ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ಐ.ಎಸ್.ಎ. ಚೌಕಟ್ಟು ಒಪ್ಪಂದದ ಸ್ಥಿರೀಕರಣ ಕುರಿತ ಹೊಸ ಮತ್ತು ಪುನರ್ನವೀಕರಿಸಬಹುದಾದ ಇಂಧನ (ಎಂ.ಎನ್.ಆರ್.ಇ.) ಸಚಿವಾಲಯದ ಪ್ರಸ್ತಾಪಕ್ಕೆ ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ. ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶದ 21ನೇ ಕಾಪ್ ಸಭೆಯ ಸಂದರ್ಭದಲ್ಲಿ 2015ರ ನವೆಂಬರ್ 30ರಂದು ಪ್ಯಾರಿಸ್ ನಲ್ಲಿ ಭಾರತದ ಪ್ರಧಾನಮಂತ್ರಿಯವರು ಮತ್ತು ಫ್ರಾನ್ಸ್ ಅಧ್ಯಕ್ಷರು ಜಂಟಿಯಾಗಿ ಐ.ಎಸ್.ಎ.ಗೆ ಚಾಲನೆ ನೀಡಿದ್ದರು.
ಸಂಘಟಿತ ಸಂಶೋಧನೆ, ಕಡಿಮೆ ವೆಚ್ಚದ ಹಣಕಾಸು ಮತ್ತು ತ್ವರಿತ ನಿಯೋಜನೆಗಾಗಿ 121 ಸೌರ ಸಂಪನ್ಮೂಲ ರಾಷ್ಟ್ರಗಳನ್ನು ಐ.ಎಸ್.ಎ. ಒಂದೆಡೆಗೆ ತರಲಿದೆ. ಐ.ಎಸ್.ಎ. ಕೇಂದ್ರ ಕಚೇರಿಗೆ ಹರಿಯಾಣದ ಗುರ್ ಗಾವ್ ನ ಗ್ವಾಲ್ ಪಹಾರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಐ.ಎಸ್.ಎ.ಯ ಕಾರ್ಯಾಚರಣೆಗೆ ಅಗತ್ಯವಾದ ಬೆಂಬಲ ನೀಡಲು ಭಾರತ ಈಗಾಗಲೇ ಬದ್ಧತೆ ವ್ಯಕ್ತಪಡಿಸಿದೆ. ಹವಾಮಾನ ಮತ್ತು ಪುನರ್ ನವೀಕರಿಸುವ ಇಂಧನದ ವಿಷಯಕ್ಕೆ ಸಂಬಂಧಿಸಿದಂತೆ ಐ.ಎಸ್.ಎ. ಭಾರತವನ್ನು ಜಾಗತಿಕ ನಾಯಕತ್ವದ ಪಾತ್ರ ನಿರ್ವಹಣೆಯಲ್ಲಿ ತಂದು ನಿಲ್ಲಿಸಿದೆ. ಅಲ್ಲದೆ ಇದು ಸೌರ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ವೇದಿಕೆಯನ್ನೂ ಒದಗಿಸುತ್ತದೆ.
ಹಿನ್ನೆಲೆ
ಮೊರಕ್ಕೋದ ಮರ್ರಾಕೇಶ್ ನಲ್ಲಿ ನಡೆಯಲಿರುವ 22ನೇ ಕಾಪ್ ಸಭೆಯ ವೇಳೆ ಈ ಒಪ್ಪಂದವು ಅಂಕಿತಕ್ಕೆ ಮುಕ್ತವಾಗಲಿದೆ. ಈ ಒಪ್ಪಂದವು ಐ.ಎಸ್.ಎ. ಮೇಲಿನ ಪ್ಯಾರಿಸ್ ನಿರ್ಣಯವನ್ನು ಆಹ್ವಾನಿಸುತ್ತದೆ. ಮತ್ತು ಸದಸ್ಯ ರಾಷ್ಟ್ರಗಳ ನಿಲುವನ್ನೂ ದಾಖಲಿಸುತ್ತದೆ. ಯು.ಎನ್.ಡಿ.ಪಿ. ಮತ್ತು ವಿಶ್ವ ಬ್ಯಾಂಕ್ ಗಳು ಈಗಾಗಲೇ ಐ.ಎಸ್.ಎ.ನೊಂದಿಗೆ ತಮ್ಮ ಪಾಲುದಾರಿಕೆಯನ್ನು ಪ್ರಕಟಿಸಿವೆ. ಈವರೆಗೆ 25 ರಾಷ್ಟ್ರಗಳು ಚೌಕಟ್ಟು ಒಪ್ಪಂದಕ್ಕೆ ಅಂಕಿತ ಹಾಕಿವೆ.
VBA/SH