ಶ್ರೀ ವಿನೀತ್ ಜೈನ್ ಜಿ, ಇಲ್ಲಿರುವ ಉದ್ಯಮ ದಿಗ್ಗಜರೆ, ಕಾರ್ಯ ನಿರ್ವಾಹಕ ಅಧಿಕಾರಿಗಳೆ, ಇತರೆ ಎಲ್ಲ ಗೌರವಾನ್ವಿತ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ! ನಿಮ್ಮೆಲ್ಲರಿಗೂ ಶುಭಾಶಯಗಳು…
ಕಳೆದ ಬಾರಿ ನಾನು ಇಟಿ ನೌ ಬಿಸಿನೆಸ್ ಶೃಂಗಸಭೆಯಲ್ಲಿ ಭಾಗವಹಿಸಿದಾಗ, ಚುನಾವಣೆಗಳು ಹತ್ತಿರದಲ್ಲಿದ್ದವು. ಆ ಸಮಯದಲ್ಲಿ, ನಮ್ಮ 3ನೇ ಅವಧಿಯಲ್ಲಿ ಭಾರತವು ಹೊಸ ವೇಗದಲ್ಲಿ ಕೆಲಸ ಮಾಡುತ್ತದೆ ಎಂದು ನಾನು ವಿನಮ್ರವಾಗಿ ಹೇಳಿದ್ದೆ. ಈ ವೇಗ ಈಗ ಗೋಚರಿಸುತ್ತಿದೆ, ದೇಶವೂ ಅದನ್ನು ಬೆಂಬಲಿಸುತ್ತಿದೆ ಎಂಬ ತೃಪ್ತಿ ನನಗಿದೆ. ಹೊಸ ಸರ್ಕಾರ ರಚನೆಯಾದ ನಂತರ, ಬಿಜೆಪಿ-ಎನ್‌ಡಿಎ ಮೈತ್ರಿಕೂಟವು ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಜನರ ಆಶೀರ್ವಾದವನ್ನು ನಿರಂತರವಾಗಿ ಪಡೆಯುತ್ತಿದೆ! ಜೂನ್‌ನಲ್ಲಿ, ಒಡಿಶಾದ ಜನರು ‘ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ) ನಿರ್ಣಯವನ್ನು ತ್ವರಿತಗೊಳಿಸಿದರು, ನಂತರ ಹರಿಯಾಣದ ಜನರು ತಮ್ಮ ಬೆಂಬಲ ನೀಡಿದರು, ಈಗ ದೆಹಲಿಯ ಜನರು ನಮಗೆ ಅಗಾಧ ಬೆಂಬಲ ನೀಡಿದ್ದಾರೆ. ‘ವಿಕಸಿತ ಭಾರತ’ದ ಗುರಿ ಸಾಧಿಸುವಲ್ಲಿ ದೇಶದ ಜನರು ಹೇಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂಬುದಕ್ಕೆ ಇದು ಒಂದು ಸಾಕ್ಷಿ ಅಥವಾ ಸಮ್ಮತಿಯಾಗಿದೆ.
ಸ್ನೇಹಿತರೆ,
ನೀವು ಹೇಳಿದಂತೆ, ನಾನು ನಿನ್ನೆ ರಾತ್ರಿ ಅಮೆರಿಕ ಮತ್ತು ಫ್ರಾನ್ಸ್‌ಗೆ ಭೇಟಿ ನೀಡಿ ಹಿಂತಿರುಗಿದೆ. ಇಂದು, ವಿಶ್ವದ ಪ್ರಮುಖ ದೇಶಗಳೇ ಆಗಲಿ ಅಥವಾ ಜಾಗತಿಕ ವೇದಿಕೆಗಳೇ ಆಗಲಿ, ಭಾರತದ ಮೇಲೆ ಅವರು ಹೊಂದಿರುವ ನಂಬಿಕೆಯ ಮಟ್ಟವು ಅಭೂತಪೂರ್ವವಾಗಿದೆ. ಪ್ಯಾರಿಸ್‌ನಲ್ಲಿ ನಡೆದ ಕೃತಕ ಬುದ್ಧಿಮತ್ತೆ(ಎಐ) ಕ್ರಿಯಾ ಶೃಂಗಸಭೆಯ ಸಮಯದಲ್ಲಿ ನಡೆದ ಚರ್ಚೆಗಳಲ್ಲಿಯೂ ಇದು ಪ್ರತಿಫಲಿಸಿದೆ. ಇಂದು, ಭಾರತವು ಭವಿಷ್ಯದ ಬಗ್ಗೆ ಜಾಗತಿಕ ಚರ್ಚೆಗಳ ಕೇಂದ್ರದಲ್ಲಿದೆ, ಕೆಲವು ಕ್ಷೇತ್ರಗಳನ್ನು ಅದು ಮುನ್ನಡೆಸುತ್ತಿದೆ. ಕೆಲವೊಮ್ಮೆ ನಾನೇ ಆಶ್ಚರ್ಯ ಪಡುತ್ತೇನೆ – 2014ರಲ್ಲಿ ಈ ದೇಶದ ಜನರು ನಮ್ಮನ್ನು ಆಶೀರ್ವದಿಸದಿದ್ದರೆ, ಯೋಚಿಸಿ – ಭಾರತದಲ್ಲಿ ಸುಧಾರಣೆಗಳ ಹೊಸ ಅಲೆ ಪ್ರಾರಂಭವಾಗದಿದ್ದರೆ, ನಾವು ಈ ರೂಪಾಂತರ ನೋಡಲಾಗುತ್ತಿತ್ತೆ? ಆದರೂ, ನಾನು ಹಾಗೆ ಯೋಚಿಸುವುದಿಲ್ಲ. ನೀವು ಇಲ್ಲದಿದ್ದರೆ ಅದು ಮನವರಿಕೆಯಾಗುವುದಿಲ್ಲ ಎಂಬುದು ನನಗೆ ಖಚಿತವಾಗಿದೆ. ಇಷ್ಟೊಂದು ಬದಲಾವಣೆಗಳು ಸಂಭವಿಸುತ್ತಿದ್ದವೇ? ಹಿಂದಿಯನ್ನು ಅರ್ಥ ಮಾಡಿಕೊಳ್ಳುವ ನಿಮ್ಮಲ್ಲಿ ನನ್ನ ವಿಚಾರವನ್ನು ತಕ್ಷಣವೇ ಗ್ರಹಿಸಿರಬೇಕು. ದೇಶವು ಮೊದಲು ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಆಗ, ಭಾರತವು 2 ವಿಷಯಗಳನ್ನು ಸ್ಪಷ್ಟವಾಗಿ ಕಂಡಿದೆ – ಕಾಂಗ್ರೆಸ್ ಅಭಿವೃದ್ಧಿಯ ವೇಗ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದ ವೇಗ. ಅದು ಮುಂದುವರಿದಿದ್ದರೆ, ಏನಾಗುತ್ತಿತ್ತು? ದೇಶಕ್ಕೆ ನಿರ್ಣಾಯಕ ಸಮಯ ವ್ಯರ್ಥವಾಗುತ್ತಿತ್ತು. 2014 ರಲ್ಲಿ ಕಾಂಗ್ರೆಸ್ ಸರ್ಕಾರವು ಒಂದು ಗುರಿ ಹೊಂದಿತ್ತು, ಅದೇನೆಂದರೆ – 2044ರ ಹೊತ್ತಿಗೆ ಭಾರತವನ್ನು 3ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದು. ಅಂದರೆ ಅವರು 30 ವರ್ಷಗಳ ಕಾಲಮಿತಿಯ ಬಗ್ಗೆ ಯೋಚಿಸಿದ್ದರು. ಅದು ಕಾಂಗ್ರೆಸ್ ಅಭಿವೃದ್ಧಿಯ ವೇಗವಾಗಿತ್ತು. ಆದರೆ ಈಗ, ನೀವು ‘ವಿಕಿಸತ ಭಾರತ’ದ ಅಭಿವೃದ್ಧಿಯ ವೇಗವನ್ನು ಸಹ ನೋಡುತ್ತಿದ್ದೀರಿ. ಕೇವಲ 1 ದಶಕದಲ್ಲಿ ಭಾರತವು ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ. ಸ್ನೇಹಿತರೆ, ನಾನು ಇದನ್ನು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ – ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವುದನ್ನು ನೀವು ನೋಡುತ್ತೀರಿ. ನೀವೇ ಲೆಕ್ಕಾಚಾರ ಮಾಡಿ – 2044ರ ಕಾಂಗ್ರೆಸ್ ಗುರಿಗೆ ಪ್ರತಿಯಾಗಿ ಇಂದಿನ ವೇಗ. ನಮ್ಮಂತಹ ಯುವ ರಾಷ್ಟ್ರಕ್ಕೆ ಈ ವೇಗದ ಅಗತ್ಯವಿದೆ. ಇಂದು ಭಾರತವು ನಿಖರವಾಗಿ ಅದೇ ಆವೇಗದೊಂದಿಗೆ ಮುಂದುವರಿಯುತ್ತಿದೆ!
