Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಹಮದಾಬಾದ್‌ನ ‘ಕಲಾಂ ನೋ ಕಾರ್ನಿವಲ್’ ಪುಸ್ತಕ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

ಅಹಮದಾಬಾದ್‌ನ ‘ಕಲಾಂ ನೋ ಕಾರ್ನಿವಲ್’ ಪುಸ್ತಕ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ


‘ಕಲಾಂ ನೋ ಕಾರ್ನಿವಲ್’ ನ ಈ ಭವ್ಯ ಸಮಾರಂಭಕ್ಕಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಅಹಮದಾಬಾದ್‌ನಲ್ಲಿ ಪ್ರತಿ ವರ್ಷ ‘ನವ ಭಾರತ ಸಾಹಿತ್ಯ ಮಂದಿರ’ ಆರಂಭಿಸಿದ ಪುಸ್ತಕ ಮೇಳದ ಸಂಪ್ರದಾಯ ವರ್ಷದಿಂದ ವರ್ಷಕ್ಕೆ ಶ್ರೀಮಂತವಾಗುತ್ತಿದೆ. ಈ ಉಪಕ್ರಮದ ಮೂಲಕ, ಗುಜರಾತ್‌ನ ಸಾಹಿತ್ಯ ಮತ್ತು ಜ್ಞಾನವನ್ನು ವಿಸ್ತರಿಸಲಾಗುತ್ತಿದೆ ಮತ್ತು ಹೊಸ ಯುವ ಬರಹಗಾರರು ಮತ್ತು ಕಾದಂಬರಿಕಾರರಿಗೂ ವೇದಿಕೆ ಸಿಗುತ್ತಿದೆ.

ಈ ಶ್ರೀಮಂತ ಸಂಪ್ರದಾಯಕ್ಕಾಗಿ ನಾನು ನವಭಾರತ ಸಾಹಿತ್ಯ ಮಂದಿರ ಹಾಗೂ ಅದರ ಎಲ್ಲ ಸದಸ್ಯರನ್ನು ಅಭಿನಂದಿಸುತ್ತೇನೆ. ಈ ಪುಸ್ತಕ ಮೇಳದ ಮೂಲಕ ಗುಜರಾತ್‌ನ ಜನರಿಗೆ ಪ್ರಯೋಜನವನ್ನು ನೀಡುತ್ತಿರುವ ಮಹೇಂದ್ರ ಭಾಯಿ ಮತ್ತು ರೋನಕ್ ಭಾಯಿ ಅವರಿಗೂ ನನ್ನ ಶುಭಾಶಯಗಳು.

ಸ್ನೇಹಿತರೇ,

‘ಕಲಾಂ ನೋ ಕಾರ್ನಿವಲ್’ ಗುಜರಾತಿ ಭಾಷೆಯ ಪುಸ್ತಕಗಳ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪುಸ್ತಕಗಳ ಬೃಹತ್ ಸಂಗ್ರಹವಾಗಿದೆ. ಈ ಕಾರ್ಯಕ್ರಮದ ಧ್ಯೇಯವಾಕ್ಯ ‘ವಂಚೆ ಗುಜರಾತ್, ವಂಚನ್ನೇ ವಾಧವೇ ಗುಜರಾತ್’ ಕೂಡ ಅತ್ಯಂತ ಪ್ರಸ್ತುತವಾಗಿದೆ. ನಾನು ಗುಜರಾತಿನಲ್ಲಿ ನಿಮ್ಮೆಲ್ಲರ ಮಧ್ಯೆ ಕೆಲಸ ಮಾಡುತ್ತಿದ್ದಾಗ ಗುಜರಾತ್ ಕೂಡ ‘ವಂಚೆ ಗುಜರಾತ್’ ಅಭಿಯಾನ ಆರಂಭಿಸಿತ್ತು. ಇಂದು ‘ಕಲಾಂ ನೋ ಕಾರ್ನೀವಲ್’ ನಂತಹ ಅಭಿಯಾನಗಳು ಗುಜರಾತ್‌ನ ಅದೇ ಸಂಕಲ್ಪವನ್ನು ಮುಂದುವರೆಸುತ್ತಿವೆ.

