ಜೈ ಬದ್ರಿ ವಿಶಾಲ್, ಜೈ ಬದ್ರಿ ವಿಶಾಲ್, ಜೈ ಬದ್ರಿ ವಿಶಾಲ್!
ಜೈ ಬಾಬಾ ಕೇದಾರ್, ಜೈ ಬಾಬಾ ಕೇದಾರ್, ಜೈ ಬಾಬಾ ಕೇದಾರ್!
ಉತ್ತರಾಖಂಡದ ರಾಜ್ಯಪಾಲ ಗುರ್ಮೀತ್ ಸಿಂಗ್ ಜೀ; ಉತ್ತರಾಖಂಡದ ಜನಪ್ರಿಯ, ಮೃದು ಮಾತಿನ ಮತ್ತು ಉಲ್ಲಾಸಭರಿತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೀ; ನನ್ನ ಸಂಸದೀಯ ಸಹೋದ್ಯೋಗಿ ಶ್ರೀ ತಿರಥ್ ಸಿಂಗ್ ರಾವತ್ ಜೀ; ಧನ್ ಸಿಂಗ್ ರಾವತ್ ಜೀ, ಮಹೇಂದ್ರ ಭಟ್ ಜೀ, ಇತರ ಗಣ್ಯರೇ ಮತ್ತು ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ!
ಇಂದು, ಬಾಬಾ ಕೇದಾರ್ ಮತ್ತು ಬದರಿ ವಿಶಾಲ್ ಜೀ ಅವರಿಂದ ಆಶೀರ್ವಾದ ಪಡೆದ ನಂತರ, ನಾನು ಆಶೀರ್ವಾದ ಪಡೆದ ಸಂತೋಷದಲ್ಲಿದ್ದೇನೆ ಮತ್ತು ಸಂತೃಪ್ತನಾಗಿದ್ದೇನೆ. ಈ ಕ್ಷಣಗಳು ನನಗೆ ಶಾಶ್ವತವಾದಂತಹವು. ನಾನು ಕಳೆದ ಬಾರಿ ದೇವರ ಕೃಪೆ ಮತ್ತು ಅವರ ಆಜ್ಞಾವರ್ತಿಯಾಗಿ ಇಲ್ಲಿಗೆ ಬಂದಾಗ, ನನ್ನ ಬಾಯಿಯಿಂದ ಕೆಲವು ಪದಗಳು ಹೊರಬಂದವು. ಆ ಮಾತುಗಳು ನನ್ನದಲ್ಲ, ಹಾಗಾದರೆ ಅವು ನನ್ನ ಬಾಯಿಯಿಂದ ಹೇಗೆ ಹೊರಬಂದವು? ಆ ಮಾತುಗಳನ್ನು ನಾನು ಹೇಳುವಂತೆ ಮಾಡಿದವರು ಯಾರು ಎಂಬುದು ನನಗೆ ತಿಳಿದಿಲ್ಲ ಆದರೆ ಆ ಮಾತುಗಳು ನನ್ನ ಬಾಯಿಂದ ಹೊರಬಂದವು. ಆ ಪದಗಳೆಂದರೆ – “ಈ ದಶಕವು ಉತ್ತರಾಖಂಡದ ದಶಕವಾಗಿರುತ್ತದೆ”. ಮತ್ತು ಈ ಮಾತುಗಳು ಬಾಬಾ, ಬದರಿ ವಿಶಾಲ್ ಮತ್ತು ಗಂಗಾ ಮಾತೆಯ ಆಶೀರ್ವಾದವನ್ನು ಪಡೆಯುವುದನ್ನು ಮುಂದುವರಿಸುತ್ತವೆ ಎಂದು ನಾನು ದೃಢವಾಗಿ ನಂಬುತ್ತೇನೆ. ಈ ಹೊಸ ಯೋಜನೆಗಳೊಂದಿಗೆ ಅದೇ ಸಂಕಲ್ಪವನ್ನು ಪುನರುಚ್ಚರಿಸಲು ಇಂದು ನಾನು ನಿಮ್ಮೊಂದಿಗೆ ಇಲ್ಲಿರುವುದು ನನ್ನ ಅದೃಷ್ಟ ಮತ್ತು ನಿಮ್ಮೆಲ್ಲರೊಂದಿಗೆ ಸಂವಹನ ನಡೆಸುವ ಅವಕಾಶವೂ ನನಗೆ ದೊರೆತಿದೆ.
ಮನಾ ಗ್ರಾಮವನ್ನು ಭಾರತದ ಕೊನೆಯ ಗ್ರಾಮವೆಂದು ಕರೆಯಲಾಗುತ್ತದೆ. ಆದರೆ ನಮ್ಮ ಮುಖ್ಯಮಂತ್ರಿಗಳು ಹೇಳಿದಂತೆ, ಈಗ ನನಗೆ ಕೂಡಾ ಗಡಿಯಲ್ಲಿರುವ ಪ್ರತಿಯೊಂದು ಗ್ರಾಮವೂ ದೇಶದ ಮೊದಲ ಗ್ರಾಮವಾಗಿದೆ. ಗಡಿಯಲ್ಲಿ ವಾಸಿಸುವ ನೀವೆಲ್ಲರೂ ದೇಶದ ಬಲವಾದ ಕಾವಲುಗಾರರು. ಮತ್ತು ಇಂದು ನಾನು ಮನಾ ಗ್ರಾಮದ ಕೆಲವು ಹಳೆಯ ನೆನಪುಗಳನ್ನು ಮರಳಿ ಸ್ಮರಿಸಲು ಬಯಸುತ್ತೇನೆ. ಪ್ರಾಯಶಃ ಆ ಸಮಯದಲ್ಲಿ ಅಲ್ಲಿದ್ದ ಕೆಲವರಿಗೆ ಅದು ನೆನಪಿರಬಹುದು. ನಾನು ಮುಖ್ಯಮಂತ್ರಿಯಾದ ಮತ್ತು ನಂತರ ಪ್ರಧಾನಿಯಾದ ಕಾರಣ ನಾನು ಈಗ ಗಡಿಯಲ್ಲಿರುವ ಮೊದಲ ಹಳ್ಳಿಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದಲ್ಲ. ಸುಮಾರು 25 ವರ್ಷಗಳ ಹಿಂದೆ ನಾನು ಉತ್ತರಾಖಂಡದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾಗ, ಯಾರಿಗೂ ನನ್ನ ಪರಿಚಯವಿರಲಿಲ್ಲ ಮತ್ತು ನನಗೆ ಯಾವುದೇ ಸಾರ್ವಜನಿಕ ಜೀವನವೂ ಇರಲಿಲ್ಲ. ನಾನು ನನ್ನ ಸಮಯವನ್ನು ಸಂಘಟನೆಯ ಮತ್ತು ಸಂಸ್ಥೆಯ ಜನರೊಂದಿಗೆ ಕೆಲಸ ಮಾಡುತ್ತ ಕಳೆಯುತ್ತಿದ್ದೆ. ಮತ್ತು ಆ ಸಮಯದಲ್ಲಿ ನಾನು ಮನಾದಲ್ಲಿ ಉತ್ತರಾಖಂಡ ಬಿಜೆಪಿ ಕಾರ್ಯಕಾರಿಣಿಯ ಸಭೆಯನ್ನು ಕರೆದಿದ್ದೆ. ಆದ್ದರಿಂದ ಆ ಸಮಯದಲ್ಲಿ ಉತ್ತರಾಖಂಡದ ಪಕ್ಷದ ಎಲ್ಲಾ ಕಾರ್ಯಕರ್ತರು ನನ್ನ ಮೇಲೆ ತುಂಬಾ ಕೋಪಗೊಂಡಿದ್ದರು. ಈ ಸ್ಥಳವನ್ನು ತಲುಪುವುದು ಎಷ್ಟು ಕಷ್ಟ ಮತ್ತು ಸಾಕಷ್ಟು ಸಮಯ ವ್ಯರ್ಥವಾಗುತ್ತದೆ ಎಂದು ಅವರು ನನಗೆ ಹೇಳಿದರು. ಆಗ ನಾನು ಹೇಳಿದೆ, ಉತ್ತರಾಖಂಡ ಬಿಜೆಪಿ ಮನಾದ ಮಹತ್ವವನ್ನು ಅರ್ಥಮಾಡಿಕೊಂಡ ದಿನ, ಉತ್ತರಾಖಂಡದ ಜನರು ಸಹ ಬಿಜೆಪಿಯ ಪ್ರಾಮುಖ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಮತ್ತು ಮನಾ ಗ್ರಾಮದ ಮಣ್ಣಿನ ಶಕ್ತಿ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮನಾ ಗ್ರಾಮದ ಸಹೋದರರು ಮತ್ತು ಸಹೋದರಿಯರ ಆಜ್ಞೆ ಮತ್ತು ಪ್ರೀತಿಯಿಂದಾಗಿಯೇ ಒಂದರ ನಂತರ ಒಂದರಂತೆ ಹಲವಾರು ಆಶೀರ್ವಾದಗಳು ಹರಿಯುತ್ತಿವೆ. ಮತ್ತು ಉತ್ತರಾಖಂಡದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ನಾನು ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದೇನೆ. ಆದ್ದರಿಂದ ನಾನು ಇಂದು ಇಲ್ಲಿಗೆ ಬಂದಿರುವುದು, ನಿಮ್ಮೆಲ್ಲರಿಗೂ ಮತ್ತು ಇಡೀ ಉತ್ತರಾಖಂಡಕ್ಕೆ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿದ್ದಕ್ಕಾಗಿ ನಾನು ಮನಾದ ಮಣ್ಣಿನಿಂದ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುವುದಕ್ಕಾಗಿ.
ಸ್ನೇಹಿತರೇ,
21 ನೇ ಶತಮಾನದ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದಲ್ಲಿ ಎರಡು ಪ್ರಮುಖ ಸ್ತಂಭಗಳಿವೆ. ಮೊದಲನೆಯದಾಗಿ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುವುದು ಮತ್ತು ಎರಡನೆಯದಾಗಿ ಅಭಿವೃದ್ಧಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುವುದು. ಇಂದು ಉತ್ತರಾಖಂಡವು ಈ ಎರಡೂ ಸ್ತಂಭಗಳನ್ನು ಬಲಪಡಿಸುತ್ತಿದೆ. ಇಂದು ಬೆಳಿಗ್ಗೆ ನಾನು ಬಾಬಾ ಕೇದಾರನನ್ನು ಪ್ರಾರ್ಥಿಸಿದೆ ಮತ್ತು ನಂತರ ಬದರೀನಾಥ್ ವಿಶಾಲ್ ಅವರ ಬಳಿಗೆ ಹೋಗಿ ಭಗವಂತನ ಆಜ್ಞೆಯನ್ನು ನಾನು ಅನುಸರಿಸಬೇಕಾಗಿದೆ ಎಂದು ಪ್ರಾರ್ಥಿಸಿದೆ. ಮತ್ತು ನನಗೆ, ದೇಶದ 130 ಕೋಟಿ ಜನರು ಸಹ ದೇವರ ಒಂದು ರೂಪವಾಗಿದ್ದಾರೆ. ಆದ್ದರಿಂದ ನಾನು ಅಭಿವೃದ್ಧಿ ಕಾರ್ಯಗಳನ್ನು ಸಹ ಪರಾಮರ್ಶಿಸಿದೆ. ಮತ್ತು ಈಗ ನಾನು ನಿಮ್ಮೊಂದಿಗೆ ಇರುವ ಮತ್ತು 2 ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವ ಸೌಭಾಗ್ಯವನ್ನು ಪಡೆದಿದ್ದೇನೆ. ಇದು ಕೇದಾರನಾಥ ಜೀ ಮತ್ತು ಗುರುದ್ವಾರ ಹೇಮಕುಂಡ್ ಸಾಹಿಬ್ ಗೆ ಭೇಟಿಯನ್ನು ಸುಲಭಗೊಳಿಸುತ್ತದೆ.