ಸ್ನೇಹಿತರೆ,
ಹಿಂದಿನ ಸರ್ಕಾರಗಳು ಸುಧಾರಣೆಗಳನ್ನು ತರಲಿಲ್ಲ, ನಾವು ಇದನ್ನು ಮರೆಯಬಾರದು. ಇಟಿ ಜನರು ಮರೆತುಬಿಡಬಹುದು, ಆದರೆ ನಾನು ಅವರಿಗೆ ನೆನಪಿಸುತ್ತೇನೆ. ಹಿಂದೆ ಅಂತಿಮವಾಗಿ ಜಾರಿಗೆ ತಂದ ಸುಧಾರಣೆಗಳಲ್ಲಿ ದೃಢನಿಶ್ಚಯವಿರಲಿಲ್ಲ, ಬದಲಾಗಿ ಅವು ಬಲವಂತದ ಸುಧಾರಣೆಗಳಾಗಿದ್ದವು. ಇಂದು ಭಾರತದಲ್ಲಿ ನಡೆಯುತ್ತಿರುವ ಸುಧಾರಣೆಗಳನ್ನು ದೃಢನಿಶ್ಚಯದಿಂದ ಕೈಗೊಳ್ಳಲಾಗುತ್ತಿದೆ. ಹಿಂದಿನ ಮನಸ್ಥಿತಿ – ಏಕೆ ಇಷ್ಟೊಂದು ಪ್ರಯತ್ನ ಮಾಡಬೇಕು? ಸುಧಾರಣೆಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು? ನಾವು ಆಯ್ಕೆಯಾಗಿದ್ದೇವೆ, ಆನಂದಿಸೋಣ, 5 ವರ್ಷಗಳನ್ನು ಪೂರ್ಣಗೊಳಿಸೋಣ ಮತ್ತು ಚುನಾವಣೆಗಳು ಬಂದಾಗ ಅವುಗಳ ಬಗ್ಗೆ ಯೋಚಿಸೋಣ. ಪ್ರಮುಖ ಸುಧಾರಣೆಗಳು ದೇಶವನ್ನು ಹೇಗೆ ಪರಿವರ್ತಿಸಬಹುದು ಎಂಬುದರ ಕುರಿತು ಯಾವುದೇ ಚರ್ಚೆ ಇರಲಿಲ್ಲ. ನೀವೆಲ್ಲರೂ ಉದ್ಯಮ ವ್ಯವಹಾರ ವಲಯಕ್ಕೆ ಸೇರಿದವರು. ನೀವು ಕೇವಲ ಸಂಖ್ಯೆಗಳೊಂದಿಗೆ ವ್ಯವಹರಿಸುವುದಿಲ್ಲ – ನೀವು ನಿಮ್ಮ ಕಾರ್ಯತಂತ್ರಗಳನ್ನು ಪರಿಶೀಲಿಸುತ್ತೀರಿ, ಹಳೆಯ ಕಾರ್ಯವಿಧಾನಗಳನ್ನು ತ್ಯಜಿಸುತ್ತೀರಿ, ಅವು ಒಮ್ಮೆ ಲಾಭದಾಯಕವಾಗಿದ್ದರೂ ಸಹ. ಯಾವುದೇ ಉದ್ಯಮವು ಹಳೆಯ ಅಭ್ಯಾಸಗಳ ಹೊರೆಯನ್ನು ಹೊತ್ತುಕೊಂಡು ಮುಂದುವರಿಯುತ್ತದೆ – ಅದು ಅವುಗಳನ್ನು ಹೋಗಲು ಬಿಡುತ್ತದೆ. ಆದರೆ ದುರದೃಷ್ಟವಶಾತ್, ಸರ್ಕಾರಗಳು ಭಾರತದಲ್ಲಿ ವಸಾಹತುಶಾಹಿ ಆಳ್ವಿಕೆಯ ಹೊರೆಯಡಿ ಬದುಕುವ ಅಭ್ಯಾಸ ಬೆಳೆಸಿಕೊಂಡವು. ಆದ್ದರಿಂದ, ಸ್ವಾತಂತ್ರ್ಯದ ನಂತರವೂ ಬ್ರಿಟಿಷ್ ಯುಗದ ನೀತಿಗಳು ಮತ್ತು ವ್ಯವಸ್ಥೆಗಳನ್ನು ಬುದ್ದಿಹೀನವಾಗಿ ಮುಂದುವರಿಸಲಾಯಿತು. ನಾವು ಆಗಾಗ್ಗೆ ಒಂದು ವಾಕ್ಯವನ್ನು ಕೇಳುತ್ತೇವೆ – ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆ. ಇದನ್ನು ಪವಿತ್ರ ಮಂತ್ರದಂತೆ ಮಾತನಾಡಲಾಗುತ್ತದೆ. ನಾವು ಇದನ್ನು ವರ್ಷಗಳಿಂದ ಕೇಳುತ್ತಿದ್ದೇವೆ, ಆದರೆ ಯಾರಾದರೂ ಅದನ್ನು ಸರಿಪಡಿಸಲು ಗಂಭೀರವಾಗಿ ಕೆಲಸ ಮಾಡಿದ್ದಾರೆಯೇ? ಇಲ್ಲ. ಕಾಲಾನಂತರದಲ್ಲಿ, ನಾವು ಈ ಅದಕ್ಷತೆಗಳಿಗೆ ಎಷ್ಟು ಒಗ್ಗಿಕೊಂಡೆವು ಎಂದರೆ ಬದಲಾವಣೆಯ ಅಗತ್ಯಗಳನ್ನೇ ಗಮನಿಸುವುದನ್ನು ನಿಲ್ಲಿಸಿದೆವು. ನಂತರ, ಒಂದು ಪರಿಸರ ವ್ಯವಸ್ಥೆ ಇದೆ – ಅವುಗಳಲ್ಲಿ ಕೆಲವು ಇಲ್ಲಿಯೂ ಇರಬಹುದು – ಅದು ಸಕಾರಾತ್ಮಕ ಬೆಳವಣಿಗೆಗಳ ಕುರಿತ ಚರ್ಚೆಗಳನ್ನು ಸಕ್ರಿಯವಾಗಿ ತಡೆಯುತ್ತದೆ. ಅವರ ಸಂಪೂರ್ಣ ಶಕ್ತಿಯನ್ನು ಪ್ರಗತಿ ತಡೆಯಲು ವ್ಯರ್ಥ ಮಾಡಲಾಗುತ್ತದೆ. ಆದರೆ ಪ್ರಜಾಪ್ರಭುತ್ವದಲ್ಲಿ, ನಕಾರಾತ್ಮಕ ಅಂಶಗಳನ್ನು ಟೀಕಿಸುವುದರ ಜತೆಗೆ ಒಳ್ಳೆಯ ವಿಷಯಗಳ ಕುರಿತು ಚರ್ಚಿಸುವುದು ಮತ್ತು ಚಿಂತಿಸುವುದು ಅಷ್ಟೇ ಮುಖ್ಯ. ಆದರೂ, ನಕಾರಾತ್ಮಕತೆ ಹರಡುವುದನ್ನು ಪ್ರಜಾಪ್ರಭುತ್ವವೆಂದು ಪರಿಗಣಿಸುವ ಮತ್ತು ಸಕಾರಾತ್ಮಕ ಬೆಳವಣಿಗೆಗಳನ್ನು ಎತ್ತಿ ತೋರಿಸಿದರೆ, ಪ್ರಜಾಪ್ರಭುತ್ವವನ್ನು ದುರ್ಬಲ ಎಂದು ಲೇಬಲ್ ಮಾಡುವ ಮನಸ್ಥಿತಿ ರೂಪಿಸಲಾಗಿದೆ. ಈ ಮನಸ್ಥಿತಿಯಿಂದ ಮುಕ್ತರಾಗುವುದು ಬಹಳ ಮುಖ್ಯ. ನಾನು ನಿಮಗೆ ಕೆಲವು ಉದಾಹರಣೆಗಳನ್ನು ನೀಡುತ್ತೇನೆ…
ಸ್ನೇಹಿತರೆ,
