Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಖಿಲ ಭಾರತ ಮಹಾಪೌರರ ಸಮ್ಮೇಳನದ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ

ಅಖಿಲ ಭಾರತ ಮಹಾಪೌರರ ಸಮ್ಮೇಳನದ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ


ಹರ ಹರ ಮಹಾದೇವ್!

ನಮಸ್ಕಾರ!

ಜನಪ್ರಿಯ ಮತ್ತು ಉಪಯುಕ್ತವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಸಂಪುಟದ ನನ್ನ ಸಹೋದ್ಯೋಗಿ, ಶ್ರೀ ಹರ್ದೀಪ್ ಸಿಂಗ್ ಪುರಿ ಜಿ, ಯುಪಿ ಸರ್ಕಾರದ ಸಚಿವರು, ಶ್ರೀ ಅಶುತೋಷ್ ಟಂಡನ್ ಜಿ ಮತ್ತು ನೀಲಕಂಠ ತಿವಾರಿ ಜಿ, ಅಖಿಲ ಭಾರತ ಮೇಯರ್ ಕೌನ್ಸಿಲ್‌ನ ಅಧ್ಯಕ್ಷರಾದ ಶ್ರೀ ನವೀನ್ ಜೈನ್ ಜಿ, ಕಾಶಿಯಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಉಪಸ್ಥಿತರಿರುವ ಎಲ್ಲಾ ಮೇಯರ್‌ಗಳು, ಇತರ ಗಣ್ಯರು, ಸಹೋದರ ಸಹೋದರಿಯರೇ,

ಕಾಶಿ ಸಂಸದನಾಗಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾನೇ ಕಾಶಿಯಲ್ಲಿಯೇ ಇದ್ದು ನಿಮ್ಮನ್ನು ವೈಯುಕ್ತಿಕವಾಗಿ ಸ್ವಾಗತಿಸುವ ಮೂಲಕ ನಿಮ್ಮನ್ನು ಗೌರವಿಸುವುದು ನನಗೆ ಬಹಳ ಅದೃಷ್ಟದ ಸಂದರ್ಭವಾಗಿತ್ತು. ಸಮಯದ ಅಭಾವದ ಕಾರಣ, ನಿಮ್ಮನ್ನು ಸ್ವಾಗತಿಸಲು ನಾನು ಅಲ್ಲಿಗೆ ಬಂದಿಲ್ಲ, ಆದರೆ ಕಾಶಿಯ ಜನರು ನಿಮ್ಮ ಆತಿಥ್ಯಕ್ಕೆ ಸರ್ವ ಪ್ರಯತ್ನಗಳನ್ನು  ಮಾಡಿರುವವರು ಎಂದು ನನಗೆ ಖಾತ್ರಿಯಿದೆ. ಅವರು ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವರು. ಏನಾದರೂ ಕೊರತೆಯಿದ್ದರೆ ಅದು ಕಾಶಿಯ ಜನರ ತಪ್ಪಲ್ಲ, ಆದರೆ ನನ್ನದು ಆದ್ದರಿಂದ ನೀವು ನನ್ನನ್ನು ಕ್ಷಮಿಸಿ. ನೀವು ಈ ಸಮ್ಮೇಳನವನ್ನು ಆನಂದಿಸುತ್ತೀರಿ ಮತ್ತು ಭಾರತದ ನಗರಗಳ ಉಜ್ವಲ ಭವಿಷ್ಯಕ್ಕಾಗಿ ನಿಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತೀರಿ ಮತ್ತು ಪರಸ್ಪರ ಅನೇಕ ವಿಷಯಗಳನ್ನು ಕಲಿಯುವಿರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಸ್ವಂತ ರೀತಿಯಲ್ಲಿ ನಿಮ್ಮ ನಗರಗಳನ್ನು ಸದಾ ಚಲನಶೀಲ‌ ಹಾಗು ಜೀವತುಂಬಿದ  ಮತ್ತು ಸುಂದರವಾಗಿ ರೂಪಿಸಲು ಸರ್ವ ಪ್ರಯತ್ನಗಳನ್ನು ಮಾಡುವಿರಿ ಎಂದು ನಾನು ದೃಢವಾಗಿ ನಂಬುತ್ತೇನೆ. ಎಲ್ಲಾ ಮೇಯರ್‌ಗಳು ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ನಗರಗಳಿಗೆ ಏನಾದರೊಂದನ್ನು ಕೊಡುಗೆ ನೀಡುವ ಬಯಕೆಯನ್ನು ಹೊಂದಿರಬೇಕು. 5-20-50 ವರ್ಷಗಳ ನಂತರವೂ ಜನರು ನಿಮ್ಮನ್ನು ನೆನಪಿಸಿಕೊಳ್ಳುವಂತೆ ನಿಮ್ಮ ನಗರದಲ್ಲಿ ನಿಮ್ಮ ಕೆಲಸದ ಛಾಪನ್ನು  ಬಿಡಲು ನೀವು ಖಂಡಿತವಾಗಿಯೂ ಬಯಸುತ್ತೀರಿ.  ಪ್ರತಿಯೊಬ್ಬರೂ ಈ ಕನಸನ್ನು ಹೊಂದಿರಬೇಕು ಮತ್ತು ನಿಮ್ಮ ಕೆಲಸಗಳು ಸ್ಮರಣೀಯವಾಗಬೇಕೆಂದು ಸಂಕಲ್ಪ ಮಾಡಬೇಕು ಮತ್ತು ನೀವು ಈ ನಿರ್ಣಯಕ್ಕೆ ಪೂರ್ಣ ಹೃದಯದಿಂದ ಬದ್ಧರಾಗಿರಬೇಕು. ಇಡೀ ನಗರದ ಜವಾಬ್ದಾರಿಯನ್ನು ಜನರು ನಮ್ಮ ಮೇಲೆ ವಹಿಸಿದಾಗ ಅದನ್ನು ಪೂರೈಸಲು ನಾವು ಪ್ರಯತ್ನಿಸಬೇಕು. ನೀವೆಲ್ಲರೂ ಖಂಡಿತವಾಗಿಯೂ ಆ ದಿಕ್ಕಿನಲ್ಲಿ ಏನಾದರೂ ಮಾಡುತ್ತೀರಿ ಎಂದು ನನಗೆ ಖಾತ್ರಿಯಿದೆ. ಉತ್ತಮ ಫಲಿತಾಂಶಗಳಿಗಾಗಿ ನೀವು ನಿಮ್ಮ ಪ್ರಯತ್ನಗಳನ್ನು ಮುಂದುವರಿಸಬೇಕು. ಈ ಮಹತ್ವದ ಕಾರ್ಯಕ್ರಮಕ್ಕಾಗಿ ನೀವು ಬನಾರಸ್, ನನ್ನ ಕಾಶಿಯನ್ನು ಆಯ್ಕೆ ಮಾಡಿದ್ದಕ್ಕಾಗಿ ನಗರಾಭಿವೃದ್ಧಿ ಸಚಿವಾಲಯ, ಯುಪಿ ಸರ್ಕಾರ ಮತ್ತು ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ. ದೇಶದ ಅಭಿವೃದ್ಧಿಗಾಗಿ ನಿಮ್ಮ ಸಂಕಲ್ಪಗಳನ್ನು ಬಾಬಾ ವಿಶ್ವನಾಥ್ ಆಶೀರ್ವದಿಸಿದಾಗ, ನೀವು ಹೊಸ ಸ್ಫೂರ್ತಿ ಮತ್ತು ಹೊಸ ಉತ್ಸಾಹದೊಂದಿಗೆ ಹಿಂತಿರುಗುತ್ತೀರಿ. ಕಾಶಿಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಹಲವು ಸಾಧ್ಯತೆಗಳೊಂದಿಗೆ ಎದುರು ನೋಡುತ್ತಿದ್ದೇನೆ. ಒಂದೆಡೆ, ಬನಾರಸ್ ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ, ಮತ್ತು ಇನ್ನೊಂದೆಡೆ, ಆಧುನಿಕ ಭಾರತದ ಆಧುನಿಕ ನಗರಗಳ ನೀಲನಕ್ಷೆ! ಇತ್ತೀಚೆಗಷ್ಟೇ ನಾನು ಕಾಶಿಯಲ್ಲಿದ್ದಾಗ ಕಾಶಿಯ ಅಭಿವೃದ್ಧಿ ಇಡೀ ದೇಶದ ಅಭಿವೃದ್ಧಿಗೆ ಮಾರ್ಗಸೂಚಿಯಾಗಬಹುದು ಎಂದು ಹೇಳಿದ್ದೆ. ನಮ್ಮ ದೇಶದ ಬಹುತೇಕ ನಗರಗಳು ಸಾಂಪ್ರದಾಯಿಕ ನಗರಗಳು ಹಾಗು ಸಾಂಪ್ರದಾಯಿಕ ರೀತಿಯಲ್ಲಿ ಅಭಿವೃದ್ಧಿ ಹೊಂದಿರುವಂತಹವು. ಆಧುನೀಕರಣದ ಈ ಯುಗದಲ್ಲಿ ಈ ನಗರಗಳ ಪ್ರಾಚೀನತೆಯೂ ಅಷ್ಟೇ ಮುಖ್ಯ. ನಮ್ಮ ಪ್ರಾಚೀನ ನಗರಗಳ ಪ್ರತಿಯೊಂದು ರಸ್ತೆ, ಕಲ್ಲು, ಕ್ಷಣ ಮತ್ತು ಇತಿಹಾಸದಿಂದ ನಾವು ಬಹಳಷ್ಟು ಕಲಿಯಬಹುದು. ಅವರ ಐತಿಹಾಸಿಕ ಅನುಭವಗಳನ್ನು ನಾವು ನಮ್ಮ ಜೀವನದ ಸ್ಫೂರ್ತಿಯನ್ನಾಗಿ ಮಾಡಬಹುದು. ನಮ್ಮ ಪರಂಪರೆಯನ್ನು ಸಂರಕ್ಷಿಸಲು ಮತ್ತು ಸುಂದರಗೊಳಿಸಲು ನಾವು ಹೊಸ ಮಾರ್ಗಗಳನ್ನು ಅಭಿವೃದ್ಧಿಪಡಿಸಬಹುದು. ನಮ್ಮ ಸ್ಥಳೀಯ ಕಲಾ ಕೌಶಲ್ಯ ಮತ್ತು ಉತ್ಪನ್ನಗಳನ್ನು ಹೇಗೆ ಮುನ್ನಡೆಸುವುದು ಮತ್ತು ಅವುಗಳನ್ನು ನಗರದ ವೈಶಿಷ್ಟ್ಯವನ್ನಾಗಿ ಹೇಗೆ ಮಾಡುವುದು ಎನ್ನುವುದನ್ನು ನಾವು ಕಲಿಯಬಹುದು!

