ನವದೆಹಲಿಯಲ್ಲಿ ಇಂದು ನಡೆದ ಇಟಿ ನೌ ಜಾಗತಿಕ ವ್ಯಾಪಾರ ಶೃಂಗಸಭೆ 2025ರಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಇಟಿ ನೌ ಶೃಂಗಸಭೆಯ ಕಳೆದ ಆವೃತ್ತಿಯಲ್ಲಿ, ಭಾರತವು ತಮ್ಮ ಮೂರನೇ ಅವಧಿಯಲ್ಲಿ ಹೊಸ ವೇಗದಲ್ಲಿ ಕೆಲಸ ಮಾಡುತ್ತದೆ ಎಂದು ವಿನಮ್ರವಾಗಿ ಹೇಳಿದ್ದನ್ನು ನೆನಪಿಸಿಕೊಂಡರು. ಈ ವೇಗವು ಈಗ ತೀವ್ರವಾಗಿದ್ದು ದೇಶದಿಂದ ಬೆಂಬಲವನ್ನು ಪಡೆಯುತ್ತಿರುವುದಾಗಿ ಅವರು ತೃಪ್ತಿ ವ್ಯಕ್ತಪಡಿಸಿದರು. ವಿಕಸಿತ ಭಾರತದ ಬದ್ಧತೆಗೆ ಅಪಾರ ಬೆಂಬಲ ನೀಡಿದ ಒಡಿಶಾ, ಮಹಾರಾಷ್ಟ್ರ, ಹರಿಯಾಣ ಮತ್ತು ನವದೆಹಲಿಯ ಜನರಿಗೆ ಅವರು ಧನ್ಯವಾದ ಅರ್ಪಿಸಿದರು. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಮುಟ್ಟುವಲ್ಲಿ ದೇಶದ ನಾಗರಿಕರು ಹೇಗೆ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ದೊರೆತ ಮನ್ನಣೆ ಇದು ಎಂದು ಅವರು ಹೇಳಿದರು.
“ಇಂದು, ಪ್ರಮುಖ ರಾಷ್ಟ್ರಗಳು ಅಥವಾ ಜಾಗತಿಕ ವೇದಿಕೆಗಳಲ್ಲಿ, ಭಾರತದ ಮೇಲಿನ ವಿಶ್ವಾಸ ಹಿಂದೆಂದಿಗಿಂತಲೂ ಬಲವಾಗಿದೆ” ಎಂದು ಫ್ರಾನ್ಸ್ ಮತ್ತು ಯುಎಸ್ಎಗೆ ನೀಡಿದ ಭೇಟಿಯಿಂದ ನಿನ್ನೆ ಹಿಂದಿರುಗಿದ ಶ್ರೀ ಮೋದಿಯವರು ಹೇಳಿದರು. ಈ ಭಾವನೆ ಪ್ಯಾರಿಸ್‌ನಲ್ಲಿ ನಡೆದ ಕೃತಕ ಬುದ್ಧಿಮತ್ತೆ ಆಕ್ಷನ್ ಶೃಂಗಸಭೆಯಲ್ಲೂ ಪ್ರತಿಬಿಂಬಿತವಾಗಿದೆ ಎಂದು ಅವರು ಉಚ್ಚರಿಸಿದರು. “ಇಂದು, ಭಾರತ ಜಾಗತಿಕ ಭವಿಷ್ಯದ ಚರ್ಚೆಯ ಕೇಂದ್ರಬಿಂದುವಾಗಿದ್ದು, ಕೆಲವು ವಿಷಯಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ” ಎಂದು ಪ್ರಧಾನಿ ಹೇಳಿದರು. ಇದು 2014ರಿಂದ ಈಚೆಗೆ ಭಾರತದಲ್ಲಿ ನಡೆದ ಸುಧಾರಣೆಯ ಹೊಸ ಕ್ರಾಂತಿಯ ಫಲವಾಗಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಭಾರತವು ವಿಶ್ವದ 5 ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ, ಇದು ವಿಕಸಿತ ಭಾರತದ ಅಭಿವೃದ್ಧಿಯ ವೇಗವನ್ನು ಸೂಚಿಸುತ್ತದೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ಕೆಲವೇ ವರ್ಷಗಳಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವುದನ್ನು ಜನರು ಶೀಘ್ರದಲ್ಲೇ ನೋಡಲಿದ್ದಾರೆ ಎಂದು ಅವರು ಹೇಳಿದರು. ಭಾರತದಂತಹ ಯುವ ದೇಶಕ್ಕೆ ಇದು ಅಗತ್ಯವಾದ ವೇಗವಾಗಿದೆ ಎಂದು ಅವರು ಸ್ಪಷ್ಟೀಕರಿಸಿದ್ದು, ಭಾರತವು ಇದೇ ವೇಗದಲ್ಲಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.
