರ ಆಶೀರ್ವಾದದಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಇಂದು ಉದ್ಘಾಟನೆಯಾಗಿವೆ ಇಲ್ಲವೇ ಅಡಿಗಲ್ಲು ಹಾಕಲಾಗಿದೆ. ಈ ಯೋಜನೆಗಳು ದೇಶ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಇನ್ನಷ್ಟು ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ. ಇಂದು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ವಿಮಾನ ನಿಲ್ದಾಣಗಳನ್ನು ಉದ್ಘಾಟಿಸಲಾಗಿದೆ. ಇದರಲ್ಲಿ ಬಬತ್‌ಪುರ ವಿಮಾನ ನಿಲ್ದಾಣವಷ್ಟೇ ಸೇರಿರದೆ, ಆಗ್ರಾ ಮತ್ತು ಸಹರಾನ್‌ಪುರದ ಸರ್ಸಾವಾ ವಿಮಾನ ನಿಲ್ದಾಣಗಳೂ ಸೇರಿವೆ. ಒಟ್ಟಾರೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಕ್ರೀಡೆ, ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಯೋಜನೆಗಳನ್ನು ಬನಾರಸ್‌ಗೆ ಕಲ್ಪಿಸಲಾಗಿದೆ. ಈ ಯೋಜನೆಗಳಿಂದ ಸುಧಾರಿತ ಸೇವೆ, ಅನುಕೂಲಗಳನ್ನು ಪಡೆಯುವುದಷ್ಟೇ ಅಲ್ಲದೆ, ನಮ್ಮ ಯುವ ಜನತೆಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಭೂಮಿಯು ಭಗವಾನ್ ಬುದ್ಧ ತನ್ನ ಬೋಧನೆಗಳನ್ನು ನೀಡಿದ ಸಾರನಾಥವನ್ನು ಹೊಂದಿದೆ. ಇತ್ತೀಚೆಗೆ ಅಭಿಧಮ್ಮ ಮಹೋತ್ಸವದಲ್ಲೂ ನಾನು ಭಾಗವಹಿಸಿದ್ದೆ. ಇಂದು ಸಾರಾನಾಥದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಅವಕಾಶವೂ ನನಗೆ ಒದಗಿ ಬಂದಿದೆ. ಹಾಗೆಯೇ, ನಿಮಗೆಲ್ಲಾ ತಿಳಿದಿರುವಂತೆ ನಾವು ಇತ್ತೀಚೆಗೆ ಪಾಲಿ ಮತ್ತು ಪ್ರಾಕೃತ ಸೇರಿದಂತೆ ಕೆಲವು ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳಾಗಿ ಗುರುತಿಸಿದ್ದೇವೆ. ಪಾಲಿ ಮತ್ತು ಪ್ರಾಕೃತ ಎರಡೂ ಸಾರಾನಾಥ ಮತ್ತು ಕಾಶಿಗೆ ವಿಶೇಷ ಸಂಬಂಧ ಹೊಂದಿವೆ. ಈ ಎರಡೂ ಭಾಷೆಗಳು ಶಾಸ್ತ್ರೀಯ ಭಾಷೆಯಾಗಿ ಗುರುತಿಸಲ್ಪಟ್ಟಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ಇಷ್ಟೆಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಕಾಶಿ ಮತ್ತು ರಾಷ್ಟ್ರದ ನನ್ನ ಎಲ್ಲಾ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ.

