Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡಿಯಾ ಟುಡೇ ಸಮಾವೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾಡಿದ ಭಾಷಣ


ಈ ಸಮಾವೇಶ ಆಯೋಜಿಸಿರುವ ತಮ್ಮೆಲ್ಲರಿಗೂ ಮೊಟ್ಟ ಮೊದಲಿಗೆ ಹಾರ್ದಿಕ ಶುಭಾಶಯಗಳನ್ನು ಅರ್ಪಿಸುತ್ತೇನೆ.
ಇಂಡಿಯಾ ಟುಡೇ ಸಮಾವೇಶದಲ್ಲಿ ಭಾಗವಹಿಸುವ ಅವಕಾಶ ನನಗೆ ಈ ಮೊದಲೂ ಕೂಡಾ ಲಭಿಸಿತ್ತು. ನೆನ್ನೆ ನನಗೆ ಇಂಡಿಯಾ ಟುಡೇ ಗ್ರೂಪ್ ನ ಮುಖ್ಯಸ್ಥರು ನನಗೆ ಡಿಸ್ರಪ್ಟರ್ ಇನ್ ಚೀಫ್ ಎಂಬ ಹೊಸ ಪದವೊಂದನ್ನು  ನೀಡಿದ್ದಾರೆ ಎಂಬ ವಿಷಯ ತಿಳಿಯಿತು. ಕಳೆದ ಎರಡು ದಿನಗಳಿಂದ ತಾವು “ಮಹಾನ್ ಅಡೆತಡೆ” – ದಿ ಗ್ರೇಟ್ ಡಿಸ್ರಪ್ಷನ್ – ವಿಷಯದ ಬಗೆಗೆ ಚಿಂತನ ಮಂಥನ ನಡೆಸುತ್ತಿದ್ದೀರಿ.
 
ಮಿತ್ರರೇ, ಅನೇಕ ದಶಕಗಳಿಂದ ನಾವು ತಪ್ಪು ನೀತಿಗಳಿಂದ ತಪ್ಪು ಹಾದಿಯಲ್ಲಿ ನಡೆದಿದ್ದೇವೆ. ಎಲ್ಲವನ್ನು ಸರ್ಕಾರ ಮಾಡುತ್ತದೆ ಎಂಬ  ಭಾವನೆ ಪ್ರಬಲವಾಗಿ ಮೂಡಿತ್ತು. ಅನೇಕ ದಶಕಗಳ ನಂತರ ಈ ತಪ್ಪು ಎಲ್ಲರ ಗಮನಕ್ಕೆ ಬಂದಿತು. ತಪ್ಪನ್ನು ತಿದ್ದುವ ಪ್ರಯತ್ನ ನಡೆಯಿತು. ಎರಡು ದಶಕಗಳ ತಪ್ಪನ್ನು ತಿದ್ದುವ ಪ್ರಯತ್ನವನ್ನೇ ಸುಧಾರಣೆ ಎಂದು ತಿಳಿಯಲಾಯಿತು, ನಮ್ಮ ಯೋಚನಾಶಕ್ತಿ ಇಷ್ಟಕ್ಕೇ ಸೀಮಿತವಾದದ್ದು.
 
ನಮ್ಮ ದೇಶ ಅತಿ ಹೆಚ್ಚು ಕಾಲ ಒಂದೇ ಸರಕಾರವನ್ನು ನೋಡಿದೆ ಅಥವ ಸಮ್ಮಿಶ್ರ ಸರಕಾರಗಳನ್ನು. ಇದೇ ಕಾರಣದಿಂದಾಗಿ ದೇಶದಲ್ಲಿ ಒಂದೇ ರೀತಿಯ ಚಿಂತನೆ ಅಥವಾ ಚಟುವಟಿಕೆಗಳು ಕಂಡುಬಂದವು.
ಮೊದಲಿಗೆ ರಾಜಕೀಯ ವ್ಯವಸ್ಥೆಯಡಿಯಲ್ಲಿ ಉದಿಸಿದ ಚುನಾವಣಾ ಪದ್ಧತಿಗಳಿದ್ದವು ಅಥವಾ ಅಧಿಕಾರಷಾಯಿಯ ಕಟ್ಟುನಿಟ್ಟಾದ ಚೌಕಟ್ಟಿನ ಆಧಾರದಲ್ಲಿತ್ತು.  ಸರಕಾರ ನಡೆಸಲು ಇವೆರಡು ಪದ್ಧತಿಗಳು ಜಾರಿಯಲ್ಲಿದ್ದವು. ಹಾಗೂ ಸರ್ಕಾರದ ಲೆಕ್ಕಾಚಾರ ಕೂಡಾ ಇದರ ಆಧಾರದ ಮೇಲೆ ಆಗುತ್ತಿತ್ತು.
 
ತಾಂತ್ರಿಕತೆಯಲ್ಲಿ ಕಳೆದ 200 ವರ್ಷಗಳಲ್ಲಿ ಉಂಟಾದ ಬದಲಾವಣೆಗಿಂತ ಹೆಚ್ಚು ಕಳೆದ 20 ವರ್ಷಗಳಲ್ಲಿ ಉಂಟಾಗಿದೆ ಎಂಬುದನ್ನು ನಾವೆಲ್ಲರೂ ಒಪ್ಪಲೇಬೇಕು. 30 ವರ್ಷಗಳ ಹಿಂದಿನ ಯುವಜನತೆ ಮತ್ತು ಇಂದಿನ ಯುವಕರ ಮಹತ್ವಾಕಾಂಕ್ಷೆಯಲ್ಲಿ ಬಹಳ ಅಂತರವಿದೆ ಎಂದುದನ್ನೂ ಕೂಡಾ ಒಪ್ಪಬೇಕಾಗಿದೆ.  ಈ ಎರಡು ಧ್ರುವಗಳ   ವಿಶ್ವ ಮತ್ತು ಪರಸ್ಪರ ಅವಲಂಬಿತ ವಿಶ್ವಗಳ ನಡುವಣ   ಸಮೀಕರಣ ಕೂಡಾ ಬದಲಾಗಿದೆ ಎಂಬುದನ್ನೂ ಕೂಡಾ ಒಪ್ಪಲೇಬೇಕಿದೆ.
 
ಸ್ವಾತಂತ್ರ ಸಂಗ್ರಾಮದ ಆ ದಿನಗಳನ್ನು ಗಮನಿಸಿದರೆ ಅಂದು ವೈಯಕ್ತಿಕ ಹಿತಾಸಕ್ತಿಗಿಂತ ಹೆಚ್ಚು ರಾಷ್ಟ್ರ ಹಿತದ ಆಕಾಂಕ್ಷೆ  ಹೆಚ್ಚಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ನೂರಾರು ವರ್ಷಗಳ  ಗುಲಾಮಗಿರಿಯಿಂದ ಅದು ನಮ್ಮನ್ನು ಹೊರತಂದಿತ್ತು. ಸ್ವಾತಂತ್ರ್ಯ ಕ್ಕಾಗಿ ನಡೆದ ಆಂದೋಲನದ ರೀತಿಯಲ್ಲಿ  ಅಭಿವೃದ್ಧಿಗಾಗಿ ಆಂದೋಲನ ನಡೆಯಬೇಕಿದೆ. ವೈಯಕ್ತಿಕ ಆಕಾಂಕ್ಷೆಗಳು ಸಾಮೂಹಿಕ ಮಹತ್ವಾಕಾಂಕ್ಷೆಯಾಗಿ ಬದಲಾಗಬೇಕಿದೆ. ಈ ಸಾಮೂಹಿಕ ಮಹತ್ವಾಕಾಂಕ್ಷೆ ದೇಶದ ಸರ್ವಾಂಗೀಣ ಅಭಿವೃದ್ಧಿಯದಾಗಿರಬೇಕಿದೆ.
 