ಸ್ನೇಹಿತರೇ,

ನೀವು ಬನಾರಸ್‌ನಲ್ಲಿ  ತಿರುಗಾಡಿದಾಗ ಮತ್ತು ನಿಮ್ಮಲ್ಲಿ ಹಲವರು ಈ ಹಿಂದೆಯೇ ಭೇಟಿ ನೀಡಿರಬೇಕು, ನೀವು ಖಂಡಿತವಾಗಿಯೂ ಹೊಸ ಬದಲಾವಣೆಗಳನ್ನು ಕಾಣುತ್ತೀರಿ ಮತ್ತು ಹಳೆಯ ನೆನಪುಗಳೊಂದಿಗೆ ಹೋಲಿಸುತ್ತೀರಿ. ಮತ್ತು ಅದೇ ಸಮಯದಲ್ಲಿ, ನಿಮ್ಮ ನಗರವು ನಿಮ್ಮ ಮನಸ್ಸಿಗೆ ಬರುತ್ತದೆ. ನೀವು ಕಾಶಿಯ ಬೀದಿ ಮತ್ತು ನದಿಯನ್ನು ನಿಮ್ಮ ನಗರದೊಂದಿಗೆ ಹೋಲಿಸಲು ಪ್ರಯತ್ನಿಸುತ್ತೀರಿ ಮತ್ತು ನಿಮ್ಮ ಸಹ ಮಹಾಪೌರರೊಂದಿಗೆ ಚರ್ಚಿಸುತ್ತೀರಿ. ಅವರೊಂದಿಗೆ ಚರ್ಚಿಸುವಾಗ ನೀವು ಹೊಸ ಆಲೋಚನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುತ್ತೀರಿ.  ಮೇಯರ್ ತನ್ನ ನಗರದಲ್ಲಿ ಆ ಕೆಲಸವನ್ನು ಪುನರಾವರ್ತಿಸಿದಾಗ, ನಿಮ್ಮ ನಗರ ಮತ್ತು ರಾಜ್ಯದ ಜನರು ತುಂಬಾ ಸಂತೋಷಪಡುತ್ತಾರೆ ಹಾಗು ಹೊಸ ನಂಬಿಕೆಯನ್ನು ಪಡೆಯುತ್ತಾರೆ. ನಾವು ವಿಕಾಸವನ್ನು ನಂಬಲು ಪ್ರಯತ್ನಿಸಬೇಕು, ಭಾರತಕ್ಕೆ ಇಂದು ಕ್ರಾಂತಿಯ ಅಗತ್ಯವಿಲ್ಲ. ನಮಗೆ ಕಾಯಕಲ್ಪ ಬೇಕು ಏಕೆಂದರೆ ಹಳೆಯದನ್ನೆಲ್ಲಾ ಕೆಡವವುದು ನಮ್ಮ ಮಾರ್ಗವಲ್ಲ.   ಹಳೆಯದನ್ನು ಮೆಲುಕು ಹಾಕುವ ಮತ್ತು ಆಧುನಿಕ ಯುಗದ ಅಗತ್ಯಗಳನ್ನು ಪೂರೈಸುವ ಮೂಲಕ ನಾವು ಮುಂದುವರಿಯಲು ಪ್ರಯತ್ನಿಸಬೇಕು. ನೀವು ನೋಡುವಂತೆ, ದೇಶಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ ಮತ್ತು ಪ್ರತಿ ವರ್ಷ ಸ್ವಚ್ಛ ನಗರವನ್ನು ಘೋಷಿಸಲಾಗುತ್ತದೆ. ಕೆಲವು ನಗರಗಳು ತಮ್ಮ ಸ್ಥಾನವನ್ನು ತಾವು  ಪಡೆದುಕೊಂಡಿವೆ, ಇನ್ನು ಕೆಲವು ನಗರಗಳು ನಿರ್ದಿಷ್ಟ ನಗರಕ್ಕೆ ಮಾತ್ರ ಪ್ರಶಸ್ತಿ ಸಿಗುತ್ತವೆ ಎಂದುಕೊಂಡಿವೆ.  ನಮ್ಮಿಂದ ಸಾಧ್ಯವಿಲ್ಲ ಎನ್ನುವ ಈ ಮನಸ್ಥಿತಿ ಇರಬಾರದು. ಮುಂದಿನ ಬಾರಿ ಸ್ವಚ್ಛತೆಯ ಪೈಪೋಟಿಯಲ್ಲಿ ನೀವು ಯಾರಿಗೂ ಎರಡನೇ ಸ್ಥಾನ ನೀಡುವುದಿಲ್ಲ ಎಂದು ಎಲ್ಲಾ  ಮಹಾಪೌರರು ಪ್ರತಿಜ್ಞೆ ಮಾಡಬೇಕು. ನೀವು ಈ ನಿರ್ಣಯವನ್ನು ಮಾಡಬಹುದೇ ಅಥವಾ ಇಲ್ಲವೇ? ಸ್ವಚ್ಛ ನಗರಗಳಿಗೆ ಬಹುಮಾನಗಳನ್ನು ನೀಡುವಾಗ ಮತ್ತು ಅವುಗಳನ್ನು ಗುರುತಿಸುವಾಗ, ನಾನು ಹರ್ದೀಪ್ ಪುರಿ ಜಿ ಅವರನ್ನು ವಿನಂತಿಸುತ್ತೇನೆ, ನಾವು ಏಕಕಾಲದಲ್ಲಿ ಅತ್ಯುತ್ತಮವಾಗಿರಲು ಪ್ರಯತ್ನಿಸುತ್ತಿರುವ ನಗರಗಳನ್ನು ಸಹ ಗುರುತಿಸಬೇಕು. ಅದೇ ಸಮಯದಲ್ಲಿ, ನಾವು ಮೂರು ಕಳಪೆ ಪ್ರದರ್ಶನದ ನಗರಗಳ ಪಟ್ಟಿಯನ್ನು ಮಾಡಬೇಕು ಮತ್ತು ಆ ರಾಜ್ಯಗಳಲ್ಲಿ ಸ್ವಚ್ಛತೆಗಾಗಿ ಏನನ್ನೂ ಮಾಡದಿರುವ ಬಗ್ಗೆ ಜಾಹೀರಾತು ನೀಡಬೇಕು. ಇದು ಜನರಿಂದ ಒತ್ತಡಕ್ಕೆ ಕಾರಣವಾಗುತ್ತದೆ ಮತ್ತು ನಂತರ ಉತ್ತಮವಾದದ್ದನ್ನು ಮಾಡಲು ಅವರನ್ನು ಪ್ರೇರೇಪಿಸುತ್ತದೆ. ಶುಚಿತ್ವವನ್ನು ಒಂದು ವರ್ಷದ ಕಾರ್ಯಕ್ರಮವಾಗಿ ನೋಡಬೇಡಿ ಎಂದು ನಾನು ಮೇಯರ್‌ಗಳಿಗೆ ವಿನಂತಿಸುತ್ತೇನೆ. ನೀವು ಪ್ರತಿ ತಿಂಗಳು ಪುರಸಭೆಯ ಮಂಡಳಿಗಳ ನಡುವೆ ಸ್ವಚ್ಛತಾ ಸ್ಪರ್ಧೆಯನ್ನು ಆಯೋಜಿಸಬಹುದೇ? ಈ ಮಂಡಳಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ತೀರ್ಪುಗಾರರನ್ನು ನೇಮಿಸಬೇಕು. ಒಂದು ವೇಳೆ ಮಂಡಳಿಯ ಕೌನ್ಸಿಲರ್‌ಗಳ ನಡುವೆ ಪೈಪೋಟಿ ಇದ್ದರೆ ಅದು ಒಟ್ಟು  ಪರಿಣಾಮವನ್ನು ಬೀರುತ್ತದೆ ಮತ್ತು ಇಡೀ ನಗರದ ರೂಪವನ್ನು ಬದಲಾಯಿಸುವಲ್ಲಿ ಉಪಯುಕ್ತವಾಗಿರುತ್ತದೆ. ಸುಂದರತೆ ಸ್ವಚ್ಛತೆಯ ಮತ್ತೊಂದು ಪ್ರಮುಖ ಅಂಶವಾಗಿದೆ. ಪ್ರಪಂಚದಾದ್ಯಂತ ನಡೆಯುತ್ತಿರುವ ಸೌಂದರ್ಯ ಸ್ಪರ್ಧೆಗಳನ್ನು ನಾನು ಉಲ್ಲೇಖಿಸುತ್ತಿಲ್ಲ. ನಗರಗಳನ್ನು ಸುಂದರವಾಗಿಡುವುದಕ್ಕೆ ಅಭಿಯಾನಗಳನ್ನು ಪ್ರಾರಂಭಿಸಬಹುದು. ಶುಚಿತ್ವ ಮತ್ತು ಸೌಂದರ್ಯಶಾಸ್ತ್ರವು ಪರಿಧಿಯಾಗಿರಬಹುದು. ಪ್ರತಿ ನಗರವು ತೀರ್ಪುಗಾರರನ್ನು ನೇಮಿಸಬೇಕು. ಗೋಡೆಗಳಿಗೆ ಹೇಗೆ ಬಣ್ಣ ಬಳಿಯಲಾಗಿದೆ, ಅಂಗಡಿಗಳ ಮೇಲೆ ಪ್ರದರ್ಶನ ಫಲಕಗಳನ್ನು ಹೇಗೆ ಹಾಕಲಾಗಿದೆ, ಬೀದಿಗಳು ಮತ್ತು ವಿಳಾಸಗಳ ಫಲಕಗಳನ್ನು ಹೇಗೆ ಬರೆಯಲಾಗಿದೆ ಎಂದು ಸ್ಪರ್ಧೆ ಮಾಡಬಹುದು. ಅಂತಹ ಅನೇಕ ವಿಷಯಗಳಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಸಾಮಾನ್ಯ ಜನರಿಂದ ನೀವು ಮಾಡಿಸಬಹುದಾದ ಮೂರು ವಿಷಯಗಳಿವೆ. ಮೊದಲನೆಯದಾಗಿ, ಸ್ವಾತಂತ್ರ್ಯದ ಕೆಲವು ಘಟನೆಗಳ ಆಧಾರದ ಮೇಲೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಬಹುದು. ನಗರ ಮಟ್ಟದಲ್ಲಿ ಸ್ಪರ್ಧೆ ಇರಬೇಕು. ಮುಂದಿನ ವರ್ಷ ಜನವರಿ 26ರವರೆಗೆ ಅಂತಹ ವಾತಾವರಣ ನಿರ್ಮಿಸಿ. ಅಂತೆಯೇ, ನಿಮ್ಮ ನಗರದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಘಟನೆಗಳ ಆಧಾರದ ಮೇಲೆ ಹಾಡಿನ ಸ್ಪರ್ಧೆಯನ್ನು ನಡೆಸಬಹುದು. ಅದೇ ಧಾಟಿಯಲ್ಲಿ ನಮ್ಮ ತಾಯಂದಿರು ಮತ್ತು ಹೆಣ್ಣು ಮಕ್ಕಳನ್ನು ಒಳಗೊಂಡ ಕಾರ್ಯಕ್ರಮವನ್ನು ಆಯೋಜಿಸಬಹುದು. ನವಜಾತ ಶಿಶುಗಳಿಗೆ ಲಾಲಿ ಹಾಡುವ ಹಳೆಯ ಸಂಪ್ರದಾಯ ನಮ್ಮಲ್ಲಿತ್ತು. ನಾವು ಆಧುನಿಕ ಲಾಲಿಗಳನ್ನು ಮಾಡಬಹುದೇ? 2047ಕ್ಕೆ ದೇಶಕ್ಕೆ 100 ವರ್ಷ ತುಂಬಿದಾಗ ಭಾರತದ ಭವಿಷ್ಯ ಏನಾಗಬಹುದು, ತಾಯಿ ಲಾಲಿ ಹೇಳುತ್ತಿರುವ ಇಂದು ಹುಟ್ಟುವ ಮಗುವಿನ ಕನಸುಗಳೇನು? ಅವಳು ಉಜ್ವಲ ಭವಿಷ್ಯದ ಲಾಲಿಯನ್ನು ಹೇಳಬೇಕು ಮತ್ತು ಅವನನ್ನು ಮೊದಲಿನಿಂದಲೂ ಸುಸಂಸ್ಕೃತನನ್ನಾಗಿ ಮಾಡಬೇಕು. ನಾವು ಇದನ್ನು ಮಾಡಬಹುದೇ? ನಿನ್ನೆ, ನೀವು ಗಂಗಾನದಿಯ ಘಾಟ್ ಗಳನ್ನು ನೋಡಿರಬೇಕು. ಪ್ರಪಂಚದಾದ್ಯಂತದ ಪ್ರವಾಸಿಗರು ಕಾಶಿಗೆ ಬರುತ್ತಾರೆ. ಕಾಶಿಯ ಆರ್ಥಿಕತೆಯನ್ನು ನಡೆಸುವಲ್ಲಿ ಗಂಗಾಮಾತೆಯ ಪಾತ್ರ ದೊಡ್ಡದಾಗಿದೆ. ಗಂಗಾ ಮಾತೆಯ ದಡದಲ್ಲಿ ಪುನರುಜ್ಜೀವನಗೊಳಿಸುವ ಕಾರ್ಯವು ಕಾಶಿಯ ಆರ್ಥಿಕತೆಗೆ ಬಲವನ್ನು ನೀಡುತ್ತದೆ. ಕೆಲವು ನದಿಗಳ ದಡದಲ್ಲಿ ಹಲವಾರು ನಗರಗಳಿವೆ, ಆದರೆ ಕಾಲಾನಂತರದಲ್ಲಿ, ಆ ನದಿಗಳು  ತನ್ನತನವನ್ನು ಕಳೆದುಕೊಂಡಿವೆ ಮತ್ತು ಅವುಗಳಲ್ಲಿ ಹಲವು ಕೊಳಕು ಚರಂಡಿಗಳಾಗಿವೆ. ಈ ನದಿಗಳ ಬಗ್ಗೆ ನಾವು ಅತ್ಯಂತ ಸೂಕ್ಷ್ಮವಾದ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಇಡೀ ಜಗತ್ತು ನೀರಿನ ಬಿಕ್ಕಟ್ಟು, ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವ ಸಮಯದಲ್ಲಿ ಮತ್ತು ನಾವು ಆ ನದಿಗಳ ಬಗ್ಗೆ ಕಾಳಜಿ ವಹಿಸದಿದ್ದರೆ ನಾವು ಅವರ ಬಗ್ಗೆ ಹೇಗೆ ಹೆಮ್ಮೆಪಡಬಹುದು?

