Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಇನ್ವೆಸ್ಟ್ ಕರ್ನಾಟಕ 2022 ವಿಡಿಯೋ ಕಾನ್ಫರೆನ್ಸಿಂಗ್’ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

‘ಇನ್ವೆಸ್ಟ್ ಕರ್ನಾಟಕ 2022 ವಿಡಿಯೋ ಕಾನ್ಫರೆನ್ಸಿಂಗ್’ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ


ನಮಸ್ಕಾರ!

ಪ್ರಪಂಚದಾದ್ಯಂತದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಎಲ್ಲ ಸ್ನೇಹಿತರಿಗೆ — ಭಾರತಕ್ಕೆ ಸ್ವಾಗತ, ನಮ್ಮ ಕರ್ನಾಟಕಕ್ಕೆ ಸ್ವಾಗತ ಮತ್ತು ನಮ್ಮ ಬೆಂಗಳೂರಿಗೆ ಸ್ವಾಗತ. ನಿನ್ನೆ ಕರ್ನಾಟಕವು ‘ರಾಜ್ಯೋತ್ಸವವನ್ನು ಆಚರಿಸಿತು. ನಾನು ಕರ್ನಾಟಕದ ಜನತೆಗೆ ಮತ್ತು ಕನ್ನಡ ಭಾಷೆಯನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ತಂತ್ರಜ್ಞಾನದ ಜೊತೆಗೆ ಸಂಪ್ರದಾಯವೂ ಇರುವ ಸ್ಥಳ ಇದು. ಪ್ರಕೃತಿ ಮತ್ತು ಸಂಸ್ಕೃತಿಯ ಅದ್ಭುತ ಸಮ್ಮಿಲನ ಎಲ್ಲೆಡೆ ಗೋಚರಿಸುವ ಸ್ಥಳ ಇದು. ಇದು ಅದ್ಭುತವಾದ ವಾಸ್ತುಶಿಲ್ಪಕ್ಕೆ ಮತ್ತು ಉತ್ಸಾಹಭರಿತ  ನವೋದ್ಯಮಗಳಿಗೆ ಹೆಸರುವಾಸಿಯಾದ ಸ್ಥಳವಾಗಿದೆ. ಟ್ಯಾಲೆಂಟ್ ಮತ್ತು ಟೆಕ್ನಾಲಜಿಯ ವಿಷಯಕ್ಕೆ ಬಂದಾಗಲೆಲ್ಲ ಮೊದಲು ನೆನಪಿಗೆ ಬರುವುದು ಬ್ರಾಂಡ್ ಬೆಂಗಳೂರು, ಮತ್ತು ಈ ಹೆಸರು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸ್ಥಾಪಿತವಾಗಿದೆ. ಕರ್ನಾಟಕದ ಈ ಭೂಮಿ ಅತ್ಯಂತ ಸುಂದರವಾದ ನೈಸರ್ಗಿಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಅದೇನೆಂದರೆ, ಹಿತವಾದ ಕನ್ನಡ, ಶ್ರೀಮಂತ ಸಂಸ್ಕೃತಿ ಮತ್ತು ಪ್ರತಿಯೊಬ್ಬರೊಂದಿಗಿನ ಕನ್ನಡಿಗರ ಬಾಂಧವ್ಯ ಎಲ್ಲರ ಹೃದಯವನ್ನು ಗೆಲ್ಲುತ್ತದೆ.

