ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಅಕ್ಟೋಬರ್ 2ರಂದು ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10:45ರ ಸುಮಾರಿಗೆ ಪ್ರಧಾನಮಂತ್ರಿಯವರು ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಸುಮಾರು 7,000 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:30ರ ಸುಮಾರಿಗೆ ಪ್ರಧಾನಮಂತ್ರಿಯವರು ಗ್ವಾಲಿಯರ್ ತಲುಪಲಿದ್ದು, ಅಲ್ಲಿ ಅವರು ಸುಮಾರು 19,260 ಕೋಟಿ ರೂ.ಗಳ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ.
ಚಿತ್ತೋರ್‌ಗಢದಲ್ಲಿ ಪ್ರಧಾನಮಂತ್ರಿಗಳು
ಅನಿಲ ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸುವ ಮತ್ತೊಂದು ಹೆಜ್ಜೆಯಾಗಿ, ʻಮೆಹ್ಸಾನಾ – ಭಟಿಂಡಾ – ಗುರುದಾಸ್‌ಪುರ ಅನಿಲ ಕೊಳವೆ ಮಾರ್ಗʼವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸುಮಾರು 4500 ಕೋಟಿ ರೂ.ಗಳ ವೆಚ್ಚದಲ್ಲಿ ಪೈಪ್ ಲೈನ್ ನಿರ್ಮಿಸಲಾಗಿದೆ. ಪ್ರಧಾನಮಂತ್ರಿಯವರು ಅಬು ರಸ್ತೆಯಲ್ಲಿ ʻಎಚ್‌ಪಿಸಿಎಲ್ʼನ ಎಲ್‌ಪಿಜಿ ಘಟಕವನ್ನು ಸಮರ್ಪಿಸಲಿದ್ದಾರೆ. ಈ ಸ್ಥಾವರವು ವರ್ಷಕ್ಕೆ 86 ಲಕ್ಷ ಸಿಲಿಂಡರ್‌ಗಳನ್ನು ಭರ್ತಿ ಮಾಡಿ ವಿತರಿಸಲಿದೆ. ಸಿಲಿಂಡರ್‌ಗಳನ್ನು ಸಾಗಿಸುವ ಟ್ರಕ್‌ಗಳ ಓಡಾಟವನ್ನು ವರ್ಷಕ್ಕೆ ಸುಮಾರು 0.75 ದಶಲಕ್ಷ ಕಿ.ಮೀ.ಗಳಷ್ಟು ಕಡಿಮೆ ಮಾಡುತ್ತದೆ, ಇದು ವರ್ಷಕ್ಕೆ ಸುಮಾರು 0.5 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಐಒಸಿಎಲ್‌ನ ಅಜ್ಮೀರ್ ಬಾಟ್ಲಿಂಗ್ ಘಟಕದಲ್ಲಿ ಹೆಚ್ಚುವರಿ ಸಂಗ್ರಹಣೆ ಸೌಲಭ್ಯಕ್ಕೂ ಅವರು ಚಾಲನೆ ನೀಡಲಿದ್ದಾರೆ.
ಪ್ರಧಾನಮಂತ್ರಿಯವರು 1480 ಕೋಟಿ ರೂಗಳಿಗಿಂತಲೂ ಅಧಿಕ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ-12ರ (ಹೊಸ ಎನ್‌ಎಚ್-52) ʻದಾರಾ-ಝಾಲಾವರ್-ತೀಂಧರ್ʼ ವಿಭಾಗದಲ್ಲಿ ನಿರ್ಮಿಸಲಾಗಿರುವ ಚತುಷ್ಪಪಥ ರಸ್ತೆಯನ್ನು ಸಮರ್ಪಿಸಲಿದ್ದಾರೆ. ಈ ಯೋಜನೆಯು ಕೋಟಾ ಮತ್ತು ಝಾಲಾವರ್ ಜಿಲ್ಲೆಗಳಿಂದ ಗಣಿಗಳ ಉತ್ಪನ್ನಗಳ ಸಾಗಣೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಸವಾಯಿ ಮಾಧೋಪುರದಲ್ಲಿ ರೈಲ್ವೆ ಮೇಲ್ಸೇತುವೆಯನ್ನು(ಆರ್‌ಒಬಿ) ಎರಡು ಪಥದಿಂದ ನಾಲ್ಕು ಪಥಕ್ಕೆ ಅಗಲಗೊಳಿಸುವ ಸಂಬಂಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಯೋಜನೆಯು ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಲಿದೆ.
ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸುತ್ತಿರುವ ರೈಲ್ವೆ ಯೋಜನೆಗಳಲ್ಲಿ ʻಚಿತ್ತೋರ್‌ಘರ್ -ನೀಮುಚ್ʼ ರೈಲ್ವೆ ಮಾರ್ಗ ಮತ್ತು ʻಕೋಟಾ-ಚಿತ್ತೋರ್‌ಗಢʼ ವಿದ್ಯುದ್ದೀಕೃತ ರೈಲ್ವೆ ಮಾರ್ಗವನ್ನು ದ್ವಿಗುಣಗೊಳಿಸುವ ಯೋಜನೆಗಳು ಸೇರಿವೆ. ಈ ಯೋಜನೆಗಳು 650 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಪೂರ್ಣಗೊಂಡಿವೆ ಮತ್ತು ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯವನ್ನು ಬಲಪಡಿಸಲಿವೆ. ಅವು ರಾಜಸ್ಥಾನದ ಐತಿಹಾಸಿಕ ತಾಣಗಳಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.
ಪ್ರಧಾನಮಂತ್ರಿಯವರು ʻಸ್ವದೇಶ ದರ್ಶನʼ ಯೋಜನೆಯಡಿ ನಾಥದ್ವಾರದಲ್ಲಿ ಅಭಿವೃದ್ಧಿಪಡಿಸಲಾದ ಪ್ರವಾಸೋದ್ಯಮ ಸೌಲಭ್ಯಗಳನ್ನು ಸಮರ್ಪಿಸಲಿದ್ದಾರೆ. ಸಂತ ವಲ್ಲಭಾಚಾರ್ಯರು ಪ್ರಚಾರ ಮಾಡಿದ ಪುಷ್ಟಿಮಾರ್ಗದ ಲಕ್ಷಾಂತರ ಅನುಯಾಯಿಗಳಿಗೆ ನಾಥದ್ವಾರವು ಪ್ರಮುಖ ನಂಬಿಕೆಯ ಕ್ಷೇತ್ರವಾಗಿದೆ. ನಾಥದ್ವಾರದಲ್ಲಿ ಆಧುನಿಕ ‘ಪ್ರವಾಸಿ ವ್ಯಾಖ್ಯಾನ ಮತ್ತು ಸಾಂಸ್ಕೃತಿಕ ಕೇಂದ್ರ’ವನ್ನು ಅಭಿವೃದ್ಧಿಪಡಿಸಲಾಗಿದೆ, ಅಲ್ಲಿ ಪ್ರವಾಸಿಗರು ಶ್ರೀನಾಥ್ ಜಿ ಅವರ ಜೀವನದ ವಿವಿಧ ಅಂಶಗಳ ಅನುಭವವನ್ನು ಪಡೆಯಬಹುದು. ಇದಲ್ಲದೆ, ಪ್ರಧಾನಮಂತ್ರಿಯವರು ಕೋಟಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಶಾಶ್ವತ ಕ್ಯಾಂಪಸ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಗ್ವಾಲಿಯರ್‌ನಲ್ಲಿ ಪ್ರಧಾನಮಂತ್ರಿಗಳು
ಪ್ರಧಾನಮಂತ್ರಿಯವರು ಸುಮಾರು 19,260 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಉಪಕ್ರಮಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ.