ನಾವು ಪ್ರತಿ ವರ್ಷ ಏಳು ದಿನಗಳ ಕಾಲ ನದಿ ಉತ್ಸವವನ್ನು ಆಯೋಜಿಸಬಹುದೇ? ನದಿಯನ್ನು ಸ್ವಚ್ಛಗೊಳಿಸುವ ಅಥವಾ ನದಿಯ ಇತಿಹಾಸ ಅಥವಾ ನದಿಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಇಡೀ ನಗರವು ಭಾಗಿಯಾಗಬೇಕು. ಕವಿಗೋಷ್ಠಿ ಇರಬಹುದು. ನಗರದ ಅಭಿವೃದ್ಧಿಯ ಪಯಣದ ಕೇಂದ್ರಬಿಂದುವಾಗಿರುವ ನದಿಯನ್ನು ನಾವು ಹಗುರವಾಗಿ ಪರಿಗಣಿಸಬಾರದು. ನಿಮ್ಮ ನಗರಕ್ಕೆ ಹೊಸ ಜೀವನ ತುಂಬಿರುವುದನ್ನು ನೀವು ಗಮನಿಸಬಹುದು ಮತ್ತು ನದಿಯ ಪ್ರಾಮುಖ್ಯತೆಯ ಬಗ್ಗೆ ಹೊಸ ಉತ್ಸಾಹ ಇರುತ್ತದೆ.

ಅದೇ ರೀತಿ, ಒಂದೇ ಸಲ ಬಳಸಿಲಿಕ್ಕಾಗುವ ಪ್ಲಾಸ್ಟಿಕ್ ಬಗ್ಗೆ ನಮ್ಮ ನಗರಗಳಲ್ಲಿ ನಾವು ಎಷ್ಟು ಜಾಗೃತರಾಗಿದ್ದೇವೆ ಎಂಬುದನ್ನು ನೀವು ಗಮನಿಸಿರಬೇಕು. ನಮ್ಮ ನಗರದಲ್ಲಿ ಎಲ್ಲಿಯೂ ಒಂದು ಬಾರಿ ಬಳಸಿದ ಪ್ಲಾಸ್ಟಿಕ್ ಬಳಸದಂತೆ ಅಂಗಡಿಯವರು ಮತ್ತು ವ್ಯಾಪಾರಿಗಳಿಗೆ ತಿಳಿಸಬೇಕು. ಅದನ್ನು ವ್ಯವಸ್ಥೆಯಿಂದ ಹೊರತೆಗೆಯೋಣ ಮತ್ತು ಬದಲಿಗೆ ಬಡವರು ಪತ್ರಿಕೆ ತ್ಯಾಜ್ಯದಿಂದ ಮಾಡಿದ ಕಾಗದದ ಚೀಲಗಳನ್ನು ಬಳಸೋಣ. ಒಂದೋ ಅದನ್ನು ಬಳಸಿ ಅಥವಾ ಶಾಪಿಂಗ್‌ಗೆ ಹೋಗುವಾಗ ಮನೆಯಿಂದ ಬ್ಯಾಗ್ ತೆಗೆದುಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮತ್ತು ಈಗ ಸರ್ಕ್ಯುಲರ್ ಎಕಾನಮಿಯ ಪ್ರಾಮುಖ್ಯತೆಯು ಪ್ರಪಂಚದಾದ್ಯಂತ ಹೆಚ್ಚುತ್ತಿದೆ, ತ್ಯಾಜ್ಯದಿಂದ ಉತ್ತಮವಾದುದನ್ನು ಮಾಡಲಾಗುತ್ತಿದೆ. ಕೆಲವೊಮ್ಮೆ ನಗರದಲ್ಲಿ ತ್ಯಾಜ್ಯದಿಂದ ಉತ್ತಮವಾದದನ್ನು ಪಡೆಯಲು ಮತ್ತು ಪ್ರದರ್ಶನ ಅಥವಾ ಮಾರುಕಟ್ಟೆ ಮೇಳವನ್ನು ಆಯೋಜಿಸಲು ಸ್ಪರ್ಧೆಯಿಡಬಹುದು.  ತ್ಯಾಜ್ಯ ಉತ್ಪನ್ನಗಳಿಂದ ಅದ್ಭುತವಾದ ವಸ್ತುಗಳನ್ನು ತಯಾರಿಸುವ ಅನೇಕ ವಿನ್ಯಾಸಕರರನ್ನು ನೀವು ನೋಡಿರಬಹುದು ಮತ್ತು ಕೂಡುರಸ್ತೆಗಳಲ್ಲಿ ಇರಿಸಿದರೆ, ಅದು ಸ್ಮಾರಕವಾಗುತ್ತದೆ. ತ್ಯಾಜ್ಯ ನಿರ್ವಹಣೆಯು ಆದಾಯದ ಮಾದರಿಯಾಗಬಹುದು. ಕೆಲವು ನಗರಗಳು ಮಾಡಿದಂತೆ ಆ ಮಾದರಿಯನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದರ ಕಡೆಗೆ ನಾವು ಕೆಲಸ ಮಾಡಬೇಕು. ಅದೇ ರೀತಿ ಕೊಳಚೆ ನೀರನ್ನು ಮರುಬಳಕೆ ಮಾಡಬಹುದು. ನಾವು ಇಂದು ತೋಟಗಳಲ್ಲಿ ನೀರನ್ನು ಬಳಸುತ್ತೇವೆ. ಹಳ್ಳಿಯ ರೈತರಿಗೆ  ನೀರು ಸಿಗುವುದು ನಿಂತು ಅವರು ನೀರು ಕೊಡಿ ಎಂದು ನಗರಕ್ಕೆ ಒತ್ತಾಯಿಸಿದರೆ ಏನಾಗುತ್ತದೆ ಎನ್ನುವುದನ್ನು ನೀವು ಊಹಿಸಬಹುದು.

ಉದ್ಯಾನಗಳಲ್ಲಿ ಕುಡಿಯುವ ನೀರಿನ ಅಗತ್ಯವಿಲ್ಲದ ಕಡೆಗಳಲ್ಲಿ ಸಂಸ್ಕರಿಸಿದ ಕೊಳಚೆ ನೀರನ್ನು ಬಳಸಬಹುದು. ತ್ಯಾಜ್ಯ ಸಂಪತ್ತಾಗಿ ಪರಿವರ್ತನೆಯಾಗುವುದಲ್ಲದೆ ನೀರಿನ ಕೊಳೆಯೂ ದೂರವಾಗುತ್ತದೆ. ನಗರದ ಆರೋಗ್ಯದಲ್ಲೂ ಗಣನೀಯ ಬದಲಾವಣೆಯಾಗಲಿದೆ. ನಗರಗಳ ಆರೋಗ್ಯಕ್ಕಾಗಿ ಈ ತಡೆಗಟ್ಟುವ ವಿಷಯಗಳಿಗೆ ನಾವು ಒತ್ತು ನೀಡದಿದ್ದರೆ, ನಾವು ಎಷ್ಟು ಆಸ್ಪತ್ರೆಗಳನ್ನು ನಿರ್ಮಿಸಿದರೂ ಸಾಕಾಗುವುದಿಲ್ಲ. ಆದ್ದರಿಂದ, ನಾವು ನಮ್ಮ ನಗರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡಲು ಪ್ರಯತ್ನಿಸಬೇಕು. ಯಾವುದೇ ಗೊತ್ತುಪಡಿಸಿದ ಸ್ಥಳದಲ್ಲಿ ನಾವು ನಮ್ಮ ಅಡುಗೆಮನೆಯ, ಬೀದಿಗಳ ಮತ್ತು ನಿರ್ಮಾಣ ಸ್ಥಳಗಳ ಕಸವನ್ನು ಎಸೆಯಬಾರದು. ನಾವು ಹೊಸತನಕ್ಕೆ ಪ್ರಯತ್ನಿಸಬೇಕು. ಉದಾಹರಣೆಗೆ, ಸೂರತ್‌ನಲ್ಲಿ ಕೊಳಚೆ ನೀರು ಸಂಸ್ಕರಣೆಯ ಆಧುನಿಕ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಕೊಳಚೆ ನೀರನ್ನು ಸಂಸ್ಕರಿಸಿದ ನಂತರ ಕೈಗಾರಿಕೆಗೆ ಮಾರಾಟ ಮಾಡಿ ಸ್ಥಳೀಯ ಸಂಸ್ಥೆ ಹಣ ಮಾಡುತ್ತಿದೆ. ಇತರ ನಗರಗಳಲ್ಲಿಯೂ ಇಂತಹದ್ದೇನಾದರೂ ನಡೆಯುತ್ತಿರಬೇಕು. ನನಗೆ ಅದರ ಅರಿವಿದ್ದುದರಿಂದ ನಾನು ಪ್ರಸ್ತಾಪಿಸಿದೆ. ನಗರಗಳು ತಮ್ಮ ಆದಾಯವನ್ನು ಹೆಚ್ಚಿಸಬಹುದು. ನಮ್ಮ ನಗರಗಳ ಜನ್ಮ ದಿವಸವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸಬೇಕು, ಕೆಲವು ದಾಖಲೆಗಳು ಎಲ್ಲೋ ಲಭ್ಯವಿರುತ್ತವೆ. ನಗರದ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು. ನಗರದ ಹೆಮ್ಮೆಗಾಗಿ ಹಲವು ಸ್ಪರ್ಧೆಗಳು ನಡೆಯಬೇಕು. ನಗರಕ್ಕೆ ಏನಾದರೂ ಮಾಡುವ ಮನೋಭಾವ ಪ್ರತಿಯೊಬ್ಬ ನಾಗರಿಕರಲ್ಲಿಯೂ ಇರಬೇಕು. ಇಲ್ಲದಿದ್ದರೆ, ಏನಾಗುತ್ತದೆ ಎಂದರೆ ನಾವು ಮುಖ್ಯವಲ್ಲದ ವಿಷಯಗಳನ್ನು ಮಾತ್ರ ಚರ್ಚಿಸುವಂತಾಗುತ್ತದೆ.