ಇತ್ತೀಚಿನವರೆಗೂ, ಭಾರತದಲ್ಲಿ ದಂಡ ಸಂಹಿತೆಗಳು 1860ರಿಂದಲೂ ಇದ್ದವು. ಹೌದು, 1860! ಆದರೆ ದೇಶ ಸ್ವತಂತ್ರವಾಯಿತು, ಆದರೆ ನಾವು ವಸಾಹತುಶಾಹಿ ಮನಸ್ಥಿತಿಯೊಂದಿಗೆ ಬದುಕುವ ಅಭ್ಯಾಸ ಬೆಳೆಸಿಕೊಂಡಿದ್ದರಿಂದ ಅವುಗಳನ್ನು ಬದಲಾಯಿಸುವ ಬಗ್ಗೆ ಎಂದಿಗೂ ಯೋಚಿಸಲೇ ಇಲ್ಲ. ಈ 1860ರ ಕಾನೂನುಗಳ ಉದ್ದೇಶವೇನು? ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬಲಪಡಿಸುವುದು ಮತ್ತು ಭಾರತೀಯ ನಾಗರಿಕರನ್ನು ಶಿಕ್ಷಿಸುವುದು ಅವುಗಳ ಗುರಿಯಾಗಿತ್ತು. ಶಿಕ್ಷೆಯನ್ನು ಅದರ ಮೂಲದಲ್ಲಿಟ್ಟುಕೊಂಡು ಒಂದು ವ್ಯವಸ್ಥೆ ನಿರ್ಮಿಸಿದಾಗ, ನ್ಯಾಯವನ್ನು ಹೇಗೆ ತಲುಪಿಸಬಹುದು? ಅದಕ್ಕಾಗಿಯೇ, ಈ ವ್ಯವಸ್ಥೆಯ ಅಡಿ ನ್ಯಾಯ ಸಿಗಲು ವರ್ಷಗಳೇ ತೆಗೆದುಕೊಳ್ಳುತ್ತಿತ್ತು. ಆದರೆ ನಾವು ಭಾರಿ ಬದಲಾವಣೆ ಮಾಡಿದ್ದೇವೆ, ಇದು ಸುಲಭವಲ್ಲ – ಇದು ಅಪಾರ ಪ್ರಯತ್ನಗಳನ್ನು ತೆಗೆದುಕೊಂಡಿತು, ಲಕ್ಷಾಂತರ ಮಾನವ ಗಂಟೆಗಳನ್ನು ತೆಗೆದುಕೊಂಡಿತು – ಆದರೆ ನಾವು ಅಂತಿಮವಾಗಿ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್)ಯನ್ನು ತಂದಿದ್ದೇವೆ. ಭಾರತೀಯ ಸಂಸತ್ತು ಅದನ್ನು ಅನುಮೋದಿಸಿತು. ಈಗ ಅದರ ಅನುಷ್ಠಾನ ಕೇವಲ 7-8 ತಿಂಗಳಾಗಿದ್ದರೂ, ಬದಲಾವಣೆಗಳು ಈಗಾಗಲೇ ಗೋಚರಿಸುತ್ತಿವೆ. ನೀವು ಅದನ್ನು ಪತ್ರಿಕೆಗಳಲ್ಲಿ ನೋಡದೇ ಇರಬಹುದು, ಆದರೆ ನೀವು ಜನರ ನಡುವೆ ಹೋದರೆ, ನೀವು ಅದನ್ನು ಗಮನಿಸಬಹುದು. ನ್ಯಾಯ ಸಂಹಿತೆಯನ್ನು ಪರಿಚಯಿಸಿದಾಗಿನಿಂದ ನ್ಯಾಯ ವಿತರಣೆ ಹೇಗೆ ರೂಪಾಂತರಗೊಂಡಿದೆ ಎಂಬುದರ ಕೆಲವು ನೈಜ ಉದಾಹರಣೆಗಳನ್ನು ನಾನು ಹಂಚಿಕೊಳ್ಳುತ್ತೇನೆ. ತ್ರಿವಳಿ ಕೊಲೆ ಪ್ರಕರಣವನ್ನು – ಎಫ್‌ಐಆರ್‌ನಿಂದ ಅಂತಿಮ ತೀರ್ಪಿನವರೆಗೆ – ಭೇದಿಸಲು ಕೇವಲ 14 ದಿನ ಸಾಕಾಯಿತು! ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅಂತಹ ಒಂದು ಪ್ರಕರಣದಲ್ಲಿ, ಅಪ್ರಾಪ್ತ ವಯಸ್ಕನ ಕೊಲೆ ಪ್ರಕರಣವನ್ನು 20 ದಿನಗಳಲ್ಲಿ ಇತ್ಯರ್ಥಪಡಿಸಲಾಯಿತು. ಗುಜರಾತ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ – ಅಕ್ಟೋಬರ್ 9ರಂದು ಎಫ್‌ಐಆರ್ ಸಲ್ಲಿಸಲಾಯಿತು, ಅಕ್ಟೋಬರ್ 26ರೊಳಗೆ ಆರೋಪಪಟ್ಟಿ ಸಲ್ಲಿಸಲಾಯಿತು ಮತ್ತು ಇಂದು ಫೆಬ್ರವರಿ 15 ರಂದು, ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದೆ. ಆಂಧ್ರ ಪ್ರದೇಶದಲ್ಲಿ 5 ತಿಂಗಳ ಮಗುವಿನ ವಿರುದ್ಧದ ಅಪರಾಧದಲ್ಲಿ ನ್ಯಾಯಾಲಯವು ಆರೋಪಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಈ ಪ್ರಕರಣದಲ್ಲಿ ಡಿಜಿಟಲ್ ಪುರಾವೆಗಳು ನಿರ್ಣಾಯಕ ಪಾತ್ರ ವಹಿಸಿವೆ. ಅತ್ಯಾಚಾರ ಮತ್ತು ಕೊಲೆಯ ಮತ್ತೊಂದು ಪ್ರಕರಣದಲ್ಲಿ, ಶಂಕಿತನನ್ನು ಇ-ಪ್ರಿಸನ್ ಮಾಡ್ಯೂಲ್ ಮೂಲಕ ಪತ್ತೆ ಹಚ್ಚಲಾಯಿತು. ಅದೇ ರೀತಿ, ಮತ್ತೊಂದು ರಾಜ್ಯದಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯು ಈಗಾಗಲೇ ಬೇರೆ ರಾಜ್ಯದಲ್ಲಿ ಮತ್ತೊಂದು ಅಪರಾಧಕ್ಕಾಗಿ ಜೈಲಿನಲ್ಲಿದ್ದಾನೆ ಎಂದು ತಿಳಿದುಬಂದಿದೆ. ಅವನ ಬಂಧನ ವಿಳಂಬವಿಲ್ಲದೆ ಸಂಭವಿಸಿದೆ. ನ್ಯಾಯವನ್ನು ತ್ವರಿತವಾಗಿ ತಲುಪಿಸುತ್ತಿರುವ ಲೆಕ್ಕವಿಲ್ಲದಷ್ಟು ಪ್ರಕರಣಗಳು ವಿಲೇವಾರಿಯಾಗುತ್ತಿವೆ.
