ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ರಾಷ್ಟ್ರಗಳ ಮುಖ್ಯಸ್ಥರ ಮಂಡಳಿ ಸಭೆಯಲ್ಲಿ ಭಾಗವಹಿಸಲು ಉಜ್ಬೇಕಿಸ್ತಾನ್ ಅಧ್ಯಕ್ಷ ಶ್ರೀ ಶಾವ್ಕತ್ ಮಿರ್ಜಿಯೋಯೆವ್ ಅವರ ಆಹ್ವಾನದ ಮೇರೆಗೆ ನಾನು ಸಮರ್ಕಂಡ್ಗೆ ಭೇಟಿ ನೀಡಲಿದ್ದೇನೆ.
ಎಸ್ಸಿಒ ಶೃಂಗಸಭೆಯಲ್ಲಿ, ಪ್ರಸಕ್ತ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳು, ಎಸ್ಸಿಒ ವಿಸ್ತರಣೆ ಮತ್ತು ಸಂಸ್ಥೆಯೊಳಗೆ ಬಹುಮುಖಿ ಮತ್ತು ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಇನ್ನಷ್ಟು ಗಾಢವಾಗಿಸುವ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ. ಉಜ್ಬೆಕ್ ಅಧ್ಯಕ್ಷರ ಅಡಿಯಲ್ಲಿ, ವ್ಯಾಪಾರ, ಆರ್ಥಿಕತೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಹಲವಾರು ನಿರ್ಧಾರಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ.
ಸಮರ್ಕಂಡ್ನಲ್ಲಿ ಅಧ್ಯಕ್ಷ ಮಿರ್ಜಿಯೋವ್ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. 2018 ರಲ್ಲಿ ಅವರು ಭಾರತಕ್ಕೆ ನೀಡಿದ ಭೇಟಿಯನ್ನು ನಾನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತೇನೆ. ಅವರು 2019 ರಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆಯ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಶೃಂಗಸಭೆಯಲ್ಲಿ ಭಾಗವಹಿಸುವ ಇತರ ಕೆಲವು ನಾಯಕರೊಂದಿಗೂ ನಾನು ದ್ವಿಪಕ್ಷೀಯ ಸಭೆಗಳನ್ನು ನಡೆಸುತ್ತೇನೆ.
*****