ಈ ಸರ್ಕಾರ “ಒಂದು ಭಾರತ – ಶ್ರೇಷ್ಠ ಭಾರತ”ದ ಕನಸನ್ನು ಹೊತ್ತು ನಡೆಯುತ್ತಿದೆ. ಸಮಸ್ಯೆಗಳನ್ನು ನೋಡುವ ರೀತಿ ಹೇಗಿರಬೇಕು, ಇದರ ವಿಧಾನಗಳು ಬೇರೆ ಬೇರೆಯಾಗಿವೆ. ಬಹಳಷ್ಟು ವರ್ಷಗಳ ಕಾಲ ಆಂಗ್ಲ ಮತ್ತು ಹಿಂದಿಯ ನಡುವೆ ಸಂಘರ್ಷ ನಡೆಯುತ್ತಿತ್ತು. ಹಿಂದೂಸ್ತಾನದ ಎಲ್ಲ ಭಾಷೆಗಳು ನಮ್ಮ ಆಸ್ತಿ. ದೇಶದ ಎಲ್ಲಾ ಭಾಷೆಗಳನ್ನು ಒಂದೇ ಸೂತ್ರದಲ್ಲಿ ಹೇಗೆ ಒಂದೂಗೂಡಿಸಬೇಕೆಂಬ ಬಗ್ಗೆ ಗಮನ ಹರಿಸಲಾಯಿತು.”ಒಂದು ಭಾರತ – ಶ್ರೇಷ್ಠ ಭಾರತ “ಕಾರ್ಯಕ್ರಮದಲ್ಲಿ ಎರಡೆರಡು ರಾಜ್ಯಗಳನ್ನು ಜೋಡಿಯನ್ನಾಗಿ ಮಾಡಲಾಯಿತು, ಇದರಿಂದ ಇಂದು ಎಲ್ಲಾ ರಾಜ್ಯಗಳು ಪರಸ್ಪರರ ಸಾಂಸ್ಕೃತಿಕ ವೈವಿಧ್ಯತೆಗಳ ಬಗ್ಗೆ ತಿಳಿಯುತ್ತಿವೆ.
 
ಅಂದರೆ ವಿಚಾರಗಳು ಬದಲಾಗುತ್ತಿವೆ, ವಿಧಾನ ಬೇರೆಯದಾಗಿದೆ. ಆದುದರಿಂದ ತಮ್ಮ ಈ ಪದ ಈ ಮಾತುಗಳಿಂದಾಗಿ ಚಿಕ್ಕದಾಗಿ ಕಾಣುತ್ತಿದೆ. ಇದು ವ್ಯವಸ್ಥೆಯನ್ನು ಅಂತ್ಯಗೊಳಿಸುವ ಆಲೋಚನೆಯಲ್ಲ. ಇದರಿಂದ ದೇಶದ ಆತ್ಮ ಮತ್ತೆ ಮರುಜೀವ ಪಡೆದು ಪರಿಪೂರ್ಣವಾಗಬೇಕು, ಸಮಯಕ್ಕನುಗುಣವಾಗಿ ವ್ಯವಸ್ಥೆಗಳು ನಡೆಯುತ್ತಿರಬೇಕು, ಇದು 21 ನೇ ಶತಮಾನದ ಜನಮಾನಸದ ಚಿಂತನೆಯಾಗಿದೆ. ಆದುದರಿಂದ ದೇಶದಲ್ಲಿ “ಡಿಸ್ರಪ್ಟರ್-ಇನ್-ಚೀಫ್” ಎಂದು ಯಾರಾದರೂ ಇದ್ದರೆ ಅವರು ದೇಶದ 125 ಕೋಟಿ ಭಾರತೀಯರು. ಹಿಂದೂಸ್ತಾನದ  ಜನಮಾನಸದೊಂದಿಗೆ ಬೆರೆತವರಿಗೆ ಅಡ್ದಿಪಡಿಸುವವರು – ಡಿಸ್ರಪ್ಟರ್ – ಯಾರು ಎಂಬುದು ಬಹಳ ಚೆನ್ನಾಗಿ ಅರಿವಾಗಿದೆ.
ಮೇರೆ ಮೀರಿದ ವಿಚಾರಗಳು, ಮಾತುಗಳನ್ನು   ಇಂದೂ ಕೂಡಾ ಹಳೆಯ ವಿಧಾನದಲ್ಲಿ ನೋಡುವ ಮೂಲಕ ಕೆಲವು ಜನರು ಅಧಿಕಾರದ ಆವರಣದಲ್ಲೆ ವಿಶ್ವ ಬದಲಾಗುತ್ತದೆ   ತಿಳಿದುಕೊಂಡಿದ್ದಾರೆ.
 
ನಾವು ಕಾಲಮಿತಿಯೊಳಗೆ ಅನುಷ್ಠಾನ ಮತ್ತು ಸಮಗ್ರ ಚಿಂತನೆಯನ್ನು ಸರಕಾರದ ಕಾರ್ಯಸಂಸ್ಕೃತಿಯೊಡನೆ ಜೋಡಿಸಲಾಗಿದೆ. ಕೆಲಸ ಮಾಡುವ ವಿಧಾನ ಹೇಗಿರಬೇಕೆಂದರೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಕಾರ್ಯವಿಧಾನಗಳನ್ನು ಸಾರ್ವಜನಿಕ ಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ ಮಾಡಬೇಕಿದೆ.  ಕಾರ್ಯದಲ್ಲಿ ದಕ್ಷತೆ ತರಲು ಕಾರ್ಯವಿಧಾನದಲ್ಲಿ ಪುನರ್ ರಚನೆ ಮಾಡಬೇಕಿದೆ. ಮಿತ್ರರೇ, ಭಾರತ ಇಂದು ವಿಶ್ವ ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರವಾಗಿದೆ. ವಿಶ್ವ ಬಂಡವಾಳ ವರದಿಯಲ್ಲಿ ಭಾರತವನ್ನು ವಿಶ್ವದ ಮೊದಲ ಮೂರು ಬಹು ನಿರೀಕ್ಷಿತ   ಆತಿಥೇಯ ಆರ್ಥಿಕ ರಾಷ್ಟ್ರಗಳಲ್ಲಿ ಒಂದೆಂದು ಗುರುತಿಸಲಾಗಿದೆ.2015-16 ರಲ್ಲಿ 55  ಶತಕೋಟಿ ಡಾಲರ್ ಗೂ ಅಧಿಕ ದಾಖಲೆ ಬಂಡವಾಳ ಹೂಡಲಾಗಿದೆ. ಎರಡು ವರ್ಷಗಳಲ್ಲಿ ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ 32 ಸ್ಥಾನಗಳಷ್ಟು ಎತ್ತರಕ್ಕೇರಿದೆ.   “ಮೇಕ್  ಇನ್ ಇಂಡಿಯಾ”  ಇಂದು ಭಾರತದಲ್ಲಿ ಅತಿ ದೊಡ್ಡ ಉಪಕ್ರಮವಾಗಿ ಪರಿಣಮಿಸಿದೆ. ಭಾರತ ಇಂದು ವಿಶ್ವದ ಆರನೇ ದೊಡ್ಡ ಉತ್ಪಾದನಾ ರಾಷ್ಟ್ರವಾಗಿದೆ.
 
ಮಿತ್ರರೇ,  ಸರ್ಕಾರ ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಬಲ ನೀಡಿದೆ.  ಆಲೋಚನಾತ್ಮಕ ಪ್ರಜಾಪ್ರಭುತ್ವದ ಪರಿಣಾಮವಾಗಿ, ಪ್ರತಿಯೊಂದು ರಾಜ್ಯಗಳೊಡನೆ ಮಾತುಕತೆ ನಡೆಸಿದ  ಪರಿಣಾಮ ಇಂದು ಜಿಎಸ್ ಟಿ – ಸರಕು ಮತ್ತು ಸೇವಾ ತೆರಿಗೆ – ಎಲ್ಲೆಡೆ ತಲುಪಿದೆ. ಜಿಎಸ್ ಟಿಗೆ  ಎಲ್ಲರೂ ಸಹಮತಿ ವ್ಯಕ್ತಪಡಿಸಿದ್ದು ಒಂದು ಮಹತ್ವಪೂರ್ಣ ತೀರ್ಮಾನವಾಗಿದೆ, ಆದರೆ ಇದರ ಪ್ರಕ್ರಿಯೆ ಕೂಡಾ ಅಷ್ಟೇ ಮಹತ್ವಪೂರ್ಣವಾಗಿತ್ತು. ಇದು ಎಲ್ಲರ ಸಹಮತಿಯೊಂದಿಗೆ ತೆಗೆದುಕೊಂಡ ನಿರ್ಧಾರವಾಗಿದೆ. ಎಲ್ಲ ರಾಜ್ಯಗಳೂ ಸೇರಿ ಇದರ ಮಾಲಿಕತ್ವ ಪಡೆದಿವೆ. ತಮ್ಮ ದೃಷ್ಟಿಯಲ್ಲಿ ಇದು ವಿಪರೀತ ಅನ್ನಿಸಬಹುದು, ಆದರೆ ಜಿಎಸ್ ಟಿ, ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಉನ್ನತ ಮಟ್ಟಕ್ಕೆ ಏರಿದುದರ ಸಂಕೇತವಾಗಿದೆ.
 