ಸ್ನೇಹಿತರೆ,
ಆಸ್ತಿ ಹಕ್ಕುಗಳಲ್ಲಿಯೂ ಒಂದು ಪ್ರಮುಖ ಸುಧಾರಣೆ ಕೈಗೊಳ್ಳಲಾಗಿದೆ. ವಿಶ್ವಸಂಸ್ಥೆ(ಯುಎನ್) ಅಧ್ಯಯನವು ಆಸ್ತಿ ಹಕ್ಕುಗಳ ಕೊರತೆಯನ್ನು ಅನೇಕ ದೇಶಗಳಲ್ಲಿ ಜನರಿಗೆ ಎದುರಾಗಿರುವ ಒಂದು ಪ್ರಮುಖ ಸವಾಲು ಎಂದು ಗುರುತಿಸಿದೆ. ವಿಶ್ವಾದ್ಯಂತ ಲಕ್ಷಾಂತರ ಜನರ ಆಸ್ತಿಗೆ ಕಾನೂನು ದಾಖಲೆಗಳಿಲ್ಲ. ಆದರೆ ಸ್ಪಷ್ಟ ಆಸ್ತಿ ಹಕ್ಕುಗಳನ್ನು ಹೊಂದಿರುವುದು ಬಡತನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಿಂದಿನ ಸರ್ಕಾರಗಳು ಇದನ್ನು ಅರಿತುಕೊಂಡಿರಲಿಲ್ಲ, ಅವರು ಅರಿತುಕೊಂಡರೂ ಸಹ, ನಮಗೇಕೆ ಆ ತಲೆನೋವು? ಅದಕ್ಕೆಲ್ಲಾ ಯಾರು ಪ್ರಯತ್ನ ಮಾಡುತ್ತಾರೆ? ಈ ರೀತಿಯ ನಿರ್ಧಾರಗಲು ಇಟಿ ಮುಖ್ಯಾಂಶಗಳಲ್ಲಿ ಬರುವುದಿಲ್ಲ, ಹಾಗಾದರೆ ಏಕೆ ತಲೆಕೆಡಿಸಿಕೊಳ್ಳಬೇಕು? ಆದರೆ ರಾಷ್ಟ್ರಗಳನ್ನು ನಡೆಸುವುದು ಅಥವಾ ನಿರ್ಮಿಸುವುದು ಹೀಗಲ್ಲ! ಅದಕ್ಕಾಗಿಯೇ ನಾವು ಸ್ವಾಮಿತ್ವ ಯೋಜನೆ ಪ್ರಾರಂಭಿಸಿದ್ದೇವೆ. ಸ್ವಾಮಿತ್ವ ಯೋಜನೆಯಡಿ 3 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆಗಳನ್ನು ನಡೆಸಲಾಗಿದೆ. 2.25 ಕೋಟಿಗೂ ಹೆಚ್ಚು ಜನರು ಆಸ್ತಿ ಕಾರ್ಡ್‌ಗಳನ್ನು ಪಡೆದಿದ್ದಾರೆ. ಇಂದು ನಾನು ಇಟಿ ಗೆ ಒಂದು ಶೀರ್ಷಿಕೆ ನೀಡುತ್ತಿದ್ದೇನೆ: ಸ್ವಾಮಿತ್ವದ ಬಗ್ಗೆ ಬರೆಯುವುದು ಇಟಿಗೆ ಸುಲಭವಲ್ಲ ಎಂಬುದು ನನಗೆ ತಿಳಿದಿದೆ, ಆದರೆ ಕಾಲಾನಂತರದಲ್ಲಿ, ಅಭ್ಯಾಸಗಳು ಸಹ ಬದಲಾಗುತ್ತವೆ!
ಸ್ವಾಮಿತ್ವ ಯೋಜನೆಯ ಕಾರಣದಿಂದಾಗಿ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ 100 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳಿಗೆ ದಾಖಲೆ ಪತ್ರಗಳನ್ನು ಒದಗಿಸಲಾಗಿದೆ. ಇದರರ್ಥ 100 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಆಸ್ತಿಗಳು ಈಗಾಗಲೇ ಹಳ್ಳಿಗಳಲ್ಲೇ ಇದ್ದವು, ಅವು ಬಡವರಿಗೆ ಸೇರಿದವು, ಆದರೆ ಅವುಗಳನ್ನು ಆರ್ಥಿಕ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಳ್ಳಿಗಳಲ್ಲಿರುವ ಜನರಿಗೆ ಆಸ್ತಿ ಹಕ್ಕು ಇಲ್ಲದ ಕಾರಣ, ಅವರು ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಈ ಸಮಸ್ಯೆಯನ್ನು ಈಗ ಶಾಶ್ವತವಾಗಿ ಪರಿಹರಿಸಲಾಗಿದೆ. ಇಂದು, ದೇಶಾದ್ಯಂತ ಬರುತ್ತಿರುವ ವರದಿಗಳು ಸ್ವಾಮಿತ್ವ ಯೋಜನೆಯಡಿ ಆಸ್ತಿ ಕಾರ್ಡ್‌ಗಳು ಜನರಿಗೆ ಹೇಗೆ ಪ್ರಯೋಜನ ನೀಡುತ್ತಿವೆ ಎಂಬುದನ್ನು ಎತ್ತಿ ತೋರಿಸುತ್ತವೆ. ಕೆಲವು ದಿನಗಳ ಹಿಂದೆ, ಈ ಯೋಜನೆಯಡಿ ಆಸ್ತಿ ಕಾರ್ಡ್ ಪಡೆದಿದ್ದ ರಾಜಸ್ಥಾನದ ಸಹೋದರಿಯೊಂದಿಗೆ ನಾನು ಮಾತನಾಡಿದೆ. ಅವರ ಕುಟುಂಬವು 20 ವರ್ಷಗಳಿಂದ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿತ್ತು. ಆಸ್ತಿ ಕಾರ್ಡ್ ಪಡೆದ ತಕ್ಷಣ, ಅವರು ಬ್ಯಾಂಕಿನಿಂದ 8 ಲಕ್ಷ ರೂಪಾಯಿ ಸಾಲ ಪಡೆಯಲು ಸಾಧ್ಯವಾಯಿತು. ಈ ಹಣದಿಂದ, ಅವರು ಅಂಗಡಿ ಪ್ರಾರಂಭಿಸಿದರು, ಅದರಿಂದ ಬರುವ ಆದಾಯದಿಂದ ಅವರ ಮಕ್ಕಳ ಉನ್ನತ ಶಿಕ್ಷಣ ಬೆಂಬಲಿಸಲು ಸಹಾಯ ಮಾಡುತ್ತಿದೆ. ಬದಲಾವಣೆ ಹೇಗೆ ಸಂಭವಿಸುತ್ತದೆ! ಇನ್ನೊಂದು ರಾಜ್ಯದಲ್ಲಿ, ಒಂದು ಹಳ್ಳಿಯ ವ್ಯಕ್ತಿಯೊಬ್ಬರು ತಮ್ಮ ಆಸ್ತಿ ಕಾರ್ಡ್ ನೀಡಿ ಬ್ಯಾಂಕಿನಿಂದ 4.5 ಲಕ್ಷ ರೂಪಾಯಿ ಸಾಲ ಪಡೆದರು. ಆ ಹಣದಿಂದ, ಅವರು ವಾಹನ ಖರೀದಿಸಿ, ಸಾರಿಗೆ ವ್ಯವಹಾರ ಪ್ರಾರಂಭಿಸಿದರು. ಇನ್ನೊಂದು ಹಳ್ಳಿಯಲ್ಲಿ, ಒಬ್ಬ ರೈತ ತನ್ನ ಆಸ್ತಿ ಕಾರ್ಡ್ ಅಡವಿಟ್ಟು ಸಾಲ ಪಡೆದು ತನ್ನ ಹೊಲಗಳಲ್ಲಿ ಆಧುನಿಕ ನೀರಾವರಿ ಸೌಲಭ್ಯ ನಿರ್ಮಿಸಿಕೊಂಡಿದ್ದಾನೆ. ಗ್ರಾಮಸ್ಥರು ಮತ್ತು ಬಡವರಿಗೆ ಹೊಸ ಗಳಿಕೆಯ ಅವಕಾಶಗಳು ಹೊರಹೊಮ್ಮುತ್ತಿರುವ ಇಂತಹ ಅನೇಕ ಉದಾಹರಣೆಗಳಿವೆ. ಇವು ಸುಧಾರಣೆ, ಪ್ರದರ್ಶನ ಮತ್ತು ರೂಪಾಂತರದ ನೈಜ ಯಶೋಗಾಥೆಗಳು – ದರೆ ಇವು ಪತ್ರಿಕೆಗಳ ಮುಖ್ಯಾಂಶಗಳು ಅಥವಾ ಟಿವಿ ಚಾನೆಲ್‌ಗಳಲ್ಲಿ ಬರದ ಕಥೆಗಳು ಸಹ ಆಗಿವೆ.