ಸ್ನೇಹಿತರೇ,

ಪುಸ್ತಕಗಳು ಮತ್ತು ಪಠ್ಯಗಳು ಎರಡೂ ನಮ್ಮ ‘ವಿದ್ಯಾ ಉಪಾಸನೆ’ಯ ಮೂಲ ಅಂಶಗಳಾಗಿವೆ. ಗುಜರಾತ್‌ನಲ್ಲಿ ಗ್ರಂಥಾಲಯಗಳ ಅತ್ಯಂತ ಹಳೆಯ ಸಂಪ್ರದಾಯವಿದೆ. ನಮ್ಮ ಬರೋಡ ಮಹಾರಾಜ ಸಯಾಜಿರಾವ್ ಅವರು ತಮ್ಮ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿದ್ದರು. ನಾನು ಹುಟ್ಟೂರಾದ ವಡ್ನಾನಗರದಲ್ಲಿ ಉತ್ತಮ ಗ್ರಂಥಾಲಯವಿತ್ತು. ಗೊಂಡಾಳದ ಮಹಾರಾಜ ಭಗವತ್ ಸಿಂಗ್ ಅವರು ‘ಭಗವತ್ ಗೋಮಂಡಲ’ದಂತಹ ಅದ್ಭುತ ನಿಘಂಟನ್ನು ರಚಿಸಿದ್ದರು. ನಾನು ಗುಜರಾತಿನಲ್ಲಿದ್ದಾಗ ಕೆಲವು ಕುಟುಂಬಗಳು ತಮ್ಮ ಮಕ್ಕಳಿಗೆ ಹೆಸರಿಡಲು ಒಳ್ಳೆಯ ಹೆಸರುಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದರು. ಕೆಲವರು ಹೆಸರುಗಳನ್ನು ಸೂಚಿಸುವಂತೆ ನನ್ನನ್ನು ಕೇಳುತ್ತಿದ್ದರು. ಹೆಸರುಗಳಿಗಾಗಿ ಪುಸ್ತಕಗಳನ್ನು ಹುಡುಕುತ್ತಿದ್ದರು. ಒಮ್ಮೆ ಯಾರೋ ಒಬ್ಬರು ಈ ವಿಷಯವನ್ನು ಪ್ರಸ್ತಾಪಿಸಿದಾಗ ನಾನು ಅವರಿಗೆ ‘ಭಗವತ್ ಗೋಮಂಡಲ’ ದಲ್ಲಿ ಹುಡುಕುವಂತೆ ಹೇಳಿದ್ದೆ. ಇದು ನೀವು ಲೆಕ್ಕವಿಲ್ಲದಷ್ಟು ಗುಜರಾತಿ ಪದಗಳನ್ನು ಮತ್ತು ನಿಮ್ಮ ಮಗುವಿಗೆ ಸೂಕ್ತವಾದ ಹೆಸರನ್ನು ಕಂಡುಕೊಳ್ಳುವ ಪುಸ್ತಕವಾಗಿದೆ. ಮತ್ತು ವಾಸ್ತವವಾಗಿ ಹಲವಾರು ಉಲ್ಲೇಖಗಳು ಮತ್ತು ಅರ್ಥಗಳಿವೆ. ಅಂತಹ ಶ್ರೀಮಂತ ಸಂಪ್ರದಾಯ ನಮ್ಮಲ್ಲಿದೆ!

