Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೆರಿಕದಲ್ಲಿ ಸಂಪೂರ್ಣ ಸರಕಾರಿ ಸ್ವಾಮ್ಯದ ಭಾರತೀಯ ದೂರಸಂಪರ್ಕ ಸಲಹಾ ನಿಯಮಿತದ ಸಿ-ಕಾರ್ಪೊರೇಷನ್ ಸ್ಥಾಪನೆಗೆ ಸಂಪುಟ ಅಸ್ತು


ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟವು, ಸಂಪೂರ್ಣ ಸರಕಾರಿ ಸ್ವಾಮ್ಯವಿರುವ (ನೂರಕ್ಕೆ ನೂರರಷ್ಟು) ಭಾರತೀಯ ದೂರಸಂಪರ್ಕ ಸಲಹಾ ನಿಯಮಿತ(ಟಿಸಿಐಎಲ್‍)ದ ಸಿ-ಕಾರ್ಪೊರೇಷನ್ ಅನ್ನು ಅಮೆರಿಕದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಿದ್ದು, ಅದರ ವಿವರಗಳು ಈ ಕೆಳಕಂಡಂತಿವೆ.

1. ಟಿಸಿಐಎಲ್‍ನ ಸಿ-ಕಾರ್ಪೊರೇಷನ್ ಅನ್ನು ಅಮೆರಿಕದ ಟೆಕ್ಸಾಸ್‍ನಲ್ಲಿ ಸ್ಥಾಪಿಸಲಾಗುವುದು. ಜತೆಗೆ, ಅಲ್ಲಿನ ಬೇರೆಬೇರೆ ಪ್ರಾಂತ್ಯಗಳಲ್ಲೂ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ನೋಂದಣಿ ಮಾಡಿಕೊಳ್ಳುವ ಅಧಿಕಾರವನ್ನೂ ಇದಕ್ಕೆ ಕೊಡಲಾಗಿದೆ.

2. ಟಿಸಿಐಎಲ್ ಇದಕ್ಕಾಗಿ ಒಟ್ಟು 5 ದಶಲಕ್ಷ ಡಾಲರ್‍ಗಳಷ್ಟು ಹಣವನ್ನು ಹಂತಹಂತಗಳಲ್ಲಿ ತಾನೇ ಬಂಡವಾಳವಾಗಿ ತೊಡಗಿಸಲಿದೆ. (ಅಂದರೆ, ಇಂದಿನ ವಿನಿಮಯ ದರವನ್ನು 1 ಡಾಲರ್‍ಗೆ ರೂ.67.68 ಎಂಬ ಲೆಕ್ಕದಲ್ಲಿ ತೆಗೆದುಕೊಂಡರೆ ಇದರ ಮೊತ್ತ ಒಟ್ಟು 33.84 ಕೋಟಿ ರೂ.ಗಳಾಗಲಿದೆ).

3. ಅಮೆರಿಕದಲ್ಲಿ ತಾನು ಕೈಗೆತ್ತಿಕೊಳ್ಳಲಿರುವ ಯೋಜನೆಗಳ ಅನುಷ್ಠಾನಕ್ಕೆ, 5 ದಶಲಕ್ಷ ಡಾಲರ್ ಹಣಕ್ಕೆ ಬೇಕಾದ ಪ್ರತಿಖಾತ್ರಿಯನ್ನು ಸಾಲ ಕೊಡುವವರಿಗೆ/ಸೌಲಭ್ಯಗಳಿಗೆ/ಉದ್ಯಮಿಗಳಿಗೆ ಮತ್ತು ಬಿಡ್ ಬಾಂಡ್‍ಗಳ ಬಗ್ಗೆ ಆಸಕ್ತಿ ತೋರುವ ಗ್ರಾಹಕರಿಗೆ/ಮುಂಗಡ ಪಾವತಿಗೆ/ಸಾಮರ್ಥ್ಯ ಪ್ರದರ್ಶನ ಇತ್ಯಾದಿಗಳಿಗೆ ಒದಗಿಸುವುದು ಅಗತ್ಯವಾಗಿದೆ.