ಹಿಂದಿನ ಸರ್ಕಾರಗಳು ಕಠಿಣ ಪರಿಶ್ರಮವನ್ನು ಕೈಗೊಳ್ಳಲು ಬಯಸಲಿಲ್ಲ. ಈ ಮನಸ್ಥಿತಿಯ ಕಾರಣದೊಂದಿಗೆ ಸುಧಾರಣೆಗಳನ್ನು ಮಾಡುವ ನಿಟ್ಟಿನಲ್ಲಿ ಹಿಂದಿನ ಸರ್ಕಾರಗಳು ಸೋತಿವೆ ಎಂದು ಪ್ರಧಾನಿಯವರು ಹೇಳಿದರು. ಇಂದು ಭಾರತದಲ್ಲಿ ಕೈಗೊಳ್ಳಲಾಗುತ್ತಿರುವ ಸುಧಾರಣೆಗಳು ಸಂಪೂರ್ಣ ದೃಢನಿಶ್ಚಯದಿಂದ ಕೂಡಿವೆ ಎಂಬ ಮಾತನ್ನು ಅವರು ಹೇಳಿದರು. ಪ್ರಮುಖ ಸುಧಾರಣೆಗಳು ದೇಶದಲ್ಲಿ ಹೇಗೆ ಗಮನಾರ್ಹ ಬದಲಾವಣೆಗಳನ್ನು ತರಬಹುದು ಎಂಬುದರ ಬಗ್ಗೆ ಹಿಂದಿನ ಸರ್ಕಾರಗಳು ಯಾವುದೇ ಚರ್ಚೆಯನ್ನೂ ಮಾಡಿಲ್ಲ ಎಂದು ಅವರು ಒತ್ತಿ ಹೇಳಿದರು. ವಸಾಹತುಶಾಹಿಯ ಹೊರೆಯಲ್ಲಿ ಬದುಕುವುದು ಭಾರತದಲ್ಲಿ ಒಂದು ಅಭ್ಯಾಸವಾಗಿ ಮಾರ್ಪಟ್ಟಿದೆ ಎಂದು ಅವರು ಗಮನಸೆಳೆದರು. ಸ್ವಾತಂತ್ರ್ಯದ ನಂತರವೂ, ಬ್ರಿಟಿಷ್ ಯುಗದ ಅವಶೇಷಗಳನ್ನು ಭಾರತದಲ್ಲಿ ಮುಂದುವರಿಸಲಾಯಿತು. ‘ವಿಳಂಬವಾಗಿ ದೊರೆತ ನ್ಯಾಯವು ನ್ಯಾಯದ ನಿರಾಕರಣೆ’ ಎಂಬಂತಹ ನುಡಿಗಟ್ಟುಗಳು ದೀರ್ಘಕಾಲದವರೆಗೆ ಕೇಳಿಬಂದ ಉದಾಹರಣೆಯಾಗಿದೆ ಅವರು ಉಲ್ಲೇಖಿಸಿದರು, ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಹಿಂದಿನ ಸರ್ಕಾರಗಳು ಯಾವುದೇ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಕಾಲಾನಂತರದಲ್ಲಿ, ಜನರು ಈ ವಿಷಯಗಳಿಗೆ ಎಷ್ಟು ಒಗ್ಗಿಕೊಂಡರು ಎಂದರೆ ಅವರು ಬದಲಾವಣೆಯ ಅಗತ್ಯವನ್ನು ಸಹ ಬಯಸಲಿಲ್ಲ ಎಂದು ಪ್ರಧಾನಿಯವರು ಹೇಳಿದರು. ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡದ ಮತ್ತು ಅಂತಹ ಚರ್ಚೆಗಳನ್ನು ತಡೆಗಟ್ಟಲು ಪ್ರಯತ್ನಿಸುವ ಪರಿಸರ ವ್ಯವಸ್ಥೆ ಇದೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವದಲ್ಲಿ, ಸಕಾರಾತ್ಮಕ ವಿಷಯಗಳ ಬಗ್ಗೆ ಮಾತುಕತೆ ಮತ್ತು ಚರ್ಚೆಗಳು ಬಹಳ ಮುಖ್ಯ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ನಕಾರಾತ್ಮಕವಾಗಿ ಏನನ್ನಾದರೂ ಹೇಳುವುದು ಅಥವಾ ನಕಾರಾತ್ಮಕತೆಯನ್ನು ಹರಡುವುದು ಪ್ರಜಾಪ್ರಭುತ್ವವೆಂದು ಪರಿಗಣಿಸಲಾಗುತ್ತಿದ್ದು, ಸಕಾರಾತ್ಮಕ ವಿಷಯಗಳ ಚರ್ಚೆಯನ್ನು ಪ್ರಜಾಪ್ರಭುತ್ವವನ್ನು ದುರ್ಬಲ ಎಂದು ಕಡೆಗಣಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಮನಸ್ಥಿತಿಯಿಂದ ಹೊರಬರುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ವಸಾಹತುಶಾಹಿ ಆಡಳಿತವನ್ನು ಬಲಪಡಿಸಿ, ಭಾರತೀಯ ನಾಗರಿಕರನ್ನು ಶಿಕ್ಷಿಸುವ ಗುರಿಯನ್ನು ಹೊಂದಿದ್ದ 1860ರ ಹಳೆಯ ದಂಡ ಸಂಹಿತೆಗಳು ಇತ್ತೀಚಿನವರೆಗೂ ಭಾರತದಲ್ಲಿದ್ದವು ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿಯವರು, ಶಿಕ್ಷೆಯ ಹೆನ್ನೆಲೆಯನ್ನು ಹೊಂದಿರುವ ನ್ಯಾಯ ವ್ಯವಸ್ಥೆಯು ನ್ಯಾಯವನ್ನು ಒದಗಿಸಲು ಸಾಧ್ಯವಿಲ್ಲ, ಇದು ದೀರ್ಘಕಾಲದ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. 