ಹಾಗೆಯೇ ಮಹಾಕವಿ ನರ್ಮದ್ ಅವರು ‘ನರ್ಮ್ ಕೋಶ’ವನ್ನು ಸಂಪಾದಿಸಿದ್ದರು. ಈ ಸಂಪ್ರದಾಯ ನಮ್ಮ ಕೇಕಾ ಶಾಸ್ತ್ರಿಯವರ ತನಕ ಮುಂದುವರಿಯಿತು. 100 ವರ್ಷಕ್ಕೂ ಹೆಚ್ಚು ಕಾಲ ನಮ್ಮೊಂದಿಗಿದ್ದ ಕೇಕಾ ಶಾಸ್ತ್ರಿ ಅವರೂ ಈ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪುಸ್ತಕಗಳು, ಲೇಖಕರು ಮತ್ತು ಸಾಹಿತ್ಯ ರಚನೆಗಳ ವಿಷಯದಲ್ಲಿ ಗುಜರಾತ್ ಇತಿಹಾಸವು ಬಹಳ ಶ್ರೀಮಂತವಾಗಿದೆ. ಇಂತಹ ಪುಸ್ತಕ ಮೇಳಗಳು ಗುಜರಾತಿನ ಮೂಲೆ ಮೂಲೆಯಲ್ಲಿರುವ ಜನರನ್ನು ಮತ್ತು ಪ್ರತಿಯೊಬ್ಬ ಯುವಕರನ್ನು ತಲುಪುತ್ತವೆ, ಇದರಿಂದ ಅವರು ಇಂತಹ ಇತಿಹಾಸವನ್ನು ತಿಳಿದುಕೊಳ್ಳುತ್ತಾರೆ ಮತ್ತು ಹೊಸ ಸ್ಫೂರ್ತಿಯನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೇ,

ದೇಶವು ‘ಆಜಾದಿ ಕಾ ಅಮೃತ ಮಹೋತ್ಸವ’ವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ವರ್ಷ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ಅಮೃತ ಮಹೋತ್ಸವದ ಒಂದು ಆಯಾಮವು ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಪುನರುಜ್ಜೀವನಗೊಳಿಸುವ ವಿಧಾನಗಳ ಕುರಿತಾಗಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಇದನ್ನು ಹೇಗೆ ರವಾನಿಸುತ್ತೇವೆ? ದೇಶದ ಮುಂದೆ ಸ್ವಾತಂತ್ರ್ಯ ಹೋರಾಟದ ಮರೆತುಹೋಗಿರುವ ಅಧ್ಯಾಯಗಳ ವೈಭವವನ್ನು ಮರಳಿ ತರಲು ನಾವು ಬದ್ಧರಾಗಿದ್ದೇವೆ ಮತ್ತು ನಿಮ್ಮೆಲ್ಲರ ಪ್ರಯತ್ನದಿಂದ ಇದು ಸಾಧ್ಯ.

‘ಕಲಾಂ ನೋ ಕಾರ್ನಿವಲ್’ ನಂತಹ ಕಾರ್ಯಕ್ರಮಗಳು ಈ ಅಭಿಯಾನಕ್ಕೆ ಉತ್ತೇಜನ ನೀಡಬಹುದು. ಪುಸ್ತಕ ಮೇಳದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಪುಸ್ತಕಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಬಹುದು. ಅಂತಹ ಲೇಖಕರಿಗೆ ಗಟ್ಟಿಯಾದ ವೇದಿಕೆಯನ್ನು ನೀಡಬಹುದು. ಈ ಮೇಳವು ಈ ದಿಕ್ಕಿನಲ್ಲಿ ಸಕಾರಾತ್ಮಕ ಮಾಧ್ಯಮವಾಗುತ್ತದೆ ಎಂದು ನನಗೆ ಭರವಸೆಯಿದೆ.

