Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರಧಾನಮಂತ್ರಿ ಅವರ ಭಾಷಣ


ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ರವಿ ಶಂಕರ ಪ್ರಸಾದ್, ಟೆಲಿಕಾಂ ಉದ್ಯಮದ ನಾಯಕರೇ ಮತ್ತು ಇತರ ಗೌರವಾನ್ವಿತ ಗಣ್ಯರೇ,

ಭಾರತೀಯ ಸಂಚಾರಿ ದೂರವಾಣಿ ಕಾಂಗ್ರೆಸ್2020 ನ್ನು ಉದ್ದೇಶಿಸಿ ಮಾತನಾಡಲು ನನಗೆ ಬಹಳ ಸಂತೋಷವೆನಿಸುತ್ತದೆ. ಇಲ್ಲಿ ಟೆಲಿಕಾಂ ವಲಯದ ಅತ್ಯಂತ ಪ್ರತಿಭಾವಂತ ಮನಸ್ಸುಗಳ ಸಂಗಮವನ್ನು ನಾವು ಹೊಂದಿದ್ದೇವೆ. ಕಳೆದುಹೋದ ಇತ್ತೀಚಿನ ಭೂತಕಾಲದಲ್ಲಿ ಸಂಕೀರ್ಣ ಪಾತ್ರವನ್ನು ನಿಭಾಯಿಸಿದ ಎಲ್ಲಾ ಪ್ರಮುಖರು ಗುಂಪಿನಲ್ಲಿದ್ದಾರೆ ಮತ್ತು ಅವರು ಸಮೃದ್ಧ ಭವಿಷ್ಯದತ್ತ ಭಾರತವನ್ನು ಮುನ್ನಡೆಸುವ ನಾಯಕತ್ವವನ್ನು ನಿಭಾಯಿಸುವ ನಿರೀಕ್ಷೆ ಇದೆ.

ಸ್ನೇಹಿತರೇ,

ಸಂಪರ್ಕವು ತ್ವರಿತಗತಿಯಲ್ಲಿ ಸುಧಾರಿಸುತ್ತಿರುವಂತಹ ಅನುಭವವನ್ನು ನಾವು ಪಡೆಯುತ್ತಿದ್ದರೂ, ನಮಗೆ ಗೊತ್ತಿದೆ, ವೇಗ ಈಗಷ್ಟೇ ಪ್ರಾರಂಭವಾಗಿದೆ ಎಂಬುದಾಗಿ. ಮೊದಲ ದೂರವಾಣಿ ಕರೆ ಮಾಡಿದಾಗಿನಿಂದ, ನಾವು ಬಹಳ ದೂರ ಸಾಗಿ ಬಂದಿದ್ದೇವೆ. ವಸ್ತುಶಃ ಹತ್ತು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ, ನಮ್ಮ ಸಮಾಜದ ಮೇಲೆ ಮತ್ತು ವಿಶ್ವದಲ್ಲಿ ಮೊಬೈಲ್ ಫೋನ್ ಗಳು ಯಾವ ಪರಿಣಾಮ ಮಾಡಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಮತ್ತು ಎದುರಿರುವ ಭವಿಷ್ಯ ಈಗಿರುವ ವ್ಯವಸ್ಥೆಯನ್ನು ಪ್ರಾಥಮಿಕದ ಮಟ್ಟಕ್ಕೆ ಇಳಿಸಲಿದೆ. ಹಿನ್ನೆಲೆಯಲ್ಲಿ, ಬರಲಿರುವ ತಾಂತ್ರಿಕ ಕ್ರಾಂತಿಯ ಹಿನ್ನೆಲೆಯಲ್ಲಿ ನಮ್ಮ ಬದುಕನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬ ಬಗ್ಗೆ ಚಿಂತನೆ ಮಾಡುವುದು ಮತ್ತು ಯೋಜನೆ ರೂಪಿಸುವುದು ಬಹಳ ಮುಖ್ಯ. ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಉತ್ತಮ ಮಾಹಿತಿ, ಮತ್ತು ನಮ್ಮ ರೈತರಿಗೆ ಅವಕಾಶಗಳು, ಸಣ್ಣ ವ್ಯಾಪಾರಿಗಳಿಗೆ ಉತ್ತಮ ಮಾರುಕಟ್ಟೆ ಲಭ್ಯತೆಗಳಂತಹವು ನಾವು ಕೆಲಸ ಮಾಡಬಹುದಾದಂತಹ ಗುರಿಗಳು.

