Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ʻಪರೀಕ್ಷಾ ಪೇ ಚರ್ಚಾ-2024ʼ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಮಂತ್ರಿಗಳ ಸಂವಾದ

​​​​​​​ʻಪರೀಕ್ಷಾ ಪೇ ಚರ್ಚಾ-2024ʼ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಮಂತ್ರಿಗಳ ಸಂವಾದ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ʻಭಾರತ್ ಮಂಟಪʼದಲ್ಲಿ ʻಪರೀಕ್ಷಾ ಪೇ ಚರ್ಚಾʼ(ಪಿಪಿಸಿ) ಕಾರ್ಯಕ್ರಮದ 7ನೇ ಆವೃತ್ತಿಯ ಅಂಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿ ಪ್ರದರ್ಶಿಸಲಾದ ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮೇಳದಲ್ಲೂ ಅವರು ಹೆಜ್ಜೆ ಹಾಕಿದರು. ʻಪರೀಕ್ಷಾ ಪೇ ಚರ್ಚಾʼ – ಇದು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಮಾಜವನ್ನು ಒಟ್ಟುಗೂಡಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳಿಂದ ಪ್ರೇರಿತವಾದ ಆಂದೋಲನವಾಗಿದೆ. ಪ್ರತಿ ಮಗುವಿನ ವಿಶಿಷ್ಟ ವ್ಯಕ್ತಿತ್ವವನ್ನು ಸಂಭ್ರಮಿಸುವ, ಪ್ರೋತ್ಸಾಹಿಸುವ ಮತ್ತು ಸಂಪೂರ್ಣವಾಗಿ ಅಭಿವ್ಯಕ್ತಿಗೆ ಅವಕಾಶ ನೀಡುವ ವಾತಾವರಣವನ್ನು ಇದು ಬೆಳೆಸುತ್ತದೆ.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸೃಷ್ಟಿಸಿದ ವಿವಿಧ ರಚನೆಗಳ ಬಗ್ಗೆ  ಗಮನ ಸೆಳೆದರು. ಈ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ʻಹೊಸ ರಾಷ್ಟ್ರೀಯ ಶಿಕ್ಷಣ ನೀತಿʼಯಂತಹ ಪರಿಕಲ್ಪನೆಗಳು ಹಾಗೂ ಆಕಾಂಕ್ಷೆಗಳನ್ನು ವಿವಿಧ ಆಕಾರಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಪ್ರದರ್ಶನಗಳು ಹೊಸ ಪೀಳಿಗೆಯು ವಿವಿಧ ವಿಷಯಗಳ ಬಗ್ಗೆ ಏನು ಯೋಚಿಸುತ್ತಿದೆ ಮತ್ತು ಈ ಸಮಸ್ಯೆಗಳಿಗೆ ಅವರು ಯಾವ ಪರಿಹಾರಗಳನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ಹೇಳಿದರು.

ತಮ್ಮ ಸಂವಾದವನ್ನು ಪ್ರಾರಂಭಿಸಿದ ಪ್ರಧಾನಮಂತ್ರಿಯವರು, ವಿದ್ಯಾರ್ಥಿಗಳಿಗೆ ʻಭಾರತ ಮಂಟಪʼದ ಮಹತ್ವವನ್ನು ವಿವರಿಸಿದರು. ವಿಶ್ವದ ಎಲ್ಲಾ ಪ್ರಮುಖ ನಾಯಕರು ಒಟ್ಟುಗೂಡಿದ ಮತ್ತು ವಿಶ್ವದ ಭವಿಷ್ಯದ ಬಗ್ಗೆ ಚರ್ಚಿಸಿದ ʻಜಿ-20ʼ ಶೃಂಗಸಭೆಯ ಬಗ್ಗೆ ತಿಳಿಸಿದರು.

ಬಾಹ್ಯ ಒತ್ತಡ ಮತ್ತು ಆತಂಕ

ಒಮನ್‌ನ ಖಾಸಗಿ ʻಸಿಬಿಎಸ್‌ಇʼ ಶಾಲೆಯ ದಾನಿಯಾ ಶಾಬು ಮತ್ತು ದೆಹಲಿಯ ಬುರಾರಿಯ ಸರ್ಕಾರಿ ಸರ್ವೋದಯ ಬಾಲ ವಿದ್ಯಾಲಯದ ಮೊಹಮ್ಮದ್ ಅರ್ಶ್ ಮೊದಲಿಗೆ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗುವ ಸಾಂಸ್ಕೃತಿಕ ಮತ್ತು ಸಾಮಾಜಿಕ ನಿರೀಕ್ಷೆಗಳಂತಹ ಬಾಹ್ಯ ಅಂಶಗಳನ್ನು ಪರಿಹರಿಸುವ ವಿಚಾರವನ್ನು ಎತ್ತಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ, “ಇದು ಪರೀಕ್ಷಾ ಪೇ ಚರ್ಚೆʼಯ 7ನೇ ಆವೃತ್ತಿಯಾಗಿದ್ದರೂ ಸಾಂಸ್ಕೃತಿಕ ಮತ್ತು ಸಾಮಾಜಿಕ ನಿರೀಕ್ಷೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಈ ಕಾರ್ಯಕ್ರಮದಲ್ಲಿ ಪದೇ ಪದೇ ಬರುತ್ತಲೇ ಇವೆ ಎಂದು ಹೇಳಿದರು. ವಿದ್ಯಾರ್ಥಿಗಳ ಮೇಲೆ ಬಾಹ್ಯ ಅಂಶಗಳಿಂದ ಹೆಚ್ಚುವರಿ ಒತ್ತಡದ ಪರಿಣಾಮವನ್ನು ತಗ್ಗಿಸುವಲ್ಲಿ ಶಿಕ್ಷಕರ ಪಾತ್ರವನ್ನು ಅವರು ಒತ್ತಿ ಹೇಳಿದರು. ಜೊತೆಗೆ, ಪೋಷಕರು ಸಹ ಆಗಾಗ್ಗೆ ಈ ಒತ್ತಡವನ್ನು ಅನುಭವಿಸುತ್ತಾರೆ ಎಂದು ಗಮನಸೆಳೆದರು. ಒತ್ತಡವನ್ನು ನಿಭಾಯಿಸುವ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಹಾಗೂ ಜೀವನದ ಒಂದು ಭಾಗವಾಗಿ ಒತ್ತಡವನ್ನು ಎದುರಿಸಲು ತಯಾರಿ ನಡೆಸುವಂತೆ ಅವರು ಸಲಹೆ ನೀಡಿದರು. ವಿಪರೀತ ಹವಾಮಾನ ವ್ಯಾತ್ಯಾಸವಿರುವ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವಾಗ, ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಮನಸ್ಸು ಪೂರ್ವಭಾವಿಯಾಗಿ ಸಿದ್ಧವಾಗಿರುವ ರೀತಿಯಲ್ಲೇ ಒತ್ತಡವನ್ನು ಎದುರಿಸಲು ಮಾನಸಿಕವಾಗಿ ಸಿದ್ಧತೆ ನಡೆಸುವಂತೆ ಉದಾಹರಣೆ ಮೂಲಕ ಪ್ರಧಾನಿ ಸಲಹೆ ನೀಡಿದರು. ಒತ್ತಡದ ಮಟ್ಟ ಎಷ್ಟಿದೆ ಎಂದು ಅಂದಾಜಿಸುವಂತೆ ಹಾಗೂ ಅದನ್ನು ಕ್ರಮೇಣ ಹೆಚ್ಚಿಸುತ್ತಾ ಮುಂದುವರಿಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮೊಟಕಾಗದಂತೆ ನೋಡಿಕೊಳ್ಳಲು ಸಲಹೆ ನೀಡಿದರು. ಬಾಹ್ಯ ಒತ್ತಡದ ನಿವಾರಣೆಗೆ ಸಿದ್ಧ ಮಾದರಿಗಳನ್ನು ಅನುಷ್ಠಾನಗೊಳಿಸುವ ಬದಲು, ಇಡೀ ಪ್ರಕ್ರಿಯೆಯನ್ನು ಅವಲೋಕಿಸಿ ಎಲ್ಲರೂ ಸೇರಿ ಸಮಸ್ಯೆಯನ್ನು ಪರಿಹರಿಸುವಂತೆ ಶ್ರೀ ಮೋದಿ ಅವರು ವಿದ್ಯಾರ್ಥಿಗಳು, ಕುಟುಂಬಗಳು ಮತ್ತು ಶಿಕ್ಷಕರನ್ನು ಒತ್ತಾಯಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಭಿನ್ನ ಪರಿಹಾರ ಮಾರ್ಗಗಳು ಅನ್ವಯವಾಗುವುದರಿಂದ ವಿದ್ಯಾರ್ಥಿಗಳ ಕುಟುಂಬಗಳು ತಮ್ಮ ಮಕ್ಕಳಿಗೆ ವರ್ತಿಸುವ ವಿಭಿನ್ನ ಮಾರ್ಗಗಳ ಬಗ್ಗೆ ಚರ್ಚಿಸಬೇಕು ಎಂದು ಅವರು ಸಲಹೆ ನೀಡಿದರು.