ಅಮೆರಿಕದಲ್ಲಿ ಮೈದಾಳಲಿರುವ ಸಿ-ಕಾರ್ಪೊರೇಷನ್ ದೇಶಕ್ಕಾಗಿ ಅಮೂಲ್ಯವಾದ ವಿದೇಶೀ ವಿನಿಮಯವನ್ನು ಗಳಿಸಲಿದ್ದು, ಸರಕಾರಿ ಸ್ವಾಮ್ಯದ ಟಿಸಿಐಎಲ್‍ನ ಲಾಭದ ಸಾಧ್ಯತೆಗಳನ್ನು ಕೂಡ ಹೆಚ್ಚು ಮಾಡಲಿದೆ.

ಅಮೆರಿಕದಲ್ಲಿ ಕೈಗೊಳ್ಳಲಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಸಿ-ಕಾರ್ಪೊರೇಷನ್ ಅನ್ನು ಅಮೆರಿಕದ ಟೆಕ್ಸಾಸ್‍ನಲ್ಲಿ ಸ್ಥಾಪಿಸಲಾಗುತ್ತಿದೆ.

ಈ ನಿಗಮವು ಆರಂಭಿಕ ವರ್ಷಗಳಲ್ಲಿ ವಾರ್ಷಿಕವಾಗಿ ಅಂದಾಜು 10 ದಶಲಕ್ಷ ಡಾಲರ್ ವಹಿವಾಟು ನಡೆಸಲಿದ್ದು, ಶೇ.10ರಷ್ಟನ್ನು ಲಾಭವನ್ನು ದಾಖಲಿಸಲಿದೆ. ಇದು ಕೈಗೊಳ್ಳುವ ಕಾರ್ಯ ಚಟುವಟಿಕೆಗಳನ್ನು ಆಧರಿಸಿ, ಇದರ ವಹಿವಾಟು ಮೊತ್ತವು ಅದಕ್ಕೆ ತಕ್ಕಂತೆ ಏರುವ ಸಂಭವವಿದೆ.

ಅಮೆರಿಕದಲ್ಲಿ ಟಿಸಿಐಎಲ್‍ನ ಸಿ-ಕಾರ್ಪೊರೇಷನ್ ಅನ್ನು ಸ್ಥಾಪಿಸುತ್ತಿರುವುದರಿಂದ ಅದರ ವಾಣಿಜ್ಯೋದ್ದೇಶದ ಚಟುವಟಿಕೆಗಳನ್ನು ವಿಸ್ತರಿಸಲು/ವಹಿವಾಟನ್ನು ಹೆಚ್ಚಿಸಿಕೊಳ್ಳಲು/ಲಾಭವನ್ನು ಏರಿಸಿಕೊಳ್ಳಲು ಮತ್ತು ಅಂತಿಮವಾಗಿ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯವನ್ನು ತರಲು ನೆರವಾಗಲಿದೆ.

ಇದಕ್ಕೆ ಅಗತ್ಯವಾಗಿರುವ 5 ದಶಲಕ್ಷ ಡಾಲರ್ ಬಂಡವಾಳವನ್ನು ಟಿಸಿಐಎಲ್ ತನ್ನ ಆಂತರಿಕ ಮೂಲಗಳಿಂದಲೇ ಕ್ರೋಡೀಕರಿಸಲಿದೆ. ಅಲ್ಲದೆ, ಅಮೆರಿಕದಲ್ಲಿ ತನಗೆ ಬೇಕಾಗುವ ಈ ಮೊತ್ತದ ಹಣಕಾಸು ನೆರವಿಗೆ ನೀಡಬೇಕಾದ ಪ್ರತಿಖಾತ್ರಿಯನ್ನೂ ಟಿಸಿಐಎಲ್ ಸ್ವತಃ ತಾನೇ ನೀಡಲಿದೆ. ಈ ಮೂಲಕ ಅದು ಅಮೆರಿಕದಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿಕೊಳ್ಳುವ ಜತೆಗೆ ಬಿಡ್‍ ಬಾಂಡ್‍/ಮುಂಗಡ ಪಾವತಿ/ಸಾಮರ್ಥ್ಯ ಪ್ರದರ್ಶನಕ್ಕೆ ಅಗತ್ಯವಾಗಿ ಇಡಬೇಕಾದ ಬ್ಯಾಂಕ್ ಭದ್ರತಾ ಠೇವಣಿ ಮುಂತಾದವುಗಳನ್ನು ತಾನೇ ನಿಭಾಯಿಸಲಿದೆ. ಅಲ್ಲದೆ, ಅಂತಿಮ ಗ್ರಾಹಕರಿಗೆ ಮಾಡಬೇಕಾದ ಪಾವತಿಗಳನ್ನೂ ಅದು ಮಾಡಲಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರವು ತನ್ನ ಕೈಯಿಂದ ಏನನ್ನೂ ಪಾವತಿಸಬೇಕಾದ ಅಗತ್ಯ ಇಲ್ಲಿರುವುದಿಲ್ಲ. ಅಂದರೆ, ಇದು ಸರಕಾರದ ಪಾಲಿಗೆ ಯಾವ ದೃಷ್ಟಿಯಿಂದಲೂ ಹೊರೆಯಾಗುವುದಿಲ್ಲ.