“ಎಲ್ಲರ ಜತೆಗೆ  – ಎಲ್ಲರ ಅಭಿವೃದ್ಧಿ”    ಕೇವಲ ಘೋಷಣೆಯಲ್ಲ, ಇದರಲ್ಲಿ ಬೆರೆತು ತೋರಿಸುತ್ತಿದ್ದೇವೆ.
ಸ್ನೇಹಿತರೇ, ನಮ್ಮ ದೇಶದ ಕಾರ್ಮಿಕ ಕಾನೂನು ಅಭಿವೃದ್ಧಿಗೆ ಭಾದಕ ಎಂದು ಭಾವಿಸಲಾಗುತ್ತಿತ್ತು. ಮತ್ತೊಂದೆಡೆ, ಕಾರ್ಮಿಕ ಕಾನೂನಿಗೆ ಸುಧಾರಣೆ ತರಬಯಸುವವರು ಕಾರ್ಮಿಕ ವಿರೋಧಿ ಎಂದು ಭಾವಿಸಲಾಗುತ್ತಿತ್ತು. ಅಂದರೇ ಎರಡೂ ವಿಪರೀತ ಸ್ಥಿತಿಯಲ್ಲಿತ್ತು. ಮಾಲಿಕ, ನೌಕರ ಮತ್ತು ಉದ್ಯೋಗಾಕಾಂಕ್ಷಿ ಮೂವರಿಗೂ ಒಂದು ಸಮಗ್ರ ವಿಧಾನವನ್ನು ಉಪಯೋಗಿಸಿ ಹೇಗೆ ಮುಂದುವರೆಸಬೇಕೆಂದು  ಯಾರೂ ಚಿಂತಿಸಲಿಲ್ಲ. ಈ ಮೊದಲು ದೇಶದಲ್ಲಿ ಬೇರೆ ಬೇರೆ ಕಾರ್ಮಿಕ ಕಾನೂನುಗಳ ಪಾಲನೆಗಾಗಿ ಮಾಲಿಕರಿಗೆ 56 ಬೇರೆ ಬೇರೆ ಪುಸ್ತಕಗಳಲ್ಲಿ ವಿವರಗಳನ್ನು ಭರ್ತಿ ಮಾಡಬೇಕಿತ್ತು.  ಒಂದೇ ವಿವರಗಳನ್ನು ಬೇರೆ ಬೇರೆ ದಾಖಲಾತಿ ಪುಸ್ತಕಗಳಲ್ಲಿ ಬರೆಯಬೇಕಿತ್ತು. ಸರ್ಕಾರ ಕಳೆದ ತಿಂಗಳಲ್ಲಿ  ಘೋಷಿಸಿದ ಪ್ರಕಾರ ಮಾಲಿಕರಿಗೆ ಕಾರ್ಮಿಕ ಕಾನೂನುಗಳ ಅನ್ವಯ 56  ಪುಸ್ತಕಗಳ ಬದಲಿಗೆ ಕೇವಲ 
5 ಪುಸ್ತಕಗಳನ್ನು ನಿರ್ವಹಣೆ ಮಾಡಬೇಕಿದೆ. ಇದು ವ್ಯವಹಾರವನ್ನು ಸುಲಭ ಮಾಡಲು ಉದ್ಯಮಿಗಳಿಗೆ ಸಹಕಾರಿಯಾಗಲಿದೆ.
 
 ಉದ್ಯೋಗ ಮಾರುಕಟ್ಟೆಯ ವಿಸ್ತರಣೆಯ ಬಗೆಗೆ ಕೂಡಾ ಸರ್ಕಾರ ಸಂಪೂರ್ಣ ಗಮನಹರಿಸಿದೆ. ಸಾರ್ವಜನಿಕ ವಲಯ, ಖಾಸಗಿ ವಲಯದ ಜತೆ ಜತೆಗೆ ಸರ್ಕಾರ ವೈಯಕ್ತಿಕ ವಲಯದ ಕಡೆ ಕೂಡಾ ಹೆಚ್ಚು ಒತ್ತು ನೀಡಿದೆ.  ಮುದ್ರಾ ಯೋಜನೆಯನ್ವಯ ಯುವ ಉದ್ಯಮಿಗಳಿಗೆ ಯಾವುದೇ ಖಾತರಿ ಇಲ್ಲದೇ ಬ್ಯಾಂಕ್ ಗಳು ಸಾಲ ನೀಡುತ್ತಿವೆ. ಕಳೆದ ಎರಡೂವರೆ ವರ್ಷಗಳಲ್ಲಿ  ಆರು ಕೋಟಿಗಿಂತ ಅಧಿಕ ಜನರಿಗೆ ಮುದ್ರಾಯೋಜನೆಯಡಿ ಸುಮಾರು ಮೂರು ಲಕ್ಷ ಕೋಟಿಗೂ ಅಧಿಕ ಸಾಲ ಸೌಲಭ್ಯ ಒದಗಿಸಲಾಗಿದೆ.  ಸಾಮಾನ್ಯ ಅಂಗಡಿ ಮುಗ್ಗಟ್ಟುಗಳು ಮತ್ತು ಸಂಸ್ಥೆಗಳು ವರ್ಷದ ಎಲ್ಲಾ 365 ದಿನಗಳೂ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗಿದೆ.   ಮೊದಲ ಬಾರಿಗೆ ಕೌಶಲ್ಯ ಅಭಿವೃದ್ಧಿ ಮಂತ್ರಾಲಯವನ್ನು ಸ್ಥಾಪಿಸಿ ಯೋಜನೆಬದ್ಧ ಕಾರ್ಯ ನಿರ್ವಹಿಸಲಾಗುತ್ತಿದೆ. ಪ್ರಧಾನಮಂತ್ರಿ ಉದ್ಯೋಗ ಪ್ರೋತ್ಸಾಹ ಯೋಜನೆ ಮತ್ತು ಆದಾಯ ತೆರಿಗೆ ವಿನಾಯ್ತಿ ಮೂಲಕ ಔಪಚಾರಿಕ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
 
ಇದೇ ರೀತಿ ಶಿಷ್ಯವೃತ್ತಿ ಕಾನೂನಿನಲ್ಲಿ ಸುಧಾರಣೆ ತಂದು ಪ್ರಶಿಕ್ಷಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಹಾಗೂ ಪ್ರಶಿಕ್ಷಣದ ಅವಧಿಯಲ್ಲಿ ದೊರೆಯುತ್ತಿದ್ದ ವಿದ್ಯಾರ್ಥಿವೇತನದಲ್ಲಿ ಕೂಡಾ ಹೆಚ್ಚಳವನ್ನು ಮಾಡಲಾಗಿದೆ.
ಮಿತ್ರರೇ, ಸರ್ಕಾರದ ಶಕ್ತಿಗಿಂತ ಜನಶಕ್ತಿಗೆ ಹೆಚ್ಚಿನ ಮಹತ್ವವಿದೆ. ದೇಶದ ಜನರನ್ನು ಒಟ್ಟುಗೂಡಿಸದೆ, ಇಷ್ಟು ದೊಡ್ಡ ದೇಶವನ್ನು ಮುನ್ನಡೆಸುವುದು ಸಾಧ್ಯವಿಲ್ಲ ಎಂದು ಇಂಡಿಯಾ ಟುಡೇ ಸಮಾವೇಶದಲ್ಲೇ ನಾನು ಈ ಮೊದಲೂ ಕೂಡಾ ಹೇಳಿದ್ದೇನೆ. ದೇಶದ ಜನಶಕ್ತಿಯನ್ನು ಜೊತೆಗೆ ಕೊಂಡೊಯ್ಯದಿದ್ದರೆ ದೇಶವನ್ನು ಮುನ್ನಡೆಸುವುದು ಅಸಾಧ್ಯ. ದೀಪಾವಳಿಯ ನಂತರ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕೈಗೊಂಡ ಕ್ರಮಗಳ ನಂತರ ತಮಗೆಲ್ಲರಿಗೂ ಜನಶಕ್ತಿಯ ಪರಿಚಯವಾಗಿದೆ. ಇಂತಹ ಜನಶಕ್ತಿ ಕೇವಲ ಯುದ್ಧದ ಸಮಯ ಮತ್ತು ಸಂಕಷ್ಟದ ಸಮಯಗಳಲ್ಲಿ ಮಾತ್ರ ಕಂಡುಬರುತ್ತಿತ್ತು.  ದೇಶದಲ್ಲಿ ವ್ಯಾಪಿಸಿರುವ ಪಿಡುಗುಗಳನ್ನು ಅಂತ್ಯಗೊಳಿಸುವ ಉದ್ದೇಶದಿಂದ, ದುರ್ಬಲತೆಯನ್ನು ಬಡಿದೋಡಿಸಿ ಮುನ್ನಡೆಯುವ  ಬಯಕೆಯಿಂದ ಇಂದು ದೇಶದ ಜನಶಕ್ತಿ ಒಂದಾಗುತ್ತಿದೆ. ಜನತೆ ನವ ಭಾರತವನ್ನು ಕಟ್ಟಲು ಬಯಸುತ್ತಿದ್ದಾರೆ.
 