ಸ್ನೇಹಿತರೇ,

ಜಾಗತಿಕ ಹೂಡಿಕೆದಾರರ ಸಮಾವೇಶ ಕರ್ನಾಟಕದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಈ ಕಾರ್ಯಕ್ರಮವು  ಸಂಯುಕ್ತ ಸ್ಪರ್ಧಾತ್ಮಕ ಮತ್ತು ಸಹಕಾರಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ. ಭಾರತದಲ್ಲಿ ತಯಾರಿಕೆ ಮತ್ತು ಉತ್ಪಾದನೆಯು ಹೆಚ್ಚಾಗಿ ರಾಜ್ಯದ ನೀತಿ ನಿರ್ಧಾರಗಳು ಮತ್ತು ನಿಯಂತ್ರಣದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ಭಾರತವು ಮುಂದುವರಿಯಬೇಕಾದರೆ, ರಾಜ್ಯಗಳು ಮುಂದುವರಿಯುವುದು ಅವಶ್ಯಕ. ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಮೂಲಕ ರಾಜ್ಯಗಳು ನಿರ್ದಿಷ್ಟ ವಲಯಗಳಲ್ಲಿ ಇತರ ದೇಶಗಳೊಂದಿಗೆ ಪಾಲುದಾರರಾಗಿರುವುದು ತುಂಬಾ ಒಳ್ಳೆಯದು. ಪ್ರಪಂಚದಾದ್ಯಂತದ ಪ್ರಮುಖ ಕಂಪನಿಗಳು ಈ ಸಮಾರಂಭದಲ್ಲಿ ಭಾಗವಹಿಸುತ್ತಿರುವುದನ್ನು ನಾನು ನೋಡುತ್ತೇನೆ. ಈ ವೇದಿಕೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಪಾಲುದಾರಿಕೆಗಳನ್ನು ಸಾಕಾರಗೊಳಿಸಲಾಗುವುದು ಎಂದು ನನಗೆ ತಿಳಿಸಲಾಗಿದೆ. ಇದರಿಂದ ಯುವಕರಿಗೆ ದೊಡ್ಡ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಸ್ನೇಹಿತರೇ,

ಇಪ್ಪತ್ತೊಂದನೇ ಶತಮಾನದಲ್ಲಿ ಭಾರತ ಇಂದು ಇರುವ ಜಾಗದಿಂದ ನಿರಂತರವಾಗಿ ಮುನ್ನಡೆಯಬೇಕಿದೆ. ಕಳೆದ ವರ್ಷ, ಭಾರತವು ಸುಮಾರು 84 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆಯನ್ನು ದಾಖಲಿಸಿತ್ತು. ಮತ್ತು ಈ ಅಂಕಿಅಂಶಗಳು ಇಡೀ ಜಗತ್ತು ಕೋವಿಡ್ ಜಾಗತಿಕ ಸಾಂಕ್ರಾಮಿಕದ ಪರಿಣಾಮಗಳು ಮತ್ತು ಯುದ್ಧದ ಸಂದರ್ಭಗಳೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಬಂದಿವೆ ಎಂದು ನಿಮಗೆ ತಿಳಿದಿದೆ. ಎಲ್ಲೆಡೆ ಅನಿಶ್ಚಿತತೆ ಇದೆ. ಭಾರತದ ಮೇಲೂ, ಯುದ್ಧ ಮತ್ತು ಸಾಂಕ್ರಾಮಿಕವು ಸೃಷ್ಟಿಸಿದ ಪರಿಸ್ಥಿತಿಗಳು ವ್ಯತಿರಿಕ್ತ ಪರಿಣಾಮವನ್ನು ಬೀರಿವೆ. ಇದರ ಹೊರತಾಗಿಯೂ ಇಂದು ಇಡೀ ಜಗತ್ತು ಭಾರತದತ್ತ ಬಹಳ ಭರವಸೆಯಿಂದ ನೋಡುತ್ತಿದೆ. ಇದು ಆರ್ಥಿಕ ಅನಿಶ್ಚಿತತೆಯ ಅವಧಿಯಾಗಿದೆ, ಆದರೆ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಪ್ರಬಲವಾಗಿವೆ ಎಂದು ಎಲ್ಲರೂ ದೇಶಗಳು ಭರವಸೆ ಹೊಂದಿವೆ. ಇಂದಿನ ಬಿಕ್ಕಟ್ಟಿನ ಕಾಲದಲ್ಲಿ, ಭಾರತವು ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿಶ್ವಕ್ಕಾಗಿ ಕೆಲಸ ಮಾಡಲು ಒತ್ತು ನೀಡುತ್ತಿದೆ. ಈ ಯುಗದಲ್ಲಿ, ಪೂರೈಕೆ ಸರಪಳಿಗಳು ಸ್ಥಗಿತಗೊಂಡಿವೆ, ಆದರೆ ಅದೇ ಸಮಯದಲ್ಲಿ, ಪ್ರತಿಯೊಬ್ಬ ಅಗತ್ಯವಿರುವವರಿಗೆ ಔಷಧಿಗಳು ಮತ್ತು ಲಸಿಕೆಗಳನ್ನು ಪೂರೈಸುವ ಭರವಸೆಯನ್ನು ಭಾರತವು ಹೊಂದಿದೆ. ಇದು ಮಾರುಕಟ್ಟೆಯ ಏರಿಳಿತದ ಯುಗ, ಆದರೆ 130 ಕೋಟಿ ಭಾರತೀಯರ ಆಕಾಂಕ್ಷೆಗಳು ನಮ್ಮ ದೇಶೀಯ ಮಾರುಕಟ್ಟೆಯ ಬಲವನ್ನು ಖಾತರಿಪಡಿಸುತ್ತಿವೆ. ಮತ್ತು ಮುಖ್ಯವಾಗಿ, ಇದು ಜಾಗತಿಕ ಬಿಕ್ಕಟ್ಟಿನ ಯುಗವಾಗಿದ್ದರೂ, ಪ್ರಪಂಚದಾದ್ಯಂತದ ವಿಶ್ಲೇಷಕರು ಮತ್ತು ಆರ್ಥಿಕ ತಜ್ಞರು ಭಾರತವನ್ನು ಆಶಾದಾಯಕ ತಾಣವೆಂದು ಬಣ್ಣಿಸುತ್ತಿದ್ದಾರೆ. ಭಾರತದ ಆರ್ಥಿಕತೆಯು ದಿನದಿಂದ ದಿನಕ್ಕೆ ಬಲಗೊಳ್ಳಲು ನಾವು ನಮ್ಮ ಮೂಲಭೂತ ಅಂಶಗಳ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಕಳೆದ ಕೆಲವು ತಿಂಗಳುಗಳಲ್ಲಿ ಭಾರತವು ಇತರ ದೇಶಗಳೊಂದಿಗೆ ಸಹಿ ಹಾಕಿರುವ ಮುಕ್ತ ವ್ಯಾಪಾರ ಒಪ್ಪಂದಗಳ ಸಂಖ್ಯೆಯು ನಮ್ಮ ಸನ್ನದ್ಧತೆಯ ನೋಟವನ್ನು ಜಗತ್ತಿಗೆ ನೀಡಿದೆ.

