Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡೋನೇಷಿಯಾದ ಅಧ್ಯಕ್ಷರ ಭಾರತದ ಭೇಟಿಯ ವೇಳೆ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ (ಡಿಸೆಂಬರ್ 12, 2016)

ಇಂಡೋನೇಷಿಯಾದ ಅಧ್ಯಕ್ಷರ ಭಾರತದ ಭೇಟಿಯ ವೇಳೆ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ (ಡಿಸೆಂಬರ್ 12, 2016)

ಇಂಡೋನೇಷಿಯಾದ ಅಧ್ಯಕ್ಷರ ಭಾರತದ ಭೇಟಿಯ ವೇಳೆ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ (ಡಿಸೆಂಬರ್ 12, 2016)


ಘನತೆವೆತ್ತ ಅಧ್ಯಕ್ಷ ಜೋಕೋ ವಿಡೋಡೋ ಅವರೇ,

ಗೌರವಾನ್ವಿತ ಪ್ರತಿನಿಧಿಗಳೇ,

ಮಾಧ್ಯಮದ ಗೆಳೆಯರೇ,

ಮೊದಲಿಗೆ ನಾನು ಇತ್ತೀಚೆಗೆ ಏಕ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂಭವಿಸಿದ ಹಾನಿಗೆ ನಮ್ಮ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ.

ಸ್ನೇಹಿತರೇ,

ನಾನು ಅಧ್ಯಕ್ಷ ಜೋಕೋ ವಿಡೋಡೋ ಅವರನ್ನು ಭಾರತದ ಈ ಪ್ರಥಮ ಭೇಟಿಯಲ್ಲಿ ಸ್ವಾಗತಿಸುವ ಗೌರವ ಪಡೆದಿದ್ದೇನೆ. ನಾನು ಮೊದಲ ಬಾರಿಗೆ ಅಧ್ಯಕ್ಷ ವಿಡೋಡೋ ಅವರನ್ನು 2014ರ ನವೆಂಬರ್ ನಲ್ಲಿ ಭೇಟಿ ಮಾಡಿದ್ದೆ, ಮತ್ತು ನಮ್ಮ ಪಾಲುದಾರಿಕೆ ಹೇಗೆ ವಲಯಕ್ಕೆ ಮತ್ತು ನಮಗೆ ಲಾಭದಾಯಕ ಎಂಬ ಬಗ್ಗೆ ದೀರ್ಘವಾಗಿ ಚರ್ಚಿಸಿದ್ದೆ.

ಘನತೆವೆತ್ತರೆ,

ನೀವು ದೊಡ್ಡ ದೇಶದ ನಾಯಕರಾಗಿದ್ದೀರಿ. ವಿಶ್ವದ ಹೆಚ್ಚು ಜನಸಂಖ್ಯೆಯ ಮುಸ್ಲಿಮ್ ರಾಷ್ಟ್ರವಾದ ಇಂಡೋನೇಷಿಯಾ ಪ್ರಜಾಪ್ರಭುತ್ವ, ವೈವಿಧ್ಯತೆ, ಬಹು ಸಂಸ್ಕೃತಿ ಮತ್ತು ಸಾಮಾಜಿಕ ಸೌಹಾರ್ದತೆಗೆ ಹೆಸರಾಗಿದೆ. ಈ ಎಲ್ಲವೂ ನಮ್ಮ ಮೌಲ್ಯಗಳೂ ಆಗಿವೆ. ನಮ್ಮ ರಾಷ್ಟ್ರಗಳು ಮತ್ತು ಸಮಾಜಗಳು ನಮ್ಮ ಇತಿಹಾಸದಾದ್ಯಂತ ಸಂಸ್ಕೃತಿ ಮತ್ತು ವಾಣಿಜ್ಯದ ಬಲವಾದ ಬಾಂಧವ್ಯ ಹೊಂದಿವೆ. ವಿಶ್ವದಲ್ಲಿ ಪ್ರಸ್ತುತ ನಡೆಯುತ್ತಿರುವ ಕಾರ್ಯತಂತ್ರಾತ್ಮಕ ಮತ್ತು ತ್ವರಿತ ರಾಜಕೀಯ ಮತ್ತು ಆರ್ಥಿಕ ಬದಲಾವಣೆಯಲ್ಲಿ ಕೇಂದ್ರದಲ್ಲಿರುವ ಭೌಗೋಳಿಕ ಪ್ರದೇಶದಲ್ಲಿ ನಾವು ವಾಸಿಸುತ್ತಿದ್ದೇವೆ. ನಿಮ್ಮ ಈ ಭೇಟಿಯು ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಗೆ ವೇಗ ಮತ್ತು ಚಟುವಟಿಕೆಗೆ ಅವಕಾಶ ನೀಡುತ್ತದೆ. ಮತ್ತು ಭಾರತ – ಪೆಸಿಫಿಕ್ ವಲಯದಲ್ಲಿ ಸ್ಥಿರತೆ, ಪ್ರಗತಿ ಮತ್ತು ಶಾಂತಿಯ ಶಕ್ತಿಯಾಗಿ ಕಾರ್ಯ ನಿರ್ವಹಿಸುವ ಒಮ್ಮತವನ್ನು ರೂಪಿಸುತ್ತದೆ.