ಇಂದು ಸ್ವಚ್ಚ ಭಾರತ ಅಭಿಯಾನದ ಅಡಿಯಲ್ಲಿ ದೇಶದೆಲ್ಲೆಡೆ 4 ಕೋಟಿ ಶೌಚಾಲಯಗಳ ನಿರ್ಮಾಣವಾಗಿದೆ . ನೂರಕ್ಕೂ ಹೆಚ್ಚು ಜಿಲ್ಲೆಗಳು ಬಯಲುಶೌಚಾಲಯ ಮುಕ್ತವೆಂದು ಘೋಷಣೆಯಾಗಿದೆ ಎಂದರೆ ಇದು ಜನಶಕ್ತಿ ಒಂದಾಗಿದೆ ಎಂಬುದರ ಪ್ರಮಾಣವಾಗಿದೆ. ಒಂದು ಕೋಟಿಗೂ ಹೆಚ್ಚು ಜನ ಅನಿಲ ಸಬ್ಸಿಡಿಯ ಉಪಯೋಗ ಪಡೆಯಲು ನಿರಾಕರಿಸುತ್ತಿದ್ದಾರೆಂದರೆ  ಇದು ಜನಶಕ್ತಿಯ ಉದಾಹರಣೆ. ಆದುದರಿಂದ ಜನಭಾವನೆಯನ್ನು ಗೌರವಿಸಬೇಕಾದ ಅವಶ್ಯಕತೆ ಇದೆ. ಹಾಗು ಜನರ ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡು ದೇಶಹಿತಕ್ಕಾಗಿ ನಿರ್ಣಯ ತೆಗೆದುಕೊಳ್ಳಬೇಕಾಗಿದೆ ಹಾಗು ಅದನ್ನು ನಿಗದಿತ ಸಮಯಕ್ಕೆ ಮೊದಲು ಪೂರ್ಣ ಮಾಡಬೇಕಾಗಿದೆ.
ಸರ್ಕಾರ ಜನಧನ್ ಯೋಜನೆ ಪ್ರಾರಂಭ ಮಾಡುವ ಸಮಯದಲ್ಲಿ ದೇಶದ ಜಡಜನರನ್ನೂ ಬ್ಯಾಂಕಿಂಗ್ ವ್ಯವಸ್ಥೆಯಡಿ ಸೇರಿಸುವುದಾಗಿ ತಿಳಿಸಿತ್ತು. ಈ ಯೋಜನೆಯಡಿ ಇಲ್ಲಿಯವರೆಗೆ 27 ಕೋಟಿ ಬಡಜನರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ.
 
ಇದೇ ರೀತಿ ಸರ್ಕಾರ ಮುಂಬರುವ ಮೂರು ವರ್ಷಗಳಲ್ಲಿ 5  ಕೋಟಿ ಬಡಜನರಿಗೆ ಅನಿಲ ಸಂಪರ್ಕ ನೀಡುವ ಗುರಿ ಹೊಂದಿದೆ. ಕೇವಲ ಹತ್ತು ತಿಂಗಳುಗಳಲ್ಲಿ ಸುಮಾರು ಎರಡು ಕೋಟಿ ಬಡವರಿಗೆ ಅನಿಲ ಸಂಪರ್ಕ ನೀಡಲಾಗಿದೆ.
ಸ್ವಾತಂತ್ರ ಬಂದು 70 ವರ್ಷಗಳಾದರೂ ವಿದ್ಯುತ್ ಸಂಪರ್ಕ ಪಡೆಯದ 18 ಸಾವಿರ ಹಳ್ಳಿಗಳಿಗೆ ಕೇವಲ 1000 ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಸರ್ಕಾರ ಘೋಷಿಸಿತ್ತು. ಕೇವಲ ೬೫೦ ದಿನಗಳಲ್ಲೇ ಸುಮಾರು 12 ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
 
ಎಲ್ಲಿ ಕಾನೂನು ನಿಯಮಗಳನ್ನು ಬದಲಿಸುವ ಅವಶ್ಯಕತೆ ಇತ್ತೋ ಅಲ್ಲಿ ನಿಯಮಗಳನ್ನು ಬದಲಿಸಲಾಗಿದೆ, ಯಾವ ಕಾನೂನುಗಳನ್ನು ಅಂತ್ಯಗೊಳಿಸುವ ಅವಶ್ಯಕತೆ ಇತ್ತೊ, ಅಂತಹ ಕಾನೂನು ನಿಯಮಗಳನ್ನು ಅಂತ್ಯ ಮಾಡಲಾಗಿದೆ. ಇಲ್ಲಿಯವರೆಗೆ 1100ಕ್ಕೂ ಅಧಿಕ ಹಳೆಯ ಕಾನೂನುಗಳನ್ನು ಅಂತ್ಯಗೊಳಿಸಲಾಗಿದೆ.
 
ಮಿತ್ರರೇ, ವರ್ಷಗಳಷ್ಟು ಕಾಲ ದೇಶದಲ್ಲಿ ಮುಂಗಡ ಪತ್ರವನ್ನು ಸಂಜೆ 5  ಗಂಟೆಗೆ ಪ್ರಸ್ತುತಪಡಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಬ್ರಿಟಿಷರು ಮಾಡಿದ್ದರು,ಯಾಕೆಂದರೆ ಭಾರತದಲ್ಲಿ ಸಂಜೆ 5 ಗಂಟೆ ಬ್ರಿಟನ್ ಸಮಯಾನುಸಾರ ಬೆಳಿಗ್ಗೆ 11.30 ಆಗಿರುತ್ತಿತ್ತು. ಅಟಲ್ ಜೀ ಅವರು ಇದರಲ್ಲಿ ಬದಲಾವಣೆ ತಂದರು.
 
ಈ ವರ್ಷ ಮುಂಗಡ ಪತ್ರವನ್ನು ಒಂದು ತಿಂಗಳು ಮೊದಲೇ ಮಂಡಿಸಿರುವುದನ್ನು ತಾವು ಗಮನಿಸಿದ್ದೀರಿ. ಅನುಷ್ಠಾನದ ದೃಷ್ಟಿಯಿಂದ ಈ ಬದಲಾವಣೆ ಅಗತ್ಯವಿತ್ತು. ಇದಕ್ಕೂ ಮೊದಲು ಫೆಬ್ರವರಿಯ ಅಂತ್ಯದಲ್ಲಿ ಬಜೆಟ್ ಮಂಡನೆಯಾಗುತ್ತಿತ್ತು. ಹಾಗೂ ಸರ್ಕಾರದ ವಿಭಾಗಗಳಿಗೆ ಹಣಕಾಸು ತಲುಪುವಲ್ಲಿ ತಿಂಗಳುಗಳ ಸಮಯ ಹಿಡಿಯುತ್ತಿತ್ತು. ಇದರ ನಂತರ ಮುಂಗಾರು ಮಳೆಯ ಕಾರಣ ಕೆಲಸ ಕಾರ್ಯಗಳಲ್ಲಿ ಮತ್ತೂ ಹೆಚ್ಚು ಸಮಯ ಹಿಡಿಯುತ್ತಿತ್ತು. ಈಗ ಪ್ರತಿಯೊಂದು ವಿಭಾಗಗಳಿಗೆ ಅದರ ಯೋಜನೆಗಳಿಗೆ ಮಂಜೂರಾದ ಹಣ ನಿಗದಿತ ಸಮಯಕ್ಕೆ ತಲುಪುತ್ತದೆ.
 