ಸ್ನೇಹಿತರೆ,
ಸ್ವಾತಂತ್ರ್ಯಾ ನಂತರ, ನಮ್ಮ ದೇಶದಲ್ಲಿ ಸರ್ಕಾರಗಳು ಅಭಿವೃದ್ಧಿ ತರುವಲ್ಲಿ ವಿಫಲವಾದ ಅನೇಕ ಜಿಲ್ಲೆಗಳಿದ್ದವು. ಇದು ಆಡಳಿತದ ವೈಫಲ್ಯ – ಬಜೆಟ್ ಕೊರತೆಯಲ್ಲ. ಹಣ ಹಂಚಿಕೆ ಮಾಡಲಾಯಿತು, ಘೋಷಣೆಗಳನ್ನು ಮಾಡಲಾಯಿತು ಮತ್ತು ಷೇರು ಮಾರುಕಟ್ಟೆ ವರದಿಗಳನ್ನು ಸಹ ಏರಿಕೆ ಮತ್ತು ಕುಸಿತದ ಸೂಚ್ಯಂಕಗಳ ಬಗ್ಗೆ ಪ್ರಕಟಿಸಲಾಯಿತು. ಆದರೆ ಮಾಡಬೇಕಾಗಿದ್ದು ಈ ಜಿಲ್ಲೆಗಳ ಮೇಲೆ ಕೇಂದ್ರೀಕೃತ ಪ್ರಯತ್ನವಾಗಿತ್ತು. ಬದಲಾಗಿ, ಈ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಹಣೆಪಟ್ಟಿ ಕಟ್ಟಲಾಯಿತು, ಅವುಗಳನ್ನು ಅವುಗಳ ಪಾಡಿಗೆ ಬಿಡಲಾಯಿತು. ಯಾರೂ ಅವುಗಳ ಮೇಲೆ ಕೆಲಸ ಮಾಡಲು ಸಿದ್ಧರಿರಲಿಲ್ಲ. ಅಲ್ಲಿ ನೇಮಕ ಮಾಡಲಾದ ಸರ್ಕಾರಿ ಅಧಿಕಾರಿಗಳು ಸಹ ಇದನ್ನು ಶಿಕ್ಷೆಯ ನೇಮಕ ಎಂದು ಪರಿಗಣಿಸುತ್ತಿದ್ದರು.
ಸ್ನೇಹಿತರೆ,
ಈ ರೀತಿಯ ನಕಾರಾತ್ಮಕತೆಯ ನಡುವೆ, ನಾನು ಈ ಸವಾಲನ್ನು ನೇರವಾಗಿ ಸ್ವೀಕರಿಸಿ, ಕಾರ್ಯ ವಿಧಾನವನ್ನು ಸಂಪೂರ್ಣ ಬದಲಾಯಿಸಿದ್ದೇವೆ. ದೇಶಾದ್ಯಂತ 100ಕ್ಕಿಂತ ಹೆಟ್ಟಿನ ಜಿಲ್ಲೆಗಳನ್ನು ನಾವು ಗುರುತಿಸಿದ್ದೇವೆ, ಅವುಗಳನ್ನು ಒಂದು ಕಾಲದಲ್ಲಿ ಹಿಂದುಳಿದ ಜಿಲ್ಲೆಗಳೆಂದು ಕರೆಯಲಾಗುತ್ತಿತ್ತು, ಆದರೆ ನಾನು ಅವುಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಎಂದು ಕರೆದಿದ್ದೇನೆ – ಹಿಂದುಳಿದ ಜಿಲ್ಲೆಗಳಲ್ಲ. ನಾವು ಈ ಜಿಲ್ಲೆಗಳಿಗೆ ಯುವ ಅಧಿಕಾರಿಗಳನ್ನು ನಿಯೋಜಿಸಲು ಪ್ರಾರಂಭಿಸಿದ್ದೇವೆ, ಸೂಕ್ಷ್ಮ ಮಟ್ಟದಲ್ಲಿ ಆಡಳಿತ ಸುಧಾರಿಸುವ ಕೆಲಸ ಮಾಡಿದ್ದೇವೆ. ಈ ಜಿಲ್ಲೆಗಳು ಹೆಚ್ಚು ಹಿಂದುಳಿದಿರುವ ಸೂಚಕಗಳ ಮೇಲೆ ನಾವು ಗಮನ ಹರಿಸಿದ್ದೇವೆ. ನಂತರ ನಾವು ವಿಶೇಷ ಶಿಬಿರಗಳ ಮೂಲಕ ಈ ಪ್ರದೇಶಗಳಲ್ಲಿ ಸರ್ಕಾರದ ಪ್ರಮುಖ ಯೋಜನೆಗಳನ್ನು ಕಾರ್ಯಾಚರಣೆ ಮಾದರಿಯಲ್ಲಿ ಜಾರಿಗೆ ತಂದಿದ್ದೇವೆ. ಇಂದು, ಈ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಪೈಕಿ ಹಲವು ಸ್ಫೂರ್ತಿದಾಯಕ ಜಿಲ್ಲೆಗಳಾಗಿ ರೂಪಾಂತರಗೊಂಡಿವೆ.
ಹಿಂದಿನ ಸರ್ಕಾರಗಳು ಹಿಂದುಳಿದ ಜಿಲ್ಲೆಗಳೆಂದು ಹಣೆಪಟ್ಟಿ ಕಟ್ಟಿದ್ದ ಅಸ್ಸಾಂನ ಕೆಲವು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಬಗ್ಗೆ ನಾನು ಮಾತನಾಡಲು ಬಯಸುತ್ತೇನೆ, ಅವುಗಳ ರೂಪಾಂತರದ ಮೇಲೆ ಬೆಳಕು ಚೆಲ್ಲಲು ಬಯಸುತ್ತೇನೆ. ಉದಾಹರಣೆಗೆ, ಅಸ್ಸಾಂನ ಬಾರ್ಪೇಟಾ ಜಿಲ್ಲೆ ತೆಗೆದುಕೊಳ್ಳಿ. ಆಗ 2018ರಲ್ಲಿ ಕೇವಲ 26% ಪ್ರಾಥಮಿಕ ಶಾಲೆಗಳು ಸರಿಯಾದ ವಿದ್ಯಾರ್ಥಿ-ಶಿಕ್ಷಕರ ಅನುಪಾತ ಹೊಂದಿದ್ದವು. ಕೇವಲ 26%. ಇಂದು, ಆ ಜಿಲ್ಲೆಯಲ್ಲಿ ಆ ಸಂಖ್ಯೆ 100% ತಲುಪಿದೆ, ಪ್ರತಿ ಶಾಲೆಯು ಅಗತ್ಯವಿರುವ ಶಿಕ್ಷಕ-ವಿದ್ಯಾರ್ಥಿ ಅನುಪಾತ ಸರಿ ಇರುವುದನ್ನು ಖಚಿತಪಡಿಸುತ್ತದೆ. ಅದೇ ರೀತಿ, ಬಿಹಾರದ ಬೇಗುಸರಾಯ್‌ನಲ್ಲಿ, ಬಜೆಟ್ ಮತ್ತು ಸಂಪನ್ಮೂಲಗಳ ಲಭ್ಯತೆಯ ಹೊರತಾಗಿಯೂ, ಕೇವಲ 21% ಗರ್ಭಿಣಿಯರು ಪೂರಕ ಪೌಷ್ಟಿಕಾಂಶ ಪಡೆಯುತ್ತಿದ್ದರು. ಆದರೆ ಅದರ ಹೊರತಾಗಿಯೂ ಕೇವಲ 21% ಮಹಿಳೆಯರು ಪೂರಕ ಪೌಷ್ಟಿಕಾಂಶವನ್ನು ಪಡೆಯುತ್ತಿದ್ದರು. ಉತ್ತರ ಪ್ರದೇಶದ ಚಂದೌಲಿಯಲ್ಲಿ ಈ ಅಂಕಿಅಂಶ 14% ಕಡಿಮೆಯಾಗಿತ್ತು. ಆದರೆ ಇಂದು, ಎರಡೂ ಜಿಲ್ಲೆಗಳಲ್ಲಿ ಈ ಸಂಖ್ಯೆ 100% ತಲುಪಿದೆ. ಮಕ್ಕಳ ಲಸಿಕೆ ಅಭಿಯಾನಗಳಲ್ಲಿಯೂ ನಾವು ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ, ಲಸಿಕೆ ವ್ಯಾಪ್ತಿಯು 49%ರಿಂದ 86%ಗೆ ಏರಿದೆ. ತಮಿಳುನಾಡಿನ ರಾಮನಾಥಪುರದಲ್ಲಿ ಇದು 67%ರಿಂದ 93%ಗೆ ಸುಧಾರಿಸಿದೆ. ಈ ಯಶಸ್ಸನ್ನು ನೋಡಿದಾಗ, ಈ ತಳಮಟ್ಟದ ರೂಪಾಂತರ ಮಾದರಿಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ನಾವು ಅರಿತುಕೊಂಡೆವು. ಆದ್ದರಿಂದ, 100 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಯಶಸ್ವಿಯಾಗಿ ಗುರುತಿಸಿ ಕೆಲಸ ಮಾಡಿದ ನಂತರ, ನಾವು ಈಗ ಈ ಕಾರ್ಯಾಚರಣೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದೇವೆ. ನಾವು 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳನ್ನು ಗುರುತಿಸಿದ್ದೇವೆ, ಅಲ್ಲಿ ನಾವು ಈಗ ತ್ವರಿತ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದೇವೆ. ಊಹಿಸಿ – ಈ 500 ಬ್ಲಾಕ್‌ಗಳು ಮೂಲಭೂತ ಸುಧಾರಣೆಗಳನ್ನು ಅನುಭವಿಸಿದಾಗ, ಇಡೀ ರಾಷ್ಟ್ರದ ಅಭಿವೃದ್ಧಿ ಸೂಚಕಗಳು ರೂಪಾಂತರಗೊಳ್ಳುತ್ತವೆ!
