Search

ಪಿಎಂಇಂಡಿಯಾಪಿಎಂಇಂಡಿಯಾ

ಭಾರತದ ಅಭಿವೃದ್ಧಿ ಬಲಪಡಿಸುವಿಕೆ


ಭಾರತವು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಸಿಕ್ಕಿ 7 ದಶಕಗಳ ಬಳಿಕವೂ ಸಂಪೂರ್ಣ ಕತ್ತಲಲ್ಲಿ ಮುಳುಗಿರುವ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಯದು. ಪ್ರಧಾನ ಮಂತ್ರಿಯವರು ತಮ್ಮ ಚೊಚ್ಚಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಎಲ್ಲಾ ಹಳ್ಳಿಗಳಿಗೆ ಸಾವಿರ ದಿನಗಳೊಳಗೆ ವಿದ್ಯುತ್ ಕಲ್ಪಿಸಲಾಗುವುದು ಎಂದು ಘೋಷಿಸಿದ್ದರು. ಗ್ರಾಮೀಣ ವಿದ್ಯುದೀಕರಣವು ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿರುವ ಹಳ್ಳಿಗಳ ಮಾಹಿತಿ ಸಾರ್ವಜನಿಕರಿಗೆ ಮೊಬೈಲ್ ಆ್ಯಪ್ ಮತ್ತು ವೆಬ್ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ನಾವು ಕೇವಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನಷ್ಟೇ ನೀಡುತ್ತಿಲ್ಲ. ವಿದ್ಯುತ್ ಸಂಪರ್ಕದ ಜೊತೆಗೆ ಹೊಸ ಕನಸುಗಳು, ಆಕಾಂಕ್ಷೆಗಳು, ನಿರೀಕ್ಷೆಗಳು ಎಲ್ಲವೂ ಆ ಹಳ್ಳಿಗಳ ನಿವಾಸಿಗಳನ್ನು ತಲುಪುತ್ತಿದೆ.

2012ರ ಜುಲೈನಲ್ಲಿ ಭಾರತದ ಇತಿಹಾಸದಲ್ಲಿಯೇ 62 ಕೋಟಿ ಜನ ಕತ್ತಲಲ್ಲಿ ಮುಳುಗಿದ್ದನ್ನು ನಾವು ಮರೆಯುವುದು ಸಾಧ್ಯವೇ ಇಲ್ಲ. ಕಲ್ಲಿದ್ದಲು ಮತ್ತು ಅನಿಲದ ಪೂರೈಕೆ ಸ್ಥಗಿತಗೊಂಡಿದ್ದರಿಂದ 24,000 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳು ಸ್ಥಗಿತಗೊಂಡ ಕಾರಣಕ್ಕೆ ಭಾರತ ಇಂತಹ ದುರ್ದಿನ ನೋಡಬೇಕಾಯಿತು. ಇಡೀ ವಲಯವು ಸ್ಥಗಿತಗೊಂಡು, ನೀತಿ ನಿರೂಪಣೆಯಲ್ಲಿ ವ್ಯತ್ಯಾಸದಿಂದಾಗಿ, ಉತ್ಪಾದನಾ ಸಾಮರ್ಥ್ಯ ಹಾಗೂ ಬಳಕೆಯಾಗದ ಹೂಡಿಕೆಗಳು ಒಂದೆಡೆ ಇದ್ದರೂ, ಮತ್ತೊಂದೆಡೆ ಜನರು ಮಾತ್ರ ವಿದ್ಯುತ್ ಕಡಿತದಿಂದ ಬಳಲುವಂತಾಗಿತ್ತು.

ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಭಾರತ 2/3ರಷ್ಟು ಕಲ್ಲಿದ್ದಲು ಆಧರಿತ ವಿದ್ಯುತ್ ಸ್ಥಾವರಗಳು (100ರಲ್ಲಿ 66 ಕಲ್ಲಿದ್ದಲು ಘಟಕಗಳನ್ನು ಕೇಂದ್ರ ವಿದ್ಯುತ್ ಪ್ರಾಧಿಕಾರ ಪರಿಶೀಲಿಸುತ್ತದೆ) ಕಲ್ಲಿದ್ದಲಿನ ಕೊರತೆ ಎದುರಿಸುತ್ತಿದ್ದವು. 7 ದಿನಕ್ಕೆ ಆಗುವಷ್ಟು ಸಂಗ್ರಹವೂ ಇರುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಿಂದ ವಿದ್ಯುತ್ ವಲಯವನ್ನು ಪುನಶ್ಚೇತನಗೊಳಿಸಲಾಗಿದ್ದು, ಈಗ ಭಾರತದ ಯಾವುದೇ ವಿದ್ಯುತ್ ಸ್ಥಾವರದಲ್ಲಿ ಈ ಸಮಸ್ಯೆ ಇಲ್ಲ.

0.24219700_1451627485_inner-power-2 [ PM India 194KB ]

ಎಲ್ಲರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಶ್ರಮಿಸುತ್ತಿರುವುದರ ಜೊತೆಗೆ ಸ್ವಚ್ಛ ಇಂಧನಕ್ಕೆ ಆದ್ಯತೆಯನ್ನು ನೀಡುತ್ತಿದೆ. ಮರುಬಳಕೆ ಇಂಧನ ಮೂಲಗಳ ಮೂಲಕ 100 ಜಿಡಬ್ಲ್ಯು ಸೌರಶಕ್ತಿ ಸೇರಿದಂತೆ ಕನಿಷ್ಟ 175 ಜಿಡಬ್ಲ್ಯು ವಿದ್ಯುತ್ ಉತ್ಪಾದಿಸಲು ಗುರಿ ಹಾಕಿಕೊಳ್ಳಲಾಗಿದೆ.

ಹೊಸ ಸರ್ಕಾರವು, ವಿದ್ಯುತ್ ಕ್ಷೇತ್ರದಲ್ಲಿ ಎಲ್ಲರಿಗೂ 24 X7 ವಿದ್ಯುತ್ ಕಲ್ಪಿಸುವ ದೃಷ್ಟಿಯಿಂದ ನೈಜವಾದ ಮತ್ತು ದೀರ್ಘಕಾಲೀನ ಸಾಂಸ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಬೆಳವಣಿಗೆ ದೃಷ್ಟಿಯಿಂದ ಇಂಧನ ಕ್ಷೇತ್ರವು ಆರೋಗ್ಯಕರವಾಗಿಯೇ ಇದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಪ್ರಕಾರ ಅಕ್ಟೋಬರ್ ನಲ್ಲಿ ಇಂಧನ ಕ್ಷೇತ್ರವು 9% ಅಭಿವೃದ್ಧಿ ಸಾಧಿಸಿದೆ. ಏಪ್ರಿಲ್-ನವೆಂಬರ್ ಅವಧಿಯಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ನ ಉತ್ಪಾದನೆಯೂ 9% ಹೆಚ್ಚಾಗಿದೆ. 2014-15ರಲ್ಲಿ ಕೋಲ್ ಇಂಡಿಯಾವು ಹಿಂದಿನ ನಾಲ್ಕು ವರ್ಷಗಳ ಒಟ್ಟು ಉತ್ಪಾದನೆಗಿಂತ ಹೆಚ್ಚಿನ ಉತ್ಪಾದನೆಯನ್ನು ಸಾಧಿಸಿದೆ. ಇದೇ ವೇಳೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ನವೆಂಬರ್ ನಲ್ಲಿ ಕಲ್ಲಿದ್ದಲಿನ ಆಮದು ಪ್ರಮಾಣ 49% ಕಡಿಮೆಯಾಗಿದೆ. 2014-15ರಲ್ಲಿ ಕಲ್ಲಿದ್ದಲು ಆಧರಿತ ಸ್ಥಾವರಗಳ ವಿದ್ಯುತ್ ಉತ್ಪಾದನೆಯು 12.12% ಏರಿಕೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಗೌರವಾನ್ವಿತ ಸುಪ್ರೀಂ ಕೋರ್ಟ್ 214 ಕಲ್ಲಿದ್ದಲು ನಿಕ್ಷೇಪಕಗಳ ಹರಾಜನ್ನು ಸ್ಥಗಿತಗೊಳಿಸಿದ್ದನ್ನು ನಾವು ಅವಕಾಶವಾಗಿ ಬಳಸಿಕೊಂಡು ಪಾರದರ್ಶಕ ಇ-ಹರಾಜು ಮೂಲಕ, ಮುಖ್ಯವಾಗಿ ಹಿಂದುಳಿದ ಈಶಾನ್ಯ ರಾಜ್ಯಗಳಿಗೆ ಉಪಯೋಗವಾಗುವಂತೆ ಮಾಡಲಾಗಿದೆ.