ಗುರು ಗ್ರಂಥ ಸಾಹಿಬ್ ಆಶೀರ್ವಾದ ನಮ್ಮೊಂದಿಗೆ ಇರಲಿ! ಎಲ್ಲ ಪೂಜ್ಯ ಗುರುಗಳ ಆಶೀರ್ವಾದವು ನಮ್ಮೊಂದಿಗೆ ಇರಲಿ! ಗುರುಗಳ ಆಶೀರ್ವಾದದೊಂದಿಗೆ ಅಂತಹ ಶುಭ ಕಾರ್ಯವನ್ನು ಕೈಗೊಳ್ಳಲು ನಮಗೆ ಅವಕಾಶ ದೊರೆತಿದೆ. ಅಲ್ಲದೆ ನಮ್ಮೆಲ್ಲರಿಗೂ ಬಾಬಾ ಕೇದಾರರಿಂದ ಆಶೀರ್ವಾದವಾಗಲಿ! ಈ ರೋಪ್ ವೇ ಕೇವಲ ಕಂಬಗಳು, ತಂತಿಗಳು ಅಥವಾ ನಿಮಗೆ ಕುಳಿತುಕೊಳ್ಳಲು ಅವಕಾಶ ಒದಗಿಸುವ ಕಾರುಗಳಿಗೆ ಮಾತ್ರ ಸೀಮಿತವಾಗಿಲ್ಲ; ಈ ರೋಪ್ ವೇ ನಿಮ್ಮನ್ನು ಹೆಚ್ಚಿನ ವೇಗದಲ್ಲಿ ಬಾಬಾ ಬಳಿಗೆ ಕರೆದೊಯ್ಯುತ್ತದೆ ಮತ್ತು ಅದೇ ಸಮಯದಲ್ಲಿ ಇದು ಕೆಲಸ ಮಾಡುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ, ನನ್ನ ದೇಶದ 130 ಕೋಟಿ ದೇಶವಾಸಿಗಳ ಆಶೀರ್ವಾದವು ಅವರ ಮೇಲೆ ಸುರಿಯಲಿದೆ. ಪವಿತ್ರ ಗುರು ಗ್ರಂಥ ಸಾಹಿಬ್ ಬೋಧನೆಗಳನ್ನು ಅನುಸರಿಸುವ ಪ್ರಪಂಚದಾದ್ಯಂತದ ನನ್ನ ಎಲ್ಲಾ ಸಹೋದರರು ಮತ್ತು ಸಹೋದರಿಯರು ಹೇಮಕುಂಡ್ ಸಾಹಿಬ್ ವರೆಗೆ ನಿರ್ಮಿಸಲಾಗುತ್ತಿರುವ ಈ ರೋಪ್ ವೇಗಾಗಿ ನಮ್ಮ ಮೇಲೆ ಆಶೀರ್ವಾದಗಳನ್ನು ಸುರಿಸುವಂತಾಗಬೇಕು. ಅದು ಹೊಂದಿರುವ ಶಕ್ತಿಯನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ. ರೋಪ್ ವೇ ಹೇಮಕುಂಡ್ ಸಾಹಿಬ್ ಅನ್ನು ಸಂಪರ್ಕಿಸುವುದರಿಂದ ಯುಕೆ, ಜರ್ಮನಿ ಮತ್ತು ಕೆನಡಾದಲ್ಲಿ ಇದನ್ನು ಸಂಭ್ರಮಿಸಲಾಗುತ್ತದೆ ಎಂಬುದನ್ನೂ ನೀವು ನೋಡಲಿದ್ದೀರಿ. ಇದು ಸಮಯವನ್ನು ಉಳಿಸುವುದು ಮಾತ್ರವಲ್ಲದೆ, ಆಳವಾದ ರೀತಿಯಲ್ಲಿ ಅವನನ್ನು / ಅವಳನ್ನು ಭಕ್ತಿಯಲ್ಲಿ ಮುಳುಗಿಸಲು ಸಹ ಇದು ಸಮರ್ಥವಾಗಲಿದೆ. ಇಂದು, ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಉತ್ತರಾಖಂಡ್ ಮತ್ತು ದೇಶ ಮತ್ತು ವಿದೇಶದ ಪ್ರತಿಯೊಬ್ಬ ಭಕ್ತನನ್ನು ಅಭಿನಂದಿಸುತ್ತೇನೆ. ಮತ್ತು ನಿಮ್ಮೆಲ್ಲರಿಗೂ ಗುರುಗಳಿಂದ, ಬಾಬಾ ಕೇದಾರ್ ಮತ್ತು ಬದರಿ ವಿಶಾಲ್ ಅವರಿಂದ ಆಶೀರ್ವಾದಗಳು ಲಭಿಸಲಿ! ಸರ್ವಶಕ್ತನು ನಮ್ಮ ಎಲ್ಲ ಕಾರ್ಮಿಕ ಸಹೋದರರಿಗೆ ಈ ಕೆಲಸವನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ಮತ್ತು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಶಕ್ತಿಯನ್ನು ನೀಡುತ್ತಾನೆ ಎಂದು ನಾನು ಭಾವಿಸುತ್ತೇನೆ. ಮತ್ತು ನಾವು ಒಟ್ಟಿಗೆ ಪ್ರಾರ್ಥಿಸೋಣ- ಏಕೆಂದರೆ ಇದು ತುಂಬಾ ಕಷ್ಟಕರವಾದ ಭೂಪ್ರದೇಶವಾಗಿದೆ. ಇಲ್ಲಿ ಬಲವಾದ ಗಾಳಿ ಬೀಸುವುದರಿಂದ ಮತ್ತು ಎತ್ತರದಲ್ಲಿ ಕೆಲಸ ಮಾಡುವುದು ಸುಲಭವಲ್ಲದ ಕಾರಣ ಇಲ್ಲಿ ಕೆಲಸ ಮಾಡುವುದು ಕಷ್ಟ. ಆದ್ದರಿಂದ, ನಿರ್ಮಾಣ ಕಾರ್ಯದ ಸಮಯದಲ್ಲಿ ನಮ್ಮ ಕಾರ್ಮಿಕ ಅಥವಾ ಕಾರ್ಮಿಕ ಸ್ನೇಹಿತರನ್ನು ಸುರಕ್ಷಿತವಾಗಿಡುವಂತೆ ನಾವು ದೇವರಲ್ಲಿ ಪ್ರಾರ್ಥಿಸೋಣ. ಯೋಜನಾ ಪ್ರದೇಶಕ್ಕೆ ಹತ್ತಿರವಿರುವ ಹಳ್ಳಿಗಳು ಒಂದು ರೀತಿಯಲ್ಲಿ ಆಶೀರ್ವಾದವಿದ್ದಂತೆ. ನೀವು ಅವರ ಬಗ್ಗೆ ಕಾಳಜಿ ವಹಿಸಬೇಕು. ಅವರನ್ನು ಕಾರ್ಮಿಕರು ಅಥವಾ ಹಣವನ್ನು ಪಡೆಯಲು ಕೆಲಸ ಮಾಡುತ್ತಿರುವ ಕಾರ್ಮಿಕರು ಎಂದು ಪರಿಗಣಿಸಬೇಡಿ. ಅವರು ವಾಸ್ತವವಾಗಿ ದೇವರಿಗೆ ಸೇವೆ ಮಾಡುತ್ತಿದ್ದಾರೆ. ಅವರು ನಿಮ್ಮ ಹಳ್ಳಿಯ ಅತಿಥಿಗಳು. ಅವರು ಕಷ್ಟಪಟ್ಟು ದುಡಿಯುತ್ತಿದ್ದಾರೆ. ನೀವು ಅವರನ್ನು ಎಷ್ಟು ನಿಕಟವಾಗಿ ನೋಡಿಕೊಳ್ಳುತ್ತೀರೋ, ಅಷ್ಟು ವೇಗವಾಗಿ ಕೆಲಸ ಸಾಗುತ್ತದೆ. ನೀವು ಅವರನ್ನು ನೋಡಿಕೊಳ್ಳುವಿರಾ? ನಿಮ್ಮ ಮಕ್ಕಳು, ಸಹೋದರರು ಅಥವಾ ಸಹೋದರಿಯರಂತೆ ನೀವು ಅವರನ್ನು ಜಾಗ್ರತೆಯಿಂದ ನೋಡಿಕೊಳ್ಳುವಿರಾ?
ಸ್ನೇಹಿತರೇ,
ಇಂದು ನಾನು ಬಾಬಾ ಕೇದಾರ ಅವರ ಧಾಮ್ ಗೆ ಹೋದಾಗ, ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸಹೋದರ ಸಹೋದರಿಯರೊಂದಿಗೆ ಸಂವಹನ ನಡೆಸುವ ಅವಕಾಶ ನನಗೆ ಸಿಕ್ಕಿತು. ಎಂಜಿನಿಯರ್ ಗಳೊಂದಿಗೆ ಮಾತನಾಡುವುದಕ್ಕೂ ನನಗೆ ಅವಕಾಶ ಸಿಕ್ಕಿತು. ನಾನು ಉಲ್ಲಾಸಗೊಂಡೆ. ಅವರು ನಿರ್ಮಾಣ ಕೆಲಸವನ್ನು ಮಾಡುತ್ತಿರುವುದಲ್ಲ ಎಂದು ಅವರು ಹೇಳಿದರು. ಬದಲಿಗೆ ಬಾಬಾನನ್ನು ಪೂಜಿಸುತ್ತಿದ್ದೇವೆ ಎಂದರು ಮತ್ತು ಅದು ಅವರ ಪೂಜಾ ವಿಧಾನವಾಗಿತ್ತು.