ಸಮಾನಮನಸ್ಕ ಒತ್ತಡ ಮತ್ತು ಸ್ನೇಹಿತರ ನಡುವೆ ಸ್ಪರ್ಧೆ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ʻಸರ್ಕಾರಿ ಪ್ರಾತ್ಯಕ್ಷಿಕೆ ವಿವಿಧೋದ್ದೇಶ ಶಾಲೆʼಯ ಭಾಗ್ಯ ಲಕ್ಷ್ಮಿ; ಗುಜರಾತ್‌ನ ʻಜೆಎನ್‌ವಿ ಪಂಚಮಹಲ್‌ʼನ ದ್ರಷ್ಟಿ ಚೌಹಾಣ್ ಹಾಗೂ ಕೇರಳದ ಕೋಯಿಕ್ಕೋಡ್‌ನ ʻಕೇಂದ್ರೀಯ ವಿದ್ಯಾಲಯʼದ ಸ್ವಾತಿ ದಿಲೀಪ್ ಎಂಬ ವಿದ್ಯಾರ್ಥಿಗಳು ಸ್ನೇಹಿತರ ನಡುವಿನ ಒತ್ತಡ ಮತ್ತು ಸ್ಪರ್ಧೆಯ ಸಮಸ್ಯೆಯ ಬಗ್ಗೆ ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ, ಸ್ಪರ್ಧೆಯ ಮಹತ್ವವನ್ನು ಒತ್ತಿ ಹೇಳಿದರು. ಆಗಾಗ್ಗೆ ಅನಾರೋಗ್ಯಕರ ಸ್ಪರ್ಧೆಯ ಬೀಜಗಳನ್ನು ಕುಟುಂಬದಲ್ಲೇ ಬಿತ್ತಲಾಗುತ್ತದೆ, ಇದು ಒಡಹುಟ್ಟಿದವರ ನಡುವೆ ವಿಕೃತ ಸ್ಪರ್ಧೆಗೆ ಕಾರಣವಾಗುತ್ತದೆ ಎಂದು ಅವರು ಗಮನಸೆಳೆದರು. ಮಕ್ಕಳ ನಡುವೆ ಹೋಲಿಕೆ ಮಾಡುವುದನ್ನು ನಿಲ್ಲಿಸುವಂತೆ ಪಿಎಂ ಮೋದಿ ಪೋಷಕರಿಗೆ ಮನವಿ ಮಾಡಿದರು. ಆರೋಗ್ಯಕರ ರೀತಿಯಲ್ಲಿ ಸ್ಪರ್ಧಿಸುವಾಗ ಮಕ್ಕಳು ಪರಸ್ಪರ ಸಹಾಯ ಮಾಡಲು ಆದ್ಯತೆ ನೀಡುವ ವೀಡಿಯೊದ ಉದಾಹರಣೆಯನ್ನು ಪ್ರಧಾನಿ ನೀಡಿದರು. ಪರೀಕ್ಷೆಗಳಲ್ಲಿ ಉತ್ತಮವಾಗಿ ಬರೆಯುವುದೆಂದರೆ, ಒಬ್ಬರ ಗಳಿಕೆ ಮತ್ತೊಬ್ಬರ ನಷ್ಟಕ್ಕೆ ಕಾರಣವಾಗುವ ʻಶೂನ್ಯ-ಮೊತ್ತದʼ ಆಟವಲ್ಲ. ತನ್ನೊಂದಿಗೆ ತಾನು ಸ್ಪರ್ಧಿಸಬೇಕು. ಸ್ನೇಹಿತ ಉತ್ತಮ ರೀತಿಯಲ್ಲಿ ಸಾಧನೆ ಮಾಡಿದರೆ, ಅದು ಮತ್ತೊಬ್ಬ ವಿದ್ಯಾರ್ಥಿಯನ್ನು ಹಾಗೆ ಮಾಡದಂತೆ ತಡೆಯಲು ಕಾರಣವಾಗಲಾರದು. ಈ ಪ್ರವೃತ್ತಿಯು ಸ್ಪೂರ್ತಿದಾಯಕವಲ್ಲದವರೊಂದಿಗೂ  ಸ್ನೇಹ ಬೆಳೆಸುವ ಪ್ರವೃತ್ತಿಗೆ ಕಾರಣವಾಗಬಹುದು ಎಂದು ಪ್ರಧಾನಿ ಹೇಳಿದರು. ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಬಾರದು ಎಂದು ಅವರು ಮನವಿ ಮಾಡಿದರು. ತಮ್ಮ ಮಕ್ಕಳ ಸಾಧನೆಯನ್ನು ತಮ್ಮ ʻವಿಸಿಟಿಂಗ್ ಕಾರ್ಡ್ʼ ಆಗಿ ಮಾಡಿಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಯಶಸ್ಸಿನಲ್ಲಿ ಸಂತೋಷಪಡಬೇಕು. ಸ್ನೇಹವು ವ್ಯವಹಾರದ ಭಾವನೆಯಲ್ಲ ಎಂದು ಪ್ರಧಾನಿ ಮೋದಿ ಹೇಳಿದರು..

