ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ಕಾರ.
ಅಂತರಾಷ್ಟ್ರೀಯ ಇಂಧನ ಏಜೆನ್ಸಿಯ ಸಚಿವರ ಸಭೆಯಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು. ಐಇಎ ತನ್ನ ಸ್ಥಾಪನೆಯ 50 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಗಮನಾರ್ಹವಾಗಿದೆ. ಈ ಮೈಲಿಗಲ್ಲಿಗಾಗಿ ನಿಮಗೆ ಅಭಿನಂದನೆಗಳು. ಈ ಸಭೆಯ ಸಹ ಅಧ್ಯಕ್ಷತೆಗಾಗಿ ನಾನು ಐರ್ಲೆಂಡ್ ಮತ್ತು ಫ್ರಾನ್ಸ್ ಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ನಿರಂತರ ಬೆಳವಣಿಗೆಗಾಗಿ ಇಂಧನ ಭದ್ರತೆ ಮತ್ತು ಸುಸ್ಥಿರತೆಯ ಅಗತ್ಯವಿದೆ. ಒಂದೇ ದಶಕದಲ್ಲಿ, ನಾವು 11 ನೇ ಅತಿದೊಡ್ಡ ಆರ್ಥಿಕತೆಯಿಂದ 5 ನೇ ಅತಿದೊಡ್ಡ ಆರ್ಥಿಕತೆಗೆ ಮೇಲೇರಿದೆವು. ಇದೇ ಅವಧಿಯಲ್ಲಿ, ನಮ್ಮ ಸೌರಶಕ್ತಿ ಸಾಮರ್ಥ್ಯವು ಇಪ್ಪತ್ತಾರು ಪಟ್ಟು ಹೆಚ್ಚಾಗಿದೆ! ನಮ್ಮ ನವೀಕರಿಸಬಹುದಾದ ಇಂಧನ ಸಾಮರ್ಥ್ಯವೂ ದ್ವಿಗುಣಗೊಂಡಿದೆ. ಈ ವಿಷಯದಲ್ಲಿ ನಾವು ನಮ್ಮ ಪ್ಯಾರಿಸ್ ಬದ್ಧತೆಗಳ ಗುರಿಯನ್ನು ಅವಧಿಗಿಂತ ಮುಂಚಿತವಾಗಿಯೇ ಮೀರಿ ಸಾಧಿಸಿದ್ದೇವೆ.
ಸ್ನೇಹಿತರೇ,
ಭಾರತವು ಜಾಗತಿಕ ಜನಸಂಖ್ಯೆಯ 17% ರಷ್ಟು ನೆಲೆಯಾಗಿದೆ. ನಾವು ವಿಶ್ವದ ಕೆಲವು ದೊಡ್ಡ ಇಂಧನ ಲಭ್ಯತೆಯ ಉಪಕ್ರಮಗಳನ್ನು ನಡೆಸುತ್ತಿದ್ದೇವೆ. ಹಾಗಿದ್ದರೂ, ನಮ್ಮ ಇಂಗಾಲದ ಹೊರಸೂಸುವಿಕೆಯು ಜಾಗತಿಕ ಒಟ್ಟು ಮೊತ್ತದ ಕೇವಲ 4% ರಷ್ಟಿದೆ. ಆದಾಗ್ಯೂ, ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ನಾವು ದೃಢವಾಗಿ ಬದ್ಧರಾಗಿದ್ದೇವೆ. ನಮ್ಮದು ಸಾಮೂಹಿಕ ಮತ್ತು ಪೂರ್ವಭಾವಿ ವಿಧಾನವಾಗಿದೆ. ಭಾರತವು ಈಗಾಗಲೇ ಅಂತರರಾಷ್ಟ್ರೀಯ ಸೌರ ಒಕ್ಕೂಟದಂತಹ ಉಪಕ್ರಮಗಳನ್ನು ಮುನ್ನಡೆಸಿದೆ. ನಮ್ಮ ಮಿಷನ್ ಲೈಫ್ ಸಾಮೂಹಿಕ ಪ್ರಭಾವಕ್ಕಾಗಿ ಪರಿಸರ ಸ್ನೇಹಿ ಜೀವನಶೈಲಿಯ ಆಯ್ಕೆಗಳ ಮೇಲೆ ಕೇಂದ್ರೀಕರಿಸುತ್ತದೆ. ‘ತಗ್ಗಿಸುವಿಕೆ, ಪುನರುಪಯೋಗಿಸುವಿಕೆ ಮತ್ತು ಮರುಬಳಕೆ’ ಭಾರತದ ಸಾಂಪ್ರದಾಯಿಕ ಜೀವನ ವಿಧಾನದ ಒಂದು ಭಾಗವಾಗಿದೆ. ಭಾರತದ ಜಿ20 ಅಧ್ಯಕ್ಷತೆಯಲ್ಲಿ ಕೂಡ ಈ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ಕಂಡಿತು. ಜಾಗತಿಕ ಜೈವಿಕ ಇಂಧನ ಒಕ್ಕೂಟದ ಚಾಲನೆಯು ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಈ ಉಪಕ್ರಮಕ್ಕೆ ನೀಡಿದ ಬೆಂಬಲಕ್ಕಾಗಿ ನಾನು ಐಇಎ ಗೆ ಧನ್ಯವಾದಗಳನ್ನು ಹೇಳುತ್ತೇನೆ.
ಸ್ನೇಹಿತರೇ,
ಒಳಗೊಳ್ಳುವಿಕೆ ಯಾವುದೇ ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 1.4 ಶತಕೋಟಿ ಭಾರತೀಯರು ಪ್ರತಿಭೆ, ತಂತ್ರಜ್ಞಾನ ಮತ್ತು ನಾವೀನ್ಯತೆಗಳೊಂದಿಗೆ ಹೊರಬರುತ್ತಿದ್ದಾರೆ. ನಾವು ಪ್ರತಿ ಕಾರ್ಯಾಚರಣೆಗೆ ಬೆಳವಣಿಗೆ ಮತ್ತು ವೇಗ, ಪ್ರಮಾಣ ಮತ್ತು ಗುಣಮಟ್ಟವನ್ನು ತರುತ್ತೇವೆ. ಭಾರತವು ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸಿದಾಗ ಐಇಎ ಪ್ರಯೋಜನ ಪಡೆಯುತ್ತದೆ ಎಂದು ನನಗೆ ಖಾತ್ರಿಯಿದೆ. ಐಇಎ ನ ಸಚಿವರ ಸಭೆಯ ಯಶಸ್ಸಿಗೆ ನಾನು ಶುಭಾಶಯಗಳನ್ನು ಕೋರುತ್ತೇನೆ. ಅಸ್ತಿತ್ವದಲ್ಲಿರುವ ಪಾಲುದಾರಿಕೆಗಳನ್ನು ಬಲಪಡಿಸಲು ಮತ್ತು ಹೊಸದನ್ನು ರೂಪಿಸಲು ನಾವು ಈ ವೇದಿಕೆಯನ್ನು ಬಳಸಿಕೊಳ್ಳೋಣ. ಸ್ವಚ್ಛ, ಹಸಿರು ಮತ್ತು ಎಲ್ಲರನ್ನೊಳಗೊಂಡ ಜಗತ್ತನ್ನು ನಿರ್ಮಿಸೋಣ.
ಧನ್ಯವಾದಗಳು
ಬಹಳ ಧನ್ಯವಾದಗಳು.
*****
Sharing my remarks at the International Energy Agency’s Ministerial Meeting. https://t.co/tZrgrjdkJC
— Narendra Modi (@narendramodi) February 14, 2024