Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ʻವಿಚಕ್ಷಣಾ ಜಾಗೃತಿ ಸಪ್ತಾಹʼದ ಅಂಗವಾಗಿ ನವದೆಹಲಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ

ʻವಿಚಕ್ಷಣಾ ಜಾಗೃತಿ ಸಪ್ತಾಹʼದ ಅಂಗವಾಗಿ ನವದೆಹಲಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ವಿಚಕ್ಷಣಾ ಆಯೋಗದ(ಸಿವಿಸಿ) ʻವಿಚಕ್ಷಣಾ ಜಾಗೃತಿ ಸಪ್ತಾಹʼದ ಅಂಗವಾಗಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ, ʻಸಿವಿಸಿʼಯ ಹೊಸ ದೂರು ನಿರ್ವಹಣಾ ವ್ಯವಸ್ಥೆಯ ಪೋರ್ಟಲ್‌ಗೆ ಚಾಲನೆ ನೀಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ದಾರ್ ಪಟೇಲರ ಜಯಂತಿಯೊಂದಿಗೆ ʻವಿಚಕ್ಷಣಾ ಜಾಗೃತಿ ಸಪ್ತಾಹʼ ಪ್ರಾರಂಭವಾಗಿದೆ ಎಂದು ಹೇಳಿದರು. “ಸರ್ದಾರ್ ಪಟೇಲ್ ಅವರ ಇಡೀ ಜೀವನವು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಈ ಮೌಲ್ಯಗಳ ಆಧಾರದ ಮೇಲೆ ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ನಿರ್ಮಿಸಲು ಮುಡಿಪಾಗಿತ್ತು” ಎಂದು ಅವರು ಹೇಳಿದರು. ಜಾಗೃತಿ ಮತ್ತು ಜಾಗರೂಕತೆಗೆ ಸಂಬಂಧಿಸಿದ ಅಭಿಯಾನವು ಇದೇ ತತ್ವಗಳನ್ನು ಆಧರಿಸಿದೆ ಎಂದು ಪ್ರಧಾನಿ ಹೇಳಿದರು. ಭ್ರಷ್ಟಾಚಾರ ಮುಕ್ತ ಭಾರತದ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ʻವಿಚಕ್ಷಣಾ ಜಾಗೃತಿ ಸಪ್ತಾಹʼ ಅಭಿಯಾನ ನಡೆಯುತ್ತಿದೆ ಹೇಳಿದ ಅವರು,  ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಅದರ ಮಹತ್ವವನ್ನು ಪ್ರತಿಪಾದಿಸಿದರು.

ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ವಿಶ್ವಾಸ ಮತ್ತು ವಿಶ್ವಾಸಾರ್ಹತೆ ನಿರ್ಣಾಯಕವಾಗಿವೆ ಎಂದು ಪ್ರಧಾನಿ ಹೇಳಿದರು.  ಸರಕಾರದ ಮೇಲೆ ಜನರಿಗಿರುವ ವಿಶ್ವಾಸವು ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಿಂದಿನ ಸರಕಾರಗಳು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಲ್ಲದೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿಯೂ ವಿಫಲವಾಗಿವೆ ಎಂದು ಪ್ರಧಾನಿ ವಿಷಾದಿಸಿದರು. ದುರದೃಷ್ಟವೆಂದರೆ ಭ್ರಷ್ಟಾಚಾರ, ಶೋಷಣೆ ಮತ್ತು ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸುವ ಸುದೀರ್ಘ ಗುಲಾಮಗಿರಿಯ ಪರಂಪರೆಯು ಸ್ವಾತಂತ್ರ್ಯದ ನಂತರ ಹೆಚ್ಚು ಬಲಿಷ್ಠವಾಯಿತು. ಇದು ಈ ದೇಶದಲ್ಲಿ ಕನಿಷ್ಠ ನಾಲ್ಕು ತಲೆಮಾರುಗಳಿಗೆ ತೀವ್ರ ಹಾನಿಯನ್ನುಂಟು ಮಾಡಿದೆ ಎಂದು ಪ್ರಧಾನಿ ಹೇಳಿದರು. “ಈ ದಶಕಗಳ ಸುದೀರ್ಘ ಮಾರ್ಗವನ್ನು ʻಆಜಾದಿ ಕಾ ಅಮೃತ್ ಕಾಲ್‌ʼನಲ್ಲಿ ನಾವು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ” ಎಂದು ಅವರು ಹೇಳಿದರು.

