Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೆರಿಕಾ ಅಧ್ಯಕ್ಷರ ಭಾರತ ಭೇಟಿ ಅಧಿಕೃತ ಪ್ರವಾಸ ಕುರಿತು ಪ್ರಧಾನ ಮಂತ್ರಿ ಅವರ ಪತ್ರಿಕಾ ಹೇಳಿಕೆ


ನನ್ನ ಗೆಳೆಯ ಮತ್ತು ಅಮೆರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್,  ಅಮೆರಿಕಾ ನಿಯೋಗದ ಗೌರವಾನ್ವಿತ ಸದಸ್ಯರೇ , ಮತ್ತು ಮಹಿಳೆಯರೇ ಹಾಗು ಮಹನೀಯರೇ,

ನಮಸ್ತೆ,

ಅಧ್ಯಕ್ಷ ಟ್ರಂಪ್ ಮತ್ತು ಅವರ ನಿಯೋಗವನ್ನು ಮತ್ತೆ ಭಾರತದಲ್ಲಿ ಹಾರ್ದಿಕ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ವಿಶೇಷವಾಗಿ ಅವರ ಕುಟುಂಬದ ಜೊತೆ ಪ್ರವಾಸ ಬಂದುದಕ್ಕಾಗಿ ನನಗೆ ಅತೀವ ಸಂತೋಷವಿದೆ. ಕಳೆದ ಎಂಟು ತಿಂಗಳಲ್ಲಿ ಇದು ಅಧ್ಯಕ್ಷ ಟ್ರಂಪ್ ಮತ್ತು ನನ್ನ ನಡುವಿನ ಐದನೇ ಭೇಟಿಯಾಗಿದೆ. ಮೊಟೇರಾದಲ್ಲಿ ನಿನ್ನೆ ಅಧ್ಯಕ್ಷ ಟ್ರಂಪ್ ಅವರಿಗೆ  ನೀಡಿದ ಅಭೂತಪೂರ್ವ ಮತ್ತು ಚಾರಿತ್ರಿಕ ಸ್ವಾಗತ ಎಂದೆಂದೂ ನೆನಪಿನಲ್ಲಿಡುವಂತಹದ್ದು. ಭಾರತ ಮತ್ತು ಅಮೆರಿಕಾ ನಡುವಣ ಬಾಂಧವ್ಯ ಬರೇ ಎರಡು ಸರಕಾರಗಳ ನಡುವಿನ ಬಾಂಧವ್ಯ ಮಾತ್ರವಲ್ಲ ಅದು ಜನತಾ ಚಾಲಿತ, ಜನತಾ ಕೇಂದ್ರಿತವಾದುದು ಎಂಬುದು ನಿನ್ನೆ ಮತ್ತೆ ಸಾಬೀತಾಗಿದೆ.  ಇದು 21 ನೇ ಶತಮಾನದ ಬಹು ಮುಖ್ಯವಾದ ಬಾಂಧವ್ಯ. ಹಾಗಾಗಿ ಇಂದು ಅಧ್ಯಕ್ಷ ಟ್ರಂಪ್ ಮತ್ತು ನಾನು ನಮ್ಮ ಬಾಂಧವ್ಯವನ್ನು ಸಮಗ್ರ ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವದ ಮಟ್ಟಕ್ಕೆ  ಕೊಂಡೊಯ್ಯಲು ನಿರ್ಧರಿಸಿದ್ದೇವೆ. ನಮ್ಮ ಬಾಂಧವ್ಯವನ್ನು ಈ ಮಟ್ಟಕ್ಕೆ ತರುವಲ್ಲಿ ಅದ್ಯಕ್ಷ ಟ್ರಂಪ್ ಅಗಣಿತ ಕೊಡುಗೆ ನೀಡಿದ್ದಾರೆ.

