ಆಫ್ರಿಕಾದ ನೆಲದಲ್ಲಿ, ನನ್ನೆಲ್ಲಾ ಸ್ನೇಹಿತರ ನಡುವೆ ಇಲ್ಲಿರುವುದು ನನಗೆ ಸಂತೋಷ ತಂದಿದೆ.
ʻಬ್ರಿಕ್ಸ್ ಔಟ್ರೀಚ್ ಶೃಂಗಸಭೆʼಯ ಸಂದರ್ಭದಲ್ಲಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳೊಂದಿಗೆ ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸಿದ್ದಕ್ಕಾಗಿ ನಾನು ಅಧ್ಯಕ್ಷ ರಮಾಫೋಸಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಕಳೆದ ಎರಡು ದಿನಗಳಲ್ಲಿ, ʻಬ್ರಿಕ್ಸ್ʼನ ಎಲ್ಲಾ ಚರ್ಚೆಗಳಲ್ಲಿ, ನಾವು ಜಾಗತಿಕ ದಕ್ಷಿಣ ರಾಷ್ಟ್ರಗಳ ಆದ್ಯತೆಗಳು ಮತ್ತು ಕಾಳಜಿಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ.
ಈ ವಿಷಯಗಳಿಗೆ ʻಬ್ರಿಕ್ಸ್ʼ ವಿಶೇಷ ಪ್ರಾಮುಖ್ಯತೆ ನೀಡುವುದು ಪ್ರಸ್ತುತ ಸಮಯದಲ್ಲಿ ಅತ್ಯಂತ ನಿರ್ಣಾಯಕವಾದುದು ಎಂದು ಎಂದು ನಾವು ನಂಬುತ್ತೇವೆ.
ʻಬ್ರಿಕ್ಸ್ʼ ವೇದಿಕೆಯನ್ನು ವಿಸ್ತರಿಸುವ ನಿರ್ಧಾರವನ್ನೂ ನಾವು ಕೈಗೊಂಡಿದ್ದೇವೆ. ನಾವು ಎಲ್ಲಾ ಪಾಲುದಾರ ರಾಷ್ಟ್ರಗಳನ್ನು ಸ್ವಾಗತಿಸುತ್ತೇವೆ.
ಇದು ಜಾಗತಿಕ ಸಂಸ್ಥೆಗಳು ಮತ್ತು ವೇದಿಕೆಗಳನ್ನು ಪ್ರಾತಿನಿಧಿಕ ಮತ್ತು ಸಮಗ್ರವಾಗಿಸುವ ನಮ್ಮ ಪ್ರಯತ್ನಗಳ ನಿಟ್ಟಿನಲ್ಲಿ ಒಂದು ಉಪಕ್ರಮವಾಗಿದೆ.
ಗೌರವಾನ್ವಿತರೇ,
ನಾವು “ಗ್ಲೋಬಲ್ ಸೌತ್” ಎಂಬ ಪದವನ್ನು ಬಳಸಿದಾಗ, ಅದು ಕೇವಲ ರಾಜತಾಂತ್ರಿಕ ಪದವಲ್ಲ.
ನಾವು ಪರಸ್ಪರ ಹಂಚಿಕೊಂಡಿರುವ ನಮ್ಮ ಇತಿಹಾಸದಲ್ಲಿ, ನಾವು ವಸಾಹತುಶಾಹಿ ಮತ್ತು ವರ್ಣಭೇದ ನೀತಿಯನ್ನು ಒಗ್ಗಟ್ಟಿನಿಂದ ವಿರೋಧಿಸಿದ್ದೇವೆ.
ಆಫ್ರಿಕಾದ ನೆಲದಲ್ಲಿ ಮಹಾತ್ಮ ಗಾಂಧಿಯವರು ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧದಂತಹ ಪ್ರಬಲ ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸಿದರು, ಪರೀಕ್ಷಿಸಿದರು ಮತ್ತು ಅವುಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿದರು.
ಅವರ ಆಲೋಚನೆಗಳು ಮತ್ತು ಚಿಂತನೆಗಳು ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರಿಗೆ ಸ್ಫೂರ್ತಿ ನೀಡಿದವು.
