Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಟರ್‌ನ್ಯಾಶನಲ್ ಮ್ಯೂಸಿಯಂ ಎಕ್ಸ್‌ಪೋ-2023 ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

ಇಂಟರ್‌ನ್ಯಾಶನಲ್ ಮ್ಯೂಸಿಯಂ ಎಕ್ಸ್‌ಪೋ-2023 ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ನನ್ನ ಸಂಪುಟ ಸಹೋದ್ಯೋಗಿಗಳಾದ ಜಿ. ಕಿಶನ್ ರೆಡ್ಡಿ ಜಿ, ಮೀನಾಕ್ಷಿ ಲೇಖಿ ಜಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಜಿ, ಲೌವ್ರೆ ಮ್ಯೂಸಿಯಂ ನಿರ್ದೇಶಕ ಮ್ಯಾನುಯೆಲ್ ರಬಾಟೆ ಜಿ, ವಿಶ್ವದ ವಿವಿಧ ದೇಶಗಳ ಅತಿಥಿಗಳು, ಗಣ್ಯರು, ಮಹಿಳೆಯರು ಮತ್ತು ಮಹನಿಯರೆ! ನಾನು ನಿಮಗೆಲ್ಲರಿಗೂ ಅಂತಾರಾಷ್ಟ್ರೀಯ ಮ್ಯೂಸಿಯಂ ದಿನದ ಶುಭಾಶಯಗಳನ್ನು ಕೋರುತ್ತೇನೆ. ಮ್ಯೂಸಿಯಂ ಲೋಕದ ದಿಗ್ಗಜರು ಇಂದು ಇಲ್ಲಿ ಸೇರಿದ್ದಾರೆ. ಇಂದಿನ ಸಂದರ್ಭವೂ ವಿಶೇಷವಾಗಿದೆ, ಏಕೆಂದರೆ ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿದೆ.

ಅಂತಾರಾಷ್ಟ್ರೀಯ ಮ್ಯೂಸಿಯಂ ಎಕ್ಸ್‌ಪೋದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಇತಿಹಾಸದ ವಿವಿಧ ಅಧ್ಯಾಯಗಳು ಜೀವಂತವಾಗುತ್ತಿವೆ. ನಾವು ಮ್ಯೂಸಿಯಂಗೆ ಭೇಟಿ ನೀಡಿದಾಗ, ನಮಗೆ ಹಿಂದಿನ ಆ ಕಾಲದ ಪರಿಚಯವಾಗುತ್ತಿರುವಂತೆ ಭಾಸವಾಗುತ್ತದೆ. ವಸ್ತುಸಂಗ್ರಹಾಲಯದಲ್ಲಿ ಕಂಡುಬರುವ ಸಂಗತಿಗಳು ಸತ್ಯ ಮತ್ತು ಪುರಾವೆಗಳನ್ನು ಆಧರಿಸಿವೆ. ವಸ್ತುಸಂಗ್ರಹಾಲಯದಲ್ಲಿ ಒಂದೆಡೆ, ನಾವು ಹಿಂದಿನಿಂದ ಸ್ಫೂರ್ತಿ ಪಡೆಯುತ್ತೇವೆ. ಮತ್ತೊಂದೆಡೆ, ನಾವು ಭವಿಷ್ಯದ ಕಡೆಗೆ ನಮ್ಮ ಕರ್ತವ್ಯಗಳನ್ನು ಸಹ ನಿರ್ವಹಿಸುತ್ತೇವೆ.