ಯೋಗಿ ಜಿ ತಮ್ಮ ಭಾಷಣದಲ್ಲಿ ಎಲ್ಇಡಿ ಬಲ್ಬ್‌ಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ನಿಮ್ಮ ನಗರದಲ್ಲಿ ಎಲ್‌ಇಡಿ ಬಲ್ಬ್ ಇಲ್ಲದ ಒಂದೇ ಒಂದು ಕಂಬವೂ ಇರುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬಹುದೇ? ಮಹಾನಗರ ಪಾಲಿಕೆಯ ವಿದ್ಯುತ್ ಬಿಲ್ ಸಂಪೂರ್ಣವಾಗಿ ಕಡಿಮೆಯಾಗುವುದು ಮತ್ತು ಬೆಳಕಿನ ಹೊಳಪು ಸಹ ವಿಭಿನ್ನವಾಗಿರುವುದನ್ನು ನೀವು ಕಾಣಬಹುದು. ಈ ಅಭಿಯಾನವನ್ನು ಎರಡು ಅಥವಾ ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಅದೇ ರೀತಿ ನೀವು ಮತದಾರರನ್ನು ಸಂಪರ್ಕಿಸಬಹುದು. ಮಧ್ಯಮ ವರ್ಗದ ಕುಟುಂಬಗಳಲ್ಲಿ ಎಲ್ ಇಡಿ ಬಲ್ಬ್ ಗಳ ಬಳಕೆ ಇದ್ದರೆ ಅವರ ಮಾಸಿಕ ವಿದ್ಯುತ್ ಬಿಲ್ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿ 200-2000 ರೂಪಾಯಿ ಉಳಿತಾಯವಾಗಲಿದೆ. ನಾವು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಬೇಕಾಗಿದೆ ಮತ್ತು ಈಗಾಗಲೇ ಹಲವಾರು ಯೋಜನೆಗಳು ಲಭ್ಯವಿದೆ.

ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವವಿದ್ದು, ಅದಕ್ಕೆ ಒತ್ತು ನೀಡಬೇಕು. ಶಾಲೆಗಳಲ್ಲಿ ಎನ್‌ಸಿಸಿ ಘಟಕಗಳನ್ನು ತೊಡಗಿಸಿಕೊಳ್ಳಿ. ವಿವಿಧ ಸ್ಥಳಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಶಹೀದ್ ಭಗತ್ ಸಿಂಗ್, ಮಹಾರಾಣಾ ಪ್ರತಾಪ್ ಅಥವಾ ಛತ್ರಪತಿ ಶಿವಾಜಿ ಮಹಾರಾಜರ ವಿವಿಧ ಪ್ರತಿಮೆಗಳು ಇರುತ್ತವೆ. ಪ್ರತಿಮೆಗಳನ್ನು ಸ್ಥಾಪಿಸುವಾಗ ನಾವು ಬಹಳ ಜಾಗೃತರಾಗಿರುತ್ತೇವೆ. ಆದರೆ ಸ್ವಲ್ಪ ಸಮಯದ ನಂತರ, ಯಾರೂ ಗಮನಿಸುವುದಿಲ್ಲ. ಜನ್ಮದಿನದಂದು ಮಾತ್ರ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ. ಎನ್‌ಸಿಸಿ ತಂಡಗಳನ್ನು ಗುಂಪುಗಳಲ್ಲಿ ರಚಿಸಬೇಕು, ಅವರನ್ನು ಮೂರ್ತಿಗಳ ಸ್ವಚ್ಛತೆಗೆ ನಿಯೋಜಿಸಬೇಕು. ಆ ಪ್ರತಿಮೆಗಳಿಗೆ ಭೇಟಿ ನೀಡುವ ಮಕ್ಕಳಿಗೆ ಈ ವ್ಯಕ್ತಿಗಳ ಕೊಡುಗೆಯ ಬಗ್ಗೆ ತಿಳಿಸಬೇಕು. ಇವು ಸಣ್ಣ ವಿಷಯಗಳಾಗಿದ್ದರೂ ಇಡೀ ನಗರವನ್ನೇ ಬದಲಾಯಿಸುವ ಮಹಾನ್ ಶಕ್ತಿ ಹೊಂದಿವೆ.

ಸ್ವಾತಂತ್ರ್ಯದ ಈ ಅಮೃತ ಮಹೋತ್ಸವ ನಿಮ್ಮ ಅಧಿಕಾರಾವಧಿಯಲ್ಲಿ ಬಂದಿದೆ. ಅಂತೆಯೇ, ನೀವು ಸ್ವಾತಂತ್ರ್ಯ ಚಳುವಳಿಗೆ ಹೊಂದಿಕೊಳ್ಳುವ ಅಥವಾ ಭಾರತದ ಉಜ್ವಲ ಭವಿಷ್ಯವನ್ನು ಎತ್ತಿ ತೋರಿಸುವ ವಿಶಿಷ್ಟ ಸ್ಮಾರಕವನ್ನು ಮಾಡಬಹುದು ಮತ್ತು ಅದನ್ನು ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಬಹುದು. ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮಾಡಬೇಕೇ ಹೊರತು ಸರ್ಕಾರದ ಹಣದಿಂದಲ್ಲ. ಸ್ಪರ್ಧೆ ಏರ್ಪಡಿಸಿ ಉತ್ತಮ ವಿನ್ಯಾಸಗಳಿಗೆ ಪ್ರಶಸ್ತಿ ನೀಡಬೇಕು. ವಿನ್ಯಾಸಕರು ತಮ್ಮ ಜೀವನದ ಸದಾ ನೆನಪಲ್ಲಿರುವ ಕೃತಿಯನ್ನು ರಚಿಸುತ್ತಾರೆ. ನಿಮ್ಮ ನಗರವು ಒಂದು ಗುರುತನ್ನು ಹೊಂದಿರಬೇಕು ಎಂದು ನೀವು ಯೋಚಿಸುವುದಿಲ್ಲವೇ? ನಿರ್ದಿಷ್ಟ ಆಹಾರ ಪದಾರ್ಥಗಳಿಗೆ ಹೆಸರುವಾಸಿಯಾದ ನಗರವಿರಬಹುದು. ಉದಾಹರಣೆಗೆ, ಬನಾರಸಿ ಪಾನ್! ಯಾರಾದರೂ ಕಷ್ಟಪಟ್ಟು ಕೆಲಸ ಮಾಡಿರಬೇಕು ಮತ್ತು ಆದ್ದರಿಂದ ಅದು ಗುರುತಾಗಿದೆ. ಬಹುಶಃ ಈ ಎಲ್ಲಾ ಮೇಯರ್‌ಗಳೂ ಬನಾರಸ್‌ನ ಪಾನ್ ರುಚಿ ನೋಡುತ್ತಾರೆ. ನಿಮ್ಮ ನಗರದಲ್ಲಿ ನೀವು ಬ್ರ್ಯಾಂಡ್ ಮಾಡಬಹುದಾದ ಕೆಲವು ಉತ್ಪನ್ನಗಳು, ಕೆಲವು ಐತಿಹಾಸಿಕ ಸ್ಥಳಗಳು ಇರುತ್ತವೆ ಎಂದು ನಾನು ಹೇಳಲು ಬಯಸುತ್ತೇನೆ.