ಸ್ನೇಹಿತರೇ,

ಇಂದು ನಮ್ಮ ಮಾತುಕತೆಯಲ್ಲಿ, ಈ ಸಹಭಾಗಿತ್ವದ ಪ್ರತೀ ಪ್ರಮುಖ ಅಂಶವನ್ನೂ ನಾವು ಧನಾತ್ಮಕವಾಗಿ ಪರಿಗಣಿಸಿದ್ದೇವೆ. ಅದು ರಕ್ಷಣೆ ಇರಲಿ, ಭದ್ರತೆ ಇರಲಿ, ಇಂಧನ ವ್ಯೂಹಾತ್ಮಕ ಸಹಭಾಗಿತ್ವ ಇರಲಿ, ತಂತ್ರಜ್ಞಾನ ಸಹಕಾರ ಇರಲಿ, ಜಾಗತಿಕ ಸಂಪರ್ಕ, ವ್ಯಾಪಾರೋದ್ಯಮ ಸಂಬಂಧ ಅಥವಾ ಜನತೆ ಮತ್ತು ಜನತೆಯ ನಡುವಣ ಸಂಬಂಧಗಳಿರಲಿ ಎಲ್ಲವನ್ನೂ ಪರಿಗಣಿಸಿದ್ದೇವೆ. ಭಾರತ ಮತ್ತು ಅಮೆರಿಕಾ ನಡುವೆ ರಕ್ಷಣಾ ಮತ್ತು ಭದ್ರತಾ ಸಹಕಾರ  ಒಪ್ಪಂದವು ನಮ್ಮ ವ್ಯೂಹಾತ್ಮಕ ಸಹಭಾಗಿತ್ವದ ಪ್ರಮುಖ ಅಂಗ. ಅತ್ಯಾಧುನಿಕ ರಕ್ಷಣಾ ಸಲಕರಣೆಗಳೊಂದಿಗೆ ಮತ್ತು ವೇದಿಕೆಗಳಿಗೆ ಸಹಯೋಗ ಸಾಧಿಸುವ ಮೂಲಕ ಭಾರತದ ರಕ್ಷಣಾ ಸಾಮರ್ಥ್ಯ ವೃದ್ಧಿಸಿದೆ. ನಮ್ಮ ರಕ್ಷಣಾ ಉತ್ಪಾದಕರು ಪರಸ್ಪರ ಪೂರೈಕೆ ಸರಪಳಿಯ ಭಾಗವಾಗಲಿದ್ದಾರೆ. ಇಂದು ಭಾರತದ ಪಡೆಗಳು ಅಮೆರಿಕಾ ಪಡೆಗಳ ಜೊತೆ ಹೆಚ್ಚಿನ ತರಬೇತಿ ಸಮರಾಭ್ಯಾಸ ನಡೆಸುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಪಡೆಗಳ ನಡುವೆ ಅಂತರಕಾರ್ಯಾಚರಣೆಯಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ.  

