ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 28ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಮಂತ್ರಿ ಅವರು, ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರೊಂದಿಗೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕ್ಯಾಂಪಸ್ ನಲ್ಲಿ ಸಿ -295 ವಿಮಾನಗಳನ್ನು ತಯಾರಿಸುವ ಟಾಟಾ ಏರ್ ಕ್ರಾಫ್ಟ್ ಕಾಂಪ್ಲೆಕ್ಸ್ ಅನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ನಂತರ ಬೆಳಗ್ಗೆ 11 ಗಂಟೆಗೆ ವಡೋದರಾದ ಲಕ್ಷ್ಮಿ ವಿಲಾಸ್ ಅರಮನೆಗೆ ಭೇಟಿ ನೀಡಲಿದ್ದಾರೆ. ವಡೋದರಾದಿಂದ ಪ್ರಧಾನಮಂತ್ರಿ ಅವರು ಅಮ್ರೇಲಿಗೆ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನ 2:45 ರ ಸುಮಾರಿಗೆ ಅಮ್ರೇಲಿಯ ದುಧಲಾದಲ್ಲಿ ಭಾರತ್ ಮಾತಾ ಸರೋವರವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅವರು ಅಮ್ರೇಲಿಯ ಲಾಥಿಯಲ್ಲಿ 4,800 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಡೋದರಾದಲ್ಲಿ ಪ್ರಧಾನಮಂತ್ರಿ
ಜಪಾನ್ ಪ್ರಧಾನಿ ಶ್ರೀ ಪೆಡ್ರೊ ಸ್ಯಾಂಚೆಜ್ ಅವರೊಂದಿಗೆ ಪ್ರಧಾನಮಂತ್ರಿ ಅವರು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕ್ಯಾಂಪಸ್ ನಲ್ಲಿ ಸಿ -295 ವಿಮಾನಗಳನ್ನು ತಯಾರಿಸುವ ಟಾಟಾ ವಿಮಾನ ಸಂಕೀರ್ಣವನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಸಿ -295 ಕಾರ್ಯಕ್ರಮದಡಿ ಒಟ್ಟು 56 ವಿಮಾನಗಳಿವೆ, ಅದರಲ್ಲಿ 16 ವಿಮಾನಗಳನ್ನು ಸ್ಪೇನ್ ನಿಂದ ನೇರವಾಗಿ ಏರ್ ಬಸ್ ಮೂಲಕ ಮತ್ತು ಉಳಿದ 40 ವಿಮಾನಗಳನ್ನು ಭಾರತದಲ್ಲಿ ತಯಾರಿಸಲಾಗುವುದು.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಭಾರತದಲ್ಲಿ ಈ 40 ವಿಮಾನಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ಸೌಲಭ್ಯವು ಭಾರತದಲ್ಲಿ ಮಿಲಿಟರಿ ವಿಮಾನಗಳಿಗೆ ಮೊದಲ ಖಾಸಗಿ ವಲಯದ ಅಂತಿಮ ಜೋಡಣೆ ರೇಖೆ (ಎಫ್ಎಎಲ್) ಆಗಲಿದೆ. ಇದು ತಯಾರಿಕೆಯಿಂದ ಜೋಡಣೆ, ಪರೀಕ್ಷೆ ಮತ್ತು ಅರ್ಹತೆ, ವಿಮಾನದ ಸಂಪೂರ್ಣ ಜೀವನಚಕ್ರದ ವಿತರಣೆ ಮತ್ತು ನಿರ್ವಹಣೆಯವರೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯ ಸಂಪೂರ್ಣ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ.
ಟಾಟಾ ಹೊರತುಪಡಿಸಿ, ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಘಟಕಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಖಾಸಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ಕಾರ್ಯಕ್ರಮಕ್ಕೆ ಕೊಡುಗೆ ನೀಡಲಿವೆ.
ಇದಕ್ಕೂ ಮುನ್ನ 2022ರ ಅಕ್ಟೋಬರ್ ನಲ್ಲಿ ಪ್ರಧಾನಮಂತ್ರಿ ಅವರು ವಡೋದರಾ ಅಂತಿಮ ಜೋಡಣೆ ಮಾರ್ಗಕ್ಕೆ (ಎಫ್ಎಎಲ್) ಶಂಕುಸ್ಥಾಪನೆ ನೆರವೇರಿಸಿದ್ದರು.
ಅಮ್ರೇಲಿಯಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರು ಅಮ್ರೇಲಿಯ ದುಧಲಾದಲ್ಲಿ ಭಾರತ್ ಮಾತಾ ಸರೋವರವನ್ನು ಉದ್ಘಾಟಿಸಲಿದ್ದಾರೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಗುಜರಾತ್ ಸರ್ಕಾರ ಮತ್ತು ಧೋಲಾಕಿಯಾ ಫೌಂಡೇಶನ್ ನಡುವಿನ ಸಹಯೋಗದ ಮೂಲಕ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಧೋಲಾಕಿಯಾ ಫೌಂಡೇಶನ್ ಚೆಕ್ ಡ್ಯಾಮ್ ಅನ್ನು ಸುಧಾರಿಸಿತು, ಇದು ಮೂಲತಃ 4.5 ಕೋಟಿ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು, ಆದರೆ ಅದನ್ನು ಆಳಗೊಳಿಸಿ, ಅಗಲಗೊಳಿಸಿ, ಬಲಪಡಿಸಿದ ನಂತರ, ಸಾಮರ್ಥ್ಯವು 24.5 ಕೋಟಿ ಲೀಟರ್ ಗೆ ಏರಿದೆ. ಈ ಸುಧಾರಣೆಯು ಹತ್ತಿರದ ಬಾವಿಗಳು ಮತ್ತು ಬೋರ್ ಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಿದೆ, ಇದು ಸ್ಥಳೀಯ ಹಳ್ಳಿಗಳಿಗೆ ಮತ್ತು ರೈತರಿಗೆ ಉತ್ತಮ ನೀರಾವರಿ ಒದಗಿಸುವ ಮೂಲಕ ಸಹಾಯ ಮಾಡುತ್ತದೆ.
ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಅಮ್ರೇಲಿಯಲ್ಲಿ ಸುಮಾರು 4,900 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ರಾಜ್ಯದ ಅಮ್ರೇಲಿ, ಜಾಮ್ ನಗರ್, ಮೊರ್ಬಿ, ದೇವಭೂಮಿ ದ್ವಾರಕಾ, ಜುನಾಗಢ್, ಪೋರ್ ಬಂದರ್, ಕಛ್ ಮತ್ತು ಬೊಟಾಡ್ ಜಿಲ್ಲೆಗಳ ನಾಗರಿಕರಿಗೆ ಪ್ರಯೋಜನವನ್ನು ನೀಡಲಿವೆ.
ಪ್ರಧಾನಮಂತ್ರಿ ಅವರು 2,800 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ರಸ್ತೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉದ್ಘಾಟಿಸಲಿರುವ ಯೋಜನೆಗಳಲ್ಲಿ ಎನ್ಎಚ್ 151, ಎನ್ಎಚ್ 151 ಎ ಮತ್ತು ಎನ್ಎಚ್ 51 ರ ವಿವಿಧ ವಿಭಾಗಗಳನ್ನು ಚತುಷ್ಪಥಗೊಳಿಸುವುದು ಮತ್ತು ಜುನಾಗಢ್ ಬೈಪಾಸ್ ಸೇರಿವೆ. ಜಾಮ್ ನಗರ್ ಜಿಲ್ಲೆಯ ಧ್ರೋಲ್ ಬೈಪಾಸ್ ನಿಂದ ಮೊರ್ಬಿ ಜಿಲ್ಲೆಯ ಅಮ್ರಾನ್ವರೆಗಿನ ಉಳಿದ ವಿಭಾಗದ ಚತುಷ್ಪಥ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.
ಪ್ರಧಾನಮಂತ್ರಿ ಅವರು ಸುಮಾರು 1,100 ಕೋಟಿ ರೂ.ಗಳ ವೆಚ್ಚದಲ್ಲಿ ಪೂರ್ಣಗೊಂಡಿರುವ ಭುಜ್-ನಲಿಯಾ ರೈಲು ಗೇಜ್ ಪರಿವರ್ತನೆ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ವಿಸ್ತಾರವಾದ ಯೋಜನೆಯು 24 ಪ್ರಮುಖ ಸೇತುವೆಗಳು, 254 ಸಣ್ಣ ಸೇತುವೆಗಳು, 3 ರಸ್ತೆ ಮೇಲ್ಸೇತುವೆಗಳು ಮತ್ತು 30 ರಸ್ತೆ ಕೆಳಸೇತುವೆಗಳನ್ನು ಒಳಗೊಂಡಿದೆ ಮತ್ತು ಕಛ್ ಜಿಲ್ಲೆಯ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಪ್ರಧಾನಮಂತ್ರಿ ಅವರು ಅಮ್ರೇಲಿ ಜಿಲ್ಲೆಯಿಂದ ನೀರು ಸರಬರಾಜು ಇಲಾಖೆಯ 700 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉದ್ಘಾಟಿಸಲಿರುವ ಯೋಜನೆಗಳಲ್ಲಿ ನವ್ಡಾದಿಂದ ಚವಾಂಡ್ ಬೃಹತ್ ಕೊಳವೆ ಮಾರ್ಗ ಸೇರಿದೆ. ಇದು 36 ನಗರಗಳು ಮತ್ತು ಬೊಟಾಡ್, ಅಮ್ರೇಲಿ, ಜುನಾಗಢ್, ರಾಜ್ಕೋಟ್ ಮತ್ತು ಪೋರ್ ಬಂದರ್ ಜಿಲ್ಲೆಗಳ 1,298 ಹಳ್ಳಿಗಳ ಸುಮಾರು 67 ಲಕ್ಷ ಫಲಾನುಭವಿಗಳಿಗೆ ಹೆಚ್ಚುವರಿ 28 ಕೋಟಿ ಲೀಟರ್ ನೀರನ್ನು ಒದಗಿಸುತ್ತದೆ. ಭಾವನಗರ ಜಿಲ್ಲೆಯಲ್ಲಿ ಪಸಾವಿ ಗ್ರೂಪ್ ಆಗ್ಮೆಂಟೇಶನ್ ನೀರು ಸರಬರಾಜು ಯೋಜನೆಯ ಹಂತ 2 ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು, ಇದು ಭಾವನಗರ ಜಿಲ್ಲೆಯ ಮಹುವಾ, ತಲಜಾ ಮತ್ತು ಪಾಲಿತಾನಾ ತಾಲ್ಲೂಕುಗಳ 95 ಗ್ರಾಮಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಪೋರ್ ಬಂದರ್ ಜಿಲ್ಲೆಯ ಮೊಕರ್ ಸಾಗರ್ ನಲ್ಲಿರುವ ಕಾರ್ಲಿ ರೀಚಾರ್ಜ್ ಜಲಾಶಯವನ್ನು ವಿಶ್ವದರ್ಜೆಯ ಸುಸ್ಥಿರ ಪರಿಸರ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸುವುದು ಸೇರಿದಂತೆ ಪ್ರವಾಸೋದ್ಯಮ ಸಂಬಂಧಿತ ಅಭಿವೃದ್ಧಿ ಉಪಕ್ರಮಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
*****