ಸ್ನೇಹಿತರೇ,

ಸತತ ಮೂರನೇ ಬಾರಿಗೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ನೀವು ನನಗೆ ವಹಿಸಿದಾಗ, ನಾನು ಮೂರು ಪಟ್ಟು ಹೆಚ್ಚು ವೇಗದಲ್ಲಿ ಕೆಲಸ ಮಾಡುವ ಭರವಸೆ ನೀಡಿದ್ದೆ. ಅದರಂತೆ ಸರ್ಕಾರ ರಚನೆಯಾಗಿ 125 ದಿನಗಳು ಕೂಡ ಆಗಿಲ್ಲ, ಈ ಅಲ್ಪಾವಧಿಯಲ್ಲೇ ದೇಶಾದ್ಯಂತ 15 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಈ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಬಡವರು, ರೈತರು ಮತ್ತು ಯುವಜನತೆಯ ಕಲ್ಯಾಣಕ್ಕೆ ಮೀಸಲಿಡಲಾಗಿದೆ. ಸ್ವಲ್ಪ ಯೋಚಿಸಿ, 10 ವರ್ಷಗಳ ಹಿಂದೆ ಪತ್ರಿಕೆಗಳ ಮುಖಪುಟದಲ್ಲಿ ಲಕ್ಷ ಕೋಟಿ ರೂಪಾಯಿಗಳ ಹಗರಣದ ಸುದ್ದಿಗಳ ತಲೆಬರಹಗಳೇ ರಾರಾಜಿಸುತ್ತಿದ್ದವು. ಹಾಗೆಯೇ ಲಕ್ಷಾಂತರ ಕೋಟಿ ರೂಪಾಯಿಗಳ ಭ್ರಷ್ಟಾಚಾರ, ಹಗರಣಗಳ ಕುರಿತಂತೆಯೇ ಚರ್ಚೆ ನಡೆಯುತ್ತಿತ್ತು. ಆದರೆ ಇಂದು, ಪ್ರತಿ ಮನೆ ಮನೆಯಲ್ಲೂ 125 ದಿನಗಳಲ್ಲಿ 15 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳ ಕುರಿತಂತೆ ಚರ್ಚೆಯಾಗುತ್ತಿದೆ. ಇದು ದೇಶ ಬಯಸುತ್ತಿರುವ ಬದಲಾವಣೆ. ಜನರ ಹಣವನ್ನು ಜನರಿಗಾಗಿ, ದೇಶದ ಅಭಿವೃದ್ಧಿಗೆ ಖರ್ಚು ಮಾಡುವುದು ಮತ್ತು ಪ್ರಾಮಾಣಿಕವಾಗಿ ಖರ್ಚು ಮಾಡುವುದು ನಮ್ಮ ಆದ್ಯತೆ.

ಸ್ನೇಹಿತರೇ,

ಕಳೆದ 10 ವರ್ಷಗಳಲ್ಲಿ ನಾವು ದೇಶದಲ್ಲಿ ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಈ ಮೂಲಸೌಕರ್ಯ ಅಭಿಯಾನವು ಎರಡು ಪ್ರಮುಖ ಗುರಿಗಳನ್ನು ಹೊಂದಿದೆ. ಮೊದಲನೆಯದಾಗಿ, ಹೂಡಿಕೆ ಹೆಚ್ಚಿಸುವ ಮೂಲಕ ಜನರಿಗೆ ಸೌಲಭ್ಯ, ಅನುಕೂಲಗಳನ್ನು ಹೆಚ್ಚಿಸುವುದು ಹಾಗೂ ಎರಡನೆಯದಾಗಿ, ಹೂಡಿಕೆ ಮೂಲಕ ಯುವಜನತೆಗೆ ಉದ್ಯೋಗಗಳನ್ನು ಸೃಷ್ಟಿಸುವುದು. ಇಂದು ದೇಶದಾದ್ಯಂತ ಆಧುನಿಕ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ಮಾರ್ಗಗಳಲ್ಲಿ ಹೊಸ ರೈಲು ಹಳಿಗಳನ್ನು ಅಳವಡಿಸಲಾಗುತ್ತಿದೆ. ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಇದು ಕೇವಲ ಇಟ್ಟಿಗೆ, ಕಲ್ಲು, ಕಬ್ಬಿಣ ಮತ್ತು ಉಕ್ಕಿನ ಸರಳುಗಳನ್ನು ಬಳಸಿದ ಕೆಲಸವಲ್ಲ; ಇದು ಜನರಿಗೆ ಅನುಕೂಲವನ್ನು ಹೆಚ್ಚಿಸುತ್ತಿದೆ ಮತ್ತು ದೇಶದ ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸುತ್ತಿದೆ.