ವಿದ್ಯಾರ್ಥಿಗಳನ್ನು ಪ್ರೇರೇಪಿಸುವಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿಗಳನ್ನು ಪ್ರೇರೇಪಿಸುವಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಆಂಧ್ರಪ್ರದೇಶದ ಉಪ್ಪಾರಪಲ್ಲಿಯ ಜಿಲ್ಲಾ ಪಂಚಾಯತ್ ಪ್ರೌಢಶಾಲೆಯ ಸಂಗೀತ ಶಿಕ್ಷಕ ಶ್ರೀ ಕೊಂಡಕಾಂಚಿ ಸಂಪತ ರಾವ್ ಮತ್ತು ಅಸ್ಸಾಂನ ಶಿವಸಾಗರದ ಶಿಕ್ಷಕ ಬಂಟಿ ಮೇಡಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಗೀತವು ಕೇವಲ ಒಂದು ವರ್ಗಕ್ಕೆ ಮಾತ್ರವಲ್ಲ, ಇಡೀ ಶಾಲೆಗೆ ಸೇರಿದ ವಿದ್ಯಾರ್ಥಿಗಳ ಒತ್ತಡವನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ತರಗತಿಯ ಮೊದಲ ದಿನದಿಂದ ಪರೀಕ್ಷೆಯ ಸಮಯದವರೆಗೆ ವಿದ್ಯಾರ್ಥಿ-ಶಿಕ್ಷಕರ ಒಡನಾಟವನ್ನು ಕ್ರಮೇಣ ವಿಸ್ತರಿಸಲು ಶ್ರೀ ಮೋದಿ ಕರೆ ನೀಡಿದರು. ಇದು ಪರೀಕ್ಷೆಗಳ ಸಮಯದಲ್ಲಿ ಒತ್ತಡವನ್ನು ಸಂಪೂರ್ಣವಾಗಿ ತೊಡೆದುಹಾಕಲು ನೆರವಾಗುತ್ತದೆ ಎಂದರು. ಕಲಿಸಿದ ವಿಷಯಗಳ ಆಧಾರದ ಮೇಲಷ್ಟೇ ವಿದ್ಯಾರ್ಥಿಗಳೊಂದಿಗೆ ಒಡನಾಟ ಬೆಳೆಸುವ ಬದಲು, ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆಚ್ಚು ಲಭ್ಯವಾಗುವಂತೆ ಶ್ರೀ ಮೋದಿ ಅವರು ಒತ್ತಾಯಿಸಿದರು. ತಮ್ಮ ರೋಗಿಗಳೊಂದಿಗೆ ವೈಯಕ್ತಿಕ ಸಂಪರ್ಕ ಹೊಂದಿರುವ ವೈದ್ಯರ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ಇಂತಹ ಬಾಂಧವ್ಯವೇ ಅರ್ಧ ಕಾಯಿಲೆಯನ್ನು ವಾಸಿ ಮಾಡುತ್ತದೆ ಎಂದರು. ಕುಟುಂಬಗಳೊಂದಿಗೆ ವೈಯಕ್ತಿಕ ಸಂಪರ್ಕವನ್ನು ಬೆಳೆಸಿಕೊಳ್ಳುವಂತೆ ಮತ್ತು ವಿದ್ಯಾರ್ಥಿಗಳ ಸಾಧನೆಗಳನ್ನು ಶ್ಲಾಘಿಸುವಂತೆ ಅವರು ಶಿಕ್ಷಕರಿಗೆ ಸಲಹೆ ನೀಡಿದರು. “ಶಿಕ್ಷಕರು ಉದ್ಯೋಗವನ್ನು ಹೊಂದಿರುವುದಿಲ್ಲ, ಬದಲಿಗೆ ಅವರು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಜವಾಬ್ದಾರಿಯನ್ನು ಹೊರುತ್ತಾರೆ,” ಎಂದು ಪ್ರಧಾನಿ ಶಿಕ್ಷಕರ ಪಾತ್ರದ ಕುರಿತು ಒತ್ತಿ ಹೇಳಿದರು.

ಪರೀಕ್ಷೆಯ ಒತ್ತಡವನ್ನು ನಿಭಾಯಿಸುವುದು

ಪಶ್ಚಿಮ ತ್ರಿಪುರಾದ ʻಪ್ರಣವಾನಂದ ಬಿದ್ಯಾ ಮಂದಿರʼದ ಅದ್ರಿತಾ ಚಕ್ರವರ್ತಿ, ಛತ್ತೀಸ್ ಗಢದ ಬಸ್ತಾರ್‌ನ ʻಜವಾಹರ್ ನವೋದಯ ವಿದ್ಯಾಲಯʼದ ವಿದ್ಯಾರ್ಥಿ ಶೇಖ್ ತೈಫೂರ್ ರೆಹಮಾನ್ ಹಾಗೂ ಒಡಿಶಾದ ಕಟಕ್‌ನ ʻಆದರ್ಶ ವಿದ್ಯಾಲಯʼದ ವಿದ್ಯಾರ್ಥಿಗಳಾದ ರಾಜ್ಯಲಕ್ಷ್ಮಿ ಆಚಾರ್ಯ ಅವರು ಪರೀಕ್ಷೆಯ ಒತ್ತಡವನ್ನು ನಿಭಾಯಿಸುವ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಪೋಷಕರ ಅತಿಯಾದ ಉತ್ಸಾಹ ಅಥವಾ ವಿದ್ಯಾರ್ಥಿಗಳ ಅತಿಯಾದ ಪ್ರಾಮಾಣಿಕತೆಯಿಂದಾಗಿ ಆಗುವ ತಪ್ಪುಗಳನ್ನು ತಪ್ಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ಹೊಸ ಬಟ್ಟೆಗಳು, ಆಚರಣೆಗಳ ಮೂಲಕ ಅಥವಾ ಹೊಸ ಲೇಖನ ಸಾಮಗ್ರಿಗಳನ್ನು ಕೊಡಿಸುವ ಮೂಲಕ ಪರೀಕ್ಷಾ ದಿನವನ್ನು ಅತಿಯಾಗಿ ಪ್ರಚಾರ ಮಾಡದಂತೆ ಅವರು ಪೋಷಕರನ್ನು ಕೋರಿದರು. ಕೊನೆಯ ಕ್ಷಣದವರೆಗೂ ಪರೀಕ್ಷೆಗೆ ತಯಾರಿ ನಡೆಸದಂತೆ ಮತ್ತು ನಿರಾಳ ಮನಸ್ಥಿತಿಯೊಂದಿಗೆ ಪರೀಕ್ಷೆಗೆ ಹೋಗುವಂತೆ ಹಾಗೂ ಅನಗತ್ಯ ಉದ್ವಿಗ್ನತೆಗೆ ಕಾರಣವಾಗುವ ಯಾವುದೇ ಬಾಹ್ಯ ಅಡಚಣೆಯನ್ನು ತಪ್ಪಿಸುವಂತೆ ಪ್ರಧಾನಿಯವರು ವಿದ್ಯಾರ್ಥಿಗಳನ್ನು ಕೋರಿದರು. ಕೊನೆಯ ಘಳಿಗೆಯಲ್ಲಿ ಗಡಿಬಿಡಿಯನ್ನು ತಪ್ಪಿಸಲು, ಪ್ರಶ್ನೆ ಪತ್ರಿಕೆಯನ್ನು ಮೊದಲೇ ಪೂರ್ಣವಾಗಿ ಓದಿ, ಉತ್ತರಿಸಲು ಸಮಯ ಹಂಚಿಕೆ ಮಾಡಿಕೊಳ್ಳುವಂತೆ ಪ್ರಧಾನಿ ಸಲಹೆ ನೀಡಿದರು. ಹೆಚ್ಚಿನ ಪರೀಕ್ಷೆಗಳು ಇನ್ನೂ ಲಿಖಿತ ರೂಪದಲ್ಲೇ ಇವೆ. ಆದರೆ, ಕಂಪ್ಯೂಟರ್ ಮತ್ತು ಫೋನ್‌ಗಳಿಂದಾಗಿ ಬರೆಯುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂದು ಪ್ರಧಾನಿ ವಿದ್ಯಾರ್ಥಿಗಳಿಗೆ ನೆನಪಿಸಿದರು. ಬರೆಯುವ ಅಭ್ಯಾಸ ಉಳಿಸಿಕೊಳ್ಳುವಂತೆ ಅವರು ಕೇಳಿಕೊಂಡರು. ವಿದ್ಯಾರ್ಥಿಗಳು ತಮ್ಮ ಓದುವ / ಅಧ್ಯಯನ ಸಮಯದ 50 ಪ್ರತಿಶತವನ್ನು ಬರವಣಿಗೆಗೆ ಮೀಸಲಿಡುವಂತೆ ಪ್ರಧಾನಿ ಮನವಿ ಮಾಡಿದರು. ನೀವು ಏನನ್ನಾದರೂ ಬರೆದಾಗ ಮಾತ್ರ ನೀವು ಅದನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುತ್ತೀರಿ ಎಂದು ಅವರು ಹೇಳಿದರು. ಇತರ ವಿದ್ಯಾರ್ಥಿಗಳ ವೇಗದಿಂದ ಭಯಭೀತರಾಗಬೇಡಿ ಎಂದು ಅವರು ಸಲಹೆ ನೀಡಿದರು.

ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು

ಪರೀಕ್ಷಾ ಸಿದ್ಧತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ವಿಷಯವನ್ನು ಪ್ರಸ್ತಾಪಿಸಿದ ರಾಜಸ್ಥಾನದ ʻಸೀನಿಯರ್ ಸೆಕೆಂಡರಿ ಶಾಲೆʼಯ ವಿದ್ಯಾರ್ಥಿ ಧೀರಜ್ ಸುಭಾಸ್, ಲಡಾಖ್‌ನ ಕಾರ್ಗಿಲ್‌ನ ʻಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯʼದ ವಿದ್ಯಾರ್ಥಿನಿ ನಜ್ಮಾ ಖತೂನ್ ಮತ್ತು ಅರುಣಾಚಲ ಪ್ರದೇಶದ ಸರ್ಕಾರಿ ಪ್ರೌಢಶಾಲೆ ʻಟೋಬಿ ಲಾಹ್ಮೆʼಯ ಶಿಕ್ಷಕ ಅಭಿಷೇಕ್ ಕುಮಾರ್ ತಿವಾರಿ ಅವರು ವ್ಯಾಯಾಮದ ಜೊತೆಗೆ ಅಧ್ಯಯನವನ್ನು ನಿರ್ವಹಿಸುವ ಬಗ್ಗೆ ಪ್ರಧಾನಿಯನ್ನು ಕೇಳಿದರು. ಇದಕ್ಕೆ ಉದಾಹರಣೆ ಸಮೇತ ಉತ್ತರಿಸಿದ ಪ್ರಧಾನಿ, ಮೊಬೈಲ್‌ ಫೋನ್‌ಗಳನ್ನು ಹೇಗೆ ರೀಚಾರ್ಚ್‌ ಮಾಡುವುದು ಅಗತ್ಯವೋ ಹಾಗೆಯೇ ದೈಹಿಕ ಆರೋಗ್ಯ ವೃದ್ಧಿಗೆ ವ್ಯಾಯಾಮ ಅತ್ಯಗತ್ಯ ಎಂದರು. ಸಮತೋಲಿತ ಜೀವನಶೈಲಿಯನ್ನು ಕಾಪಾಡಿಕೊಳ್ಳುವಂತೆ ಮತ್ತು ಯಾವುದನ್ನೂ ಅತಿಯಾಗಿ ಮಾಡದಂತೆ ಅವರು ಕೋರಿದರು. “ಆರೋಗ್ಯಕರ ಮನಸ್ಸಿಗೆ ಆರೋಗ್ಯಕರ ದೇಹವು ನಿರ್ಣಾಯಕವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ಆರೋಗ್ಯವಾಗಿರಲು ಕೆಲವು ದಿನಚರಿಗಳು ಬೇಕಾಗುತ್ತವೆ ಎಂದು ಹೇಳಿದ ಅವರು, ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವಂತೆ ಹಾಗೂ ನಿಯಮಿತವಾಗಿ ಹಾಗೂ ಸಂಪೂರ್ಣ ಪ್ರಮಾಣದಲ್ಲಿ ನಿದ್ರೆ ಮಾಡುವಂತೆ ಸಲಹೆ ನೀಡಿದರು. ಮೊಬೈಲ್‌ ಅಥವಾ ಟಿವಿ ವೀಕ್ಷಣೆಯಂತಹ ಅಭ್ಯಾಸಗಳು ಆಧುನಿಕ ಆರೋಗ್ಯ ವಿಜ್ಞಾನವು ಬಹಳ ಮುಖ್ಯವೆಂದು ಪರಿಗಣಿಸಿದ ಅಮೂಲ್ಯ ನಿದ್ರೆಯ ಸಮಯವನ್ನು ಹಾಳು ಮಾಡುತ್ತವೆ ಎಂದು ಅವರು ಗಮನಸೆಳೆದರು.. ತಮ್ಮ ವೈಯಕ್ತಿಕ ಜೀವನದಲ್ಲೂ ಅವರು ಮಲಗಿದ 30 ಸೆಕೆಂಡುಗಳಲ್ಲಿ ಗಾಢ ನಿದ್ರೆಗೆ ಹೋಗುವ ವ್ಯವಸ್ಥೆಯನ್ನು ಕಾಪಾಡಿಕೊಂಡಿರುವುದಾಗಿ ಪ್ರಧಾನಿ ಹೇಳಿದರು. “ಎಚ್ಚರವಾಗಿರುವಾಗ ಸಂಪೂರ್ಣವಾಗಿ ಎಚ್ಚರವಾಗಿರುವುದು ಮತ್ತು ನಿದ್ರೆಯಲ್ಲಿರುವಾಗ ಗಾಢ ನಿದ್ರೆಗೆ ಜಾರುವುದು, ಸಮತೋಲನದ ವಿಧಾನ” ಎಂದು ಅವರು ಹೇಳಿದರು. ಪೌಷ್ಠಿಕಾಂಶದ ಕುರಿತು ಮಾತನಾಡಿದ ಪಿಎಂ ಮೋದಿ, ಸಮತೋಲಿತ ಆಹಾರದ ಬಗ್ಗೆ ಒತ್ತಿ ಹೇಳಿದರು. ಫಿಟ್‌ನೆಸ್‌ ಕಾಯ್ದುಕೊಳ್ಳಲು ನಿಯಮಿತ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳ ಮಹತ್ವವನ್ನು ಅವರು ಒತ್ತಿ ಹೇಳಿದರು.