ಸ್ನೇಹಿತರೇ,
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿದ ಮೇಲೆ ನಾನು ಕೆಂಪು ಕೋಟೆಯ ಮೇಲಿನಿಂದ ಒಂದು ಮನವಿ ಮಾಡಿದ್ದೆ. ಇದು ಗುಲಾಮರ ಮನಸ್ಥಿತಿಯಿಂದ ಮುಕ್ತಿ ಸಾಧಿಸುವಂತಹ ಸಂಪೂರ್ಣ ಸ್ವಾತಂತ್ರ್ಯದ ಕರೆಯಾಗಿದೆ. ಸ್ವಾತಂತ್ರ್ಯದ ಅನೇಕ ವರ್ಷಗಳ ನಂತರ, ನಾನು ಅಂತಿಮವಾಗಿ ಏಕೆ ಇದನ್ನು ಹೇಳಬೇಕಾಯಿತು? ಅದನ್ನು ಹೇಳುವ ಅಗತ್ಯವೇನಿತ್ತು? ಏಕೆಂದರೆ ನಮ್ಮ ದೇಶವು ಎಷ್ಟೊಂದು ಪ್ರಮಾಣದಲ್ಲಿ ಗುಲಾಮರ ಮನಸ್ಥಿತಿಯ ಹಿಡಿತದಲ್ಲಿದೆಯೆಂದರೆ, ಅಭಿವೃದ್ಧಿಯ ಪ್ರತಿಯೊಂದು ಕ್ರಿಯೆಯು ಕೆಲವು ಜನರಿಗೆ ಅಪರಾಧದಂತೆ ಭಾಸವಾಗುತ್ತದೆ. ಇಲ್ಲಿ ಪ್ರಗತಿಯ ಕೆಲಸವನ್ನು ಗುಲಾಮಗಿರಿಯ ಮಾಪಕಗಳಿಂದ ತೂಗಲಾಗುತ್ತದೆ. ಹೀಗಾಗಿ, ನಮ್ಮ ಧಾರ್ಮಿಕ ಸ್ಥಳಗಳ ಅಭಿವೃದ್ಧಿಯ ಬಗ್ಗೆ ನಮಗೆ ಬಹಳ ಸಮಯದವರೆಗೆ ತಿರಸ್ಕಾರವಿತ್ತು. ಈ ಜನರಿಗೆ ಕೆಲವು ವಿದೇಶಗಳ ಸಾಂಸ್ಕೃತಿಕ ಸ್ಥಳಗಳನ್ನು ಹೊಗಳುವುದರಲ್ಲಿ ಯಾವುದೇ ಸುಸ್ತಾಗುವುದಿಲ್ಲ, ಆದರೆ ಭಾರತದಲ್ಲಿ ಕೈಗೊಳ್ಳಲಾಗುತ್ತಿರುವ ಇದೇ ರೀತಿಯ ಕೆಲಸಗಳನ್ನು ಅವರು ಕೀಳಾಗಿ ನೋಡುತ್ತಾರೆ. ಇದಕ್ಕೆ ಒಂದೇ ಒಂದು ಕಾರಣವಿದೆ – ನಮ್ಮ ಸಂಸ್ಕೃತಿಯ ಬಗ್ಗೆ ಕೀಳರಿಮೆ, ನಮ್ಮ ಧಾರ್ಮಿಕ ಸ್ಥಳಗಳಲ್ಲಿ ಅಪನಂಬಿಕೆ ಮತ್ತು ನಮ್ಮ ಪರಂಪರೆಯ ಬಗ್ಗೆ ಅಸಡ್ಡೆ. ಆದಾಗ್ಯೂ, ಇಂದು ನಮ್ಮ ಸಮಾಜದಲ್ಲಿ ಈ ಮನಸ್ಥಿತಿಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗಿಲ್ಲ. ಸ್ವಾತಂತ್ರ್ಯದ ನಂತರ ಸೋಮನಾಥ ದೇವಾಲಯ ನಿರ್ಮಾಣದ ಸಮಯದಲ್ಲಿ ಏನಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ. ನಂತರ, ರಾಮ ಮಂದಿರ ನಿರ್ಮಾಣದ ಇತಿಹಾಸದ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಅಂತಹ ಗುಲಾಮ ಮನಸ್ಥಿತಿಯು ನಮ್ಮ ಪವಿತ್ರ ನಂಬಿಕೆಯ ಸ್ಥಳಗಳನ್ನು ಶಿಥಿಲ ಸ್ಥಿತಿಗೆ ತಿರುಗಿಸಿತ್ತು. ಕಳೆದ ನೂರಾರು ವರ್ಷಗಳ ಹವಾಮಾನ ಪರಿಸ್ಥಿತಿಗಳಲ್ಲಿ ದೇವಾಲಯದ ಕಲ್ಲುಗಳು ಸವೆದುಹೋಗಿವೆ; ದೇವಾಲಯದ ಸ್ಥಳ, ಪೂಜಾಸ್ಥಳದ ಹಾದಿ, ನೀರಿನ ವ್ಯವಸ್ಥೆ ಮತ್ತು ಎಲ್ಲವೂ ವಿನಾಶದ ಸ್ಥಿತಿಗೆ ಇಳಿಯಿತು. ಸ್ನೇಹಿತರೇ, ನೆನಪಿಸಿಕೊಳ್ಳಲು ಪ್ರಯತ್ನಿಸಿ; ದಶಕಗಳ ಕಾಲ ನಮ್ಮ ಆಧ್ಯಾತ್ಮಿಕ ಕೇಂದ್ರಗಳ ಸ್ಥಿತಿ ಹೇಗಿತ್ತೆಂದರೆ, ಈ ಸ್ಥಳಗಳಿಗೆ ಪ್ರಯಾಣವು ಜೀವನದ ಅತ್ಯಂತ ಕಷ್ಟಕರವಾದ ಪ್ರಯಾಣವಾಗಿತ್ತು. ಬಹಳ ಪ್ರಾಚೀನ ಕಾಲದಿಂದಲೂ ಪೂಜಿಸಲ್ಪಡುವ ವಿವಿಧ ಸ್ಥಳಗಳು, ಜನರು ‘ದರ್ಶನ’ಕ್ಕೆ ಹೋಗುವ ಕನಸನ್ನು ಹೊಂದಿದ್ದ ಈ ಧಾರ್ಮಿಕ ಸ್ಥಳಗಳನ್ನು ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದವು. ಈ ಸ್ಥಳಗಳಿಗೆ ತಮ್ಮ ಪ್ರಜೆಗಳ ಭೇಟಿಗೆ ಅನುಕೂಲ ಮಾಡಿಕೊಡುವುದು ಅಗತ್ಯವೆಂದು ಆ ಸರ್ಕಾರಗಳಿಗೆ ಅನಿಸಲಿಲ್ಲ. ಅವರನ್ನು ಹಿಡಿದಿಟ್ಟಿದ್ದ ಗುಲಾಮರ ಮನಸ್ಥಿತಿ ಯಾವ ರೀತಿಯದ್ದೆಂದು ನನಗೆ ಗೊತ್ತಿಲ್ಲ. ಸಹೋದರರೇ ಇದು ಅನ್ಯಾಯವಲ್ಲವೇ? ಇದು ಕೇವಲ ನಿಮ್ಮ ಉತ್ತರ ಮಾತ್ರವಲ್ಲ. ಈ ಉತ್ತರವು ಎಲ್ಲಾ 130 ಕೋಟಿ ದೇಶವಾಸಿಗಳಿಗೆ ಸೇರಿದ್ದು ಮತ್ತು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸವನ್ನು ದೇವರು ನನಗೆ ನೀಡಿದ್ದಾನೆ.
ಸಹೋದರರೇ ಮತ್ತು ಸಹೋದರಿಯರೇ,
ಈ ನಿರ್ಲಕ್ಷ್ಯವು ಒಂದು ರೀತಿಯಲ್ಲಿ ಲಕ್ಷಾಂತರ ಮತ್ತು ಕೋಟ್ಯಂತರ ಸಾರ್ವಜನಿಕ ಭಾವನೆಗಳಿಗೆ ಮಾಡಿದ ಅವಮಾನವಾಗಿದೆ. ಹಿಂದಿನ ಸರ್ಕಾರಗಳ ಪಟ್ಟಭದ್ರ ಹಿತಾಸಕ್ತಿಗಳು ಇದರ ಹಿಂದೆ ಇದ್ದವು. ಆದರೆ ಸಹೋದರರೇ ಮತ್ತು ಸಹೋದರಿಯರೇ, ಈ ಜನರು ನಮ್ಮ ಸಾವಿರಾರು ವರ್ಷಗಳ ಹಳೆಯ ಸಂಸ್ಕೃತಿಯ ಶಕ್ತಿಯನ್ನು ಅರ್ಥಮಾಡಿಕೊಳ್ಳಲಿಲ್ಲ. ಈ ಯಾತ್ರಾಸ್ಥಳಗಳು ಕೇವಲ ಕಟ್ಟಡಗಳಲ್ಲ, ಅವು ನಮ್ಮ ಆತ್ಮ ಮತ್ತು ಚೈತನ್ಯ ಎಂಬುದನ್ನು ಅವರು ಮರೆತಿದ್ದರು. ಅವುಗಳು ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಸಹ ನಮಗೆ ಚೈತನ್ಯವನ್ನು ನೀಡುವಂತಹ ಶಕ್ತಿಕೇಂದ್ರಗಳಾಗಿವೆ. ಅವುಗಳ ಸಂಪೂರ್ಣ ನಿರ್ಲಕ್ಷ್ಯದ ಹೊರತಾಗಿಯೂ, ನಮ್ಮ ಆಧ್ಯಾತ್ಮಿಕ ಕೇಂದ್ರಗಳ ಪ್ರಾಮುಖ್ಯವು ಕಡಿಮೆಯಾಗಿಲ್ಲ, ಅಥವಾ ಅವುಗಳ ಕಡೆಗೆ ನಮ್ಮ ಭಕ್ತಿಯು ಕಡಿಮೆಯಾಗಿಲ್ಲ. ಮತ್ತು ಇಂದು, ಕಾಶಿ, ಉಜ್ಜಯಿನಿ, ಅಯೋಧ್ಯೆ ಮತ್ತು ಅಂತಹ ಅಸಂಖ್ಯಾತ ಯಾತ್ರಾಸ್ಥಳಗಳು ತಮ್ಮ ವೈಭವವನ್ನು ಮರಳಿ ಪಡೆಯುತ್ತಿವೆ. ಕೇದಾರನಾಥ, ಬದರೀನಾಥ್ ಮತ್ತು ಹೇಮಕುಂಡ್ ಸಾಹಿಬ್ ಗಳು ತಮ್ಮ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುತ್ತಾ ಆಧುನಿಕ ಸೌಲಭ್ಯಗಳನ್ನು ಪಡೆಯುತ್ತಿವೆ. ಅಂತಹ ಭವ್ಯವಾದ ರಾಮಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿದೆ. ಗುಜರಾತಿನ ಪಾವಗಡದ ಕಾಳಿಕಾ ದೇವಿಯ ದೇವಾಲಯದಿಂದ ವಿಂಧ್ಯಾಚಲ ದೇವಿಯ ಕಾರಿಡಾರ್ವರೆಗೆ ಭಾರತವು ತನ್ನ ಸಾಂಸ್ಕೃತಿಕ ಉನ್ನತಿಯನ್ನು ಪ್ರಕಟಿಸುತ್ತಿದೆ. ಈ ಯಾತ್ರಾಸ್ಥಳಗಳನ್ನು ತಲುಪುವುದು ಪ್ರತಿಯೊಬ್ಬ ಭಕ್ತನಿಗೂ ಈಗ ಬಹಳ ಸುಲಭ ಸಾಧ್ಯವಾಗುತ್ತಿದೆ. ಮತ್ತು ಇಲ್ಲಿ ವ್ಯವಸ್ಥೆಗಳು ಹಾಗು ಸೌಲಭ್ಯಗಳು ಅಭಿವೃದ್ಧಿ ಹೊಂದುತ್ತಿರುವುದರಿಂದ, ಇದು ವಯಸ್ಸಾದ ಹಿರಿಯರಿಗೆ ಸಹಾಯ ಮಾಡುವುದಲ್ಲದೆ, ನನ್ನ ದೇಶದ ಹೊಸ ಪೀಳಿಗೆಯನ್ನು ಅಥವಾ 12-22 ವರ್ಷದ ಪುತ್ರರು ಮತ್ತು ಪುತ್ರಿಯರನ್ನು ಸಹ ಆಕರ್ಷಿಸಲಿದೆ. ಅದು ನಮ್ಮ ನೀತಿಯಾಗಬೇಕು. ಈಗ ನಮ್ಮ ದಿವ್ಯಾಂಗ ಸ್ನೇಹಿತರು ಸಹ ಈ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ನಾನು ಗಿರ್ನಾರ್ ನಲ್ಲಿ ರೋಪ್ ವೇಯನ್ನು ನಿರ್ಮಿಸಿದಾಗ, 80 ವರ್ಷದ ಹಿರಿಯ ನಾಗರಿಕರು ಆ ಸ್ಥಳಕ್ಕೆ ಭೇಟಿ ನೀಡಿದ ನಂತರ ನನಗೆ ಪತ್ರ ಬರೆಯುತ್ತಿದ್ದರು ಎಂಬುದು ನನಗೆ ಇನ್ನೂ ನೆನಪಿದೆ. ಇಷ್ಟು ಸ್ಥಳಗಳಲ್ಲಿ ಪೂಜೆ ಸಲ್ಲಿಸಲು ಗಿರ್ನಾರ್ ಪರ್ವತಕ್ಕೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಅವರು ಎಂದಿಗೂ ಊಹನೆಯನ್ನೂ ಮಾಡಿರಲಿಲ್ಲ. ಇಂದು ಅವರು ರೋಪ್ ವೇಗಾಗಿ ತಮ್ಮ ಆಶೀರ್ವಾದಗಳ ಮಳೆಯನ್ನು ಸುರಿಯುತ್ತಿದ್ದಾರೆ.