ಈ ಬಲವಾದ ಐತಿಹಾಸಿಕ ಅಡಿಪಾಯದ ಆಧಾರದ ಮೇಲೆ, ನಾವು ನಮ್ಮ ಆಧುನಿಕ ಸಂಬಂಧಗಳಿಗೆ ಹೊಸ ಆಕಾರವನ್ನು ನೀಡುತ್ತಿದ್ದೇವೆ.
ಗೌರವಾನ್ವಿತರೇ,
ಭಾರತವು ಆಫ್ರಿಕಾ ಜೊತೆಗಿನ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.
ಉನ್ನತ ಮಟ್ಟದ ಸಭೆಗಳ ಜೊತೆಗೆ, ನಾವು ಆಫ್ರಿಕಾದಲ್ಲಿ 16 ಹೊಸ ರಾಯಭಾರ ಕಚೇರಿಗಳನ್ನು ತೆರೆದಿದ್ದೇವೆ.
ಪ್ರಸ್ತುತ, ಭಾರತವು ಆಫ್ರಿಕಾದ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಐದನೇ ಅತಿದೊಡ್ಡ ಹೂಡಿಕೆದಾರ ದೇಶವಾಗಿದೆ.
ಅದು ಸುಡಾನ್, ಬುರುಂಡಿ ಮತ್ತು ರುವಾಂಡಾದ ವಿದ್ಯುತ್ ಯೋಜನೆಗಳಾಗಿರಬಹುದು ಅಥವಾ ಇಥಿಯೋಪಿಯಾ ಮತ್ತು ಮಲವಿಯ ಸಕ್ಕರೆ ಸ್ಥಾವರಗಳಾಗಿರಬಹುದು.
ಅದು ಮೊಜಾಂಬಿಕ್, ಐವರಿ ಕೋಸ್ಟ್ ಮತ್ತು ಎಸ್ವಾಟಿನಿಯಲ್ಲಿನ ತಂತ್ರಜ್ಞಾನ ಪಾರ್ಕ್ಗಳಾಗಿರಬಹುದು ಅಥವಾ ತಾಂಜೇನಿಯಾ ಮತ್ತು ಉಗಾಂಡಾದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾಪಿಸಿದ ಕ್ಯಾಂಪಸ್ ಗಳಾಗಿರಬಹುದು. ಆಫ್ರಿಕಾದ ದೇಶಗಳಲ್ಲಿ ಸಾಮರ್ಥ್ಯ ವರ್ಧನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ಸದಾ ಆದ್ಯತೆ ನೀಡಿದೆ.
ʻಕಾರ್ಯಸೂಚಿ-2063ʼರ ಅಡಿಯಲ್ಲಿ, ಭವಿಷ್ಯದ ಜಾಗತಿಕ ಶಕ್ತಿ ಕೇಂದ್ರವಾಗುವ ಆಫ್ರಿಕಾದ ಪ್ರಯಾಣದಲ್ಲಿ ಭಾರತವು ವಿಶ್ವಾಸಾರ್ಹ ಮತ್ತು ನಿಕಟ ಪಾಲುದಾರನಾಗಿದೆ.
ಆಫ್ರಿಕಾದಲ್ಲಿ ಡಿಜಿಟಲ್ ವಿಭಜನೆಯನ್ನು ನಿವಾರಿಸಲು, ನಾವು ಟೆಲಿ-ಶಿಕ್ಷಣ ಮತ್ತು ಟೆಲಿ-ಮೆಡಿಸಿನ್ನಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ಒದಗಿಸಿದ್ದೇವೆ.
ನಾವು ನೈಜೀರಿಯಾ, ಇಥಿಯೋಪಿಯಾ ಮತ್ತು ತಾಂಜೇನಿಯಾದಲ್ಲಿ ರಕ್ಷಣಾ ಅಕಾಡೆಮಿಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದೇವೆ.
ನಾವು ಬೋಟ್ಸ್ವಾನಾ, ನಮೀಬಿಯಾ, ಉಗಾಂಡಾ, ಲೆಸೊಥೊ, ಜಾಂಬಿಯಾ, ಮಾರಿಷಸ್, ಸೀಶೆಲ್ಸ್ ಮತ್ತು ತಾಂಜಾನಿಯಾದಲ್ಲಿ ತರಬೇತಿಗಾಗಿ ತಂಡಗಳನ್ನು ನಿಯೋಜಿಸಿದ್ದೇವೆ.