ೃತ್ತಿಜೀವನದ ಪ್ರಗತಿ

ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಬರಾಕ್‌ಪುರದ ʻಕೇಂದ್ರೀಯ ವಿದ್ಯಾಲಯʼದ ಮಧುಮಿತಾ ಮಲ್ಲಿಕ್ ಮತ್ತು ಹರಿಯಾಣದ ಪಾಣಿಪತ್‌ನ ʻಮಿಲೇನಿಯಂ ಶಾಲೆʼಯ ಅದಿತಿ ತನ್ವರ್ ಅವರು ವೃತ್ತಿಜೀವನದ ಪ್ರಗತಿಯ ಬಗ್ಗೆ ಪ್ರಶ್ನೆ ಎತ್ತಿದರು. ಈ ಬಗ್ಗೆ ಒಳನೋಟಗಳನ್ನು ಒದಗಿಸಿದ ಪ್ರಧಾನಿ, ವೃತ್ತಿಜೀವನದ ಹಾದಿಯ ವಿಷಯಕ್ಕೆ ಬಂದಾಗ ಸ್ಪಷ್ಟತೆ  ಇರಬೇಕು ಎಂದರು. ಗೊಂದಲ ಮತ್ತು ಅನಿರ್ಧಾರಿತ ಸ್ಥಿತಿಯನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು. ಸ್ವಚ್ಛತೆಯ ಉದಾಹರಣೆ ಮತ್ತು ಅದರ ಹಿಂದಿರುವ ಪ್ರಧಾನಿಯವರ ಸಂಕಲ್ಪವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ‘ಸ್ವಚ್ಚತೆ’ಯು ರಾಷ್ಟ್ರದಲ್ಲಿ ಆದ್ಯತೆಯ ಕ್ಷೇತ್ರವಾಗುತ್ತಿದೆ ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಭಾರತದ ಮಾರುಕಟ್ಟೆ 250 ಪಟ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. “ನಮಗೆ ಸಾಮರ್ಥ್ಯವಿದ್ದರೆ, ನಾವು ಏನನ್ನಾದರೂ ಸಾಧಿಸಬಹುದು” ಎಂದು ಹೇಳಿದ ಶ್ರೀ ಮೋದಿ ಅವರು ವಿದ್ಯಾರ್ಥಿಗಳು ತಮ್ಮನ್ನು ತಾವು ಕಡೆಗಣಿಸಬಾರದು ಎಂದು ಒತ್ತಾಯಿಸಿದರು. ಸಂಪೂರ್ಣ ಸಮರ್ಪಣೆಯೊಂದಿಗೆ ಎಲ್ಲವನ್ನೂ ಮಾಡಬೇಕೆಂದು ಅವರು ಸಲಹೆ ನೀಡಿದರು. ʻರಾಷ್ಟ್ರೀಯ ಶಿಕ್ಷಣ ನೀತಿʼಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಒಂದೇ ಕೋರ್ಸ್‌ ಅಧ್ಯಯನ ಮಾಡುವ ಬದಲು, ವಿಭಿನ್ನ ಕೋರ್ಸ್‌ಗಳನ್ನು ಓದುವ ಅವಕಾಶದ ಬಗ್ಗೆ ಒತ್ತಿ ಹೇಳಿದರು. ಸಂದರ್ಭದಲ್ಲಿ ಪ್ರದರ್ಶಿಸಲಾದ ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ, ಕೌಶಲ್ಯ ಮತ್ತು ಸಮರ್ಪಣಾ ಭಾವವನ್ನು  ಅವರು ಶ್ಲಾಘಿಸಿದರು ಮತ್ತು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಹೋಲಿಸಿದರೆ ಸರ್ಕಾರದ ಯೋಜನೆಗಳನ್ನು ಸಂವಹನ ಮಾಡಲು ವಿದ್ಯಾರ್ಥಿಗಳು ಮಾಡಿದ ಕೆಲಸವು ಉತ್ತಮವಾಗಿದೆ ಎಂದು ಒತ್ತಿ ಹೇಳಿದರು. “ಗೊಂದಲವನ್ನು ನಿವಾರಿಸಲು ನಾವು ನಿರ್ಣಾಯಕರಾಗಿರಬೇಕು” ಎಂದು ಸಲಹೆ ನೀಡಿದ ಪಿಎಂ ಮೋದಿ, ಇದಕ್ಕೆ ರೆಸ್ಟೋರೆಂಟ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಉದಾಹರಣೆಯನ್ನು ನೀಡಿದರು. ಅಲ್ಲಿ ಏನು ತಿನ್ನಬೇಕೆಂದು ನಿರ್ಧರಿಸಿ, ಆರ್ಡರ್‌ ನೀಡುವ ವಿಧಾನವನ್ನು ಉದಾಹರಿಸಿದರು. ತೆಗೆದುಕೊಳ್ಳಬೇಕಾದ ನಿರ್ಧಾರಗಳ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಮೌಲ್ಯಮಾಪನ ಮಾಡುವಂತೆ ಅವರು ಸಲಹೆ ನೀಡಿದರು.

ಪೋಷಕರ ಪಾತ್ರ

ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುದುಚೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಪಶ್ರೀ, ಪೋಷಕರ ಪಾತ್ರ ಮತ್ತು ವಿದ್ಯಾರ್ಥಿಗಳು ಹೇಗೆ ವಿಶ್ವಾಸವನ್ನು ಬೆಳೆಸಿಕೊಳ್ಳಬಹುದು ಎಂದು ಪ್ರಧಾನಿಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ, ಕುಟುಂಬಗಳಲ್ಲಿನ ವಿಶ್ವಾಸದ ಕೊರತೆಯ ಬಗ್ಗೆ ಪ್ರಸ್ತಾಪಿಸಿದರು. ಈ ಗಂಭೀರ ಸಮಸ್ಯೆಯನ್ನು ನಿಭಾಯಿಸುವಂತೆ ಪೋಷಕರು ಮತ್ತು ಶಿಕ್ಷಕರಿಗೆ ಸೂಚಿಸಿದರು. ಈ ವಿಶ್ವಾಸ ಕೊರತೆಯು ತಕ್ಷಣ ಉಂಟಾಗುವಂಥದ್ದಲ್ಲ. ಅದೊಂದು ದೀರ್ಘಕಾಲದ ಪ್ರಕ್ರಿಯೆಯ ಪರಿಣಾಮವಾಗಿದೆ. ಇದನ್ನು ನಿವಾರಿಸಲು ಶಿಕ್ಷಕರು, ಪೋಷಕರು ಅಥವಾ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರ ನಡವಳಿಕೆಯ ಆಳವಾದ ಸ್ವಯಂ ವಿಶ್ಲೇಷಣೆಯ ಅಗತ್ಯವಿದೆ ಎಂದು ಅವರು ಹೇಳಿದರು. ಪ್ರಾಮಾಣಿಕ ಸಂವಹನವು ವಿಶ್ವಾಸದ ಕೊರತೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ತಮ್ಮ ವ್ಯವಹಾರಗಳಲ್ಲಿ ಪ್ರಾಮಾಣಿಕರಾಗಿರಬೇಕು. ಅಂತೆಯೇ, ಪೋಷಕರು ಸಹ ಅನುಮಾನ ಪಡುವ ಬದಲು ತಮ್ಮ ಮಕ್ಕಳ ಮೇಲೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಬೇಕು ಎಂದರು. ವಿಶ್ವಾಸದ ಕೊರತೆಯಿಂದ ಉಂಟಾಗುವ ಅಂತರವು ಮಕ್ಕಳನ್ನು ಖಿನ್ನತೆಗೆ ದೂಡಬಹುದು. ಹಾಗಾಗಿ ವಿದ್ಯಾರ್ಥಿಗಳೊಂದಿಗೆ ಸಂವಹನದ ಮಾರ್ಗಗಳನ್ನು ಮುಕ್ತವಾಗಿಡುವಂತೆ ಮತ್ತು ಪಕ್ಷಪಾತವನ್ನು ತಪ್ಪಿಸುವಂತೆ ಶಿಕ್ಷಕರಿಗೆ ಪ್ರಧಾನಿಯವರು ತಿಳಿಸಿದರು. ಇದಕ್ಕಾಗಿ ಅವರು ಒಂದು ಪ್ರಯೋಗವನ್ನೂ ತಿಳಿಸಿದ ಪ್ರಧಾನಿ,  ಸ್ನೇಹಿತರ ಕುಟುಂಬಗಳನ್ನು ನಿಯಮಿತವಾಗಿ ಭೇಟಿಯಾಗುವಂತೆ ಮತ್ತು ಮಕ್ಕಳಿಗೆ ಸಹಾಯ ಮಾಡುವ ಸಕಾರಾತ್ಮಕ ವಿಷಯಗಳನ್ನು ಚರ್ಚಿಸುವಂತೆ ವಿನಂತಿಸಿದರು.

