ಅಮೆರಿಕಾದ ವಿದೇಶಾಂಗ ಸಚಿವ ಗೌರವಾನ್ವಿತ ಮೈಕೆಲ್ ಆರ್.ಪೊಂಪಿಯೋ ಮತ್ತು ರಕ್ಷಣಾ ಸಚಿವ ಗೌರವಾನ್ವಿತ ಡಾ.ಮಾರ್ಕ್ ಟಿ.ಎಸ್ಪೆರ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಅವರು ಅಮೆರಿಕಾದ ಅಧ್ಯಕ್ಷರ ಪರವಾಗಿ ಪ್ರಧಾನಮಂತ್ರಿಗಳಿಗೆ ಶುಭಾಶಯಗಳನ್ನು ಕೋರಿದರು. 2020ರ ಫೆಬ್ರವರಿಯಲ್ಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಯಶಸ್ವಿ ಭಾರತ ಭೇಟಿಯನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಅವರಿಂದ ಆತ್ಮೀಯ ಶುಭಾಶಯಗಳನ್ನು ಸ್ವೀಕರಿಸಿದರು. ಸಚಿವರು ದ್ವೀಪಕ್ಷೀಯ ಸಭೆಗಳು ಮತ್ತು ಬೆಳಿಗ್ಗೆ ನಡೆದ 3ನೇ ಭಾರತ-ಅಮೆರಿಕಾ ಮಾತುಕತೆ ಫಲಪ್ರದವಾಗಿರುವ ವಿಷಯಗಳನ್ನು ವಿವರಿಸಿದರು. ಭಾರತದೊಂದಿಗೆ ಬಲಿಷ್ಠ ಸಂಬಂಧಗಳನ್ನು ಹೊಂದುವುದಕ್ಕೆ ಅಮೆರಿಕಾ ಸರ್ಕಾರ ನಿರಂತರ ಆಸಕ್ತಿ ಹೊಂದಿರುವುದನ್ನು ಮತ್ತು ಸಮಾನ ಹಂಚಿಕೆಯ ದೂರದೃಷ್ಟಿ ಮತ್ತು ಗುರಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜೊತೆಗೂಡಿ ಕಾರ್ಯನಿರ್ವಹಿಸುವ ಬದ್ಧತೆಯನ್ನು ತೋರಿದರು.
3ನೇ 2 ಪ್ಲಸ್ 2 ಮಾತುಕತೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದಕ್ಕೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ಸಮಗ್ರ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ಸಂಬಂಧ ಬಹು ಆಯಾಮದ ಬೆಳವಣಿಗೆಗಳ ಬಗ್ಗೆ ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು ಮತ್ತು ವಿಶ್ವಾಸ, ಸಮಾನ ಮೌಲ್ಯಗಳು ಮತ್ತು ಎರಡೂ ದೇಶಗಳ ಜನರ ನಡುವಿನ ಉತ್ಕೃಷ್ಟ ಸಂಬಂಧಗಳ ಭದ್ರ ಬುನಾದಿ ಇದೆ ಎಂದು ಬಲವಾಗಿ ಪ್ರತಿಪಾದಿಸಿದರು.
****
Pleasure meeting @SecPompeo and @EsperDoD. Happy to see tremendous progress made in India-US relations and the results of the third 2+2 dialogue. Our Comprehensive Global Strategic Partnership stands on a firm foundation of shared principles and common strategic interests. pic.twitter.com/cpUBzMYy80
— Narendra Modi (@narendramodi) October 27, 2020