ನಿಮ್ಮ ಥೀಮ್ ‘ಸುಸ್ಥಿರತೆ ಮತ್ತು ಯೋಗಕ್ಷೇಮ’ – ಇಂದಿನ ಪ್ರಪಂಚದ ಆದ್ಯತೆಗಳನ್ನು ಎತ್ತಿ ತೋರಿಸುತ್ತದೆ. ಜತೆಗೆ, ಈ ಕಾರ್ಯಕ್ರಮವ ಹೆಚ್ಚು ಪ್ರಸ್ತುತವಾಗಿಸುತ್ತದೆ. ನಿಮ್ಮ ಪ್ರಯತ್ನಗಳು ವಸ್ತುಸಂಗ್ರಹಾಲಯಗಳ ಬಗ್ಗೆ ಯುವ ಪೀಳಿಗೆಯ ಆಸಕ್ತಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತದೆ, ನಮ್ಮ ಪರಂಪರೆಯನ್ನು ಅವರಿಗೆ ಪರಿಚಯಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಈ ಪ್ರಯತ್ನಗಳಿಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ನಾನು ಇಲ್ಲಿಗೆ ಬರುವ ಮೊದಲು ಮ್ಯೂಸಿಯಂನಲ್ಲಿ ಕೆಲವು ಕ್ಷಣಗಳನ್ನು ಕಳೆಯುವ ಅವಕಾಶ ಸಿಕ್ಕಿತು. ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಕಾರ್ಯಕ್ರಮಗಳಿಗೆ ಹಾಜರಾಗಲು ನಮಗೆ ಆಗಾಗ್ಗೆ ಅವಕಾಶ ಸಿಗುತ್ತದೆ, ಆದರೆ ಯೋಜನೆ ಮತ್ತು ಕಾರ್ಯಗತಗೊಳಿಸುವ ಪ್ರಯತ್ನಗಳು ಪ್ರತಿಯೊಬ್ಬರ ಮನಸ್ಸಿನ ಮೇಲೆ ದೊಡ್ಡ ಪ್ರಭಾವ ಉಂಟುಮಾಡುವಲ್ಲಿ ಸಹಾಯ ಮಾಡಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಇಂದಿನ ಸಂದರ್ಭವು ಭಾರತದ ವಸ್ತುಸಂಗ್ರಹಾಲಯಗಳ ಜಗತ್ತಿಗೆ ಒಂದು ದೊಡ್ಡ ತಿರುವು ಎಂದು ನಾನು ನಂಬುತ್ತೇನೆ. ಇದು ನನ್ನ ದೃಢವಾದ ನಂಬಿಕೆಯಾಗಿದೆ.

ಸ್ನೇಹಿತರೆ,

ನೂರಾರು ವರ್ಷಗಳ ಗುಲಾಮಗಿರಿಯ ಸುದೀರ್ಘ ಅವಧಿಯು ಭಾರತಕ್ಕೆ ನಷ್ಟ ಉಂಟುಮಾಡಿತು. ಏಕೆಂದರೆ ನಮ್ಮ ಬಹಳಷ್ಟು ಲಿಖಿತ ಮತ್ತು ಅಲಿಖಿತ ಪರಂಪರೆ ನಾಶವಾಯಿತು. ಗುಲಾಮಗಿರಿ ಅವಧಿಯಲ್ಲಿ ಅನೇಕ ಹಸ್ತಪ್ರತಿಗಳು ಮತ್ತು ಗ್ರಂಥಾಲಯಗಳನ್ನು ಸುಟ್ಟು ನಾಶಪಡಿಸಲಾಯಿತು. ಇದು ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ, ಇಡೀ ಮನುಕುಲಕ್ಕೆ ಆದ ನಷ್ಟ. ದುರದೃಷ್ಟವಶಾತ್, ಸ್ವಾತಂತ್ರ್ಯಾ ನಂತರ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಮಾಡಬೇಕಾದ ಪ್ರಯತ್ನಗಳು ಸಾಕಾಗಲಿಲ್ಲ.
ಪರಂಪರೆಯ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಮತ್ತಷ್ಟು ನಷ್ಟಕ್ಕೆ ಕಾರಣವಾಯಿತು. ಆದ್ದರಿಂದ, ‘ಆಜಾದಿ ಕಾ ಅಮೃತ ಕಾಲ’ದ ಸಮಯದಲ್ಲಿ ದೇಶವು ತೆಗೆದುಕೊಂಡ ‘ಪಂಚ ಪ್ರಣ್ ‘ (ಐದು ಸಂಕಲ್ಪಗಳು ಅಥವಾ ನಿರ್ಣಯಗಳು) ‘ನಮ್ಮ ಪರಂಪರೆಯಲ್ಲಿ ಹೆಮ್ಮೆ ಪಡುವ’ ಮಹತ್ವವನ್ನು ಹೊಂದಿದೆ. ಭಾರತದ ಪರಂಪರೆಯನ್ನು ಸಂರಕ್ಷಿಸುವ ಜತೆಗೆ, ‘ಅಮೃತ ಮಹೋತ್ಸವ’ ಸಂದರ್ಭದಲ್ಲಿ ನಾವು ಹೊಸ ಸಾಂಸ್ಕೃತಿಕ ಮೂಲಸೌಕರ್ಯಗಳನ್ನು ಸಹ ಸೃಷ್ಟಿಸುತ್ತಿದ್ದೇವೆ. ದೇಶದ ಈ ಪ್ರಯತ್ನಗಳಲ್ಲಿ ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯ ಜತೆಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸವೂ ಇದೆ.

