Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅರುಣಾಚಲ ಪ್ರದೇಶದಲ್ಲಿ ಗ್ರೀನ್ ಫೀಲ್ಡ್  ವಿಮಾನ ನಿಲ್ದಾಣ ‘ ಡೋನಿ ಪೋಲೊ’ ಮತ್ತು ಇತರ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

ಅರುಣಾಚಲ ಪ್ರದೇಶದಲ್ಲಿ ಗ್ರೀನ್ ಫೀಲ್ಡ್  ವಿಮಾನ ನಿಲ್ದಾಣ ‘ ಡೋನಿ ಪೋಲೊ’ ಮತ್ತು ಇತರ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ


ಜೈ ಹಿಂದ್!

ಜೈ ಹಿಂದ್!

ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!

ಅರುಣಾಚಲ ಪ್ರದೇಶದ ರಾಜ್ಯಪಾಲರಾದ ಶ್ರೀ ಬಿ.ಡಿ.ಮಿಶ್ರಾ ಜೀ, ಅರುಣಾಚಲ ಪ್ರದೇಶದ ಯುವ ಮತ್ತು ಜನಪ್ರಿಯ ಮುಖ್ಯಮಂತ್ರಿ ಶ್ರೀ ಪೆಮಾ ಖಂಡು ಜೀ, ನನ್ನ ಸಂಪುಟ ಸಹೋದ್ಯೋಗಿ ಶ್ರೀ ಕಿರಣ್ ರಿಜಿಜು ಜೀ, ಉಪ ಮುಖ್ಯಮಂತ್ರಿ ಶ್ರೀ ಚೌನಾ ಮೇನ್ ಜೀ, ಗೌರವಾನ್ವಿತ ಸಂಸದರು, ಶಾಸಕರು, ಮೇಯರ್, ಇತರ ಎಲ್ಲಾ ಗಣ್ಯರು ಮತ್ತು ಅರುಣಾಚಲ ಪ್ರದೇಶದ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ!

ನಾನು ಅರುಣಾಚಲ ಪ್ರದೇಶಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ನಾನು ಬಂದಾಗಲೆಲ್ಲಾ, ನಾನು ಹೊಸ ಶಕ್ತಿ ಮತ್ತು ಹೊಸ ಹುರುಪಿನೊಂದಿಗೆ ಹೊರಡುತ್ತೇನೆ. ನಾನು ಅರುಣಾಚಲ ಪ್ರದೇಶಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದೆ ಎಂಬ ಲೆಕ್ಕವನ್ನು ಮರೆತಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ನಾನು ಬೆಳಗ್ಗೆ 9.30 ಕ್ಕೆ ಇಂತಹ ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದ್ದೇನೆ. ಅರುಣಾಚಲದ ಪರ್ವತಗಳಿಂದ ಇಲ್ಲಿ ಸೇರುವ ಜನರು ನಿಮ್ಮ ಜೀವನದಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಾಮುಖ್ಯವನ್ನು ತೋರುತ್ತದೆ. ಅದಕ್ಕಾಗಿಯೇ ನೀವೆಲ್ಲರೂ ನಿಮ್ಮ ಆಶೀರ್ವಾದವನ್ನು ನೀಡಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದೀರಿ.

ಸಹೋದರ ಸಹೋದರಿಯರೇ,

ನಾನು ಅರುಣಾಚಲದ ಜನರ ಆತ್ಮೀಯತೆ ಮತ್ತು ವಾತ್ಸಲ್ಯವನ್ನು ಒತ್ತಿಹೇಳಬೇಕು. ಅರುಣಾಚಲ ಪ್ರದೇಶದ ಜನರು ಸದಾ ತಮ್ಮ ಮುಖದಲ್ಲಿ ದೊಡ್ಡ ನಗುವನ್ನು ಹೊಂದಿರುತ್ತಾರೆ. ಅವರು ಎಂದಿಗೂ ನಿರಾಶಾವಾದ ಅಥವಾ ಹತಾಶೆಯನ್ನು ತೋರಿಸುವುದಿಲ್ಲ. ಮತ್ತು ಅವರು ತಮ್ಮ ಶಿಸ್ತಿಗೆ ಹೆಸರುವಾಸಿಯಾಗಿದ್ದಾರೆ. ಅವರು ಗಡಿಗಳಲ್ಲಿ ಶಿಸ್ತು ಎಂದರೆ ಏನು ಎಂಬುದಕ್ಕೆ ಪರಿಪೂರ್ಣ ಉದಾಹರಣೆಯನ್ನು ನೀಡಿದರು. ಅರುಣಾಚಲ ಪ್ರದೇಶದ ಪ್ರತಿಯೊಂದು ಮನೆಯಲ್ಲಿ, ಪ್ರತಿ ಕುಟುಂಬದಲ್ಲಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಇದು ಕಂಡುಬರುತ್ತದೆ.