ತಂತ್ರಜ್ಞಾನದ ವ್ಯಾಪಕತೆ

ಮಹಾರಾಷ್ಟ್ರದ ಪುಣೆಯ ಪೋಷಕರಾದ ಚಂದ್ರೇಶ್ ಜೈನ್ ಅವರು ವಿದ್ಯಾರ್ಥಿಗಳ ಜೀವನದಲ್ಲಿ ತಂತ್ರಜ್ಞಾನದ ವ್ಯಾಪಕತೆಯ ವಿಷಯವನ್ನು ಎತ್ತಿದರು. ಜಾರ್ಖಂಡ್‌ನ ರಾಮಗಢದ ಪೋಷಕರಾದ ಕುಮಾರಿ ಪೂಜಾ ಶ್ರೀವಾಸ್ತವ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳ ಆಕರ್ಷಣೆಯ ನಡುವೆ ಅಧ್ಯಯನವನ್ನು ನಿರ್ವಹಿಸುವ ಬಗ್ಗೆ ಕೇಳಿದರು. ಹಿಮಾಚಲ ಪ್ರದೇಶದ ಹಮೀರ್‌ಪುರದ ಕಾಂಗೂವಿನ ʻಟಿಆರ್ ಡಿಎವಿ ಶಾಲೆʼಯ ವಿದ್ಯಾರ್ಥಿ ಅಭಿನವ್ ರಾಣಾ, ಪರೀಕ್ಷಾ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಪ್ರೋತ್ಸಾಹ ನೀಡುವ ವಿಷಯವನ್ನು ಎತ್ತಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ, “ಯಾವುದನ್ನಾದರೂ ಅತಿಯಾಗಿ ಸೇವಿಸುವುದು ಕೆಟ್ಟದು” ಎಂದರು. ಮನೆಯಲ್ಲಿ ಬೇಯಿಸಿದ ಊಟದೊಂದಿಗೆ ಹೆಚ್ಚುವರಿ ಮೊಬೈಲ್ ಫೋನ್ ಬಳಕೆಯನ್ನು ಹೋಲಿಕೆ ಮಾಡಿದ ಅವರು, ಆಹಾರವು ಎಷ್ಟೇ ಪೋಷಕಾಂಶ ಸಮೃದ್ಧವಾಗಿದ್ದರೂ ಅತಿಯಾಗಿ ತೆಗೆದುಕೊಂಡಾಗ ಹೊಟ್ಟೆಯ ಸಮಸ್ಯೆಗಳು ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದರು. ತೀರ್ಪು ಆಧಾರಿತ ನಿರ್ಧಾರ ತೆಗೆದುಕೊಳ್ಳುವ ಸಹಾಯದಿಂದ ತಂತ್ರಜ್ಞಾನ ಮತ್ತು ಮೊಬೈಲ್ ಫೋನ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಅವರು ಒತ್ತಿ ಹೇಳಿದರು. “ಪ್ರತಿಯೊಬ್ಬ ಪೋಷಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ,” ಎಂದು ಗೌಪ್ಯತೆ ಮತ್ತು ಗೌಪ್ಯತೆಯ ವಿಷಯವನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದರು. ಕುಟುಂಬದಲ್ಲಿ ಈ ಸಂಬಂಧ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸಲು ಒತ್ತು ನೀಡುವಂತೆ ಅವರು  ಸಲಹೆ ನೀಡಿದರು. ಊಟದ ಸಮಯದಲ್ಲಿ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರವಿರುವುದು ಹಾಗೂ ಮನೆಯಲ್ಲಿ ʻಗ್ಯಾಜೆಟ್ ರಹಿತ ವಲಯʼಗಳ ರಚನೆಯ ಬಗ್ಗೆ ಉಲ್ಲೇಖಿಸಿದರು. “ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನದಿಂದ ಯಾರೂ ದೂರ ಇರಲು ಸಾಧ್ಯವಿಲ್ಲ” ಎಂದು ಪ್ರಧಾನಿ ಹೇಳಿದರು. ಆದರೆ, ಇದನ್ನು ಹೊರೆ ಎಂದು ಪರಿಗಣಿಸದೆ, ಅದರ ಪರಿಣಾಮಕಾರಿ ಬಳಕೆಯನ್ನು ಕಲಿಯುವುದು ಅತ್ಯಗತ್ಯ ಎಂದು ಅವರು ಹೇಳಿದರು. ತಂತ್ರಜ್ಞಾನವು ಶೈಕ್ಷಣಿಕ ಸಂಪನ್ಮೂಲವಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದ ಪ್ರಧಾನಿ, ಪಾರದರ್ಶಕತೆಯನ್ನು ಮೂಡಿಸಲು ತಮ್ಮ ಮನೆಗಳಲ್ಲಿನ ಪ್ರತಿ ಮೊಬೈಲ್ ಫೋನ್‌ನ ಪಾಸ್‌ಕೋಡ್‌ಗಳನ್ನು ಪ್ರತಿಯೊಬ್ಬ ಸದಸ್ಯರೊಂದಿಗೆ ಹಂಚಿಕೊಳ್ಳುವಂತೆ ಶಿಫಾರಸು ಮಾಡಿದರು. “ಇದು ಬಹಳಷ್ಟು ದುಷ್ಕೃತ್ಯಗಳನ್ನು ತಡೆಯುತ್ತದೆ” ಎಂದು ಅವರು ಹೇಳಿದರು. ವಿಶೇಷ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಪರಿಕರಗಳ ಬಳಕೆಯೊಂದಿಗೆ ಮೊಬೈಲ್‌ ವೀಕ್ಷಣೆಯ ಸಮಯವನ್ನು ಮೇಲ್ವಿಚಾರಣೆ ಮಾಡುವ ಬಗ್ಗೆಯೂ ಪ್ರಧಾನಿ ಮೋದಿ ಹೇಳಿದರು. ಮೊಬೈಲ್ ಫೋನ್‌ಗಳನ್ನು ಸಂಪನ್ಮೂಲವಾಗಿ ಬಳಸುವ ಬಗ್ಗೆ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಂತೆ ಅವರು ಸಲಹೆ ನೀಡಿದರು.