ಸ್ನೇಹಿತರೆ,

ಇಂಡೋನೇಷಿಯಾವು ನಮ್ಮ ಪೂರ್ವದತ್ತ ಕ್ರಮದ ನೀತಿಯಲ್ಲಿ ಬಹು ಮೌಲ್ಯಯುತ ಪಾಲುದಾರ ರಾಷ್ಟ್ರವಾಗಿದೆ. ಇದು ಆಗ್ನೇಯ ಏಷ್ಯಾದಲ್ಲಿ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ. ಮತ್ತು ಭಾರತವು ವಿಶ್ವದಲ್ಲಿಯೇ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿದೆ. ಇಂಥ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಪ್ರಮುಖವಾಗಿ ಹೊರಹೊಮ್ಮುತ್ತಿರುವ ದೊಡ್ಡ ಆರ್ಥಿಕ ರಾಷ್ಟ್ರಗಳಾಗಿ ನಾವು, ಆರ್ಥಿಕ ಮತ್ತು ಕಾರ್ಯತಂತ್ರಾತ್ಮಕ ಹಿತವನ್ನು ಹಂಚಿಕೊಂಡಿದ್ದೇವೆ. ನಾವು ಸಮಾನ ಕಳಕಳಿ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇಂದು ಅಧ್ಯಕ್ಷರೊಂದಿಗೆ ನಾನು ನಡೆಸಿದ ವ್ಯಾಪಕ ಮಾತುಕತೆಯಲ್ಲಿ ನಮ್ಮ ಎಲ್ಲ ಶ್ರೇಣಿಯ ಸಹಕಾರದ ಮೇಲೆ ಪೂರ್ಣ ಗಮನ ಹರಿಸಿದ್ದೆವು. ನಾವು ರಕ್ಷಣಾ ಮತ್ತು ಭದ್ರತೆಯ ಸಹಕಾರಕ್ಕೆ ಆದ್ಯತೆ ನೀಡಿದ್ದೇವೆ. ಎರಡು ಪ್ರಮುಖ ಕಡಲತೀರದ ರಾಷ್ಟ್ರಗಳಾಗಿ ಮತ್ತು ನೆರೆಯ ರಾಷ್ಟ್ರಗಳಾಗಿ ನಾವು, ಸಮುದ್ರ ಮಾರ್ಗಗಳ ಸುರಕ್ಷತೆ ಮತ್ತು ಭದ್ರತೆಯ ಖಾತ್ರಿಗೆ, ವಿಕೋಪ ಸ್ಪಂದನೆ ಮತ್ತು ಪರಿಸರ ಸಂರಕ್ಷಣೆಯ ಸಹಕಾರಕ್ಕೆ ಸಮ್ಮತಿ ಸೂಚಿಸಿದ್ದೇವೆ. ಕಡಲ ಸಹಕಾರದ ಜಂಟಿ ಹೇಳಿಕೆಯು ಈ ಕ್ಷೇತ್ರದಲ್ಲಿ ನಮ್ಮ ಕಾರ್ಯಕ್ರಮಗಳ ಪಟ್ಟಿಯನ್ನು ಒತ್ತಿ ಹೇಳುತ್ತದೆ. ನಮ್ಮ ಪಾಲುದಾರಿಕೆಯನ್ನು ಭಯೋತ್ಪಾದನೆ, ಸಂಘಟಿತ ಅಪರಾಧ, ಮಾದಕದ್ರವ್ಯ ಮತ್ತು ಮಾನವ ಕಳ್ಳಸಾಗಣೆಯ ನಿಗ್ರಹಕ್ಕೂ ವಿಸ್ತರಿಸಲಾಗುತ್ತದೆ.