ಸ್ನೇಹಿತರೇ,

ನಮ್ಮ ಪ್ರಯಾಣ ಎಲ್ಲಿಂದ ಪ್ರಾರಂಭವಾಯಿತು ಮತ್ತು ಇಂದು ನಾವು ಎಲ್ಲಿಗೆ ತಲುಪಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಶವು ಸುಮಾರು 9-10 ವರ್ಷಗಳ ಹಿಂದೆ ನೀತಿ ಮಟ್ಟದಲ್ಲಿ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿತ್ತು. ಆ ಪರಿಸ್ಥಿತಿಯಿಂದ ದೇಶವನ್ನು ಹೊರತರಲು ನಾವು ನಮ್ಮ ವಿಧಾನವನ್ನು ಬದಲಾಯಿಸಬೇಕಾಗಿದೆ. ಹೂಡಿಕೆದಾರರನ್ನು ರೆಡ್ ಟೇಪ್ ಬಲೆಗೆ ಬೀಳಿಸುವ ಬದಲು ನಾವು ಹೂಡಿಕೆಗಾಗಿ ರೆಡ್ ಕಾರ್ಪೆಟ್ ವಾತಾವರಣವನ್ನು ಸೃಷ್ಟಿಸಿದ್ದೇವೆ. ಹೊಸ ಸಂಕೀರ್ಣ ಕಾನೂನುಗಳನ್ನು ಮಾಡುವ ಬದಲು, ನಾವು ಅವುಗಳನ್ನು ತರ್ಕಬದ್ಧಗೊಳಿಸಿದ್ದೇವೆ. ವ್ಯಾಪಾರವನ್ನು ನಾವೇ ನಡೆಸುವ ಬದಲು ಇತರರು ಮುಂದೆ ಬರುವಂತೆ ವ್ಯಾಪಾರಕ್ಕೆ ನೆಲವನ್ನು ಸಿದ್ಧಪಡಿಸಿದೆವು. ನಾವು ಯುವಕರಿಗೆ ನಿಯಮಗಳಿಗೆ ಬದ್ಧರಾಗುವ ಬದಲು ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶವನ್ನು ನೀಡಿದ್ದೇವೆ.