0.54567300_1451627359_inner-power-1 [ PM India 294KB ]

ಕಳೆದ ವರ್ಷ 22,566 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇದು ಈ ವರೆಗೆ ಅತ್ಯಧಿಕವಾಗಿದೆ. 2008-09ರಲ್ಲಿ 11.9%ನಷ್ಟಿದ್ದ ಗರಿಷ್ಟ ಕೊರತೆಯು ಈಗ ಸಾರ್ವಕಾಲಿಕ ಕನಿಷ್ಟ 3.2%ಗೆ ಇಳಿದಿದೆ. 2008-09ರಲ್ಲಿ 11.1%ನಷ್ಟಿದ್ದ ಇಂಧನ ಕೊರತೆಯು ಈ ವರ್ಷ 2.3% ಗೆ ಇಳಿದಿದೆ. ಪ್ರಸರಣ ವಿಚಾರಕ್ಕೆ ಬಂದರೆ, ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಜ್ಯಗಳಿಂದ ಕೊರತೆ ಇರುವ ರಾಜ್ಯಗಳಿಗೆ ವಿದ್ಯುತ್ ಅನ್ನು ಹಂಚಿಕೆ ಮಾಡಲು ಸಾಕಷ್ಟು ಸಮಸ್ಯೆಗಳು ಇದ್ದವು.

ಇದನ್ನು ಸರಿಪಡಿಸಲು ಸಾಕಷ್ಟು ಶ್ರಮ ವಹಿಸಲಾಗಿದೆ. ಒನ್ ನೇಷನ್ ಒನ್ ಗ್ರಿಡ್ ಒನ್ ಫ್ರೀಕ್ವೆನ್ಸಿ ಯೋಜನೆಯಡಿ, ದಕ್ಷಿಣ ಸಂಪರ್ಕ ಜಾಲವನ್ನು ಸೃಷ್ಟಿಸಲಾಗಿದೆ. ಲಭ್ಯ ಪ್ರಸರಣ ಸಾಮರ್ಥ್ಯವು 2013-14ರಲ್ಲಿ 3,450 ಮೆಗಾವ್ಯಾಟ್ ನಷ್ಟಿತ್ತು. ಈ ತಿಂಗಳಾಂತ್ಯಕ್ಕೆ ಈ ಸಾಮರ್ಥ್ಯವನ್ನು 71%ರಷ್ಟು ಎಂದರೆ 5,900 ಮೆಗಾವ್ಯಾಟ್ ಗೆ ಏರಿಸಲಾಗಿದೆ.

