Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಕ್ಟೋಬರ್ 25ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಮತ್ತು ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಾಸ್ಥ್ಯ ಭಾರತ್ ಯೋಜನೆ (ಪಿ.ಎಂ.ಎ.ಎಸ್.ಬಿ.ವೈ)ಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 25ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಸಿದ್ಧಾರ್ಥನಗರದಲ್ಲಿ ಪ್ರಧಾನಮಂತ್ರಿಯವರು ಸುಮಾರು ಬೆಳಗ್ಗೆ 10.30ರ ಹೊತ್ತಿಗೆ ಉತ್ತರ ಪ್ರದೇಶದಲ್ಲಿನ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಸುಮಾರು 1.15ರ ಹೊತ್ತಿಗೆ ಪ್ರಧಾನಮಂತ್ರಿಯವರು ವಾರಾಣಸಿಯಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಾಸ್ಥ್ಯ ಭಾರತ ಯೋಜನೆಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಅವರು ವಾರಾಣಸಿಗಾಗಿ 5200 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನೂ ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಾಸ್ಥ್ಯ ಭಾರತ ಯೋಜನೆ (ಪಿ.ಎಂ.ಎ.ಎಸ್.ಬಿ.ವೈ.)ಯು ದೇಶದಾದ್ಯಂತ ಆರೋಗ್ಯ ಮೂಲಸೌಕರ್ಯ ಬಲಪಡಿಸಲು ಇಡೀ ಭಾರತಾದ್ಯಂತದ ಬೃಹತ್ ಯೋಜನೆಯಾಗಿದೆ. ಇದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಹೆಚ್ಚುವರಿ ಯೋಜನೆಯಾಗಿರುತ್ತದೆ.

ಪಿ.ಎಂ.ಎ.ಎಸ್.ಬಿ.ವೈ.ನ ಉದ್ದೇಶ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದಲ್ಲಿನ ನಿರ್ಣಾಯಕ ಕಂದಕಗಳನ್ನು, ಅದರಲ್ಲೂ ವಿಶೇಷವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ತುರ್ತು ಆರೋಗ್ಯ ಆರೈಕೆ ಸೌಲಭ್ಯ ಮತ್ತು ಪ್ರಾಥಮಿಕ ಆರೋಗ್ಯ ಆರೈಕೆಯಲ್ಲಿನ ಕಂದಕ ನಿವಾರಿಸುವುದಾಗಿದೆ. ಇದು 10 ಹೆಚ್ಚು ಗಮನಹರಿಸಲಾದ ರಾಜ್ಯಗಳಲ್ಲಿನ  17,788 ಗ್ರಾಮೀಣ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಬೆಂಬಲ ನೀಡಲಿದೆ. ಜೊತೆಗೆ ಎಲ್ಲ ರಾಜ್ಯಗಳಲ್ಲೂ 11,024 ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಸಮರ್ಪಿತ ತುರ್ತು ಆರೈಕೆ ಆಸ್ಪತ್ರೆ ವಿಭಾಗಗಳ ಮೂಲಕ ತುರ್ತು ಆರೈಕೆ ಸೇವೆಯನ್ನು 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ದೇಶದ ಎಲ್ಲ ಜಿಲ್ಲೆಗಳಲ್ಲೂ ಲಭ್ಯವಾಗುವಂತೆ ಮಾಡಲಾಗುತ್ತದೆ, ಜೊತೆಗೆ ಉಳಿದ ಜಿಲ್ಲೆಗಳನ್ನು ರೆಫರಲ್ ಸೇವೆಗಳ ಮೂಲಕ ಇದರ ವ್ಯಾಪ್ತಿಗೆ ತರಲಾಗುತ್ತದೆ.

ಸಾರ್ವಜನಿಕ ಆರೋಗ್ಯ ಆರೈಕೆ ವ್ಯವಸ್ಥೆಯಲ್ಲಿ ದೇಶಾದ್ಯಂತ ಪ್ರಯೋಗಾಲಯಗಳ ಜಾಲದ ಮೂಲಕ ಜನರು ಸಂಪೂರ್ಣ ಶ್ರೇಣಿಯ ರೋಗಪತ್ತೆ ಸೇವೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಎಲ್ಲಾ ಜಿಲ್ಲೆಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತದೆ.

ಪಿ.ಎಂ.ಎ.ಎಸ್.ಬಿ.ವೈ. ಅಡಿಯಲ್ಲಿ, ಒಂದು ಆರೋಗ್ಯ  ಕುರಿತ ರಾಷ್ಟ್ರೀಯ ಸಂಸ್ಥೆ, ವೈರಾಣು ಕುರಿತ 4 ಹೊಸ ರಾಷ್ಟ್ರೀಯ ಸಂಸ್ಥೆ, ಡಬ್ಲ್ಯು.ಎಚ್.ಓ. ಆಗ್ನೇಯ ಏಷ್ಯಾ ವಲಯಕ್ಕಾಗಿ ಒಂದು ಪ್ರಾದೇಶಿಕ ಸಂಶೋಧನಾ ವೇದಿಕೆ, 9 ಜೈವಿಕ ಸುರಕ್ಷತೆ ಮಟ್ಟ  III ಪ್ರಯೋಗಾಲಯಗಳು, ರೋಗ ನಿಯಂತ್ರಣಕ್ಕಾಗಿ 5 ಹೊಸ ಪ್ರಾದೇಶಿಕ ರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಪಿ.ಎಂ.ಎ.ಎಸ್.ಬಿ.ವೈ. ಮೆಟ್ರೋಪಾಲಿಟಿನ್ ಪ್ರದೇಶಗಳಲ್ಲಿ ವಿಭಾಗ, ಜಿಲ್ಲಾ, ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ನಿಗಾ ಪ್ರಯೋಗಾಲಯ ಜಾಲ ಅಭಿವೃದ್ಧಿಪಡಿಸುವ ಮೂಲಕ  ಐಟಿ ಶಕ್ತ ರೋಗ ನಿಗಾ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಎಲ್ಲ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಸಂಪರ್ಕಿಸಲು ಸಮಗ್ರ ಆರೋಗ್ಯ ಮಾಹಿತಿ ಪೋರ್ಟಲ್ ಅನ್ನು ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲಾಗುತ್ತದೆ