ಸ್ನೇಹಿತರೇ,
ಅನೇಕ ಜನರು ಈ ಶಕ್ತಿಯನ್ನು ಸಹ ಗುರುತಿಸುವುದಿಲ್ಲ. ಇಂದು ಇಡೀ ದೇಶವು ತನ್ನ ಯಾತ್ರಾಸ್ಥಳಗಳ ಬಗ್ಗೆ ಹೆಮ್ಮೆಯ ಭಾವನೆಯನ್ನು ತುಂಬಿಕೊಂಡಿದೆ. ಉತ್ತರಾಖಂಡದ ಈ ದೇವಭೂಮಿಯೇ ಈ ಬದಲಾವಣೆಗೆ ಸಾಕ್ಷಿಯಾಗಿದೆ. ಡಬಲ್ ಇಂಜಿನ್ ಸರ್ಕಾರ ರಚನೆಯಾಗುವ ಮೊದಲು, ಒಂದು ಋತುವಿನಲ್ಲಿ ಗರಿಷ್ಠ 5 ಲಕ್ಷ ಭಕ್ತರು ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದರು. ಈಗ ಈ ಋತುವಿನಲ್ಲಿ ಈ ಸಂಖ್ಯೆ 45 ಲಕ್ಷಕ್ಕೆ ಏರಿದೆ!
ಸ್ನೇಹಿತರೇ,
ಯಾತ್ರಾಸ್ಥಳಗಳನ್ನು ಪುನರುಜ್ಜೀವಗೊಳಿಸುವುದರಲ್ಲಿ ಮತ್ತೊಂದು ಅಂಶವಿದೆ, ಅದನ್ನು ಸಾಕಷ್ಟು ಚರ್ಚಿಸಲಾಗಿಲ್ಲ; ಮತ್ತು ಅದು ಜನರ ಸುಲಭ ಜೀವನ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಯುವಕರಿಗೆ ಉದ್ಯೋಗಾವಕಾಶಗಳು. ರೈಲು, ರಸ್ತೆ ಮತ್ತು ರೋಪ್ ವೇ ಪರ್ವತಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವಾಗ, ಅವು ತಮ್ಮೊಂದಿಗೆ ಉದ್ಯೋಗಾವಕಾಶಗಳನ್ನು ತರುತ್ತವೆ. ಅಂತೆಯೇ, ಪರ್ವತಗಳ ಮೇಲಿನ ಜೀವನವು ಇನ್ನೂ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತದೆ, ಐಷಾರಾಮಿ ಮತ್ತು ಸುಲಭವಾಗುತ್ತದೆ. ಈ ಸೌಲಭ್ಯಗಳು ಪರ್ವತಗಳಲ್ಲಿನ ಪ್ರವಾಸೋದ್ಯಮವನ್ನು ವಿಸ್ತರಿಸುತ್ತವೆ ಮತ್ತು ಸಾರಿಗೆಯನ್ನು ಸುಲಭಗೊಳಿಸುತ್ತವೆ. ಈಗ ನಮ್ಮ ಸರ್ಕಾರವು ಪರ್ವತಗಳ ಮೇಲೆ ಸರಕುಗಳನ್ನು ಸಾಗಿಸುವ ಪ್ರಮುಖ ಸಾಧನವಾಗಿ ಡ್ರೋನ್ ಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಕೆಲಸ ಮಾಡುತ್ತಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಡ್ರೋನ್ ಗಳು 20 ಕೆಜಿ, 25 ಕೆಜಿ ಅಥವಾ 50 ಕೆಜಿ ಸರಕುಗಳನ್ನು ಎತ್ತಿಕೊಂಡು ಇತರ ಸ್ಥಳಗಳಲ್ಲಿ ಹೆಚ್ಚಿನ ವೇಗದಲ್ಲಿ ಇಳಿಸಬಲ್ಲವು. . ನಾವು ಈ ತಂತ್ರಜ್ಞಾನವನ್ನು ತರಲು ಬಯಸುತ್ತೇವೆ, ಇದರಿಂದ ನಿಮ್ಮ ಸ್ಥಳದಲ್ಲಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳು ತಾಜಾವಾಗಿರುವಾಗಲೇ ದೊಡ್ಡ ನಗರಗಳನ್ನು ತಲುಪಬಹುದು ಮತ್ತು ನಿಮ್ಮ ಗಳಿಕೆಯೂ ಹೆಚ್ಚಾಗಬಹುದು. ಇಂದು ನಾನು ಭಾರತದ ಗಡಿಯಲ್ಲಿ ದೇಶವನ್ನು ರಕ್ಷಿಸುತ್ತಿರುವ ಗ್ರಾಮಸ್ಥರ ನಡುವೆ ಇದ್ದೇನೆ. ಸ್ವಸಹಾಯ ಗುಂಪುಗಳ ನಮ್ಮ ತಾಯಂದಿರು ಮತ್ತು ಸಹೋದರಿಯರು ವಿವಿಧ ಉತ್ಪನ್ನಗಳನ್ನು, ಮಸಾಲೆಗಳು, ಪರ್ವತದ ಉಪ್ಪು ಮತ್ತು ಇತ್ಯಾದಿಗಳನ್ನು ಹೇಗೆ ಉತ್ಪಾದಿಸುತ್ತಿದ್ದಾರೆ ಎಂಬುದನ್ನು ನಾನು ನೋಡುತ್ತಿದ್ದೆ. ಪ್ಯಾಕೇಜಿಂಗ್ ಕೂಡ ನನಗೆ ನಿಜವಾಗಿಯೂ ತುಂಬಾ ಸಂತೋಷವನ್ನುಂಟು ಮಾಡಿದೆ. ತಾಯಂದಿರು ಮತ್ತು ಸಹೋದರಿಯರು ಮಾಡಿದ ಅದ್ಭುತ ಕೆಲಸಕ್ಕಾಗಿ ನಾನು ಅವರಿಗೆ ನಮಸ್ಕರಿಸುತ್ತೇನೆ. ಆದರೆ ಭಾರತದಾದ್ಯಂತದಿಂದ ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ನಾನು ಒಂದು ವಿನಂತಿಯನ್ನು ಹೊಂದಿದ್ದೇನೆ. ನೀವು ಸಾಹಸಕ್ಕಾಗಿ ಅಥವಾ ಆಧ್ಯಾತ್ಮಿಕತೆಗಾಗಿ ಇಲ್ಲಿಗೆ ಬರುವಾಗ, ನಿಮ್ಮ ಖರ್ಚುವೆಚ್ಚಗಳ ರೂಪುರೇಷೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಸಾರಿಗೆ, ಆಹಾರ ಮತ್ತು ಹೋಟೆಲ್ ಗಳಿಗಾಗಿ ನೀವು ಎಷ್ಟು ಖರ್ಚು ಮಾಡುತ್ತಿದ್ದೀರಿ? ಭಾರತ-ಚೀನಾ ಗಡಿಯಲ್ಲಿರುವ ಮತ್ತು ಭಾರತದ ಈ ಗಡಿಯನ್ನು ಕಾಯುತ್ತಿರುವ ಭಾರತದ ಆ ಹಳ್ಳಿಯಿಂದ ಎಲ್ಲಾ 130 ಕೋಟಿ ದೇಶವಾಸಿಗಳಿಗೆ ನಾನು ಈ ವಿನಂತಿಯನ್ನು ಮಾಡುತ್ತಿದ್ದೇನೆ. ಆದ್ದರಿಂದ, ನಾನು ಈ ಗ್ರಾಮದ ಪರವಾಗಿ ಮಾತನಾಡುತ್ತಿದ್ದೇನೆ. ಈಗ ನಾನು ಸಾಮಾನ್ಯವಾಗಿ ‘ವೋಕಲ್ ಫಾರ್ ಲೋಕಲ್’ ಬಗ್ಗೆ ಮಾತನಾಡುತ್ತೇನೆ. ಆದ್ದರಿಂದ ದಯವಿಟ್ಟು ನೀವು ಎಲ್ಲಿಗೆ ಪ್ರಯಾಣಿಸಿದರೂ, ನೀವು ಈ ಕಠಿಣ ಭೂಪ್ರದೇಶಕ್ಕೆ ಬಂದಿರಲಿ ಅಥವಾ ಪುರಿ, ಕನ್ಯಾಕುಮಾರಿ ಅಥವಾ ಸೋಮನಾಥಕ್ಕೆ ಹೋಗಿರಿ, ದಯವಿಟ್ಟು ನಿಮ್ಮ ಪ್ರಯಾಣ ವೆಚ್ಚದ 5 ಪ್ರತಿಶತದಷ್ಟನ್ನು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಕಾಯ್ದಿರಿಸುವ ನಿರ್ಧಾರವನ್ನು ಮಾಡಿ. ಇಂದು ನಾನು ಈ ವಿನಂತಿಯನ್ನು ಮಾಡುತ್ತಿದ್ದೇನೆ. ನಾನು ನನ್ನ ದೇಶವಾಸಿಗಳಿಗೆ ಆಜ್ಞೆ ಮಾಡಲು ಸಾಧ್ಯವಿಲ್ಲ ಆದರೆ ನಾನು ಯಾವಾಗಲೂ ದೇಶವಾಸಿಗಳಿಗೆ ವಿನಂತಿಸಬಲ್ಲೆ. ನಿಮ್ಮ ಪ್ರಯಾಣಕ್ಕಾಗಿ ನೀವು 100 ರೂ.