ಒಟ್ಟಾರೆಯಾಗಿ ವಿದ್ಯುತ್ ಕ್ಷೇತ್ರವನ್ನು ಬಾಧಿಸುತ್ತಿರುವ ಭೂತ, ವರ್ತಮಾನ ಮತ್ತು ಭವಿಷ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉದಯ್ ಯೋಜನೆ ಆರಂಭಿಸಲಾಗಿದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರಧಾನ ಕಾರ್ಯದರ್ಶಿಗಳು, ವಿದ್ಯುತ್ ಸರಬರಾಜು ಕಂಪನಿಗಳ ಮುಖ್ಯಸ್ಥರ ಜೊತೆ ಸುದೀರ್ಘ ಚರ್ಚೆಯ ಬಳಿಕ ಉದಯ್ ಯೋಜನೆಯನ್ನು ರೂಪಿಸಲಾಗಿದೆ. ಸಾಲಕ್ಕೆ ಸಿಲುಕಿದ್ದ ಬಹುತೇಕ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸುಸ್ಥಿರ ನಿರ್ವಹಣಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ವಿದ್ಯುತ್ ಉತ್ಪಾದನೆಯ ವೆಚ್ಚವನ್ನು ತಗ್ಗಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. 2018-19ರ ವೇಳೆಗೆ ಎಲ್ಲಾ ಡಿಸ್ಕಾಂಗಳು ಲಾಭದ ಹಾದಿಗೆ ಮರಳುವುದನ್ನು ಸರ್ಕಾರ ಎದುರು ನೋಡುತ್ತಿದೆ.

0.33263600-1451575216-powerindia2 [ PM India 271KB ]

ಇಂಧನ ಕ್ಷಮತೆಯ ಕ್ಷೇತ್ರದಲ್ಲೂ ಭಾರತ ಅದ್ಭುತ ಬೆಳವಣಿಗೆ ಸಾಧಿಸುತ್ತಿದೆ. ಎಲ್ ಇಡಿ ಬಲ್ಬ್ ಗಳ ದರದಲ್ಲಿ 75% ಕಡಿತಗೊಳಿಸಲಾಗಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 4 ಕೋಟಿಗೂ ಹೆಚ್ಚು ಬಲ್ಬ್ ಗಳನ್ನು ವಿತರಿಸಲಾಗಿದೆ. 2018ರೊಳಗೆ 77 ಕೋಟಿ ಬಲ್ಬ್ ಗಳನ್ನು ವಿತರಿಸುವ ಮೂಲಕ ದೇಶದ ಪ್ರತಿ ಬಲ್ಬ್ ಅನ್ನು ಎಲ್ ಇಡಿಗೆ ಬದಲಾಯಿಸುವ ದೊಡ್ಡ ಯೋಜನೆ ಹಮ್ಮಿಕೊಳ್ಳಲಾಗಿದೆ. ಗೃಹಬಳಕೆ ಮತ್ತು ರಸ್ತೆ ದೀಪಗಳನ್ನು ಎಲ್ ಇಡಿ ಗೆ ಬದಲಾಯಿಸುವ ಮೂಲಕ ವಾರ್ಷಿಕ ಗರಿಷ್ಟ ಲೋಡ್ ಬೇಡಿಕೆಯನ್ನು 22 ಜಿಡಬ್ಲ್ಯುಗೆ ಇಳಿಸಲು ಉದ್ದೇಶಿಸಲಾಗಿದೆ. ಇದರಿಂದ ವಾರ್ಷಿಕ 11,400 ಕೋಟಿ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ. ಅಲ್ಲದೆ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣದಲ್ಲಿ ಪ್ರತಿವರ್ಷ 8.5 ಕೋಟಿ ಟನ್ ಕಡಿಮೆಯಾಗಲಿದೆ. 22 ಜಿಡಬ್ಲ್ಯು ಸಾಮರ್ಥ್ಯದ ಸ್ಥಾವರ ಸ್ಥಾಪಿಸುವುದು ದೊಡ್ಡ ವಿಚಾರವೇನಲ್ಲ. ಆದರೆ, ಇಂತಹ ಕ್ರಮಗಳ ಮೂಲಕ ಅಂತಹ ಹೂಡಿಕೆಯನ್ನು ತಡೆಯುವುದು ಮತ್ತು ಪರಿಸರವನ್ನು ಉಳಿಸುವುದು ಅತ್ಯಗತ್ಯವಾಗಿದೆ.

Loading... Loading