ಪ್ರಧಾನಿ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಹೇಗೆ ಸದಾ ಸಕಾರಾತ್ಮಕವಾಗಿರುತ್ತಾರೆ?

ತಮಿಳುನಾಡಿನ ಚೆನ್ನೈನ ʻಮಾಡರ್ನ್ ಸೀನಿಯರ್ ಸೆಕೆಂಡರಿ ಶಾಲೆʼಯ ವಿದ್ಯಾರ್ಥಿ ಎಂ.ವಾಗೇಶ್ ಅವರು ಪ್ರಧಾನಿ ಸ್ಥಾನದಲ್ಲಿ ಇರುವ ಒತ್ತಡದ ಬಗ್ಗೆ ಮತ್ತು ಆ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಧಾನಿಯನ್ನು ಕೇಳಿದರು. ಉತ್ತರಾಖಂಡದ ಉದಮ್ ಸಿಂಗ್ ನಗರದ ʻರಾಜವಂಶ ಮಾಡರ್ನ್ ಗುರುಕುಲ ಅಕಾಡೆಮಿʼಯ ವಿದ್ಯಾರ್ಥಿನಿ ಸ್ನೇಹಾ ತ್ಯಾಗಿ, “ನಿಮ್ಮಂತೆ ನಾವು ಹೇಗೆ ಸಕಾರಾತ್ಮಕವಾಗಿರಲು ಸಾಧ್ಯ?” ಎಂದು ಪ್ರಧಾನಿಯವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಮೋದಿ ಅವರು, ಪ್ರಧಾನ ಮಂತ್ರಿ ಸ್ಥಾನದ ಒತ್ತಡಗಳ ಬಗ್ಗೆ ಮಕ್ಕಳಿಗೂ ಅರಿವಿದೆ ಎಂಬ ವಿಚಾರ ತಿಳಿದಿದ್ದು ಒಳ್ಳೆಯದಾಯಿತು ಎಂದು ಹೇಳಿದರು. ಪ್ರತಿಯೊಬ್ಬರೂ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸುತ್ತಾರೆ. ಆದರೆ, ಅವುಗಳಿಗೆ ಕೆಲವರ ಪ್ರತಿಕ್ರಿಯ ಹೇಗಿರುತ್ತದೆಂದರೆ, ಅವರು ಅಂತಹ ಸಂದರ್ಭಗಳನ್ನೇ ತಪ್ಪಿಸುತ್ತಾರೆ. ಆದರೆ, ಅಂತಹ ಜನರು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಿ ಹೇಳಿದರು. “ನಾನು ಉಪಯುಕ್ತವೆಂದು ಕಂಡುಕೊಂಡ ನನ್ನ ಕಾರ್ಯವಿಧಾನವೆಂದರೆ ʻನಾನು ಪ್ರತಿ ಸವಾಲಿಗೂ ಸವಾಲು ಒಡ್ಡುತ್ತೇನೆʼ. ಸವಾಲು ಹಾದುಹೋಗುವವರೆಗೂ ನಾನು ನಿಷ್ಕ್ರಿಯವಾಗಿ ಕಾಯುವುದಿಲ್ಲ. ಇದು ನನಗೆ ಎಲ್ಲಾ ಸಮಯದಲ್ಲೂ ಕಲಿಕೆಗೆ ಅವಕಾಶ ನೀಡುತ್ತದೆ. ಹೊಸ ಸನ್ನಿವೇಶಗಳೊಂದಿಗೆ ವ್ಯವಹರಿಸುವುದು ನನ್ನನ್ನು ಶ್ರೀಮಂತಗೊಳಿಸುತ್ತದೆ”, ಎಂದರು. “ನನ್ನೊಂದಿಗೆ 140 ಕೋಟಿ ದೇಶವಾಸಿಗಳು ಇದ್ದಾರೆ ಎಂಬುದು ನನ್ನ ದೊಡ್ಡ ವಿಶ್ವಾಸ. 100 ದಶಲಕ್ಷ ಸವಾಲುಗಳಿದ್ದರೆ, ಪರಿಹಾರಗಳು ಶತಕೋಟಿ ಇವೆ. ನಾನು ನನ್ನನ್ನು ಎಂದಿಗೂ ಏಕಾಂಗಿಯಾಗಿಲ್ಲ ನೋಡುವುದಿಲ್ಲ. ನನ್ನ ದೇಶ ಮತ್ತು ದೇಶವಾಸಿಗಳ ಸಾಮರ್ಥ್ಯಗಳ ಬಗ್ಗೆ ನನಗೆ ಸದಾ ಅರಿವಿದೆ. ಇದು ನನ್ನ ಚಿಂತನೆಯ ಮೂಲ ತಿರುಳು,” ಎಂದು ಅವರು ಹೇಳಿದರು. ತಾವು ಮುಂಚೂಣಿಯಲ್ಲಿದ್ದು ಮುನ್ನಡೆಸಿದರೂ ಮತ್ತು ತಪ್ಪುಗಳನ್ನು  ತಾವೇ ಮಾಡಿದರೂ ರಾಷ್ಟ್ರವು  ಹೊಂದಿರುವ ಶಕ್ತಿ-ಸಾಮರ್ಥ್ಯಗಳು ತಮಗೆ ಬಲವನ್ನು ನೀಡುತ್ತವೆ ಎಂದು ಅವರು ಹೇಳಿದರು. “ನಾನು ನನ್ನ ದೇಶವಾಸಿಗಳ ಸಾಮರ್ಥ್ಯವನ್ನು ಹೆಚ್ಚಿಸಿದಷ್ಟೂ, ಸವಾಲುಗಳನ್ನು ಎದುರಿಸುವ ನನ್ನ ಸಾಮರ್ಥ್ಯವು ಸುಧಾರಿಸುತ್ತದೆ,” ಎಂದು ಶ್ರೀ ಮೋದಿ ಹೇಳಿದರು. ಬಡತನದ ಸಮಸ್ಯೆಯನ್ನು ಉದಾಹರಣೆಯಾಗಿ ನೀಡಿದ ಪ್ರಧಾನಮಂತ್ರಿಯವರು, ಬಡವರೇ ಖುದ್ದು  ಬಡತನವನ್ನು ತೊಡೆದುಹಾಕಲು ನಿರ್ಧರಿಸಿದಾಗ, ಬಡತನವು ದೂರವಾಗುತ್ತದೆ ಎಂದರು. “ಬಡವರಿಗೆ ಶಾಶ್ವತ ಮನೆ, ಶೌಚಾಲಯ, ಶಿಕ್ಷಣ, ಆಯುಷ್ಮಾನ್ ಕಾರ್ಡ್‌, ಕೊಳವೆ ನೀರು ಮುಂತಾದ ಕನಸುಗಳನ್ನು ಕಾಣಲು ಸಾಧನಗಳನ್ನು ನೀಡುವುದು ನನ್ನ ಜವಾಬ್ದಾರಿಯಾಗಿದೆ. ಒಮ್ಮೆ ಅವರು ದಿನನಿತ್ಯದ ಅವಮಾನಗಳಿಂದ ಮುಕ್ತರಾದರೆ, ಅವರು ಬಡತನ ನಿರ್ಮೂಲನೆಯ ಖಚಿತತೆಯನ್ನು ಪಡೆಯುತ್ತಾರೆ”, ಎಂದು ಪ್ರಧಾನಿ ಹೇಳಿದರು. ತಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಅವರು ಹೇಳಿದರು.