ಗಳನ್ನು ಖರ್ಚು ಮಾಡಿದರೆ, ಸ್ಥಳೀಯ ಜನರು ತಯಾರಿಸಿದ ಆ ಪ್ರದೇಶದ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ದಯವಿಟ್ಟು 5 ರೂಪಾಯಿಗಳನ್ನು ಬಳಸಿ. ನೀವು ಈಗಾಗಲೇ ಮನೆಯಲ್ಲಿ ಆ ಒಂದು ಉತ್ಪನ್ನವನ್ನು ಹೊಂದಿದ್ದರೆ, ಇನ್ನೊಂದನ್ನು ಖರೀದಿಸಲು ಹಿಂಜರಿಯಬೇಡಿ. ನೀವು ಅದನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಬಹುದು. ಆದರೆ ದಯವಿಟ್ಟು ಅದನ್ನು ಖರೀದಿಸಿ. ಈ ಪ್ರದೇಶಗಳಲ್ಲಿನ ಜನರ ಆದಾಯವು ಹೆಚ್ಚಾಗುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ! ಸ್ವಲ್ಪ ಸಮಯದ ಹಿಂದೆ, ಕೆಲವು ತಾಯಂದಿರು ಮತ್ತು ಸಹೋದರಿಯರು ಈ ಬಾರಿ ಪ್ರವಾಸಿಗರ ಸಂಖ್ಯೆ ದೊಡ್ಡದಾಗಿದೆ ಎಂದು ನನಗೆ ಹೇಳುತ್ತಿದ್ದರು. ಆದ್ದರಿಂದ, ಅವರ ಒಟ್ಟು ಮಾರಾಟದ ಬಗ್ಗೆ ನಾನು ಅವರನ್ನು ಕೇಳಿದೆ. ಅವರು ನನಗೆ ಹೇಳಲು ಹಿಂಜರಿಯುತ್ತಿದ್ದರು. ನಾನು ಒತ್ತಾಯಿಸಿದಾಗ, ಈ ಬಾರಿ ಅದು ಸುಮಾರು 2.5 ಲಕ್ಷ ರೂಪಾಯಿಗಳು ಎಂದು ಅವರು ನನಗೆ ಹೇಳಿದರು. ಅವರಿಗೆ ತೃಪ್ತಿಯಿತ್ತು. ಎಲ್ಲಾ ಪ್ರಯಾಣಿಕರು ಮತ್ತು ಪ್ರವಾಸಿಗರು ತಮ್ಮ ಪ್ರಯಾಣದ ಬಜೆಟ್ ನ 5 ಪ್ರತಿಶತದಷ್ಟನ್ನು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಮೀಸಲಿಟ್ಟರೆ, ಅವರು ಈ ಕೊಡುಗೆಯಿಂದ ತೃಪ್ತರಾಗುತ್ತಾರೆ. ಪ್ರವಾಸದ ಸಮಯದಲ್ಲಿ ಉತ್ತರಾಖಂಡದಿಂದ ತಾವು ಖರೀದಿಸಿದ ವರ್ಣಚಿತ್ರವನ್ನು ಅಲ್ಲಿನ ಹಿರಿಯ ಮಹಿಳೆಯೊಬ್ಬರು ಚಿತ್ರಿಸಿದ್ದಾರೆ ಎಂದು ನೀವು ನಿಮ್ಮ ಮಕ್ಕಳಿಗೆ ಹೇಳಬಹುದು. ಮತ್ತು ಪೇಂಟಿಂಗ್ ಗಾಗಿ ಖರ್ಚು ಮಾಡಿದ ಸ್ವಲ್ಪ ಹಣವು ಆ ಹಿರಿಯ ಜೀವಕ್ಕೆ ಸಹಾಯ ಮಾಡುತ್ತದೆ. ಇದರಿಂದ ನೀವು ಅತ್ಯಂತ ಸಂತೋಷ ಮತ್ತು ಸಂತೃಪ್ತಿಯನ್ನು ಅನುಭವಿಸುವಿರಿ. ಆದ್ದರಿಂದಾಗಿಯೇ, ನಾನು ಇಲ್ಲಿಂದ ಇಡೀ ದೇಶಕ್ಕೆ ಈ ವಿನಂತಿಯನ್ನು ಮಾಡುತ್ತಿದ್ದೇನೆ.
ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ,
ಪರ್ವತಗಳಲ್ಲಿ ವಾಸಿಸುವ ಜನರು ತಮ್ಮ ಕಠಿಣ ಪರಿಶ್ರಮದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಧೈರ್ಯಕ್ಕೂ ಹೆಸರುವಾಸಿಯಾಗಿದ್ದಾರೆ. ಅವರು ಪ್ರಕೃತಿಯ ಬಗ್ಗೆ ದೂರು ನೀಡುವುದಿಲ್ಲ. ಅವರು ಸವಾಲುಗಳೊಂದಿಗೆ ಬದುಕಲು ಕಲಿಯುತ್ತಾರೆ. ಆದರೆ ಹಿಂದಿನ ಸರ್ಕಾರಗಳ ಆಳ್ವಿಕೆಯಲ್ಲಿ, ಬೆಟ್ಟಗಳಲ್ಲಿ ವಾಸಿಸುವ ಜನರ ಅಧಿಕಾರವನ್ನು ಅವರ ವಿರುದ್ಧ ಬಳಸಲಾಯಿತು. ದಶಕಗಳಿಂದ, ಸರ್ಕಾರಗಳು ಬೆಟ್ಟಗಳಲ್ಲಿ ವಾಸಿಸುವ ಜನರನ್ನು ಅವರು ಕಠಿಣ ಪರಿಶ್ರಮಿಗಳು ಎಂದು ನಂಬಿಕೊಂಡು ನಿರ್ಲಕ್ಷಿಸಿದ್ದವು; ಅವರ ಧೈರ್ಯವು ಪರ್ವತದಂತೆ ಬಲವಾಗಿದೆ; ಅವರು ಪ್ರಬಲರಾಗಿದ್ದಾರೆ. ಆದ್ದರಿಂದ ಅವರಿಗೆ ಏನೂ ಬೇಕಾಗಿಲ್ಲ; ಅವರು ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ನಿಲುವು ತಳೆದಿದ್ದವು. ಇದು ಅವರ ಶಕ್ತಿಗೆ ಮಾಡಿದ ಅನ್ಯಾಯವಾಗಿತ್ತು. ಹೌದು ಅವರು ಪ್ರಬಲರಾಗಿದ್ದಾರೆ. ಆದರೆ ಅದರರ್ಥ ಅವರು ತಮ್ಮ ಪಾಡನ್ನು ತಾವು ನೋಡಿಕೊಳ್ಳಲಿ ಎಂದು ಉದಾಸ ಭಾವನೆಯನ್ನು ತಳೆಯುವುದಲ್ಲ. ಅವರಿಗೂ ಸೌಲಭ್ಯಗಳು ಬೇಕು. ಗುಡ್ಡಗಾಡು ಪ್ರದೇಶದ ಜನರಿಗೂ ಕಷ್ಟದ ಪರಿಸ್ಥಿತಿಯಲ್ಲಿ ಸಹಾಯ ಲಭ್ಯವಾಗಬೇಕು. ಸರ್ಕಾರದ ಯೋಜನೆಗಳ ಸೌಲಭ್ಯಗಳು ಮತ್ತು ಪ್ರಯೋಜನಗಳನ್ನು ಒದಗಿಸುವ ವಿಷಯಕ್ಕೆ ಬಂದಾಗ, ಬೆಟ್ಟಗಳಿಗೆ ಕಡಿಮೆ ಆದ್ಯತೆ ನೀಡಲಾಯಿತು. ಈ ಮನಸ್ಥಿತಿಯೊಂದಿಗೆ ದೇಶವು ಹೇಗೆ ಮುಂದುವರಿಯಬಲ್ಲುದು? ಬೆಟ್ಟಗಳಲ್ಲಿ ವಾಸಿಸುವ ಜನರ ವಿರುದ್ಧ ನಡೆಯುತ್ತಿರುವ ಈ ಅನ್ಯಾಯವನ್ನು ನಾನು ಕೊನೆಗಾಣಿಸಬೇಕಾಯಿತು. ಆದ್ದರಿಂದ, ನಾವು ಈ ಹಿಂದೆ ದೇಶದ ಕೊನೆಯ ಪ್ರದೇಶಗಳಾಗಿ ನಿರ್ಲಕ್ಷಿಸಲ್ಪಟ್ಟ ಪ್ರದೇಶಗಳಿಂದ ಅಭಿವೃದ್ಧಿ-ಸಂಬಂಧಿತ ಕೆಲಸಗಳನ್ನು ಪ್ರಾರಂಭಿಸಿದ್ದೇವೆ. ಈ ಹಿಂದೆ ನಿರ್ಲಕ್ಷಿಸಲ್ಪಟ್ಟ ಸ್ಥಳಗಳಲ್ಲಿನ ಜನರ ನಿರೀಕ್ಷೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ನಾವು ಕೆಲಸ ಮಾಡಲು ಪ್ರಾರಂಭಿಸಿದ್ದೇವೆ ಏಕೆಂದರೆ ಅವು ದೇಶದ ಕೊನೆಯ ಗ್ರಾಮಗಳಾಗಿದ್ದವು.