ಉತ್ತರ ಪ್ರದೇಶವು ಒಂದು ಜಿಲ್ಲೆ, ಒಂದು ಉತ್ಪನ್ನ ಎಂಬ ಅತ್ಯಂತ ಶ್ಲಾಘನೀಯ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದು ಅತ್ಯಂತ ಪ್ರಸಿದ್ಧವಾದ ಜಿಲ್ಲೆಯ ಒಂದು ನಿರ್ದಿಷ್ಟ ಉತ್ಪನ್ನವನ್ನು ನಕ್ಷೆಯನ್ನು  ಮಾಡಿದೆ. ಸ್ಮರಣಿಕೆಗಳೂ ಇವೆ. ಇದು ಉತ್ತಮ ಪರಿಣಾಮವನ್ನು ಸೃಷ್ಟಿಸಿದೆ. ನಿಮ್ಮ ನಗರದಲ್ಲಿ ಕ್ರೀಡಾ ಸಾಮಗ್ರಿಗಳಿಗೆ ಹೆಸರುವಾಸಿಯಾದ ಕೆಲವು ಸ್ಥಳವಿರುತ್ತದೆ. ಉದಾಹರಣೆಗೆ, ಬನಾರಸಿ ಸೀರೆ ದೇಶದಾದ್ಯಂತ ಪ್ರಸಿದ್ಧವಾಯಿತು. ದೇಶದ ಯಾವುದೇ ಭಾಗದಲ್ಲಿ ಮದುವೆಯಾದಾಗ, ಪ್ರತಿಯೊಬ್ಬರಿಗೂ ಬಾನಾರಸಿ ಸೀರೆಯನ್ನು ಖರೀದಿಸಬೇಕು  ಅನಿಸುತ್ತದೆ. ಯಾರೋ ಅದರ ಬ್ರ್ಯಾಂಡಿಂಗ್ ಮಾಡಿರಬೇಕು. ಅದೇ ರೀತಿ, ನಿಮ್ಮ ನಗರದಲ್ಲಿ ದೇಶದಲ್ಲೇ ಪ್ರಸಿದ್ಧವಾಗಿರುವ ನಿರ್ದಿಷ್ಟ ಉತ್ಪನ್ನ ಇರಬೇಕು. ಅದು ಪಾಟ್ನಾ, ಹೈದರಾಬಾದ್, ಕೊಚ್ಚಿ, ತಿರುವನಂತಪುರಂ ಅಥವಾ ಚೆನ್ನೈ ಯಾವುದೇ ನಗರವಾಗಿರಬಹುದು. ನಿಮ್ಮ ನಗರದ ವಿಶೇಷತೆ ಏನೆಂದು ಕಂಡುಹಿಡಿಯಲು ಪ್ರಯತ್ನಿಸಿ. ಇದು ನಮ್ಮ ದೊಡ್ಡ ಶಕ್ತಿ ಎಂದು ಇಡೀ ನಗರ ಒಟ್ಟಾಗಿ ನಿರ್ಧರಿಸೋಣ ಮತ್ತು ನಾವು ಅದನ್ನು ಪ್ರಚಾರ ಮಾಡಬೇಕು. ಶೀಘ್ರದಲ್ಲೇ, ಇದು ಆರ್ಥಿಕ ಚಟುವಟಿಕೆಯ ಉತ್ತಮ ಸಾಧನವಾಗಿ ಪರಿಣಮಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ನಗರಗಳ ಅಭಿವೃದ್ಧಿಯನ್ನು ಹೊಸ ಹಂತಕ್ಕೆ ಕೊಂಡೊಯ್ಯಬೇಕು ಮತ್ತು ಆ ದಿಕ್ಕಿನಲ್ಲಿ ನಾವು ಪ್ರಯತ್ನಗಳನ್ನು ಮಾಡಬೇಕಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಗರಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಎಷ್ಟೇ ಮೇಲ್ಸೇತುವೆಗಳನ್ನು ನಿರ್ಮಿಸಿದರೂ ಪರಿಸ್ಥಿತಿ ಸುಧಾರಿಸುವುದಿಲ್ಲ. ಸೂರತ್‌ಗೆ ಹೋದರೆ ಪ್ರತಿ 100 ಮೀಟರ್‌ಗೆ ಒಂದು ಫ್ಲೈಓವರ್ ಸಿಗುತ್ತದೆ. ಬಹುಶಃ ಇದು ಫ್ಲೈಓವರ್‌ಗಳ ನಗರವಾಗಿ ಮಾರ್ಪಟ್ಟಿದೆ. ಫ್ಲೈಓವರ್‌ಗಳು ಸಮಸ್ಯೆಗೆ ಪರಿಹಾರವಲ್ಲ. ನಾವು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ನೆಟ್‌ವರ್ಕ್‌ಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಆದರೆ ಇದರ ಹೊರತಾಗಿ ಇನ್ನೂ ಅನೇಕ ವಿಷಯಗಳಿವೆ. ನಮ್ಮ ಸಾಮಾಜಿಕ ಜೀವನದಲ್ಲಿ ಬದಲಾವಣೆ ತರಲು ನಾವು ಪ್ರಯತ್ನಿಸಬೇಕು. ಹಾಗೆಯೇ ದಿವ್ಯಾಂಗಜನರ ವಿಚಾರವೂ ಇದೆ. ನಾವು ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಪ್ರವೇಶ ಭಾರತ ಅಭಿಯಾನದ ಅಡಿಯಲ್ಲಿ ಅವರ ಅವಶ್ಯಕತೆಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಅದು ಹೊಸ ಕಟ್ಟಡದ ನಿರ್ಮಾಣ, ರಸ್ತೆಗಳು,   ಶೌಚಾಲಯಗಳು, ಬಸ್‌ಗಳಿಗೆ ಬೋರ್ಡಿಂಗ್ ಮೆಟ್ಟಿಲುಗಳು ಇತ್ಯಾದಿ, ನಮ್ಮ ಯೋಜನೆಗಳ ಭಾಗವಾಗಿರಬೇಕು. ಆಗ ಮಾತ್ರ ಅದು ಸಂಭವಿಸುತ್ತದೆ ಮತ್ತು ನಮ್ಮ ಆರ್ಥಿಕತೆಯ ಪ್ರೇರಕ ಶಕ್ತಿ ನಮ್ಮ ನಗರಗಳು ಎನ್ನುವುದು ಒಂದು ವಾಸ್ತವ. ನಾವು ನಗರಗಳನ್ನು  ಜೀವದುಂಬಿದ ಆರ್ಥಿಕ ಕೇಂದ್ರವನ್ನಾಗಿ ಮಾಡಬೇಕು. ಹೊಸ ಕೈಗಾರಿಕೆಗಳನ್ನು ಸ್ಥಾಪಿಸಬಹುದಾದ ಸ್ಥಳವನ್ನು ಗುರುತಿಸುವತ್ತ ಗಮನಹರಿಸಬೇಕು. ಕೂಲಿಕಾರ್ಮಿಕರು ತಮ್ಮ ದುಡಿಯುವ ಸ್ಥಳಕ್ಕಾಗಿ ದೂರದೂರ ಹೋಗದಂತೆ ನೋಡಿಕೊಳ್ಳಬೇಕು, ಅವರಿಗೆ ಅಲ್ಲಿಯೇ ಕೆಲಸ ಸಿಗಬೇಕು ಮತ್ತು ಅಲ್ಲಿಯೇ ವಸತಿ ಸೌಕರ್ಯ ಕಲ್ಪಿಸಬೇಕು. ನಾವು ನಮ್ಮ ಅಭಿವೃದ್ಧಿಯ ಮಾದರಿಯಲ್ಲಿ ಈ ಸಮಗ್ರ ವಿಧಾನವನ್ನು ಇಟ್ಟುಕೊಳ್ಳಬೇಕು ಮತ್ತು ಆಗ ಮಾತ್ರ ಪ್ರತಿಯೊಬ್ಬರೂ ಆರ್ಥಿಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಆ ಸ್ಥಳದಲ್ಲಿ ಸರಿಯಾದ ಪರಿಸರ ವ್ಯವಸ್ಥೆ ಇದೆ ಎಂದು ಮನವರಿಕೆ ಮಾಡಿಕೊಡಬೇಕು, ಅಲ್ಲಿ ಅವರು ತಮ್ಮ ಕೈಗಾರಿಕೆ ಅಥವಾ ಕಾರ್ಖಾನೆಯನ್ನು ಸ್ಥಾಪಿಸಬಹುದು ಮತ್ತು ಉದ್ಯೋಗವನ್ನು ಸೃಷ್ಟಿಸಬಹುದು. ನಮ್ಮ ಅಭಿವೃದ್ಧಿ ಮಾದರಿಯಲ್ಲಿ ಎಂಎಸ್‌ಎಂಇಗಳನ್ನು ಹೇಗೆ ಸಬಲಗೊಳಿಸಬಹುದು ಎಂಬುದರ ಕುರಿತು ನಾವು ಯೋಚಿಸಬೇಕು. ನಾನು ಹೇಳಿದ ಎಲ್ಲವನ್ನೂ ನೀವು ಮಾಡಲು ಸಾಧ್ಯವಾಗುತ್ತದೆಯೇ ಎನ್ನುವುದು ನನಗೆ ತಿಳಿದಿಲ್ಲ, ಆದರೆ ನಾನು ಎಲ್ಲರಿಗೂ ಒಂದು ವಿನಂತಿ ಮಾಡುತ್ತೇನೆ ಮೇಯರ್‌ಗಳು ನಿಮಗೆ ಅಪಾರವಾದ ಸಂತೋಷ ಮತ್ತು ತೃಪ್ತಿಯನ್ನು ನೀಡುವ ಒಂದು ಕೆಲಸವನ್ನು ಮಾಡಬೇಕು ಅದ್ಯಾವುದೆಂದರೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ.

