Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೊದಲ ಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಿದರು

ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೊದಲ ಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಿದರು


 

 
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೊದಲ ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು., ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎನ್ ವಿ ರಮಣ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಯು ಯು ಲಲಿತ್, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಕೇಂದ್ರ ಸಚಿವರಾದ ಶ್ರೀ ಕಿರಣ್ ರಿಜಿಜು, ಶ್ರೀ ಎಸ್.ಪಿ.ಸಿಂಗ್ ಬಘೇಲ್, ಇತರ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ (ಎಸ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ (ಡಿಎಲ್‌ಎಸ್‌ಎ) ಅಧ್ಯಕ್ಷರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ‘ಉಚಿತ ಕಾನೂನು ನೆರವಿನ ಹಕ್ಕು’ ಕುರಿತ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇದು ಸ್ವಾತಂತ್ರ್ಯದ ಅಮೃತ ಕಾಲದ ಸಮಯ. ಮುಂದಿನ 25 ವರ್ಷಗಳಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರ್ಣಯಗಳಿಗೆ ಇದು ಸಮಯವಾಗಿದೆ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಮತ್ತು ಈಸ್ ಆಫ್ ಲಿವಿಂಗ್ ಹೇಗಿದೆಯೋ ಹಾಗೆಯೇ ದೇಶದ ಈ ಅಮೃತ ಯಾತ್ರೆಯಲ್ಲಿ ಈಸ್ ಆಫ್ ಜಸ್ಟಿಸ್ ಕೂಡ ಅಷ್ಟೇ ಮುಖ್ಯ ಎಂದರು.
ರಾಜ್ಯ ನೀತಿಯ ನಿರ್ದೇಶನ ತತ್ವಗಳಲ್ಲಿ ಕಾನೂನು ನೆರವಿನ ಸ್ಥಾನವನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಈ ಪ್ರಾಮುಖ್ಯತೆಯು ದೇಶದ ನ್ಯಾಯಾಂಗದಲ್ಲಿ ನಾಗರಿಕರ ನಂಬಿಕೆಯಲ್ಲಿ ಪ್ರತಿಫಲಿಸುತ್ತದೆ. ಯಾವುದೇ ಸಮಾಜಕ್ಕೆ ನ್ಯಾಯಾಂಗ ವ್ಯವಸ್ಥೆಗೆ ಪ್ರವೇಶಾವಕಾಶ ಎಷ್ಟು ಮುಖ್ಯವೋ, ನ್ಯಾಯ ಒದಗಿಸುವುದು ಕೂಡ ಅಷ್ಟೇ ಮುಖ್ಯ ಎಂದು ಅವರು ಹೇಳಿದರು. ಇದಕ್ಕೆ ನ್ಯಾಯಾಂಗ ಮೂಲಸೌಕರ್ಯವೂ ಪ್ರಮುಖ ಕೊಡುಗೆಯನ್ನು ಹೊಂದಿದೆ. ಕಳೆದ ಎಂಟು ವರ್ಷಗಳಲ್ಲಿ, ದೇಶದ ನ್ಯಾಯಾಂಗ ಮೂಲಸೌಕರ್ಯವನ್ನು ಬಲಪಡಿಸುವ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಲಾಗಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಫಿನ್‌ಟೆಕ್‌ನಲ್ಲಿ ಭಾರತದ ನಾಯಕತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನ್ಯಾಯಾಂಗ ಪ್ರಕ್ರಿಯೆಗಳಿಗೆ ತಂತ್ರಜ್ಞಾನದ ಹೆಚ್ಚಿನ ಸಾಮರ್ಥ್ಯವನ್ನು ಪರಿಚಯಿಸಲು ಇದಕ್ಕಿಂತ ಉತ್ತಮ ಸಮಯವಿಲ್ಲ ಎಂದು ಒತ್ತಿ ಹೇಳಿದರು. “ಇ-ಕೋರ್ಟ್ಸ್ ಮಿಷನ್ ಅಡಿಯಲ್ಲಿ, ದೇಶದಲ್ಲಿ ವರ್ಚುವಲ್ ನ್ಯಾಯಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಸಂಚಾರ ಉಲ್ಲಂಘನೆಯಂತಹ ಅಪರಾಧಗಳಿಗಾಗಿ 24 ಗಂಟೆಗಳ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಜನರ ಅನುಕೂಲಕ್ಕಾಗಿ ನ್ಯಾಯಾಲಯಗಳಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಸೌಕರ್ಯವನ್ನು