ಸ್ನೇಹಿತರೆ,
ಇಲ್ಲಿ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯಮ ನಾಯಕರು ಇದ್ದಾರೆ. ನೀವು ಅನೇಕ ದಶಕಗಳನ್ನು ನೋಡಿದ್ದೀರಿ ಮತ್ತು ದೀರ್ಘಕಾಲದವರೆಗೆ ವ್ಯವಹಾರದಲ್ಲಿದ್ದೀರಿ. ಭಾರತವು ಯಾವ ರೀತಿಯ ವ್ಯಾಪಾರ ವಾತಾವರಣ ಹೊಂದಿರಬೇಕಿತ್ತೋ ಅದು ನಿಮ್ಮ ಆಶಯ ಪಟ್ಟಿಯ ಭಾಗವಾಗಿತ್ತು. ಈಗ, ಯೋಚಿಸಿ – ನಾವು 10 ವರ್ಷಗಳ ಹಿಂದೆ ಎಲ್ಲಿದ್ದೆವು ಮತ್ತು ಇಂದು ನಾವು ಎಲ್ಲಿದ್ದೇವೆ? ಒಂದು ದಶಕದ ಹಿಂದೆ, ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಬಿಕ್ಕಟ್ಟಿನಲ್ಲಿತ್ತು. ಅದು ದುರ್ಬಲವಾಗಿತ್ತು ಮತ್ತು ಲಕ್ಷಾಂತರ ಭಾರತೀಯರು ಔಪಚಾರಿಕ ಬ್ಯಾಂಕಿಂಗ್ ಜಾಲದ ಹೊರಗಿದ್ದರು. ವಿನೀತ್ ಜಿ ಅವರು ಜನ್-ಧನ್ ಖಾತೆಗಳ ಬಗ್ಗೆ ಹೇಳಿದಂತೆ, ಸಾಲ ಸೌಲಭ್ಯಕ್ಕೆ ಪ್ರವೇಶಿಸುವುದು ತುಂಬಾ ಕಷ್ಟಕರವಾಗಿದ್ದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿತ್ತು.
ಸ್ನೇಹಿತರೆ,
ಬ್ಯಾಂಕಿಂಗ್ ವಲಯ ಬಲಪಡಿಸಲು ನಾವು ಏಕಕಾಲದಲ್ಲಿ ಹಲವಾರು ಹಂತಗಳಲ್ಲಿ ಕೆಲಸ ಮಾಡಿದ್ದೇವೆ. ನಮ್ಮ ಕಾರ್ಯತಂತ್ರ ಹೀಗಿತ್ತು: ಬ್ಯಾಂಕ್ ಸೌಲಭ್ಯವಿಲ್ಲದವರಿಗೆ ಬ್ಯಾಂಕ್ ಸೌಲಭ್ಯ ಒದಗಿಸುವುದು, ಭದ್ರತೆ ಇಲ್ಲದವರಿಗೆ ಭದ್ರತೆ ಒದಗಿಸುವುದು ಮತ್ತು ಹಣವಿಲ್ಲದವರಿಗೆ ಹಣಕಾಸು ಒದಗಿಸುವುದು. 10 ವರ್ಷಗಳ ಹಿಂದೆ, ಸಾಕಷ್ಟು ಬ್ಯಾಂಕ್ ಶಾಖೆಗಳಿಲ್ಲದ ಕಾರಣ ಆರ್ಥಿಕ ಸೇರ್ಪಡೆ ಅಸಾಧ್ಯ ಎಂಬ ವಾದವಿತ್ತು. ಆದರೆ ಇಂದು, ಭಾರತದ ಬಹುತೇಕ ಪ್ರತಿಯೊಂದು ಹಳ್ಳಿಯೂ 5 ಕಿ.ಮೀ ಒಳಗೆ ಬ್ಯಾಂಕ್ ಶಾಖೆ ಅಥವಾ ಬ್ಯಾಂಕಿಂಗ್ ಪ್ರತಿನಿಧಿಗಳನ್ನು ಹೊಂದಿದೆ. ಸಾಲ ಪ್ರವೇಶ ಹೇಗೆ ಸುಧಾರಿಸಿದೆ ಎಂಬುದಕ್ಕೆ ಒಂದು ಉದಾಹರಣೆಯೆಂದರೆ ಮುದ್ರಾ ಯೋಜನೆ, ಇದು ಹಳೆಯ ಬ್ಯಾಂಕಿಂಗ್ ವ್ಯವಸ್ಥೆಯಡಿ ಸಾಲಗಳಿಗೆ ಎಂದಿಗೂ ಅರ್ಹತೆ ಪಡೆಯದವರಿಗೆ 32 ಲಕ್ಷ ಕೋಟಿ ರೂಪಾಯಿ ಒದಗಿಸಿದೆ. ಇದು ಒಂದು ದೊಡ್ಡ ಬದಲಾವಣೆಯಾಗಿದೆ. ಎಂಎಸ್‌ಎಂಇ ಸಾಲಗಳನ್ನು ಪ್ರವೇಶಿಸುವುದು ತುಂಬಾ ಸುಲಭವಾಗಿದೆ. ಇಂದು, ಬೀದಿ ಬದಿ ವ್ಯಾಪಾರಿಗಳು ಸಹ ಮೇಲಾಧಾರ-ಮುಕ್ತ ಸಾಲಗಳನ್ನು ಪಡೆಯುತ್ತಿದ್ದಾರೆ, ರೈತರ ಸಾಲಗಳು ದ್ವಿಗುಣಗೊಂಡಿವೆ. ನಾವು ದೊಡ್ಡ ಮೊತ್ತದೊಂದಿಗೆ ಹೆಚ್ಚಿನ ಸಾಲಗಳನ್ನು ವಿತರಿಸುತ್ತಿದ್ದೇವೆ ಮಾತ್ರವಲ್ಲದೆ, ನಮ್ಮ ಬ್ಯಾಂಕುಗಳು ಲಾಭದಾಯಕವಾಗಿರುವುದನ್ನು ಸಹ ಖಚಿತಪಡಿಸಿಕೊಳ್ಳುತ್ತಿದ್ದೇವೆ. ಒಂದು ದಶಕದ ಹಿಂದೆ, ಎಕನಾಮಿಕ್ ಟೈಮ್ಸ್ ಸಹ ಬ್ಯಾಂಕಿಂಗ್ ವಂಚನೆಗಳು ಮತ್ತು ದಾಖಲೆಯ ಎನ್‌ಪಿಎಗಳ(ಅನುತ್ಪಾದಕ ಆಸ್ತಿಗಳು) ಬಗ್ಗೆ ಮುಖ್ಯಾಂಶಗಳನ್ನು ಪ್ರಕಟಿಸುತ್ತಿತ್ತು. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ದುರ್ಬಲತೆಯ ಬಗ್ಗೆ ಬರೆದ ಸಂಪಾದಕೀಯಗಳು ಕಳವಳಗಳಿಂದ ತುಂಬಿದ್ದವು. ಇಂದು ಏನು ಪ್ರಕಟಿಸಲಾಗುತ್ತಿದೆ? ಏಪ್ರಿಲ್ ಮತ್ತು ಡಿಸೆಂಬರ್ ನಡುವೆ, ಸಾರ್ವಜನಿಕ ವಲಯದ ಬ್ಯಾಂಕುಗಳು 1.25 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಲಾಭ ದಾಖಲಿಸಿವೆ! ಸ್ನೇಹಿತರೆ, ಇದು ಕೇವಲ ಮುಖ್ಯಾಂಶಗಳಲ್ಲಿನ ಬದಲಾವಣೆಯಲ್ಲ. ಇದು ನಮ್ಮ ಬ್ಯಾಂಕಿಂಗ್ ಸುಧಾರಣೆಗಳಿಂದ ನಡೆಸಲ್ಪಡುವ ವ್ಯವಸ್ಥೆಯಲ್ಲಿನ ಬದಲಾವಣೆಯಾಗಿದೆ. ನಮ್ಮ ಆರ್ಥಿಕತೆಯ ಆಧಾರಸ್ತಂಭಗಳು ಎಂದಿಗಿಂತಲೂ ಬಲವಾಗಿ ಬೆಳೆಯುತ್ತಿವೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.