7-8 ತಿಂಗಳ ಹಿಂದೆ ಹೊಸ ಭಾರತೀಯ ನ್ಯಾಯಾಂಗ ಸಂಹಿತೆಯನ್ನು ಜಾರಿಗೆ ತಂದಾಗಿನಿಂದ, ಗಮನಾರ್ಹ ಬದಲಾವಣೆಗಳು ಸಂಭವಿಸಿವೆ ಎಂದು ಅವರು ಹೇಳಿದರು. ಉದಾಹರಣೆಗೆ, ತ್ರಿವಳಿ ಕೊಲೆ ಪ್ರಕರಣವನ್ನು ಎಫ್ಐಆರ್ ನಿಂದ ಶಿಕ್ಷೆಯವರೆಗೆ ಕೇವಲ 14 ದಿನಗಳಲ್ಲಿ ಪರಿಹರಿಸಲಾಯಿತು, ಇದರ ಪರಿಣಾಮವಾಗಿ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಅಂತೆಯೇ, ಅಪ್ರಾಪ್ತ ವಯಸ್ಕನ ಕೊಲೆ ಪ್ರಕರಣವನ್ನು 20 ದಿನಗಳಲ್ಲಿ ಪರಿಹರಿಸಲಾಯಿತು. ಗುಜರಾತ್ ನಲ್ಲಿ 2024ರ ಅಕ್ಟೋಬರ್ 9ರಂದು ದಾಖಲಾದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಕ್ಟೋಬರ್ 26ರೊಳಗೆ ಚಾರ್ಜ್ ಶೀಟ್ ಸಲ್ಲಿಸಿ, ಇಂದು ನ್ಯಾಯಾಲಯವು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ ಎಂದು ಪ್ರಧಾನಿಯವರು ಗಮನಸೆಳೆದರು. ಆಂಧ್ರಪ್ರದೇಶದ ಮತ್ತೊಂದು ಉದಾಹರಣೆಯನ್ನು ಉಲ್ಲೇಖಿಸಿದ ಅವರು, 5 ತಿಂಗಳ ಮಗುವಿನ ಪ್ರಕರಣವನ್ನು ಒಳಗೊಂಡ ಅಪರಾಧದಲ್ಲಿ, ನ್ಯಾಯಾಲಯವು ಅಪರಾಧಿಗೆ 25 ವರ್ಷಗಳ ಶಿಕ್ಷೆ ವಿಧಿಸಿತು. ಈ ಪ್ರಕರಣದಲ್ಲಿ ಡಿಜಿಟಲ್ ಪುರಾವೆಗಳು ನಿರ್ಣಾಯಕ ಪಾತ್ರ ವಹಿಸಿದವು ಎಂದು ತಿಳಿಸಿದರು. ಮತ್ತೊಂದು ಪ್ರಕರಣದಲ್ಲಿ, ಇ-ಜೈಲು ಮಾಡ್ಯೂಲ್, ಈ ಹಿಂದೆ ಮತ್ತೊಂದು ರಾಜ್ಯದಲ್ಲಿ ಅಪರಾಧಕ್ಕಾಗಿ ತಪ್ಪಿಸಿಕೊಂಡ ಅತ್ಯಾಚಾರ ಮತ್ತು ಕೊಲೆ ಶಂಕಿತನನ್ನು ಪತ್ತೆಹಚ್ಚಲು ಸಹಾಯ ಮಾಡಿ, ಅಪರಾಧಿಯ ತ್ವರಿತ ಬಂಧನಕ್ಕೆ ಕಾರಣವಾಯಿತು ಎಂದರು. ಈಗ ಜನರಿಗೆ ಸಕಾಲದಲ್ಲಿ ನ್ಯಾಯ ದೊರಕುತ್ತಿರುವ ಹಲವಾರು ನಿದರ್ಶನಗಳಿವೆ ಎಂದು ಅವರು ಹೇಳಿದರು.
ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಪ್ರಮುಖ ಸುಧಾರಣೆಯ ಬಗ್ಗೆ ಪ್ರಸ್ತಾಪಿಸಿದ ಶ್ರೀ ಮೋದಿಯವರು, ಒಂದು ದೇಶದಲ್ಲಿ ಆಸ್ತಿ ಹಕ್ಕುಗಳ ಕೊರತೆಯು ಗಮನಾರ್ಹ ಸವಾಲಾಗಿದೆ ಎಂದು ಸೂಚಿಸುವ ವಿಶ್ವಸಂಸ್ಥೆಯ ಅಧ್ಯಯನವನ್ನು ಅವರು ಉಲ್ಲೇಖಿಸಿದರು. ವಿಶ್ವಾದ್ಯಂತ ಲಕ್ಷಾಂತರ ಜನರು ಕಾನೂನುಬದ್ಧ ಆಸ್ತಿ ದಾಖಲೆಗಳನ್ನು ಹೊಂದಿಲ್ಲ. ಅವರು ಕಾನೂನುಬದ್ಧ ಆಸ್ತಿ ಹಕ್ಕುಗಳನ್ನು ಹೊಂದಿದ್ದರೆ ಅವು ಅವರ ಬಡತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಗಮನಸೆಳೆದರು. ಹಿಂದಿನ ಸರ್ಕಾರಗಳು ಈ ಜಟಿಲತೆಗಳ ಬಗ್ಗೆ ತಿಳಿದಿದ್ದರೂ ಕೂಡಾ ಅವುಗಳ ನಿವಾರಣೆಯ ಬಗ್ಗೆ ಗಮನ ಹರಿಸಲಿಲ್ಲ ಎಂದು ಅವರು ಹೇಳಿದರು. ಈ ವಿಧಾನವು ದೇಶವನ್ನು ನಿರ್ಮಿಸುವುದಾಗಲಿ ಅಥವಾ ಮುನ್ನಡೆಸುವುದಾಗಲಿ ಮಾಡುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಈಗ ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ ದೇಶದ 3 ಲಕ್ಷಕ್ಕೂ ಹೆಚ್ಚು ಗ್ರಾಮಗಳು ಡ್ರೋನ್ ಸಮೀಕ್ಷೆಗೆ ಒಳಗಾಗಿವೆ ಮತ್ತು 2.25 ಕೋಟಿಗೂ ಹೆಚ್ಚು ಜನರು ಆಸ್ತಿ ಕಾರ್ಡ್ ಗಳನ್ನು ಪಡೆದಿದ್ದಾರೆ ಎಂದು ಶ್ರೀ ಮೋದಿಯವರು ಹೇಳಿದರು. ಸ್ವಾಮಿತ್ವ ಯೋಜನೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ 100 