ವಿಸ್ತರಿಸಲಾಗುತ್ತಿದೆ. ದೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದು ಕೋಟಿಗೂ ಹೆಚ್ಚು ಪ್ರಕರಣಗಳನ್ನು ಆಲಿಸಲಾಗಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯು ಪ್ರಾಚೀನ ಭಾರತೀಯ ನ್ಯಾಯದ ಮೌಲ್ಯಗಳಿಗೆ ಬದ್ಧವಾಗಿದೆ ಮತ್ತು ಅದೇ ಸಮಯದಲ್ಲಿ, 21 ನೇ ಶತಮಾನದ ವಾಸ್ತವಕ್ಕೆ ಹೊಂದಿಕೊಳ್ಳಲು ಸಿದ್ಧವಾಗಿದೆ” ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ. ಸಾಮಾನ್ಯ ನಾಗರಿಕರು ಸಂವಿಧಾನದಲ್ಲಿ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದಿರಬೇಕು. ಅವರು ತಮ್ಮ ಸಂವಿಧಾನ, ಮತ್ತು ಸಾಂವಿಧಾನಿಕ ರಚನೆಗಳು, ನಿಯಮಗಳು ಮತ್ತು ಪರಿಹಾರಗಳ ಬಗ್ಗೆ ತಿಳಿದಿರಬೇಕು. ತಂತ್ರಜ್ಞಾನವು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ” ಎಂದು ಪ್ರಧಾನಮಂತ್ರಿಯವರು ಹೇಳಿದರು.
ಅಮೃತ ಕಾಲವು ಕರ್ತವ್ಯದ ಅವಧಿಯಾಗಿದೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಇಲ್ಲಿಯವರೆಗೆ ನಿರ್ಲಕ್ಷಿಸಲ್ಪಟ್ಟಿರುವ ಕ್ಷೇತ್ರಗಳ ಬಗ್ಗೆ ನಾವು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ವಿಚಾರಣಾಧೀನ ಕೈದಿಗಳ ಬಗೆಗಿನ ಸೂಕ್ಷ್ಮತೆಯ ವಿಷಯವನ್ನು ಶ್ರೀ ಮೋದಿ ಮತ್ತೊಮ್ಮೆ ಪ್ರಸ್ತಾಪಿಸಿದರು. ಅಂತಹ ಕೈದಿಗಳಿಗೆ ಕಾನೂನು ನೆರವು ನೀಡುವ ಜವಾಬ್ದಾರಿಯನ್ನು ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳು ವಹಿಸಿಕೊಳ್ಳಬಹುದು ಎಂದು ಹೇಳಿದರು. ವಿಚಾರಣಾಧೀನ ಪರಿಶೀಲನಾ ಸಮಿತಿಗಳ ಅಧ್ಯಕ್ಷರಾಗಿ ಜಿಲ್ಲಾ ನ್ಯಾಯಾಧೀಶರಿಗೆ ವಿಚಾರಣಾಧೀನ ಕೈದಿಗಳ ಬಿಡುಗಡೆಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಅಭಿಯಾನವನ್ನು ಕೈಗೊಂಡಿದ್ದಕ್ಕಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಈ ಅಭಿಯಾನದಲ್ಲಿ ಹೆಚ್ಚಿನ ವಕೀಲರು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕೆಂದು ಬಾರ್ ಕೌನ್ಸಿಲ್ ಅನ್ನು ಅವರು ಒತ್ತಾಯಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ (ಡಿಎಲ್‍ಎಸ್‍ಎ) ಮೊದಲ ರಾಷ್ಟ್ರೀಯ ಮಟ್ಟದ ಸಭೆಯನ್ನು 30-31 ಜುಲೈ 2022 ರಿಂದ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‍ಎಎಲ್‍ಎಸ್‍ಎ) ಆಯೋಜಿಸಿದೆ. ಡಿಎಲ್‌ಎಸ್‌ಎ ಗಳಲ್ಲಿ ಏಕರೂಪತೆ ಮತ್ತು ಗುರುತನ್ನು ತರಲು ಸಮಗ್ರ ಪ್ರಕ್ರಿಯೆಯನ್ನು ರಚಿಸುವುದನ್ನು ಪರಿಗಣಿಸುವುದರ ಕುರಿತು ಸಭೆಯು ಚರ್ಚಿಸುತ್ತದೆ.
ದೇಶದಲ್ಲಿ ಒಟ್ಟು 676 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಿವೆ (ಡಿಎಲ್‍ಎಸ್‍ಎ). ಅವರು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿರುತ್ತಾರೆ. ಡಿಎಲ್‍ಎಸ್‍ಎ ಗಳು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ, ಎನ್‍ಎಎಲ್‍ಎಸ್‍ಎ ನಿಂದ ವಿವಿಧ ಕಾನೂನು ನೆರವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಎನ್‍ಎಎಲ್‍ಎಸ್‍ಎ ನಡೆಸುವ ಲೋಕ ಅದಾಲತ್‌ಗಳನ್ನು ನಿಯಂತ್ರಿಸುವ ಮೂಲಕ ನ್ಯಾಯಾಲಯಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಡಿಎಲ್‍ಎಸ್‍ಎ ಗಳು ಕೊಡುಗೆ ನೀಡುತ್ತವೆ.
 

********