ನಮ್ಮ ಮುಖ್ಯಮಂತ್ರಿ ಪೆಮಾ ಜೀ ಅವರ ನಾಯಕತ್ವದಲ್ಲಿ ಈ ಡಬಲ್ ಇಂಜಿನ್ ಸರ್ಕಾರದ ಕಠಿಣ ಪರಿಶ್ರಮ ಮತ್ತು ಅಭಿವೃದ್ಧಿಯ ಬದ್ಧತೆಯು ಇಂದು ಅರುಣಾಚಲವನ್ನು ಈ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ನಾನು ಪೆಮಾ ಜೀ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ. ನಿಮಗೆ ನೆನಪಿರಬಹುದು; ಈ ವಿಮಾನ ನಿಲ್ದಾಣಕ್ಕೆ 2019ರ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದು ನನ್ನ ಅದೃಷ್ಟ ಎಂದು ಪೆಮಾ ಜೀ ಕೂಡ ಉಲ್ಲೇಖಿಸಿದ್ದಾರೆ. ಮತ್ತು ನಮ್ಮ ಕೆಲಸದ ಸಂಸ್ಕೃತಿಯಲ್ಲಿ, ನಾವು ಶಂಕುಸ್ಥಾಪನೆ ಮಾಡಿದ ಪ್ರತಿಯೊಂದು ಯೋಜನೆಯನ್ನು ನಾವು ಉದ್ಘಾಟಿಸುತ್ತೇವೆ ಎಂದು ನಿಮಗೆ ತಿಳಿದಿದೆ. ಯೋಜನೆಗಳನ್ನು ಅತಂತ್ರ ಸ್ಥಿತಿಯಲ್ಲಿಡುವ ಅವಧಿ ಮುಗಿದಿದೆ. ಆದರೆ ನಾನು ಇನ್ನೂ ಒಂದು ವಿಷಯವನ್ನು ಪ್ರಸ್ತಾಪಿಸುತ್ತೇನೆ. ನಾನು 2019ರ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದೆ. ಮೇ 2019 ರಲ್ಲಿ ಚುನಾವಣೆಗಳು ನಿಗದಿಯಾಗಿದ್ದವು. ಈ ಎಲ್ಲ ರಾಜಕೀಯ ವಕ್ತಾರರು ಮತ್ತು ವ್ಯಾಖ್ಯಾನಕಾರರು, ಹಳೆಯ ಮನಸ್ಥಿತಿಯೊಂದಿಗೆ ವಿಮಾನ ನಿಲ್ದಾಣವು ಎಂದಿಗೂ ಬರುವುದಿಲ್ಲ ಎಂದು ಕೂಗಲು ಮತ್ತು ಬರೆಯಲು ಪ್ರಾರಂಭಿಸಿದ್ದರು. ಚುನಾವಣೆಗಳು ಸಮೀಪಿಸುತ್ತಿವೆ ಮತ್ತು ಅದಕ್ಕಾಗಿಯೇ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಲು ಇಲ್ಲಿಗೆ ಬಂದಿದ್ದಾರೆ ಎಂದಿದ್ದರು. ಅವರು ಚುನಾವಣೆಗಳನ್ನು ಎಲ್ಲದಕ್ಕೂ ಕಾರಣವೆಂದು ನೋಡುತ್ತಾರೆ. ಪ್ರತಿಯೊಂದು ಒಳ್ಳೆಯ ಕೆಲಸವನ್ನು ಚುನಾವಣೆಯ ಬಣ್ಣಗಳಲ್ಲಿ ಚಿತ್ರಿಸುವುದು ಫ್ಯಾಶನ್ ಆಗಿದೆ.

ಇಂದು ಈ ವಿಮಾನ ನಿಲ್ದಾಣದ ಉದ್ಘಾಟನೆಯು ಈ ಎಲ್ಲ ಜನರಿಗೆ ತಕ್ಕ ಪ್ರತ್ಯುತ್ತರವಾಗಿದೆ, ಅವರ ಮುಖದ ಮೇಲೆ ಕಪಾಳಮೋಕ್ಷವಾಗಿದೆ. ಮತ್ತು ಈ ರಾಜಕೀಯ ವ್ಯಾಖ್ಯಾನಕಾರರು ತಮ್ಮ ಹಳೆಯ ಆಲೋಚನಾ ವಿಧಾನವನ್ನು ಬದಲಾಯಿಸಬೇಕೆಂದು ನಾನು ವಿನಂತಿಸುತ್ತೇನೆ. ಈ ದೇಶವು ಹೊಸ ಹುರುಪು ಮತ್ತು ಉತ್ಸಾಹದಿಂದ ಮುನ್ನಡೆಯುತ್ತಿದೆ. ಆದ್ದರಿಂದ, ಅದನ್ನು ರಾಜಕೀಯದ ಮಾಪಕಗಳೊಂದಿಗೆ ತೂಗುವುದನ್ನು ನಿಲ್ಲಿಸಿ. ಇದನ್ನು ಚುನಾವಣಾ ಗಿಮಿಕ್ ಎಂದು ಕರೆಯುತ್ತಿದ್ದ ಜನರು ಮೂರು ವರ್ಷಗಳಲ್ಲಿ ನಮ್ಮ ವಿಮಾನ ನಿಲ್ದಾಣವು ಈ ಭವ್ಯ ಮತ್ತು ಆಧುನಿಕ ರೂಪದಲ್ಲಿ ರೂಪುಗೊಳ್ಳುವುದನ್ನು ನೋಡುತ್ತಿದ್ದಾರೆ. ಮತ್ತು ಲಕ್ಷಾಂತರ ಜನರ ಸಮ್ಮುಖದಲ್ಲಿ ನಾವು ಅದನ್ನು ಉದ್ಘಾಟಿಸುತ್ತಿರುವುದು ನನ್ನ ಅದೃಷ್ಟ. ಇಂದು ಇಡೀ ಅರುಣಾಚಲವು ನಮ್ಮೊಂದಿಗೆ ಆನ್ ಲೈನ್ ನಲ್ಲಿ ಸಂಪರ್ಕ ಹೊಂದಿದೆ. ಇದು ಕೂಡ ಹೆಮ್ಮೆಯ ವಿಷಯವಾಗಿದೆ.