ಸ್ನೇಹಿತರೇ,

ನಮ್ಮ ಧರ್ಮಗ್ರಂಥಗಳಲ್ಲಿ ಹೀಗೆ ಹೇಳಲಾಗಿದೆ –

शास्त्र सुचिन्तित पुनि पुनि देखिअ।

ಅಂದರೆ, ಧರ್ಮಗ್ರಂಥಗಳು, ಪಠ್ಯಗಳು ಮತ್ತು ಪುಸ್ತಕಗಳನ್ನು ಮತ್ತೆ ಮತ್ತೆ ಅಧ್ಯಯನ ಮಾಡಬೇಕು, ಆಗ ಮಾತ್ರ ಅವು ಪರಿಣಾಮಕಾರಿಯಾಗಿರುತ್ತವೆ ಮತ್ತು ಉಪಯುಕ್ತವಾಗಿರುತ್ತವೆ. ಇಂದು ಈ ಇಂಟರ್ನೆಟ್ ಯುಗದಲ್ಲಿ ಈ ಮಾತುಗಳು ಇನ್ನಷ್ಟು ಮಹತ್ವ ಪಡೆದಿವೆ. ಏಕೆಂದರೆ, ಜನರು ಬೇಕೆಂದಾಗ ಇಂಟರ್ನೆಟ್‌ನ ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ. ತಂತ್ರಜ್ಞಾನವು ನಿಸ್ಸಂದೇಹವಾಗಿ ನಮಗೆ ಮಾಹಿತಿಯ ಪ್ರಮುಖ ಮೂಲವಾಗಿದೆ, ಆದರೆ ಇದು ಪುಸ್ತಕಗಳನ್ನು ಬದಲಿಸುವ ಅಥವಾ ಪುಸ್ತಕಗಳನ್ನು ಓದುವ ಮಾರ್ಗವಲ್ಲ. ಮಾಹಿತಿಯು ನಮ್ಮ ಮನಸ್ಸಿನಲ್ಲಿದ್ದರೆ, ಮೆದುಳು ಆ ಮಾಹಿತಿಯನ್ನು ಆಳವಾಗಿ ಪ್ರಕ್ರಿಯೆಗೊಳಿಸುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಹೊಸ ಆಯಾಮಗಳು ನಮ್ಮ ಮನಸ್ಸಿಗೆ ಬರುತ್ತವೆ.

ಈಗ ನಾನು ನಿಮಗೆ ಒಂದು ಸಣ್ಣ ಕೆಲಸವನ್ನು ನೀಡುತ್ತೇನೆ. ನರಸಿಂಹ ಮೆಹ್ತಾ ಅವರು ರಚಿಸಿರುವ ‘ವೈಷ್ಣವ್ ಜನ್ ತೋ ತೆನೆ ರೇ ಕಹಿಯೇ’ ಅನ್ನು ನಾವೆಲ್ಲರೂ ಕೇಳಿದ್ದೇವೆ. ನೀವು ಅದನ್ನು ಎಷ್ಟು ಬಾರಿ ಕೇಳಿರಬಹುದು ಅಥವಾ ಹಾಡಿರಬಹುದು? ಒಂದು ಕೆಲಸ ಮಾಡಿ. ಅದನ್ನು ನಿಮ್ಮ ಮುಂದೆ ಲಿಖಿತ ರೂಪದಲ್ಲಿ ಇರಿಸಿಕೊಳ್ಳಿ, ಅದರಲ್ಲಿ ಇಂದಿನ ಸಂದರ್ಭದಲ್ಲಿ ಪ್ರಸ್ತುತವಾಗಿರುವ ವಿಷಯಗಳ ಬಗ್ಗೆ ಯೋಚಿಸಿ. ನೀವು ಸಾವಿರಾರು ಬಾರಿ ಕೇಳಿರುವ ‘ವೈಷ್ಣವ ಜನ ತೋ’ ಪ್ರತಿ ಬಾರಿ ನೀವು ಅದರ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗ ಮತ್ತು ಇಂದಿನ ಸಂದರ್ಭಕ್ಕೆ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ ನಿಮಗೆ ನೂರಾರು ಹೊಸ ಅರ್ಥಗಳನ್ನು ನೀಡಲು ಪ್ರಾರಂಭಿಸುತ್ತದೆ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ಇದೇ ಶಕ್ತಿ! ಅದಕ್ಕಾಗಿಯೇ, ನಮ್ಮೊಂದಿಗೆ ಪುಸ್ತಕ ಮತ್ತು ನಮ್ಮ ಮುಂದೆ ಬರೆದ ಪುಟಗಳು ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಗಳಿಗೆ ದೊಡ್ಡ ಶಕ್ತಿಯಾಗಿದೆ. ಇದು ಚರ್ಚೆಗಳನ್ನು ಆಳವಾಗಿಸುತ್ತದೆ.