ಹಿನ್ನೆಲೆ:

ಟಿಸಿಐಎಲ್ ಮುಂಚೂಣಿಯಲ್ಲಿರುವ ಐಎಸ್ಒ-9001:2008 ಮತ್ತು ಐಎಸ್ಒ 14001:2004 ಮಾನ್ಯತೆಯನ್ನು ಹೊಂದಿರುವ, ಪ್ರಮಾಣೀಕೃತವಾದ, ಶೆಡ್ಯೂಲ್-ಎ ದರ್ಜೆಯ, ಮಿನಿರತ್ನ ಸ್ಥಾನಮಾನವನ್ನು ಹೊಂದಿರುವ 1ನೇ ದರ್ಜೆಯ, ಭಾರತ ಸರಕಾರವೇ ಶೇಕಡ 100ಕ್ಕೆ 100ರಷ್ಟು ಒಡೆತನ ಹೊಂದಿರುವ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯಾಗಿದೆ. ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಟಿಸಿಐಎಲ್, ಜಗತ್ತಿನ 70ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಸಂಸ್ಥೆಯು ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ನಾಗರಿಕ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಕಲ್ಪನೆಯಿಂದ ಹಿಡಿದು ಅದನ್ನು ಸಂಪೂರ್ಣವಾಗಿ ಜಾರಿಗೊಳಿಸುವವರೆಗೆ ಸೇವೆಯನ್ನು ಒದಗಿಸುತ್ತದೆ.

31.3.2017ರವರೆಗಿನ ಅಂಕಿಅಂಶಗಳ ಪ್ರಕಾರ, ಈ ಸಂಸ್ಥೆಯ ನಿವ್ವಳ ಮೌಲ್ಯ 2433.66 ಕೋಟಿ ರೂ.ಗಳಾಗಿವೆ. ಅಲ್ಲದೆ, ಕಂಪನಿಯು 31.3.2017ರವರೆಗೆ ಭಾರತ ಸರಕಾರದ ಬೊಕ್ಕಸಕ್ಕೆ 192.99 ಕೋಟಿ ರೂ.ಗಳಷ್ಟು ಡಿವಿಡೆಂಡ್ ಅನ್ನು ಪಾವತಿಸಿದೆ.