ಸ್ನೇಹಿತರೇ,

ಹೊಸ ಭಾರತವನ್ನು ನಿರ್ಮಿಸುವುದು ದಿಟ್ಟ ಸುಧಾರಣೆಗಳು, ದೊಡ್ಡ ಮೂಲಸೌಕರ್ಯ ಮತ್ತು ಅತ್ಯುತ್ತಮ ಪ್ರತಿಭೆಯಿಂದ ಮಾತ್ರ ಸಾಧ್ಯ. ಇಂದು ಸರ್ಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ದಿಟ್ಟ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಜಿಎಸ್ಟಿ ಮತ್ತು ಐಬಿಸಿಯಂತಹ ಸುಧಾರಣೆಗಳನ್ನು ಆರ್ಥಿಕ ಕ್ಷೇತ್ರದಲ್ಲಿ ಕೈಗೊಳ್ಳಲಾಯಿತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆಗಳು ಮತ್ತು ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳ ಮೂಲಕ ಆರ್ಥಿಕತೆಯನ್ನು ಬಲಪಡಿಸಲಾಯಿತು. ಅದೇ ರೀತಿ ಯುಪಿಐನಂತಹ ಮಹತ್ತರ ಹೆಜ್ಜೆಗಳ ಮೂಲಕ ದೇಶದಲ್ಲಿ ಡಿಜಿಟಲ್ ಕ್ರಾಂತಿ ತರಲು ಸಿದ್ಧತೆ ನಡೆಸಲಾಗಿತ್ತು. ನಾವು 1,500ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ ಮತ್ತು ಸುಮಾರು 40,000 ಅನಗತ್ಯ ನಿಬಂಧನೆಗಳನ್ನು ರದ್ದುಗೊಳಿಸಿದ್ದೇವೆ. ನಾವು ಅನೇಕ ನಿಬಂಧನೆಗಳನ್ನು ಸಹ ಕಾನೂನು ಬಾಹಿರವೆನ್ನುವ ವರ್ಗದಿಂದ ತೆಗೆದುಹಾಕಿದ್ದೇವೆ. ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿಮೆ ಮಾಡುವುದರ ಜೊತೆಗೆ ಫೇಸ್ ಲೆಸ್ ಅಸೆಸ್ಮೆಂಟ್ನಂತಹ ಸುಧಾರಣೆಗಳ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸುವಂತಹ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ಭಾರತದಲ್ಲಿ  ವಿದೇಶೀ ನೇರ ಬಂಡವಾಳಕ್ಕಾಗಿ ಹೊಸ ವಲಯಗಳ ಬಾಗಿಲು ತೆರೆಯಲಾಗಿದೆ. ಡ್ರೋನ್ಗಳು, ಜಿಯೋ-ಸ್ಪೇಷಿಯಲ್, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ಹೂಡಿಕೆಗಳಿಗೆ ಭಾರತದಲ್ಲಿ ಅಭೂತಪೂರ್ವ ಉತ್ತೇಜನವನ್ನು ನೀಡಲಾಗುತ್ತಿದೆ.