ಈ ಸಮಾರಂಭದಲ್ಲಿ ನೀವು ಸ್ಥಳೀಯ ಮತ್ತು ಗ್ರಾಮೀಣ ವಸ್ತುಸಂಗ್ರಹಾಲಯಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದ್ದೀರಿ ಎಂದು ನನಗೆ ತಿಳಿದುಬಂದಿದೆ. ಸ್ಥಳೀಯ ಮತ್ತು ಗ್ರಾಮೀಣ ವಸ್ತುಸಂಗ್ರಹಾಲಯಗಳನ್ನು ಸಂರಕ್ಷಿಸಲು ಭಾರತ ಸರ್ಕಾರವು ವಿಶೇಷ ಅಭಿಯಾನ ನಡೆಸುತ್ತಿದೆ. ನಮ್ಮ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ಸಮಾಜದ ಇತಿಹಾಸವನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಬುಡಕಟ್ಟು ಸಮುದಾಯದ ಕೊಡುಗೆಯನ್ನು ಅಮರಗೊಳಿಸಲು ನಾವು 10 ವಿಶೇಷ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸುತ್ತಿದ್ದೇವೆ.

ಬುಡಕಟ್ಟು ವೈವಿಧ್ಯತೆಯ ಸಮಗ್ರ ನೋಟವನ್ನು ಕಾಣುವ ಇಡೀ ಜಗತ್ತಿನಲ್ಲಿ ಇದೊಂದು ವಿಶಿಷ್ಟ ಉಪಕ್ರಮ ಎಂದು ನಾನು ಭಾವಿಸುತ್ತೇನೆ. ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ನಡೆದು ಬಂದ ದಂಡಿ ಮಾರ್ಗವನ್ನೂ ಸಂರಕ್ಷಿಸಲಾಗಿದೆ. ಗಾಂಧೀಜಿ ಉಪ್ಪಿನ ಕಾನೂನನ್ನು ಉಲ್ಲಂಘಿಸಿದ ಸ್ಥಳದಲ್ಲಿ ಭವ್ಯವಾದ ಸ್ಮಾರಕ ನಿರ್ಮಿಸಲಾಗಿದೆ. ಇಂದು ದೇಶ, ಜಗತ್ತಿನ ಜನರು ದಂಡಿ ಕುಟೀರ ನೋಡಲು ಗಾಂಧಿನಗರಕ್ಕೆ ಬರುತ್ತಾರೆ.

ನಮ್ಮ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ನಡೆದ ಸ್ಥಳ ದಶಕಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ನಮ್ಮ ಸರ್ಕಾರವು ದೆಹಲಿಯ 5 ಅಲಿಪುರ ರಸ್ತೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಪರಿವರ್ತಿಸಿದೆ. ಬಾಬಾ ಸಾಹೇಬರ ಜೀವನಕ್ಕೆ ಸಂಬಂಧಿಸಿದ ‘ಪಂಚತೀರ್ಥ’ಗಳು, ಅವರು ಜನಿಸಿದ ಮೊವ್‌ನಲ್ಲಿ, ಅವರು ವಾಸಿಸುತ್ತಿದ್ದ ಲಂಡನ್‌ನಲ್ಲಿ, ಅವರು ದೀಕ್ಷೆ ತೆಗೆದುಕೊಂಡ ನಾಗಪುರದಲ್ಲಿ ಮತ್ತು ಮುಂಬೈನ ಚೈತ್ಯಭೂಮಿಯಲ್ಲಿ ಅವರ ‘ಸಮಾಧಿ’ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತಕ್ಕೆ 580ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳ ಪ್ರವೇಶಕ್ಕೆ ಕಾರಣವಾದ ಸರ್ದಾರ್ ಸಾಹೇಬರ ಗಗನಚುಂಬಿ ಪ್ರತಿಮೆಯಾದ “ಏಕತೆಯ ಪ್ರತಿಮೆ” ಇಂದಿಗೂ ದೇಶದ ಹೆಮ್ಮೆಯಾಗಿ ಉಳಿದಿದೆ. ಏಕತೆಯ ಪ್ರತಿಮೆಯ ಒಳಗೆ ವಸ್ತುಸಂಗ್ರಹಾಲಯವೂ ಇದೆ.

ಪಂಜಾಬ್‌ನ ಜಲಿಯನ್‌ ವಾಲಾಬಾಗ್, ಗುಜರಾತ್‌ನ ಗೋವಿಂದ್ ಗುರು ಜಿ ಸ್ಮಾರಕ, ಉತ್ತರ ಪ್ರದೇಶದ ವಾರಣಾಸಿಯ ಮನ್ ಮಹಲ್ ಮ್ಯೂಸಿಯಂ ಮತ್ತು ಗೋವಾದ ಕ್ರಿಶ್ಚಿಯನ್ ಆರ್ಟ್ ಮ್ಯೂಸಿಯಂ ಇಂತಹ ಅನೇಕ ಸ್ಥಳಗಳನ್ನು ಸಂರಕ್ಷಿಸಲಾಗಿದೆ. ಮ್ಯೂಸಿಯಂಗೆ ಸಂಬಂಧಿಸಿದ ಮತ್ತೊಂದು ವಿಶಿಷ್ಟ ಪ್ರಯತ್ನ ಭಾರತದಲ್ಲಿ ನಡೆದಿದೆ. ನಾವು ರಾಜಧಾನಿ ದೆಹಲಿಯಲ್ಲಿ ದೇಶದ ಎಲ್ಲಾ ಮಾಜಿ ಪ್ರಧಾನಿಗಳ ಪ್ರಯಾಣ ಮತ್ತು ಕೊಡುಗೆಗೆ ಮೀಸಲಾಗಿರುವ ಪ್ರಧಾನ ಮಂತ್ರಿಗಳ ಮ್ಯೂಸಿಯಂ ನಿರ್ಮಿಸಿದ್ದೇವೆ. ಇಂದು, ಸ್ವಾತಂತ್ರ್ಯದ ನಂತರ ಭಾರತದ ಅಭಿವೃದ್ಧಿ ಪಯಣವನ್ನು ವೀಕ್ಷಿಸಲು ದೇಶಾದ್ಯಂತ ಜನರು ಪ್ರಧಾನ ಮಂತ್ರಿ ಮ್ಯೂಸಿಯಂಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿಗೆ ಬಂದಿರುವ ನಮ್ಮ ಅತಿಥಿಗಳು ಒಮ್ಮೆ ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕೆಂದು ನಾನು ವಿಶೇಷವಾಗಿ ವಿನಂತಿಸುತ್ತೇನೆ.

ಸ್ನೇಹಿತರೆ,

ಒಂದು ದೇಶವು ತನ್ನ ಪರಂಪರೆ ಉಳಿಸಿಕೊಳ್ಳಲು ಪ್ರಾರಂಭಿಸಿದಾಗ, ಅದರ ಇನ್ನೊಂದು ಮುಖವು ಹೊರಹೊಮ್ಮುತ್ತದೆ. ಈ ಅಂಶವು ಇತರ ದೇಶಗಳೊಂದಿಗಿನ ಸಂಬಂಧಗಳಲ್ಲಿ ಅನ್ಯೋನ್ಯತೆಯಾಗಿದೆ. ಉದಾಹರಣೆಗೆ, ಭಾರತವು ಬುದ್ಧನ ಮಹಾಪರಿನಿರ್ವಾಣದ ನಂತರ ಪವಿತ್ರ ಅವಶೇಷಗಳನ್ನು ಪೀಳಿಗೆಯಿಂದ ಪೀಳಿಗೆಗೆ ಸಂರಕ್ಷಿಸಿದೆ. ಇಂದು ಆ ಪವಿತ್ರ ಅವಶೇಷಗಳು ಭಾರತದಲ್ಲಿ ಮಾತ್ರವಲ್ಲದೆ, ವಿಶ್ವಾದ್ಯಂತ ಕೋಟಿಗಟ್ಟಲೆ ಬೌದ್ಧ ಅನುಯಾಯಿಗಳನ್ನು ಒಂದುಗೂಡಿಸುತ್ತಿವೆ. ಕಳೆದ ವರ್ಷ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ನಾವು ಮಂಗೋಲಿಯಾಕ್ಕೆ 4 ಪವಿತ್ರ ಅವಶೇಷಗಳನ್ನು ಕಳುಹಿಸಿದ್ದೇವೆ. ಆ ಸಂದರ್ಭವು ಇಡೀ ಮಂಗೋಲಿಯಾಕ್ಕೆ ನಂಬಿಕೆಯ ದೊಡ್ಡ ಹಬ್ಬವಾಯಿತು.

