Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉಕ್ಕು ವಿಶೇಷ ವಲಯಕ್ಕೆ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಧನ ಕಾರ್ಯಕ್ರಮ [ಪಿ.ಎಲ್.ಐ] ಜಾರಿಗೆ ಕೇಂದ್ರ ಸಂಪುಟ ಅನುಮೋದನೆ


ಭಾರತದ ಆರ್ಥಿಕತೆಯಲ್ಲಿ ಉಕ್ಕು ವಲಯ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಪರಿಗಣಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಶೇಷ ಉಕ್ಕು ವಲಯಕ್ಕೆ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹ ಧನ [ಪಿ.ಎಲ್.ಐ] ಕಾರ್ಯಕ್ರಮ ಜಾರಿಗೊಳಿಸಲು ಅನುಮೋದನೆ ನೀಡಿದೆ. ಈ ಕಾರ್ಯಕ್ರಮದ ಅನುಷ್ಠಾನದಿಂದ ದೇಶದಲ್ಲಿ ಉನ್ನತ ದರ್ಜೆಯ ಉಕ್ಕು ಉತ್ಪಾದನೆ ವೃದ್ಧಿಸಲಿದೆ. ಉನ್ನತ ಗುಣಮಟ್ಟದ ಉಕ್ಕು ಆಮದು ಅವಲಂಬನೆಯನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸುವ ಜತೆಗೆ ರಫ್ತು ಪ್ರಮಾಣ ಹೆಚ್ಚಿಸಲು ಇದರಿಂದ ಸಹಕಾರಿಯಾಗಲಿದೆ. ಈ ಕಾರ್ಯಕ್ರಮದಿಂದ ಸುಮಾರು 40,000 ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ನಿರೀಕ್ಷೆ ಮತ್ತು ಹೆಚ್ಚುವರಿಯಾಗಿ 25 ದಶಲಕ್ಷ ಟನ್ ಸಾಮರ್ಥ‍್ಯ ವೃದ್ಧಿಯಾಗುವ ಅಂದಾಜಿದೆ. 2023-24 ರಿಂದ 2027- 28 ರ ವರೆಗೆ ಐದು ವರ್ಷಗಳ ಅವಧಿಯ ಕಾರ್ಯಕ್ರಮ ಇದಾಗಿದೆ.  

ಬಜೆಟ್ ನಲ್ಲಿ 6,322 ಕೋಟಿ ರೂ ನಿಗದಿ ಮಾಡಿದ್ದು, ಪಿ.ಎಲ್.ಐ ಯೋಜನೆಯಿಂದ ಉಕ್ಕು ಲೇಪಿತ ಉತ್ಪನ್ನಗಳು, ಹೆಚ್ಚು ಬಲಿಷ್ಠ. ವಿಪತ್ತು ನಿರೋಧಕ, ವಿಶೇಷವಾಗಿ ರೈಲುಗಳಲ್ಲಿ ಬಳಸುವ, ಮಿಶ್ರಲೋಹ ಉಕ್ಕು ಉತ್ಪನ್ನಗಳು, ಉಕ್ಕಿನ ತಂತಿಗಳು, ವಿದ್ಯುನ್ಮಾನ ಉಕ್ಕು ಉತ್ಪನ್ನಗಳನ್ನು ಉತ್ಪಾದಿಸಲು ಸಹಕಾರಿಯಾಗಲಿದೆ. ಈ ಉಕ್ಕಿನ ಉತ್ಪನ್ನಗಳನ್ನು ಆಯಕಟ್ಟಿನ, ಕಾರ್ಯತಂತ್ರ, ಕಾರ್ಯತಂತ್ರೇತರ ವಲಯಗಳಲ್ಲಿ ಬಳಸಲಾಗುತ್ತದೆ ಮತ್ತು ಬಿಳಿ ಉತ್ಪನ್ನಗಳು, ಆಟೊಮೊಬೈಲ್ ಬಾಡಿ ಪರಿಕರಗಳು ಮತ್ತು ಉಪಕರಣಗಳು, ಅನಿಲ ಮತ್ತು ತೈಲ ಸಾಗಾಣೆಯ ಕೊಳವೆಗಳು, ಬಾಯ್ಲರ್ ಗಳು, ಬ್ಯಾಲಿಸ್ಟಿಕ್ ಮತ್ತು ರಕ್ಷಣಾ ವಲಯದಲ್ಲಿ ರಕ್ಷಾ ಕವಚದ ಹಾಳೆಗಳು, ಅತಿ ವೇಗದ ರೈಲ್ವೆ ಮಾರ್ಗಗಳು, ಟರ್ಬೈನ್ ಪರಿಕರಗಳು, ವಿದ್ಯುನ್ಮಾನ ಉಕ್ಕು ಎಂದರೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಮತ್ತು ವಿದ್ಯುತ್ ವಾಹನಗಳ ವಲಯಕ್ಕೆ ಬಳಸುವ ಉಕ್ಕು ಉತ್ಪಾದನೆ ಮಾಡಲಾಗುತ್ತದೆ.

