ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಲೋಕ ಕಲ್ಯಾಣ ಮಾರ್ಗದ, 7ರಲ್ಲಿರುವ ತಮ್ಮ ನಿವಾಸದಲ್ಲಿ ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಆಡಳಿತ ಮಂಡಳಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಭೂದೃಶ್ಯ ಮತ್ತು ಸಂಶೋಧನೆ ಹಾಗು ಅಭಿವೃದ್ಧಿ ಕಾರ್ಯಕ್ರಮಗಳ ಮರುವಿನ್ಯಾಸದ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಆಡಳಿತ ಮಂಡಳಿಯ ಮೊದಲ ಸಭೆಯೊಂದಿಗೆ ಹೊಸ ಆರಂಭ ಮಾಡಲಾಗಿದೆ ಎಂದರು. ದೇಶದ ಸಂಶೋಧನಾ ಪರಿಸರ ವ್ಯವಸ್ಥೆಯಲ್ಲಿನ ಅಡೆತಡೆಗಳನ್ನು ಗುರುತಿಸುವ ಮತ್ತು ತೆಗೆದುಹಾಕುವ ಅಗತ್ಯವನ್ನು ಪ್ರಧಾನ ಮಂತ್ರಿ ಒತ್ತಿ ಹೇಳಿದರು. ಅವರು ದೊಡ್ಡ ಗುರಿಗಳನ್ನು ನಿಗದಿಪಡಿಸುವ ಬಗ್ಗೆ, ಅವುಗಳನ್ನು ಸಾಧಿಸುವತ್ತ ಗಮನ ಹರಿಸುವ ಬಗ್ಗೆ ಮತ್ತು ಹೊಸ ಸಂಶೋಧನೆ ಮಾಡುವ ಬಗ್ಗೆ ಮಾತನಾಡಿದರು. ಅಸ್ತಿತ್ವದಲ್ಲಿರುವ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಹಿಡಿಯುವತ್ತ ಸಂಶೋಧನೆ ಗಮನ ಹರಿಸಬೇಕು ಎಂದು ಅವರು ಹೇಳಿದರು. ಸಮಸ್ಯೆಗಳು ಜಾಗತಿಕ ಸ್ವರೂಪದ್ದಾಗಿರಬಹುದು ಆದರೆ ಅವುಗಳ ಪರಿಹಾರಗಳನ್ನು ಭಾರತೀಯ ಅಗತ್ಯಗಳಿಗೆ ಅನುಗುಣವಾಗಿ ಸ್ಥಳೀಯಗೊಳಿಸಬೇಕು ಎಂದೂ ಅವರು ಒತ್ತಿ ಹೇಳಿದರು.
ಸಂಸ್ಥೆಗಳ ಉನ್ನತೀಕರಣ ಮತ್ತು ಗುಣಮಟ್ಟ ಪ್ರಮಾಣೀಕರಣದ ಅಗತ್ಯದ ಬಗ್ಗೆ ಪ್ರಧಾನ ಮಂತ್ರಿ ಚರ್ಚಿಸಿದರು. ಪರಿಣತಿಯ ಆಧಾರದ ಮೇಲೆ ಡೊಮೇನ್ ತಜ್ಞರ ಪಟ್ಟಿಯನ್ನು ಸಿದ್ಧಪಡಿಸಲು ಅವರು ಸಲಹೆ ನೀಡಿದರು. ದೇಶದಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದಾದ ಡ್ಯಾಶ್ಬೋರ್ಡ್ ಅನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಅವರು ಮಾತನಾಡಿದರು.
ಸಂಶೋಧನೆ ಮತ್ತು ನಾವೀನ್ಯತೆಗಾಗಿ ಸಂಪನ್ಮೂಲಗಳ ಬಳಕೆಯ ವೈಜ್ಞಾನಿಕ ಮೇಲ್ವಿಚಾರಣೆಯ ಅಗತ್ಯವನ್ನು ಪ್ರಧಾನ ಮಂತ್ರಿ ಹೇಳಿದರು. ಇದು ಮಹತ್ವಾಕಾಂಕ್ಷೆಯ ಆರಂಭ ಎಂದು ಹೇಳಿದ ಅವರು, ದೇಶದ ವೈಜ್ಞಾನಿಕ ಸಮುದಾಯವು ತಮ್ಮ ಪ್ರಯತ್ನಗಳಿಗೆ ಸಂಪನ್ಮೂಲಗಳ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯನ್ನು ಹೊಂದಿರಬೇಕು ಎಂದು ಹೇಳಿದರು. ಅಟಲ್ ಟಿಂಕರಿಂಗ್ ಲ್ಯಾಬ್ ಗಳ ಧನಾತ್ಮಕ ಪರಿಣಾಮಗಳ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿಯವರು, ಈ ಪ್ರಯೋಗಾಲಯಗಳ ಶ್ರೇಣೀಕರಣ ಮಾಡಬಹುದು ಎಂದು ಸಲಹೆ ನೀಡಿದರು. ಪರಿಸರ ಬದಲಾವಣೆಗೆ ಹೊಸ ಪರಿಹಾರಗಳನ್ನು ಹುಡುಕುವುದು, ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ಸಾಮಗ್ರಿಗಳು, ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳು ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಸಂಶೋಧನೆಯ ಬಗ್ಗೆಯೂ ಅವರು ಚರ್ಚಿಸಿದರು.