ರಾಜ್ಯದ ಯಾವುದೇ ಮೂಲೆಯಲ್ಲಿ ಯಾವುದೇ ಚುನಾವಣೆ ಇಲ್ಲ. ಆದರೂ ಉದ್ಘಾಟನೆ ನಡೆಯುತ್ತಿದೆ. ಏಕೆಂದರೆ ಈ ಸರ್ಕಾರದ ಆದ್ಯತೆಯು ದೇಶದ ಅಭಿವೃದ್ಧಿ ಮತ್ತು ದೇಶದ ಜನರ ಅಭಿವೃದ್ಧಿಯಾಗಿದೆ. ವರ್ಷದಲ್ಲಿ 365 ದಿನಗಳು ಮತ್ತು ದಿನದ 24 ಗಂಟೆಗಳ ಕಾಲ ನಾವು ದೇಶದ ಅಭಿವೃದ್ಧಿಗಾಗಿ ಮಾತ್ರ ಕೆಲಸ ಮಾಡುತ್ತೇವೆ. ಮತ್ತು ನೀವು ನೋಡಿ, ಈಗ ನಾನು ಅರುಣಾಚಲದಲ್ಲಿದ್ದೇನೆ, ಅಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆ, ಸಂಜೆ ನಾನು ಸೂರ್ಯ ಮುಳುಗುವ ದಮನ್ ನಲ್ಲಿರುತ್ತೇನೆ. ಈ ನಡುವೆ ನಾನು ಕಾಶಿಗೂ ಭೇಟಿ ನೀಡಲಿದ್ದೇನೆ. ನಾವು ಒಂದೇ ಒಂದು ಕನಸಿನೊಂದಿಗೆ ಮನಃಪೂರ್ವಕವಾಗಿ ಕೆಲಸ ಮಾಡುತ್ತಿದ್ದೇವೆ – ನನ್ನ ದೇಶವು ಮುಂದೆ ಸಾಗಬೇಕು. ನಾವು ಎಂದಿಗೂ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದಿಲ್ಲ. ನಮ್ಮ ಕನಸು ಕೇವಲ ಮಾ ಭಾರತಿ, ಭಾರತ ಮತ್ತು 130 ಕೋಟಿ ನಾಗರಿಕರು ಮಾತ್ರ.

ಇಂದು, ಈ ವಿಮಾನ ನಿಲ್ದಾಣದ ಜತೆಗೆ, 600 ಮೆಗಾವ್ಯಾಟ್ ನ ಕಮೆಂಗ್ ಜಲವಿದ್ಯುತ್ ಯೋಜನೆಯನ್ನು ಸಹ ಉದ್ಘಾಟಿಸಲಾಗಿದೆ. ಇದು ಸ್ವತಃ ಒಂದು ದೊಡ್ಡ ಸಾಧನೆಯೂ ಆಗಿದೆ. ಅಭಿವೃದ್ಧಿಯ ‘ ಹಾರಾಟ ‘ ಮತ್ತು ಅಭಿವೃದ್ಧಿಯ ‘ ಶಕ್ತಿ ‘ ಯ ಈ ಸಂಯೋಜನೆಯು ಅರುಣಾಚಲವನ್ನು ಹೊಸ ವೇಗದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಸಾಧನೆಗಾಗಿ, ಅರುಣಾಚಲ ಪ್ರದೇಶ ಮತ್ತು ಎಲ್ಲಾ ಈಶಾನ್ಯ ರಾಜ್ಯಗಳ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ. ನಾನು ಎಲ್ಲರಿಗೂ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಸ್ವಾತಂತ್ರ್ಯದ ನಂತರ, ಈಶಾನ್ಯವು ಸಂಪೂರ್ಣವಾಗಿ ವಿಭಿನ್ನ ಯುಗಕ್ಕೆ ಸಾಕ್ಷಿಯಾಗಿದೆ. ದಶಕಗಳಿಂದ, ಈ ಪ್ರದೇಶವು ನಿರ್ಲಕ್ಷ್ಯ ಮತ್ತು ನಿರಾಸಕ್ತಿಯ ಬಲಿಪಶುವಾಗಿದೆ. ಆ ಸಮಯದಲ್ಲಿ, ದೆಹಲಿಯಲ್ಲಿ ನೀತಿಗಳನ್ನು ರೂಪಿಸಿದ ಜನರು ಇಲ್ಲಿ ಚುನಾವಣೆಗಳನ್ನು ಗೆಲ್ಲುವ ಗುರಿಯನ್ನು ಮಾತ್ರ ಹೊಂದಿದ್ದರು. ಈ ಪರಿಸ್ಥಿತಿಯು ಹಲವಾರು ದಶಕಗಳವರೆಗೆ ಮುಂದುವರಿಯಿತು ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಅಟಲ್ ಜೀ ಅವರ ಸರ್ಕಾರ ರಚನೆಯಾದಾಗ, ಮೊದಲ ಬಾರಿಗೆ ಪರಿಸ್ಥಿತಿಯನ್ನು ಬದಲಾಯಿಸುವ ಪ್ರಯತ್ನವನ್ನು ಮಾಡಲಾಯಿತು. ಈಶಾನ್ಯದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಿದ ಮೊದಲ ಸರ್ಕಾರ ಇದಾಗಿದೆ.