ಸ್ನೇಹಿತರೆ,
ಕಳೆದ ದಶಕದಲ್ಲಿ, ನಾವು ವ್ಯವಹಾರದ ಭಯವನ್ನು ವ್ಯಾಪಾರ ಮಾಡುವ ಸುಲಭತೆಗೆ ಪರಿವರ್ತಿಸಿದ್ದೇವೆ. ಜಿಎಸ್‌ಟಿಯೊಂದಿಗೆ, ಭಾರತವು ಈಗ ಒಂದೇ ದೊಡ್ಡ ಮಾರುಕಟ್ಟೆ ಹೊಂದಿದೆ, ಇದು ಕೈಗಾರಿಕೆಗಳಿಗೆ ಗಮನಾರ್ಹವಾಗಿ ಪ್ರಯೋಜನ ನೀಡಿದೆ. ನಮ್ಮ ಅಭೂತಪೂರ್ವ ಮೂಲಸೌಕರ್ಯ ಅಭಿವೃದ್ಧಿಯು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡಿದೆ, ದಕ್ಷತೆ ಹೆಚ್ಚಿಸಿದೆ. ನಾವು ನೂರಾರು ಅನಗತ್ಯ ಅನುಸರಣೆಗಳನ್ನು ತೆಗೆದುಹಾಕಿದ್ದೇವೆ, ಈಗ ಜನ್ ವಿಶ್ವಾಸ್ 2.0 ಮೂಲಕ ಅವುಗಳನ್ನು ಮತ್ತಷ್ಟು ಕಡಿಮೆ ಮಾಡುತ್ತಿದ್ದೇವೆ. ಸರ್ಕಾರದ ಹಸ್ತಕ್ಷೇಪ ಕಡಿಮೆ ಮಾಡಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ಇದನ್ನು ಸಾಧಿಸಲು, ನಿಯಮಗಳನ್ನು ಇನ್ನಷ್ಟು ಸುಗಮಗೊಳಿಸಲು ನಾವು ಅನಿಯಂತ್ರಣ ಆಯೋಗವನ್ನು ಸಹ ಸ್ಥಾಪಿಸುತ್ತಿದ್ದೇವೆ.
ಸ್ನೇಹಿತರೆ,
ಇಂದು ಭಾರತವು ಮತ್ತೊಂದು ಪ್ರಮುಖ ರೂಪಾಂತರಕ್ಕೆ ಸಾಕ್ಷಿಯಾಗುತ್ತಿದೆ – ಅದು ಭವಿಷ್ಯಕ್ಕಾಗಿ ನಮ್ಮನ್ನು ಸಿದ್ಧಪಡಿಸುತ್ತಿದೆ. ಮೊದಲ ಕೈಗಾರಿಕಾ ಕ್ರಾಂತಿ ಪ್ರಾರಂಭವಾದಾಗ, ಭಾರತವು ವಸಾಹತುಶಾಹಿ ಆಳ್ವಿಕೆಯಲ್ಲಿ ಆಳವಾಗಿ ಮುಳುಗಿತ್ತು.
2ನೇ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಜಗತ್ತು ಹೊಸ ಆವಿಷ್ಕಾರಗಳು ಮತ್ತು ಕಾರ್ಖಾನೆಗಳನ್ನು ವೀಕ್ಷಿಸುತ್ತಿರುವಾಗ, ಭಾರತದ ಸ್ಥಳೀಯ ಕೈಗಾರಿಕೆಗಳು ನಾಶವಾಗಿದ್ದವು. ಭಾರತದಿಂದ ಕಚ್ಚಾ ವಸ್ತುಗಳು ರಫ್ತಾಗುತ್ತಿದ್ದವು, ಸ್ವಾತಂತ್ರ್ಯದ ನಂತರವೂ ಪರಿಸ್ಥಿತಿ ಹೆಚ್ಚು ಬದಲಾಗಲಿಲ್ಲ. ಜಗತ್ತು ಕಂಪ್ಯೂಟರ್ ಕ್ರಾಂತಿಯತ್ತ ಸಾಗುತ್ತಿದ್ದಾಗ, ಭಾರತೀಯರು ಕಂಪ್ಯೂಟರ್ ಖರೀದಿಸಲು ಮಾತ್ರ ಪರವಾನಗಿ ಪಡೆಯಬೇಕಾಗಿತ್ತು! ಮೊದಲ ಮೂರು ಕೈಗಾರಿಕಾ ಕ್ರಾಂತಿಗಳ ಪ್ರಯೋಜನಗಳನ್ನು ಭಾರತ ಕಳೆದುಕೊಂಡಿತು, ಆದರೆ 4ನೇ ಕೈಗಾರಿಕಾ ಕ್ರಾಂತಿಯಲ್ಲಿ, ನಾವು ವಿಶ್ವದೊಂದಿಗೆ ಮುನ್ನಡೆಯಲು ಸಿದ್ಧರಿದ್ದೇವೆ!
ಸ್ನೇಹಿತರೆ,
‘ವಿಕಸಿತ ಭಾರತ’ವಾಗುವ ತನ್ನ ಪ್ರಯಾಣದಲ್ಲಿ, ನಮ್ಮ ಸರ್ಕಾರವು ಖಾಸಗಿ ವಲಯವನ್ನು ಪ್ರಮುಖ ಪಾಲುದಾರ ಎಂದು ಪರಿಗಣಿಸುತ್ತದೆ. ಸರ್ಕಾರವು ಬಾಹ್ಯಾಕಾಶ ವಲಯ ಸೇರಿದಂತೆ ಖಾಸಗಿ ಭಾಗವಹಿಸುವಿಕೆಗಾಗಿ ಹಲವಾರು ಹೊಸ ವಲಯಗಳನ್ನು ತೆರೆದಿದೆ. ಇಂದು, ಅನೇಕ ಯುವ ಉದ್ಯಮಿಗಳು ಮತ್ತು ನವೋದ್ಯಮಗಳು ಈ ಬಾಹ್ಯಾಕಾಶ ವಲಯದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿವೆ. ಅದೇ ರೀತಿ, ಒಂದು ಕಾಲದಲ್ಲಿ ಸಾರ್ವಜನಿಕರಿಗೆ ಮುಚ್ಚಲ್ಪಟ್ಟಿದ್ದ ಡ್ರೋನ್ ವಲಯವು ಈಗ ಯುವಕರಿಗೆ ದೊಡ್ಡ ಅವಕಾಶಗಳನ್ನು ನೀಡುತ್ತದೆ. ನಾವು ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯನ್ನು ಸಹ ತೆರೆದಿದ್ದೇವೆ, ಹರಾಜು ಪ್ರಕ್ರಿಯೆಯನ್ನು ಹೆಚ್ಚು ಉದಾರೀಕರಣಗೊಳಿಸಿದ್ದೇವೆ. ದೇಶದ ನವೀಕರಿಸಬಹುದಾದ ಇಂಧನ ಸಾಧನೆಗಳಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸಿದೆ. ಈಗ, ದಕ್ಷತೆ ಹೆಚ್ಚಿಸಲು ನಾವು ವಿದ್ಯುತ್ ವಿತರಣಾ ವಲಯದಲ್ಲಿ ಖಾಸಗಿ ಭಾಗವಹಿಸುವಿಕೆಯನ್ನು ವಿಸ್ತರಿಸುತ್ತಿದ್ದೇವೆ. ಈ ವರ್ಷದ ಬಜೆಟ್‌ನ ಅತಿದೊಡ್ಡ ಸುಧಾರಣೆಗಳಲ್ಲಿ ಒಂದೆಂದರೆ, ಯಾರೂ ಮೊದಲು ಮಾಡಲು, ಧೈರ್ಯವನ್ನೂ ಮಾಡದ ವಿಷಯವಾಗಿದೆ – ನಾವು ಪರಮಾಣು ವಲಯವನ್ನು ಖಾಸಗಿ ಭಾಗವಹಿಸುವಿಕೆಗಾಗಿ ತೆರೆದಿದ್ದೇವೆ!