ಸ್ನೇಹಿತರೇ,

ನಾವು ನಿರ್ಮಿಸಿರುವ ಬಬತ್‌ಪುರ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಹೆದ್ದಾರಿ ಹಾಗೂ ಅದರಲ್ಲಿ ಸೇರ್ಪಡೆ ಮಾಡಿರುವ ಆಧುನಿಕ ಸೌಲಭ್ಯಗಳನ್ನು ಒಮ್ಮೆ ಗಮನಿಸಿ. ಈ ಹೆದ್ದಾರಿಯಿಂದ  ಕೇವಲ ವಿಮಾನ ನಿಲ್ದಾಣಕ್ಕೆ ಹೋಗುವವರು ಹಾಗೂ ಬರುವವರೆಗಷ್ಟೇ ಅನುಕೂಲವಾಗುವುದೇ? ಖಂಡಿತ ಇಲ್ಲ. ಇದು ಬನಾರಸ್‌ನಲ್ಲಿ ಅನೇಕ ಜನರಿಗೆ ಉದ್ಯೋಗಗಳನ್ನು ಕಲ್ಪಿಸಿದೆ. ಇದು ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ. ಇಂದು ಬನಾರಸ್‌ಗೆ ಭೇಟಿ ನೀಡುವವರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗಿದೆ. ಕೆಲವರು ಪ್ರವಾಸೋದ್ಯಮಕ್ಕೆ ಬರುತ್ತಾರೆ, ಕೆಲವರು ವ್ಯಾಪಾರಕ್ಕಾಗಿ ಬರುತ್ತಾರೆ ಮತ್ತು ನೀವು ಅದರಿಂದ ಲಾಭ ಪಡೆಯುವಿರಿ. ಹಾಗಾಗಿ ಈಗ ಬಬತ್‌ಪುರ ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದ್ದು, ಮುಂದೆ ನಿಮಗೆ ಇನ್ನಷ್ಟು ಪ್ರಯೋಜನವಾಗಲಿದೆ. ಈ ವಿಮಾನ ನಿಲ್ದಾಣದ ಕಾಮಗಾರಿಗೆ ಇಂದು ಚಾಲನೆ ದೊರಕಿದ್ದು, ಇದು ಪೂರ್ಣಗೊಂಡರೆ ಹೆಚ್ಚಿನ ವಿಮಾನಗಳು ಇಲ್ಲಿಗೆ ಬಂದಿಳಿಯಲು ಸಾಧ್ಯವಾಗುತ್ತದೆ.

ಸ್ನೇಹಿತರೇ,

ಆಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸುವ ಈ “ಮಹಾ ಯಜ್ಞ”ದಲ್ಲಿ ನಮ್ಮ ವಿಮಾನ ನಿಲ್ದಾಣಗಳು, ಅವುಗಳ ಭವ್ಯವಾದ ಕಟ್ಟಡಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ವಿಶ್ವದಾದ್ಯಂತ ಇಂದು ಚರ್ಚೆಯಾಗುತ್ತಿದೆ. 2014ರಲ್ಲಿ ದೇಶದಲ್ಲಿ ಕೇವಲ 70 ವಿಮಾನ ನಿಲ್ದಾಣಗಳಿದ್ದವು. ಹಾಗೆಯೇ ನಾಯ್ಡು ಅವರು ವಿಸ್ತ್ರೃತವಾಗಿ ವಿವರಿಸಿದಂತೆ ಇಂದು ನಾವು 150ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿದ್ದೇವೆ. ಹಾಗೆಯೇ, ನಾವು ಹಳೆಯ ವಿಮಾನ ನಿಲ್ದಾಣಗಳನ್ನು ನವೀಕರಿಸುತ್ತಿದ್ದೇವೆ. ಕಳೆದ ವರ್ಷ, ದೇಶದಾದ್ಯಂತ ಡಜನ್‌ಗಿಂತಲೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಹೊಸ ಸೌಲಭ್ಯಗಳನ್ನು ಕಲ್ಪಿಸಲಾಯಿತು-  ಸರಾಸರಿ ತಿಂಗಳಿಗೆ ಒಂದು ವಿಮಾನ ನಿಲ್ದಾಣದಂತೆ ಸೌಲಭ್ಯ ಕಲ್ಪಿಸಲಾಗಿದೆ. ಅದು ಅಲಿಘಡ, ಮುರಾದಾಬಾದ್, ಶ್ರಾವಸ್ತಿ ಮತ್ತು ಚಿತ್ರಕೂಟ ವಿಮಾನ ನಿಲ್ದಾಣಗಳನ್ನು ಒಳಗೊಂಡಿದೆ. ಅಯೋಧ್ಯೆಯು ಈಗ ಭವ್ಯವಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿದ್ದು, ಪ್ರತಿದಿನ ರಾಮ ಭಕ್ತರನ್ನು ಸ್ವಾಗತಿಸುತ್ತದೆ. ಉತ್ತರ ಪ್ರದೇಶವು ತನ್ನ ಕಳಪೆ ರಸ್ತೆಗಳ ಕಾರಣಕ್ಕೆ ಅಪಹಾಸ್ಯಕ್ಕೊಳಗಾದ ಕಾಲವನ್ನು ನೆನಪಿಸಿಕೊಳ್ಳಿ. ಇಂದು ಯುಪಿಯನ್ನು ಎಕ್ಸ್‌ಪ್ರೆಸ್‌ವೇಗಳ ರಾಜ್ಯ ಎಂದೇ ಕರೆಯಲಾಗುತ್ತಿದೆ. ಇಂದು ಯುಪಿ ಅತಿ ಹೆಚ್ಚು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವೆಂಬ ಖ್ಯಾತಿಗೆ ಪಾತ್ರವಾಗುತ್ತಿದೆ. ನೊಯ್ಡಾದ ಜೆವಾರ್‌ನಲ್ಲಿ ಭವ್ಯವಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದೆ. ಯುಪಿಯಲ್ಲಿನ ಈ ಪ್ರಗತಿಗಾಗಿ ನಾನು ಯೋಗಿಯವರು, ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್ ಹಾಗೂ ಅವರ ಇಡೀ ತಂಡದ ಕಾರ್ಯವನ್ನು ಶ್ಲಾಘಿಸುತ್ತೇನೆ.

