Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಕ್ಟೋಬರ್ 17ರಂದು ಜಾಗತಿಕ ಕಡಲ ಭಾರತ ಶೃಂಗಸಭೆ 2023 ಉದ್ಘಾಟಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಅಕ್ಟೋಬರ್ 17 ರಂದು ಬೆಳಿಗ್ಗೆ 10:30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಾಗತಿಕ ಕಡಲ ಭಾರತ ಶೃಂಗಸಭೆ (ಜಿಎಂಐಎಸ್) 2023ರ ಮೂರನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಶೃಂಗಸಭೆ ಅಕ್ಟೋಬರ್ 17ರಿಂದ19 ರವರೆಗೆ ಮುಂಬೈನ ಎಂಎಂಆರ್ ಡಿಎ ಮೈದಾನದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಭಾರತೀಯ ಕಡಲ ನೀಲಿ ಆರ್ಥಿಕತೆಯ ದೀರ್ಘಕಾಲೀನ ನೀಲನಕ್ಷೆ ‘ಅಮೃತ್ ಕಾಲ್ ವಿಷನ್ 2047’ ನ್ನು ಅನಾವರಣಗೊಳಿಸಲಿದ್ದಾರೆ. ಬಂದರು ಸೌಲಭ್ಯಗಳನ್ನು ಹೆಚ್ಚಿಸುವುದು, ಸುಸ್ಥಿರ ಪದ್ಧತಿಗಳನ್ನು ಉತ್ತೇಜಿಸುವುದು ಮತ್ತು ಅಂತಾರಾಷ್ಟ್ರೀಯ ಸಹಯೋಗವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ಉಪಕ್ರಮಗಳನ್ನು ನೀಲನಕ್ಷೆ ವಿವರಿಸುತ್ತದೆ. ಈ ಭವಿಷ್ಯದ ಯೋಜನೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಭಾರತೀಯ ಕಡಲ ನೀಲಿ ಆರ್ಥಿಕತೆಗಾಗಿ ‘ಅಮೃತ್ ಕಾಲ್ ವಿಷನ್ 2047’ ನೊಂದಿಗೆ ಹೊಂದಿಕೆಯಾಗುವ 23,000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಗುಜರಾತ್ ನ ದೀನ್ ದಯಾಳ್ ಬಂದರು ಪ್ರಾಧಿಕಾರದಲ್ಲಿ 4,500 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುವ ಟ್ಯೂನಾ ಟೆಕ್ರಾ ಅಧಿಕ ಆಳದ ಸರ್ವಋತು ಟರ್ಮಿನಲ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಅತ್ಯಾಧುನಿಕ ಗ್ರೀನ್ ಫೀಲ್ಡ್ ಟರ್ಮಿನಲ್ ನ್ನು ಪಿಪಿಪಿ ಮಾದರಿಯಲ್ಲಿ  ಅಭಿವೃದ್ಧಿಪಡಿಸಲಾಗುವುದು. ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರವಾಗಿ ರೂಪುಗೊಳ್ಳುವ  ಸಾಧ್ಯತೆಯಿರುವ ಟರ್ಮಿನಲ್, 18,000 ಇಪ್ಪತ್ತು ಅಡಿ ಸಮಾನ ಘಟಕಗಳಿಗೂ ಹೆಚ್ಚು  (ಟಿಇಯು) ಸಾಮರ್ಥ್ಯದ ಹೊಸ ತಲೆಮಾರಿನ ಹಡಗುಗಳನ್ನು ನಿರ್ವಹಿಸುತ್ತದೆ ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ) ಮೂಲಕ ಭಾರತೀಯ ವ್ಯಾಪಾರಕ್ಕೆ ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಕಡಲ ವಲಯದಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಪಾಲುದಾರಿಕೆಗಾಗಿ 7 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 300ಕ್ಕೂ ಹೆಚ್ಚು ತಿಳಿವಳಿಕಾ  ಒಡಂಬಡಿಕೆಗಳನ್ನು (ಎಂಒಯು) ಸಮರ್ಪಿಸಲಿದ್ದಾರೆ.

ಈ ಶೃಂಗಸಭೆಯು ದೇಶದ ಅತಿದೊಡ್ಡ ಕಡಲ ಕಾರ್ಯಕ್ರಮವಾಗಿದೆ. ಇದರಲ್ಲಿ ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕ, ಏಷ್ಯಾ (ಮಧ್ಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಬಿಮ್ಸ್ಟೆಕ್ ವಲಯ ಸೇರಿದಂತೆ) ದೇಶಗಳನ್ನು ಪ್ರತಿನಿಧಿಸುವ ವಿಶ್ವದಾದ್ಯಂತದ ಸಚಿವರು ಭಾಗವಹಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ಜಾಗತಿಕ ಸಿಇಒಗಳು, ವ್ಯಾಪಾರೋದ್ಯಮಗಳ ಪ್ರಮುಖ ನಾಯಕರು, ಹೂಡಿಕೆದಾರರು, ಅಧಿಕಾರಿಗಳು ಮತ್ತು ವಿಶ್ವದಾದ್ಯಂತದ ಇತರ ಪಾಲುದಾರರು ಭಾಗವಹಿಸಲಿದ್ದಾರೆ. ಇದಲ್ಲದೆ, ಶೃಂಗಸಭೆಯಲ್ಲಿ ಹಲವಾರು ಭಾರತೀಯ ರಾಜ್ಯಗಳ ಸಚಿವರು ಮತ್ತು ಇತರ ಗಣ್ಯರು ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮೂರು ದಿನಗಳ ಶೃಂಗಸಭೆಯು ಭವಿಷ್ಯದ ಬಂದರುಗಳು ಸೇರಿದಂತೆ ಕಡಲ ವಲಯದ ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲಿದೆ; ಡಿಕಾರ್ಬನೈಸೇಶನ್; ಕರಾವಳಿ ಹಡಗು ಮತ್ತು ಒಳನಾಡಿನ ಜಲ ಸಾರಿಗೆ; ಹಡಗು ನಿರ್ಮಾಣ; ದುರಸ್ತಿ ಮತ್ತು ಮರುಬಳಕೆ; ಹಣಕಾಸು, ವಿಮೆ ಮತ್ತು ಮಧ್ಯಸ್ಥಿಕೆ; ಕಡಲ ಸಮೂಹಗಳು(ಗುಚ್ಛಗಳು); ನಾವೀನ್ಯತೆ ಮತ್ತು ತಂತ್ರಜ್ಞಾನ; ಕಡಲ ಸುರಕ್ಷತೆ ಮತ್ತು ಭದ್ರತೆ; ಮತ್ತು ಕಡಲ ಪ್ರವಾಸೋದ್ಯಮ, ಇತರ ವಿಷಯಗಳು ಇದರಲ್ಲಿ ಒಳಗೊಳ್ಳಲಿವೆ. ಈ ಶೃಂಗಸಭೆಯು ದೇಶದ ಕಡಲ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತದೆ.

ಮೊದಲ ಮೆರಿಟೈಮ್ ಇಂಡಿಯಾ (ಕಡಲ ಭಾರತ)  ಶೃಂಗಸಭೆ 2016 ರಲ್ಲಿ ಮುಂಬೈನಲ್ಲಿ ನಡೆದಿತ್ತು.  ಎರಡನೇ ಕಡಲ ಶೃಂಗಸಭೆಯನ್ನು 2021ರಲ್ಲಿ ವರ್ಚುವಲ್ ಆಗಿ ನಡೆಸಲಾಗಿತ್ತು.

*****