Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂನ ತೈಲಬಾವಿ ಸ್ಫೋಟ ಮತ್ತು ಬೆಂಕಿ ಘಟನೆಯ ಪರಿಸ್ಥಿತಿಯನ್ನು ಪರಿಶೀಲಿಸಿದ ಪ್ರಧಾನಿ


ಅಸ್ಸಾಂನ ತೀನ್ಸುಕಿಯಾ ಜಿಲ್ಲೆಯ ಬಾಗ್ಜನ್ ನಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್ ನ ತೈಲ ಬಾವಿ ಸಂಖ್ಯೆ-5 ರಲ್ಲಿ ಉಂಟಾದ ಸ್ಫೋಟ ಮತ್ತು ಬೆಂಕಿಯ ಘಟನೆಯ ಪರಿಸ್ಥಿತಿಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರಿಶೀಲಿಸಿದರು.

ಪರಿಶೀಲನಾ ಸಭೆಯಲ್ಲಿ ಗೃಹ ಸಚಿವ ಶ್ರೀ ಅಮಿತ್ ಶಾ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೊವಾಲ್, ಇತರ ಕೇಂದ್ರ ಸಚಿವರು ಮತ್ತು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

2020 ರ ಮೇ 27 ರಂದು ಈ ಬಾವಿಯಿಂದ ಅನಿಯಂತ್ರಿತ ಅನಿಲ ಸೋರಿಕೆಯಾಗಲು ಪ್ರಾರಂಭಿಸಿತು. ನಂತರ ಸೋರಿಕೆಯನ್ನು ನಿಯಂತ್ರಿಸಲು ಸಿದ್ಧತೆ ನಡೆಯುತ್ತಿರುವಾಗ, 2020 ರ ಜೂನ್ 9 ರಂದು ಬಾವಿಯಲ್ಲಿ ಬೆಂಕಿ ಹೊತ್ತಿಕೊಂಡಿತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಒಐಎಲ್ ಇಂಡಿಯಾ ಲಿಮಿಟೆಡ್ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಸ್ಥಾಪಿಸಿರುವ ಈ ಪರಿಹಾರ ಶಿಬಿರಗಳಲ್ಲಿ ಸುಮಾರು 9,000 ಜನರು ವಾಸಿಸುತ್ತಿದ್ದಾರೆ. ತಕ್ಷಣದ ಪರಿಹಾರ ಕ್ರಮವಾಗಿ ಜಿಲ್ಲಾಡಳಿತವು ಗುರುತಿಸಿದ 1610 ಕುಟುಂಬಗಳಿಗೆ ತಲಾ 30,000 ರೂ.ಗಳನ್ನು ನೀಡಲಾಗಿದೆ.

ಸಂತ್ರಸ್ತ ಕುಟುಂಬಗಳಿಗೆ ಬೆಂಬಲ, ಪರಿಹಾರ ಮತ್ತು ಪುನರ್ವಸತಿ ಒದಗಿಸಲು ಭಾರತ ಸರ್ಕಾರವು ಸಂಪೂರ್ಣ ಬದ್ಧವಾಗಿದೆ ಮತ್ತು ಈ ದುರದೃಷ್ಟಕರ ಘಟನೆಯ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರದ ಜೊತೆಗಿದೆ ಎಂದು ಪ್ರಧಾನಿಯವರು ಅಸ್ಸಾಂ ಜನರಿಗೆ ಭರವಸೆ ನೀಡಿದರು. ಭವಿಷ್ಯದಲ್ಲಿ ಉಪಯುಕ್ತವಾಗುವಂತೆ ಈ ಘಟನೆಯ ಬಗ್ಗೆ ಅಧ್ಯಯನ ಮಾಡಿ ಅದನ್ನು ದಾಖಲಿಸಬೇಕು ಎಂದು ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ನಿರ್ದೇಶನ ನೀಡಿದರು. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಪ್ಪಿಸಲು ಮತ್ತು ಅವುಗಳು ಸಂಭವಿಸಿದಲ್ಲಿ ಅಂತಹ ವಿಪತ್ತುಗಳನ್ನು ಎದುರಿಸಲು ನಮ್ಮ ಸ್ವಂತ ಸಂಸ್ಥೆಗಳಲ್ಲಿ ಹೆಚ್ಚಿನ ಸಾಮರ್ಥ್ಯ ಮತ್ತು ಪರಿಣತಿಯನ್ನು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.

ಬಾವಿಯಿಂದ ಅನಿಲದ ಹರಿವನ್ನು ನಿಯಂತ್ರಿಸಲು ಮತ್ತು ಅದನ್ನು ಮುಚ್ಚಲು ಭಾರತೀಯ ಮತ್ತು ವಿದೇಶಿ ತಜ್ಞರ ಸಹಾಯದಿಂದ ವಿಸ್ತೃತ ಯೋಜನೆಯನ್ನು ರೂಪಿಸಲಾಗಿದೆ ಎಂದು ಪರಿಶೀಲನಾ ಸಭೆಯಲ್ಲಿ ತಿಳಿಸಲಾಯಿತು. ನಿಗದಿತ ವೇಳಾಪಟ್ಟಿಯಂತೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ ಮತ್ತು ಅಗತ್ಯವಿರುವ ಎಲ್ಲ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರ 2020 ರ ಜುಲೈ 7 ರಂದು ಬಾವಿಯನ್ನು ಮುಚ್ಚಲು ಉದ್ದೇಶಿಸಲಾಗಿದೆ.