ಆದರೆ ಅವರ ನಂತರದ ಸರ್ಕಾರವು ಆ ವೇಗವನ್ನು ಮುಂದಕ್ಕೆ ಒಯ್ಯಲಿಲ್ಲ. 2014 ರ ನಂತರ ನೀವು ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ ಬದಲಾವಣೆಯ ಹೊಸ ಹಂತವು ಪ್ರಾರಂಭವಾಯಿತು. ಹಿಂದಿನ ಸರ್ಕಾರಗಳು ಅರುಣಾಚಲ ಪ್ರದೇಶವು ದೂರದ ಸ್ಥಳ ಎಂದು ನಂಬುತ್ತಿದ್ದವು. ದೂರದ ಗಡಿ ಪ್ರದೇಶಗಳಲ್ಲಿನ ಸ್ಥಳಗಳನ್ನು ಈ ಮೊದಲು ಕೊನೆಯ ಗ್ರಾಮಗಳೆಂದು ಪರಿಗಣಿಸಲಾಗಿತ್ತು. ಆದರೆ ನಮ್ಮ ಸರ್ಕಾರವು ಈ ಸ್ಥಳಗಳನ್ನು ಕೊನೆಯ ಹಳ್ಳಿಗಳಲ್ಲ, ಬದಲಿಗೆ ದೇಶದ ಮೊದಲ ಹಳ್ಳಿಗಳೆಂದು ಗುರುತಿಸಿದೆ. ಇದರ ಪರಿಣಾಮವಾಗಿ, ಈಶಾನ್ಯದ ಅಭಿವೃದ್ಧಿಯು ದೇಶದ ಆದ್ಯತೆಯಾಯಿತು.
ಈಗ ಅದು ಸಂಸ್ಕೃತಿ ಅಥವಾ ಕೃಷಿ, ವಾಣಿಜ್ಯ ಅಥವಾ ಸಂಪರ್ಕವಾಗಿರಲಿ – ಈಶಾನ್ಯವು ಮೊದಲ ಆದ್ಯತೆಯನ್ನು ಪಡೆಯುತ್ತದೆ, ಕೊನೆಯದಲ್ಲ. ಅದು ವ್ಯಾಪಾರ ಅಥವಾ ಪ್ರವಾಸೋದ್ಯಮ, ದೂರಸಂಪರ್ಕ ಅಥವಾ ಜವಳಿ – ಈಶಾನ್ಯವು ಮೊದಲ ಆದ್ಯತೆಯನ್ನು ಪಡೆಯುತ್ತದೆ. ಡ್ರೋನ್ ತಂತ್ರಜ್ಞಾನದಿಂದ ಹಿಡಿದು ಕೃಷಿ ಉಡಾನ್ ವರೆಗೆ, ವಿಮಾನ ನಿಲ್ದಾಣಗಳಿಂದ ಬಂದರುಗಳ ಸಂಪರ್ಕದವರೆಗೆ ಈಶಾನ್ಯವು ಈಗ ದೇಶದ ಆದ್ಯತೆಯಾಗಿದೆ.

ಅದು ಭಾರತದ ಅತಿ ಉದ್ದದ ಸೇತುವೆಯಾಗಲಿ ಅಥವಾ ಅತಿ ಉದ್ದದ ರೈಲು ಮಾರ್ಗವಾಗಲಿ, ರೈಲು ಮಾರ್ಗವನ್ನು ನಿರ್ಮಿಸಲಿ ಅಥವಾ ದಾಖಲೆಯ ವೇಗದಲ್ಲಿ ಹೆದ್ದಾರಿಯನ್ನು ನಿರ್ಮಿಸಲಿ – ಈಶಾನ್ಯವು ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ಇದರ ಪರಿಣಾಮವಾಗಿ, ಇಂದು ಈಶಾನ್ಯದಲ್ಲಿ ಭರವಸೆ ಮತ್ತು ಅವಕಾಶಗಳ ಹೊಸ ಯುಗವು ಪ್ರಾರಂಭವಾಗಿದೆ.