ಸ್ನೇಹಿತರೇ,

ಅದೇ ರೀತಿ, ನಾವು ನಮ್ಮ ದೇಶ ಭೂಮಿಯನ್ನು ರಕ್ಷಿಸಲು ಮತ್ತು ಅಂತಾರಾಷ್ಟ್ರೀಯ ಅಪರಾಧಗಳ ವಿರುದ್ದ ಹೋರಾಡಲು ಸಹಕಾರವನ್ನು ಹೆಚ್ಚಿಸಲಿದ್ದೇವೆ. ಇಂದು, ನಮ ದೇಶದ ಭದ್ರತೆ ಕುರಿತ ನಮ್ಮ ನಿರ್ಧಾರ ಈ ಸಹಕಾರಕ್ಕೆ ಇನ್ನಷ್ಟು ಬಲ ನೀಡಲಿದೆ. ಇಂದು ನಾವು ಭಯೋತ್ಪಾದಕ ಬೆಂಬಲಿಗರನ್ನು ಜವಾಬ್ದಾರರನ್ನಾಗಿಸುವ ಪ್ರಯತ್ನಗಳನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ಅಧ್ಯಕ್ಷ ಟ್ರಂಪ್ ಅವರು ಮಾದಕ ದ್ರವ್ಯಗಳ ವಿರುದ್ದದ ಹೋರಾಟವನ್ನು ಆದ್ಯತೆಯಾಗಿ ಪರಿಗಣಿಸಿದ್ದಾರೆ. ಮಾದಕ ದ್ರವ್ಯ ಸಾಗಾಣಿಕೆ, ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳಂತಹ ಗಂಭೀರ ಸಮಸ್ಯೆಗಳ ಬಗ್ಗೆ ಹೊಸ ವ್ಯವಸ್ಥೆಗೆ ನಾವು ಒಪ್ಪಿಗೆ ನೀಡಿದ್ದೇವೆ. ಸ್ನೇಹಿತರೇ, ಸ್ವಲ್ಪ ಮೊದಲು ಸ್ಥಾಪನೆಯಾದ ನಮ್ಮ ವ್ಯೂಹಾತ್ಮಕ ಇಂಧನ ಸಹಭಾಗಿತ್ವ ಬಲಿಷ್ಟವಾಗುತ್ತಿದೆ. ಮತ್ತು ಈ ಕ್ಷೇತ್ರದಲ್ಲಿ ಪರಸ್ಪರ ಹೂಡಿಕೆ ಹೆಚ್ಚಿದೆ. ತೈಲ ಮತ್ತು ಅನಿಲಕ್ಕೆ ಸಂಬಂಧಿಸಿ ಅಮೆರಿಕವು ಭಾರತಕ್ಕೆ ಪ್ರಮುಖ ಮೂಲವಾಗಿ ಹೊರಹೊಮ್ಮಿದೆ. ನಮ್ಮ ಒಟ್ಟು ಇಂಧನ ವ್ಯಾಪಾರ ಕಳೆದ ನಾಲ್ಕು ವರ್ಷಗಳಲ್ಲಿ  ಸುಮಾರು 20 ಬಿಲಿಯನ್ ಡಾಲರುಗಳಷ್ಟಾಗಿದೆ. ಅದು ಮರುನವೀಕರಿಸಬಹುದಾದ ಇಂಧನ ಇರಲಿ, ಅಥವಾ ಅಣು ಶಕ್ತಿ ಇರಲಿ. ನಮ್ಮ ಸಹಕಾರ ಹೊಸ ಶಕ್ತಿಯನ್ನು ಹೊಂದುತ್ತಿದೆ.

ಸೇಹಿತರೇ,

ಅದೇ ರೀತಿ ಕೈಗಾರಿಕೆ 4.0 ಮತ್ತು 21 ನೇ ಶತಮಾನದ ಇತರ ಉದಯಿಸುತ್ತಿರುವ ತಂತ್ರಜ್ಞಾನಗಳು ಭಾರತ- ಅಮೆರಿಕಾ ಸಹಭಾಗಿತ್ವದ ಹೊಸ ಸ್ಥಾನಗಳನ್ನು ನಿರ್ದೇಶಿಸುತ್ತಿವೆ. ನಾವೀನ್ಯ, ಅನ್ವೇಷಣೆ ಮತ್ತು ಉದ್ಯಮಶೀಲತೆ ಅದರಲ್ಲಿ ಅಡಕಗೊಂಡಿದೆ. ಭಾರತೀಯ ವೃತ್ತಿಪರರ ಪ್ರತಿಭೆ ಅಮೆರಿಕನ್ ಕಂಪೆನಿಗಳ ತಾಂತ್ರಿಕ ನಾಯಕತ್ವವನ್ನು ಬಲಪಡಿಸಿದೆ.