ಸ್ನೇಹಿತರೇ,

ಜಾಗತಿಕ ಸಾಂಕ್ರಾಮಿಕದ ನಡುವೆಯೂ ನಿಮ್ಮ ಅನ್ವೇಷಣೆ ಮತ್ತು ಪ್ರಯತ್ನಗಳ ಫಲವಾಗಿ ಜಗತ್ತು ಇಂದು ಕಾರ್ಯನಿರ್ವಹಿಸುತ್ತಿದೆ. ನಿಮ್ಮ ಪ್ರಯತ್ನಗಳಿಂದಾಗಿ ಬೇರೆ ಊರಿನಲ್ಲಿರುವ ಮಗ ತನ್ನ ತಾಯಿಯ ಸಂಪರ್ಕದಲ್ಲಿ ಇರುವಂತಾಗಿದೆ, ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕರ ಜೊತೆ ತರಗತಿ ಕೋಣೆಯಲ್ಲಿ ಇಲ್ಲದಿದ್ದರೂ ಕಲಿಯುವಂತಹ ವ್ಯವಸ್ಥೆ ರೂಪುಗೊಂಡಿದೆ. ರೋಗಿಯು ತನ್ನ ವೈದ್ಯರನ್ನು ಮನೆಯಲ್ಲಿದ್ದೇ ಸಂಪರ್ಕಿಸಬಹುದಾಗಿದೆ, ಬೇರೆ ಭೂಭಾಗದಲ್ಲಿರುವ ವ್ಯಾಪಾರಿಯು ತನ್ನ ಗ್ರಾಹಕನ ಜೊತೆ ಸಂಪರ್ಕ ಹೊಂದಬಹುದಾಗಿದೆ.

ನಿಮ್ಮ ಪ್ರಯತ್ನಗಳ ಫಲವಾಗಿ ನಾವು, ಸರಕಾರವಾಗಿ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ವಲಯದ ಪೂರ್ಣ ಸಾಮರ್ಥ್ಯವನ್ನು ಬಳಸಲು ಕಾರ್ಯನಿರತವಾಗಿದ್ದೇವೆ. ಹೊಸ ಇತರ ಸೇವಾ ಪೂರೈಕೆದಾರ ಮಾರ್ಗದರ್ಶಿಗಳು ಭಾರತೀಯ ಮಾಹಿತಿ ತಂತ್ರಜ್ಞಾನ ಸೇವಾ ಉದ್ಯಮಕ್ಕೆ ಹೊಸ ಎತ್ತರವನ್ನು ತಲುಪಲು ಸಹಾಯ ಮಾಡಲಿವೆ. ಜಾಗತಿಕ ಸಾಂಕ್ರಾಮಿಕದ ನಡುವೆಯೂ ಇದು ವಲಯದ ಬೆಳವಣಿಗೆಗೆ ಒತ್ತಾಸೆ ನೀಡಲಿದೆ. ಉಪಕ್ರಮ .ಟಿ.ಸೇವಾ ಉದ್ಯಮವನ್ನು ಪ್ರಜಾಸತ್ತಾತ್ಮಕಗೊಳಿಸಲು ಸಹಾಯ ಮಾಡಲಿದೆ ಮತ್ತು ನಮ್ಮ ದೇಶದ ಮೂಲೆ ಮೂಲೆಗಳಿಗೂ ಇದನ್ನು ಕೊಂಡೊಯ್ಯಲಿದೆ.

ಸ್ನೇಹಿತರೇ,

ಇಂದು, ಕೆಲವು ವರ್ಷ ಕಳೆದ ಮೊಬೈಲ್ ಆಪ್ ಗಳು ಹಲವಾರು ದಶಕಗಳಿಂದ ಇದ್ದ ಕಂಪೆನಿಗಳ ಮೌಲ್ಯವನ್ನು ಮೀರಿ ಹೋಗಿವೆ. ಇದು ಭಾರತಕ್ಕೆ ಮತ್ತು ನಮ್ಮ ಯುವ ಅನ್ವೇಷಕರಿಗೆ ಕೂಡಾ ಉತ್ತಮ ಸಂಕೇತ. ಜಾಗತಿಕವಾಗಬಲ್ಲಂತಹ ಸಾಮರ್ಥ್ಯ ಇರುವ ಹಲವು ಉತ್ಪನ್ನಗಳ ನಿಟ್ಟಿನಲ್ಲಿ ನಮ್ಮ ಯುವಕರು ಕಾರ್ಯನಿರತರಾಗಿದ್ದಾರೆ.