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಮುಕ್ತ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಆಸ್ತಿ ಈ ಹಿಂದೆಯೂ ಅಸ್ತಿತ್ವದಲ್ಲಿದ್ದು, ಆಸ್ತಿ ಹಕ್ಕುಗಳ ಕೊರತೆಯಿಂದಾಗಿ ಆರ್ಥಿಕ ಅಭಿವೃದ್ಧಿಗೆ ಅದರ ಉಪಯೋಗವನ್ನು ಬಳಸಲಾಗಲಿಲ್ಲ ಎಂದು ಅವರು ಹೇಳಿದರು. ಆಸ್ತಿ ಹಕ್ಕುಗಳ ಅನುಪಸ್ಥಿತಿಯಿಂದಾಗಿ, ಗ್ರಾಮಸ್ಥರು ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ಈ ಸಮಸ್ಯೆಯನ್ನು ಈಗ ಶಾಶ್ವತವಾಗಿ ಪರಿಹರಿಸಲಾಗಿದೆ ಮತ್ತು ಇಂದು, ಸ್ವಾಮಿತ್ವ ಯೋಜನೆಯಮೂಲಕ ಆಸ್ತಿ ಕಾರ್ಡ್ ಗಳಿಂದ ಜನರು ಹೇಗೆ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದರ ಕುರಿತು ದೇಶಾದ್ಯಂತ ಹಲವಾರು ವರದಿಗಳು ಬಂದಿವೆ ಎಂದು ಅವರು ಹೇಳಿದರು. ಈ ಯೋಜನೆಯಡಿ ಪ್ರಾಪರ್ಟಿ ಕಾರ್ಡ್ ಪಡೆದ ರಾಜಸ್ಥಾನದ ಮಹಿಳೆಯೊಂದಿಗೆ ಇತ್ತೀಚೆಗೆ ನಡೆದ ಸಂಭಾಷಣೆಯನ್ನು ಪ್ರಧಾನಿಯವರು ಹಂಚಿಕೊಂಡರು. ಅವರ ಕುಟುಂಬವು 20 ವರ್ಷಗಳಿಂದ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು, ಆಸ್ತಿ ಕಾರ್ಡ್ ಪಡೆದ ನಂತರ, ಅವರು ಬ್ಯಾಂಕಿನಿಂದ ಸುಮಾರು 8 ಲಕ್ಷ ರೂ.ಗಳ ಸಾಲವನ್ನು ಪಡೆದರು. ಈ ಹಣದಿಂದ, ಅವರು ಅಂಗಡಿಯನ್ನು ಪ್ರಾರಂಭಿಸಿ, ತಮ್ಮ ಆದಾಯವನ್ನು ಈಗ ಅವರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಉಪಯೋದಿಸುತ್ತಿದ್ದಾರೆ. ಮತ್ತೊಂದು ರಾಜ್ಯದ ಮತ್ತೊಂದು ಘಟನೆಯನ್ನು ನೆನಪಿಸಿಕೊಂಡ ಪ್ರಧಾನಿಯವರು, ಗ್ರಾಮಸ್ಥರೊಬ್ಬರು ತಮ್ಮ ಆಸ್ತಿ ಕಾರ್ಡ್ ಬಳಸಿ ಬ್ಯಾಂಕಿನಿಂದ 4.5 ಲಕ್ಷ ರೂ.ಗಳ ಸಾಲವನ್ನು ಪಡೆದು, ಸಾರಿಗೆ ವ್ಯವಹಾರವನ್ನು ಪ್ರಾರಂಭಿಸಲು ವಾಹನವನ್ನು ಖರೀದಿಸಿದರು ಎಂದು ಹೇಳಿದರು. ಮತ್ತೊಂದು ಹಳ್ಳಿಯಲ್ಲಿ, ಒಬ್ಬ ರೈತನು ತನ್ನ ಭೂಮಿಯಲ್ಲಿ ಆಧುನಿಕ ನೀರಾವರಿ ಸೌಲಭ್ಯಗಳನ್ನು ಸ್ಥಾಪಿಸಲು ತನ್ನ ಆಸ್ತಿ ಕಾರ್ಡ್ ಮೇಲಿನ ಸಾಲವನ್ನು ಬಳಸಿದ್ದಾನೆ. ಈ ಸುಧಾರಣೆಗಳಿಂದಾಗಿ ಹಳ್ಳಿಗಳು ಮತ್ತು ಬಡವರು ಹೊಸ ಆದಾಯದ ಮಾರ್ಗಗಳನ್ನು ಕಂಡುಕೊಂಡ ಇಂತಹ ಅನೇಕ ಉದಾಹರಣೆಗಳನ್ನು ಪ್ರಧಾನಿಯವರು ಎತ್ತಿ ಹಿಡಿದರು. ಇವು ಸಾಮಾನ್ಯವಾಗಿ ಪತ್ರಿಕೆಗಳು ಮತ್ತು ಟಿವಿ ಚಾನೆಲ್ ಗಳಲ್ಲಿ ಮುಖ್ಯಾಂಶಗಳಲ್ಲಿ ಸ್ಥಾನ ಪಡೆಯದ ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯ ನೈಜ ಕಥೆಗಳು ಎಂದು ಅವರು ಬಣ್ಣಿಸಿದರು.
ಸ್ವಾತಂತ್ರ್ಯದ ನಂತರ, ಕಳಪೆ ಆಡಳಿತದಿಂದಾಗಿ ದೇಶದ ಹಲವಾರು ಜಿಲ್ಲೆಗಳು ಅಭಿವೃದ್ಧಿಯಿಂದ ವಂಚಿತವಾಗಿದ್ದವು ಎಂದು ಹೇಳಿದ ಶ್ರೀ ಮೋದಿಯವರು, ಈ ಜಿಲ್ಲೆಗಳತ್ತ ಗಮನ ಹರಿಸುವ ಬದಲು, ಅವುಗಳನ್ನು ಹಿಂದುಳಿದ ಜಿಲ್ಲೆಗಳು ಎಂದು ಹಣೆಪಟ್ಟಿ ಕಟ್ಟಿ, ಅವುಗಳನ್ನು ಕೈ ಬಿಡಲಾಗಿತ್ತು ಎಂದು ಹೇಳಿದರು. ಆ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಲು ಯಾರೂ ಸಿದ್ಧರಿರಲಿಲ್ಲ. ಸರ್ಕಾರಿ ಅಧಿಕಾರಿಗಳನ್ನು