ಸ್ನೇಹಿತರೇ,

ಭಾರತ ಮತ್ತು ಅಮೆರಿಕಾಗಳು ಆರ್ಥಿಕ ವಲಯದಲ್ಲಿ ಮುಕ್ತ ಮತ್ತು ನ್ಯಾಯೋಚಿತ ಹಾಗು ಸಮತೂಕದ ವ್ಯಾಪಾರ ವಹಿವಾಟಿಗೆ ಬದ್ದವಾಗಿವೆ. ನಮ್ಮ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಕಳೆದ ಮೂರು ವರ್ಷಗಳಲ್ಲಿ ಎರಡಂಕೆ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಅದು ಹೆಚ್ಚು ಸಮತೂಕದ್ದಾಗಿದೆ. ಇಂಧನ, ವಿಮಾನಗಳು, ರಕ್ಷಣೆ, ಮತ್ತು ಉನ್ನತ ಶಿಕ್ಷಣ ಇರಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಈ ನಾಲ್ಕು ವಲಯಗಳೇ ಭಾರತ-ಅಮೆರಿಕಾ ಆರ್ಥಿಕ ಸಂಬಂಧಕ್ಕೆ 70 ಬಿಲಿಯನ್ ಡಾಲರುಗಳ ಕೊಡುಗೆ ನೀಡಿವೆ. ಇದರಲ್ಲಿ ಬಹಳಷ್ಟು ಸಾಧ್ಯವಾದುದು ಅಧ್ಯಕ್ಷ ಟ್ರಂಪ್ ಅವರ ನೀತಿಗಳು ಮತ್ತು ನಿರ್ಧಾರಗಳಿಂದಾಗಿ. ಬರಲಿರುವ ದಿನಗಳಲ್ಲಿ ಈ ಅಂಕಿ ಅಂಶಗಳಲ್ಲಿ  ಇನ್ನಷ್ಟು ಹೆಚ್ಚಳ ಸಾಧನೆಯಾಗಲಿದೆ  ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿ ನಮ್ಮ ವಾಣಿಜ್ಯ ಸಚಿವರ ನಡುವೆ ಧನಾತ್ಮಕ ಮಾತುಕತೆಗಳಾಗಿವೆ. ಅಧ್ಯಕ್ಷ ಟ್ರಂಪ್ ಮತ್ತು ನಾನು,  ಇಂದು ನಮ್ಮ ವಾಣಿಜ್ಯ ಸಚಿವರ ನಡುವೆ ಆಗಿರುವ ಪರಸ್ಪರ ತಿಳುವಳಿಕೆಯನ್ನು ನಮ್ಮ ತಂಡಗಳು ಕಾನೂನುಬದ್ದಗೊಳಿಸುವುದಕ್ಕೆ ಒಪ್ಪಿಕೊಂಡಿದ್ದೇವೆ. ದೊಡ್ಡ ವ್ಯಾಪಾರ ವಹಿವಾಟಿಗೆ ಸಂಬಂಧಿಸಿ ಮಾತುಕತೆ ಆರಂಭಿಸಲು  ನಾವು  ಒಪ್ಪಿಕೊಂಡಿದ್ದೇವೆ. ಇದು ಪರಸ್ಪರ ಆಸಕ್ತಿಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದೆ ಎಂಬುದಾಗಿ ನಮಗೆ ಭರವಸೆ ಇದೆ. ಸ್ನೇಹಿತರೇ, ಭಾರತ ಅತ್ತು ಅಮೆರಿಕಾ ಸಹಕಾರವು ಜಾಗತಿಕವಾಗಿ ನಮ್ಮ ಸಮಾನ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಉದ್ದೇಶಗಳನ್ನು ಆಧರಿಸಿದೆ. ಈ ಸಹಕಾರ ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಬಹಳ ಮುಖ್ಯ. ವಿಶೇಷವಾಗಿ ಭಾರತ-ಫೆಸಿಫಿಕ್ ಮತ್ತು ಜಾಗತಿಕವಾಗಿ ಸಮಾನರ ನಡುವೆ ಇದು ಅವಶ್ಯ. ನಾವಿಬ್ಬರೂ ವಿಶ್ವದಲ್ಲಿ ಸಂಪರ್ಕ ಮೂಲಸೌಕರ್ಯ ಅಭಿವೃದ್ದಿಯಲ್ಲಿ ಸುಸ್ಥಿರ ಮತ್ತು ಪಾರದರ್ಶಕ ಹೂಡಿಕೆಯ ಮಹತ್ವವನ್ನು ಒಪ್ಪಿಕೊಳ್ಳುತ್ತೇವೆ. ನಮ್ಮ  ಪರಸ್ಪರ ಈ ತಿಳುವಳಿಕೆ ನಮ್ಮಿಬ್ಬರ ಮಾತ್ರವಲ್ಲ, ವಿಶ್ವದ ಹಿತಾಸಕ್ತಿಯನ್ನೂ ಒಳಗೊಂಡಿದೆ.