ಭ್ರಷ್ಟಾಚಾರದ ವಿರುದ್ಧದ ನಿರ್ಣಾಯಕ ಹೋರಾಟಕ್ಕಾಗಿ ಕೆಂಪುಕೋಟೆಯ ಆವರಣದಿಂದ ತಾವು ನೀಡಿದ ಕರೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭ್ರಷ್ಟಾಚಾರ ಮತ್ತು ಜನರ ಪ್ರಗತಿಗೆ ಅಡ್ಡಿಯಾಗುತ್ತಿರುವ ಎರಡು ಪ್ರಮುಖ ಕಾರಣಗಳನ್ನು ಹೇಳಿದರು. ಅವುಗಳೆಂದರೆ ಸೌಕರ್ಯಗಳ ಕೊರತೆ ಮತ್ತು ಸರಕಾರದಿಂದ ಅನಗತ್ಯ ಒತ್ತಡ. ಸೌಲಭ್ಯಗಳು ಮತ್ತು ಅವಕಾಶಗಳಿಂದ ಜನರು ವಂಚಿತವಾಗಿದ್ದ ಈ ಸ್ಥಿತಿಯನ್ನು ಬಹಳ ದೀರ್ಘಕಾಲದವರೆಗೆ ಉದ್ದೇಶಪೂರ್ವಕವಾಗಿ ಜೀವಂತವಾಗಿಡಲಾಗಿತ್ತು. ಜೊತೆಗೆ ಈ ಅಂತರವನ್ನು ವಿಸ್ತರಿಸಲು ಅನುಮತಿಸುವ ಮೂಲಕ, ಒಂದು ಕಡೆಯವರಷ್ಟೇ ಗೆಲ್ಲುವ ಅಥವಾ ಲಾಭ ಪಡೆಯುವಂತಹ ಅನಾರೋಗ್ಯಕರ ಸ್ಪರ್ಧೆಗೆ ದಾರಿ ಮಾಡಲಾಯಿತು ಎಂದು ಹೇಳಿದರು. ಇಂತಹ ಸ್ಪರ್ಧೆಯು ಭ್ರಷ್ಟಾಚಾರದ ಪರಿಸರ ವ್ಯವಸ್ಥೆಯನ್ನು ಪೋಷಿಸಿತು. ಈ ಅಭಾವದಿಂದ ಸೃಷ್ಟಿಯಾದ ಭ್ರಷ್ಟಾಚಾರವು ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. “ಬಡವರು ಮತ್ತು ಮಧ್ಯಮ ವರ್ಗದವರು ಬರೀ ತಮ್ಮ ಮೂಲಭೂತ ಅಗತ್ಯಗಳಿಗಾಗಿ ತಮ್ಮ ಶಕ್ತಿಯನ್ನೆಲ್ಲಾ ವ್ಯಯಿಸಿದರೆ, ದೇಶವು ಪ್ರಗತಿ ಹೊಂದಲು ಹೇಗೆ ಸಾಧ್ಯ,?” ಎಂದು ಪ್ರಧಾನಿ ಪ್ರಶ್ನಿಸಿದರು. ಅದಕ್ಕಾಗಿಯೇ ನಾವು ಕಳೆದ 8 ವರ್ಷಗಳಿಂದ ಈ ಕೊರತೆ ಮತ್ತು ಒತ್ತಡದ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ತುಂಬಲು ಸರಕಾರ ಪ್ರಯತ್ನಿಸುತ್ತಿದೆ. ಇದನ್ನು ಸಾಧಿಸಲು ಅಳವಡಿಸಿಕೊಳ್ಳಲಾದ ಮೂರು ಮಾರ್ಗಗಳೆಂದರೆ ʻತಂತ್ರಜ್ಞಾನದ  ಪ್ರಗತಿʼ, ʻಮೂಲಭೂತ ಸೇವೆಗಳನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯುವುದುʼ ಮತ್ತು ಅಂತಿಮವಾಗಿ ʻಆತ್ಮನಿರ್ಭರತೆಯತ್ತ ಸಾಗುವುದುʼ, ಎಂದು ಪ್ರಧಾನಿ ವಿವರಿಸಿದರು.

ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ, ನಾಗರಿಕ ಪೂರೈಕೆ ವ್ಯವಸ್ಥೆಯೊಂದಿಗೆ ತಂತ್ರಜ್ಞಾನದ ಜೋಡಣೆಯನ್ನು ಪ್ರಧಾನಿ ಉದಾಹರಿಸಿದರು. ಕೋಟ್ಯಂತರ ನಕಲಿ ಫಲಾನುಭವಿಗಳನ್ನು ನಿರ್ಮೂಲನೆ ಮಾಡುವ ಮೂಲಕ ಮತ್ತು ʻನೇರ ಲಾಭ ವರ್ಗಾವಣೆʼ(ಡಿಬಿಟಿ) ವ್ಯವಸ್ಥೆ ಅಳವಡಿಸಿಕೊಳ್ಳುವ ಅನರ್ಹರ ಕೈ ಸೇರುತ್ತಿದ್ದ 2 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಉಳಿತಾಯ ಮಾಡಲಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಅಂತೆಯೇ, ಪಾರದರ್ಶಕ ಡಿಜಿಟಲ್ ವಹಿವಾಟುಗಳನ್ನು ಅಳವಡಿಸಿಕೊಳ್ಳುವುದು ಮತ್ತು ʻಜಿಇಎಂʼ ಮೂಲಕ ಪಾರದರ್ಶಕ ಸರಕಾರಿ ಖರೀದಿಯು ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತಂದಿದೆ ಎಂದರು.

ಮೂಲಭೂತ ಸೌಲಭ್ಯಗಳನ್ನು ಪರಿಪೂರ್ಣತೆಯ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಯಾವುದೇ ಸರಕಾರಿ ಯೋಜನೆಯು ಪ್ರತಿಯೊಬ್ಬ ಅರ್ಹ ಫಲಾನುಭವಿಯನ್ನು ತಲುಪುವುದರಿಂದ ಮತ್ತು ಪರಿಪೂರ್ಣತೆಯ ಗುರಿಗಳನ್ನು ಸಾಧಿಸುವುದರಿಂದ ಸಮಾಜದಲ್ಲಿನ ತಾರತಮ್ಯವನ್ನು ಕೊನೆಗಾಣಿಸಬಹುದು. ಜೊತೆಗೆ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳಬಹುದು ಎಂದು ಅವರು ಹೇಳಿದರು. ಪ್ರತಿಯೊಂದು ಯೋಜನೆಯ ವಿತರಣೆಗಾಗಿ ಸರಕಾರವು ಅಳವಡಿಸಿಕೊಂಡಿರುವ ಪರಿಪೂರ್ಣತೆಯ ತತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನೀರಿನ ಸಂಪರ್ಕಗಳು, ಸದೃಢ ಮನೆಗಳು, ವಿದ್ಯುತ್ ಸಂಪರ್ಕಗಳು ಮತ್ತು ಅನಿಲ ಸಂಪರ್ಕಗಳ ಉದಾಹರಣೆಗಳನ್ನು ನೀಡಿದರು.

ವಿದೇಶಿ ಸರಕುಗಳ ಮೇಲೆ ಅತಿಯಾದ ಅವಲಂಬನೆಯು ಭ್ರಷ್ಟಾಚಾರಕ್ಕೆ ದೊಡ್ಡ ಕಾರಣವಾಗಿದೆ ಎಂದು ಪ್ರಧಾನಿ ವಿಶ್ಲೇಷಿಸಿದರು. ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು ಸರಕಾರ ನಡೆಸುತ್ತಿರುವ ಪ್ರಯತ್ನವನ್ನು ಅವರು ಒತ್ತಿಹೇಳಿದರು. ಭಾರತವು ರೈಫಲ್‌ಗಳಿಂದ ಯುದ್ಧ ವಿಮಾನಗಳವರೆಗೆ, ಸಾರಿಗೆ ವಿಮಾನಗಳವರೆಗೆ ತನ್ನದೇ ಆದ ರಕ್ಷಣಾ ಸಲಕರಣೆಗಳನ್ನು ತಯಾರಿಸುತ್ತಿರುವುದರಿಂದ ಹಗರಣಗಳ ಸಾಧ್ಯತೆಗಳು ಕಡಿಮೆಯಾಗುತ್ತಿವೆ ಎಂದು ಹೇಳಿದರು.

