ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಪ್ರಜಾಪ್ರಭುತ್ವಕ್ಕಾಗಿ ಶೃಂಗಸಭೆʼಯನ್ನು ಉದ್ದೇಶಿಸಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ʻಪ್ರಜಾಪ್ರಭುತ್ವಕ್ಕಾಗಿ ಶೃಂಗಸಭೆʼಯನ್ನು ವಿಶ್ವಾದ್ಯಂತ ಪ್ರಜಾಪ್ರಭುತ್ವಗಳಿಗೆ ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಪರಸ್ಪರ ಕಲಿಯಲು ನಿರ್ಣಾಯಕ ವೇದಿಕೆ ಎಂದು ಬಣ್ಣಿಸಿದ ಪ್ರಧಾನಿ, ಪ್ರಜಾಪ್ರಭುತ್ವಕ್ಕೆ ಭಾರತದ ಆಳವಾದ ಬದ್ಧತೆಯನ್ನು ಪುನರುಚ್ಚರಿಸಿದರು. “ಭಾರತವು ಪ್ರಾಚೀನ ಮತ್ತು ಅವಿಚ್ಛಿನ್ನ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಹೊಂದಿದೆ. ಇದು ಭಾರತೀಯ ನಾಗರಿಕತೆಯ ಜೀವನಾಡಿಯಾಗಿದೆ,ʼʼ ಎಂದು ಹೇಳಿದರು. “ಒಮ್ಮತದ ನಿರ್ಮಾಣ, ಮುಕ್ತ ಸಂವಾದ ಮತ್ತು ಮುಕ್ತ ಚರ್ಚೆ ಭಾರತದ ಇತಿಹಾಸದುದ್ದಕ್ಕೂ ಪ್ರತಿಧ್ವನಿಸಿದೆ. ಅದಕ್ಕಾಗಿಯೇ ನನ್ನ ಸಹ ನಾಗರಿಕರು ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಪರಿಗಣಿಸುತ್ತಾರೆ,ʼʼ ಎಂದು ಪ್ರಧಾನಿ ಮೋದಿ ವಿವರಿಸಿದರು.
“ಇಂದು, ಭಾರತವು ತನ್ನ 1.4 ಶತಕೋಟಿ ಜನರ ಆಕಾಂಕ್ಷೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲದೆ, ಪ್ರಜಾಪ್ರಭುತ್ವವು ಕೊಡುಗೆಯನ್ನು ಕೊಡಬಲ್ಲದು ಮತ್ತು ಸಬಲೀಕರಣಗೊಳಿಸಬಲ್ಲದು ಎಂಬ ಭರವಸೆಯನ್ನು ಜಗತ್ತಿಗೆ ನೀಡುತ್ತಿದೆ,” ಎಂದು ಪ್ರಧಾನಿ ಮೋದಿ ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅಂತರರಾಷ್ಟ್ರೀಯ ನೆರವು, ಮಹಿಳಾ ಪ್ರಾತಿನಿಧ್ಯಕ್ಕಾಗಿ ಶಾಸನಾತ್ಮಕ ಕ್ರಮಗಳು, ಬಡತನ ನಿರ್ಮೂಲನೆ ಪ್ರಯತ್ನಗಳು ಸೇರಿದಂತೆ ಜಾಗತಿಕ ಪ್ರಜಾಪ್ರಭುತ್ವಕ್ಕೆ ಭಾರತದ ಕೊಡುಗೆಗಳ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು.
ವಿಶ್ವಾದ್ಯಂತ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಸಹಯೋಗದ ಪ್ರಯತ್ನಗಳು ಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದರು. ಅಂತಾರಾಷ್ಟ್ರೀಯ ವ್ಯವಸ್ಥೆಗಳು ಮತ್ತು ಸಂಸ್ಥೆಗಳಲ್ಲಿ ಒಳಗೊಳ್ಳುವಿಕೆ, ನ್ಯಾಯಸಮ್ಮತತೆ ಹಾಗೂ ಭಾಗವಹಿಸುವಿಕೆಯೊಂದಿಗೆ ನಿರ್ಧಾರ ಕೈಗೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
“ಪ್ರಕ್ಷುಬ್ಧತೆ ಮತ್ತು ಪರಿವರ್ತನೆಯ ಯುಗದಲ್ಲಿ, ಪ್ರಜಾಪ್ರಭುತ್ವವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇದಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ,” ಎಂದು ಪ್ರಧಾನಿ ಮೋದಿ ಹೇಳಿದರು. “ಈ ಅನ್ವೇಷಣೆಯಲ್ಲಿ ಭಾರತವು ತನ್ನ ಅನುಭವವನ್ನು ಎಲ್ಲಾ ಸಹ-ಪ್ರಜಾಪ್ರಭುತ್ವಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಹೇಳಿದರು.
*****