ಬಹಳಷ್ಟು ಮಂದಿ ಯುವ ಟೆಕ್ಕಿಗಳು ಉತ್ಪಾದನೆಯೊಂದನ್ನು ವಿಶಿಷ್ಟವಾಗಿಸುವಲ್ಲಿ ಅದರ ಕೋಡ್ ಮುಖ್ಯ ಪಾತ್ರವಹಿಸುತ್ತದೆ ಎಂದು ನನಗೆ ಹೇಳುತ್ತಾರೆ. ಕೆಲವು ಉದ್ಯಮಿಗಳು ಅದರ ಪರಿಕಲ್ಪನೆ ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದು ಹೇಳುತ್ತಾರೆ. ಹೂಡಿಕೆದಾರರು ಉತ್ಪನ್ನ ಹೆಚ್ಚು ಪ್ರಚಲಿತವಾಗಲು ಬಂಡವಾಳ ಬಹಳ ಮುಖ್ಯ ಎನ್ನುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಯುವ ಜನತೆಯು ತಮ್ಮ ಉತ್ಪನ್ನದ ಮೇಲೆ ಇಟ್ಟಿರುವ ನಿಶ್ಚಿತಾಭಿಪ್ರಾಯ ಬಹಳ ಮುಖ್ಯವಾಗುತ್ತದೆ. ಲಾಭದಾಯಕ ನಿರ್ಗಮನ ಮತ್ತು ಅದನ್ನು ವಿಶಿಷ್ಟವಾಗಿಸುವುದರ ನಡುವೆ ನಿಶ್ಚಿತಾಭಿಪ್ರಾಯ ದೃಢವಾಗಿ ನಿಲ್ಲುತ್ತದೆ . ಆದುದರಿಂದ, ನನ್ನ ಯುವ ಸ್ನೇಹಿತರಿಗೆ ನನ್ನ ಸಂದೇಶವೆಂದರೆ ಅವರ ಶಕ್ತಿ ಸಾಮರ್ಥ್ಯದಲ್ಲಿ ಜೊತೆಗೆ ಉತ್ಪನ್ನದಲ್ಲಿ ನಂಬಿಕೆ ಇಡಿ ಎಂಬುದಾಗಿರುತ್ತದೆ.

ಸ್ನೇಹಿತರೇ,

ಇಂದು ನಾವು ಬಿಲಿಯನ್ನಿಗೂ ಅಧಿಕ ದೂರವಾಣಿ ಬಳಕೆದಾರ ದೇಶವಾಗಿದ್ದೇವೆ. ಇಂದು ನಮ್ಮಲ್ಲಿ ಬಿಲಿಯನ್ನಿಗೂ ಅಧಿಕ ಜನರು ವಿಶಿಷ್ಟ ಡಿಜಿಟಲ್ ಗುರುತಿಸುವಿಕೆಯನ್ನು ಹೊಂದಿದ್ದಾರೆ. ಇಂದು ನಾವು 750 ಮಿಲಿಯನ್ ಅಂತರ್ಜಾಲ ಬಳಕೆದಾರರನ್ನು ಹೊಂದಿದ್ದೇವೆ. ಅಂತರ್ಜಾಲ ಪ್ರವೇಶಿಸುತ್ತಿರುವ ಪ್ರಮಾಣ ಮತ್ತು ವೇಗವನ್ನು ಕೆಳಗಿನ ಅಂಶಗಳೊಂದಿಗೆ ನೋಡಬಹುದು. ಅಂತರ್ಜಾಲ ಬಳಸುತ್ತಿರುವವರಲ್ಲಿ ಅರ್ಧಾಂಶ ಜನರು ಕಳೆದ ನಾಲ್ಕು ವರ್ಷಗಳಲ್ಲಿ ಸೇರ್ಪಡೆಗೊಂಡವರು. ಅಂತರ್ಜಾಲ ಬಳಸುವವರಲ್ಲಿ ಅರ್ಧಾಂಶ ಜನರು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿರುವವರು. ನಮ್ಮ ಡಿಜಿಟಲ್ ಗಾತ್ರ ಮತ್ತು ಡಿಜಿಟಲ್ ಹಸಿವು ಅಭೂತಪೂರ್ವವಾದುದು. ವಿಶ್ವದಲ್ಲಿಯೇ ಅತ್ಯಂತ ಕಡಿಮೆ ದರ ವಿಧಿಸುವ ದೇಶ ನಮ್ಮದು. ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಮೊಬೈಲ್ ಆಪ್ ಮಾರುಕಟ್ಟೆ ನಮ್ಮದಾಗಿದೆ. ನಮ್ಮ ದೇಶದ ಡಿಜಿಟಲ್ ಸಾಮರ್ಥ್ಯ, ಬಹುಷಃ ಮನುಕುಲದ ಚರಿತ್ರೆಯಲ್ಲಿಯೇ ಅದ್ವಿತೀಯವಾಗಿರುವಂತಹದ್ದು.