ಈ ಹಿಂದೆ, ದೇಶದ ಅಭಿವೃದ್ಧಿಯಲ್ಲಿ ಯಾರ ಕೊಡುಗೆಗೆ ಪ್ರಾಮುಖ್ಯತೆ ನೀಡಲಾಗಿರಲಿಲ್ಲವೋ, ಅವರನ್ನು ಜೊತೆಯಲ್ಲಿ ಕರೆದೊಯ್ಯುವ ಮೂಲಕ ಅಭಿವೃದ್ಧಿಯ ಮಹತ್ವಾಕಾಂಕ್ಷೆಯ ಗುರಿಗಳತ್ತ ಸಾಗಲು ನಾವು ನಿರ್ಧರಿಸಿದ್ದೇವೆ. ಪರ್ವತದ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನಾವು ಪ್ರಯತ್ನಿಸಿದೆವು, ಇದರಿಂದ ಅಲ್ಲಿನ ಜನರ ಶಕ್ತಿಯು ಆ ಸವಾಲುಗಳ ವಿರುದ್ಧ ಹೋರಾಡುವಲ್ಲಿ ವ್ಯರ್ಥವಾಗುವುದಿಲ್ಲ. ಏಕೆಂದರೆ ಅದು ನಮಗೆ ಸ್ವೀಕಾರಾರ್ಹವಲ್ಲ. ನಾವು ಪ್ರತಿಯೊಂದು ಹಳ್ಳಿಗೂ ವಿದ್ಯುಚ್ಛಕ್ತಿಯನ್ನು ಒದಗಿಸುವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಅದರ ಪ್ರಯೋಜನಗಳನ್ನು ಗುಡ್ಡಗಾಡು ಪ್ರದೇಶಗಳ ಸಹೋದರ ಸಹೋದರಿಯರು ಪಡೆಯುತ್ತಿದ್ದಾರೆ. ನಾನು ಇಲ್ಲಿ ಗ್ರಾಮದ ಸರಪಂಚ್ ಸಹೋದರಿಯನ್ನು ಭೇಟಿಯಾದೆ. ಎಲ್ಲ ಶೌಚಾಲಯಗಳನ್ನು ನಿರ್ಮಿಸಲಾಗಿದೆಯೇ ಎಂದು ನಾನು ಆಕೆಯನ್ನು ಕೇಳಿದೆ. ಆಕೆ ಹೌದು ಎಂದು ಉತ್ತರಿಸಿದರು. ನೀರು ಅವರಿಗೆ ತಲುಪುತ್ತಿದೆಯೇ ಎಂದು ನಾನು ಆಕೆಯನ್ನು ಕೇಳಿದೆ. ಪೈಪ್ ಗಳನ್ನು ಹಾಕಲಾಗುತ್ತಿದೆ ಎಂದು ಆಕೆ ಹೇಳಿದರು. ಆಕೆಯ ಮುಖದಲ್ಲಿ ಸಾಕಷ್ಟು ಸಂತೋಷವಿತ್ತು. ತನ್ನ ಹಳ್ಳಿಯಲ್ಲಿ ಕೆಲಸ ನಡೆಯುತ್ತಿರುವ ಬಗ್ಗೆ ಸಂತೋಷವಿತ್ತು. ಆದ್ದರಿಂದ, ಆಕೆ ನನಗೆ ಹೆಮ್ಮೆಯಿಂದ ಎಲ್ಲವನ್ನೂ ಹೇಳುತ್ತಿದ್ದರು. ನಾವು ‘ಹರ್ ಘರ್ ಜಲ್’ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಇದರಿಂದಾಗಿ ಇಂದು ಉತ್ತರಾಖಂಡದಲ್ಲಿ ಶೇಕಡಾ 65 ಕ್ಕೂ ಹೆಚ್ಚು ಕುಟುಂಬಗಳು ಕೊಳವೆ ಮೂಲಕ ನೀರು ಪೂರೈಕೆ ಸೌಲಭ್ಯವನ್ನು ಹೊಂದಿವೆ. ನಾವು ಪ್ರತಿ ಪಂಚಾಯತ್ ಅನ್ನು ಆಪ್ಟಿಕಲ್ ಫೈಬರ್ನೊಂದಿಗೆ ಸಂಪರ್ಕಿಸುವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಇದರಿಂದಾಗಿ ಡಿಜಿಟಲ್ ಸಂಪರ್ಕವು ಇಂದು ಉತ್ತರಾಖಂಡದ ಪ್ರತಿಯೊಂದು ಮೂಲೆ ಮೂಲೆಯನ್ನು ತಲುಪುತ್ತಿದೆ. ಇಲ್ಲಿನ ಜನರು ಆನ್ ಲೈನ್ ಅಥವಾ ಡಿಜಿಟಲ್ ರೂಪದಲ್ಲಿ ಹಣವನ್ನು ಸ್ವೀಕರಿಸುತ್ತಿದ್ದಾರೆ ಎಂಬುದನ್ನು ನಾನು ಇಂದು ಸ್ವತಃ ನೋಡುತ್ತಿದ್ದೇನೆ. ನಮ್ಮ ಪಾರ್ಲಿಮೆಂಟಿನಲ್ಲಿರುವ ‘ಬುದ್ಧಿಜೀವಿಗಳ’ ಒಂದು ವರ್ಗಕ್ಕೆ ಮನಾಕ್ಕೆ ಬಂದು ಭೇಟಿ ನೀಡುವಂತೆ ನಾನು ಹೇಳಲು ಬಯಸುತ್ತೇನೆ. ಎಂಟನೇ ತರಗತಿಯವರೆಗೆ ಓದಿರುವ ನನ್ನ ತಾಯಂದಿರು ಮನಾದಲ್ಲಿ ಡಿಜಿಟಲ್ ಪಾವತಿಗಳನ್ನು ಹೇಗೆ ಸ್ವೀಕರಿಸುತ್ತಿದ್ದಾರೆ ಎಂದು ಬಂದು ನೋಡಿ. ಮೇಲೆ ಪೇಟಿಎಂ ಎಂದು ಬರೆಯಲಾಗಿದೆ ಮತ್ತು ಅದರ ಕೆಳಗೆ ಕ್ಯೂಆರ್ ಕೋಡ್ ಇದೆ. ಅವರು ಇದನ್ನು ತಮ್ಮ ಉತ್ಪನ್ನಗಳ ಮುಂದೆ ಇಟ್ಟಿದ್ದಾರೆ. ನನ್ನ ದೇಶದ ಮನಾ ಗ್ರಾಮದ ಜನರ ಈ ಶಕ್ತಿಯನ್ನು ನೋಡಲು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ನಾವು ಹಳ್ಳಿಗಳಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ತೆರೆಯುವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಇದರಿಂದಾಗಿ ವೈದ್ಯಕೀಯ ಸೌಲಭ್ಯಗಳು ಇಂದು ಹಳ್ಳಿಯನ್ನು ತಲುಪುತ್ತಿವೆ. ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಈ ಅಭಿಯಾನಗಳಿಂದ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಇಂದು ದೇಶದ ಮೂಲೆ ಮೂಲೆಯಲ್ಲಿರುವ ಜನರು ಬಡವರ ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಸಂವೇದನಾಶೀಲ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಅನುಭವವನ್ನು ಪಡೆಯುತ್ತಿದ್ದಾರೆ. ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ, ಹಿಂದಿನ ಸರ್ಕಾರಗಳು ಅಧಿಕಾರದಲ್ಲಿದ್ದರೆ ಲಸಿಕೆಗಳು ಈ ಸ್ಥಳವನ್ನು ತಲುಪುತ್ತಿರಲಿಲ್ಲ. ಆದರೆ ಇದು ಮೋದಿ ಸರ್ಕಾರ. ಕೊರೊನಾ ಹರಡುತ್ತಿರುವ ವೇಗಕ್ಕಿಂತ ವೇಗವಾಗಿ ನಾವು ಲಸಿಕೆಗಳನ್ನು ಪರ್ವತಗಳಿಗೆ ಕೊಂಡೊಯ್ಯುವ ಅಗತ್ಯವಿದೆ ಎಂದು ನಾನು ಹೇಳಿದೆ. ಮತ್ತು ನಾನು ಸರ್ಕಾರವನ್ನು, ನನ್ನ ಉತ್ತರಾಖಂಡವನ್ನು ಮತ್ತು ನನ್ನ ಹಿಮಾಚಲವನ್ನು ಅಭಿನಂದಿಸುತ್ತೇನೆ. ಈ ಎರಡು ರಾಜ್ಯಗಳು ಲಸಿಕೆ ನೀಡಿಕೆ (ವ್ಯಾಕ್ಸಿನೇಷನ್) ಕೆಲಸವನ್ನು ಪೂರ್ಣಗೊಳಿಸಿದ ಮೊದಲ ರಾಜ್ಯಗಳಾಗಿವೆ. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಜನರು ಹಸಿವಿನಿಂದ ಬಳಲಬೇಕಾಗಿಲ್ಲ ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲಬೇಕಾಗಿಲ್ಲ ಎಂದು ನಾವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯಿಂದಾಗಿ, ಉತ್ತರಾಖಂಡದ ಲಕ್ಷಾಂತರ ಜನರು ಸಹ ಉಚಿತ ಆಹಾರ ಧಾನ್ಯಗಳನ್ನು ಪಡೆದುಕೊಂಡಿದ್ದಾರೆ ಮತ್ತು ಅಡುಗೆ ನಿಲ್ಲಿಸದಂತೆ ಮತ್ತು ಯಾವುದೇ ಮಗು ಹಸಿವಿನಿಂದ ಮಲಗದಂತೆ ನಾವು ಖಚಿತಪಡಿಸಿದ್ದೇವೆ. ಆದುದರಿಂದ, ಸಹೋದರ ಸಹೋದರಿಯರೇ, ನಾವು ಈ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಶಕ್ತರಾದೆವು. ಕೆಲವು ಸಮಯದ ಹಿಂದೆ ನಮ್ಮ ಸರ್ಕಾರವು ಈ ಯೋಜನೆಯ ಅವಧಿಯನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ, ಇದರಿಂದಾಗಿ ನಮ್ಮ ಬಡ ಕುಟುಂಬಗಳು ಈ ಹಬ್ಬದ ದಿನಗಳಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಡಬಲ್ ಇಂಜಿನ್ ಸರ್ಕಾರದ ಪ್ರಯತ್ನಗಳಿಂದಾಗಿ, ಈಗ ಉತ್ತರಾಖಂಡದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತೊಮ್ಮೆ ವೇಗ ಪಡೆಯುತ್ತಿವೆ. ಇಲ್ಲಿಂದ ವಲಸೆ ಬಂದವರು ಈಗ ತಮ್ಮ ಹಳೆಯ ಮನೆಗಳಿಗೆ ಮರಳುತ್ತಿದ್ದಾರೆ. ಹೋಂಸ್ಟೇಗಳು, ಅತಿಥಿ ಗೃಹಗಳು, ಡಾಬಾಗಳು ಮತ್ತು ಸಣ್ಣ ಅಂಗಡಿಗಳ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿದೆ. ಈ ಸೌಲಭ್ಯಗಳು ಮತ್ತು ಉತ್ತರಾಖಂಡದಲ್ಲಿ ಪ್ರವಾಸೋದ್ಯಮದ ವಿಸ್ತರಣೆಯು ಅದರ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಡಬಲ್ ಇಂಜಿನ್ ನ ಸರ್ಕಾರವು ಯುವಜನರ ಕೌಶಲ್ಯ ಅಭಿವೃದ್ಧಿಗಾಗಿ ನಿರಂತರವಾಗಿ ಆರ್ಥಿಕ ನೆರವನ್ನು ಒದಗಿಸುತ್ತಿದೆ ಮತ್ತು ಇಲ್ಲಿ ಹೋಂ-ಸ್ಟೇ ಸೌಲಭ್ಯಗಳನ್ನು ಹೆಚ್ಚಿಸಲು ಅವರಿಗೆ ಸಹಾಯ ಮಾಡುತ್ತಿದೆ ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ಗಡಿ ಪ್ರದೇಶಗಳ ಯುವಕರನ್ನು ಎನ್ ಸಿಸಿಗೆ ಪರಿಚಯಿಸುವ ಅಭಿಯಾನವು ಯುವಕರನ್ನು ಉಜ್ವಲ ಭವಿಷ್ಯಕ್ಕಾಗಿ ಸಿದ್ಧಪಡಿಸುತ್ತಿದೆ. ದೇಶಾದ್ಯಂತದ ಗಡಿ ಪ್ರದೇಶಗಳಲ್ಲಿನ ಉತ್ತಮ ಶಾಲೆಗಳು ಅಲ್ಲಿ ಎನ್ ಸಿಸಿ ಯನ್ನು ಸಹ ಅಳವಡಿಸಿಕೊಂಡಿವೆ. ಎನ್ ಸಿಸಿ ಯನ್ನು ಮುಖ್ಯವಾಗಿ ಅಹಮದಾಬಾದ್, ಮುಂಬೈ ಮತ್ತು ಚೆನ್ನೈನಲ್ಲಿ 75 ವರ್ಷಗಳ ಕಾಲ ನಡೆಸಲಾಗುತ್ತಿತ್ತು. ಈಗ ಈ ಹಳ್ಳಿಗಳಲ್ಲಿ ಎನ್ ಸಿಸಿ ಪ್ರಾರಂಭವಾಗಲಿದೆ. ಮತ್ತು ನನ್ನ ಹಳ್ಳಿಗಳ ಮಕ್ಕಳು ಅಪಾರ ಪ್ರಯೋಜನಗಳನ್ನು ಪಡೆಯುತ್ತಾರೆ.