ಮಹಿಳೆಯರು ಸೇರಿದಂತೆ ಸರಿಸುಮಾರು 4,400 ಭಾರತೀಯ ಶಾಂತಿಪಾಲನಾ ಸಿಬ್ಬಂದಿ ಆಫ್ರಿಕಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತಿದ್ದಾರೆ.
ಭಯೋತ್ಪಾದನೆ ಮತ್ತು ಕಡಲ್ಗಳ್ಳತನದ ವಿರುದ್ಧದ ಹೋರಾಟದಲ್ಲಿ ನಾವು ಆಫ್ರಿಕಾದ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.
ಕೋವಿಡ್ ಸಾಂಕ್ರಾಮಿಕ ರೋಗದ ಸವಾಲಿನ ಸಮಯದಲ್ಲಿ, ನಾವು ಹಲವಾರು ದೇಶಗಳಿಗೆ ಆಹಾರ ಪದಾರ್ಥಗಳು ಮತ್ತು ಲಸಿಕೆಗಳನ್ನು ಪೂರೈಸಿದ್ದೇವೆ.
ಈಗ, ನಾವು ಕೋವಿಡ್ ಮತ್ತು ಇತರ ಲಸಿಕೆಗಳ ಜಂಟಿ ಉತ್ಪಾದನೆಯಲ್ಲಿ ಆಫ್ರಿಕಾದ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.
ಮೊಜಾಂಬಿಕ್ ಮತ್ತು ಮಲವಿಯಲ್ಲಿನ ಚಂಡಮಾರುತಗಳಿರಲಿ ಅಥವಾ ಮಡಗಾಸ್ಕರ್ನಲ್ಲಿನ ಪ್ರವಾಹವಾಗಲಿ, ಭಾರತವು ಯಾವಾಗಲೂ ಆಫ್ರಿಕಾದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ.
ಗೌರವಾನ್ವಿತರೇ,
ಲ್ಯಾಟಿನ್ ಅಮೆರಿಕದಿಂದ ಮಧ್ಯ ಏಷ್ಯಾದವರೆಗೆ;
ಪಶ್ಚಿಮ ಏಷ್ಯಾದಿಂದ ಆಗ್ನೇಯ ಏಷ್ಯಾದವರೆಗೆ;
ಇಂಡೋ-ಪೆಸಿಫಿಕ್ ನಿಂದ ಇಂಡೋ-ಅಟ್ಲಾಂಟಿಕ್ ವರೆಗೆ;
ಭಾರತವು ಎಲ್ಲಾ ದೇಶಗಳನ್ನು ಒಂದು ಜಾಗತಿಕ ಕುಟುಂಬದ ಭಾಗವಾಗಿ ನೋಡುತ್ತದೆ.
“ವಸುದೈವ ಕುಟುಂಬಕಂ” ಅಂದರೆ ಇಡೀ ಜಗತ್ತು ಒಂದು ಕುಟುಂಬ ಎಂಬ ಪರಿಕಲ್ಪನೆಯು ಸಾವಿರಾರು ವರ್ಷಗಳಿಂದ ನಮ್ಮ ಜೀವನ ವಿಧಾನದ ಅಡಿಪಾಯವಾಗಿದೆ.
ಇದು ನಮ್ಮ ʻಜಿ -20ʼ ಅಧ್ಯಕ್ಷತೆಯ ಧ್ಯೇಯವಾಕ್ಯವೂ ಅದೇ ಆಗಿದೆ.
ಜಾಗತಿಕ ದಕ್ಷಿಣದ ಕಾಳಜಿಗಳನ್ನು ಮುಖ್ಯವಾಹಿನಿಗೆ ತರಲು, ನಾವು ಮೂರು ಆಫ್ರಿಕನ್ ದೇಶಗಳು ಮತ್ತು ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಅತಿಥಿ ರಾಷ್ಟ್ರಗಳಾಗಿ ಆಹ್ವಾನಿಸಿದ್ದೇವೆ.
ʻಜಿ -20ʼ ಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವವನ್ನು ಭಾರತ ಪ್ರಸ್ತಾಪಿಸಿದೆ.
ಗೌರವಾನ್ವಿತರೇ,
ಬಹುಧ್ರುವೀಯ ಜಗತ್ತನ್ನು ಬಲಪಡಿಸಲು ʻಬ್ರಿಕ್ಸ್ʼ ಮತ್ತು ಪ್ರಸ್ತುತ ಎಲ್ಲಾ ಮಿತ್ರ ರಾಷ್ಟ್ರಗಳು ಸಹಕರಿಸಬಹುದು ಎಂದು ನಾನು ನಂಬುತ್ತೇನೆ.
ಇದರಿಂದ ಜಾಗತಿಕ ಸಂಸ್ಥೆಗಳನ್ನು ಪ್ರಾತಿನಿಧಿಕ ಮತ್ತು ಪ್ರಸ್ತುತವಾಗಿಸುವ ನಿಟ್ಟಿನಲ್ಲಿ ಅವುಗಳನ್ನು ಸುಧಾರಿಸುವಲ್ಲಿ ನಾವು ಪ್ರಗತಿ ಸಾಧಿಸಬಹುದು.
ಭಯೋತ್ಪಾದನೆಯನ್ನು ಎದುರಿಸುವುದು, ಪರಿಸರ ಭದ್ರತೆ, ಹವಾಮಾನ ಕ್ರಮ, ಸೈಬರ್ ಭದ್ರತೆ, ಆಹಾರ ಮತ್ತು ಆರೋಗ್ಯ ಭದ್ರತೆ, ಇಂಧನ ಭದ್ರತೆ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು ನಮ್ಮ ಸಾಮಾನ್ಯ ಹಿತಾಸಕ್ತಿಗಳಾಗಿವೆ. ಇದರಲ್ಲಿ ಸಹಕಾರಕ್ಕೆ ವಿಫುಲ ಅವಕಾಶಗಳಿವೆ.
ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟʼ; ʻಒಬ್ಬ ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ʼ; ʻವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟʼ; ʻಒಂದು ಭೂಮಿ ಒಂದು ಆರೋಗ್ಯʼ; ʻಬಿಗ್ ಕ್ಯಾಟ್ ಅಲೈಯನ್ಸ್ʼ; ಮತ್ತು ʻಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ʼ ಮುಂತಾದ ನಮ್ಮ ಅಂತಾರಾಷ್ಟ್ರೀಯ ಉಪಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ.
ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ನಿಮ್ಮ ಅಭಿವೃದ್ಧಿಗೆ ಅದನ್ನು ಬಳಸಿಕೊಳ್ಳಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ.
ನಮ್ಮ ಅನುಭವ ಮತ್ತು ಸಾಮರ್ಥ್ಯಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.
ನಮ್ಮ ಜಂಟಿ ಪ್ರಯತ್ನಗಳು ಎಲ್ಲಾ ಸವಾಲುಗಳನ್ನು ಒಟ್ಟಿಗೆ ಎದುರಿಸಲು ನಮಗೆ ಹೊಸ ಆತ್ಮವಿಶ್ವಾಸವನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ.
ಈ ಅವಕಾಶಕ್ಕಾಗಿ ನಾನು ನಿಮ್ಮೆಲ್ಲರಿಗೂ, ವಿಶೇಷವಾಗಿ ಅಧ್ಯಕ್ಷರಾದ ರಮಾಫೋಸಾ ಅವರಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುತ್ತೇನೆ.
ಧನ್ಯವಾದಗಳು.
ಗಮನಿಸಿ- ಇದು ಪ್ರಧಾನ ಮಂತ್ರಿಯವರ ಮಾಧ್ಯಮ ಹೇಳಿಕೆಯ ಭಾವಾನುವಾದ. ಮೂಲ ಮಾಧ್ಯಮ ಹೇಳಿಕೆ ಹಿಂದಿಯಲ್ಲಿತ್ತು.
***
Addressing a session during the BRICS Summit. https://t.co/ohpIO1wsTA
— Narendra Modi (@narendramodi) August 24, 2023
The BRICS-Africa Outreach and BRICS Plus Dialogue sessions were productive. Got the opportunity to interact with leaders from Africa and reiterate India’s commitment to supporting African nations in order to further global prosperity. https://t.co/pWPPVclJsw
— Narendra Modi (@narendramodi) August 24, 2023