Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಕ್ಟೋಬರ್ 9 ರಂದು ಮಹಾರಾಷ್ಟ್ರದಲ್ಲಿ 7600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 9 ರಂದು ಮಧ್ಯಾಹ್ನ 1 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ ಸುಮಾರು 7600 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ನಾಗಪುರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ದರ್ಜೆ ಕಾಮಗಾರಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಲಿದ್ದು, ಇದರ ಒಟ್ಟು ಅಂದಾಜು ಯೋಜನಾ ವೆಚ್ಚ ಸುಮಾರು 7000 ಕೋಟಿ ರೂ. ಇದು ಉತ್ಪಾದನೆ, ವಾಯುಯಾನ, ಪ್ರವಾಸೋದ್ಯಮ, ಲಾಜಿಸ್ಟಿಕ್ಸ್ ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ನಾಗಪುರ ನಗರ ಮತ್ತು ವಿಶಾಲವಾದ ವಿದರ್ಭ ಪ್ರದೇಶಕ್ಕೆ ಪ್ರಯೋಜನ ಕಲ್ಪಿಸುತ್ತದೆ.

ಶಿರಡಿ ವಿಮಾನ ನಿಲ್ದಾಣದಲ್ಲಿ ಸುಮಾರು 645 ಕೋಟಿ ರೂಪಾಯಿ ಮೌಲ್ಯದ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡಕ್ಕೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶಿರಡಿಗೆ ಬರುವ ಧಾರ್ಮಿಕ ಪ್ರವಾಸಿಗರಿಗೆ ಇದು ವಿಶ್ವದರ್ಜೆಯ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಒದಗಿಸುತ್ತದೆ. ಉದ್ದೇಶಿತ ಟರ್ಮಿನಲ್‌ ಸಾಯಿಬಾಬಾರ ಆಧ್ಯಾತ್ಮಿಕ ಬೇವಿನ ಮರವನ್ನು ಆಧರಿಸಿರುತ್ತದೆ.

ಎಲ್ಲರಿಗೂ ಕೈಗೆಟಕುವ ಮತ್ತು ಪ್ರವೇಶಿಸಬಹುದಾದ ಆರೋಗ್ಯ ಸೇವೆಯನ್ನು ಖಾತರಿಪಡಿಸುವ ಬದ್ಧತೆಗೆ ಅನುಗುಣವಾಗಿ, ಮುಂಬೈ, ನಾಸಿಕ್, ಜಲ್ನಾ, ಅಮರಾವತಿ, ಗಡ್ಚಿರೋಲಿ, ಬುಲ್ಧಾನ, ವಾಶಿಮ್, ಭಂಡಾರಾ, ಹಿಂಗೋಲಿ ಮತ್ತು ಅಂಬರನಾಥ (ಥಾಣೆ) ದಲ್ಲಿರುವ ಮಹಾರಾಷ್ಟ್ರದ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಕಾರ್ಯಾಚರಣೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಆರಂಭಿಸಲಿದೆ. ಪದವಿ ಮತ್ತು ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸುವುದರ ಜೊತೆಗೆ, ಕಾಲೇಜುಗಳು ಜನರಿಗೆ ವಿಶೇಷ ತೃತೀಯ ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ.

ಭಾರತವನ್ನು “ವಿಶ್ವದ ಕೌಶಲ್ಯ ರಾಜಧಾನಿ” ಯಾಗಿಸುವ ದೃಷ್ಟಿಗೆ ಅನುಗುಣವಾಗಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ತರಬೇತಿಯ ಮೇಲೆ ಕೈಗಾರಿಕೆಗಳೊಂದಿಗೆ ಉದ್ಯಮಕ್ಕೆ ಸಿದ್ಧವಾದ ಉದ್ಯೋಗಿಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಪ್ರಧಾನ ಮಂತ್ರಿಯವರು ಮುಂಬೈ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಅನ್ನು ಉದ್ಘಾಟಿಸಲಿದ್ದಾರೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯ ಅಡಿಯಲ್ಲಿ ಇದು ಸ್ಥಾಪಿತವಾಗಿದೆ, ಇದು ಟಾಟಾ ಶಿಕ್ಷಣ ಮತ್ತು ಅಭಿವೃದ್ಧಿ ಟ್ರಸ್ಟ್ ಮತ್ತು ಭಾರತ ಸರ್ಕಾರದ ನಡುವಿನ ಸಹಯೋಗವಾಗಿದೆ. ಮೆಕಾಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ, ಡೇಟಾ ಅನಾಲಿಟಿಕ್ಸ್, ಇಂಡಸ್ಟ್ರಿಯಲ್ ಆಟೊಮೇಷನ್ ಮತ್ತು ರೊಬೊಟಿಕ್ಸ್‌ನಂತಹ ಹೆಚ್ಚು ವಿಶೇಷ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಸಂಸ್ಥೆ ಯೋಜಿಸಿದೆ.

ಇದಲ್ಲದೇ ಮಹಾರಾಷ್ಟ್ರದ ವಿದ್ಯಾ ಸಮೀಕ್ಷಾ ಕೇಂದ್ರವನ್ನು (ವಿ ಎಸ್‌ ಕೆ) ಪ್ರಧಾನಿ ಉದ್ಘಾಟಿಸಲಿದ್ದಾರೆ. ಸ್ಮಾರ್ಟ್ ಉಪಸ್ಥಿತಿ, ಸ್ವಾಧ್ಯಾಯದಂತಹ ಲೈವ್ ಚಾಟ್‌ ಬಾಟ್‌ ಗಳ ಮೂಲಕ ಪ್ರಮುಖ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಡೇಟಾಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನಿರ್ವಾಹಕರಿಗೆ ಪ್ರವೇಶವನ್ನು ವಿ ಎಸ್‌ ಕೆ ಒದಗಿಸುತ್ತದೆ. ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಪೋಷಕರು ಮತ್ತು ರಾಜ್ಯದ ನಡುವಿನ ಸಂಬಂಧಗಳನ್ನು ಬಲಪಡಿಸಲು ಮತ್ತು ಸ್ಪಂದಿಸುವ ಬೆಂಬಲವನ್ನು ಒದಗಿಸಲು ಇದು ಶಾಲೆಗಳಿಗೆ ಉತ್ತಮ ಗುಣಮಟ್ಟದ ಮಾಹಿತಿಯನ್ನು ಒದಗಿಸುತ್ತದೆ. ಇದು ಬೋಧನಾ ಅಭ್ಯಾಸಗಳು ಮತ್ತು ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚಿಸಲು ಕ್ಯುರೇಟೆಡ್ ಸೂಚನಾ ಸಂಪನ್ಮೂಲಗಳನ್ನು ಒದಗಿಸುತ್ತದೆ.

 

*****