ಮೊಬೈಲ್ ತಂತ್ರಜ್ಞಾನದಿಂದಾಗಿ ಬಿಲಿಯಾಂತರ ಡಾಲರ್ ಗಳ ಮೌಲ್ಯದ ಪ್ರಯೋಜನಗಳನ್ನು ಮಿಲಿಯಾಂತರ ಜನರಿಗೆ ತಲುಪಿಸಲು ಸಾಧ್ಯವಾಗಿದೆ. ಮೊಬೈಲ್ ತಂತ್ರಜ್ಞಾನದಿಂದಾಗಿ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಬಡವರಿಗೆ ಮತ್ತು ಅಪಾಯದಂಚಿನಲ್ಲಿ ಇರುವವರಿಗೆ ತ್ವರಿತವಾಗಿ ಸಹಾಯ ಮಾಡುವುದಕ್ಕೆ ನಮಗೆ ಸಾಧ್ಯವಾಗಿದೆ. ಮೊಬೈಲ್ ತಂತ್ರಜ್ಞಾನ ಬಿಲಿಯಾಂತರ ನಗದು ರಹಿತ ವರ್ಗಾವಣೆಯನ್ನು ಸಾಧ್ಯ ಮಾಡಿದೆ, ಇದರಿಂದ ಪಾರದರ್ಶಕತೆ ಹೆಚ್ಚಿದೆ. ರಸ್ತೆ ಬಳಕೆ ಶುಲ್ಕ ಸಂಗ್ರಹ ಮಾಡುವ ಟೋಲ್ ಬೂತ್ ಗಳಲ್ಲಿ ಪರಸ್ಪರ ಮುಖಾಮುಖಿ ಸಂಪರ್ಕರಹಿತ ವ್ಯವಸ್ಥೆ ಮೊಬೈಲ್ ತಂತ್ರಜ್ಞಾನದಲ್ಲಿ ಸಾಧ್ಯವಾಗಿದೆ. ಇದೇ ಮೊಬೈಲ್ ತಂತ್ರಜ್ಞಾನದ ಸಹಾಯದ ಮೇಲೆ ನಾವು ವಿಶ್ವದ ಅತ್ಯಂತ ದೊಡ್ಡ ಕೋವಿಡ್19 ಲಸಿಕೆ ಆಂದೋಲನವನ್ನು ಕೈಗೊಳ್ಳಲಿದ್ದೇವೆ.

ಸ್ನೇಹಿತರೇ,

ಭಾರತದಲ್ಲಿ ಮೊಬೈಲ್ ತಯಾರಿಕೆಗೆ ಸಂಬಂಧಿಸಿ ನಾವು ಬಹಳಷ್ಟನ್ನು ಸಾಧಿಸಿದ್ದೇವೆ. ಮೊಬೈಲ್ ತಯಾರಿಕೆಗೆ ಭಾರತವು ಉತ್ತಮ ಆದ್ಯತೆಯ ಆಯ್ಕೆ ತಾಣವಾಗಿ ಮೂಡಿ ಬರುತ್ತಿದೆ. ಭಾರತದಲ್ಲಿ ಟೆಲಿಕಾಂ ಸಲಕರಣೆಗಳ ತಯಾರಿಕೆಯನ್ನು ಉತ್ತೇಜಿಸಲು ಉತ್ಪನ್ನ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ನಾವು ರೂಪಿಸಿದ್ದೇವೆ. ಟೆಲಿಕಾಂ ಸಲಕರಣೆಗಳು, ವಿನ್ಯಾಸ,ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಭಾರತವನ್ನು ಜಾಗತಿಕ ತಾಣವಾಗಿಸುವ ನಿಟ್ಟಿನಲ್ಲಿ ನಾವು ಒಗ್ಗೂಡಿ ಕೆಲಸ ಮಾಡೋಣ.