ಸಭೆಯಲ್ಲಿ, ಸಂಶೋಧನೆಯು ಆರಂಭಿಕ ಹಂತದಲ್ಲಿರುವ ವಿಶ್ವವಿದ್ಯಾಲಯಗಳನ್ನು ಉನ್ನತ ಶ್ರೇಣಿಯ ಸಂಸ್ಥೆಗಳೊಂದಿಗೆ ಮಾರ್ಗದರ್ಶಕ ಮಾದರಿಯಲ್ಲಿ ಜೋಡಿಸುವ ಮೂಲಕ ಹಬ್ ಮತ್ತು ಸ್ಪೋಕ್ ಮೋಡ್ ನಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿತು.
ಪ್ರಮುಖ ಕ್ಷೇತ್ರಗಳಲ್ಲಿ ಭಾರತದ ಜಾಗತಿಕ ಸ್ಥಾನ, ರಾಷ್ಟ್ರೀಯ ಆದ್ಯತೆಗಳೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೊಂದಿಸುವುದು, ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವುದು, ಸಾಮರ್ಥ್ಯ ವರ್ಧನೆ, ವೈಜ್ಞಾನಿಕ ಪ್ರಗತಿ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಚಾಲನೆ ನೀಡುವುದು ಮತ್ತು ಉದ್ಯಮ-ಜೋಡಣೆಯ ಪರಿವರ್ತನಾಶೀಲ ಸಂಶೋಧನೆಯ ಮೂಲಕ ಶೈಕ್ಷಣಿಕ ಸಂಶೋಧನೆ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಅದರ ಬಳಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಸೇರಿದಂತೆ ಎಎನ್ಆರ್ಎಫ್ನ ಕಾರ್ಯತಂತ್ರದ ಮಧ್ಯಸ್ಥಿಕೆಗಳ ಹಲವಾರು ಕ್ಷೇತ್ರಗಳನ್ನು ಆಡಳಿತ ಮಂಡಳಿ ಚರ್ಚಿಸಿತು.
ಎಲೆಕ್ಟ್ರಿಕ್ ವಾಹನ (ಇವಿ) ಚಲನಶೀಲತೆ, ಸುಧಾರಿತ ವಸ್ತುಗಳು, ಸೌರ ಕೋಶಗಳು, ಸ್ಮಾರ್ಟ್ ಮೂಲಸೌಕರ್ಯ, ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನ, ಸುಸ್ಥಿರ ಕೃಷಿ ಮತ್ತು ಫೋಟೋನಿಕ್ಸ್ ನಂತಹ ಆಯ್ದ ಆದ್ಯತೆಯ ಕ್ಷೇತ್ರಗಳಲ್ಲಿ ಮಿಷನ್ ಮೋಡ್ ನಲ್ಲಿ ಪರಿಹಾರ-ಕೇಂದ್ರಿತ ಸಂಶೋಧನೆಯ ಕಾರ್ಯಕ್ರಮಗಳನ್ನು ಎಎನ್ ಆರ್ ಎಫ್ ಪ್ರಾರಂಭಿಸಲಿದೆ. ಈ ಪ್ರಯತ್ನಗಳು ಆತ್ಮನಿರ್ಭರ ಭಾರತದೆಡೆಗಿನ ನಮ್ಮ ಮುನ್ನಡೆಗೆ ಪರಿಣಾಮಕಾರಿಯಾಗಿ ಪೂರಕವಾಗುತ್ತವೆ ಎಂಬುದನ್ನು ಆಡಳಿತ ಮಂಡಳಿಯು ಗಮನಿಸಿತು.