ಆದ್ದರಿಂದ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ಬಹಳ ಪ್ರಮುಖವಾದುದು. ಪುಸ್ತಕಗಳು ಭೌತಿಕ ರೂಪದಲ್ಲಿರಲಿ ಅಥವಾ ಡಿಜಿಟಲ್ ರೂಪದಲ್ಲಿರಲಿ, ಅದು ನಿಜವಾಗಿಯೂ ಮುಖ್ಯವಲ್ಲ! ಯುವಕರಲ್ಲಿ ಪುಸ್ತಕಗಳ ಬಗ್ಗೆ ಅಗತ್ಯ ಆಕರ್ಷಣೆಯನ್ನು ಮೂಡಿಸುವಲ್ಲಿ ಮತ್ತು ಅವುಗಳ ಮಹತ್ವವನ್ನು ಅರ್ಥಮಾಡಿಸುವಲ್ಲಿ ಇಂತಹ ಮೇಳಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ನನಗೆ ವಿಶ್ವಾವಿದೆ.

ಸ್ನೇಹಿತರೇ,

ನಾನು ನನ್ನ ಗುಜರಾತ್‌ನ ಜನರೊಂದಿಗೆ ಮಾತನಾಡುತ್ತಿರುವಾಗ, ನಾನು ಇನ್ನೊಂದು ವಿಷಯವನ್ನು ಹೇಳಲು ಬಯಸುತ್ತೇನೆ. ನಾವು ಹೊಸ ಮನೆಯನ್ನು ನಿರ್ಮಿಸಲು ಯೋಚಿಸಿದಾಗ, ನಾವು ಊಟದ ಕೋಣೆ, ಡ್ರಾಯಿಂಗ್ ರೂಮ್, ಪೂಜಾ ಕೋಣೆ ಮತ್ತು ಬಟ್ಟೆ ಇಡಲು ಸ್ಥಳವನ್ನು ನಿರ್ಧರಿಸುವ ಬಗ್ಗೆ ವಾಸ್ತುಶಿಲ್ಪಿಯೊಂದಿಗೆ ಸಾಕಷ್ಟು ಚರ್ಚೆಗಳನ್ನು ನಡೆಸುತ್ತೇವೆ. ಆದರೆ ಮನೆಗಳನ್ನು ನಿರ್ಮಿಸುವಾಗ ಪುಸ್ತಕಗಳನ್ನು ಸಂಗ್ರಹಿಸಲು ಒಂದು ಸ್ಥಳವನ್ನು ನಿರ್ಧರಿಸುವಂತೆ ನಿಮ್ಮಲ್ಲಿ ನಾನು ವಿನಂತಿಸುತ್ತೇನೆ.  ನೀವು ಪುಸ್ತಕದ ಅಂಗಡಿಗೆ ಹೋಗಿ, ನಿಮ್ಮ ಮಕ್ಕಳನ್ನೂ ಕರೆದುಕೊಂಡು ಹೋಗಿ. ನಿಮ್ಮ ಮನೆಯ ಒಂದು ಮೂಲೆಯನ್ನು ಪುಸ್ತಕಗಳಿಗಾಗಿ ಮೀಸಲಿಡುವುದನ್ನು ಅಭ್ಯಾಸ ಮಾಡಿ. ನಾವು ಸಾಮಾನ್ಯವಾಗಿ ಇದನ್ನು ಮಾಡುವುದಿಲ್ಲ.

