ಪುನರುತ್ಥಾನದ ಭಾರತಕ್ಕೆ ಮೂಲಸೌಕರ್ಯಗಳ ಸೃಷ್ಟಿ
ಮೊದಲ ದಿನದಿಂದಲೇ ಎನ್ ಡಿ ಎ ಸರಕಾರವು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ನಿಚ್ಚಳ. ಅದು ರೈಲ್ವೇ ಆಗಿರಬಹುದು, ರಸ್ತೆ, ಹಡಗು ಕ್ಷೇತ್ರವೇ ಆಗಿರಬಹುದು, ಸರಕಾರವು ಸಂಪರ್ಕ ಜಾಲವನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಶ್ರಮ ವಹಿಸುತ್ತಿದೆ.
ರೈಲ್ವೇಯು ಮೊಟ್ಟಮೊದಲ ಬಾರಿಗೆ ಸಾಂಸ್ಥಿಕ ಸ್ವರೂಪದಲ್ಲಿ ಸುಧಾರಣೆ ಮತ್ತು ಮೂಲಸೌಕರ್ಯ ಬದಲಾವಣೆಗೆ ಆದ್ಯತೆ ನೀಡಿದೆ. ರಾಜಕೀಯ ಗಿಮಿಕ್ ಆಗಿದ್ದ ಹೊಸ ರೈಲುಗಳ ಘೋಷಣೆ ಈಗ ನಿತ್ಯದ ಚಟುವಟಿಕೆಯಾಗಿದೆ. ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ, ಪ್ರಯಾಣಿಕರ ಸಹಾಯವಾಣಿ ಸಂಖ್ಯೆ (138), ರಕ್ಷಣಾ ಸಹಾಯವಾಣಿ (182), ಪೇಪರ್ ರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ, ಇ-ಕ್ಯಾಟರಿಂಗ್, ಮೊಬೈಲ್ ರಕ್ಷಣಾ ಆ್ಯಪ್, ಮಹಿಳೆಯರ ರಕ್ಷಣೆಗೆ ಸಿಸಿಟಿವಿ ಕ್ಯಾಮೆರಾ ಮೊದಲಾದ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈಲ್ವೇಯು ಭಾರತದ ಆರ್ಥಿಕಾಭಿವೃದ್ಧಿಯ ಲೋಕೋಮೋಟಿವ್ ಆಗಿ ಕೆಲಸ ಮಾಡುತ್ತಿದೆ. ಮುಂಬೈ-ಅಹ್ಮದಾಬಾದ್ ಮಧ್ಯೆ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡಲಾಗಿದೆ. ನವದೆಹಲಿ-ಚೆನ್ನೈ ಮಧ್ಯೆ ಬುಲೆಟ್ ರೈಲಿಗೆ ಕಾರ್ಯಸಾಧು ಸಮೀಕ್ಷೆ ನಡೆಸಲಾಗುತ್ತಿದೆ.
ಈ ವರ್ಷ 1983 ಕಿಲೋಮೀಟರ್ ಉದ್ದದ ರೈಲ್ವೇ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. 1375 ಕಿಲೋಮೀಟರ್ ರೈಲ್ವೇ ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗಿದೆ. 6 ಹೊಸ ತೀರ್ಥಯಾತ್ರಾ ಮಾರ್ಗಗಳನ್ನು ರಚಿಸಲಾಗಿದೆ. ಕತ್ರಾ ಮಾರ್ಗವನ್ನು ಲೋಕಾರ್ಪಣೆಗೊಳಿಸುವ ಮೂಲಕ ವೈಷ್ಣೋದೇವಿಗೆ ನೇರ ರೈಲು ಸಂಪರ್ಕ ಕಲ್ಪಿಸಲಾಗಿದೆ.