ಸ್ನೇಹಿತರೇ,
ನಮ್ಮ ಗುಡ್ಡಗಾಡು ಪ್ರದೇಶಗಳಲ್ಲಿನ ಜನರ ಅತಿದೊಡ್ಡ ಸವಾಲು ಸಂಪರ್ಕ. ಸಂಪರ್ಕವಿಲ್ಲದಿದ್ದರೆ, ಪರ್ವತದ ಮೇಲಿನ ಜೀವನವು ಸ್ಥಗಿತಗೊಳ್ಳುತ್ತದೆ. ನಮ್ಮ ಡಬಲ್ ಎಂಜಿನ್ ಸರ್ಕಾರವು ಈ ಸವಾಲನ್ನು ಕೂಡಾ ಪರಿಹರಿಸುತ್ತಿದೆ. ಇಂದು ಉತ್ತರಾಖಂಡಕ್ಕೆ ಬಹು ಮಾದರಿ ಸಂಪರ್ಕವನ್ನು ಒದಗಿಸಲು ಎಲ್ಲ ವಿಧಾನಗಳನ್ನು ರೂಪಿಸಲಾಗುತ್ತಿದೆ. ಹಿಮಾಲಯದ ಹಸಿರು ಬೆಟ್ಟಗಳ ಮೇಲೆ ರೈಲಿನ ಶಬ್ದವು ಉತ್ತರಾಖಂಡದ ಅಭಿವೃದ್ಧಿಯ ಹೊಸ ಕಥೆಯನ್ನು ಬರೆಯಲಿದೆ. ಡೆಹ್ರಾಡೂನ್ ವಿಮಾನ ನಿಲ್ದಾಣವು ಈಗ ಹೊಸ ಅವತಾರದಲ್ಲಿ ಸೇವೆ ಸಲ್ಲಿಸುತ್ತಿದೆ. ನಾನು ಆಗ ತಾನೇ ಹಿಮಾಚಲ ಪ್ರದೇಶಕ್ಕೆ ಹೋಗಿದ್ದೆ ಮತ್ತು ಅಲ್ಲಿ ವಂದೇ ಭಾರತ್ ರೈಲನ್ನು ಪ್ರಾರಂಭಿಸಿದೆ. ಹಳ್ಳಿಗಳಲ್ಲಿ ಹಳೆಯ ತಲೆಮಾರಿನ ಕೆಲವು ಜನರು ಅಲ್ಲಿ ರೈಲನ್ನು ಎಂದೂ ನೋಡಿರಲಿಲ್ಲ ಎಂದು ಅನೇಕ ಜನರು ನನಗೆ ಹೇಳಿದರು. ಆದರೆ ಈಗ ವಂದೇ ಭಾರತ್ ರೈಲು ಹಿಮಾಚಲದಲ್ಲಿ ಪ್ರಾರಂಭವಾಗಿದೆ. ವಂದೇ ಭಾರತ್ ರೈಲು ಹಿಮಾಚಲದ ಒಂದೇ ಒಂದು ನಿಲ್ದಾಣದಲ್ಲಿ ನಿಲ್ಲುತ್ತದೆಯಾದರೂ, ಇದು ಹಿಮಾಚಲ ಮತ್ತು ಬೆಟ್ಟಗಳ ಜನರಿಗೆ ಒಂದು ಅದ್ಭುತ ಕೊಡುಗೆಯಾಗಿದೆ. ಚತುಷ್ಪಥ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳು ಶೀಘ್ರದಲ್ಲೇ ಬರಲಿವೆ, ಇದು ಹಿಮಾಚಲ ಮತ್ತು ಉತ್ತರಾಖಂಡ್ ನಡುವೆ ಪ್ರಯಾಣಿಸಲು ನಿಮಗೆ ಸಹಾಯ ಮಾಡುತ್ತದೆ. ದೆಹಲಿ ಮತ್ತು ಉತ್ತರ ಪ್ರದೇಶದಿಂದ ಉತ್ತರಾಖಂಡಕ್ಕೆ ಪ್ರಯಾಣಿಸುವ ಜನರಿಗೂ ಸಹ ಪ್ರಯೋಜನವಾಗಲಿದೆ. ಚಾರ್ಧಾಮ್ ಸರ್ವ ಋತು ರಸ್ತೆ (ಆಲ್ ವೆದರ್ ರೋಡ್) ಉತ್ತರಾಖಂಡದ ಜನರಿಗೆ ಮತ್ತು ಪ್ರವಾಸಿಗರು ಮತ್ತು ಭಕ್ತರಿಗೆ ಹೊಸ ಭರವಸೆಯನ್ನು ನೀಡುತ್ತಿದೆ. ಈಗ ಇತರ ರಾಜ್ಯಗಳಿಂದ ಉತ್ತರಾಖಂಡಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗನೂ ತನ್ನೊಂದಿಗೆ ಅದ್ಭುತ ಪ್ರಯಾಣದ ಅನುಭವವನ್ನು ಕೊಂಡೊಯ್ಯಲು ಸಾಧ್ಯವಿದೆ. ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ದಿಲ್ಲಿ ಮತ್ತು ಡೆಹ್ರಾಡೂನ್ ನಡುವಿನ ಅಂತರವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಉತ್ತರಾಖಂಡದ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ.
ಸಹೋದರರೇ ಮತ್ತು ಸಹೋದರಿಯರೇ,
ಆಧುನಿಕ ಸಂಪರ್ಕವು ರಾಷ್ಟ್ರೀಯ ಖಾತರಿಯಾಗಿದೆ. ಆದ್ದರಿಂದ, ಕಳೆದ 8 ವರ್ಷಗಳಿಂದ, ನಾವು ಈ ದಿಕ್ಕಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕೆಲವು ವರ್ಷಗಳ ಹಿಂದೆ ನಾವು 2 ಪ್ರಮುಖ ಸಂಪರ್ಕ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಒಂದು ಭಾರತ್ ಮಾಲಾ ಮತ್ತು ಇನ್ನೊಂದು ಸಾಗರಮಾಲಾ. ಭಾರತ್ ಮಾಲಾ ಅಡಿಯಲ್ಲಿ, ದೇಶದ ಗಡಿ ಪ್ರದೇಶಗಳನ್ನು ಅತ್ಯುತ್ತಮ ಮತ್ತು ವಿಶಾಲವಾದ ಹೆದ್ದಾರಿಗಳೊಂದಿಗೆ ಸಂಪರ್ಕಿಸಲಾಗುತ್ತಿದೆ. ಸಾಗರಮಾಲಾ ಅಡಿಯಲ್ಲಿ, ಅದರ ಕರಾವಳಿಗಳ ಸಂಪರ್ಕವನ್ನು ಬಲಪಡಿಸಲಾಗುತ್ತಿದೆ. ನಾವು ಕಳೆದ 8 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶಕ್ಕೆ ಗಡಿ ಸಂಪರ್ಕವನ್ನು ಅಭೂತಪೂರ್ವವಾಗಿ ವಿಸ್ತರಿಸಿದ್ದೇವೆ. 2014 ರಿಂದ, ಗಡಿ ರಸ್ತೆಗಳ ಸಂಸ್ಥೆ ಸುಮಾರು 7,000 ಕಿಲೋಮೀಟರ್ ಹೊಸ ರಸ್ತೆಗಳು ಮತ್ತು ನೂರಾರು ಹೊಸ ಸೇತುವೆಗಳನ್ನು ನಿರ್ಮಿಸಿದೆ. ಅನೇಕ ಪ್ರಮುಖ ಸುರಂಗಗಳು ಸಹ ಪೂರ್ಣಗೊಂಡಿವೆ. ಗಡಿಗಳ ಉದ್ದಕ್ಕೂ ರಸ್ತೆಗಳನ್ನು ನಿರ್ಮಿಸಲು ಕೂಡಾ ಕೇಂದ್ರದಿಂದ ಅನುಮತಿ ಪಡೆಯಬೇಕಾದ ಸಮಯವೊಂದಿತ್ತು. ನಾವು ಈ ನಿರ್ಬಂಧವನ್ನು ಕೊನೆಗೊಳಿಸಿದ್ದಲ್ಲದೆ, ಗಡಿಯುದ್ದಕ್ಕೂ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಲು ಮತ್ತು ತ್ವರಿತ ಗತಿಯಲ್ಲಿ ನಿರ್ಮಿಸಲು ಒತ್ತು ನೀಡಿದ್ದೇವೆ. ಈಗ ಗುಡ್ಡಗಾಡು ರಾಜ್ಯಗಳ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಸಲುವಾಗಿ, ನಾವು ಭಾರತಮಾಲಾ ಮತ್ತು ಸಾಗರಮಾಲಾಗಳಂತೆ ಪರ್ವತಮಾಲಾ ಕೆಲಸದೊಂದಿಗೆ ಮುಂದಡಿ ಇಟ್ಟಿದ್ದೇವೆ. ಇದರ ಅಡಿಯಲ್ಲಿ, ಉತ್ತರಾಖಂಡ್ ಮತ್ತು ಹಿಮಾಚಲದಲ್ಲಿ ರೋಪ್ ವೇಗಳ ಬೃಹತ್ ಜಾಲವನ್ನು ನಿರ್ಮಿಸಲಾಗುತ್ತಿದೆ. ನಾವು ಇಲ್ಲಿನ ಗಡಿಗಳ ಬಗ್ಗೆ ಯೋಚಿಸಿದಾಗ, ಜನರು ಇಲ್ಲಿ ಮಿಲಿಟರಿ ಸ್ನೇಹಿತರು ಮತ್ತು ಸೈನಿಕರನ್ನು ಮಾತ್ರ ಕಲ್ಪಿಸಿಕೊಳ್ಳುತ್ತಾರೆ ಮತ್ತು ಉಳಿದೆಲ್ಲವೂ ನಿರ್ಜನವಾಗಿರುತ್ತದೆ ಎಂದು ಊಹಿಸಲಾಗುತ್ತದೆ. ಆದರೆ ನಾವು ಈ ಪರಿಕಲ್ಪನೆಯನ್ನು ಸಹ ಬದಲಾಯಿಸಬೇಕಾಗಿದೆ ಮತ್ತು ನಾವು ಅದನ್ನು ನೆಲಮಟ್ಟದಲ್ಲಿಯೂ ಬದಲಾಯಿಸಬೇಕಾಗಿದೆ. ಗಡಿ ಗ್ರಾಮಗಳು ಚಟುವಟಿಕೆಗಳು ಮತ್ತು ಗಡಿಬಿಡಿ ಮತ್ತು ಗದ್ದಲದಿಂದ ತುಂಬಿರಬೇಕು. ಇಲ್ಲಿನ ಅಭಿವೃದ್ಧಿಯನ್ನು ಆಚರಿಸುವಂತಿರಬೇಕು. ತಮ್ಮ ಗ್ರಾಮಗಳನ್ನು ತೊರೆದವರು ತಮ್ಮ ಗ್ರಾಮಗಳಿಗೆ ಮರಳಬೇಕೆಂದು ಭಾವಿಸಲು ನಾವು ಇದನ್ನೇ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾನು ಸ್ಪಂದನಶೀಲ ಹಳ್ಳಿಗಳನ್ನು ಸೃಷ್ಟಿಸಲು ಬಯಸುತ್ತೇನೆ. ಮತ್ತು ನಾನು ಕೇವಲ ಹೇಳುತ್ತಿಲ್ಲ. ನಾನು ಅದನ್ನು ಮಾಡಿದ್ದೇನೆ! ಉದಾಹರಣೆಗೆ, ಧೋರ್ಡೊ. ಇದು ಪಾಕಿಸ್ತಾನ ಮತ್ತು ಗುಜರಾತ್ ಗಡಿಯಲ್ಲಿರುವ ಕೊನೆಯ ಹಳ್ಳಿಯಾಗಿದೆ. ಧೋರ್ಡೊ ಕಛ್ ಮರುಭೂಮಿಯಲ್ಲಿದೆ. ಇಂದು ಧೋರ್ಡೊ ಒಂದು ದೊಡ್ಡ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಅಲ್ಲಿಗೆ ಹೋಗುತ್ತಾರೆ. ಅಲ್ಲಿನ ವ್ಯವಹಾರವು ಕೋಟ್ಯಂತರ ರೂಪಾಯಿಗಳ ಮೌಲ್ಯದ್ದಾಗಿದೆ. ನಾವು ಕೊನೆಯ ಹಳ್ಳಿಗೆ ಮತ್ತೆ ಜೀವ ತುಂಬಿದ್ದೇವೆ!. ಮತ್ತು ಆ ಕಾರಣದಿಂದಾಗಿ ಇಡೀ ಪ್ರದೇಶವು ಚೈತನ್ಯದಾಯಕವಾಗಿದೆ. ಪಾಕಿಸ್ತಾನದ ಗಡಿಯ ಬಳಿ ಗುಜರಾತ್ ನಲ್ಲಿ ಮರುಭೂಮಿ ಇದೆ. ಆ ಸ್ಥಳದಲ್ಲಿ ಒಂದು ಸಣ್ಣ ಪೂಜಾ ಸ್ಥಳವಿತ್ತು. ಆ ಸಣ್ಣ ಸ್ಥಳವನ್ನು ಈಗ ದೊಡ್ಡ ಯಾತ್ರಾಸ್ಥಳವಾಗಿ ಮರು ಅಭಿವೃದ್ಧಿಗೊಳಿಸಲಾಗಿದೆ. ಮನಾ ಮತ್ತು ಅದರ ಸುತ್ತಮುತ್ತ ಇಂತಹ ಸಂಗತಿಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವೇ ಎಂದು ಪರಿಶೀಲಿಸಲು ನಾನು ಉತ್ತರಾಖಂಡದ ಅಧಿಕಾರಿಗಳನ್ನು ಆ ಸ್ಥಳಕ್ಕೆ ಕಳುಹಿಸಿದ್ದೆ. ಗಡಿಗೆ ಹತ್ತಿರವಿರುವ ಹಳ್ಳಿಗಳಲ್ಲಿ ಇಂತಹ ವಿಷಯಗಳು ಇರಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ಅದಕ್ಕಾಗಿಯೇ ನಾನು ಇಂದು ಇಲ್ಲಿಗೆ ಬಂದಿದ್ದೇನೆ. ನಾನು ಅದರ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ. ಮನಾದಿಂದ ಮಾನಾ ಪಾಸ್ ವರೆಗೆ ನಿರ್ಮಿಸಲಾಗುತ್ತಿರುವ ರಸ್ತೆ ಪ್ರವಾಸಿಗರಿಗೆ ದೊಡ್ಡ ಆಕರ್ಷಣೆಯಾಗಲಿದೆ ಮತ್ತು ಇದು ಹೊಸ ಶಕೆಯನ್ನು ಆರಂಭ ಮಾಡುತ್ತದೆ ಎಂದು ನಾನು ನಂಬುತ್ತೇನೆ. ಬದರೀನಾಥಕ್ಕೆ ಭೇಟಿ ನೀಡಲು ಬರುವ ಜನರು ಮನಾ ಪಾಸ್ ನೋಡದೆ ಹಿಂತಿರುಗಿ ಹೋಗಲಾಗದಂತಹ ಪರಿಸ್ಥಿತಿಯನ್ನು ನಾನು ಸೃಷ್ಟಿಸುತ್ತೇನೆ. ಅಂತೆಯೇ, ಜೋಶಿಮಠದಿಂದ ಮಲಾರಿವರೆಗಿನ ರಸ್ತೆಯನ್ನು ಅಗಲಗೊಳಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದಲ್ಲದೆ, ನಮ್ಮ ಸೈನಿಕರು ಸುಲಭವಾಗಿ ಗಡಿಯನ್ನು ತಲುಪಲು ಸಹಾಯವಾಗಲಿದೆ.