ನಮ್ಮ ನೆರೆಯ ಶ್ರೀಲಂಕಾದಲ್ಲಿರುವ ಬುದ್ಧನ ಅವಶೇಷಗಳನ್ನು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಕುಶಿನಗರಕ್ಕೆ ತರಲಾಯಿತು. ಅದೇ ರೀತಿ, ಗೋವಾದ ಸೇಂಟ್ ಕ್ವೀನ್ ಕೇತೆವನ್ ಅವರ ಪವಿತ್ರ ಅವಶೇಷಗಳ ಪರಂಪರೆಯನ್ನು ಭಾರತದಲ್ಲೂ ಸಂರಕ್ಷಿಸಲಾಗಿದೆ. ನಾವು ಜಾರ್ಜಿಯಾಕ್ಕೆ ಸೇಂಟ್ ಕ್ವೀನ್ ಕೆಟೆವನ್ ಅವರ ಅವಶೇಷಗಳನ್ನು ಕಳುಹಿಸಿದಾಗ ರಾಷ್ಟ್ರೀಯ ಆಚರಣೆಯ ವಾತಾವರಣವಿತ್ತು ಎಂದು ನನಗೆ ನೆನಪಿದೆ. ಆ ದಿನ, ಜಾರ್ಜಿಯಾದ ಅನೇಕ ನಾಗರಿಕರು ಬೀದಿಗಳಲ್ಲಿ ಜಮಾಯಿಸಿದ್ದರು, ಅದು ಹಬ್ಬದ ವಾತಾವರಣವಾಗಿತ್ತು. ಬೇರೆ ರೀತಿ ಹೇಳುವುದಾದರೆ, ನಮ್ಮ ಪರಂಪರೆಯು ಜಾಗತಿಕ ಏಕತೆಯ ಮೂಲವೂ ಆಗುತ್ತದೆ. ಆದ್ದರಿಂದ, ಈ ಪರಂಪರೆಯನ್ನು ಸಂರಕ್ಷಿಸುವ ನಮ್ಮ ವಸ್ತುಸಂಗ್ರಹಾಲಯಗಳ ಪಾತ್ರವು ಮತ್ತಷ್ಟು ಹೆಚ್ಚಾಗುತ್ತದೆ.

ಸ್ನೇಹಿತರೆ,

ಭವಿಷ್ಯಕ್ಕಾಗಿ ನಾವು ಹೇಗೆ ಕುಟುಂಬಕ್ಕೆ ಸಂಪನ್ಮೂಲಗಳನ್ನು ಸೇರಿಸುತ್ತೇವೆಯೋ ಅದೇ ರೀತಿ, ಇಡೀ ಪೃಥ್ವಿಯನ್ನು ಒಂದೇ ಕುಟುಂಬವೆಂದು ಪರಿಗಣಿಸಿ ನಮ್ಮ ಸಂಪನ್ಮೂಲಗಳನ್ನು ಉಳಿಸಿಕೊಳ್ಳಬೇಕು. ಈ ಜಾಗತಿಕ ಪ್ರಯತ್ನಗಳಲ್ಲಿ ನಮ್ಮ ವಸ್ತುಸಂಗ್ರಹಾಲಯಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ನಾನು ಸೂಚಿಸುತ್ತೇನೆ. ನಮ್ಮ ಭೂಮಿ ಕಳೆದ ಶತಮಾನಗಳಲ್ಲಿ ಅನೇಕ ನೈಸರ್ಗಿಕ ವಿಪತ್ತುಗಳನ್ನು ಎದುರಿಸಿದೆ. ಅದರ ನೆನಪುಗಳು ಮತ್ತು ಸಂಕೇತಗಳು ಇಂದಿಗೂ ಪ್ರಸ್ತುತ. ಈ ಚಿಹ್ನೆಗಳು ಮತ್ತು ಚಿತ್ರಗಳ ಗ್ಯಾಲರಿಗಳನ್ನು ಗರಿಷ್ಠ ಸಂಖ್ಯೆಯ ವಸ್ತುಸಂಗ್ರಹಾಲಯಗಳಲ್ಲಿ ಸ್ಥಾಪಿಸುವ ವಿಷಯದಲ್ಲಿ ನಾವು ಯೋಚಿಸಬೇಕು.

ವಿವಿಧ ಸಮಯಗಳಲ್ಲಿ ಭೂಮಿಯ ಬದಲಾಗುತ್ತಿರುವ ಚಿತ್ರವನ್ನು ಸಹ ನಾವು ಚಿತ್ರಿಸಬಹುದು. ಮುಂದಿನ ದಿನಗಳಲ್ಲಿ ನಾವು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದೇವೆ. ಈ ಎಕ್ಸ್‌ಪೋದಲ್ಲಿ ಗ್ಯಾಸ್ಟ್ರೊನೊಮಿಕ್ ಅನುಭವಕ್ಕಾಗಿ ಜಾಗವನ್ನು ಸಹ ನಿರ್ಮಿಸಲಾಗಿದೆ ಎಂಬುದು ನನಗೆ ತಿಳಿದುಬಂದಿದೆ. ಜನರು ಇಲ್ಲಿ ಆಯುರ್ವೇದ ಮತ್ತು ಸಿರಿಧಾನ್ಯದ ಭಕ್ಷ್ಯಗಳನ್ನು ಅನುಭವಿಸುತ್ತಾರೆ, ಅಂದರೆ, ‘ಶ್ರೀ ಅನ್ನ’.