ನಾನು ಗುಜರಾತ್‌ನಲ್ಲಿ ಯಾವುದೇ ಕಾರ್ಯಕ್ರಮ, ಸಮಾರಂಭಕ್ಕೆ ಹೋದರೂ ಪದೇಪದೇ ಹೇಳುತ್ತಿದ್ದುದು ನಿಮಗೆ ತಿಳಿದಿರಬಹುದು. “ಪುಷ್ಪಗುಚ್ಛದ ಬದಲಿಗೆ ಪುಸ್ತಕವನ್ನು ಉಡುಗೊರೆಯಾಗಿ ಕೊಡಿ” ಎಂದು ನಾನು ಹೇಳುತ್ತಿದ್ದೆ. ಏಕೆಂದರೆ ಪುಷ್ಪಗುಚ್ಛದ ಜೀವಿತಾವಧಿ ತುಂಬಾ ಕಡಿಮೆ. ಹಾಗಾಗಿ ಪುಸ್ತಕಗಳನ್ನು ನೀಡಿ, ಇದರಿಂದ ಅವುಗಳ ಮಾರಾಟವೂ ಹೆಚ್ಚಾಗುತ್ತದೆ. ಇದು ಪ್ರಕಾಶಕರು ಮತ್ತು ಬರಹಗಾರರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಕೆಲವೊಮ್ಮೆ ನಮಗೆ ಪುಸ್ತಕ ಕೊಳ್ಳುವ ಅಭ್ಯಾಸ ಇರುವುದಿಲ್ಲ. ಆದಾಗ್ಯೂ, ಪುಸ್ತಕವನ್ನು ಖರೀದಿಸುವುದು ಒಂದು ರೀತಿಯ ಸಮಾಜ ಸೇವೆಯಾಗಿದೆ. ಏಕೆಂದರೆ ಅಂತಹ ಕೆಲಸದಲ್ಲಿರುವ ಜನರನ್ನು ನಾವು ಸಹಜವಾಗಿ ಬೆಂಬಲಿಸಬೇಕು. ಪುಸ್ತಕಗಳನ್ನು ಖರೀದಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಪುಸ್ತಕ ಇಟ್ಟುಕೊಳ್ಳುವ ಹವ್ಯಾಸ ರೂಢಿಸಿಕೊಳ್ಳಬೇಕು. ಗುಜರಾತ್‌ನಲ್ಲಿ ಅನೇಕ ಜನರು ಮನೆ ಮನೆಗೆ ಪುಸ್ತಕಗಳನ್ನು ವಿತರಿಸುವುದನ್ನು ನಾನು ನೋಡಿದ್ದೇನೆ ಮತ್ತು ಪುಸ್ತಕವನ್ನು ಓದಲು ಮತ್ತು ಖರೀದಿಸಲು ವಿನಂತಿಸುವುದನ್ನು ನಾನು ನೋಡಿದ್ದೇನೆ. ಅಂತಹ ಅನೇಕರನ್ನು ನಾವು ನೋಡಿದ್ದೇವೆ. ಭಾವನಗರದಲ್ಲಿ ಪುಸ್ತಕ ಮೇಳ ಏರ್ಪಡಿಸುತ್ತಿದ್ದ ಮಹನೀಯರೊಬ್ಬರು ನನಗೆ ನೆನಪಾಗುತ್ತಾರೆ. ಅನೇಕ ಜನರು ಈ ರೀತಿಯ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ನಮ್ಮ ಕುಟುಂಬದಲ್ಲಿ ಓದುವ ಹವ್ಯಾಸ ಇರುವಂತಹ ವ್ಯವಸ್ಥೆ ಇರಬೇಕು.

“ಸರಸ್ವತಿ ಲುಪ್ತ್ ಹೈ, ಗುಪ್ತ್ ಹೈ” ಎಂಬ ಗಾದೆ ನಮ್ಮಲ್ಲಿದೆ. ಸಾಹಿತ್ಯದ ಸಂದರ್ಭದಲ್ಲಿ ನನ್ನ ತರ್ಕ ಸ್ವಲ್ಪ ವಿಭಿನ್ನವಾಗಿದೆ ಮತ್ತು ಈ ತರ್ಕವು ಸಾಹಿತ್ಯ ಪ್ರಪಂಚಕ್ಕೆ ಸಂಬಂಧಿಸಿದೆ. ಸರಸ್ವತಿ ಜ್ಞಾನದ ಅಧಿದೇವತೆ. ‘ಸರಸ್ವತಿ ಲುಪ್ತ್ ಹೈ, ಗುಪ್ತ್ ಹೈ’ ಎಂದರೆ ಸರಸ್ವತಿ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಪುಸ್ತಕಗಳ ಮೂಲಕ ಗುಪ್ತಗಾಮಿನಿಯಾಗಿ ಸಂಪರ್ಕಿಸುತ್ತಾಳೆ. ಅದಕ್ಕಾಗಿಯೇ ನಾವು ಪುಸ್ತಕ ಮೇಳಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು. ಪುಸ್ತಕ ಮೇಳಕ್ಕೆ ಕುಟುಂಬ ಸಮೇತ ಹೋಗಬೇಕು ಮತ್ತು ನೀವು ಪುಸ್ತಕವನ್ನು ನೋಡಿದಾಗ ಮತ್ತು ಅದನ್ನು ಕೈಯಿಂದ ಮುಟ್ಟಿದಾಗ, ಅದರಲ್ಲಿರುವ ವಿಷಯವನ್ನು ಸಹ ಸ್ಪರ್ಶಿಸಿದ ಅನುಭವ ನಿಮಗಾಗುತ್ತದೆ. ಅದಕ್ಕಾಗಿಯೇ ಗುಜರಾತ್‌ನ ನನ್ನ ಎಲ್ಲಾ ಸಹೋದರ ಸಹೋದರಿಯರು ಬಹಳಷ್ಟು ಓದಬೇಕು ಮತ್ತು ಬಹಳಷ್ಟು ಯೋಚಿಸಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ತದನಂತರ ಬಹಳಷ್ಟು ಚಿಂತನೆಯಲ್ಲಿ ತೊಡಗಿಸಿಕೊಳ್ಳಿ. ಭವಿಷ್ಯದ ಪೀಳಿಗೆಗೆ ಅವರು ಬಹಳಷ್ಟು ನೀಡಬೇಕು ಮತ್ತು ಈ ಮೇಳದಲ್ಲಿ ನಾವು ಸಕ್ರಿಯವಾಗಿ ಭಾಗವಹಿಸುವುದು ಗುಜರಾತ್‌ನ ಖ್ಯಾತ ಲೇಖಕರು ಮತ್ತು ಬರಹಗಾರರಿಗೆ ಸಲ್ಲಿಸುವ ಗೌರವವಾಗಿದೆ. ನಿಮ್ಮೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ! ಮತ್ತೊಮ್ಮೆ ಎಲ್ಲಾ ಓದುಗರಿಗೆ ನನ್ನ ಶುಭಾಶಯಗಳು. ಇದರೊಂದಿಗೆ ನನ್ನ ಭಾಷಣವನ್ನು ಕೊನೆಗೊಳಿಸುತ್ತೇನೆ.

ಅದೇ ಉತ್ಸಾಹದಲ್ಲಿ ಮತ್ತೊಮ್ಮೆ ನಿಮಗೆ ಶುಭ ಹಾರೈಸುತ್ತೇನೆ. ಧನ್ಯವಾದಗಳು!

 

ಸೂಚನೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

*****