ಸ್ನೇಹಿತರೇ,

ಸುಧಾರಣೆಗಳ ಜೊತೆಗೆ ಮೂಲಸೌಕರ್ಯ ಕ್ಷೇತ್ರದಲ್ಲೂ ಭಾರತ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಆಧುನಿಕ ಮೂಲಸೌಕರ್ಯಕ್ಕಾಗಿ, ಭಾರತವು ಹಿಂದೆಂದಿಗಿಂತಲೂ ಹೆಚ್ಚು ವೇಗ ಮತ್ತು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ನೀವು ವಿಮಾನ ನಿಲ್ದಾಣಗಳ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಕಳೆದ ಎಂಟು ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ಸಂಖ್ಯೆ ದ್ವಿಗುಣಗೊಂಡಿದೆ. ಸುಮಾರು 70 ವಿಮಾನ ನಿಲ್ದಾಣಗಳಿಂದ, ಈಗ 140 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಮತ್ತು ಭಾರತದಲ್ಲಿ ಇನ್ನೂ ಅನೇಕ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿ ಮೆಟ್ರೋ ರೈಲುಗಳ ವ್ಯಾಪ್ತಿಯನ್ನು ಐದರಿಂದ 20 ನಗರಗಳಿಗೆ ಹೆಚ್ಚಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ನಾನು ಹೂಡಿಕೆದಾರರ ಗಮನವನ್ನು ವಿಶೇಷವಾಗಿ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಕಡೆಗೆ ಸೆಳೆಯಲು ಬಯಸುತ್ತೇನೆ. ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆಯು ಮೂಲಸೌಕರ್ಯ ನಿರ್ಮಾಣದ ಮಾರ್ಗವನ್ನು ಬದಲಿಸಿದೆ. ಈಗ ಯೋಜನೆಯನ್ನು ಯೋಜಿಸಿದಾಗ, ಅದರ 3 ಆಯಾಮಗಳು ಮೊದಲ ಪರಿಗಣನೆಯಾಗಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ, ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ನಕ್ಷೆಯನ್ನು ತಯಾರಿಸಲಾಗುತ್ತದೆ. ನಂತರ ಅದನ್ನು ಪೂರ್ಣಗೊಳಿಸಲು ಕಡಿಮೆ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವನ್ನು ಚರ್ಚಿಸಲಾಗಿದೆ. ಇದರಲ್ಲಿ, ಕಟ್ಟ ಕಡೆಯವರೆಗಿನ ಸಂಪರ್ಕಕ್ಕಾಗಿ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ವಿಶ್ವ ದರ್ಜೆಯ ಉತ್ಪನ್ನಗಳು ಅಥವಾ ಸೇವೆಗಳ ತಯಾರಿಕೆಗೆ ಒತ್ತು ನೀಡಲಾಗಿದೆ.

ಸ್ನೇಹಿತರೇ,

ಇಂದು, ಜಗತ್ತು ಉದ್ಯಮ 4.O (ಇಂಡಸ್ಟ್ರಿ 4.O ) ಕಡೆಗೆ ಚಲಿಸುತ್ತಿರುವಾಗ, ಈ ಕೈಗಾರಿಕಾ ಕ್ರಾಂತಿಯಲ್ಲಿ ಭಾರತೀಯ ಯುವಕರ ಪಾತ್ರ ಮತ್ತು ಪ್ರತಿಭೆಯನ್ನು ನೋಡಿ ಆಶ್ಚರ್ಯವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಭಾರತದ ಯುವಕರು 100 ಕ್ಕೂ ಹೆಚ್ಚು ಯುನಿಕಾರ್ನ್ಗಳನ್ನು ರಚಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ 80,000 ಕ್ಕೂ ಹೆಚ್ಚು ನವೋದ್ಯಮಗಳು ರೂಪುಗೊಂಡಿವೆ. ಇಂದು ಭಾರತದ ಪ್ರತಿಯೊಂದು ಕ್ಷೇತ್ರವೂ ಯುವ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ. ಭಾರತ ಕಳೆದ ವರ್ಷ ದಾಖಲೆಯ ಮಟ್ಟದಲ್ಲಿ ರಫ್ತು ಮಾಡಿದೆ. ಕೋವಿಡ್ ನಂತರದ ಪರಿಸ್ಥಿತಿಯಲ್ಲಿ, ಈ ಸಾಧನೆಯು ಬಹಳ ಮುಖ್ಯವಾಗುತ್ತದೆ. ಭಾರತದ ಯುವಕರ ಸಾಮರ್ಥ್ಯವನ್ನು ವಿಸ್ತರಿಸಲು ನಾವು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದೇವೆ. ಭಾರತದಲ್ಲಿ ವಿಶ್ವವಿದ್ಯಾನಿಲಯಗಳು, ತಂತ್ರಜ್ಞಾನ ವಿಶ್ವವಿದ್ಯಾಲಯಗಳು ಮತ್ತು ನಿರ್ವಹಣಾ ವಿಶ್ವವಿದ್ಯಾಲಯಗಳ ಸಂಖ್ಯೆಯು ವರ್ಷಗಳಲ್ಲಿ ಶೇಕಡಾ 50ರಷ್ಟು ಹೆಚ್ಚಾಗಿದೆ.