ಇದೇ ರೀತಿ ಮುಂಗಡಪತ್ರದಲ್ಲಿ ಯೋಜನೆ ಮತ್ತು ಯೋಜನೇತರ ಎಂಬ ಕೃತಕ ವಿಭಜನೆಯಿತ್ತು. ಕೇವಲ ಪ್ರಚಾರಕ್ಕಾಗಿ ಹೊಸ ಹೊಸ ವಿಚಾರಗಳಿಗೆ ಒತ್ತು ನೀಡಲಾಗುತ್ತಿತ್ತು, ಇದು ಮೊದಲಿನಿಂದಲೂ ನಡೆದು ಬಂದಿದ್ದು ಇದನ್ನು ನಿರ್ಲಕ್ಷಿಸಲಾಗುತ್ತಿತ್ತು. ಈ ಕಾರಣಕ್ಕಾಗಿ ಕೆಳಹಂತದಲ್ಲಿ ಬಹಳ ಏರುಪೇರುಗಳಾಗುತ್ತಿತ್ತು. ಈ ಕೃತಕ ವಿಭಜನೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ನಾವು ಅತಿ ಹೆಚ್ಚಿನ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ.
ಈ ಬಾರಿಯ ಸಾಮಾನ್ಯ ಮುಂಗಡಪತ್ರದ ಜೊತೆಗೆ ರೈಲ್ವೆ ಮುಂಗಡ ಪತ್ರವನ್ನು ವಿಲೀನಗೊಳಿಸಲಾಗಿದೆ. ಪ್ರತ್ಯೇಕ ರೈಲ್ವೆ ಮುಂಗಡ ಪತ್ರ ಮಂಡನೆ ಕೂಡ ಆಂಗ್ಲರ ಕೊಡುಗೆಯಾಗಿತ್ತು. ಈಗ ಸಾರಿಗೆ ವ್ಯವಸ್ಥೆಯಲ್ಲಿ ಬಹಳ ಬದಲಾವಣೆಗಳಾಗಿವೆ. ರೈಲ್ವೆ, ರಸ್ತೆ, ವಿಮಾನ ಸಾರಿಗೆ ವ್ಯವಸ್ಥೆಯ ಜತೆ ಜತೆಗೆ ಜಲ ಸಾರಿಗೆ ವ್ಯವಸ್ಥೆಯಿದೆ. ಇವೆಲ್ಲವುಗಳ ಬಗ್ಗೆ ಸಂಯೋಜಿತ ರೀತಿಯಲ್ಲಿ ಚಿಂತಿಸುವ ಅಗತ್ಯವಿದೆ. ಸರ್ಕಾರದ ಈ ನಿರ್ಧಾರ ಸಾರಿಗೆ ವಲಯದಲ್ಲಿ ತಾಂತ್ರಿಕ ಕ್ರಾಂತಿಗೆ ಆಧಾರವಾಗಲಿದೆ.
 
ಕಳೆದ ಎರಡೂವರೆ ವರ್ಷಗಳಲ್ಲಿ ತಾವುಗಳು ಸರ್ಕಾರದ ನೀತಿಗಳು, ನಿಯಮಗಳು ಮತ್ತು ಪ್ರಾಮಾಣಿಕತೆಯನ್ನು ನೋಡಿದ್ದೀರಿ. ಈ ವಿಧಾನ ನವ ಭಾರತವನ್ನು 21ನೇ ಶತಮಾನದಲ್ಲಿ ಪ್ರಗತಿಯ ಉತ್ತುಂಗ ಮಟ್ಟಕ್ಕೆ ಕೊಂಡೊಯ್ಯುವುದು. ನವಭಾರತದ ಅಡಿಪಾಯವನ್ನು ಇದು ಮತ್ತಷ್ಟು ಗಟ್ಟಿಗೊಳಿಸುವುದು.  ನಮ್ಮಲ್ಲಿನ ಹೆಚ್ಚಿನ ಸರ್ಕಾರಗಳು ಕೇವಲ ದೀಪ ಹಚ್ಚುವುದು, ಟೇಪ್ ಕತ್ತರಿಸುವುದನ್ನೇ ದೊಡ್ಡ ಕಾರ್ಯವೆಂದು ತಿಳಿದುಕೊಂಡಿವೆ. ಯಾರೂ ಇದನ್ನು ತಪ್ಪೆಂದು ಕೂಡಾ ತಿಳಿದುಕೊಂಡಿಲ್ಲ. ನಮ್ಮ ದೇಶದಲ್ಲಿ ಸುಮಾರು 1500ಕ್ಕೂ ಹೆಚ್ಚು ಯೋಜನೆಗಳು ಘೋಷಣೆಯಾಗಿ ಕೇವಲ ದಾಖಲೆಗಳಲ್ಲೆ ಹುದುಗಿಹೋಗಿವೆ ಎಂಬುದನ್ನು ತಿಳಿದರೆ ತಮಗೆ ಆಶ್ಚರ್ಯವಾಗಬಹುದು.
ಇದೇ ರೀತಿ ಅನೇಕ ದೊಡ್ಡ ದೊಡ್ಡ ಯೋಜನೆಗಳು ವರ್ಷಗಳಿಂದ ಸ್ಥಗಿತಗೊಂಡಿವೆ. ಈಗ ಯೋಜನೆಗಳ ಸರಿಯಾದ ಉಸ್ತುವಾರಿ  ಗಾಗಿ ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. “ಪ್ರಗತಿ” ಅಂದರೆ ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನ.
 
ಪ್ರಧಾನಮಂತ್ರಿ ಕಚೇರಿಯಲ್ಲಿ ನಾನು ಕೂರುತ್ತೇನೆ, ಎಲ್ಲ ವಿಭಾಗಗಳ ಕಾರ್ಯದರ್ಶಿಗಳು ಮತ್ತು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ವಿಡಿಯೋ ಸಂವಾದದ ಮೂಲಕ ನನ್ನ ಜೊತೆಗೂಡುತ್ತಾರೆ. ಸ್ಥಗಿತಗೊಂಡಿರುವ ಯೋಜನೆಗಳ ಬಗ್ಗೆ ಒಂದು ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡಿರಲಾಗುತ್ತದೆ. ಇದುವರೆಗೆ ಎಂಟು ಲಕ್ಷ ಕೋಟಿಗೂ ಅಧಿಕ ರೂಪಾಯಿಗಳ ಯೋಜನೆ ಬಗ್ಗೆ ಪ್ರಗತಿ ಸಭೆಯಲ್ಲಿ ಚರ್ಚೆಗಳಾಗಿವೆ. ದೇಶಕ್ಕೆ ಬಹಳ ಮಹತ್ವಪೂರ್ಣವಾದ, ಈವರೆಗೂ ತಡೆಹಿಡಿಯಲಾಗಿದ್ದ 150 ಕ್ಕೂ ಅಧಿಕ ಯೋಜನೆಗಳು ಈಗ ವೇಗವನ್ನು ಪಡೆದುಕೊಂಡಿವೆ.   ದೇಶದ ಮುಂದಿನ ತಲೆಮಾರಿನ ಮೂಲಸೌಕರ್ಯದ ಬಗ್ಗೆ ಸರ್ಕಾರ ಗಮನಹರಿಸಿದೆ. ಕಳೆದ ಮೂರು ಮುಂಗಡಪತ್ರಗಳಲ್ಲಿ ರೈಲ್ವೆ ಮತ್ತು ರಸ್ತೆ ಸಾರಿಗೆ ವಲಯಕ್ಕೆ ಹೆಚ್ಚಿನ ಹಣ ಮಂಜೂರು ಮಾಡಲಾಗಿದೆ. ಅವುಗಳ ಕಾರ್ಯಕ್ಷಮತೆ ಹೆಚ್ಚಿಸುವ ದಿಶೆಯಲ್ಲಿ ಈ ವಲಯಗಳ ಕಾರ್ಯಪ್ರಗತಿ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಇದೇ ಕಾರಣದಿಂದ ಕನಿಷ್ಠ ವೇಗದಲ್ಲಿದ್ದ ರೈಲು ಮತ್ತು ರಸ್ತೆ ಸಾರಿಗೆ ವಲಯಗಳ ಕಾರ್ಯಚಟುವಟಿಕೆಯಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿದೆ.  ಇದಕ್ಕೂ ಮೊದಲು ರೈಲ್ವೆಯ ವಿದ್ಯುದೀಕರಣ ಕಾರ್ಯ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿತ್ತು. ಸರ್ಕಾರ ರೈಲ್ವೆಯ ಮಾರ್ಗ ವಿದ್ಯುದೀಕರಣ ಕಾರ್ಯಕ್ಕೆ ಹೆಚ್ಚಿನ ವೇಗ ನೀಡಿದೆ. ಇದರಿಂದ ರೈಲು ಚಾಲನೆಯಲ್ಲಿನ ವೆಚ್ಚ ಕಡಿಮೆಯಾಗಿದೆ ಹಾಗು ದೇಶದಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ತಿನ ಉಪಯೋಗವಾಗುತ್ತಿದೆ.
 
