ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಬೆಳಗ್ಗೆ 10 ಗಂಟೆಗೆ ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಇದು ಹೊಸ ತಂತ್ರಜ್ಞಾನ ಶಕೆಯ ಉದಯಕ್ಕೆ ಕಾರಣವಾಗಲಿದೆ. 5ಜಿ ತಂತ್ರಜ್ಞಾನವು ಯಾವುದೇ ಅಡೆತಡೆರಹಿತ ವ್ಯಾಪ್ತಿ (ಕವರೇಜ್), ವೇಗವಾಗಿ ದತ್ತಾಂಶ ವರ್ಗಾವಣೆ, ಅತಿ ಕಡಿಮೆ ಸಮಯ ವ್ಯಯದೊಂದಿಗೆ ಹೆಚ್ಚು ವಿಶ್ವಾಸಾರ್ಹ ಸಂವಹನ ಸಂಪರ್ಕಗಳನ್ನು ಒದಗಿಸುತ್ತದೆ. ಇದು ಇಂಧನ ದಕ್ಷತೆ, ಸ್ಪೆಕ್ಟ್ರಮ್ (ತರಂಗಾಂತರ) ದಕ್ಷತೆ ಮತ್ತು ನೆಟ್ವರ್ಕ್ (ಜಾಲದ) ದಕ್ಷತೆಯನ್ನು ಹೆಚ್ಚಿಸುತ್ತದೆ.
ಪ್ರಧಾನಮಂತ್ರಿಯವರು ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ)ನ ಆರನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಐಎಂಸಿ 2022ನ್ನು ಅಕ್ಟೋಬರ್ 1 ರಿಂದ 4 ರವರೆಗೆ “ಹೊಸ ಡಿಜಿಟಲ್ ಯೂನಿವರ್ಸ್” (ಹೊಸ ಡಿಜಿಟಲ್ ವಿಶ್ವ) ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನದ ತ್ವರಿತ ಅಳವಡಿಕೆ ಮತ್ತು ಡಿಜಿಟಲ್ ತಂತ್ರಜ್ಞಾನದ ವಿತರಣೆಯಿಂದಾಗಿ ರೂಪುಗೊಳ್ಳುವ, ಮೂಡುವ ವಿಶಿಷ್ಟ ಅವಕಾಶಗಳನ್ನು ಚರ್ಚಿಸಲು ಮತ್ತು ಪ್ರದರ್ಶಿಸಲು ಪ್ರಮುಖ ಚಿಂತಕರು, ಉದ್ಯಮಿಗಳು, ನವೋದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಇದು ಒಂದೇ ಕಡೆ ಸೇರಿಸಲಿದೆ.
*****