ಸ್ನೇಹಿತರೇ,

ಹೂಡಿಕೆ ಮತ್ತು ಮಾನವ ಬಂಡವಾಳದ ಮೇಲೆ ಕೇಂದ್ರೀಕರಿಸುವ ಮೂಲಕ ಮಾತ್ರ ಅಭಿವೃದ್ಧಿಯ ಉನ್ನತ ಗುರಿಗಳನ್ನು ಸಾಧಿಸಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಿದ್ದೇವೆ. ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಮಾನವ ಸಂಪನ್ಮೂಲವನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ. ಇಂದು, ಒಂದು ಕಡೆ, ನಾವು ವಿಶ್ವದ ಅತಿದೊಡ್ಡ ಉತ್ಪಾದನಾ ಪ್ರೋತ್ಸಾಹದ ಯೋಜನೆಗಳಲ್ಲಿ ಒಂದನ್ನು ಜಾರಿಗೊಳಿಸುತ್ತಿದ್ದರೆ, ಮತ್ತೊಂದೆಡೆ, ನಾವು ವಿಶ್ವದ ಅತಿದೊಡ್ಡ ಆರೋಗ್ಯ ಭರವಸೆ ಯೋಜನೆಗೆ ಭದ್ರತೆಯನ್ನು ಒದಗಿಸುತ್ತಿದ್ದೇವೆ. ಒಂದೆಡೆ, ನಮ್ಮ ದೇಶದಲ್ಲಿ ವಿದೇಶೀ ಬಂಡವಾಳವು ವೇಗವಾಗಿ ಹೆಚ್ಚುತ್ತಿದೆ, ಮತ್ತೊಂದೆಡೆ, ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಒಂದೆಡೆ, ನಾವು ವ್ಯಾಪಾರದ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕುತ್ತೇವೆ ಮತ್ತು ಇನ್ನೊಂದೆಡೆ, ನಾವು 1.5 ಲಕ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸಹ ನಿರ್ಮಿಸುತ್ತಿದ್ದೇವೆ. ಒಂದೆಡೆ, ನಾವು ದೇಶದಾದ್ಯಂತ ಹೆದ್ದಾರಿಗಳ ಜಾಲವನ್ನು ಹಾಕುತ್ತಿದ್ದೇವೆ, ಮತ್ತೊಂದೆಡೆ, ನಾವು ಜನರಿಗೆ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸುವ ಅಭಿಯಾನದಲ್ಲಿಯೂ ತೊಡಗಿದ್ದೇವೆ. ಒಂದೆಡೆ, ನಾವು ಮೆಟ್ರೋಗಳು, ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಂತಹ ಭವಿಷ್ಯದ ಮೂಲಸೌಕರ್ಯಗಳನ್ನು ರಚಿಸುವ ಕೆಲಸ ಮಾಡುತ್ತಿದ್ದೇವೆ ಮತ್ತು ಮತ್ತೊಂದೆಡೆ, ನಾವು ಸಾವಿರಾರು ಸ್ಮಾರ್ಟ್ ಶಾಲೆಗಳನ್ನು ನಿರ್ಮಿಸುತ್ತಿದ್ದೇವೆ.

ಸ್ನೇಹಿತರೇ,

ನವೀಕರಣ ಇಂಧನ ಕ್ಷೇತ್ರದಲ್ಲಿ ಭಾರತ ಇಂದು ಸಾಧಿಸಿರುವ ಸ್ಥಾನ ಇಡೀ ವಿಶ್ವಕ್ಕೆ ಉದಾಹರಣೆಯಾಗಿದೆ. ಕಳೆದ ಎಂಟು ವರ್ಷಗಳಲ್ಲಿ, ದೇಶದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಮೂರು ಪಟ್ಟು ಹೆಚ್ಚಾಗಿದೆ ಮತ್ತು ಸೌರ ಶಕ್ತಿ ಸಾಮರ್ಥ್ಯವು 20 ಪಟ್ಟು ಹೆಚ್ಚಾಗಿದೆ. ಹಸಿರು ಬೆಳವಣಿಗೆ ಮತ್ತು ಸುಸ್ಥಿರ ಶಕ್ತಿಯ ಕಡೆಗೆ ನಮ್ಮ ಉಪಕ್ರಮಗಳು ಹೆಚ್ಚಿನ ಸಂಖ್ಯೆಯ ಹೂಡಿಕೆದಾರರನ್ನು ಆಕರ್ಷಿಸಿವೆ. ತಮ್ಮ ಹೂಡಿಕೆಯ ಮೇಲೆ ಆದಾಯವನ್ನು ಬಯಸುವವರು ಮತ್ತು ಈ ಭೂಮಿಯ ಮೇಲಿನ ತಮ್ಮ ಜವಾಬ್ದಾರಿಯನ್ನು ಪೂರೈಸಲು ಬಯಸುವವರು ಅವರು ಭರವಸೆಯಿಂದ ಭಾರತದತ್ತ ನೋಡುತ್ತಿದ್ದಾರೆ.