ʻಕೇಂದ್ರ ವಿಚಕ್ಷಣಾ ಆಯೋಗʼವು(ಸಿವಿಸಿ) ಪಾರದರ್ಶಕತೆಯನ್ನು ಖಾತರಿಪಡಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಪ್ರಯತ್ನಗಳನ್ನು ಉತ್ತೇಜಿಸುವ ಸಂಸ್ಥೆಯಾಗಿದೆ ಎಂದು ಪ್ರಧಾನಮಂತ್ರಿಯವರು ಬಣ್ಣಿಸಿದರು. ಕಳೆದ ಬಾರಿ ‘ವಿಚಕ್ಷಣಾ ಜಾಗೃತಿʼ ವೇಳೆ ತಾವು ಮಾಡಿದ ಮನವಿಯನ್ನು ಸ್ಮರಿಸಿದ ಪ್ರಧಾನಿ ಈ ನಿಟ್ಟಿನಲ್ಲಿ ʻಸಿವಿಸಿʼಯ ಪ್ರಯತ್ನಗಳನ್ನು ಶ್ಲಾಘಿಸಿದರು. ವಿಚಕ್ಷಣಾ ಸಮುದಾಯದವರು ತಮ್ಮ ಲೆಕ್ಕಪರಿಶೋಧನೆಗಳು ಮತ್ತು ತಪಾಸಣೆಗಳನ್ನು ಆಧುನೀಕರಣಗೊಳಿಸುವ ಬಗ್ಗೆ ಯೋಚಿಸಬೇಕೆಂದೂ ಪ್ರಧಾನಿ ಸೂಚಿಸಿದರು. “ಭ್ರಷ್ಟಾಚಾರದ ವಿರುದ್ಧ ಸರಕಾರ ತೋರಿಸುತ್ತಿರುವ ಇಚ್ಛಾಶಕ್ತಿಯೇ ಎಲ್ಲಾ ಇಲಾಖೆಗಳಲ್ಲಿಯೂ ಪ್ರತಿಫಲಿಸುವುದು ಅಗತ್ಯವಾಗಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ, ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿರುವ ಆಡಳಿತಾತ್ಮಕ ಪರಿಸರ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಬೇಕಾಗಿದೆ”, ಎಂದು ಅವರು ಕರೆ ನೀಡಿದರು.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಶಿಸ್ತುಕ್ರಮಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ವ್ಯವಸ್ಥೆ ಬರಬೇಕೆಂದು ಪ್ರಧಾನಮಂತ್ರಿಯವರು ಹೇಳಿದರು. ಕ್ರಿಮಿನಲ್ ಪ್ರಕರಣಗಳ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಅವರು ಸಲಹೆ ನೀಡಿದರು. ಇದೇ ವೇಳೆ, ಬಾಕಿ ಇರುವ ಭ್ರಷ್ಟಾಚಾರ ಪ್ರಕರಣಗಳ ಆಧಾರದ ಮೇಲೆ ಇಲಾಖೆಗಳನ್ನು ಶ್ರೇಯಾಂಕಿಸುವ ಮತ್ತು ಅದಕ್ಕೆ ಸಂಬಂಧಿತ ವರದಿಗಳನ್ನು ಮಾಸಿಕ ಅಥವಾ ತ್ರೈಮಾಸಿಕ ಆಧಾರದ ಮೇಲೆ ಪ್ರಕಟಿಸುವ ವ್ಯವಸ್ಥೆಯನ್ನು ರೂಪಿಸಲು ಸೂಚಿಸಿದರು. ತಂತ್ರಜ್ಞಾನದ ಸಹಾಯದಿಂದ ವಿಚಕ್ಷಣಾ ಅನುಮೋದನೆ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವಂತೆಯೂ ಪ್ರಧಾನಿ ಕೋರಿದರು. ಸಾರ್ವಜನಿಕ ಕುಂದುಕೊರತೆಗಳ ದತ್ತಾಂಶವನ್ನು ಲೆಕ್ಕಪರಿಶೋಧನೆ ಮಾಡುವ ಅಗತ್ಯವಿದೆ, ಇದರಿಂದ ನಾವು ಸಂಬಂಧಪಟ್ಟ ಇಲಾಖೆಯಲ್ಲಿನ ಭ್ರಷ್ಟಾಚಾರದ ಮೂಲಗಳನ್ನು ಪತ್ತೆ ಮಾಡಬಹುದು ಎಂದು ಪ್ರಧಾನಿ ಸಲಹೆಯಿತ್ತರು.