ಇದಲ್ಲದೆ, ಯಾವ ಸಂಗತಿಗಳಿಗೆ ಆದ್ಯತೆ ನೀಡಬೇಕೆಂಬ ಬುದ್ಧಿವಂತಿಕೆಯನ್ನು ಪ್ರತಿಯೊಬ್ಬರೂ ಹೊಂದಿರಬೇಕು ಎಂದು ಪ್ರಧಾನಿ ಹೇಳಿದರು. ಇದು ಅನುಭವ ಮತ್ತು ಎಲ್ಲವನ್ನೂ ವಿಶ್ಲೇಷಿಸುವುದರೊಂದಿಗೆ ಬರುತ್ತದೆ. ಅಂಥವರು ತಮ್ಮ ತಪ್ಪುಗಳನ್ನು ಪಾಠಗಳಾಗಿ ಪರಿಗಣಿಸುತ್ತಾರೆ ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗದ ಉದಾಹರಣೆಯನ್ನು ನೀಡಿದ ಪ್ರಧಾನಿ, ಸುಮ್ಮನೆ ಕುಳಿತುಕೊಳ್ಳುವ ಬದಲು ಜನರನ್ನು ಒಟ್ಟುಗೂಡಿಸಲು ಮಾಡಿದ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದರು. ದೀಪ ಬೆಳಗಲು ಅಥವಾ ಜಾಗಟೆ ಬಡಿಯಲು ಕರೆ ನೀಡುವಂತಹ ಕಾರ್ಯಗಳ ಮೂಲಕ ಜನರ ಸಾಮೂಹಿಕ ಶಕ್ತಿಯನ್ನು ಹೆಚ್ಚಿಸಲು ನಿರ್ಧರಿಸಿದ್ದಾಗಿ ಹೇಳಿದರು. ಅಂತೆಯೇ, ಕ್ರೀಡಾ ಯಶಸ್ಸನ್ನು ಸಂಭ್ರಮಿಸುವುದು ಮತ್ತು ಸರಿಯಾದ ಕಾರ್ಯತಂತ್ರ, ನಿರ್ದೇಶನ ಮತ್ತು ನಾಯಕತ್ವವು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರಿ ಪದಕಗಳನ್ನು ಗಳಿಸಲು ಕಾರಣವಾಗಿದೆ ಎಂದರು.

ಸರಿಯಾದ ಆಡಳಿತಕ್ಕಾಗಿ, ಕೆಳಗಿನಿಂದ ಮೇಲಿನವರೆಗೆ ಪರಿಪೂರ್ಣ ಮಾಹಿತಿಯ ವ್ಯವಸ್ಥೆ ಇರಬೇಕು ಮತ್ತು ಮೇಲಿನಿಂದ ಕೆಳಗಿನವರೆಗೆ ಪರಿಪೂರ್ಣ ಮಾರ್ಗದರ್ಶನದ ವ್ಯವಸ್ಥೆ ಇರಬೇಕು ಎಂದು ಅವರು ಹೇಳಿದರು.

ಜೀವನದಲ್ಲಿ ತಾವು ಎಂದೂ ನಿರಾಶೆಗೊಳ್ಳುವುದಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಿ, ಒಮ್ಮೆ ಈ ನಿರ್ಧಾರ ತೆಗೆದುಕೊಂಡರೆ, ಸಕಾರಾತ್ಮಕತೆ ಮಾತ್ರ ಉಳಿಯುತ್ತದೆ ಎಂದರು. “ನಾನು ನನ್ನ ಜೀವನದಲ್ಲಿ ನಿರಾಶೆಯ ಎಲ್ಲಾ ಬಾಗಿಲುಗಳು ಮತ್ತು ಕಿಟಕಿಗಳನ್ನು ಮುಚ್ಚಿದ್ದೇನೆ” ಎಂದು ಪ್ರಧಾನಿ ಹೇಳಿದರು. ಏನನ್ನಾದರೂ ಮಾಡುವ ಸಂಕಲ್ಪ ಬಲವಾದಾಗಿದ್ದಾಗ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗುತ್ತದೆ ಎಂದರು. “ಯಾವುದೇ ಸ್ವಾರ್ಥ ಉದ್ದೇಶವಿಲ್ಲದಿದ್ದಾಗ, ನಿರ್ಧಾರದಲ್ಲಿ ಎಂದಿಗೂ ಗೊಂದಲವಿರುವುದಿಲ್ಲ,” ಎಂದು ಅವರು ಹೇಳಿದರು. ಇಂದಿನ ಪೀಳಿಗೆಯ ಜೀವನವನ್ನು ಸುಲಭಗೊಳಿಸಲು ಒತ್ತು ನೀಡಿದ ಬಗ್ಗೆ ಹೇಳಿದ ಪ್ರಧಾನಮಂತ್ರಿಯವರು, ಇಂದಿನ ಪೀಳಿಗೆಯು ತಮ್ಮ ಪೋಷಕರು ಎದುರಿಸುತ್ತಿರುವ ತೊಂದರೆಗಳನ್ನು ಎದುರಿಸುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ವರ್ತಮಾನಕ್ಕೆ ಮಾತ್ರವಲ್ಲ, ಭವಿಷ್ಯದ ಪೀಳಿಗೆಗೂ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮತ್ತು ಪ್ರಕಾಶಿಸಲು ಅವಕಾಶವಿರುವ ರಾಷ್ಟ್ರವನ್ನು ನಿರ್ಮಿಸಲು ಸರ್ಕಾರ ಶ್ರಮಿಸುತ್ತದೆ,” ಎಂದರು. ಇದು ಇಡೀ ರಾಷ್ಟ್ರದ ಸಾಮೂಹಿಕ ಸಂಕಲ್ಪವಾಗಿರಬೇಕು ಎಂದು ಒತ್ತಿ ಹೇಳಿದರು. ಸಕಾರಾತ್ಮಕ ಚಿಂತನೆಯ ಶಕ್ತಿಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಇದು ಅತ್ಯಂತ ನಕಾರಾತ್ಮಕ ಸಂದರ್ಭಗಳಲ್ಲಿಯೂ ಸಕಾರಾತ್ಮಕ ಫಲಿತಾಂಶಗಳನ್ನು ಹುಡುಕುವ ಶಕ್ತಿಯನ್ನು ನೀಡುತ್ತದೆ ಎಂದರು. ಎಲ್ಲ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಾಗೂ ತಮ್ಮ ಜೀವನದ ಗುರಿಗಳನ್ನು ಸಾಧಿಸಲು ಅವರಿಗೆ ಶುಭ ಹಾರೈಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಸಂವಾದವನ್ನು ಮುಕ್ತಾಯಗೊಳಿಸಿದರು.

ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Previous versions of Pariksha Pe Charcha can be found below:

Pariksha Pe Charcha 2023

Pariksha Pe Charcha 2022

Pariksha Pe Charcha 2021

Pariksha Pe Charcha 2020

Pariksha Pe Charcha 2019

Pariksha Pe Charcha 2018

*****