ಮುಂದಿನ ಮೂರು ವರ್ಷಗಳಲ್ಲಿ ಪ್ರತೀ ಗ್ರಾಮಕ್ಕೂ ಹೆಚ್ಚು ವೇಗದ ಫೈಬರ್ಆಪ್ಟಿಕ್ ಸಂಪರ್ಕ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ನಾವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಈಗಾಗಲೇ ಫೈಬರ್ ಆಪ್ಟಿಕ್ ಕೇಬಲ್ ಮೂಲಕ ಬೆಸೆದಿದ್ದೇವೆ. ಅಭಿವೃದ್ಧಿ ಆಶಯದ ಜಿಲ್ಲೆಗಳು, ಎಡ ಪಂಥೀಯ ತೀವ್ರಗಾಮಿತ್ವದಿಂದ ಸಂತ್ರಸ್ಥವಾಗಿರುವ ಜಿಲ್ಲೆಗಳು, ಈಶಾನ್ಯ ರಾಜ್ಯಗಳು, ಲಕ್ಷದ್ವೀಪ ಪ್ರದೇಶ ಇತ್ಯಾದಿಗಳನ್ನು ವಿಶೇಷವಾಗಿ ಪರಿಗಣಿಸಿ ಅಲ್ಲಿ ಸಂಪರ್ಕ ಸೌಲಭ್ಯವನ್ನು ಒದಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಥಿರ ಲೈನ್ ಗಳ ಮೂಲಕ ಬ್ರಾಡ್ ಬ್ಯಾಂಡ್ ಸಂಪರ್ಕ ಮತ್ತು ಸಾರ್ವಜನಿಕ ವೈಫೈ ಹಾಟ್ ಸ್ಪಾಟ್ ಗಳ ವೇಗವನ್ನು ಹೆಚ್ಚಳವನ್ನು ಖಾತ್ರಿಪಡಿಸಲು ನಾವು ಹೆಚ್ಚು ಆಸಕ್ತರಾಗಿದ್ದೇವೆ.

ಸ್ನೇಹಿತರೇ,

ತಾಂತ್ರಿಕ ಮೇಲ್ದರ್ಜೆಗೇರಿಸುವಿಕೆಯಿಂದ, ನಾವು ಹ್ಯಾಂಡ್ ಸೆಟ್ ಗಳನ್ನು ಬದಲಾಯಿಸುವಂತಹ ಮತ್ತು ಸಲಕರಣೆಯನ್ನು ಆಗಾಗ ಬದಲಾಯಿಸಬೇಕಾದಂತಹ ಸಂಸ್ಕೃತಿಯನ್ನು ಹೊಂದಿದ್ದೇವೆ. ಇಲೆಕ್ಟ್ರಾನಿಕ್ ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ರೂಪಿಸಲು ಉದ್ಯಮವು ಕಾರ್ಯ ಪಡೆಯೊಂದನ್ನು ರಚಿಸುವ ಬಗ್ಗೆ ಚಿಂತನೆ ನಡೆಸಬಹುದೇ.

ಸ್ನೇಹಿತರೇ,

ನಾನು ಮೊದಲು ಹೇಳಿದಂತೆ , ಇದು ಬರೇ ಆರಂಭ ಮಾತ್ರ. ಭವಿಷ್ಯವು ತ್ವರಿತಗತಿಯ ತಾಂತ್ರಿಕ ಪ್ರಗತಿಯ ಭಾರೀ ಸಾಮರ್ಥ್ಯವನ್ನು ಒಳಗೊಂಡಿದೆ. ನಾವು ಭವಿಷ್ಯದತ್ತ ಜಿಗಿಯಲು ಸಕಾಲದಲ್ಲಿ 5 ಜಿ ತಂತ್ರಜ್ಞಾನ ಲಭ್ಯವಾಗುವಂತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಮತ್ತು ಮಿಲಿಯಾಂತರ ಭಾರತೀಯರನ್ನು ಸಶಕ್ತರನ್ನಾಗಿಸಬೇಕು. ಸಮ್ಮೇಳನ ಇಂತಹ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಿ, ಸಂಕೀರ್ಣ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಮ್ಮನ್ನು ಮುಂದಕ್ಕೆ ಕೊಂಡೊಯ್ಯುವ ಫಲಪ್ರದವಾದ ಫಲಿತಾಂಶಗಳನ್ನು ಪಡೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ.

ನಾನು ನಿಮ್ಮೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ.

ಧನ್ಯವಾದಗಳು

***