ಇದೇ ರೀತಿ ವಿದ್ಯುತ್ ಕಾಯ್ದೆಯನ್ವಯ ರೈಲ್ವೆಗೆ ಮುಕ್ತ ಪ್ರವೇಶದ ಸೌಲಭ್ಯ ನೀಡಲಾಗಿದೆ. ಈ ಕಾರಣದಿಂದ ರೈಲ್ವೆ ವಿಭಾಗ ಖರೀದಿಸುತ್ತಿದ್ದ ವಿದ್ಯುತ್ ವೆಚ್ಚದಲ್ಲೂ ಕೂಡಾ ಉಳಿತಾಯ ಮಾಡಲಾಗಿದೆ. ಈ ಮೊದಲು ವಿದ್ಯುತ್ ವಿತರಣಾ ಕಂಪನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಕಾರಣ ರೈಲ್ವೆಗೆ ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ ಅವರಿಂದ ವಿದ್ಯುತ್ ಖರೀದಿ ಮಾಡಬೇಕಾಗುತ್ತಿತ್ತು. ಈಗ ರೈಲ್ವೆ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಖರೀದಿ ಮಾಡುತ್ತಿದೆ. ಈ ಮೊದಲು ವಿದ್ಯುತ್ ಸ್ಥಾವರ ಮತ್ತು ಕಲ್ಲಿದ್ದಲಿನ ಸಂಪರ್ಕ ವಿಭಿನ್ನವಾಗಿತ್ತು. ವಿದ್ಯುತ್ ಸ್ಥಾವರಗಳು ಉತ್ತರದಲ್ಲಿದ್ದರೆ ಕಲ್ಲಿದ್ದಲು ಮಧ್ಯಭಾರತದಿಂದ ದೊರಕುತ್ತಿತ್ತು  ಮತ್ತು ವಿದ್ಯುತ್ ಸ್ಥಾವರಗಳು ಉತ್ತರ ಅಥವಾ ಪೂರ್ವ ಭಾಗದಲ್ಲಿದ್ದರೆ ಕಲ್ಲಿದ್ದಲು ಪಶ್ಚಿಮ ಭಾರತದಿಂದ ದೊರಕುತ್ತಿತ್ತು. ಈ ಕಾರಣದಿಂದ ವಿದ್ಯುತ್ ಸ್ಧಾವರಗಳಿಗೆ ಕಲ್ಲಿದ್ದಲು ಸಾಗಣೆಗಾಗಿ ಹೆಚ್ಚಿನ ವೆಚ್ಚ ತಗಲುತ್ತಿತ್ತು ಹಾಗೂ ವಿದ್ಯುತ್ ದರ ಹೆಚ್ಚಾಗುತ್ತಿತ್ತು. ನಾವು ಕಲ್ಲಿದ್ದಲು ಸಂಪರ್ಕವನ್ನು ತರ್ಕಬದ್ಧಗೊಳಿಸಿದೆವು, ಇದರಿಂದ ಸಾಗಣೆ ವೆಚ್ಚ ಮತ್ತು ಸಮಯದ ಉಳಿತಾಯವಾಯಿತು ಹಾಗೂ ವಿದ್ಯುತ್ ದರ ಕಡಿಮೆಯಾಯಿತು. ಈ ಎರಡೂ ಉದಾಹರಣೆ   ಗಳಿಂದ ಸರ್ಕಾರ ಪ್ರತಿಯೊಂದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂಬುದು ಮನದಟ್ಟಾಗುತ್ತದೆ.
 
ರೈಲ್ವೆ ಹಳಿಗಳ ಕೆಳಗೆ ರಸ್ತೆ ಸಾಗಾಟಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ರೈಲ್ವೆ ವಿಭಾಗದಿಂದ ಹಲವು ತಿಂಗಳುಗಳ ಕಾಲ ಅನುಮತಿ ದೊರೆಯುತ್ತಿರಲಿಲ್ಲ. ತಿಂಗಳುಗಳ ಕಾಲ ರೈಲ್ವೆ ಮೇಲ್ಸೇತುವೆ ಯಾವ ವಿನ್ಯಾಸದಲ್ಲಿರಬೇಕು ಎಂಬ ವಿಷಯ ಕುರಿತು ಮಾತುಕತೆಗಳು ನಡೆಯುತ್ತಿದ್ದವು. ಈ ಸರ್ಕಾರ ಬಂದ ನಂತರ ರೈಲ್ವೆ ಮೇಲ್ಸೇತುವೆಗಾಗಿ ಏಕರೂಪದ ವಿನ್ಯಾಸ ಸಿದ್ಧಪಡಿಸಲಾಯಿತು ಹಾಗೂ ಈ ವಿನ್ಯಾಸಕ್ಕಾಗಿ ಪ್ರಸ್ತಾವ ಸಲ್ಲಿಸಲಾಗುತ್ತಿತ್ತು, ತಕ್ಷಣದಲ್ಲಿ ಇದಕ್ಕೆ ನಿರಾಪೇಕ್ಷಣಾ ಪತ್ರ ದೊರೆಯುತ್ತಿತ್ತು.  ವಿದ್ಯುತ್ ಲಭ್ಯತೆ ದೇಶದ ಆರ್ಥಿಕ ಅಭಿವೃದ್ಧಿಯ ಮೂಲವಾಗಿದೆ. ನಮ್ಮ ಸರ್ಕಾರ ಬಂದ ನಂತರ ವಿದ್ಯುತ್ ವಲಯ ಕುರಿತು ಸಮಗ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಹಾಗು ಇದರಲ್ಲಿ ಯಶಸ್ವಿಯಾಗಿದ್ದೇವೆ. 46 ಸಾವಿರ ಮೆಗಾವ್ಯಾಟ್ ಉತ್ಪಾದನಾ ಕ್ಷಮತೆಯನ್ನು ಒಂದು ಮಾಡಿದ್ದೇವೆ. ಉತ್ಪಾದನಾ ಕ್ಷಮತೆ ಶೇಕಡಾ 25 ರಷ್ಟು ಅಧಿಕವಾಗಿದೆ. ಕಲ್ಲಿದ್ದಲನ್ನು ಪಾರದರ್ಶಕವಾಗಿ ಹರಾಜು ಹಾಕುವುದು ಹಾಗು ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಕಲ್ಲಿದ್ದಲು ಒದಗಿಸುವುದು ನಮ್ಮ ಆದ್ಯತೆಯಾಗಿದೆ.
ಇಂದು ಯಾವುದೇ ಉಷ್ಣ ವಿದ್ಯುತ್ ಘಟಕ ಕಲ್ಲಿದ್ದಲಿನ ಕಾರಣದಿಂದ ತೊಂದರೆ ಅನುಭವಿಸುತ್ತಿರುವುದು ಕಂಡು ಬರುವುದಿಲ್ಲ. ತೊಂದರೆ ಎಂದರೆ, ಕಲ್ಲಿದ್ದಲಿನ ಉಪಲಬ್ಧತೆ ಏಳು ದಿನಗಳಿಗಿಂತ ಕಡಿಮೆಯಾಗುವುದು. ಒಂದು ಕಾಲದಲ್ಲಿ, ಉಷ್ಣ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲಿನ ಕೊರತೆಯಿಂದ ವಿದ್ಯುತ್ ಉತ್ಪಾದನೆ ಸಂಕಷ್ಟ ಪರಿಸ್ಥಿತಿಯಲ್ಲಿದೆ ಎಂಬ ದೊಡ್ಡ ದೊಡ್ಡ ಬ್ರೇಕಿಂಗ್ ನ್ಯೂಸ್  ಗಳು ಮಾಧ್ಯಮಗಳಲ್ಲಿ ಕಂಡುಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಬ್ರೇಕಿಂಗ್ ನ್ಯೂಸ್ ಯಾವಾಗ ಪ್ರಸಾರವಾಗಿತ್ತು? ತಮಗೆ ನೆನಪಿಲ್ಲದಿರಬಹುದು.ಈ ಬ್ರೇಕಿಂಗ್ ನ್ಯೂಸ್ ಈಗ ತಮ್ಮ ಸಂಗ್ರಹಾಗಾರದಲ್ಲಿರಬಹುದು.
 
ಮಿತ್ರರೇ, ಸರ್ಕಾರದ ಮೊದಲೆರಡು ವರ್ಷಗಳಲ್ಲಿ 50 ಸಾವಿರ ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಲೈನ್ ಗಳನ್ನು ಹಾಕಲಾಯಿತು. 2013-14 ರಲ್ಲಿ ಇದು 16 ಸಾವಿರ ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಲೈನ್ ಗಳಾಗಿತ್ತು. 
ಸರ್ಕಾರಿ ವಿದ್ಯುತ್ ಪ್ರಸರಣಾ ಕಂಪನಿಗಳಿಗೆ ನಮ್ಮ ಉದಯ ಯೋಜನೆಯಡಿ ಹೊಸ ಜೀವನ ಲಭಿಸಿದೆ. ಈ ಎಲ್ಲಾ ಕಾರಣಗಳಿಂದ ವಿದ್ಯುತ್ ಲಭ್ಯತೆ ಹೆಚ್ಚಾಗಿದ್ದು ದರ ಕೂಡಾ ಕಡಿಮೆಯಾಗಿದೆ.
 