ಭಾರತದ ಪ್ರಯತ್ನದಿಂದ, ಆಯುರ್ವೇದ ಮತ್ತು ಸಿರಿಧಾನ್ಯ – ‘ಶ್ರೀ ಅನ್ನ’ ಇವೆರಡೂ ಈ ದಿನಗಳಲ್ಲಿ ಜಾಗತಿಕ ಚಳುವಳಿಯಾಗಿ ಮಾರ್ಪಟ್ಟಿವೆ. ಸಾವಿರಾರು ವರ್ಷಗಳ ‘ಶ್ರೀ ಅನ್ನ’ ಮತ್ತು ವಿವಿಧ ಸಸ್ಯವರ್ಗದ ಪ್ರಯಾಣದ ಆಧಾರದ ಮೇಲೆ ನಾವು ಹೊಸ ವಸ್ತುಸಂಗ್ರಹಾಲಯಗಳನ್ನು ಸಹ ಸ್ಥಾಪಿಸಬಹುದು. ಇಂತಹ ಪ್ರಯತ್ನಗಳು ಮುಂದಿನ ಪೀಳಿಗೆಗೆ ಈ ಜ್ಞಾನ ವ್ಯವಸ್ಥೆಯನ್ನು ಕೊಂಡೊಯ್ಯುತ್ತದೆ ಮತ್ತು ಅವರನ್ನು ಅಮರರನ್ನಾಗಿ ಮಾಡುತ್ತದೆ.

ಸ್ನೇಹಿತರೆ,

ಐತಿಹಾಸಿಕ ವಸ್ತುಗಳ ಸಂರಕ್ಷಣೆಯನ್ನು ದೇಶದ ಸ್ವರೂಪವನ್ನಾಗಿ ಮಾಡಿಕೊಂಡಾಗ ಮಾತ್ರ ನಾವು ಈ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೇವೆ. ಈಗ ಪ್ರಶ್ನೆಯೆಂದರೆ, ನಮ್ಮ ಪರಂಪರೆಯ ಸಂರಕ್ಷಣೆ ದೇಶದ ಸಾಮಾನ್ಯ ಪ್ರಜೆಯ ಸ್ವಭಾವವಾಗುವುದು ಹೇಗೆ? ಇದಕ್ಕೆ ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ. ಭಾರತದಲ್ಲಿನ ಪ್ರತಿಯೊಂದು ಕುಟುಂಬವು ತಮ್ಮ ಮನೆಯಲ್ಲಿ ತಮ್ಮದೇ ಆದ ಕುಟುಂಬ ವಸ್ತುಸಂಗ್ರಹಾಲಯವನ್ನು ಏಕೆ ರಚಿಸುವುದಿಲ್ಲ? ಅದು ಮನೆಯ ಜನರ ಬಗ್ಗೆ ಮತ್ತು ಅವರ ಸ್ವಂತ ಕುಟುಂಬದ ಮಾಹಿತಿಯಾಗಿರಬೇಕು. ಪುರಾತನ ವಸ್ತುಗಳು ಮತ್ತು ಮನೆಯ ಹಿರಿಯರ ಕೆಲವು ವಿಶೇಷ ವಸ್ತುಗಳನ್ನು ಇಡಬಹುದು. ಇಂದು ನೀವು ಬರೆಯುವ ಕಾಗದವು ನಿಮಗೆ ಸಾಮಾನ್ಯವಾಗಿದೆ. ಆದರೆ ನಿಮ್ಮ ಬರವಣಿಗೆಯಲ್ಲಿ ಅದೇ ಕಾಗದದ ತುಂಡು 3-4 ತಲೆಮಾರುಗಳ ನಂತರ ಭಾವನಾತ್ಮಕ ಆಸ್ತಿಯಾಗುತ್ತದೆ. ಅದೇ ರೀತಿ, ನಮ್ಮ ಶಾಲೆಗಳು, ವಿವಿಧ ಸಂಸ್ಥೆಗಳು ಮತ್ತು ಸಂಸ್ಥೆಗಳು ತಮ್ಮದೇ ಆದ ವಸ್ತುಸಂಗ್ರಹಾಲಯಗಳನ್ನು ಹೊಂದಿರಬೇಕು. ಭವಿಷ್ಯಕ್ಕಾಗಿ ರಾಜಧಾನಿಯನ್ನು ಎಷ್ಟು ದೊಡ್ಡ ಮತ್ತು ಐತಿಹಾಸಿಕವಾಗಿ ಸಿದ್ಧಪಡಿಸಬಹುದು ಎಂಬುದನ್ನು ನೋಡೋಣ.