ಉಕ್ಕು ವಲಯದಲ್ಲಿ ಭಾರತ ಪ್ರಸ್ತುತ ಮೌಲ್ಯ ಸರಪಳಿಯ ಕೆಳ ತುದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೌಲ್ಯ ವರ್ಧಿತ ಉಕ್ಕನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಮಾದರಿಯ ಪ್ರತಿ ಟನ್ ಉಕ್ಕು ಆಮದು ಮಾಡಿಕೊಳ್ಳಲು 80 ರಿಂದ 100 ಅಮೆರಿಕನ್ ಡಾಲರ್ ವೆಚ್ಚವಾಗುತ್ತಿದ್ದು, ಈ ವಲಯಕ್ಕೆ ಹೆಚ್ಚಿನ ಲಾಜಿಸ್ಟಿಕ್ ಮತ್ತು ಮೂಲ ಸೌಕರ್ಯ ವೆಚ್ಚ, ಉನ್ನತ ವಿದ್ಯುತ್ ಮತ್ತು ಬಂಡವಾಳ ವೆಚ್ಚ, ತೆರಿಗೆ ಮತ್ತು ಸುಂಕ ವಿಧಿಸಲಾಗುತ್ತಿದೆ.

ಪಿ.ಎಲ್.ಐ ಯೋಜನೆಯ ಮೂಲ ಉದ್ದೇಶವೆಂದರೆ ವಿಶೇಷ ದರ್ಜೆಯ ಉಕ್ಕಿನ ಸಮಸ್ಯೆಯನ್ನು ನಿವಾರಿಸುವುದು, ದೇಶದಲ್ಲಿ ಈ ವಲಯದ ಉಕ್ಕಿನ ಕೊರತೆಯನ್ನು ನಿವಾರಿಸಲು ಪ್ರೋತ್ಸಾಹಧನ ಆಧರಿತ ಉಕ್ಕು ಉತ್ಪಾದನೆ ಹೆಚ್ಚುಸುವುದು ಆದ್ಯತೆಯಾಗಿದೆ. ಉತ್ಪಾದನೆ ಹೆಚ್ಚಿಸಲು ಶೇ.4 ರಿಂದ ಶೇ.12 ಪ್ರೋತ್ಸಾಹ ಧನ ನೀಡುವ ಮೂಲಕ ಅರ್ಹ ತಯಾರಕರನ್ನು ಉತ್ತೇಜಿಸಲು ಪ್ರಸ್ತಾಪಿಸಲಾಗಿದೆ. ಪಿ.ಎಲ್.ಐ ಯೋಜನೆ ಭಾರತೀಯ ಉಕ್ಕು ಕೈಗಾರಿಕೆಗೆ ಅನುಕೂಲವಾಗಲಿದ್ದು, ತಂತ್ರಜ್ಞಾನ ಮೇಲ್ದರ್ಜೇಗೇರಿಸುವ ಮತ್ತು ಮೌಲ್ಯ ಸರಪಳಿಯನ್ನು ವಿಸ್ತರಿಸಲು ಸಹ ಸಾಧ್ಯವಾಗಲಿದೆ.

ಭಾರತದಲ್ಲಿ ನೋಂದಣಿಯಾಗಿರುವ, ಗುರುತಿಸಲ್ಪಟ್ಟ ವಿಶೇಷ ದರ್ಜೆಯ ಉಕ್ಕು ಉತ್ಪಾದಿಸುತ್ತಿರುವ, ಅರ್ಹ ಉತ್ಪಾದಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ‍್ಳಬಹುದು. ಆದಾಗ್ಯೂ ದೇಶದಲ್ಲಿ ವಿಶೇಷ ಉಕ್ಕು ತಯಾರಿಸಲು ಬಳಸುವ ಉಕ್ಕನ್ನು ಕರಗಿಸಿ ಸುರಿಯಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಮೂಲಕ ಪ್ರಧಾನಮಂತ್ರಿ ಅವರ ಆತ್ಮನಿರ್ಭರ್ ಭಾರತ್ ಅನ್ನು ಗಮನದಲ್ಲಿಟ್ಟುಕೊಂಡು ಕೊನೆಯಿಂದ ಕೊನೆಯ ತನಕ ಉತ್ಪಾದನೆಯನ್ನು ಖಾತರಿಪಡಿಸುತ್ತದೆ.

ಪಿ.ಎಲ್.ಐ ಕಾರ್ಯಕ್ರಮದಿಂದ ವಿಶೇಷ ಉಕ್ಕು ಕ್ಷೇತ್ರದಲ್ಲಿ ದೇಶೀಯ ಉಕ್ಕು ಮೌಲ್ಯ ಸರಣಿಯನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಮೌಲ್ಯ ವರ್ಧಿತ ಉಕ್ಕನ್ನು ಉತ್ಪಾದಿಸುವ ಮೂಲಕ ಜಾಗತಿಕ ಉಕ್ಕಿನ ಮೌಲ್ಯ ಸರಪಳಿಗೆ ಕೊಡುಗೆ ನೀಡಲು, ತಾಂತ್ರಿಕ ಸಾಮರ್ಥ್ಯ ನಿರ್ಮಾಣದಲ್ಲಿ ಹೂಡಿಕೆ ಮಾಡಲು ಉತ್ತೇಜಿಸುತ್ತದೆ. ಹೆಚ್ಚಿನ ಉತ್ಪಾದನೆ ಮತ್ತು ಹೂಡಿಕೆ ಮಾಡುವ ಈ ಕಾರ್ಯಕ್ರಮದಿಂದ 5.25 ಲಕ್ಷ ಉದ್ಯೋಗ ಸೃಷ್ಟಿಯಾಗಲಿದ್ದು, ಈ ಪೈಕಿ 68,000 ನೇರ ಮತ್ತು ಉಳಿದದ್ದು ಪರೋಕ್ಷ ಉದ್ಯೋಗಾವಕಾಶವಾಗಿದೆ.

***