ದೇಶಾದ್ಯಂತ ಸಂಪರ್ಕವನ್ನು ಹೆಚ್ಚಿಸುವ ಮತ್ತೊಂದು ಉಪಕ್ರಮದಲ್ಲಿ, ಪ್ರಧಾನಮಂತ್ರಿಯವರು ಸುಮಾರು 11,895 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ʻದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ವೇʼಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಿಯವರು 1880 ಕೋಟಿ ರೂಪಾಯಿ ಮೌಲ್ಯದ ಐದು ವಿವಿಧ ರಸ್ತೆ ಯೋಜನೆಗಳಿಗಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರತಿಯೊಬ್ಬರೂ ಸ್ವಂತ ಮನೆ ಹೊಂದುವಂತೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ. ಈ ಆಶಯಕ್ಕೆ ಅನುಗುಣವಾಗಿ, ʻಪಿಎಂಎವೈ – ಗ್ರಾಮೀಣʼ ಅಡಿಯಲ್ಲಿ ನಿರ್ಮಿಸಲಾದ 2.2 ಲಕ್ಷಕ್ಕೂ ಹೆಚ್ಚು ಮನೆಗಳ ಗೃಹ ಪ್ರವೇಶವನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ. ʻಪಿಎಂಎವೈ-ನಗರʼ ಅಡಿಯಲ್ಲಿ ಸುಮಾರು 140 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಮನೆಗಳನ್ನು ಅವರು ಹಸ್ತಾಂತರಿಸಲಿದ್ದಾರೆ.
ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಈ ಗುರಿಯನ್ನು ಮತ್ತಷ್ಟು ವಿಸ್ತರಿಸಲು ಪ್ರಧಾನಮಂತ್ರಿಯವರು ಗ್ವಾಲಿಯರ್ ಮತ್ತು ಶಿಯೋಪುರ್ ಜಿಲ್ಲೆಗಳಲ್ಲಿ 1530 ಕೋಟಿ ರೂ.ಗೂ ಅಧಿಕ ಮೌಲ್ಯದ ʻಜಲ ಜೀವನ್ ಮಿಷನ್ʼ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಒಟ್ಟಾಗಿ ಈ ಪ್ರದೇಶದ 72ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲ ಒದಗಿಸಲಿವೆ.
ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ʻಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ʼ ಅಡಿಯಲ್ಲಿ ಒಂಬತ್ತು ಆರೋಗ್ಯ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವುಗಳನ್ನು 150 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಪ್ರಧಾನಮಂತ್ರಿಯವರು ʻಐಐಟಿ ಇಂದೋರ್ʼನ ಶೈಕ್ಷಣಿಕ ಕಟ್ಟಡವನ್ನು ಸಮರ್ಪಿಸಲಿದ್ದಾರೆ ಮತ್ತು ಕ್ಯಾಂಪಸ್‌ನಲ್ಲಿ ಹಾಸ್ಟೆಲ್ ಮತ್ತು ಇತರ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಲ್ಲದೆ, ಪ್ರಧಾನಮಂತ್ರಿಯವರು ಇಂದೋರ್‌ನಲ್ಲಿ ಬಹು ಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉಜ್ಜಯಿನಿಯಲ್ಲಿ ʻಸಮಗ್ರ ಕೈಗಾರಿಕಾ ಟೌನ್‌ಶಿಪ್ʼ, ʻಐಒಸಿಎಲ್ ಬಾಟ್ಲಿಂಗ್ ಘಟಕʼ, ಗ್ವಾಲಿಯರ್‌ನಲ್ಲಿ ʻಅಟಲ್ ಬಿಹಾರಿ ವಾಜಪೇಯಿ ದಿವ್ಯಾಂಗ ಕ್ರೀಡಾ ತರಬೇತಿ ಕೇಂದ್ರʼ ಸೇರಿದಂತೆ ವಿವಿಧ ಯೋಜನೆಗಳನ್ನು ಅವರು ಲೋಕಾರ್ಪಣೆ ಮಾಡಲಿದ್ದಾರೆ.
****