ದೇಶದ ವಿವಿಧ ನಗರಗಳು ಆಧುನಿಕ ರೂಪದಲ್ಲಿ ಸಿಟಿ ಮ್ಯೂಸಿಯಂನಂತಹ ಯೋಜನೆಗಳನ್ನು ಸಿದ್ಧಪಡಿಸಬಹುದು. ಆ ನಗರಗಳಿಗೆ ಸಂಬಂಧಿಸಿದ ಐತಿಹಾಸಿಕ ವಸ್ತುಗಳನ್ನು ಅಲ್ಲಿ ಇಡಬಹುದು. ವಿವಿಧ ಪಂಗಡಗಳಿಂದ ದಾಖಲೆಗಳನ್ನು ನಿರ್ವಹಿಸುವ ಹಳೆಯ ಸಂಪ್ರದಾಯವು ಈ ದಿಕ್ಕಿನಲ್ಲಿ ನಮಗೆ ಸಾಕಷ್ಟು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಇಂದು ವಸ್ತುಸಂಗ್ರಹಾಲಯಗಳು ಕೇವಲ ಭೇಟಿ ನೀಡುವ ಸ್ಥಳವಾಗದೆ ಯುವಜನರಿಗೆ ವೃತ್ತಿಜೀವನದ ಆಯ್ಕೆಯಾಗುತ್ತಿರುವುದು ನನಗೆ ಖುಷಿ ತಂದಿದೆ. ಆದರೆ ನಾವು ನಮ್ಮ ಯುವಕರನ್ನು ವಸ್ತುಸಂಗ್ರಹಾಲಯದ ಕೆಲಸಗಾರರ ದೃಷ್ಟಿಕೋನದಿಂದ ಮಾತ್ರ ನೋಡಬಾರದು ಎಂದು ನಾನು ಬಯಸುತ್ತೇನೆ. ಇತಿಹಾಸ ಮತ್ತು ವಾಸ್ತುಶಿಲ್ಪದಂತಹ ವಿಷಯಗಳೊಂದಿಗೆ ಸಂಬಂಧ ಹೊಂದಿರುವ ಈ ಯುವಕರು ಜಾಗತಿಕ ಸಾಂಸ್ಕೃತಿಕ ವಿನಿಮಯದ ಮಾಧ್ಯಮವಾಗಬಹುದು. ಈ ಯುವಕರು ಬೇರೆ ದೇಶಗಳಿಗೆ ಹೋಗಬಹುದು, ಅಲ್ಲಿನ ಯುವಕರಿಂದ ಪ್ರಪಂಚದ ವಿವಿಧ ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಭಾರತದ ಸಂಸ್ಕೃತಿಯ ಬಗ್ಗೆಯೂ ಹೇಳಬಹುದು. ಅವರ ಅನುಭವ ಮತ್ತು ಹಿಂದಿನ ಒಡನಾಟವು ನಮ್ಮ ದೇಶದ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.

ಸ್ನೇಹಿತರೆ,

ಇಂದು ನಾವು ಸಾಮಾನ್ಯ ಪರಂಪರೆಯ ಬಗ್ಗೆ ಮಾತನಾಡುವಾಗ, ನಾನು ಸಾಮಾನ್ಯ ಸವಾಲಿನ ಬಗ್ಗೆಯೂ ಮಾತನಾಡಲು ಬಯಸುತ್ತೇನೆ. ಈ ಸವಾಲು ಕಳ್ಳಸಾಗಣೆ ಮತ್ತು ಕಲಾಕೃತಿಗಳ ಸ್ವಾಧೀನವಾಗಿದೆ. ಭಾರತದಂತಹ ಪ್ರಾಚೀನ ಸಂಸ್ಕೃತಿಯನ್ನು ಹೊಂದಿರುವ ದೇಶಗಳು ನೂರಾರು ವರ್ಷಗಳಿಂದ ಈ ಬೆದರಿಕೆಯೊಂದಿಗೆ ಹೋರಾಡುತ್ತಿವೆ. ಸ್ವಾತಂತ್ರ್ಯದ ಮೊದಲು ಮತ್ತು ನಂತರ ನಮ್ಮ ದೇಶದಿಂದ ಅನೇಕ ಕಲಾಕೃತಿಗಳನ್ನು ಅನೈತಿಕ ರೀತಿಯಲ್ಲಿ ತೆಗೆದುಕೊಂಡು ಹೋಗಲಾಗಿದೆ. ಈ ರೀತಿಯ ಅಪರಾಧವನ್ನು ತಡೆಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು.