ಸ್ನೇಹಿತರೇ,

ಬನಾರಸ್ ಸಂಸದನಾಗಿ ಇಲ್ಲಿನ ಅಭಿವೃದ್ಧಿಯನ್ನು ಕಂಡಾಗ ನನಗೆ ಬಹಳ ಸಂತೋಷವಾಗುತ್ತದೆ. ಕಾಶಿಯನ್ನು ನಗರಾಭಿವೃದ್ಧಿಗೆ ಮಾದರಿ ನಗರವನ್ನಾಗಿ ರೂಪಿಸುವ ಕನಸನ್ನು ನಾವೆಲ್ಲರೂ ಕಾಣುತ್ತಿದ್ದೇವೆ- ಪರಂಪರೆಯನ್ನು ಸಂರಕ್ಷಿಸುವಾಗ ಜತೆ ಜತೆಗೆ ಪ್ರಗತಿಯನ್ನೂ ಸಾಧಿಸಲಾಗುತ್ತಿದೆ. ಇಂದು ಕಾಶಿಯು ಭವ್ಯವಾದ ಮತ್ತು ದೈವಿಕವಾದ ಕಾಶಿ ವಿಶ್ವನಾಥ ಧಾಮ, ರುದ್ರಾಕ್ಷ ಸಮ್ಮೇಳನ ಕೇಂದ್ರದ ಜತೆಗೆ ವರ್ತುಲ ರಸ್ತೆ ಹಾಗೂ ಗಂಜಾರಿ ಕ್ರೀಡಾಂಗಣದಂತಹ ಮೂಲಸೌಕರ್ಯ ಯೋಜನೆಗಳಿಗೆ ಹೆಸರಾಗಿದೆ. ಕಾಶಿಯಲ್ಲಿ ಆಧುನಿಕ ರೋಪ್ ವೇ ವ್ಯವಸ್ಥೆಯೂ ರೂಪುಗೊಳ್ಳುತ್ತಿದೆ. ಈ ವಿಶಾಲವಾದ ರಸ್ತೆಗಳು, ಬೀದಿಗಳು, ಗಲ್ಲಿಗಳು, ಗಂಗೆಯ ಸುಂದರ ಘಾಟ್‌ಗಳು-ಎಲ್ಲವೂ ಮನಮೋಹಕ.

ಸ್ನೇಹಿತರೇ,

ಕಾಶಿ ಮತ್ತು ಪೂರ್ವಾಂಚಲದ ಇಡೀ ಪ್ರದೇಶವನ್ನು ಪ್ರಮುಖ ವ್ಯಾಪಾರ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನಾವು ನಿರಂತರ ಪ್ರಯತ್ನ ಕೈಗೊಂಡಿದ್ದೇವೆ. ಕೆಲ ದಿನಗಳ ಹಿಂದೆಯಷ್ಟೇ ಗಂಗಾ ನದಿಯ ಮೇಲೆ ಹೊಸ ರೈಲು-ರಸ್ತೆ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ರಾಜ್‌ಘಾಟ್ ಸೇತುವೆಯ ಬಳಿ ಭವ್ಯವಾದ ಹೊಸ ಸೇತುವೆಯನ್ನು ನಿರ್ಮಿಸಲಾಗುವುದು. ಕೆಳ ಮಾರ್ಗದಲ್ಲಿ ರೈಲುಗಳು ಸಂಚರಿಸಿದರೆ ಅದರ ಮೇಲೆ ಆರು ಪಥಗಳ ಹೆದ್ದಾರಿ ನಿರ್ಮಾಣವಾಗಲಿದೆ. ಇದರಿಂದ ಬನಾರಸ್ ಮತ್ತು ಚಂದೌಲಿಯ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.