ಸ್ನೇಹಿತರೇ,

ಕರ್ನಾಟಕದಿಂದ ಇನ್ನೊಂದು ಅನುಕೂಲವಿದೆ. ಕರ್ನಾಟಕವು ಡಬಲ್ ಎಂಜಿನ್ ಸರ್ಕಾರದ ಅಧಿಕಾರವನ್ನು ಹೊಂದಿದೆ, ಅಂದರೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಒಂದೇ ಪಕ್ಷದ ನೇತೃತ್ವದಲ್ಲಿದೆ. ಕರ್ನಾಟಕ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಇದೂ ಒಂದು ಕಾರಣ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ನಲ್ಲಿ ಕರ್ನಾಟಕವು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ವಿದೇಶೀ ಬಂಡವಾಳದ ವಿಷಯದಲ್ಲಿ ಕರ್ನಾಟಕ ಅಗ್ರ ರಾಜ್ಯಗಳ ಪಟ್ಟಿಗೆ ಸೇರಲು ಇದೇ ಕಾರಣ. ಫಾರ್ಚೂನ್ 500 ಕಂಪನಿಗಳಲ್ಲಿ 400 ಕರ್ನಾಟಕದಲ್ಲಿವೆ. ಭಾರತದ 100ಕ್ಕೂ ಹೆಚ್ಚು ಯುನಿಕಾರ್ನ್ಗಳಲ್ಲಿ, 40 ಕ್ಕೂ ಹೆಚ್ಚು ಕರ್ನಾಟಕದಲ್ಲಿವೆ. ಕರ್ನಾಟಕ ಇಂದು ವಿಶ್ವದಲ್ಲಿಯೇ ಅತಿ ದೊಡ್ಡ ತಂತ್ರಜ್ಞಾನ ಸಮೂಹವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೈಗಾರಿಕೆಯಿಂದ ಹಿಡಿದು   ಮಾಹಿತಿ ತಂತ್ರಜ್ಞಾನದವರೆಗೆ, ಫಿನ್ ಟೆಕ್ ನಿಂದ ಬಯೋಟೆಕ್ ವರೆಗೆ, ನವೋದ್ಯಮಗಳಿಂದ ಹಿಡಿದು ಸುಸ್ಥಿರ ಇಂಧನದವರೆಗೆ, ಇಲ್ಲಿ ಕರ್ನಾಟಕದಲ್ಲಿ ಹೊಸ ಅಭಿವೃದ್ಧಿಯ ಯಶೋಗಾಥೆ ಬರೆಯಲಾಗುತ್ತಿದೆ. ಕೆಲವು ಅಭಿವೃದ್ಧಿ ಅಂಕಿಅಂಶಗಳ ಪ್ರಕಾರ ಕರ್ನಾಟಕವು ಭಾರತದ ಇತರ ರಾಜ್ಯಗಳಿಗೆ ಮಾತ್ರವಲ್ಲದೆ ಕೆಲವು ದೇಶಗಳಿಗೂ ಸವಾಲು ಹಾಕುತ್ತಿದೆ. ಇಂದು ಭಾರತವು ನ್ಯಾಷನಲ್ ಸೆಮಿಕಂಡಕ್ಟರ್ ಮಿಷನ್ ನೊಂದಿಗೆ ಉತ್ಪಾದನಾ ಕ್ಷೇತ್ರದ ಹೊಸ ಹಂತವನ್ನು ಪ್ರವೇಶಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಪಾತ್ರ ಬಹಳ ಮುಖ್ಯವಾಗಿದೆ. ಇಲ್ಲಿನ ತಾಂತ್ರಿಕ ಪರಿಸರ ವ್ಯವಸ್ಥೆಯು ಚಿಪ್ ವಿನ್ಯಾಸ ಮತ್ತು ಉತ್ಪಾದನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.