ವಿಶ್ವದಲ್ಲಿ ಭಾರತದ ಖ್ಯಾತಿ ಹೆಚ್ಚುತ್ತಿರುವ ನಡುವೆ ಈಗ ವಿವಿಧ ದೇಶಗಳು ನಮ್ಮ ಪರಂಪರೆಯನ್ನು ಭಾರತಕ್ಕೆ ಹಿಂದಿರುಗಿಸಲು ಪ್ರಾರಂಭಿಸಿವೆ ಎಂದು ನನಗೆ ಸಂತೋಷವಾಗಿದೆ. ಸುಮಾರು 240 ಪುರಾತನ ಕಲಾಕೃತಿಗಳು, ಅದು ಬನಾರಸ್‌ನಿಂದ ಕದ್ದ ಮಾತೆ ಅನ್ನಪೂರ್ಣೆಯ ವಿಗ್ರಹ, ಗುಜರಾತ್‌ನಿಂದ ಕದ್ದ ಮಹಿಷಾಸುರ ಮರ್ದಿನಿಯ ವಿಗ್ರಹ ಅಥವಾ ಚೋಳ ಸಾಮ್ರಾಜ್ಯದ ಸಮಯದಲ್ಲಿ ಮಾಡಿದ ನಟರಾಜ ವಿಗ್ರಹಗಳನ್ನು ಭಾರತಕ್ಕೆ ಮರಳಿ ತರಲಾಗಿದೆ. ಆದರೆ ಇದಕ್ಕೆ ಹಲವು ದಶಕಗಳ ಹಿಂದಿನಿಂದ ಈ ಸಂಖ್ಯೆ 20 ಅನ್ನು ತಲುಪಿಲ್ಲ. ಕಳೆದ 9 ವರ್ಷಗಳಲ್ಲಿ ಭಾರತದಿಂದ ಸಾಂಸ್ಕೃತಿಕ ಕಲಾಕೃತಿಗಳ ಕಳ್ಳಸಾಗಣೆ ಗಣನೀಯವಾಗಿ ಕಡಿಮೆಯಾಗಿದೆ.

ಪ್ರಪಂಚದಾದ್ಯಂತದ ಕಲಾ ಅಭಿಜ್ಞರು, ವಿಶೇಷವಾಗಿ ವಸ್ತುಸಂಗ್ರಹಾಲಯಗಳಿಗೆ ಸಂಬಂಧಿಸಿದವರು, ಈ ಕ್ಷೇತ್ರದಲ್ಲಿ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ನಾನು ಒತ್ತಾಯಿಸುತ್ತೇನೆ. ಯಾವುದೇ ದೇಶದ ವಸ್ತುಸಂಗ್ರಹಾಲಯದಲ್ಲಿ ಅನೈತಿಕ ರೀತಿಯಲ್ಲಿ ತಲುಪಿರುವ ಇಂತಹ ಕಲಾಕೃತಿಗಳು ಇರಬಾರದು. ನಾವು ಇದನ್ನು ಎಲ್ಲಾ ವಸ್ತುಸಂಗ್ರಹಾಲಯಗಳಿಗೆ ನೈತಿಕ ಬದ್ಧತೆಯಿಂದ ಮಾಡಬೇಕು.

ಸ್ನೇಹಿತರೆ,

ಹಿಂದಿನದರೊಂದಿಗೆ ಸಂಪರ್ಕದಲ್ಲಿರುವಾಗ ನಾವು ಭವಿಷ್ಯಕ್ಕಾಗಿ ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂಬುದು ನನಗೆ ಖಾತ್ರಿಯಿದೆ. ನಾವು ಪರಂಪರೆಯನ್ನು ಉಳಿಸುತ್ತೇವೆ, ಜತೆಗೆ ಹೊಸ ಪರಂಪರೆಯನ್ನು ಸಹ ರೂಪಿಸುತ್ತೇವೆ. ಈ ಶುಭ ಹಾರೈಕೆಯೊಂದಿಗೆ, ನನ್ನ ಹೃದಯಾಂತರಾಳದಿಂದ ತುಂಬು ಧನ್ಯವಾದಗಳನ್ನು ಅರ್ಪಿಸುತ್ತೇನೆ!