Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಕ್ಟೋಬರ್ 21ರಂದು ಕೇದಾರನಾಥ ಮತ್ತು ಬದರೀನಾಥಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಅಕ್ಟೋಬರ್ 21 ರಂದು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ. ಕೇದಾರನಾಥದಲ್ಲಿ ಬೆಳಗ್ಗೆ 8.30ಕ್ಕೆ ಶ್ರೀ ಕೇದಾರನಾಥ ದೇವಸ್ಥಾನದಲ್ಲಿ ದರ್ಶನ ಪಡೆದು, ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಪ್ರಧಾನಮಂತ್ರಿಯವರು ಕೇದಾರನಾಥ ರೋಪ್ ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತದನಂತರ, ಅವರು ಆದಿ ಗುರು ಶಂಕರಾಚಾರ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಸುಮಾರು 9.25ಕ್ಕೆ ಪ್ರಧಾನಮಂತ್ರಿಯವರು ಮಂದಾಕಿನಿ ಅಷ್ಟಪಥ ಮತ್ತು ಸರಸ್ವತಿ ಅಷ್ಟಪಥ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.

ತರುವಾಯ, ಪ್ರಧಾನಮಂತ್ರಿಯವರು ಬದರೀನಾಥ ತಲುಪಲಿದ್ದು, ಬೆಳಗ್ಗೆ 11.30ರ ಸುಮಾರಿಗೆ ಶ್ರೀ ಬದರೀನಾಥ್ ದೇವಾಲಯದಲ್ಲಿ ದರ್ಶನ ಪಡೆದು, ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅವರು ನದಿತೀರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದು, ನಂತರ ಮಧ್ಯಾಹ್ನ 12.30ಕ್ಕೆ ಮಾನಾ ಗ್ರಾಮದಲ್ಲಿ ರಸ್ತೆ ಮತ್ತು ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ, ಮಧ್ಯಾಹ್ನ 2 ಗಂಟೆಗೆ, ಅವರು ಆಗಮನ ಪ್ರದೇಶ ಮತ್ತು ಸರೋವರಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಲಿದ್ದಾರೆ.

ಕೇದಾರನಾಥದ ರೋಪ್ ವೇ ಸುಮಾರು 9.7 ಕಿ.ಮೀ ಉದ್ದವಿದ್ದು, ಗೌರಿಕುಂಡ್ ನಿಂದ ಕೇದಾರನಾಥಕ್ಕೆ ಸಂಪರ್ಕ ಕಲ್ಪಿಸುತ್ತದೆ, ಇದು ಪ್ರಸ್ತುತ ಎರಡು ತಾಣಗಳ ನಡುವೆ 6-7 ಗಂಟೆಗಳಿರುವ ಪ್ರಯಾಣದ ಅವಧಿಯನ್ನು ಕೇವಲ 30 ನಿಮಿಷಗಳಿಗೆ ತಗ್ಗಿಸುತ್ತದೆ. ಹೇಮಕುಂಡ್ ರೋಪ್ ವೇ ಗೋವಿಂದಘಾಟ್ ಅನ್ನು ಹೇಮಕುಂಡ್ ಸಾಹಿಬ್ ಗೆ ಸಂಪರ್ಕಿಸುತ್ತದೆ. ಇದು ಸುಮಾರು 12.4 ಕಿ.ಮೀ ಉದ್ದವಿದ್ದು,  ಒಂದು ದಿನಕ್ಕಿಂತ ಹೆಚ್ಚು ಪ್ರಯಾಣದ ಸಮಯವನ್ನು ಕೇವಲ 45 ನಿಮಿಷಗಳಿಗೆ ಇಳಿಸುತ್ತದೆ. ಈ ರೋಪ್ ವೇ ಹೂವುಗಳ ಕಣಿವೆಯ ರಾಷ್ಟ್ರೀಯ ಉದ್ಯಾನ (ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್)ಕ್ಕೆ  ಪ್ರವೇಶ ದ್ವಾರವಾಗಿರುವ ಘಂಗಾರಿಯಾವನ್ನು ಸಹ ಸಂಪರ್ಕಿಸುತ್ತದೆ.

ಸುಮಾರು 2430 ಕೋಟಿ ರೂ.ಗಳ ಸಂಚಿತ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ರೋಪ್ ವೇಗಳು ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದ್ದು, ಸುಖಕರ, ಸುರಕ್ಷಿತ ಮತ್ತು ಸ್ಥಿರ ಸಾರಿಗೆ ವಿಧಾನವನ್ನು ಒದಗಿಸುತ್ತವೆ. ಈ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಯು ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ, ಇದು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಮತ್ತು ಅನೇಕ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ.
ಈ ಭೇಟಿಯ ಸಂದರ್ಭದಲ್ಲಿ ಸುಮಾರು 1೦ ಕೋಟಿ ರೂ.ಗಳ ರಸ್ತೆ ಅಗಲೀಕರಣ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಮಾನಾದಿಂದ ಮಾನಾ ಪಾಸ್ (ರಾ.ಹೆ. 07) ಮತ್ತು ಜೋಶಿಮಠದಿಂದ ಮಲಾರಿ (ರಾ.ಹೆ. 107 ಬಿ) ವರೆಗಿನ ಎರಡು ರಸ್ತೆ ಅಗಲೀಕರಣ ಯೋಜನೆಗಳು ನಮ್ಮ ಗಡಿ ಪ್ರದೇಶಗಳಿಗೆ ಕೊನೆಯ ಮೈಲಿಗೂ ಸರ್ವ ಋತು ರಸ್ತೆ ಸಂಪರ್ಕವನ್ನು ಒದಗಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಸಂಪರ್ಕವನ್ನು ಹೆಚ್ಚಿಸುವುದರ ಜೊತೆಗೆ, ಈ ಯೋಜನೆಗಳು ವ್ಯೂಹಾತ್ಮಕ ದೃಷ್ಟಿಕೋನದಿಂದಲೂ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತವೆ.

ಕೇದಾರನಾಥ ಮತ್ತು ಬದರೀನಾಥ ಅತ್ಯಂತ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದಾಗಿವೆ. ಈ ಪ್ರದೇಶವು ಪೂಜ್ಯ ಸಿಖ್ ಯಾತ್ರಾಸ್ಥಳಗಳಲ್ಲಿ ಒಂದಾದ ಹೇಮಕುಂಡ್ ಸಾಹಿಬ್ ಗೂ ಹೆಸರುವಾಸಿಯಾಗಿದೆ. ಈಗ ಕೈಗೊಳ್ಳಲಾಗುತ್ತಿರುವ ಸಂಪರ್ಕ ಯೋಜನೆಗಳು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಗಮಗೊಳಿಸುವ ಮತ್ತು ಸುಧಾರಿಸುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಪ್ರಚುರಪಡಿಸುತ್ತದೆ.

*******