ಇಂದಿನ ಘಟನೆಯು ನವ ಭಾರತದ ಈ ವಿಧಾನಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ದೋನಿ-ಪೋಲೊ ವಿಮಾನ ನಿಲ್ದಾಣ ಅರುಣಾಚಲ ಪ್ರದೇಶದ ನಾಲ್ಕನೇ ಕಾರ್ಯಾಚರಣೆ ವಿಮಾನ ನಿಲ್ದಾಣವಾಗಿದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ, ಇಡೀ ಈಶಾನ್ಯದಲ್ಲಿ ಕೇವಲ 9 ವಿಮಾನ ನಿಲ್ದಾಣಗಳು ಮಾತ್ರ ಇದ್ದವು. ಆದರೆ ನಮ್ಮ ಸರ್ಕಾರ ಕೇವಲ ಎಂಟು ವರ್ಷಗಳಲ್ಲಿ ಏಳು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. ಸ್ವಾತಂತ್ರ್ಯದ 75 ವರ್ಷಗಳ ನಂತರ ಈಗ ವಾಯು ಸಂಪರ್ಕದೊಂದಿಗೆ ಸಂಪರ್ಕ ಹೊಂದಿರುವ ಅಂತಹ ಅನೇಕ ಪ್ರದೇಶಗಳು ಇಲ್ಲಿವೆ. ಪರಿಣಾಮವಾಗಿ, ಈಗ ಈಶಾನ್ಯಕ್ಕೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಸಂಖ್ಯೆ ದುಪ್ಪಟ್ಟಾಗಿದೆ.

ಸ್ನೇಹಿತರೇ,

ಇಟಾನಗರದ ಈ ದೋನಿ-ಪೋಲೊ ವಿಮಾನ ನಿಲ್ದಾಣವು ಅರುಣಾಚಲ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಮತ್ತು ದೋನಿ ಎಂದರೆ ಸೂರ್ಯ ಮತ್ತು ಪೋಲೊ ಎಂದರೆ ಚಂದ್ರ ಎಂದು ಪೆಮಾ ಜೀ ನನಗೆ ಹೇಳುತ್ತಿದ್ದರು. ಮತ್ತು ‘ ಅರುಣಾಚಲದ ದೋನಿ-ಪೋಲೊ ಸಂಸ್ಕೃತಿ ‘ ಯನ್ನು ನಮ್ಮ ಅಭಿವೃದ್ಧಿಯ ಪ್ರಯಾಣಕ್ಕೂ ಒಂದು ಪಾಠವಾಗಿ ನಾನು ನೋಡುತ್ತೇನೆ. ಬೆಳಕು ಒಂದೇ, ಆದರೆ ಸೂರ್ಯನ ಕಿರಣಗಳು ಮತ್ತು ಚಂದ್ರನ ತಂಪು ಎರಡೂ ತಮ್ಮದೇ ಆದ ಪ್ರಾಮುಖ್ಯ ಮತ್ತು ಶಕ್ತಿಯನ್ನು ಹೊಂದಿವೆ. ಅಂತೆಯೇ, ನಾವು ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ಅದು ಪ್ರಮುಖ ಅಭಿವೃದ್ಧಿ ಯೋಜನೆಯಾಗಿರಲಿ ಅಥವಾ ಬಡವರಿಗಾಗಿ ಸಾರ್ವಜನಿಕ ಕಲ್ಯಾಣ ಯೋಜನೆಯಾಗಿರಲಿ, ಎರಡೂ ಅಭಿವೃದ್ಧಿಯ ಪ್ರಮುಖ ಅಂಶಗಳಾಗಿವೆ.
ಇಂದು, ವಿಮಾನ ನಿಲ್ದಾಣದಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಮತ್ತು ಬಡವರಿಗೆ ಸೌಲಭ್ಯಗಳಿಗೆ ಸಮಾನ ಪ್ರಾಮುಖ್ಯವನ್ನು ನೀಡಲಾಗಿದೆ. ಇಂದು ವಿಮಾನ ನಿಲ್ದಾಣವನ್ನು ನಿರ್ಮಿಸಿದರೆ, ಸಾಮಾನ್ಯ ಜನರು ಅದರ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು  ‘ ಉಡಾನ್ ‘ ಯೋಜನೆಯ ಕೆಲಸವನ್ನು ಸಹ ಮಾಡಲಾಗುತ್ತದೆ. ವಿಮಾನ ಸೇವೆಗಳು ಪ್ರಾರಂಭವಾದ ನಂತರ, ಪ್ರವಾಸಿಗರ ಸಂಖ್ಯೆಯನ್ನು ಹೇಗೆ ಹೆಚ್ಚಿಸಬಹುದು ಅಥವಾ ಸಣ್ಣ ವ್ಯಾಪಾರಿಗಳು, ಕಿರಾಣಿ ವರ್ತಕರು ಮತ್ತು ಟ್ಯಾಕ್ಸಿ ಚಾಲಕರು ಅದರಿಂದ ಹೇಗೆ ಪ್ರಯೋಜನಗಳನ್ನು ಪಡೆಯಬಹುದು ಎಂಬಂತಹ ವಿಷಯಗಳ ಬಗ್ಗೆಯೂ ನಾವು ಕೆಲಸ ಮಾಡುತ್ತೇವೆ.