ರಸ್ತೆ ಸಾರಿಗೆ ಕ್ಷೇತ್ರದಲ್ಲಿ, ಸ್ಥಗಿತಗೊಂಡಿದ್ದ ಕಾಮಗಾರಿಗಳನ್ನು ವೇಗವಾಗಿ ಮುಗಿಸಲಾಗುತ್ತಿದೆ. ಸುದೀರ್ಘ ಕಾಲದಿಂದ ವಿವಾದಕ್ಕೆ ಸಿಲುಕಿದ್ದ ಮಾರ್ಗಗಳ ಅಡ್ಡಿಗಳನ್ನು ಪರಿಹರಿಸಲಾಗಿದೆ. ಭಾರತ್ ಮಾಲಾ ಎಂಬ ಬಹುದೊಡ್ಡ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದ ಭಾರತದ ಗಡಿ ಮತ್ತು ಕರಾವಳಿ ಪ್ರದೇಶಗಳನ್ನು ಜೋಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ 62 ಟೋಲ್ ಕೇಂದ್ರಗಳನ್ನು ತೆಗೆದು ಹಾಕಲಾಗಿದೆ. ಕಳೆದ ವರ್ಷವೊಂದರಲ್ಲೇ ಅತ್ಯಧಿಕ ರಸ್ತೆ ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಗಿದೆ. ಇದರ 120% ಹೆಚ್ಚಾಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯೂ ಭಾರೀ ಪ್ರಮಾಣದಲ್ಲಿ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.
ಎನ್ ಡಿ ಎ ಸರ್ಕಾರದ ಅವಧಿಯಲ್ಲಿ ಹಡಗು ಕ್ಷೇತ್ರದಲ್ಲೂ ಭಾರೀ ಸುಧಾರಣೆಯಾಗಿದೆ. ಸಾಗರಮಾಲಾ ಯೋಜನೆಯಡಿ, ಪ್ರಮುಖ ನಗರಗಳಿಗೂ ಬಂದರು ನಗರಿಗಳಿಗೂ ನೇರ ಸಂಪರ್ಕ ಕಲ್ಪಿಸುವ ಸಿದ್ಧತೆಗಳು ನಡೆದಿವೆ. ಬಂದರುಗಳ ಮೂಲಕ ಸರಕು ಸಾಗಣೆಯು 4% ನಿಂದ 8%ಗೆ ಏರಿಕೆಯಾಗಿದ್ದು ದ್ವಿಗುಣಗೊಂಡಿದೆ. ಈ ವರ್ಷ 71 ಎಂಪಿಟಿಎನಷ್ಟು ಸರಕು ನಿರ್ವಹಣೆ ಮಾಡಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಚಹಬಹಾರ್ ಬಂದರು ಅಭಿವೃದ್ಧಿಪಡಿಸುವ ಸಂಬಂಧ ಇರಾನ್ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಅಫ್ಘಾನಿಸ್ತಾನ ಮತ್ತು ಕೇಂದ್ರ ಏಷ್ಯಾ ದೇಶಗಳ ಜೊತೆಗೆ ನೇರ ಸಂಪರ್ಕ ಸಾಧ್ಯವಾಗಲಿದೆ. ಗಂಗಾನದಿ ಸೇರಿದಂತೆ ಹಲವು ಬೃಹತ್ ನದಿಗಳಲ್ಲಿ ಆಂತರಿಕ ಜಲಸಾರಿಗೆ ಅಭಿವೃದ್ಧಿ ಪಡಿಸಲು ಜಲಮಾರ್ಗ ವಿಕಾಸ ಯೋಜನೆ ಹಮ್ಮಿಕೊಳ್ಳಲಾಗಿದೆ.
ನಾಗರಿಕ ವಿಮಾನಯಾನ ಕ್ಷೇತ್ರದಲ್ಲೂ ಭಾರೀ ಪ್ರಗತಿಯಾಗಿದೆ. ಮೊಹಾಲಿ, ತಿರುಪತಿ, ಖಜುರಾಹೋಗಳಲ್ಲಿ ಹೊಸ ಸಮಗ್ರ ಟರ್ಮಿನಲ್ ಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಕಡಪಾ ಮತ್ತು ಬಿಕಾನೇರ್ ಗಳಲ್ಲಿ ಟರ್ಮಿನಲ್ ಗಳನ್ನು ಪೂರ್ಣಗೊಳಿಸಲಾಗಿದೆ. ಹುಬ್ಬಳ್ಳಿ, ಬೆಳಗಾವಿ, ಕಿಶನ್ ಗಢ್, ತೇಜು, ಜರ್ಸುಗುಡ ಮೊದಲಾದ ವಿಮಾನ ನಿಲ್ದಾಣಗಳನ್ನು ಉನ್ನತೀಕರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ವಾಯುಯಾನ ಸುರಕ್ಷಾ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ.