Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡ್ ರಾಜ್ಯಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಮಾಡಲಾಗಿರುವ ಇತರ ಹಿಂದುಳಿದ ವರ್ಗಗಳ ಕೇಂದ್ರೀಯ ಪಟ್ಟಿಯಲ್ಲಿ ತಿದ್ದುಪಡಿ/ಸೇರ್ಪಡೆಗೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡ್ ರಾಜ್ಯಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಮಾಡಲಾಗಿರುವ ಇತರ ಹಿಂದುಳಿದ ವರ್ಗಗಳ ಕೇಂದ್ರೀಯ ಪಟ್ಟಿಯಲ್ಲಿ ತಿದ್ದುಪಡಿ/ಸೇರ್ಪಡೆಗೆ ತನ್ನ ಸಮ್ಮತಿ ನೀಡಿದೆ.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ(ಎನ್.ಸಿ.ಬಿ.ಸಿ.)ದ ಶಿಫಾರಸಿನ ಮೇರೆಗೆ ಒಟ್ಟು 2479 ಜಾತಿ, ಉಪಜಾತಿ ಮತ್ತು ಅದರ ಸಮಾನಾರ್ಥಕ ಹೆಸರುಗಳು ಇತ್ಯಾದಿಯನ್ನು 25 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳ ಇತರ ಹಿಂದುಳಿದ ವರ್ಗಗಳ ಕೇಂದ್ರೀಯ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಇಂಥ ಅಧಿಸೂಚನೆಯನ್ನು 2016ರ ಸೆಪ್ಟೆಂಬರ್ ವರೆಗೆ ನೀಡಲಾಗಿತ್ತು. ಈ ಮಧ್ಯೆ, ಜಾತಿಗಳು/ಸಮುದಾಯ ಮತ್ತು ಹಾಲಿ ಇರುವ ಓಬಿಸಿಗಳ ಪಟ್ಟಿಯಲ್ಲಿ ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡ್ ರಾಜ್ಯಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡುವಂತೆ ಎನ್.ಸಿ.ಬಿ.ಸಿ. ಪರಿಷ್ಕರಿಸಿತ್ತು. ಆ ಪ್ರಕಾರವಾಗಿ ಎನ್.ಸಿ.ಬಿ.ಸಿ. ಜಮ್ಮು ಮತ್ತು ಕಾಶ್ಮೀರ (15 ಹೊಸ ದಾಖಲೆ, 09 ಸಮಾನಾರ್ಥಕ/ಉಪ ಜಾತಿಗಳು ಮತ್ತು 04 ತಿದ್ದುಪಡಿ) 8 ರಾಜ್ಯಗಳಿಗೆ ಸಂಬಂಧಿಸಿದಂತೆ ಶಿಫಾರಸು ಮಾಡಿದ್ದ ಒಟ್ಟು 28 ಬದಲಾವಣೆಗಳನ್ನು ಅಧಿಸೂಚನೆ ಮಾಡಲಾಗಿದೆ.

ಈ ಬದಲಾವಣೆಯು ಈ ಎಲ್ಲ ಜಾತಿಗಳು/ಸಮುದಾಯಗಳಿಗೆ ಸೇರಿದ ಜನರಿಗೆ ಸರ್ಕಾರಿ ಸೇವೆಗಳಲ್ಲಿ ಮತ್ತು ಹುದ್ದೆಗಳಲ್ಲಿ ಮತ್ತು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಾಲಿ ಇರುವ ನೀತಿಯನ್ವಯ ಮೀಸಲಾತಿ ಪಡೆಯಲು ಅವಕಾಶ ಕಲ್ಪಿಸುತ್ತದೆ. ಅಲ್ಲದೆ ಅವರು ಕೇಂದ್ರ ಸರ್ಕಾರ ಜಾರಿ ಮಾಡಿರುವ ಮತ್ತು ಪ್ರಸ್ತುತ ಇತರ ಹಿಂದುಳಿದ ವರ್ಗಗಳ ಜನರು ಪಡೆಯುತ್ತಿರುವ ವಿವಿಧ ಕಲ್ಯಾಣ ಯೋಜನೆಗಳು, ವಿದ್ಯಾರ್ಥಿ ವೇತನ ಇತ್ಯಾದಿ ಸೌಲಭ್ಯ ಪಡೆಯಲೂ ಅರ್ಹರಾಗಿರುತ್ತಾರೆ.

ಹಿನ್ನೆಲೆ

ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನುಸರಣೆಗಾಗಿ 1993ರ ಎನ್.ಸಿ.ಬಿ.ಸಿ. ಕಾಯಿದೆಯಂತೆ ಎನ್.ಸಿ.ಬಿ.ಸಿ.ಯನ್ನು ಸ್ಥಾಪಿಸಲಾಯಿತು. ಎನ್.ಸಿ.ಬಿ.ಸಿ. ಕಾಯಿದೆ 1993ರ ಸೆಕ್ಷನ್ 9 (ಆಯೋಗದ ಕಾರ್ಯಗಳು) ಈ ಕೆಳಗಿನಂತಿದೆ:

(i) ಆಯೋಗವು ಯಾವುದಾದರೂ ನಾಗರಿಕ ವರ್ಗವನ್ನು ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರಿಸುವಂತೆ ಮನವಿ ಬಂದರೆ ಅದನ್ನು ಪರಿಶೀಲಿಸಬೇಕು ಮತ್ತು ಯಾವುದೇ ಹಿಂದುಳಿದ ವರ್ಗವನ್ನು ಅಂಥ ಪಟ್ಟಿಯಲ್ಲಿ ಅಂಥ ಹೆಚ್ಚುವರಿ ಸೇರ್ಪಡೆ ಅಥವಾ ಕಡಿಮೆ ಸೇರ್ಪಡೆ ಕುರಿತಂತೆ ದೂರುಗಳನ್ನು ಆಲಿಸಬೇಕು ಮತ್ತು ಸೂಕ್ತವೆನಿಸಿದನ್ನು ಕೇಂದ್ರ ಸರ್ಕಾರಕ್ಕೆ ಸಲಹೆ ಸಲ್ಲಿಕೆ ಮಾಡಬೇಕು.

(ii) ಆಯೋಗದ ಸಲಹೆಗಳು ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಮೇಲೆ ಬದ್ಧತೆಯಾಗಿರುತ್ತವೆ.

*****

AKT/VBA/SH