ಸ್ನೇಹಿತರೆ,
ಇಂದು ನಮ್ಮ ರಾಜಕೀಯವು ಕಾರ್ಯಕ್ಷಮತೆ-ಆಧಾರಿತವಾಗಿದೆ. ಭಾರತದ ಜನರು ಸ್ಪಷ್ಟಪಡಿಸಿದ್ದಾರೆ – ನೆಲ ಮಟ್ಟದಲ್ಲಿ ಸಂಪರ್ಕದಲ್ಲಿದ್ದು ನಿಜವಾದ ಫಲಿತಾಂಶಗಳನ್ನು ನೀಡುವವರು ಮಾತ್ರ ಬದುಕುಳಿಯುತ್ತಾರೆ. ಸರ್ಕಾರವು ಜನರ ಸಮಸ್ಯೆಗಳಿಗೆ ಸಂವೇದನಾಶೀಲವಾಗಿರಬೇಕು – ಅದು ಉತ್ತಮ ಆಡಳಿತದ ಮೊದಲ ಅವಶ್ಯಕತೆಯಾಗಿದೆ. ದುರದೃಷ್ಟವಶಾತ್, ನಮಗಿಂತ ಮೊದಲು ನೀತಿ ನಿರೂಪಣೆಯನ್ನು ನಿರ್ವಹಿಸಿದವರಿಗೆ ನಿಜವಾದ ಬದಲಾವಣೆ ತರುವ ಸೂಕ್ಷ್ಮತೆ ಮತ್ತು ಇಚ್ಛಾಶಕ್ತಿ ಎರಡೂ ಇರಲಿಲ್ಲ. ಆದಾಗ್ಯೂ, ನಮ್ಮ ಸರ್ಕಾರವು ಜನರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿದೆ, ಉತ್ಸಾಹ ಮತ್ತು ಬದ್ಧತೆಯಿಂದ ಅವುಗಳನ್ನು ಪರಿಹರಿಸಲು ದಿಟ್ಟ, ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ. ಕಳೆದ ದಶಕದಲ್ಲಿ ನಾಗರಿಕರಿಗೆ ಒದಗಿಸಲಾದ ಮೂಲಭೂತ ಸೌಲಭ್ಯಗಳು ಮತ್ತು ಅವರ ಸಬಲೀಕರಣದಿಂದಾಗಿ, 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ವಿವಿಧ ಜಾಗತಿಕ ಅಧ್ಯಯನಗಳು ದೃಢಪಡಿಸಿವೆ. ಈ ಬೃಹತ್ ಬದಲಾವಣೆಯು ಹೊಸ ನವ-ಮಧ್ಯಮ ವರ್ಗವನ್ನು ಸೃಷ್ಟಿಸಿದೆ, ಅವರು ಈಗ ತಮ್ಮ ಮೊದಲ ದ್ವಿಚಕ್ರ ವಾಹನ, ಮೊದಲ ಕಾರು ಮತ್ತು ಮೊದಲ ಮನೆ ಖರೀದಿಸಲು ಆಶಿಸಿದ್ದಾರೆ. ಮಧ್ಯಮ ವರ್ಗವನ್ನು ಬೆಂಬಲಿಸಲು, ನಾವು ಈ ವರ್ಷದ ಬಜೆಟ್‌ನಲ್ಲಿ ಗಮನಾರ್ಹ ಬದಲಾವಣೆ ಮಾಡಿದ್ದೇವೆ – ನಾವು ಶೂನ್ಯ-ತೆರಿಗೆ ಮಿತಿಯನ್ನು 7 ಲಕ್ಷ ರೂಪಾಯಿಗಳಿಂದ 12 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದ್ದೇವೆ. ಈ ನಿರ್ಧಾರವು ಮಧ್ಯಮ ವರ್ಗವನ್ನು ಬಲಪಡಿಸುತ್ತದೆ ಮತ್ತು ದೇಶಾದ್ಯಂತ ಆರ್ಥಿಕ ಚಟುವಟಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜನರ ಅಗತ್ಯಗಳಿಗೆ ಪೂರ್ವಭಾವಿಯಾಗಿ ಮತ್ತು ಸೂಕ್ಷ್ಮವಾಗಿರುವ ಸರ್ಕಾರದಿಂದ ಮಾತ್ರ ಇದು ಸಾಧ್ಯ!
‘ವಿಕಸಿತ ಭಾರತ’ವನ್ನು ನಾಗರಿಕರು, ಸರ್ಕಾರ ಮತ್ತು ವ್ಯಾಪಾರ ನಾಯಕರಲ್ಲಿ ನಂಬಿಕೆಯ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. ಪ್ರಗತಿಗೆ ಈ ನಂಬಿಕೆಯ ಅಂಶ ಅತ್ಯಗತ್ಯ. ಜನರಲ್ಲಿ ಈ ನಂಬಿಕೆ ಬಲಪಡಿಸಲು ನಮ್ಮ ಸರ್ಕಾರ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದೆ. ನಾವೀನ್ಯಕಾರರಿಗೆ ನಾವು ಆತ್ಮವಿಶ್ವಾಸದ ವಾತಾವರಣ ಸೃಷ್ಟಿಸುತ್ತಿದ್ದೇವೆ, ಅಲ್ಲಿ ಅವರು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಪೋಷಿಸಬಹುದು. ಸುಸ್ಥಿರ ಬೆಳವಣಿಗೆಗೆ ವ್ಯವಹಾರಗಳು ಸ್ಥಿರ ಮತ್ತು ಬೆಂಬಲ ನೀಡುವ ನೀತಿಗಳನ್ನು ಅವಲಂಬಿಸಬಹುದೆಂದು ನಾವು ಖಚಿತಪಡಿಸುತ್ತಿದ್ದೇವೆ. ಈ ಇಟಿ ನೌ ಶೃಂಗಸಭೆಯು ಈ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಮಾತುಗಳೊಂದಿಗೆ, ನಾನು ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ. ನಿಮ್ಮೆಲ್ಲರಿಗೂ ಶುಭಾಶಯಗಳು. ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Speaking at the ET NOW Global Business Summit 2025. @ETNOWlive https://t.co/sE5b8AC9uO
— Narendra Modi (@narendramodi) February 15, 2025
Today, be it major nations or global platforms, the confidence in India is stronger than ever. pic.twitter.com/PSSrV0eu7h
— PMO India (@PMOIndia) February 15, 2025
The speed of development of a Viksit Bharat... pic.twitter.com/mGSK5BKXGo
— PMO India (@PMOIndia) February 15, 2025
Many aspirational districts have now transformed into inspirational districts of the nation. pic.twitter.com/BJ5jMICwaY
— PMO India (@PMOIndia) February 15, 2025
Banking the unbanked…
— PMO India (@PMOIndia) February 15, 2025
Securing the unsecured…
Funding the unfunded… pic.twitter.com/9GL9RuQzTf
We have transformed the fear of business into the ease of doing business. pic.twitter.com/JuQMI1HMRw
— PMO India (@PMOIndia) February 15, 2025
India missed the first three industrial revolutions but is ready to move forward with the world in the fourth. pic.twitter.com/hddH3jozrO
— PMO India (@PMOIndia) February 15, 2025
In India's journey towards becoming a Viksit Bharat, our government sees the private sector as a key partner. pic.twitter.com/wMIERqTUW4
— PMO India (@PMOIndia) February 15, 2025
25 crore Indians have risen out of poverty in just 10 years. pic.twitter.com/0BRn0ncxBO
— PMO India (@PMOIndia) February 15, 2025