ಸ್ನೇಹಿತರೇ,

ಇಂದು ಅರುಣಾಚಲ ಪ್ರದೇಶದಲ್ಲಿ, ರಸ್ತೆಗಳು ಮತ್ತು ಹೆದ್ದಾರಿಗಳನ್ನು ಗಡಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ಅತ್ಯಂತ ಕಠಿಣ ಭೂಪ್ರದೇಶಗಳಲ್ಲಿಯೂ ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರವು ರಸ್ತೆಗಳ ನಿರ್ಮಾಣಕ್ಕಾಗಿ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ಹೆಚ್ಚು ಖರ್ಚು ಮಾಡಲಿದೆ. ಅಂತಹ ಉತ್ತಮ ಅಭಿವೃದ್ಧಿ ಹೊಂದಿದ ಮೂಲಸೌಕರ್ಯಗಳೊಂದಿಗೆ, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸಹ ಈ ಸ್ಥಳಕ್ಕೆ ಆಗಮಿಸುತ್ತಾರೆ. ಪ್ರಕೃತಿಯು ಅರುಣಾಚಲದ ಪ್ರತಿಯೊಂದು ಮೂಲೆಯನ್ನೂ ಸುಂದರಗೊಳಿಸಿದೆ. ಪ್ರತಿಯೊಂದು ಹಳ್ಳಿಯಲ್ಲೂ ಪ್ರವಾಸೋದ್ಯಮ ವಿಸ್ತರಣೆಯ ವಿಪುಲ ಅವಕಾಶಗಳಿವೆ. ಹೋಂ ಸ್ಟೇಗಳು ಮತ್ತು ಸ್ಥಳೀಯ ಉತ್ಪನ್ನಗಳ ಮೂಲಕ ಪ್ರತಿ ಕುಟುಂಬದ ಆದಾಯವು ಹೆಚ್ಚಾಗಬಹುದು. ಅದಕ್ಕಾಗಿ, ಪ್ರತಿ ಹಳ್ಳಿಯನ್ನು ತಲುಪುವ ವ್ಯವಸ್ಥೆ ಇರಬೇಕು. ಅದಕ್ಕಾಗಿಯೇ ಇಂದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅರುಣಾಚಲ ಪ್ರದೇಶದ ಶೇಕಡಾ 85 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ.

ಸ್ನೇಹಿತರೇ,

ವಿಮಾನ ನಿಲ್ದಾಣ ಮತ್ತು ಉತ್ತಮ ಮೂಲಸೌಕರ್ಯ ಸೌಲಭ್ಯಗಳ ನಿರ್ಮಾಣದ ನಂತರ, ಅರುಣಾಚಲದಲ್ಲಿ ಸರಕು ಸೌಲಭ್ಯಗಳಿಗೆ ದೊಡ್ಡ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗುವುದು. ಇದರೊಂದಿಗೆ, ಇಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಅರುಣಾಚಲದ ಹೊರಗಿನ ದೊಡ್ಡ ಮಾರುಕಟ್ಟೆಗಳಲ್ಲಿ ಸುಲಭವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಅವರು ಈಗಿರುವುದಕ್ಕಿಂತ ಹಲವಾರು ಪಟ್ಟು ಹೆಚ್ಚು ಹಣವನ್ನು ಗಳಿಸುತ್ತಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಅಡಿಯಲ್ಲಿ ಅರುಣಾಚಲ ಪ್ರದೇಶದ ರೈತರು ಸಹ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಸ್ನೇಹಿತರೇ,

ಬಿದಿರು ಕೃಷಿಯು ನಮ್ಮ ಸರ್ಕಾರವು ಈಶಾನ್ಯಕ್ಕಾಗಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಬಿದಿರು ಇಲ್ಲಿನ ಜೀವನಶೈಲಿಯ ಪ್ರಮುಖ ಭಾಗವಾಗಿದೆ. ಇಂದು ಬಿದಿರಿನ ಉತ್ಪನ್ನಗಳು ದೇಶ ಮತ್ತು ಪ್ರಪಂಚದಾದ್ಯಂತ ಜನಪ್ರಿಯವಾಗುತ್ತಿವೆ. ಆದರೆ ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ, ಬಿದಿರನ್ನು ಕತ್ತರಿಸಲು ಎಷ್ಟು ಕಾನೂನು ನಿರ್ಬಂಧಗಳಿದ್ದವು ಎಂದರೆ ಅದು ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ಮತ್ತು ನಮ್ಮ ಈಶಾನ್ಯ ಪ್ರದೇಶದ ಜನರ ಜೀವನದಲ್ಲಿ ಅಡ್ಡಿಯಾಗಿತ್ತು. ಆದ್ದರಿಂದ, ನಾವು ಆ ಕಾನೂನನ್ನು ಬದಲಾಯಿಸಿದ್ದೇವೆ. ಈಗ ನೀವು ಬಿದಿರನ್ನು ಬೆಳೆಯಬಹುದು, ಬಿದಿರನ್ನು ಕತ್ತರಿಸಬಹುದು, ಬಿದಿರನ್ನು ಮಾರಾಟ ಮಾಡಬಹುದು, ಬಿದಿರಿಗೆ ಮೌಲ್ಯವನ್ನು ಸೇರಿಸಬಹುದು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರವನ್ನು ನಡೆಸಬಹುದು. ನಾವು ಬೆಳೆಗಳನ್ನು ಬೆಳೆಯುವಂತೆ, ನಾವು ಬಿದಿರನ್ನು ಸಹ ಬೆಳೆಯಬಹುದು.