ಸಹೋದರರೇ ಮತ್ತು ಸಹೋದರಿಯರೇ,
ನಮ್ಮ ಗುಡ್ಡಗಾಡು ರಾಜ್ಯಗಳ ಸವಾಲುಗಳು ಒಂದೇ ರೀತಿಯವು. ಅಭಿವೃದ್ಧಿಯ ಬಗ್ಗೆ ಅವರ ಆಕಾಂಕ್ಷೆಗಳು ಸಹ ಅಗಾಧವಾಗಿವೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳು ಭೌಗೋಳಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಅನೇಕ ರೀತಿಯಲ್ಲಿ ಪರಸ್ಪರ ಸಂಪರ್ಕ ಹೊಂದಿವೆ. ಇದು ಗರ್ವಾಲ್. ಇನ್ನೊಂದೆಡೆ ಉತ್ತರಕಾಶಿ ಮತ್ತು ಡೆಹ್ರಾಡೂನ್, ಶಿಮ್ಲಾ ಮತ್ತು ಸಿರ್ಮೌರ್ ಇವೆ. ಜೌನ್ಸರ್ ಮತ್ತು ಸಿರ್ಮೌರ್ ಬೆಟ್ಟಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ತುಂಬಾ ಕಷ್ಟ. ನಾನು ಇತ್ತೀಚೆಗೆ ಹಿಮಾಚಲದ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಜನರು ಉತ್ತರಾಖಂಡದ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಪ್ರಾರ್ಥನಾ ಸ್ಥಳಗಳು ಮತ್ತು ಪರಂಪರೆಯ ಸ್ಥಳಗಳ ತ್ವರಿತ ಅಭಿವೃದ್ಧಿಗಾಗಿ ಮತ್ತು ಗಡಿ ಹಾಗು ಗುಡ್ಡಗಾಡು ಪ್ರದೇಶಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲು ಉತ್ತರಾಖಂಡವು ಡಬಲ್ ಎಂಜಿನ್ ಸರ್ಕಾರವನ್ನು ಮರಳಿ ತಂದಿದೆ ಎಂದು ಹಿಮಾಚಲದ ಜನರು ಹೇಳುತ್ತಾರೆ.ಈ ಮಂತ್ರವು ಹಿಮಾಚಲಕ್ಕೂ ಸ್ಫೂರ್ತಿದಾಯಕವಾಗಿದೆ. ನಿಮ್ಮ ಆಕಾಂಕ್ಷೆಗಳನ್ನು ಈಡೇರಿಸಲು ನಾನು ಯಾವುದೇ ಅವಕಾಶವನ್ನು ಕೈತಪ್ಪಲು ಬಿಡುವುದಿಲ್ಲ ಎಂದು ನಾನು ಉತ್ತರಾಖಂಡಕ್ಕೆ ಭರವಸೆ ನೀಡುತ್ತೇನೆ. ನಾನು ಬಾಬಾ ಕೇದಾರ್ ಮತ್ತು ಬದರಿ ವಿಶಾಲ್ ಅವರ ಆಶೀರ್ವಾದವನ್ನು ಪಡೆಯಲು ಬಂದಿದ್ದೇನೆ, ಇದರಿಂದ ನಾನು ಜನರ ವಿಶ್ವಾಸವನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೇನೆ. ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ತಮ್ಮ ಆಶೀರ್ವಾದದ ಮಳೆಯನ್ನು ಸುರಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಮತ್ತು ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಧನ್ಯವಾದಗಳು. ಬಹುಶಃ ಇಂದು ಯಾರೂ ಮನೆಯಲ್ಲಿಲ್ಲ. ಮನಾ ಗ್ರಾಮವು ಇಲ್ಲಿಯ ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ತಾಯಂದಿರು ಮತ್ತು ಸಹೋದರಿಯರು ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಿಮ್ಮೆಲ್ಲರಿಗೂ ಮುಂಚಿತವಾಗಿ ದೀಪಾವಳಿಯ ಶುಭ ಹಾರೈಕೆಗಳು!. ನಿಮಗೆ ಉತ್ತಮ ಆರೋಗ್ಯವಿರಲಿ ಮತ್ತು ನಿಮ್ಮ ಮಕ್ಕಳಿಗೆ ಯಶಸ್ಸು ಲಭಿಸಲಿ ಎಂದು ಬದರಿ ವಿಶಾಲ್ ಅವರನ್ನು ಪ್ರಾರ್ಥಿಸುವ ಮೂಲಕ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ!
ನಿಮ್ಮ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ನನ್ನೊಂದಿಗೆ ಹೇಳಿ-ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ,
ಜೈ ಬದ್ರಿ ವಿಶಾಲ್, ಜೈ ಬದ್ರಿ ವಿಶಾಲ್, ಜೈ ಬದ್ರಿ ವಿಶಾಲ್.
ಜೈ ಬಾಬಾ ಕೇದಾರ್, ಜೈ ಬಾಬಾ ಕೇದಾರ್, ಜೈ ಬಾಬಾ ಕೇದಾರ್.
ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
******
Kedarnath and Badrinath are significant to our ethos and traditions. https://t.co/68IErTo24N
— Narendra Modi (@narendramodi) October 21, 2022
PM @narendramodi begins his speech at a programme in Badrinath. pic.twitter.com/S62ckFYewx
— PMO India (@PMOIndia) October 21, 2022
For me every village on the border is the first village in the country, says PM @narendramodi pic.twitter.com/GwsI7fQQfM
— PMO India (@PMOIndia) October 21, 2022
Two major pillars for developed India of the 21st century. pic.twitter.com/iFhOtXprYz
— PMO India (@PMOIndia) October 21, 2022
We have to completely free ourselves from the colonial mindset. pic.twitter.com/qaQ6uEOoGl
— PMO India (@PMOIndia) October 21, 2022
आस्था के ये केंद्र सिर्फ एक ढांचा नहीं बल्कि हमारे लिए प्राणवायु हैं। pic.twitter.com/wsJjsh0aRJ
— PMO India (@PMOIndia) October 21, 2022
Enhancing 'Ease of Living' for the people in hilly states. pic.twitter.com/L0ZHHGXK6L
— PMO India (@PMOIndia) October 21, 2022
We began working with utmost priority in the areas which were ignored earlier. pic.twitter.com/ci5w2DNljL
— PMO India (@PMOIndia) October 21, 2022
Our focus is on improving multi-modal connectivity in the hilly states. pic.twitter.com/9hjG7AG1AI
— PMO India (@PMOIndia) October 21, 2022
आधुनिक कनेक्टिविटी राष्ट्ररक्षा की भी गांरटी होती है। pic.twitter.com/h69bxCI0En
— PMO India (@PMOIndia) October 21, 2022