ಸ್ನೇಹಿತರೇ,

ಇನ್ನು ನಮ್ಮ ಕಾಶಿಯು ಕ್ರೀಡೆಯ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಸಿಗ್ರಾ ಕ್ರೀಡಾಂಗಣವು ನವೀಕರಣಗೊಂಡಿದ್ದು, ಇದೀಗ ಹೊಸ ರೂಪದಲ್ಲಿ ನಿಮ್ಮ ಮುಂದಿದೆ. ಹೊಸ ಕ್ರೀಡಾಂಗಣವನ್ನು ರಾಷ್ಟ್ರೀಯ ಕ್ರೀಡಾಕೂಟಗಳು ಹಾಗೂ ಒಲಿಂಪಿಕ್ಸ್‌ಗಾಗಿ ಸಜ್ಜುಗೊಳಿಸಲಾಗಿದೆ. ಇಲ್ಲಿ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. “ಸಂಸದ್ ಖೇಲ್ ಪ್ರತಿಯೋಗಿತಾʼ ಸಂದರ್ಭದಲ್ಲಿ ಕಾಶಿಯ ಯುವ ಕ್ರೀಡಾಪಟುಗಳ ಸಾಮರ್ಥ್ಯವನ್ನು ಗಮನಿಸಿದ್ದೇನೆ. ಈಗ, ಪೂರ್ವಾಂಚಲದ ನಮ್ಮ ಪುತ್ರರು, ಪುತ್ರಿಯರು ಪ್ರಮುಖ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಅಗತ್ಯ ಅಭ್ಯಾಸ, ತಯಾರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಬಳಸುವ ಅವಕಾಶ ಪಡೆದಿದ್ದಾರೆ.

ಸ್ನೇಹಿತರೇ,

ಮಹಿಳೆಯರು ಮತ್ತು ಯುವಕರು ಸಬಲೀಕರಣಗೊಂಡಾಗ ಮಾತ್ರ ಆ ಸಮಾಜ ಅಭಿವೃದ್ಧಿಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರವು ‘ನಾರಿ ಶಕ್ತಿ’ಗೆ (ಮಹಿಳಾ ಸಬಲೀಕರಣ) ವಿಶೇಷ ಒತ್ತು ನೀಡಿದೆ. ಲಕ್ಷಾಂತರ ಮಹಿಳೆಯರು ತಮ್ಮ ಸ್ವಂತ ಉದ್ಯಮ ಪ್ರಾರಂಭಿಸಲು ನೆರವಿನ ರೂಪದಲ್ಲಿ ಮುದ್ರಾ ಸಾಲ ನೀಡಲಾಗಿದೆ. ಈಗ ನಾವು ದೇಶಾದ್ಯಂತ ಹಳ್ಳಿಗಳಲ್ಲಿ ‘ಲಕ್ಷಾಧಿಪತಿ ಅಕ್ಕಂದಿರʼನ್ನು (ಲಖ್‌ಪತಿ ದೀದಿ) ರೂಪಿಸುವ ಕೆಲಸ ಆರಂಭಿಸುತ್ತಿದ್ದೇವೆ. ಇಂದು, ನಮ್ಮ ಹಳ್ಳಿಗಳ ಸಹೋದರಿಯರು ಡ್ರೋನ್ ಪೈಲಟ್‌ಗಳಾಗುತ್ತಿದ್ದಾರೆ. ಈ ಕಾಶಿಯಲ್ಲಿ ಶಿವನು ಸಹ ತಾಯಿ ಅನ್ನಪೂರ್ಣೆಯಿಂದ ಭಿಕ್ಷೆ ಬಯಸುತ್ತಾನೆ. ಮಹಿಳೆಯರು ಸಬಲೀಕರಣಗೊಂಡಾಗ ಸಮಾಜ ಅಭಿವೃದ್ಧಿಯಾಗುತ್ತದೆ ಎಂಬುದನ್ನು ಕಾಶಿ ಕಲಿಸುತ್ತದೆ. ಈ ನಂಬಿಕೆಯೊಂದಿಗೆ, ನಾವು ‘ವಿಕಸಿತ ಭಾರತ’ಕ್ಕಾಗಿ (ಅಭಿವೃದ್ಧಿ ಹೊಂದಿದ ಭಾರತ) ಪ್ರತಿ ಗುರಿಯಲ್ಲೂ ಕೇಂದ್ರಬಿಂದುವಾಗಿ ‘ನಾರಿ ಶಕ್ತಿ’ಯನ್ನು ಇರಿಸಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಲಕ್ಷಾಂತರ ಮಹಿಳೆಯರಿಗೆ ತಮ್ಮ ಸ್ವಂತ ಮನೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ಬನಾರಸ್‌ನ ಅನೇಕ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಸರ್ಕಾರ ಈಗ 3 ಕೋಟಿ ಮನೆಗಳನ್ನು ನಿರ್ಮಿಸಲು ಮುಂದಾಗುತ್ತಿರುವುದು ನಿಮಗೆ ತಿಳಿದೇ ಇದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈವರೆಗೆ ಮನೆಗಳನ್ನು ಪಡೆಯದ ಬನಾರಸ್‌ನ ಮಹಿಳೆಯರು ಶೀಘ್ರದಲ್ಲೇ ಮನೆಗಳನ್ನು ಪಡೆಯಲಿದ್ದಾರೆ. ನಾವು ಈಗಾಗಲೇ ನಲ್ಲಿ ನೀರು, ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಮತ್ತು ಮನೆಗಳಿಗೆ ಕೊಳವೆಗಳ ಮೂಲಕ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಿದ್ದೇವೆ. ಈಗ ನಾವು ಉಚಿತ ವಿದ್ಯುತ್ ಮತ್ತು ವಿದ್ಯುತ್‌ ನಿಂದ ಆದಾಯ ಗಳಿಸುವ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಪ್ರಧಾನಮಂತ್ರಿ ʼಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆʼಯು ನಮ್ಮ ಸಹೋದರಿಯರ ಜೀವನವನ್ನು ಇನ್ನಷ್ಟು ಸುಗಮಗೊಳಿಸಲಿದೆ.