ಪ್ರತಿ ನಗರದಲ್ಲಿ ಬೀದಿ ವ್ಯಾಪಾರಿಗಳು ಇದ್ದಾರೆ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಅವರ ಪ್ರಾಮುಖ್ಯತೆಯನ್ನು ಕಡಿಗಣಿಸುವಂತಿಲ್ಲ ಮತ್ತು ಅವರು ಅತಿ ಕಿರುಆರ್ಥಿಕತೆಯಲ್ಲಿ ಪ್ರಮುಖ ಶಕ್ತಿಯಾಗಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಆದರೆ ಅವರನ್ನು ನಿರ್ಲಕ್ಷಿಸಲಾಗಿದೆ ಮತ್ತು ಯಾರೂ ಅವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಲೇವಾದೇವಿಗಾರರಿಗೆ ದುಬಾರಿ ಬಡ್ಡಿ ಕೊಟ್ಟು, ಹೇಗಾದರೂ ಮಾಡಿ ಸಂಸಾರ ನಡೆಸಿಕೊಂಡು, ಸಂಪಾದನೆಯ ಅರ್ಧದಷ್ಟು ಬಡ್ಡಿಗೆ ಹೋಗುವವರ ಬಗ್ಗೆ ನಾವು ಎಂದಾದರೂ ತಲೆ ಕೆಡಿಸಿಕೊಂಡಿದ್ದೇವೆಯೇ? ಅವರು ತಮ್ಮ ವಸ್ತುಗಳನ್ನು ಬೀದಿಗಳಲ್ಲಿ ಕೂಗುವ ಮೂಲಕ ಮಾರಾಟ ಮಾಡುತ್ತಾರೆ, ಅವರು ಬಡತನದ ವಿರುದ್ಧ ಹೋರಾಡಲು ಮತ್ತು ಕಷ್ಟಪಟ್ಟು ಕೆಲಸ ಮಾಡಲು ಬಯಸುತ್ತಾರೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅವರಿಗಾಗಿಯೇ ಇದೆ. ಮತ್ತು ಕೊರೊನಾ ಅವಧಿಯಲ್ಲಿ, ಅವರಿಲ್ಲದೆ ಜೀವನ ಕಷ್ಟ ಎಂದು ಎಲ್ಲರೂ ಅರಿತುಕೊಂಡಿದ್ದಾರೆ. ಕೊರೊನಾ ಅವಧಿಯಲ್ಲಿ ಅವರು ಇರಲಿಲ್ಲ. ಹೀಗೆಲ್ಲಾ ಆಗುವೆಂದು  ಅಂದುಕೊಂಡಿರಲಿಲ್ಲ, ತರಕಾರಿ ಮಾರುವವ, ಹಾಲು ಮಾರುವವ, ದಿನಪತ್ರಿಕೆ, ಕ್ಲೀನರ್ ಅಥವಾ ಅಡುಗೆಯವರು ಬರದಿದ್ದಾಗ ಎಲ್ಲರಿಗೂ ಕಷ್ಟವಾಯಿತು.

ನಮ್ಮ ಜೀವನವು ಸಂಪೂರ್ಣವಾಗಿ ಅವಲಂಬಿತವಾಗಿರುವ ಈ ಜನರ ಮಹತ್ವ ಮತ್ತು ಮೌಲ್ಯವನ್ನು ಕೊರೊನಾ ನಮಗೆ ತಿಳಿಸಿತು. ಅವರ ಕೈ ಬಿಡದಿರುವುದು ನಮ್ಮ ಜವಾಬ್ದಾರಿ. ಅವರು ನಮ್ಮ ಜೀವನ ಪಯಣದದ ಭಾಗವಾಗಿದ್ದಾರೆ. ಆದ್ದರಿಂದ, ನಾವು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಅದು ತುಂಬಾ ಒಳ್ಳೆಯದು. ನಿಮ್ಮ ನಗರದಲ್ಲಿ ಈ ಜನರ ಪಟ್ಟಿಯನ್ನು ಮಾಡಿ ಮತ್ತು ಮೊಬೈಲ್ ಫೋನ್‌ಗಳ ಮೂಲಕ ಹೇಗೆ ವಹಿವಾಟು ಮಾಡಬೇಕೆನ್ನುವುದನ್ನು ಅವರಿಗೆ ಕಲಿಸಿ. ಅವರು ಬ್ಯಾಂಕ್‌ನಿಂದ ಹಣವನ್ನು ಪಡೆಯುತ್ತಾರೆ. ಅವರು ತರಕಾರಿಗಳನ್ನು ಖರೀದಿಸಲು ಸಗಟು ವ್ಯಾಪಾರಿಗೆ ಪಾವತಿ ಮಾಡಲು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಬೇಕು. ನಂತರ ಅವರು ನೂರಾರು ಮನೆಗಳಿಗೆ ಭೇಟಿ ನೀಡಿ ತರಕಾರಿಗಳನ್ನು ಮಾರಾಟ ಮಾಡುತ್ತಾರೆ ಮತ್ತು ಅವರು ಹಣವನ್ನು ಡಿಜಿಟಲ್ ರೂಪದಲ್ಲಿ ಸ್ವೀಕರಿಸುತ್ತಾರೆ ಮತ್ತು ನಗದು ಅಲ್ಲ. ಅವರು ಶೇಕಡಾ 100 ರಷ್ಟು ಡಿಜಿಟಲ್ ದಾಖಲೆಯನ್ನು ಮಾಡಲು ಸಾಧ್ಯವಾದರೆ, ಬ್ಯಾಂಕ್‌ಗಳು ಅವರ ವ್ಯವಹಾರದ ಇತಿಹಾಸವನ್ನು ಸಹ ತಿಳಿದುಕೊಳ್ಳುತ್ತವೆ ಮತ್ತು ಹಣವನ್ನು ಸಾಲ ನೀಡಲು ಹಿಂಜರಿಯುವುದಿಲ್ಲ. ಅವರು 10,000 ರೂಪಾಯಿಗಳಿಂದ ಪ್ರಾರಂಭಿಸಬಹುದು ಆದರೆ ಆ ಹಣವನ್ನು ಹಿಂತಿರುಗಿಸಿದರೆ, ಅವರು ಅದನ್ನು 20,000 ರೂಪಾಯಿಗಳಿಗೆ ಮತ್ತು ನಂತರ 50,000 ರೂಪಾಯಿಗಳಿಗೆ ಹೆಚ್ಚಿಸುತ್ತಾರೆ. ವಾಸ್ತವವಾಗಿ, ಅವರು 100 ಪ್ರತಿಶತ ಡಿಜಿಟಲ್ ವಹಿವಾಟು ಮಾಡಿದರೆ ಬಡ್ಡಿಯ ದರ ಶೂನ್ಯಕ್ಕೆ ಬರುತ್ತದೆ ಎಂದು ನಾನು ಹಿಂದೆಯೂ ಹೇಳಿದ್ದೆ.