ಸ್ನೇಹಿತರೆ,

ನಾನು ಮತ್ತು ಅಧ್ಯಕ್ಷರು ಕಲ್ಪನೆಗಳ ಹರಿವು, ವಾಣಿಜ್ಯ, ಬಂಡವಾಳ ಮತ್ತು ಎರಡೂ ರಾಷ್ಟ್ರಗಳ ನಡುವಿನ ಜನರೊಂದಿಗಿನ ಬಲವಾದ ಆರ್ಥಿಕ ಮತ್ತು ಅಭಿವೃದ್ಧಿಯ ಪಾಲುದಾರಿಕೆಗೂ ಒಪ್ಪಿಗೆ ಸೂಚಿಸಿದ್ದೇವೆ. ನಾನು ಅಧ್ಯಕ್ಷ ವಿಡೋಡೋ ಅವರೊಂದಿಗೆ, ಭಾರತೀಯ ಕಂಪನಿಗಳು ಇಂಡೋನೇಷಿಯಾದೊಂದಿಗೆ ಔಷಧ, ಐ.ಟಿ. ಮತ್ತು ತಂತ್ರಾಂಶ ಮತ್ತು ಕೌಶಲ ಅಭಿವೃದ್ಧಿ ಕ್ಷೇತ್ರದಲ್ಲಿ ಆಪ್ತವಾಗಿ ಕಾರ್ಯ ನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದೇವೆ. ಎರಡು ಅಭಿವೃದ್ಧಿ ಶೀಲ ರಾಷ್ಟ್ರಗಳಾಗಿ ನಾವು, ಮೂಲಸೌಕರ್ಯ ಅಭಿವೃದ್ಧಿಗೆ ಎರಡೂ ಕಡೆಯಿಂದ ಹೂಡಿಕೆಯ ಹರಿವಿನ ಮೂಲಕ ನಮ್ಮ ಅನುಕ್ರಮವಾದ ಸಾಮರ್ಥ್ಯವನ್ನು ಪಡೆಯಲು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ, ಸಿಇಓಗಳ ವೇದಿಕೆ, ವ್ಯಾಪಕ ಮತ್ತು ಆಳವಾದ ಕೈಗಾರಿಕೆಯಿಂದ ಕೈಗಾರಿಕೆಗಳ ಕಾರ್ಯಕ್ರಮಕ್ಕೆ ಹೊಸ ಮಾರ್ಗಗಳನ್ನು ಗುರುತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾದ ಸೇವೆ ಮತ್ತು ಹೂಡಿಕೆ, ಹಾಗೂ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಗೆ ಭಾರತ- ಆಸಿಯಾನ ಮುಕ್ತ ವಾಣಿಜ್ಯ ಒಪ್ಪಂದದ ಶೀಘ್ರ ಜಾರಿಗೂ ನಾವು ಒಪ್ಪಿಗೆ ಸೂಚಿಸಿದ್ದೇವೆ. ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ದಶಕಗಳಷ್ಟು ಹಳೆಯದಾದ ಮೌಲ್ಯಯುತ ಸಹಕಾರವನ್ನು ಆಳಗೊಳಿಸುವ ಮಹತ್ವನ್ನು ಒತ್ತಿ ಹೇಳಿದ್ದೇವೆ. ನಮ್ಮ ಪಾಲುದಾರಿಕೆಯ ಚಲನೆಯನ್ನು ನಿರಂತರವಾಗಿ ಇಟ್ಟುಕೊಳ್ಳಲು ಅಧ್ಯಕ್ಷ ವಿಡೋಡೋ ಮತ್ತು ನಾನು, ನಮ್ಮ ದ್ವಿಪಕ್ಷೀಯ ಸಹಕಾರ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲು ಹಾಲಿ ಇರುವ ಸಚಿವರುಗಳ ಮಟ್ಟದ ವ್ಯವಸ್ಥೆಯ ಸಭೆಯನ್ನು ಶೀಘ್ರ ಏರ್ಪಡಿಸಲು ಸೂಚಿಸಿರುತ್ತೇವೆ.