ಗೂಗಲ್ ಕಂಪನಿಯು ಅಮೆರಿಕದಲ್ಲಿನ ಗ್ರಾಹಕರಿಗೆ ಉನ್ನತ ಸಾಮರ್ಥ್ಯದ ಬ್ರಾಡ್ ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಮತ್ತು ಅಲ್ಲಿನ ಎಲ್ಲ ನಗರಗಳಲ್ಲಿ ಕೇಬಲ್ ಟೆಲಿವಿಷನ್ ಸೇವೆಯನ್ನು ಒದಗಿಸಲು ಸ್ಥಾಪಿಸಿರುವ ಅಂಗಸಂಸ್ಥೆಯೇ `ಗೂಗಲ್ ಫೈಬರ್’. ಗೂಗಲ್ ಸಂಸ್ಥೆಯು ಇದಕ್ಕಾಗಿ ಮೆಸ್ಸರ್ಸ್ ಎರಿಕ್‍ಸನ್, ಮೆಸರ್ಸ್ ಮಾಸ್ಟೆಕ್, ಮೆಸರ್ಸ್ ಎಟಿ&ಟಿ, ಮೆಸರ್ಸ್ ಝೋಯಾ ಮುಂತಾದ ಅಂತಾರಾಷ್ಟ್ರೀಯ ಕಂಪನಿಗಳನ್ನು ತನ್ನ ತಾಂತ್ರಿಕ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಈ ಕಂಪನಿಗಳು ತಮಗೆ ಸಿಕ್ಕಿದ ಕೆಲಸಗಳನ್ನು ಬೇರೆಬೇರೆ ಕಂಪನಿಗಳಿಗೆ ಉಪಗುತ್ತಿಗೆಯಾಗಿ ನೀಡುತ್ತವೆ. ಈ ಪೈಕಿ ಮೆಸರ್ಸ್ ಟೆಲಿಟೆಕ್ ಕಂಪನಿಯು ಮೆಸರ್ಸ್ ಮಾಸ್ಟೆಕ್ ಮತ್ತು ಮೆಸರ್ಸ್ ಎರಿಕ್ಸನ್ ಕಂಪನಿಗಳೊಂದಿಗೆ ಅಮೆರಿಕದ ಆಸ್ಟಿನ್ ಮತ್ತು ಸ್ಯಾನ್ ಓಸ್(ಕ್ಯಾಲಿಫೋರ್ನಿಯಾ)ಗಳಲ್ಲಿ ನೆಟ್‍ವರ್ಕ್ ಸ್ಥಾಪನೆಯ ಸಂಬಂಧ ಅಂತಿಮ ಒಡಂಬಡಿಕೆಗೆ ಸಹಿ ಹಾಕಿದೆ. ಈ ಕಂಪನಿಯು ತನಗೆ ಬೇಕಾಗಿರುವ ತಾಂತ್ರಿಕ ಮತ್ತು ಇನ್ನಿತರ ಬೆಂಬಲಗಳನ್ನು ತನಗೆ ನೀಡಬೇಕೆಂದು ಟಿಸಿಐಎಲ್ ಅನ್ನು ಕೇಳಿಕೊಂಡಿದೆ. ಈ ಸಂಬಂಧ ಮೆಸರ್ಸ್ ಟೆಲಿಟೆಕ್ ಕಂಪನಿಯು ಟಿಸಿಐಎಲ್ ಜೊತೆಗೆ 13.04.2016ರಂದು ಒಡಂಬಡಿಕೆ ಮಾಡಿಕೊಂಡಿದ್ದು, ತದನಂತರ 27.05.2016ರಂದು ಜಂಟಿ ಸಹಕಾರ ಒಪ್ಪಂದಕ್ಕೂ ಸಹಿ ಹಾಕಿದೆ. ಹೀಗಾಗಿ, ವಿದೇಶಗಳಲ್ಲೂ ಅಸ್ತಿತ್ವ ಹೊಂದಿರುವ ಟಿಸಿಐಎಲ್, ತನ್ನ ಸಿ-ಕಾರ್ಪೊರೇಷನ್ ಅನ್ನು ಸ್ಥಾಪಿಸಿಕೊಳ್ಳುವುದು ಅಗತ್ಯವಾಗಿದೆ. ಏಕೆಂದರೆ, ಇದನ್ನು ಪ್ರತ್ಯೇಕ ತೆರಿಗೆ ಪಾವತಿ ಕಂಪನಿಯಾಗಿ ಗುರುತಿಸಲಾಗಿದೆ. ಇದರಿಂದಾಗಿ, ಟಿಸಿಐಎಲ್ ತನ್ನ ಉದ್ಯೋಗಿಗಳಿಗೆ ಎಲ್-1 ವೀಸಾ ಕೊಡಿಸುವುದು ಕೂಡ ಸಾಧ್ಯವಾಗಲಿದೆ.

(ಮುಕ್ತಾಯ)