ಶಿಕ್ಷೆಯ ರೂಪದಲ್ಲಿ ಆ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿತ್ತು ಎಂದು ಅವರು ಹೇಳಿದರು. “ನಾವು 100ಕ್ಕೂ ಹೆಚ್ಚು ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿ ಘೋಷಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿದ್ದೇವೆ” ಎಂದು ಪ್ರಧಾನಿಯವರು ಹೇಳಿದರು. ಸೂಕ್ಷ್ಮವಾದ ತಳ ಮಟ್ಟದಲ್ಲಿ ಆಡಳಿತವನ್ನು ಸುಧಾರಿಸಲು ಯುವ ಅಧಿಕಾರಿಗಳನ್ನು ಈ ಜಿಲ್ಲೆಗಳಿಗೆ ಕಳುಹಿಸಲಾಗಿತ್ತು, ಅವರು ಈ ಜಿಲ್ಲೆಗಳು ಹಿಂದುಳಿದಿರುವ ಸೂಚಕಗಳ ಮೇಲೆ ಕಾರ್ಯ ನಿರ್ವಹಿಸಿ, ಮಿಷನ್ ಮೋಡ್ ನಲ್ಲಿ ಸರ್ಕಾರದ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದರು ಎಂದು ಅವರು ಹೇಳಿದರು. “ಇಂದು, ಈ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಅನೇಕ ಜಿಲ್ಲೆಗಳು ಸ್ಪೂರ್ತಿದಾಯಕ ಜಿಲ್ಲೆಗಳಾಗಿವೆ” ಎಂದು ಅವರು ಹೇಳಿದರು. ಒಂದು ಉದಾಹರಣೆಯನ್ನು ಉಲ್ಲೇಖಿಸಿದ ಶ್ರೀ ಮೋದಿಯವರು, 2018ರಲ್ಲಿ, ಅಸ್ಸಾಂನ ಬಾರ್ಪೇಟಾದ ಜಿಲ್ಲೆಯಲ್ಲಿ ಕೇವಲ 26% ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಸರಿಯಾದ ವಿದ್ಯಾರ್ಥಿ-ಶಿಕ್ಷಕರ ಅನುಪಾತವಿತ್ತು, ಅದು ಈಗ 100% ಆಗಿದೆ. ಬಿಹಾರದ ಬೆಗುಸರಾಯ್ ನಲ್ಲಿ ಪೂರಕ ಪೌಷ್ಠಿಕಾಂಶವನ್ನು ಪಡೆಯುವ ಗರ್ಭಿಣಿಯರ ಸಂಖ್ಯೆ 21% ಮತ್ತು ಉತ್ತರ ಪ್ರದೇಶದ ಚಂದೌಲಿಯಲ್ಲಿ ಇದು 14% ಆಗಿದ್ದರೆ, ಇಂದು ಎರಡೂ ಜಿಲ್ಲೆಗಳು 100% ಅಭಿವೃದ್ಧಿಯನ್ನು ಸಾಧಿಸಿವೆ ಎಂದು ಅವರು ಹೇಳಿದರು. ಮಕ್ಕಳ ರೋಗನಿರೋಧಕ ಅಭಿಯಾನಗಳಲ್ಲಿ ಗಮನಾರ್ಹ ಸುಧಾರಣೆಯನ್ನು ಪ್ರಧಾನಿಯವರು ಉಲ್ಲೇಖಿಸಿದರು. ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ಈ ಪ್ರಮಾಣ ಶೇ.49ರಿಂದ ಶೇ.86ಕ್ಕೆ ಏರಿಕೆಯಾಗಿದ್ದರೆ, ತಮಿಳುನಾಡಿನ ರಾಮನಾಥಪುರಂನಲ್ಲಿ ಶೇ.67ರಿಂದ ಶೇ.93ಕ್ಕೆ ಏರಿಕೆಯಾಗಿದೆ. ಇಂತಹ ಯಶಸ್ಸನ್ನು ಕಂಡು, ದೇಶದ 500 ಪ್ರದೇಶಗಳನ್ನು ಈಗ ಮಹತ್ವಾಕಾಂಕ್ಷೆಯ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ತ್ವರಿತ ಕೆಲಸ ನಡೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಈ ಶೃಂಗಸಭೆಯಲ್ಲಿ ಉದ್ಯಮದ ನಾಯಕರ ವ್ಯವಹಾರದಲ್ಲಿ ಹಲವು ದಶಕಗಳ ಅನುಭವವನ್ನು ಒಪ್ಪಿಕೊಂಡ ಪ್ರಧಾನಮಂತ್ರಿಯವರು, ಭಾರತದಲ್ಲಿನ ವ್ಯಾಪಾರ ವಾತಾವರಣವು ಅವರ ಆಶಯದ ಪಟ್ಟಿಯ ಒಂದು ಭಾಗವಾಗಿತ್ತು ಎಂಬುದನ್ನು ಸ್ಮರಿಸಿದ ಅವರು ಮತ್ತು ಕಳೆದ 10 ವರ್ಷಗಳಲ್ಲಿ ಆಗಿರುವ ಪ್ರಗತಿಯನ್ನು ಉಲ್ಲೇಖಿಸಿದರು. ಒಂದು ದಶಕದ ಹಿಂದೆ, ಭಾರತೀಯ ಬ್ಯಾಂಕುಗಳು ಬಿಕ್ಕಟ್ಟಿನಲ್ಲಿದ್ದು, ಬ್ಯಾಂಕಿಂಗ್ ವ್ಯವಸ್ಥೆ ದುರ್ಬಲವಾಗಿತ್ತು, ಲಕ್ಷಾಂತರ ಭಾರತೀಯರು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿದ್ದರು ಎಂದು ಅವರು ಒತ್ತಿ ಹೇಳಿದರು. “ಸಾಲದ ಲಭ್ಯತೆಯು ಅತ್ಯಧಿಕ ಸವಾಲಾಗಿರುವ ದೇಶಗಳಲ್ಲಿ ಭಾರತವೂ ಒಂದಾಗಿತ್ತು” ಎಂದು ಅವರು ಹೇಳಿದರು. “ಬ್ಯಾಂಕಿಂಗ್ ಕ್ಷೇತ್ರವನ್ನು ಬಲಪಡಿಸುವಲ್ಲಿ ಸರ್ಕಾರದ ಕೆಲವು ಕಾರ್ಯತಂತ್ರಗಳು: ಬ್ಯಾಂಕಿಂಗ್ ಇಲ್ಲದವರಿಗೆ ಬ್ಯಾಂಕಿಂಗ್, ಅಸುರಕ್ಷಿತರಿಗೆ ಭದ್ರತೆ ಮತ್ತು ಹಣವಿಲ್ಲದವರಿಗೆ ಧನಸಹಾಯ” ಎಂದು ಶ್ರೀ ಮೋದಿಯವರು ವಿವರಿಸಿದರು. ಆರ್ಥಿಕ ಸೇರ್ಪಡೆಯು ಗಮನಾರ್ಹವಾಗಿ ಸುಧಾರಿಸಿದ್ದು, ಬಹುತೇಕ ಪ್ರತಿ ಹಳ್ಳಿಯೂ ಈಗ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬ್ಯಾಂಕ್ ಶಾಖೆ ಅಥವಾ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಅನ್ನು ಹೊಂದಿದೆ ಎಂದು ಅವರು ಹೇಳಿದರು. ಹಳೆಯ ಬ್ಯಾಂಕಿಂಗ್ ವ್ಯವಸ್ಥೆಯಡಿ ಸಾಲ ಪಡೆಯಲು ಸಾಧ್ಯವಾಗದ ವ್ಯಕ್ತಿಗಳಿಗೆ ಸುಮಾರು 32 ಲಕ್ಷ ಕೋಟಿ ರೂ.ಗಳನ್ನು ಒದಗಿಸಿರುವ ಮುದ್ರಾ ಯೋಜನೆಯ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲಗಳು ಹೆಚ್ಚು ಸುಲಭವಾಗಿ ದೊರೆಯುತ್ತಿವೆ. ಬೀದಿ-ಬದಿ ವ್ಯಾಪಾರಿಗಳನ್ನು ಸಹ ಸುಲಭ ಸಾಲಗಳಿಗೆ ಸಂಪರ್ಕಿಸಲಾಗಿದ್ದು, ರೈತರಿಗೆ ನೀಡುವ ಸಾಲಗಳು ದ್ವಿಗುಣಗೊಂಡಿವೆ ಎಂದು ಅವರು ಒತ್ತಿ ಹೇಳಿದರು. ಸರ್ಕಾರವು ಹೆಚ್ಚಿನ ಸಂಖ್ಯೆಯ ಸಾಲಗಳನ್ನು ಒದಗಿಸುತ್ತಿದ್ದರೆ, ಬ್ಯಾಂಕುಗಳ ಲಾಭವೂ ಹೆಚ್ಚುತ್ತಿದೆ ಎಂದು ಪ್ರಧಾನಿಯವರು ಹೇಳಿದರು. 10 ವರ್ಷಗಳ ಹಿಂದೆ, ದಾಖಲೆಯ ಬ್ಯಾಂಕ್ ನಷ್ಟ ಮತ್ತು ಅನುತ್ಪಾದಕ ಆಸ್ತಿಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದ ಪತ್ರಿಕೆಗಳ ಸಂಪಾದಕೀಯಗಳು ಸಾಮಾನ್ಯವಾಗಿದ್ದವು. ಇಂದು, ಏಪ್ರಿಲ್ ನಿಂದ ಡಿಸೆಂಬರ್ ವರೆಗೆ, ಸಾರ್ವಜನಿಕ ವಲಯದ ಬ್ಯಾಂಕುಗಳು 1.25 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಲಾಭವನ್ನು ದಾಖಲಿಸಿವೆ ಎಂದು ಅವರು ಹೇಳಿದರು. ಇದು ಕೇವಲ ಮುಖ್ಯಾಂಶಗಳಲ್ಲಿನ ಬದಲಾವಣೆಯಲ್ಲದೆ, ಬ್ಯಾಂಕಿಂಗ್ ಸುಧಾರಣೆಗಳಲ್ಲಿ ಬೇರೂರಿರುವ ವ್ಯವಸ್ಥಿತ ಬದಲಾವಣೆಯಾಗಿದೆ, ಇದು ಆರ್ಥಿಕತೆಯನ್ನು ಬಲಪಡಿಸುವ ಸ್ತಂಭಗಳನ್ನು ಸೂಚಿಸುತ್ತದೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು.
“ಕಳೆದ ದಶಕದಲ್ಲಿ, ನಮ್ಮ ಸರ್ಕಾರವು ‘ವ್ಯಾಪಾರದ ಭಯ’ವನ್ನು ‘ಸುಗಮ ವ್ಯಾಪಾರ’ ವನ್ನಾಗಿ ಪರಿವರ್ತಿಸಿದೆ” ಎಂದು ಪ್ರಧಾನಿಯವರು ಒತ್ತಿ ಹೇಳಿದರು. ಜಿಎಸ್ ಟಿ ಮೂಲಕ ಒಂದು ದೊಡ್ಡ ಮಾರುಕಟ್ಟೆಯನ್ನು ಸ್ಥಾಪಿಸಿದ್ದರಿಂದ ಕೈಗಾರಿಕೆಗಳು ಪಡೆದ ಪ್ರಯೋಜನಗಳನ್ನು ಅವರು ಎತ್ತಿ ತೋರಿಸಿದರು. ಕಳೆದ ದಶಕದಲ್ಲಿ ಮೂಲಸೌಕರ್ಯದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಂಡುಬಂದಿದ್ದು, ಇದು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ದಕ್ಷತೆಯನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ಅವರು ಒತ್ತಿ ಹೇಳಿದರು. ಸರ್ಕಾರವು ನೂರಾರು ಅನುಸರಣೆಗಳನ್ನು ತೆಗೆದುಹಾಕಿದೆ. ಇದರಿಂದಾಗಿ ಈಗ ಜನ ವಿಶ್ವಾಸ್-2.0 ಮೂಲಕ ಅನುಸರಣೆಯನ್ನು ಮತ್ತಷ್ಟು ಕಡಿಮೆ ಮಾಡುತ್ತಿದೆ ಎಂದು ಶ್ರೀ ಮೋದಿಯವರು ಗಮನಸೆಳೆದರು. ಸಮಾಜದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಲು, ನಿಯಂತ್ರಣ ಮುಕ್ತ ಆಯೋಗವನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಭವಿಷ್ಯದ ಸನ್ನದ್ಧತೆಗೆ ಸಂಬಂಧಿಸಿದ ಮಹತ್ವದ ಪರಿವರ್ತನೆಗೆ ಭಾರತ ಸಾಕ್ಷಿಯಾಗಿದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿಯವರು, ಮೊದಲ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಭಾರತವು ವಸಾಹತುಶಾಹಿ ಆಡಳಿತದ ಹಿಡಿತದಲ್ಲಿತ್ತು ಎಂದರು. ಎರಡನೇ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ, ವಿಶ್ವಾದ್ಯಂತ ಹೊಸ ಆವಿಷ್ಕಾರಗಳು ಮತ್ತು ಕಾರ್ಖಾನೆಗಳು ಹೊರಹೊಮ್ಮುತ್ತಿದ್ದರೆ, ಭಾರತದಲ್ಲಿ ಸ್ಥಳೀಯ ಕೈಗಾರಿಕೆಗಳು ನಾಶವಾಗುತ್ತಿದ್ದು, ಕಚ್ಚಾ ವಸ್ತುಗಳನ್ನು ದೇಶದಿಂದ ಹೊರಗೆ ಸಾಗಿಸಲಾಗುತ್ತಿದ್ದವು ಎಂದು ಅವರು ಹೇಳಿದರು. ಸ್ವಾತಂತ್ರ್ಯದ ನಂತರವೂ ಪರಿಸ್ಥಿತಿಗಳು ಹೆಚ್ಚು ಬದಲಾಗಲಿಲ್ಲ ಎಂದು ಅವರು ಗಮನಸೆಳೆದರು. ಜಗತ್ತು ಕಂಪ್ಯೂಟರ್ ಕ್ರಾಂತಿಯತ್ತ ಸಾಗುತ್ತಿರುವಾಗ, ಭಾರತದಲ್ಲಿ, ಕಂಪ್ಯೂಟರ್ ಖರೀದಿಸಲು ಪರವಾನಗಿ ಪಡೆಯಬೇಕಾಗಿತ್ತು ಎಂದು ಅವರು ಹೇಳಿದರು. “ಮೊದಲ ಮೂರು ಕೈಗಾರಿಕಾ ಕ್ರಾಂತಿಗಳಿಂದ ಭಾರತವು ಹೆಚ್ಚು ಪ್ರಯೋಜನ ಪಡೆಯದಿದ್ದರೂ, ದೇಶವು ಈಗ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ವಿಶ್ವದೊಂದಿಗೆ ಹೆಜ್ಜೆ ಹಾಕಲು ಸನ್ನದ್ಧವಾಗಿದೆ” ಎಂದು ಪ್ರಧಾನಿಯವರು ಒತ್ತಿ ಹೇಳಿದರು.
“ವಿಕಸಿತ ಭಾರತದೆಡೆಗಿನ ಪಯಣದಲ್ಲಿ ಖಾಸಗಿ ವಲಯವನ್ನು ನಮ್ಮ ಸರ್ಕಾರವು ನಿರ್ಣಾಯಕ ಪಾಲುದಾರ ಎಂದು ಪರಿಗಣಿಸುತ್ತದೆ” ಎಂದು ಪ್ರಧಾನಿಯವರು ಹೇಳಿದರು. ಬಾಹ್ಯಾಕಾಶ ಕ್ಷೇತ್ರದಂತಹ ಅನೇಕ ಹೊಸ ಕ್ಷೇತ್ರಗಳನ್ನು ಖಾಸಗಿ ವಲಯಕ್ಕೆ ತೆರೆಯಲಾಗಿದ್ದು, ಅನೇಕ ಯುವಕರು ಮತ್ತು ನವೋದ್ಯಮಗಳು ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಇತ್ತೀಚಿನವರೆಗೂ ಸಾರ್ವಜನಿಕರಿಗೆ ಮುಚ್ಚಲ್ಪಟ್ಟಿದ್ದ ಡ್ರೋನ್ ವಲಯವು ಈಗ ಯುವಕರಿಗೆ ವಿಸ್ತೃತ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ವಲಯವನ್ನು ಖಾಸಗಿ ಸಂಸ್ಥೆಗಳಿಗೆ ತೆರೆಯಲಾಗಿದ್ದು, ಖಾಸಗಿ ಕಂಪನಿಗಳಿಗೆ ಹರಾಜುಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ದೇಶದ ನವೀಕರಿಸಬಹುದಾದ ಇಂಧನ ಸಾಧನೆಗಳಲ್ಲಿ ಖಾಸಗಿ ವಲಯವು ಮಹತ್ವದ ಪಾತ್ರ ವಹಿಸುತ್ತಿದ್ದು, ದಕ್ಷತೆಯನ್ನು ಹೆಚ್ಚಿಸಲು ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ ಎಂದು ಪ್ರಧಾನಿಯವರು ಹೇಳಿದರು. ಇತ್ತೀಚಿನ ಬಜೆಟ್ ನಲ್ಲಿ ಮಹತ್ವದ ಬದಲಾವಣೆಯೆಂದರೆ ಪರಮಾಣು ವಲಯವನ್ನು ಖಾಸಗಿ ವಲಯಕ್ಕೆ ತೆರೆಯುವುದು ಎಂದು ಅವರು ಒತ್ತಿಹೇಳಿದರು.