ಇಂದು ವಿದ್ಯುತ್ ಪ್ರವಾಹ್  ಎಂಬ ಹೆಸರಿನ ಆಪ್ ನಿಂದ ಎಷ್ಟು ವಿದ್ಯುತ್ ಎಷ್ಟು ವೆಚ್ಚದಲ್ಲಿ ಲಭ್ಯವಿದೆ ಎಂಬುದನ್ನು ನೋಡಬಹುದಾಗಿದೆ. ಸರ್ಕಾರ ಸ್ವಚ್ಚ ಇಂಧನದ ಬಗೆಗೂ ಹೆಚ್ಚಿನ ಒತ್ತು ನೀಡಿದೆ. 175 ಗೀಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿ ಇದೆ. ಇದರಲ್ಲಿ ಇಲ್ಲಿಯವರೆಗೆ 50 ಗೀಗಾವ್ಯಾಟ್ ಅಂದರೆ 50 ಸಾವಿರ ಮೆಗಾವ್ಯಾಟ್ ಕ್ಷಮತೆಯನ್ನು ಸಾಧಿಸಲಾಗಿದೆ.
 
ಭಾರತ ಜಾಗತಿಕ ಗಾಳಿ ವಿದ್ಯುತ್ ಸ್ಥಾಪನಾ ಸಾಮರ್ಥ್ಯದಲ್ಲಿ  ವಿಶ್ವದಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವುದರ ಜತೆ ಜತೆಗೆ ವಿದ್ಯುತ್ ಬಳಕೆಯ ಕಡೆಗೂ ಸರ್ಕಾರ ಒತ್ತು ನೀಡಿದೆ. ದೇಶದಲ್ಲಿ ಇದುವರೆಗೆ ಸುಮಾರು  22 ಕೋಟಿ ಎಲ್ ಇ ಡಿ ಬಲ್ಬ್ ವಿತರಣೆ ಮಾಡಲಾಗಿದೆ. ಇದರಿಂದ ವಿದ್ಯುತ್ ಬಳಕೆ ಕಡಿಮೆಯಾಗಿದೆ, ಮಾಲಿನ್ಯ ನಿಯಂತ್ರಣವಾಗಿದೆ ಹಾಗು ಜನಸಾಮಾನ್ಯರಿಗೆ ಪ್ರತಿ ವರ್ಷ 11 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ.
 
ಸ್ನೇಹಿತರೆ, ದೇಶಾದ್ಯಂತ ಎರಡೂವರೆ ಲಕ್ಷ ಪಂಚಾಯತಿಗಳನ್ನು ಆಪ್ಟಿಕಲ್ ಫೈಬರ್ ಮೂಲಕ ಜೋಡಣೆ ಮಾಡಲು 2011 ರಲ್ಲಿ ಕಾರ್ಯ ಪ್ರಾರಂಭವಾಗಿತ್ತು. ಆದರೆ 2011 ರಿಂದ 2014ರ ಮಧ್ಯದವರೆಗೆ ಕೇವಲ 59 ಗ್ರಾಮ ಪಂಚಾಯತಿಗಳಿಗಷ್ಟೇ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲಾಗಿದೆ. ಈ ವೇಗದಲ್ಲಿ ಮುಂದುವರೆದರೆ ಎರಡೂವರೆ ಲಕ್ಷ ಪಂಚಾಯತಿಗಳು ಯಾವಾಗ ಜೋಡಣೆಯಾಗುತ್ತವೆ ಎಂಬುದನ್ನು ತಾವು ಊಹಿಸಬಹುದು. ಸರ್ಕಾರ ಈ ಪ್ರಕ್ರಿಯೆಯಲ್ಲಿ ಆವಶ್ಯಕ ಬದಲಾವಣೆಗಳನ್ನು ತಂದಿದೆ. ಸಮಸ್ಯೆಗಳನ್ನು ದೂರಮಾಡುವ ತಾಂತ್ರಿಕತೆಯನ್ನು ಸಿದ್ಧಪಡಿಸಲಾಯಿತು.
ಕಳೆದ ಎರಡೂವರೆ ವರ್ಷಗಳಲ್ಲಿ 76 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳನ್ನು ಆಪ್ಟಿಕಲ್ ಫೈಬರ್ ನೊಂದಿಗೆ ಜೋಡಿಸಲಾಗಿದೆ.
 
ಜತೆಗೆ ಗ್ರಾಮೀಣ ಪ್ರದೇಶದ ಜನರಿಗೆ ಇಂಟರ್ನೆಟ್ ಸೌಲಭ್ಯ ಒದಗಿಸಲು ಎಲ್ಲಾ ಗ್ರಾಮ ಪಂಚಾಯತಿಗಳಿಗೂ ವೈ ಫೈ, ಹಾಟ್ ಸ್ಪಾಟ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಶಾಲೆಗಳು, ಪೋಲೀಸ್ ಸ್ಟೇಷನ್ ಮತ್ತು ಹಾಸ್ಪಿಟಲ್ ಗಳಿಗೂ ಈ ಉಪಯೋಗ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ.  ಅವೇ ಸಲಕರಣೆಗಳು, ಅವೇ ಸೌಕರ್ಯಗಳು, ಅವೇ ಸಂಪನ್ಮೂಲ ಆದರೆ ಕಾರ್ಯ ನಿರ್ವಹಿಸುವ ವಿಧಾನ ಬದಲಾಗಿದೆ, ವೇಗ ಹೆಚ್ಚುತ್ತಿದೆ. 2014ರಲ್ಲಿ ಒಂದು ಕಂಪನಿಯನ್ನು ಸಂಯೋಜಿಸಲು ಹದಿನೈದು ದಿನಗಳು ಬೇಕಾಗುತ್ತಿತ್ತು. ಈಗ ಕೇವಲ 24 ಘಂಟೆಗಳು ಸಾಕು.ಈ ಮೊದಲು ಆದಾಯ ತೆರಿಗೆ  ಮರುಪಾವತಿಯಾಗಲು ತಿಂಗಳುಗಳ ಕಾಲ ತಗುಲುತ್ತಿತ್ತು. ಈಗ ಕೆಲವೇ ವಾರಗಳಲ್ಲಿ ಮರುಪಾವತಿಯಾಗುತ್ತಿದೆ. ಈ ಮೊದಲು ಪಾಸ್ ಪೋರ್ಟ್ ಪಡೆಯಲು ಹಲವು ತಿಂಗಳುಗಳ ಕಾಲ ಬೇಕಾಗುತ್ತಿತ್ತು. ಈಗ ಕೇವಲ ಒಂದು ವಾರದಲ್ಲಿ ಪಾಸ್ ಪೋರ್ಟ್ ತಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಮಿತ್ರರೇ, ನಮಗೆ ತಂತ್ರಜ್ಞಾನ, ಒಳ್ಳೆ ಆಡಳಿತಕ್ಕಾಗಿ ಒಳ್ಳೆಯ ಬೆಂಬಲ ವ್ಯವಸ್ಥೆಯಿದ್ದು ಬಡವರ ಅಧಿಕಾರಕ್ಕಾಗಿ ಕೂಡಾ ವ್ಯವಸ್ಥೆ ಇದೆ.
ಸರ್ಕಾರ ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ.  ಇದಕ್ಕಾಗಿ ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ಸರ್ಕಾರ ರೈತರಿಗೆ ಬೆಂಬಲವಾಗಿ ನಿಂತಿದೆ. ರೈತರಿಗೆ ಉತ್ತಮ ಗುಣಮಟ್ಟದ ಬೀಜವನ್ನು ಪೂರೈಸಲಾಗುತ್ತಿದೆ. ಪ್ರತಿ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ.
 
ಪ್ರಧಾನಮಂತ್ರಿ ಕೃಷಿ ವಿಮಾ ಯೋಜನೆಯಡಿ  ರೈತರ ಬೆಳೆಯಲ್ಲಾಗುವ ಯಾವುದೇ ತೊಂದರೆ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ, ಇಂತಹ ಕೆಲವೊಂದು ಅನುಕೂಲಗಳು ಈ ಮೊದಲು ದೊರಕುತ್ತಿರಲಿಲ್ಲ. ಇದರ ಜತೆಜತೆಗೆ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ, ರಸಗೊಬ್ಬರದ ಅಭಾವ ಇಂದು ಹಳೆಯ ಮಾತಾಗಿದ್ದು, ಎಲ್ಲಿಯೂ ರಸಗೊಬ್ಬರದ ಅಭಾವ ಕಂಡುಬರುತ್ತಿಲ್ಲ.  ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ದರ ದೊರಕುವಂತಾಗಲು ಇ-ನ್ಯಾಮ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ದೇಶಾದ್ಯಂತ 580ಕ್ಕೂ ಅಧಿಕ ಮಾರುಕಟ್ಟೆಗಳನ್ನು ಆನ್ ಲೈನ್ ಮಾಡಲಾಗಿದೆ. ಶೇಖರಣೆ ಮತ್ತು ಪೂರೈಕೆಯ ಸರಪಳಿಯನ್ನು ಗಟ್ಟಿಗೊಳಿಸಲಾಗುತ್ತಿದೆ.
 