ಸಹೋದರ ಮತ್ತು ಸಹೋದರಿಯರೇ,

ಬಡವರು ಜೀವನದ ಮೂಲಭೂತ ಕಾಳಜಿಗಳಿಂದ ಮುಕ್ತರಾದ ಕೂಡಲೇ, ಅವರು ತಮಗಾಗಿ ಮತ್ತು ದೇಶಕ್ಕಾಗಿ ಅಭಿವೃದ್ಧಿಯ ಹೊಸ ಆಯಾಮಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತಾರೆ. ಇಂದು ದೇಶದ ಆದ್ಯತೆಯೆಂದರೆ ಕಡುಬಡವರು ನಿರ್ಲಕ್ಷ್ಯ ಮತ್ತು ದುಃಖದಿಂದ ಹೊರಬಂದು ಗೌರವಯುತ ಜೀವನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು. ಪರ್ವತಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಯಾವಾಗಲೂ ಒಂದು ಸಮಸ್ಯೆಯಾಗಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಈಗ, ಉತ್ತಮ ಆರೋಗ್ಯ ಸೌಲಭ್ಯಗಳ ಜೊತೆಗೆ, ಆಯುಷ್ಮಾನ್ ಭಾರತ್ ಯೋಜನೆಯಡಿ ತಲಾ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪ್ರತಿಯೊಬ್ಬ ಬಡವರಿಗೆ ಪಕ್ಕಾ ಮನೆ ನೀಡಲಾಗುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿ, ಕೇಂದ್ರ ಸರ್ಕಾರವು 500 ಕೋಟಿ ರೂ.ಗಳನ್ನು ಖರ್ಚು ಮಾಡುವ ಮೂಲಕ ಏಕಲವ್ಯ ಮಾದರಿ ಶಾಲೆಗಳನ್ನು ತೆರೆಯುತ್ತಿದೆ, ಇದರಿಂದ ಯಾವುದೇ ಬುಡಕಟ್ಟು ಮಗು ಶಿಕ್ಷಣದಲ್ಲಿ ಹಿಂದೆ ಉಳಿಯುವುದಿಲ್ಲ.

ಕೆಲವು ಕಾರಣಗಳಿಂದಾಗಿ ಹಿಂಸಾಚಾರದ ಹಾದಿಗೆ ವಿಮುಖರಾದ ಯುವಕರನ್ನು ಪ್ರತ್ಯೇಕ ನೀತಿಯ ಮೂಲಕ ಮತ್ತೆ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಅವರಿಗಾಗಿ ಪ್ರತ್ಯೇಕ ನಿಧಿಯನ್ನು ರಚಿಸಲಾಗಿದೆ. ಸ್ಟಾರ್ಟ್ಅಪ್ ಇಂಡಿಯಾದ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು, ಅರುಣಾಚಲ ಪ್ರದೇಶವು ಅರುಣಾಚಲ ಸ್ಟಾರ್ಟ್ಅಪ್ ನೀತಿಯ ಮೂಲಕ ಪೈಪೋಟಿ ನಡೆಸುತ್ತಿದೆ. ಅಂದರೆ, ನಮ್ಮ ಶಾಶ್ವತ ಅಭಿವೃದ್ಧಿಯ ಪ್ರವಾಹವು ಹಳ್ಳಿಗಳು, ಬಡವರು, ಯುವಕರು ಮತ್ತು ಮಹಿಳೆಯರನ್ನು ತಲುಪುತ್ತಿದೆ ಮತ್ತು ಇಂದು ಅವರ ಶಕ್ತಿಯಾಗುತ್ತಿದೆ.

ಸ್ನೇಹಿತರೇ,

2014 ರ ನಂತರ, ದೇಶವು ಪ್ರತಿ ಹಳ್ಳಿಗೂ ವಿದ್ಯುತ್ ಒದಗಿಸುವ ಅಭಿಯಾನವನ್ನು ಪ್ರಾರಂಭಿಸಿತು. ಅರುಣಾಚಲ ಪ್ರದೇಶದ ಗ್ರಾಮಗಳು ಸಹ ಈ ಅಭಿಯಾನದಿಂದ ಸಾಕಷ್ಟು ಪ್ರಯೋಜನ ಪಡೆದಿವೆ. ಸ್ವಾತಂತ್ರ್ಯಾನಂತರ ಮೊಟ್ಟಮೊದಲ ಬಾರಿಗೆ ವಿದ್ಯುತ್ ಸಂಪರ್ಕಕ್ಕೆ ಬಂದ ಇಂತಹ ಅನೇಕ ಹಳ್ಳಿಗಳು ಇಲ್ಲಿದ್ದವು. ತದನಂತರ, ಕೇಂದ್ರ ಸರ್ಕಾರವು ಸೌಭಾಗ್ಯ ಯೋಜನೆಯಡಿ ಪ್ರತಿ ಮನೆಯನ್ನು ವಿದ್ಯುತ್ ನೊಂದಿಗೆ ಸಂಪರ್ಕಿಸುವ ಅಭಿಯಾನವನ್ನು ಪ್ರಾರಂಭಿಸಿತು. ಅರುಣಾಚಲದಲ್ಲಿಯೂ ಸಹ ಸಾವಿರಾರು ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು. ಮತ್ತು ವಿದ್ಯುತ್ ಇಲ್ಲಿನ ಮನೆಗಳನ್ನು ತಲುಪಿದಾಗ, ಅದು ಮನೆಗಳನ್ನು ಮಾತ್ರವಲ್ಲದೆ ಇಲ್ಲಿನ ಜನರ ಜೀವನವನ್ನು ಸಹ ಬೆಳಗಿಸಿತು.