ಪರಿಣಾಮಕಾರಿಯಾಗಿ ರೋಗ ಪತ್ತೆ ಹಚ್ಚಲು, ತಪಾಸಣೆ ಮಾಡಲು, ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳು ಮತ್ತು ರೋಗ ಏಕಾಏಕಿ ಹೆಚ್ಚಾಗುವ ಪರಿಸ್ಥಿತಿ ಎದುರಿಸಲು ಪಿ.ಎಂ.ಎ.ಎಸ್.ಬಿ.ವೈ 17 ನೂತನ ಸಾರ್ವಜನಿಕ ಆರೋಗ್ಯ ಘಟಕ ಕಾರ್ಯಾರಂಭಿಸುವ ಮತ್ತು  ಹಾಲಿ ಅಸ್ತಿತ್ವದಲ್ಲಿರುವ 33 ಸಾರ್ವಜನಿಕ ಆರೋಗ್ಯ ಘಟಕಗಳನ್ನು ಪ್ರವೇಶದ ಆರಂಭಿಕ ಬಿಂದುವಿನಲ್ಲೇ ಬಲಪಡಿಸುವ ಗುರಿ ಹೊಂದಿದೆ. ಯಾವುದೇ ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿಗೆ ಸ್ಪಂದಿಸಲು ತರಬೇತಿ ಪಡೆದ ಮುಂಚೂಣಿಯ ಆರೋಗ್ಯ ಕಾರ್ಯಪಡೆಯನ್ನು ರೂಪಿಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ.

ಪ್ರಧಾನಮಂತ್ರಿಯವರು ಉದ್ಘಾಟಿಸಲಿರುವ ಒಂಬತ್ತು ವೈದ್ಯಕೀಯ ಕಾಲೇಜುಗಳು ಸಿದ್ಧಾರ್ಥನಗರ, ಎಥ್, ಹರ್ದಿಯೋ, ಪ್ರತಾಪಗಢ, ಫತೇಪುರ್, ಡಿಯೋರಿಯಾ, ಗಾಜಿಪುರ, ಮುಝಾಪುರ್ ಮತ್ತು ಜೂನಾಪುರ್ ಜಿಲ್ಲೆಗಳಲ್ಲಿವೆ. “ಜಿಲ್ಲಾ/ರೆಫರಲ್ ಆಸ್ಪತ್ರೆಗಳೊದಿಗೆ ಸಂಪರ್ಕಿತವಾದ ನೂತನ ಕಾಲೇಜು ಸ್ಥಾಪಿಸುವ ಸಲುವಾಗಿ” 8 ವೈದ್ಯಕೀಯ ಕಾಲೇಜುಗಳನ್ನು  ಕೇಂದ್ರ ಪ್ರಾಯೋಜಿತ ಯೋಜನೆಯಡಿ ಮಂಜೂರು ಮಾಡಲಾಗಿದ್ದರೆ, ಒಂದು ವೈದ್ಯಕೀಯ ಕಾಲೇಜನ್ನು ಜುನಾಪುರದಲ್ಲಿ ರಾಜ್ಯ ಸರ್ಕಾರ ತನ್ನ ಸ್ವಂತ ಸಂಪನ್ಮೂಲದಿಂದ ಕಾರ್ಯಾರಂಭಿಸುತ್ತಿದೆ.

ಕೇಂದ್ರ ಪ್ರಾಯೋಜಿತ ಯೋಜನೆಯಡಿ, ಹೆಚ್ಚು ಪ್ರಯೋಜನ ಪಡೆಯದ, ಹಿಂದುಳಿದ, ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆ ಆರೋಗ್ಯ ವೃತ್ತಿಪರರ ಲಭ್ಯತೆ, ವೈದ್ಯಕೀಯ ಕಾಲೇಜುಗಳ ವಿತರಣೆಯಲ್ಲಿ ಅಸ್ತಿತ್ವದಲ್ಲಿರುವ ಭೌಗೋಳಿಕ ಅಸಮತೋಲನವನ್ನು ಸರಿಪಡಿಸುವುದು ಮತ್ತು ಜಿಲ್ಲಾ ಆಸ್ಪತ್ರೆಗಳ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಗುರಿಯನ್ನು ಯೋಜನೆ ಹೊಂದಿದೆ. ಯೋಜನೆಯ ಮೂರು ಹಂತಗಳ ಅಡಿಯಲ್ಲಿ, 157 ಹೊಸ ವೈದ್ಯಕೀಯ ಕಾಲೇಜುಗಳಿಗೆ ದೇಶಾದ್ಯಂತ ಅನುಮೋದನೆ ನೀಡಲಾಗಿದ್ದು, ಈ ಪೈಕಿ 63 ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. 

ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

***