ಭ್ರಷ್ಟಾಚಾರದ ಮೇಲೆ ನಿಗಾ ಇಡುವ ಕಾರ್ಯದಲ್ಲಿ ಸಾಮಾನ್ಯ ನಾಗರಿಕರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. “ಭ್ರಷ್ಟರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವರನ್ನು ಯಾವುದೇ ಸಂದರ್ಭದಲ್ಲೂ ಉಳಿಸಬಾರದು, ಅದು ನಿಮ್ಮಂತಹ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಯಾವುದೇ ಭ್ರಷ್ಟ ವ್ಯಕ್ತಿಗೆ ರಾಜಕೀಯ-ಸಾಮಾಜಿಕ ಬೆಂಬಲ ಸಿಗಬಾರದು. ಪ್ರತಿಯೊಬ್ಬ ಭ್ರಷ್ಟ ವ್ಯಕ್ತಿಯನ್ನು ಸಮಾಜವು ಅಪಾಯಕ್ಕೆ ಸಿಲುಕಿಸಬೇಕು, ಅಂತಹ ವಾತಾವರಣವನ್ನು ಸೃಷ್ಟಿಸುವುದು ಅಗತ್ಯವಾಗಿದೆ” ಎಂದು ಅವರು ಹೇಳಿದರು. ಕಳವಳಕಾರಿ ಪ್ರವೃತ್ತಿಯೊಂದರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, “ಭ್ರಷ್ಟರು ಎಂದು ಸಾಬೀತಾದ ನಂತರವೂ, ಜೈಲುವಾಸ ಅನುಭವಿಸಿದ ನಂತರವೂ ಅನೇಕ ಬಾರಿ ಭ್ರಷ್ಟರನ್ನು ವೈಭವೀಕರಿಸುವುದನ್ನು ನಾವು ನೋಡಿದ್ದೇವೆ. ಈ ಪರಿಸ್ಥಿತಿಯು ಭಾರತೀಯ ಸಮಾಜಕ್ಕೆ ಒಳ್ಳೆಯದಲ್ಲ. ಇಂದಿಗೂ, ಕೆಲವರು ತಪ್ಪಿತಸ್ಥರೆಂದು ಸಾಬೀತಾದ ಭ್ರಷ್ಟರ ಪರವಾಗಿ ವಾದಗಳನ್ನು ಮಂಡಿಸುತ್ತಾರೆ. ಅಂತಹ ಜನರಿಗೆ, ಅಂತಹ ಶಕ್ತಿಗಳಿಗೆ ಸಮಾಜವು ತಮ್ಮ ಕರ್ತವ್ಯದ ಬಗ್ಗೆ ಅರಿವು ಮೂಡಿಸುವುದು ಬಹಳ ಅಗತ್ಯವಾಗಿದೆ. ಇದರಲ್ಲಿಯೂ ನಿಮ್ಮ ಇಲಾಖೆಯ ಕೈಗೊಂಡ ದಿಟ್ಟ ಕ್ರಮಗಳ ಪಾತ್ರ ದೊಡ್ಡದಿದೆ,ʼʼ ಎಂದರು.

