Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಧ್ಯಕ್ಷರಾದ ಬೈಡನ್ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತುಕತೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕದ ಅಧ್ಯಕ್ಷ ಘನತೆವೆತ್ತ ಶ್ರೀ ಜೋಸೆಫ್ ಆರ್. ಬೈಡನ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.

ಪ್ರಜಾಪ್ರಭುತ್ವ, ಕಾನೂನಿನ ನಿಯಮ ಮತ್ತು ಜನರ ನಡುವಿನ ಬಲವಾದ ಸಂಬಂಧಗಳ ಹಂಚಿಕೆಯ ಮೌಲ್ಯಗಳನ್ನು ಆಧರಿಸಿದ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವಕ್ಕೆ  ಅಧ್ಯಕ್ಷ ಬೈಡನ್ ಅವರ ಆಳವಾದ ಬದ್ಧತೆಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ದ್ವಿಪಕ್ಷೀಯ ಸಂಬಂಧಗಳಲ್ಲಿನ ಗಮನಾರ್ಹ ಪ್ರಗತಿಯನ್ನು ನಾಯಕರು ಪರಿಶೀಲಿಸಿದರು ಮತ್ತು ಭಾರತ-ಯುಎಸ್ ಸಹಭಾಗಿತ್ವವು ಎರಡೂ ದೇಶಗಳ ಜನರಿಗೆ ಮತ್ತು ಇಡೀ ಮಾನವೀಯತೆಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಒತ್ತಿ ಹೇಳಿದರು.

ಇಬ್ಬರೂ ನಾಯಕರು ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ವಿವರವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಉಕ್ರೇನ್ ಪರಿಸ್ಥಿತಿಯ ಬಗ್ಗೆ ಚರ್ಚಿಸುವಾಗ, ಪಿಎಂ ಮೋದಿ ಅವರು ಅಧ್ಯಕ್ಷ ಬೈಡನ್ ಅವರಿಗೆ ತಮ್ಮ  ಇತ್ತೀಚಿನ ಉಕ್ರೇನ್ ಭೇಟಿಯ ಬಗ್ಗೆ ವಿವರಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕತೆಯ ಪರವಾಗಿ ಭಾರತದ ಸ್ಥಿರ ನಿಲುವನ್ನು ಅವರು ಪುನರುಚ್ಚರಿಸಿದರು ಮತ್ತು ಶಾಂತಿ ಹಾಗು  ಸ್ಥಿರತೆ ಶೀಘ್ರವಾಗಿ ಮರಳಲು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.

ಇಬ್ಬರೂ ನಾಯಕರು ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಬಾಂಗ್ಲಾದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಮತ್ತು ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅವರು ಒತ್ತು ನೀಡಿದರು.

ಕ್ವಾಡ್ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.

ಅವರು ಸಂಪರ್ಕದಲ್ಲಿರಲು ಒಪ್ಪಿಕೊಂಡರು.

 

*****