ಸ್ನೇಹಿತರೆ,

ನಮ್ಮ ದೇಶಗಳ ನಡುವಿನ ಸಮಾಜದ ಬಲವಾದ ಸಾಂಸ್ಕೃತಿಕ ನಂಟು ಮತ್ತು ಇತಿಹಾಸದ ಬಾಂಧವ್ಯಗಳು ನಮ್ಮ ವಿನಿಮಯಿತ ಪರಂಪರೆಯಾಗಿವೆ. ನಾನು ಮತ್ತು ಅಧ್ಯಕ್ಷರು, ನಮ್ಮ ಐತಿಹಾಸಿಕ ನಂಟಿನ ಕುರಿತಂತೆ ಸಂಶೋಧನೆ ಉತ್ತೇಜಿಸುವ ಮಹತ್ವವನ್ನು ಒಪ್ಪಿಕೊಂಡಿದ್ದೇವೆ. ಮತ್ತು ಪರಸ್ಪರ ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಪೀಠಗಳನ್ನು ಸ್ಥಾಪಿಸುವುದನ್ನು ತ್ವರಿತಗೊಳಿಸಲೂ ನಾವು ಸಮ್ಮತಿಸಿದ್ದೇವೆ. ನಾವು ನಮ್ಮ ವಿದ್ಯಾರ್ಥಿವೇತನ ಮತ್ತು ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಿಸಲೂ ಸಮ್ಮತಿಸಿದ್ದೇವೆ. ನೇರ ಸಂಪರ್ಕ ಮತ್ತು ಜನರೊಂದಿಗಿನ ಸಂಪರ್ಕದ ಸುಧಾರಣೆಯ ಮಹತ್ವ ಚೆನ್ನಾಗಿಯೇ ತಿಳಿದಿರುವುದಾಗಿದೆ. ಮತ್ತು ಈ ನಿಟ್ಟಿನಲ್ಲಿ ನಾವು ಮುಂಬೈಗೆ ನೇರ ವಿಮಾನ ಹಾರಾಟ ಆರಂಭಿಸಿವ ಗರುಡ ಇಂಡೋನೇಷಿಯಾ ನಿರ್ಧಾರವನ್ನು ಸ್ವಾಗತಿಸುತ್ತೇವೆ.

ಘನತೆವೆತ್ತರೆ,

ನಾನು ಮತ್ತೊಮ್ಮೆ ತಮ್ಮ ಭೇಟಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬಲವಾದ ಇಂಗಿತವನ್ನು ನಾನು ವ್ಯಕ್ತಪಡಿಸುತ್ತೇನೆ. ಮತ್ತು ನಮ್ಮ ನಿರ್ಧಾರಗಳು ಮತ್ತು ನಾವು ಇಂದು ಅಂಕಿತ ಹಾಕಿರುವ ಒಪ್ಪಂದಗಳು, ಒಂದು ಕ್ರಿಯಾ ಕಾರ್ಯಕ್ರಮಪಟ್ಟಿ ರೂಪಿಸಲು ನೆರವಾಗುತ್ತವೆ ಮತ್ತು ನಮ್ಮ ಕಾರ್ಯತಂತ್ರಾತ್ಮಕ ಕಾರ್ಯಕ್ರಮಗಳಿಗೆ ಹೊಸ ದಿಕ್ಕು ಮತ್ತು ತೀವ್ರತೆಯನ್ನು ನೀಡುತ್ತವೆ. ನನ್ನ ಮಾತು ಮುಗಿಸುವ ಮುನ್ನ, ನಾನು ಇಂಡೋನೇಷಿಯಾದಲ್ಲಿರುವ ಎಲ್ಲ ನನ್ನ ಗೆಳೆಯರಿಗೆ ಧನ್ಯವಾದ ಅರ್ಪಿಸ ಬಯಸುತ್ತೇನೆ.

ಧನ್ಯವಾದಗಳು

*****

AKT/SH