ಉದ್ಯಮದ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಪರಿವರ್ತನಾಶೀಲ ಅನ್ವಯಿಕ ಸಂಶೋಧನೆಯನ್ನು ಒತ್ತಿಹೇಳುತ್ತಾ, ಆಡಳಿತ ಮಂಡಳಿಯು ಜ್ಞಾನದ ಪ್ರಗತಿಗಾಗಿ ಮೂಲಭೂತ ಸಂಶೋಧನೆಯನ್ನು ಉತ್ತೇಜಿಸಲು ಒತ್ತು ನೀಡಿತು. ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ಅಂತರಶಿಸ್ತೀಯ ಸಂಶೋಧನೆಯನ್ನು ಬೆಂಬಲಿಸಲು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಸಂಶೋಧನೆಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿ ಅದನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹೊಂದಿಕೊಳ್ಳುವ ಮತ್ತು ಪಾರದರ್ಶಕ ಧನಸಹಾಯ ಕಾರ್ಯವಿಧಾನದೊಂದಿಗೆ ಸಂಶೋಧಕರನ್ನು ಸಬಲೀಕರಣಗೊಳಿಸುವ ಅವಶ್ಯಕತೆಯಿದೆ ಎಂಬುದನ್ನು ಸಹ ಒಪ್ಪಲಾಯಿತು.
ಎ ಎನ್ ಆರ್ ಎಫ್ ಕಾರ್ಯತಂತ್ರಗಳು ವಿಕಸಿತ ಭಾರತ 2047ರ ಗುರಿಗಳೊಂದಿಗೆ ಹೊಂದಿಕೆಯಾಗಬೇಕು ಮತ್ತು ಅನುಷ್ಠಾನವು ವಿಶ್ವದಾದ್ಯಂತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಅಳವಡಿಸಿಕೊಂಡ ಜಾಗತಿಕ ಉತ್ತಮ ಪದ್ಧತಿಗಳನ್ನು ಅನುಸರಿಸಬೇಕು ಎಂದು ಆಡಳಿತ ಮಂಡಳಿ ನಿರ್ದೇಶಿಸಿದೆ.
ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಸದಸ್ಯ ಕಾರ್ಯದರ್ಶಿಯಾಗಿ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ, ನೀತಿ ಆಯೋಗದ ಸದಸ್ಯ (ವಿಜ್ಞಾನ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಅದರ ಪದನಿಮಿತ್ತ ಸದಸ್ಯರಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಇತರ ಪ್ರಮುಖರೆಂದರೆ ಪ್ರೊ.ಮಂಜುಲ್ ಭಾರ್ಗವ (ಪ್ರಿನ್ಸ್ಟನ್ ವಿಶ್ವವಿದ್ಯಾಲಯ, ಯುಎಸ್ಎ), ಡಾ.ರೊಮೇಶ್ ಟಿ.ವಾಧ್ವಾನಿ (ಸಿಂಫನಿ ಟೆಕ್ನಾಲಜಿ ಗ್ರೂಪ್, ಯುಎಸ್ಎ), ಪ್ರೊ.ಸುಬ್ರಾ ಸುರೇಶ್ (ಬ್ರೌನ್ ವಿಶ್ವವಿದ್ಯಾಲಯ, ಯುಎಸ್ಎ), ಡಾ.ರಘುವೇಂದ್ರ ತನ್ವರ್ (ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್), ಪ್ರೊ.ಜಯರಾಮ್ ಎನ್.ಚೆಂಗಲೂರು (ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್) ಮತ್ತು ಪ್ರೊ.ಜಿ.ರಂಗರಾಜನ್ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್)
ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಬಗ್ಗೆ
ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ (ಎ ಎನ್ ಆರ್ ಎಫ್) ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಭಾರತದ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಹಾಗು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸಲು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳ ಪ್ರಕಾರ ದೇಶದಲ್ಲಿ ವೈಜ್ಞಾನಿಕ ಸಂಶೋಧನೆಗೆ ಉನ್ನತ ಮಟ್ಟದ ಕಾರ್ಯತಂತ್ರದ ನಿರ್ದೇಶನವನ್ನು ಒದಗಿಸಲು ಎ ಎನ್ ಆರ್ ಎಫ್ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಎ ಎನ್ ಆರ್ ಎಫ್ ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರಿ ಇಲಾಖೆಗಳು ಹಾಗು ಸಂಶೋಧನಾ ಸಂಸ್ಥೆಗಳ ನಡುವೆ ಸಹಯೋಗವನ್ನು ರೂಪಿಸುತ್ತದೆ.
*****