ಸ್ನೇಹಿತರೇ,

ನಮ್ಮ ಕಾಶಿ ಒಂದು ವೈವಿಧ್ಯದ ಸಾಂಸ್ಕೃತಿಕ ನಗರಿ. ಇದು ಶಿವನ ಪವಿತ್ರ ಜ್ಯೋತಿರ್ಲಿಂಗ, ಮೋಕ್ಷದ ಪವಿತ್ರ ಸ್ಥಳ ಮಣಿಕರ್ಣಿಕಾ ಮತ್ತು ಜ್ಞಾನದ ಸ್ಥಳವಾದ ಸಾರನಾಥದ ನೆಲೆಯಾಗಿದೆ. ಹಲವು ದಶಕಗಳ ನಂತರ ಬನಾರಸ್‌ನಲ್ಲಿ ಏಕಕಾಲಕ್ಕೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇಲ್ಲದಿದ್ದರೆ ಕಾಶಿ ಹಳೆಯ ಸ್ಥಿತಿಯಲ್ಲೇ ಕೈಬಿಟ್ಟಂತೆ ಆಗುತ್ತಿತ್ತು. ಹಾಗಾಗಿ ಇಂದು ಕಾಶಿಯ ಪ್ರತಿಯೊಬ್ಬ ನಿವಾಸಿಗೂ ನಾನು ಒಂದು ಪ್ರಶ್ನೆ ಕೇಳುತ್ತಿದ್ದೇನೆ: ಕಾಶಿಯನ್ನು ಅಭಿವೃದ್ಧಿಯಿಂದ ವಂಚಿತಗೊಳಿಸಿದ ಮನಸ್ಥಿತಿ ಯಾವುದು? 10 ವರ್ಷಗಳ ಹಿಂದೆ ಬನಾರಸ್ ಅಭಿವೃದ್ಧಿಯ ದಾಹದಿಂದ ಬಳಲುತ್ತಿದ್ದ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಯೋಚಿಸಿ. ಉತ್ತರ ಪ್ರದೇಶವನ್ನು ದೀರ್ಘಕಾಲ ಆಳಿದ ಪಕ್ಷಗಳು ಮತ್ತು ದೆಹಲಿಯಲ್ಲಿ ದಶಕಗಳ ಕಾಲ ಅಧಿಕಾರ ಅನುಭವಿಸಿದ ಪಕ್ಷಗಳು ಬನಾರಸ್ ಬಗ್ಗೆ ಎಂದಿಗೂ ಕಾಳಜಿಯನ್ನು ವಹಿಸಲೇ ಇಲ್ಲ. ಈ ಪ್ರಶ್ನೆಗಳಿಗೆ ವಂಶಾಡಳಿತ ಹಾಗೂ ತುಷ್ಟೀಕರಣದ ರಾಜಕಾರಣವೇ ಉತ್ತರ. ಅದು ಕಾಂಗ್ರೆಸ್ ಪಕ್ಷವಿರಲಿ ಅಥವಾ ಸಮಾಜವಾದಿ ಪಕ್ಷವೇ ಆಗಿರಲಿ, ಬನಾರಸ್‌ನ ಅಭಿವೃದ್ಧಿಯು ಅಂತಹ ಪಕ್ಷಗಳಿಗೆ ಎಂದಿಗೂ ಆದ್ಯತೆಯಾಗಿರಲಿಲ್ಲ ಅಥವಾ ಭವಿಷ್ಯದಲ್ಲಿ ಎಂದಿಗೂ ಆಗುವುದೂ ಇಲ್ಲ. ಈ ಪಕ್ಷಗಳು ಅಭಿವೃದ್ಧಿಯಲ್ಲೂ ತಾರತಮ್ಯ ತೋರಿವೆ. ಆದರೆ ನಮ್ಮ ಸರ್ಕಾರ ‘ಎಲ್ಲರೊಂದಿಗೆ ಎಲ್ಲರ ವಿಕಾಸʼ (ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌) ಮಂತ್ರದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಯಾವುದೇ ಯೋಜನೆಯಲ್ಲಿ ತಾರತಮ್ಯ ಮಾಡುವುದಿಲ್ಲ. ನಾವು ಏನನ್ನು ಹೇಳುತ್ತೇವೆಯೋ ಅದನ್ನು ಗಟ್ಟಿ ದನಿಯಲ್ಲಿ ಹಾಗೂ ಸಮರ್ಪಕವಾಗಿ ಮಾಡಿಯೇ ತೀರುತ್ತೇವೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಇಂದು ಲಕ್ಷಾಂತರ ಜನ ನಿತ್ಯ ರಾಮ ಲಲ್ಲಾ ದರ್ಶನ ಪಡೆಯುತ್ತಿದ್ದಾರೆ. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ವಿಚಾರ ವರ್ಷಗಟ್ಟಲೆ ಸ್ತಬ್ಧವಾಗಿತ್ತು. ಈ ಐತಿಹಾಸಿಕ ಕಾರ್ಯವನ್ನು ನಮ್ಮ ಸರ್ಕಾರವೂ ಕಾರ್ಯ ಸಾಧ್ಯವಾಗಿಸಿದೆ. ತ್ರಿವಳಿ ತಲಾಖ್ ಎಂಬ ಅನಿಷ್ಟ ಪದ್ಧತಿಯಿಂದಾಗಿ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಮ್ಮ ಸರ್ಕಾರ ಮುಸ್ಲಿಂ ಹೆಣ್ಣು ಮಕ್ಕಳನ್ನು ಅದರಿಂದ ಮುಕ್ತಗೊಳಿಸುವ ಕೆಲಸ ಮಾಡಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದು ಸಹ ಬಿಜೆಪಿ ಸರ್ಕಾರವೇ. ಯಾರ ಹಕ್ಕುಗಳನ್ನು ಕಸಿದುಕೊಳ್ಳದೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಿದ್ದು ಸಹ ನಮ್ಮದೇ ಎನ್‌ಡಿಎ ಸರ್ಕಾರ.

ಸ್ನೇಹಿತರೇ,

ನಾವು ನಮ್ಮ ಕೆಲಸವನ್ನು ಮಾಡಿದ್ದೇವೆ. ನಾವು ಸದುದ್ದೇಶದಿಂದ ನೀತಿಗಳನ್ನು ಜಾರಿಗೊಳಿಸಿದ್ದೇವೆ ಹಾಗೂ ದೇಶದ ಪ್ರತಿಯೊಂದು ಕುಟುಂಬದ ಜೀವನವನ್ನು ಪರಿವರ್ತಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಅದಕ್ಕಾಗಿಯೇ ರಾಷ್ಟ್ರವು ನಮ್ಮನ್ನು ಆಶೀರ್ವದಿಸುತ್ತಲೇ ಇದೆ. ಹರಿಯಾಣದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಸರ್ಕಾರ ಹೇಗೆ ಮರು ಆಯ್ಕೆಯಾಯಿತು ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ದಾಖಲೆಯ ಮತಗಳನ್ನು ಪಡೆದಿದೆ.