ಮಿತ್ರರೇ,
ಆರೋಗ್ಯ ಕ್ಷೇತ್ರದ ಎಲ್ಲಾ ಹಂತಗಳಲ್ಲಿ ಹೆಚ್ಚಿನ ಕಾರ್ಯ ನಿರ್ವಹಿಸಲಾಗುತ್ತಿದೆ. ಮಕ್ಕಳಿಗೆ  ರೋಗ ನಿರೋಧಕ ಚುಚ್ಚುಮದ್ದು, ಮಹಿಳೆಯರಿಗೆ ಆರೋಗ್ಯ ಸುರಕ್ಷಾ, ಆರೋಗ್ಯ ರಕ್ಷಣೆಗೆ ಕ್ರಮಗಳು, ಸ್ವಚ್ಚತೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ. 
ಇತ್ತೀಚೆಗಷ್ಟೆ ರಾಷ್ಟ್ರೀಯ ಆರೋಗ್ಯ ನೀತಿಗೆ ಮಂಜೂರಾತಿ ನೀಡಲಾಗಿದೆ.
ದೇಶದ ಪ್ರತಿಯೊಬ್ಬ ನಾಗರಿಕರಿಗೆ ಆರೋಗ್ಯ ರಕ್ಷಣೆ ವ್ಯವಸ್ಥೆ ತಲುಪುವಂತೆ ಮಾಡಲು ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ   ಒಟ್ಟು ದೇಶಿಯ ಉತ್ಪನ್ನದ ಶೇಕಡಾ ಎರಡೂವರೆಯಷ್ಟು ಆರೋಗ್ಯಕ್ಕಾಗಿ ವೆಚ್ಚ ಮಾಡುವುದು ಸರ್ಕಾರದ ಪ್ರಯತ್ನವಾಗಿದೆ. ಇಂದು ದೇಶದ ಶೇಕಡಾ 70 ಕ್ಕೂ ಹೆಚ್ಚು ಚಿಕಿತ್ಸಾ ಸಾಧನಗಳು ಮತ್ತು ಸಲಕರಣೆಗಳು ಹೊರದೇಶಗಳಿಂದ ಆಮದಾಗುತ್ತಿದೆ. ಇಂದು ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಪ್ರೋತ್ಸಾಹ ನೀಡಿ ಚಿಕಿತ್ಸಾ ಉಪಕರಣಗಳನ್ನು ಇಲ್ಲೇ ಉತ್ಪಾದನೆ ಮಾಡಿ, ಚಿಕಿತ್ಸಾ ವೆಚ್ಚ ಕಡಿಮೆ ಮಾಡುವುದು ಸರ್ಕಾರದ ಪ್ರಯತ್ನವಾಗಿದೆ.
 
ಮಿತ್ರರೇ,ಸಾಮಾಜಿಕ ಮೂಲಸೌಕರ್ಯಕ್ಕೆ ಹೆಚ್ಚಿನ ಬಲ ನೀಡುವುದು ಸರ್ಕಾರದ ಉದ್ದೇಶವಾಗಿದೆ. ನಮ್ಮ ಸರ್ಕಾರ ದಿವ್ಯಾಂಗರಿಗಾಗಿ ಸೇವಾಭಾವದಿಂದ ಕಾರ್ಯ ನಿರ್ವಹಿಸುತ್ತಿದೆ. ದೇಶಾದ್ಯಂತ ಸುಮಾರು 5 ಸಾವಿರ ಶಿಬಿರಗಳನ್ನು ಆಯೋಜನೆ ಮಾಡಿ ಆರು ಲಕ್ಷಕ್ಕೂ ಅಧಿಕ ದಿವ್ಯಾಂಗರಿಗೆ ಆವಶ್ಯಕವಾದ ಸಹಾಯಕ ಉಪಕರಣ ನೀಡಲಾಗುತ್ತಿದೆ. ಈ ಶಿಬಿರಗಳು ಗಿನ್ನಿಸ್   ಬುಕ್ ನಲ್ಲಿ ಕೂಡಾ ದಾಖಲಾಗಿವೆ.
 
ಚಿಕಿತ್ಸಾಲಯಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಮೇಲೆರಲು ಅಥವಾ ಕೆಳಗಿಳಿಯಲು ದಿವ್ಯಾಂಗ ಜನರಿಗೆ ಆಗುತ್ತಿದ್ದ ತೊಂದರೆಗಳನ್ನು ಗಮನಿಸಿ “ಸುಗಮ್ಯ ಭಾರತ ಅಭಿಯಾನ”ವನ್ನು ನಡೆಸಲಾಗುತ್ತಿದೆ. ಸರ್ಕಾರಿ ನೌಕರಿಗಳಲ್ಲಿ ಅವರಿಗಾಗಿ ಶೇಕಡಾ 3 ರಷ್ಟಿದ್ದ ಮೀಸಲಾತಿಯನ್ನು ಶೇಕಡಾ 4 ಕ್ಕೆ ಹೆಚ್ಚು ಮಾಡಲಾಗಿದೆ. ದಿವ್ಯಾಂಗರ  ಹಕ್ಕುಗಳನ್ನು ಖಚಿತಪಡಿಸಲು ಕಾನೂನಿನಲ್ಲಿ ಕೂಡಾ ಕೆಲವು ಬದಲಾವಣೆಗಳನ್ನು ತರಲಾಗಿದೆ. ದೇಶಾದ್ಯಂತ ದಿವ್ಯಾಂಗರಿಗಾಗಿ ಸಾಮಾನ್ಯ ಸಂಕೇತ ಭಾಷೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಮಿತ್ರರೇ, 125 ಕೋಟಿ ಭಾರತೀಯರ ನಮ್ಮ ದೇಶ ಸಂಪನ್ಮೂಲಗಳಿಂದ ಸದ್ಭರಿತವಾಗಿದೆ. ಸಾಮರ್ಥ್ಯದ ಕೊರತೆ ಇಲ್ಲ.
 
2022 ರಲ್ಲಿ ದೇಶ ಸ್ವಾತಂತ್ರ್ಯ  ಗಳಿಸಿ 75 ವರ್ಷಗಳಾಗಲಿವೆ. ನಾವೆಲ್ಲರೂ ಒಂದೂಗೂಡಿ ಮಹಾತ್ಮಾಗಾಂಧಿ, ಸರದಾರ್ ಪಟೇಲ್, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು  ಸ್ವಾತಂತ್ರ್ಯ ಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ಅಸಂಖ್ಯಾತ ವೀರರ ಕನಸುಗಳನ್ನು ನನಸು ಮಾಡಬೇಕಿದೆ. ನಾವೆಲ್ಲರೂ, ಪ್ರತಿಯೊಂದು ಕುಟುಂಬ, ಸಂಘಟನೆ, ಘಟಕಗಳೂ ಮುಂಬರುವ ಐದು ವರ್ಷಗಳಲ್ಲಿ ಸಂಪೂರ್ಣ ದೇಶ ಒಗ್ಗಟ್ಟಾಗಿ ನವ ಭಾರತದ ಕನಸನ್ನು ನನಸು ಮಾಡುವ ಸಂಕಲ್ಪ ಮಾಡಬೇಕಿದೆ.
ಕನಸು ತಮ್ಮದು, ಸಂಕಲ್ಪ, ನಿರ್ಣಯ ಮತ್ತು ಸಮಯವೂ ತಮ್ಮದು, ಸಾಧನೆಯೂ ತಮ್ಮದು, ಸಮರ್ಪಣೆಯೂ ತಮ್ಮದು..
ನವ ಭಾರತ, ಕನಸಿನಿಂದ ವಾಸ್ತವದೆಡೆಗೆ ಮುನ್ನುಗ್ಗುತ್ತಿರುವ ಭಾರತ
ನವ ಭಾರತ, ಎಲ್ಲಿ ಅದೃಷ್ಟವಿಲ್ಲವೋ, ಅವಕಾಶವಿದೆ
ನವ ಭಾರತದ ಮೂಲ ಮಂತ್ರ ಎಲ್ಲರಿಗೂ ಅವಕಾಶ, ಎಲ್ಲರಿಗೂ ಪ್ರೋತ್ಸಾಹ..
ನವ ಭಾರತ, ಹೊಸ  ಸಾಧ್ಯತೆಗಳು, ಹೊಸ ಅವಕಾಶಗಳ ಭಾರತ.
ನವ ಭಾರತ, ಹಸಿರಿನಿಂದ ಕಂಗೊಳಿಸುವ ಹೊಲ ಗದ್ದೆಗಳು, ಮುಗುಳ್ನಗುವ ರೈತರ ಭಾರತ.
ನವ ಭಾರತ, ನಮ್ಮ ನಿಮ್ಮೆಲ್ಲರ ಸ್ವಾಭಿಮಾನದ ಭಾರತ.
***