ಸ್ನೇಹಿತರೇ,

ಹೂಡಿಕೆದಾರರು ಮಧ್ಯಮ ಅವಧಿಯ ಮಿಷನ್ ಮತ್ತು ದೀರ್ಘಾವಧಿಯ ದೃಷ್ಟಿಯೊಂದಿಗೆ ಮುಂದುವರಿಯುತ್ತಾರೆ ಎಂದು ನಿಮಗೆ ತಿಳಿದಿದೆ. ಮತ್ತು ಭಾರತವು ಸ್ಫೂರ್ತಿದಾಯಕ ದೀರ್ಘಾವಧಿಯ ದೃಷ್ಟಿಯನ್ನು ಹೊಂದಿದೆ. ನ್ಯಾನೋ ಯೂರಿಯಾ, ಹೈಡ್ರೋಜನ್ ಇಂಧನ, ಹಸಿರು ಅಮೋನಿಯಾ, ಕಲ್ಲಿದ್ದಲು ಅನಿಲೀಕರಣ ಅಥವಾ ಬಾಹ್ಯಾಕಾಶ ಉಪಗ್ರಹಗಳು ಇಂದು ಭಾರತವು ಪ್ರಪಂಚದ ಅಭಿವೃದ್ಧಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಇದು ಭಾರತದ ‘ಅಮೃತ ಕಾಲ’. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನವ ಭಾರತ ನಿರ್ಮಾಣದ ಪಣ ತೊಡುವ ಮೂಲಕ ದೇಶದ ಜನತೆ ಮುನ್ನಡೆಯುತ್ತಿದ್ದಾರೆ. ನಾವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ಮಾಡುವ ಗುರಿಯನ್ನು ಹೊಂದಿದ್ದೇವೆ. ಆದ್ದರಿಂದ, ನಿಮ್ಮ ಹೂಡಿಕೆ ಮತ್ತು ಭಾರತದ ಸ್ಫೂರ್ತಿಯ ಸಮ್ಮಿಲನವು ಬಹಳ ಮುಖ್ಯವಾಗಿದೆ, ಏಕೆಂದರೆ ಅಂತರ್ಗತ, ಪ್ರಜಾಪ್ರಭುತ್ವ ಮತ್ತು ಬಲಿಷ್ಠ ಭಾರತದ ಅಭಿವೃದ್ಧಿಯು ಪ್ರಪಂಚದ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. ಅದಕ್ಕಾಗಿಯೇ ನಾವು ಭಾರತದಲ್ಲಿ ಹೂಡಿಕೆ ಎಂದರೆ ಒಳಗೊಳ್ಳುವಲ್ಲಿ ಹೂಡಿಕೆ ಮತ್ತು ಪ್ರಜಾಪ್ರಭುತ್ವದಲ್ಲಿ ಹೂಡಿಕೆ ಎಂದು ಹೇಳುತ್ತೇವೆ. ಭಾರತದಲ್ಲಿ ಹೂಡಿಕೆ ಎಂದರೆ ಪ್ರಪಂಚಕ್ಕಾಗಿ ಹೂಡಿಕೆ. ಭಾರತದಲ್ಲಿ ಹೂಡಿಕೆ ಎಂದರೆ ಉತ್ತಮ ಪೃಥ್ವಿಗಾಗಿ ಹೂಡಿಕೆ. ಭಾರತದಲ್ಲಿ ಹೂಡಿಕೆ ಎಂದರೆ ಸ್ವಚ್ಛ- ಸುರಕ್ಷಿತ ಪೃಥ್ವಿಗಾಗಿ ಹೂಡಿಕೆ. ಕೋಟ್ಯಂತರ ಜನರ ಬದುಕನ್ನು ಬದಲಾಯಿಸುವ ಗುರಿಯೊಂದಿಗೆ ನಾವು ಒಟ್ಟಾಗಿ ಮುನ್ನಡೆಯೋಣ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ಶುಭಾಶಯಗಳು! ಕರ್ನಾಟಕದ ಮುಖ್ಯಮಂತ್ರಿಗಳಿಗೆ, ಅವರ ಇಡೀ ತಂಡಕ್ಕೆ, ಕರ್ನಾಟಕ ಸರ್ಕಾರಕ್ಕೆ ಮತ್ತು ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ತುಂಬ ಧನ್ಯವಾದಗಳು.