ಸಹೋದರ ಮತ್ತು ಸಹೋದರಿಯರೇ,

ಅರುಣಾಚಲ ಪ್ರದೇಶದ ಪ್ರತಿಯೊಂದು ಹಳ್ಳಿ ಮತ್ತು ಪ್ರತಿ ಮನೆಗೂ ಅಭಿವೃದ್ಧಿಯ ಪ್ರಯಾಣವನ್ನು ಕೊಂಡೊಯ್ಯುವ ಧ್ಯೇಯದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಗಡಿ ಗ್ರಾಮಗಳಿಗೆ ‘ ವೈಬ್ರೆಂಟ್ ಬಾರ್ಡರ್ ವಿಲೇಜ್ ‘ ಎಂಬ ಸ್ಥಾನಮಾನವನ್ನು ನೀಡುವ ಮೂಲಕ ಅವುಗಳನ್ನು ಸಶಕ್ತಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ಗಡಿಗೆ ಹೊಂದಿಕೊಂಡಿರುವ ಪ್ರತಿಯೊಂದು ಹಳ್ಳಿಯಲ್ಲೂ ಸಾಧ್ಯತೆಗಳ ಹೊಸ ಬಾಗಿಲುಗಳು ತೆರೆದಾಗ, ಸಮೃದ್ಧಿ ತಾನಾಗಿಯೇ ಪ್ರಾರಂಭವಾಗುತ್ತದೆ.

ವೈಬ್ರೆಂಟ್ ಬಾರ್ಡರ್ ವಿಲೇಜ್ ಕಾರ್ಯಕ್ರಮದ ಅಡಿಯಲ್ಲಿ, ಗಡಿ ಗ್ರಾಮಗಳಿಂದ ವಲಸೆಯನ್ನು ನಿಲ್ಲಿಸಲು ಮತ್ತು ಅಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೆಲಸವು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಗಡಿ ಪ್ರದೇಶಗಳ ಯುವಕರನ್ನು ಎನ್ ಸಿಸಿಯೊಂದಿಗೆ ಸಂಪರ್ಕಿಸಲು ಸರ್ಕಾರವು ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಎನ್ ಸಿಸಿಯೊಂದಿಗೆ ಗಡಿಯುದ್ದಕ್ಕೂ ಇರುವ ಹಳ್ಳಿಗಳಿಂದ ಯುವಕರ ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಎನ್ ಸಿಸಿಗೆ ಸೇರುವ ಈ ಗ್ರಾಮಗಳ ಮಕ್ಕಳು ಸೇನಾಧಿಕಾರಿಗಳಿಂದ ತರಬೇತಿ ಪಡೆಯುತ್ತಾರೆ. ಇದು ಯುವಕರ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುವುದಲ್ಲದೆ, ಅವರಲ್ಲಿ ದೇಶದ ಬಗ್ಗೆ ಸೇವಾ ಮನೋಭಾವವನ್ನು ಬೆಳೆಸುತ್ತದೆ.

ಸ್ನೇಹಿತರೇ,

‘ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ‘ ಮಂತ್ರವನ್ನು ಅನುಸರಿಸಿ, ಡಬಲ್ ಇಂಜಿನ್ ಸರ್ಕಾರವು ಅರುಣಾಚಲ ಪ್ರದೇಶದ ಅಭಿವೃದ್ಧಿ ಮತ್ತು ಜನರಿಗೆ ‘ಸುಲಭ ಜೀವನ’ ಕ್ಕೆ ಬದ್ಧವಾಗಿದೆ. ಅಭಿವೃದ್ಧಿಯ ಈ ‘ಅರುಣ್ ‘ ಅಥವಾ ‘ ಸೂರ್ಯ ‘ ಈ ರೀತಿ ಇಲ್ಲಿ ತನ್ನ ಬೆಳಕನ್ನು ಹರಡುವುದನ್ನು ಮುಂದುವರಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಈ ಎಲ್ಲ ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಸಕ್ರಿಯ ಸಹಕಾರ ನೀಡಿದ ಪೆಮಾ ಜೀ ಮತ್ತು ಅವರ ಇಡೀ ಸರ್ಕಾರವನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಮತ್ತು ನಾನು ನಮ್ಮ ಸ್ನೇಹಿತರನ್ನು ಮತ್ತು ಇಡೀ ಈಶಾನ್ಯದ ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಅಭಿನಂದಿಸುತ್ತೇನೆ.

ನಾನು ನಿಮಗೆ ಶುಭ ಹಾರೈಸುತ್ತೇನೆ! ತುಂಬ ಧನ್ಯವಾದಗಳು!
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

****