ಸ್ನೇಹಿತರೇ,

ಇಂದು, ಭಾರತವು ಕುಟುಂಬ ಆಧಾರಿತ ರಾಜಕೀಯದಿಂದ ಗಂಭೀರ ಬೆದರಿಕೆಯನ್ನು ಎದುರಿಸುತ್ತಿದೆ. ಈ ವಂಶಾಡಳಿತದ ರಾಜಕಾರಣಿಗಳು ದೇಶದ ಯುವಕರಿಗೆ ಹೆಚ್ಚು ಹಾನಿ ಉಂಟುಮಾಡುತ್ತಾರೆ. ಯುವಕರಿಗೆ ಅವಕಾಶಗಳನ್ನು ನೀಡುವುದರಲ್ಲಿ ಅವರಿಗೆ ಎಂದಿಗೂ ನಂಬಿಕೆಯೇ ಇರುವುದಿಲ್ಲ. ಹಾಗಾಗಿಯೇ ನಾನು ರಾಜಕೀಯದ ನಂಟೇ ಇಲ್ಲದ ಕುಟುಂಬಗಳಿಂದ 1,00,000 ಯುವಕರನ್ನು ರಾಜಕೀಯಕ್ಕೆ ಬರುವಂತೆ ಕೆಂಪು ಕೋಟೆಯಿಂದ ಇಡೀ ದೇಶಕ್ಕೆ ಕರೆ ನೀಡಿದ್ದೇನೆ. ಇದು ಭಾರತದ ರಾಜಕಾರಣದ ದಿಕ್ಕನ್ನೇ ಬದಲಿಸುವ ಅಭಿಯಾನ. ಭ್ರಷ್ಟಾಚಾರ ಮತ್ತು ವಂಶಾಡಳಿತದ ಮನಸ್ಥಿತಿಯನ್ನು ನಿರ್ಮೂಲನೆ ಮಾಡುವುದು ಇದರ ಮೂಲ ಉದ್ದೇಶ. ಕಾಶಿ ಮತ್ತು ಉತ್ತರ ಪ್ರದೇಶದ ಯುವಜನತೆ ಈ ಹೊಸ ರಾಜಕೀಯ ಆಂದೋಲನದ ಆಧಾರ ಸ್ತಂಭಗಳಾಗಬೇಕೆಂದು ನಾನು ಬಹಿರಂಗವಾಗಿಯೇ ಕರೆ ನೀಡುತ್ತೇನೆ. ಕಾಶಿ ಸಂಸದನಾಗಿ ಈ ಭಾಗದ ಯುವಕರನ್ನು ಸಾಧ್ಯವಾದಷ್ಟು ಮುಂದೆ ತರಲು ಬದ್ಧನಾಗಿದ್ದೇನೆ.

ಸ್ನೇಹಿತರೇ,

ಮತ್ತೊಮ್ಮೆ, ಕಾಶಿಯು ದೇಶದಾದ್ಯಂತ ಅಭಿವೃದ್ಧಿಯ ಹೊಸ ಮಾನದಂಡಗಳ ಉಡಾವಣೆಯ ತಾಣವಾಗಿ ರೂಪುಗೊಂಡಿದೆ. ಕಾಶಿ ಮತ್ತೊಮ್ಮೆ ರಾಷ್ಟ್ರದ ಹಲವು ಹೊಸತುಗಳಿಗೆ ಸಾಕ್ಷಿಯಾಗಿದೆ. ಇಂದಿನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಎಲ್ಲಾ ರಾಜ್ಯಗಳು, ಗೌರವಾನ್ವಿತ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕಾಶಿಯ ಜನರು ಮತ್ತು ದೇಶದ ಜತೆಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಎಲ್ಲರೂ ನನ್ನೊಂದಿಗೆ ಒಟ್ಟಿಗೆ ಹೇಳಿ:

ನಮಃ ಪಾರ್ವತಿ ಪತಯೇ…

ಹರ ಹರ ಮಹಾದೇವ!

 

*****