Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೆರಿಕಾ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

ಅಮೆರಿಕಾ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 24 ನೇ ಸೆಪ್ಟೆಂಬರ್ 2021 ರಂದು ಅಮೆರಿಕಾದ ಗೌರವಾನ್ವಿತ  ಅಧ್ಯಕ್ಷ ಶ್ರೀ ಜೋಸೆಫ್ ಆರ್. ಬಿಡೆನ್ ಅವರೊಂದಿಗೆ ಆತ್ಮೀಯ ಮತ್ತು ಫಲಪ್ರದ ಸಭೆ ನಡೆಸಿದರು.

ಶ್ರೀ ಬಿಡೆನ್ ಅವರು ಜನವರಿ 2021 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ಮೊದಲ ಭೇಟಿ ಇದಾಗಿದೆ. ಭಾರತ-ಅಮೆರಿಕಾ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಸಾಮರ್ಥ್ಯವನ್ನು ಪರಿಶೀಲಿಸಲು ನಾಯಕರು ಈ ಅವಕಾಶವನ್ನು ಬಳಸಿಕೊಂಡರು. ಪ್ರಜಾಪ್ರಭುತ್ವದ ಮೌಲ್ಯಗಳು, ತಂತ್ರಜ್ಞಾನ, ವ್ಯಾಪಾರ, ನಮ್ಮ ಜನರ ಪ್ರತಿಭೆ, ಪ್ರಕೃತಿಯ ವಿಶ್ವಾಸಾರ್ಹತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಂಬಿಕೆಯ ಆಧಾರ ಸ್ತಂಭಗಳ ಆಧಾರದ ಮೇಲೆ ಭಾರತ ಮತ್ತು ಅಮೇರಿಕಾ ಒಂದು ದಶಕದ ಪರಿವರ್ತನೆಯ ಕಾಲವನ್ನು ಪ್ರವೇಶಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಭವಿಷ್ಯದಲ್ಲಿ ಆದ್ಯತೆಗಳನ್ನು ಗುರುತಿಸುವ ವಿದೇಶಿ ಮತ್ತು ರಕ್ಷಣಾ ಸಚಿವರ ವಾರ್ಷಿಕ 2+2 ಮಾತುಕತೆ ಸೇರಿದಂತೆ ವಿವಿಧ ವಲಯಗಳಲ್ಲಿ ಮುಂಬರುವ ದ್ವಿಪಕ್ಷೀಯ ಸಂವಾದಗಳನ್ನು ಉಭಯ ನಾಯಕರು ಸ್ವಾಗತಿಸಿದರು.

ಕೋವಿಡ್-19 ಪರಿಸ್ಥಿತಿ ಮತ್ತು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು  ಭಾರತ-ಅಮೆರಿಕಾ ಸಹಯೋಗದ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಬಿಡೆನ್ ಭಾರತದ ಲಸಿಕೆ ಪ್ರಯತ್ನಗಳನ್ನು ಮತ್ತು ಕೋವಿಡ್ ನಿಯಂತ್ರಣಕ್ಕೆ ನೆರವು ನೀಡುವ ನಮ್ಮ ಜಾಗತಿಕ ಪ್ರಯತ್ನಗಳನ್ನು ಶ್ಲಾಘಿಸಿದರು.

ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸಲು ಅಪಾರ ಅವಕಾಶವಿದೆ ಎಂದು ಗುರುತಿಸಿದ ಉಭಯ ನಾಯಕರು, ವಾಣಿಜ್ಯ ಸಂಬಂಧಗಳನ್ನು ಹೆಚ್ಚಿಸುವ ಕ್ರಮಗಳನ್ನು ಗುರುತಿಸಲು ಮುಂದಿನ ವಾಣಿಜ್ಯ ನೀತಿ ವೇದಿಕೆಯನ್ನು ಈ ವರ್ಷದ ಕೊನೆಯಲ್ಲಿ ಕರೆಯಲು ಸಮ್ಮತಿಸಿದರು. ಭಾರತ-ಅಮೆರಿಕಾ ಹವಾಮಾನ ಮತ್ತು ಶುದ್ಧ ಇಂಧನ ಕಾರ್ಯಸೂಚಿ 2030 ಪಾಲುದಾರಿಕೆಯ ಅಡಿಯಲ್ಲಿ, ಶುದ್ಧ ಇಂಧನ ಅಭಿವೃದ್ಧಿ ಮತ್ತು ನಿರ್ಣಾಯಕ ತಂತ್ರಜ್ಞಾನಗಳ ನಿಯೋಜನೆಯನ್ನು ವೇಗಗೊಳಿಸಲು ಒಪ್ಪಿಕೊಂಡರು. ಅಮೆರಿಕಾದಲ್ಲಿರುವ ಬೃಹತ್ ಅನಿವಾಸಿ ಭಾರತೀಯರ ಪಾತ್ರವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಎರಡು ರಾಷ್ಟ್ರಗಳ ನಡುವಿನ ಜನರ ನಡುವಿನ ಸಂಬಂಧದ ಮಹತ್ವವನ್ನು ಮತ್ತು ಚಲನಶೀಲತೆಯನ್ನು ಸುಗಮಗೊಳಿಸುವ ಮತ್ತು ಉನ್ನತ ಶಿಕ್ಷಣದ ಸಂಪರ್ಕಗಳನ್ನು ವಿಸ್ತರಿಸುವ ಪರಸ್ಪರ ಪ್ರಯೋಜನಗಳ ಬಗ್ಗೆ ಗಮನ ಸೆಳೆದರು.

ದಕ್ಷಿಣ ಏಷ್ಯಾದ ಪ್ರಾದೇಶಿಕ ಬೆಳವಣಿಗೆಗಳು, ಅಫ್ಘಾನಿಸ್ತಾನದ ಪರಿಸ್ಥಿತಿ ಸೇರಿದಂತೆ ಹಲವಾರು ಅಭಿಪ್ರಾಯಗಳನ್ನು ನಾಯಕರು ವಿನಿಮಯ ಮಾಡಿಕೊಂಡರು. ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿದರು. ತಾಲಿಬಾನಿಗಳು ತಮ್ಮ ಬದ್ಧತೆಗಳಿಗೆ ತಕ್ಕನಾಗಿರಬೇಕು, ಎಲ್ಲಾ ಆಫ್ಘನ್ನರ ಮಾನವ ಹಕ್ಕುಗಳನ್ನು ಗೌರವಿಸಬೇಕು ಮತ್ತು ಅಫ್ಘಾನಿಸ್ತಾನಕ್ಕೆ ಅಡೆತಡೆಯಿಲ್ಲದ ಮಾನವೀಯ ಸಹಾಯವನ್ನು ಅನುಮತಿಸಬೇಕು ಎಂದು ಅವರು ಕರೆ ನೀಡಿದರು. ಅಫ್ಘಾನ್ ಜನರಿಗೆ ತಮ್ಮ ದೀರ್ಘಾವಧಿಯ ಬದ್ಧತೆಯನ್ನು ಪರಿಗಣಿಸಿ, ಆಫ್ಘನ್ನರಿಗೆ ಎಲ್ಲರನ್ನೂ ಒಳಗೊಂಡ ಶಾಂತಿಯುತ ಭವಿಷ್ಯಕ್ಕಾಗಿ ಭಾರತ ಮತ್ತು ಅಮೆರಿಕಾ ಹಾಗೂ ತಮ್ಮ ಪಾಲುದಾರರು ಪರಸ್ಪರ ನಿಕಟ ಸಮನ್ವಯವನ್ನು ಮುಂದುವರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು

ನಾಯಕರು ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಮುಕ್ತ ಮತ್ತು ಒಳಗೊಂಡ ಇಂಡೋ-ಪೆಸಿಫಿಕ್ ಪ್ರದೇಶದ ಬಗೆಗಿನ ತಮ್ಮ ದೃಷ್ಟಿಕೋನವನ್ನು ಪುನರುಚ್ಚರಿಸಿದರು.

ಭಾರತ ಮತ್ತು ಅಮೆರಿಕಾ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡವು, ಅವುಗಳ ಕಾರ್ಯತಂತ್ರದ ದೃಷ್ಟಿಕೋನಗಳು ಮತ್ತು ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನೆಯಂತಹ ಜಾಗತಿಕ ಸಮಸ್ಯೆಗಳ ಬಗ್ಗೆ ಆಸಕ್ತಿಗಳನ್ನು ಹಂಚಿಕೊಂಡವು.

ಪ್ರಧಾನಿ ಮೋದಿ ಅವರು ಅಧ್ಯಕ್ಷ ಬಿಡೆನ್ ಮತ್ತು ಪ್ರಥಮ ಮಹಿಳೆ ಡಾ.ಜಿಲ್ ಬಿಡೆನ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಉಭಯ ನಾಯಕರು ತಮ್ಮ ಉನ್ನತ ಮಟ್ಟದ ಮಾತುಕತೆಯನ್ನು ಮುಂದುವರಿಸಲು, ದೃಢವಾದ ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸಲು ಮತ್ತು ಜಾಗತಿಕ ಪಾಲುದಾರಿಕೆಯನ್ನು ಶ್ರೀಮಂತಗೊಳಿಸಲು ಒಪ್ಪಿಕೊಂಡರು.

***