ಈ ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕೆ ಬಡ್ಡಿಯಿಲ್ಲದೆ ಹಣವನ್ನು ಪಡೆಯಲು ಸಾಧ್ಯವಾದರೆ, ಅವರು ಚೆನ್ನಾಗಿರುತ್ತಾರೆ, ತಮ್ಮ ಮಕ್ಕಳ ಅಧ್ಯಯನವನ್ನು ನೋಡಿಕೊಳ್ಳುತ್ತಾರೆ, ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸುತ್ತಾರೆ ಮತ್ತು ತಮ್ಮ ವ್ಯಾಪಾರವನ್ನು ವಿಸ್ತರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನೀವು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಗೆ ಆದ್ಯತೆ ನೀಡಬಹುದೇ? 200-500-1000-2000 ಬೀದಿ ವ್ಯಾಪಾರಿಗಳ ಬ್ಯಾಂಕ್ ಖಾತೆಗಳನ್ನು ತೆರೆಯಲಾಗುವುದು ಮತ್ತು ಮುಂದಿನ ವರ್ಷ ಜನವರಿ 26 ರ ಮೊದಲು ಅವರಿಗೆ ಡಿಜಿಟಲ್ ವಹಿವಾಟುಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ಕಾಶಿ ಮತ್ತು ಮಾ ಗಂಗಾ ತೀರದಿಂದ ಪ್ರಮಾಣ ಮಾಡಿರಿ. ಅವರು ಸರಕುಗಳನ್ನು ಖರೀದಿಸುವ ವ್ಯಾಪಾರಿಗಳಿಗೂ ಡಿಜಿಟಲ್ ತರಬೇತಿ ನೀಡಬೇಕು. ಯಾವುದೇ ಸಮಯದಲ್ಲಿ ಕೂಡ, ಡಿಜಿಟಲ್ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಮತ್ತು ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಕನಿಷ್ಠ ಅಥವಾ ಸಾಧ್ಯವಾದರೆ ಶೂನ್ಯ ಬಡ್ಡಿಯೊಂದಿಗೆ ವಿಸ್ತರಿಸಲು ಸಾಧ್ಯವಾಗುತ್ತದೆ.

ನೀವು ಕಾಶಿಗೆ ಬಂದಿದ್ದೀರಿ ಮತ್ತು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೀರಿ. ನೀವು ಅನೇಕ ಸಲಹೆಗಳನ್ನು ಹೊಂದಿರಬಹುದು ಮತ್ತು ನೀವು ನಿಮ್ಮ ಸಲಹೆಗಳನ್ನು ನನಗೆ ಕಳುಹಿಸಿದರೆ, ಅದು ಕಾಶಿಯಲ್ಲಿ ನನ್ನ ಕರ್ತವ್ಯಗಳನ್ನು ನಿರ್ವಹಿಸಲು ನನಗೆ ತುಂಬಾ ಸಹಾಯ ಮಾಡುತ್ತದೆ. ಮೇಯರ್ ಆಗಿ ನಿಮ್ಮ ನಗರದಲ್ಲಿ ನೀವು ಕೈಗೊಂಡ ಉಪಕ್ರಮವು ಕಾಶಿಯಲ್ಲಿ ಉಪಯುಕ್ತವಾಗಬಹುದು ಎಂದು ನೀವು ಭಾವಿಸಿದರೆ, ದಯವಿಟ್ಟು ನನ್ನೊಂದಿಗೆ ಹಂಚಿಕೊಳ್ಳಿ. ನಾನು ನಿಮಗೆ ಕೃತಜ್ಞನಾಗುತ್ತೇನೆ. ನಾನು ನಿಮ್ಮಿಂದ ಕಲಿಯಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಇಲ್ಲಿಗೆ ಎಲ್ಲಾ ಮೇಯರ್‌ಗಳನ್ನು ಆಹ್ವಾನಿಸಿದ್ದೇನೆ. ನಿಮ್ಮ ನಗರದಲ್ಲಿ ನೀವು ಏನು ಮಾಡಿದ್ದೀರಿ ಎಂಬುದರ ಕುರಿತು ದಯವಿಟ್ಟು ಕಾಶಿಯ ಜನರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳಿ. ನಾನು ಮತ್ತು ನನ್ನ ಸಹೋದ್ಯೋಗಿಗಳು ಖಂಡಿತವಾಗಿಯೂ ಆ ಆಲೋಚನೆಗಳನ್ನು ಕಾರ್ಯಗತಗೊಳಿಸುತ್ತಾರೆ ಮತ್ತು ನಾನು ಮೊದಲ ವಿದ್ಯಾರ್ಥಿಯಾಗುತ್ತೇನೆ. ನಾವೆಲ್ಲರೂ ರಾಜಕೀಯದಲ್ಲಿದ್ದೇವೆ. ರಾಜಕೀಯ ಜೀವನದಲ್ಲಿ ಮುಂದುವರಿಯಲು ಉತ್ತಮ ಅವಕಾಶಗಳು ಇರುವಂತಹ ಸ್ಥಾನ ಇದು ಎಂದು ನಿಮಗೆಲ್ಲರಿಗೂ ತಿಳಿದಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಹಮದಾಬಾದ್ ಮುನ್ಸಿಪಾಲಿಟಿಯ ಮೇಯರ್ ಆಗಿದ್ದರು ಮತ್ತು ನಂತರ ಅಧ್ಯಕ್ಷರಾಗಿದ್ದರು ಎನ್ನುವುದು ನಿಮಗೆ ತಿಳಿದಿರಬೇಕು. ಆಗ ಅಹಮದಾಬಾದ್ ನಗರವು ತುಂಬಾ ಚಿಕ್ಕದಾಗಿತ್ತು. ಅಲ್ಲಿಂದ ಅವರ ರಾಜಕೀಯ ಪಯಣ ಆರಂಭವಾಯಿತು. ಮತ್ತು ಇಂದಿಗೂ ದೇಶವು ಅವರನ್ನು ನೆನಪಿಸಿಕೊಳ್ಳುತ್ತದೆ. ಮುನ್ಸಿಪಲ್ ಕಾರ್ಪೊರೇಶನ್‌ನಿಂದ ರಾಜಕೀಯ ಜೀವನ ಪ್ರಾರಂಭವಾದ ಅನೇಕ ನಾಯಕರು ಇದ್ದಾರೆ. ನಿಮ್ಮ ಜೀವನವೂ ಅಂತಹ ಹಂತದಲ್ಲಿದೆ. ನಿಮ್ಮ ಉಜ್ವಲ ರಾಜಕೀಯ ಭವಿಷ್ಯವನ್ನು ಮತ್ತಷ್ಟು ಹೆಚ್ಚಿಸಲು ಸಂಪೂರ್ಣ ಸಮರ್ಪಣೆಯೊಂದಿಗೆ ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀವು ಬದ್ಧರಾಗುತ್ತೀರಿ ಎಂದು ನನಗೆ ಖಾತ್ರಿಯಿದೆ. ಆಧುನಿಕ ನಗರಗಳನ್ನು ನಿರ್ಮಿಸಬೇಕು ಮತ್ತು ಅದೇ ಸಮಯದಲ್ಲಿ ಪರಂಪರೆಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಪರಂಪರೆ ಮತ್ತು ಅಭಿವೃದ್ಧಿ ಎರಡೂ ಬೇಕು. ನಿಮ್ಮ ಕನಸುಗಳನ್ನು ಈಡೇರಿಸಲು ನೀವು ಮುಂದೆ ಸಾಗುತ್ತೀರಿ ಎಂದು ನಾನು ಭಾವಿಸುತ್ತೇನೆ. ಮತ್ತೊಮ್ಮೆ, ನಾನು ನಿಮ್ಮನ್ನು ಕಾಶಿಗೆ ಸ್ವಾಗತಿಸುತ್ತೇನೆ. ಕಾಶಿಯ ಜನರು ನಿಮ್ಮನ್ನು ಚೆನ್ನಾಗಿ ನೋಡಿಕೊಂಡಿರಬೇಕು ಎಂದು ನನಗೆ ಖಾತ್ರಿಯಿದೆ. ಕಾಶಿಯ ಜನರು ಹೃದಯವಂತರು. ಆ ಪ್ರೀತಿ ಮತ್ತು ವಾತ್ಸಲ್ಯವನ್ನು ನೀವು ಎಂದಿಗೂ ಕಳೆದುಕೊಳ್ಳುವುದಿಲ್ಲ ಮತ್ತು ನೀವು ಹಿಂದಿರುಗುವಾಗ ಅವನ್ನು ಕೊಂಡೊಯ್ಯುವಿರಿ.

ಅನೇಕ ಧನ್ಯವಾದಗಳು ಮತ್ತು ಶುಭಾಶಯಗಳು!