ಇಂದಿನ ರಾಜಕೀಯವು ಕಾರ್ಯಕ್ಷಮತೆಯ ಮೇಲೆ ಆಧಾರಿತವಾಗಿದ್ದು, ವಿನಮ್ರ ಮತ್ತು ಫಲಿತಾಂಶಗಳನ್ನು ನೀಡುವವರು ಮಾತ್ರ ಈ ಕ್ಷೇತ್ರದಲ್ಲಿ ಉಳಿಯುತ್ತಾರೆ ಎಂದು ಭಾರತದ ಜನರು ಸ್ಪಷ್ಟವಾಗಿ ತಮ್ಮ ಮತಗಳ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿಯವರು ಹೇಳಿದರು. ಸರ್ಕಾರವು ಜನರ ಸಮಸ್ಯೆಗಳಿಗೆ ಸಂವೇದನಾಶೀಲವಾಗಿರಬೇಕು ಎಂದು ಒತ್ತಿ ಹೇಳಿದ ಅವರು, ಹಿಂದಿನ ನೀತಿ ನಿರೂಪಕರಲ್ಲಿ ಸೂಕ್ಷ್ಮತೆ ಮತ್ತು ಇಚ್ಛಾಶಕ್ತಿಯ ಕೊರತೆಯಿತ್ತು ಎಂದು ಅವರು ಹೇಳಿದರು. ತಮ್ಮ ಸರ್ಕಾರವು ಜನರ ಸಮಸ್ಯೆಗಳನ್ನು ಸೂಕ್ಷ್ಮತೆಯಿಂದ ಅರ್ಥಮಾಡಿಕೊಂಡಿದ್ದು ಅವುಗಳನ್ನು ಪರಿಹರಿಸಲು ಉತ್ಸಾಹದಿಂದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಸಬಲೀಕರಣವನ್ನು ಒದಗಿಸಿ, 25 ಕೋಟಿ ಭಾರತೀಯರು ಬಡತನದಿಂದ ಹೊರಬರಲು ತಮ್ಮ ಸರ್ಕಾರವು ಸಹಾಯ ಮಾಡಿದೆ ಎಂದು ತೋರಿಸುವ ಜಾಗತಿಕ ಅಧ್ಯಯನಗಳನ್ನು ಶ್ರೀ ಮೋದಿ ಉಲ್ಲೇಖಿಸಿದರು. ಈ ದೊಡ್ಡ ಗುಂಪು ನವ-ಮಧ್ಯಮ ವರ್ಗದ ಭಾಗವಾಗಿದ್ದು, ಈಗ ತಮ್ಮ ಮೊದಲ ದ್ವಿಚಕ್ರ ವಾಹನ, ಮೊದಲ ಕಾರು ಮತ್ತು ಮೊದಲ ಮನೆಯ ಕನಸು ಕಾಣುತ್ತಿದೆ ಎಂದು ಅವರು ಹೇಳಿದರು. ಮಧ್ಯಮ ವರ್ಗವನ್ನು ಬೆಂಬಲಿಸಲು, ಇತ್ತೀಚಿನ ಬಜೆಟ್ ಶೂನ್ಯ ತೆರಿಗೆ ಮಿತಿಯನ್ನು 7 ಲಕ್ಷ ರೂ. ಗಳಿಂದ 12 ಲಕ್ಷ ರೂ.ಗೆ ಹೆಚ್ಚಿಸಿದೆ. ಈ ಹೆಜ್ಜೆಯು ಇಡೀ ಮಧ್ಯಮ ವರ್ಗವನ್ನು ಬಲಪಡಿಸುವುದಲ್ಲದೆ ಆರ್ಥಿಕ ಚಟುವಟಿಕೆಯನ್ನು ಕೂಡಾ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. “ಕ್ರಿಯಾಶೀಲ ಮತ್ತು ಸಂವೇದನಾಶೀಲ ಸರ್ಕಾರದಿಂದಾಗಿ ಈ ಸಾಧನೆಗಳು ಸಾಧ್ಯವಾಗಿವೆ” ಎಂದು ಶ್ರೀ ಮೋದಿಯವರು ಹೇಳಿದರು.
“ಅಭಿವೃದ್ಧಿ ಹೊಂದಿದ ಭಾರತದ ನಿಜವಾದ ಅಡಿಪಾಯವೆಂದರೆ ನಂಬಿಕೆ. ಈ ಅಂಶವು ಪ್ರತಿಯೊಬ್ಬ ನಾಗರಿಕ, ಪ್ರತಿ ಸರ್ಕಾರ ಮತ್ತು ಪ್ರತಿಯೊಬ್ಬ ವ್ಯಾಪಾರ ನಾಯಕನಿಗೆ ಅತ್ಯಗತ್ಯವಾದ ಗುಣ” ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ನಾಗರಿಕರಲ್ಲಿ ವಿಶ್ವಾಸ ಮೂಡಿಸಲು ಸರ್ಕಾರ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಆವಿಷ್ಕಾರಕರಿಗೆ ತಮ್ಮ ಆಲೋಚನೆಗಳನ್ನು ಬೆಳೆಸುವ ವಾತಾವರಣವನ್ನು ಒದಗಿಸಲಾಗುತ್ತಿದ್ದು, ವ್ಯವಹಾರಗಳಿಗೆ ಸ್ಥಿರ ಮತ್ತು ಬೆಂಬಲಿತ ನೀತಿಗಳ ಭರವಸೆ ನೀಡಲಾಗಿದೆ ಎಂದು ಅವರು ಹೇಳಿದರು. ಇಟಿ ಶೃಂಗಸಭೆಯು ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
*****
Speaking at the ET NOW Global Business Summit 2025. @ETNOWlive https://t.co/sE5b8AC9uO
— Narendra Modi (@narendramodi) February 15, 2025
Today, be it major nations or global platforms, the confidence in India is stronger than ever. pic.twitter.com/PSSrV0eu7h
— PMO India (@PMOIndia) February 15, 2025
The speed of development of a Viksit Bharat... pic.twitter.com/mGSK5BKXGo
— PMO India (@PMOIndia) February 15, 2025
Many aspirational districts have now transformed into inspirational districts of the nation. pic.twitter.com/BJ5jMICwaY
— PMO India (@PMOIndia) February 15, 2025
Banking the unbanked…
— PMO India (@PMOIndia) February 15, 2025
Securing the unsecured…
Funding the unfunded… pic.twitter.com/9GL9RuQzTf
We have transformed the fear of business into the ease of doing business. pic.twitter.com/JuQMI1HMRw
— PMO India (@PMOIndia) February 15, 2025
India missed the first three industrial revolutions but is ready to move forward with the world in the fourth. pic.twitter.com/hddH3jozrO
— PMO India (@PMOIndia) February 15, 2025
In India's journey towards becoming a Viksit Bharat, our government sees the private sector as a key partner. pic.twitter.com/wMIERqTUW4
— PMO India (@PMOIndia) February 15, 2025
25 crore Indians have risen out of poverty in just 10 years. pic.twitter.com/0BRn0ncxBO
— PMO India (@PMOIndia) February 15, 2025