ಸ್ನೇಹಿತರೇ,

ಭಾರತ ಮತ್ತು ಅಮೆರಿಕಾ ನಡುವಿನ ಈ ವಿಶೇಷ ಬಾಂಧವ್ಯಕ್ಕೆ ಅತ್ಯಂತ ಪ್ರಮುಖ ನೆಲೆ ಯಾವುದೆಂದರೆ ನಮ್ಮ ಜನತೆ ಮತ್ತು ಜನತೆಯ ನಡುವಣ ಬಾಂಧವ್ಯಗಳು. ಅಮೆರಿಕಾದಲ್ಲಿ , ಅವರು ವೃತ್ತಿಪರರಿರಲಿ, ವಿದ್ಯಾರ್ಥಿಗಳಿರಲಿ, ಭಾರತೀಯ ಜನಸಮುದಾಯ ಇದಕ್ಕೆ ಅತ್ಯಂತ ದೊಡ್ದ ಕಾಣಿಕೆಯನ್ನು ನೀಡಿದೆ. ಈ ಭಾರತೀಯ ರಾಯಭಾರಿಗಳು, ತಮ್ಮ ಪ್ರತಿಭೆಯೊಂದಿಗೆ , ತಮ್ಮ ಕಠಿಣ ದುಡಿಮೆಯೊಂದಿಗೆ  ಅಮೆರಿಕಾದ ಆರ್ಥಿಕತೆಗೆ ಕಾಣಿಕೆ ನೀಡುತ್ತಿರುವುದು ಮಾತ್ರವಲ್ಲದೆ ನಾವು ಕೂಡಾ  ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಮತ್ತು ಶ್ರೀಮಂತ ಪರಂಪರೆಯೊಂದಿಗೆ ಅಮೆರಿಕನ್ ಸಮಾಜವನ್ನು ಶ್ರೀಮಂತಗೊಳಿಸುತ್ತಿದ್ದೇವೆ. ನಮ್ಮ ವೃತ್ತಿಪರರ ಸಾಮಾಜಿಕ ಭದ್ರತೆಯ ಕೊಡುಗೆಗಳನ್ನು ಕುರಿತ ಒಟ್ಟು ಒಪ್ಪಂದದಲ್ಲಿ ಎರಡೂ ಕಡೆಯ ಚರ್ಚೆಗಳನ್ನು ಒಗ್ಗೂಡಿಸಿಕೊಂಡು ಹೋಗುವಂತೆ ನಾನು ಅಧ್ಯಕ್ಷ ಟ್ರಂಪ್ ಅವರಿಗೆ ಮನವಿ ಮಾಡಿದ್ದೇನೆ. 

ಸ್ನೇಹಿತರೇ.

ಅಧ್ಯಕ್ಷ ಟ್ರಂಪ್ ಅವರ ಭೇಟಿಯು ಈ ಎಲ್ಲಾ ಆಯಾಮಗಳಲ್ಲಿ ನಮ್ಮ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವಲ್ಲಿ ಚಾರಿತ್ರಿಕ ಪಾತ್ರವಹಿಸುತ್ತದೆ. ಮತ್ತೊಮ್ಮೆ , ನಾನು ಅಧ್ಯಕ್ಷ ಟ್ರಂಪ್ ಅವರಿಗೆ ಭಾರತಕ್ಕೆ ಆಗಮಿಸಿದುದಕ್ಕೆ  ಮತ್ತು ಭಾರತ ಅಮೆರಿಕಾ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದುದಕ್ಕೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ.

ಧನ್ಯವಾದಗಳು.