ಭ್ರಷ್ಟರು ಮತ್ತು ಭ್ರಷ್ಟಾಚಾರದ ವಿರುದ್ಧ ಕಾರ್ಯನಿರ್ವಹಿಸುವ ʻಸಿವಿಸಿʼಯಂತಹ ಸಂಸ್ಥೆಗಳಿಗೆ ಯಾವುದೇ ರೀತಿಯಲ್ಲಿ ರಕ್ಷಣಾತ್ಮಕವಾಗಿ ವರ್ತಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ಸಂಸ್ಥೆಯು ಯಾವುದೇ ರಾಜಕೀಯ ಕಾರ್ಯಸೂಚಿಯಂತೆ ಕೆಲಸ ಮಾಡುವ ಅಗತ್ಯವಿಲ್ಲ, ಬದಲಿಗೆ ಸಾಮಾನ್ಯ ನಾಗರಿಕರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. “ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವವರು ಸಂಸ್ಥೆಯ ಕಲಾಪಗಳಿಗೆ ಅಡ್ಡಿಪಡಿಸಲು ಮತ್ತು ಈ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ತೇಜೋವಧೆ ಮಾಡಲು ಪ್ರಯತ್ನಿಸುತ್ತಾರೆ”, ಎಂದು ಪ್ರಧಾನಿ ಕಳವಳ ವ್ಯಕ್ತಪಡಿಸಿದರು. “ಆದರೆ ಜನರು ಜನಾರ್ಧನನ ರೂಪ, ದೇವರ ರೂಪ, ಅವರಿಗೆ ಸತ್ಯದ ಅರಿವಿದೆ ಮತ್ತು ಎಲ್ಲವನ್ನೂ ಪರೀಕ್ಷಿಸುತ್ತಾರೆ.  ಸಮಯ ಬಂದಾಗ, ಅವರು ಸತ್ಯವನ್ನು ಬೆಂಬಲಿಸುವವರೊಂದಿಗೆ ಮಾತ್ರ ನಿಲ್ಲುತ್ತಾರೆ,ʼʼ ಎಂದರು. ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ಸಮರ್ಪಣಾ ಭಾವದಿಂದ ಪೂರೈಸಲು ಸತ್ಯದ ಹಾದಿಯಲ್ಲಿ ನಡೆಯಬೇಕು ಎಂದು ಕರೆ ನೀಡಿದ ಪ್ರಧಾನಿ, “ನೀವು ದೃಢನಿಶ್ಚಯದಿಂದ ಕ್ರಮ ಕೈಗೊಂಡಾಗ, ಇಡೀ ದೇಶ ನಿಮ್ಮೊಂದಿಗೆ ನಿಲ್ಲುತ್ತದೆ” ಎಂದು ಒತ್ತಿ ಹೇಳಿದರು.

ಭಾಷಣದ ಕೊನೆಯ ಭಾಗವಾಗಿ ಮಾತು ಮುಂದುವರಿಸಿದ ಪ್ರಧಾನಿಯವರು ಸಂಸ್ಥೆಯ ಮೇಲಿನ ಜವಾಬ್ದಾರಿಯು ಅಗಾಧವಾಗಿದೆ ಮತ್ತು ಸವಾಲುಗಳ ಸ್ವರೂಪವೂ ಬದಲಾಗುತ್ತಿರುತ್ತದೆ ಎಂದರು. “ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ನಿಮ್ಮ ಪ್ರಮುಖ ಪಾತ್ರ ಮುಂದುವರಿಯುವ ಭರವಸೆ ನನಗಿದೆ,ʼʼ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಈ ಸವಾಲನ್ನು ಎದುರಿಸಲು ಕಾರ್ಯವಿಧಾನದಲ್ಲಿ ನಿರಂತರ ಚಲನಶೀಲತೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು ಈ ಬಗ್ಗೆ ಹರ್ಷ ವ್ಯಕ್ತಪಡಿಸಿದರು ಮತ್ತು ಭವಿಷ್ಯದಲ್ಲಿ ಭಾಷಣ ಸ್ಪರ್ಧೆಯನ್ನೂ ಪರಿಚಯಿಸುವಂತೆ  ಸಲಹೆ ನೀಡಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ 5 ವಿಜೇತರಲ್ಲಿ 4 ಮಂದಿ ಬಾಲಕಿಯರು ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ಪ್ರಯಾಣದಲ್ಲಿ ಹುಡುಗರು ಕೈಜೋಡಿಸಬೇಕೆಂದು ಕರೆ ನೀಡಿದರು. “ಕೊಳಕನ್ನು ತೆಗೆದುಹಾಕಿದಾಗ ಮಾತ್ರ ಸ್ವಚ್ಛತೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು,” ಎಂದು ಅವರು ಹೇಳಿದರು. “ಕಾನೂನಿನ ಪರಿಧಿಯಿಂದ ಹೊರಗೆ ಕೆಲಸ ಮಾಡುವವರನ್ನು ಪತ್ತೆಹಚ್ಚುವ ವಿಷಯಕ್ಕೆ ಬಂದಾಗ ತಂತ್ರಜ್ಞಾನವು ಖಂಡಿತವಾಗಿಯೂ ಮಹತ್ವದ ಪಾತ್ರ ವಹಿಸುತ್ತದೆ,ʼʼ ಎಂದು ಪ್ರಧಾನಮಂತ್ರಿಯವರು ಹೇಳಿದರು. ಇದೇ ವೇಳೆ, ಭ್ರಷ್ಟಾಚಾರದ ವಿರುದ್ಧದ ಈ ಹೋರಾಟದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಮಟ್ಟದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳುವ ಮೂಲಕ ಪ್ರಧಾನಿ ಮಾತು ಮುಗಿಸಿದರು.

ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ, ಸಿಬ್ಬಂದಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್, ಕ್ಯಾಬಿನೆಟ್ ಕಾರ್ಯದರ್ಶಿ, ಕೇಂದ್ರ ವಿಚಕ್ಷಣಾ ಆಯುಕ್ತ ಶ್ರೀ ಸುರೇಶ್ ಎನ್. ಪಟೇಲ್ ಮತ್ತು ವಿಚಕ್ಷಣಾ ಆಯುಕ್ತರಾದ ಶ್ರೀ ಪಿ.ಕೆ. ಶ್ರೀವಾಸ್ತವ ಮತ್ತು ಶ್ರೀ ಅರವಿಂದ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ನಾಗರಿಕರಿಗೆ ಅವರ ದೂರುಗಳ ಸ್ಥಿತಿ-ಗತಿಯ ಬಗ್ಗೆ ನಿಯಮಿತ ನವೀಕರಣಗಳ ಮೂಲಕ ಸಮಗ್ರ ಮಾಹಿತಿಯನ್ನು ಒದಗಿಸಲು ಪೋರ್ಟಲ್ ಅನ್ನು ರೂಪಿಸಲಾಗಿದೆ. ಇದೇ ವೇಳೆ, “ಎಥಿಕ್ಸ್ ಅಂಡ್ ಗುಡ್ ಪ್ರಾಕ್ಟೀಸಸ್” ಕುರಿತ ಸಚಿತ್ರ ಕಿರುಪುಸ್ತಕಗಳ ಸರಣಿ; “ಪ್ರಿವೆಂಟಿವ್ ವಿಜಿಲೆನ್ಸ್” ಕುರಿತ ಅತ್ಯುತ್ತಮ ಕಾರ್ಯವಿಧಾನಗಳ ಸಂಕಲನ ಹಾಗೂ ಸಾರ್ವಜನಿಕ ಖರೀದಿ ಕುರಿತಾದ “ವಿಜ್‌ಐ-ವಾಣಿ” (VIGEYE-VANI) ಎಂಬ ವಿಶೇಷ ಸಂಚಿಕೆಯನ್ನೂ ಅವರು ಬಿಡುಗಡೆ ಮಾಡಲಿದ್ದಾರೆ.

ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರತೆಯ ಸಂದೇಶವನ್ನು ಹರಡುವಲ್ಲಿ ಎಲ್ಲಾ ಮಧ್ಯಸ್ಥಗಾರರನ್ನು ಒಟ್ಟುಗೂಡಿಸಲು ʻಸಿವಿಸಿʼ ಪ್ರತಿ ವರ್ಷ ʻವಿಚಕ್ಷಣಾ ಜಾಗೃತಿ ಸಪ್ತಾಹʼವನ್ನು ಆಚರಿಸುತ್ತದೆ. ಈ ವರ್ಷ, “ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ” ಎಂಬ ಧ್ಯೇಯವಾಕ್ಯದೊಂದಿಗೆ ಅಕ್ಟೋಬರ್ 31ರಿಂದ ನವೆಂಬರ್ 6ರವರೆಗೆ ಇದನ್ನು ಆಚರಿಸಲಾಗುತ್ತಿದೆ. ʻವಿಚಕ್ಷಣಾ ಜಾಗೃತಿ ಸಪ್ತಾಹʼ ವಿಷಯದ ಮೇಲೆ ʻಸಿವಿಸಿʼ ನಡೆಸಿದ ರಾಷ್ಟ್ರವ್ಯಾಪಿ ಪ್ರಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರಬಂಧಗಳನ್ನು ಬರೆದ ಐವರು ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿಯವರು ಬಹುಮಾನಗಳನ್ನು ವಿತರಿಸಿದರು.

 

*****