2014ರಲ್ಲಿ ನ್ಯೂಯಾರ್ಕ್ ನ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು “ ನಿಮ್ಮಿಂದ ಗಂಗೆಯನ್ನು ಸ್ವಚ್ಛಗೊಳಿಸುವುದು ಸಾಧ್ಯವಾದರೆ, ಅದರಿಂದ ದೇಶದ 40% ಜನಸಂಖ್ಯೆಗೆ ಸಹಾಯವಾಗುತ್ತದೆ. ಹೀಗಾಗಿ ಗಂಗೆಯನ್ನು ಸ್ವಚ್ಛಗೊಳಿಸುವುದು ದೇಶದ ಆರ್ಥಿಕ ಕಾರ್ಯಸೂಚಿಯೂ ಆಗಿದೆ.” ಈ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಸರಕಾರವು ಸಮಗ್ರ ಗಂಗಾ ಸಂರಕ್ಷಣಾ ಅಭಿಯಾನವನ್ನು ಆರಂಭಿಸಿದೆ. ನಮಾಮಿ ಗಂಗೆ ಹೆಸರಿನ ಯೋಜನೆಯು ಗಂಗಾ ನದಿಯ ಮಾಲಿನ್ಯವನ್ನು ತಡೆಗಟ್ಟುವುದರ ಜೊತೆಗೆ ಪುನರುಜ್ಜೀವನಗೊಳಿಸಲು ಕಟಿಬದ್ಧವಾಗಿದೆ.
2019-2020ರ ವರೆಗೆ ಈ ಯೋಜನೆಗಾಗಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸುವ ಸರಕಾರದ ಪ್ರಸ್ತಾಪಕ್ಕೆ ಕೇಂದ್ರ ಸಂಪುಟವು ಒಪ್ಪಿಗೆ ನೀಡಿದೆ. ಈ ಮೂಲಕ ಗಂಗಾ ಶುದ್ಧೀಕರಣ ಯೋಜನೆಯ ಅನುದಾನವನ್ನು ನಾಲ್ಕು ಪಟ್ಟು ಹೆಚ್ಚಳ ಮಾಡಲಾಗಿದ್ದು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ವೆಚ್ಚವನ್ನು ಭರಿಸಲಿದೆ.
ಗಂಗಾ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಬಹುಕ್ಷೇತ್ರೀಯ, ಬಹು ಆಯಾಮದ, ಬಹುರೂಪಿ ಪಾಲುದಾರಿಕೆಯ ಸವಾಲುಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರವು, ಅಂತರ್-ಸಚಿವಾಲಯ ಮಟ್ಟದಲ್ಲಿ, ರಾಜ್ಯ-ಕೇಂದ್ರ ಸಂಯೋಜನೆಯಲ್ಲಿರುವ ಗೊಂದಲಗಳನ್ನು ಪರಿಹರಿಸಲು ಕಾರ್ಯಯೋಜನೆ ಸಿದ್ಧಪಡಿಸಿದೆ. ಇಡೀ ಯೋಜನೆಯ ಮೇಲ್ವಿಚಾರಣೆಯನ್ನು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಹೆಚ್ಚಿಸಲಾಗಿದೆ.
ಯೋಜನೆಯ ಅನುಷ್ಟಾನವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಆರಂಭಿಕ ಹಂತದ ಚಟುವಟಿಕೆಗಳು (ತಕ್ಷಣವೇ ಪರಿಣಾಮ ಬೀರುವ ಕಾರ್ಯಗಳು), ಮಧ್ಯಮಾವಧಿ ಚಟುವಟಿಕೆಗಳು ( 5 ವರ್ಷಗಳಲ್ಲಿ ಮುಗಿಸಬೇಕಾದ ಕೆಲಸಗಳು) ಮತ್ತು ಸುದೀರ್ಘ ಕಾಲೀನ ಚಟುವಟಿಕೆಗಳು( ಹತ್ತು ವರ್ಷಗಳಲ್ಲಿ ಪೂರೈಸಬೇಕಾದ ಕಾರ್ಯಗಳು) ಎಂದು ವಿಭಾಗಿಸಲಾಗಿದೆ.
Enಆರಂಭಿಕ ಹಂತದ ಚಟುವಟಿಕೆಗಳು ಎಂದರೆ, ನದಿ ಪಾತ್ರವನ್ನು ಸ್ವಚ್ಛಗೊಳಿಸುವುದು, ತೇಲುವ ಘನತ್ಯಾಜ್ಯಗಳ ನಿರ್ವಹಣೆ, ಗ್ರಾಮೀಣ ನೈರ್ಮಲೀಕರಣದ ಮೂಲಕ ನದಿಗೆ ಕಲುಷಿತ ತ್ಯಾಜ್ಯ ಮತ್ತು ನೀರು ಸೇರುವುದನ್ನು ತಡೆಗಟ್ಟುವುದು, ಶೌಚಾಲಯಗಳ ನಿರ್ಮಾಣ, ಶವಾಗಾರಗಳ ಆಧುನೀಕರಣ, ಹೊಸ ನಿರ್ಮಾಣಗಳ ಮೂಲಕ ಅರೆಸುಟ್ಟ ಶವಗಳು ನದಿ ಸೇರದಂತೆ ತಡೆಯುವುದು, ಮಾನವ-ನದಿಯ ಸಂಬಂಧ ಹೆಚ್ಚಿಸಲು ಘಾಟ್ ಗಳ ಮರು ನಿರ್ಮಾಣ ಮತ್ತು ಆಧುನೀಕರಣ ಯೋಜನೆಗಳನ್ನು ಒಳಗೊಂಡಿದೆ.
ಮಧ್ಯಮಾವಧಿ ಚಟುವಟಿಕೆಗಳು, ನಗರ ಮತ್ತು ಕೈಗಾರಿಕಾ ತ್ಯಾಜ್ಯಗಳು ನದಿಗೆ ಸೇರದಂತೆ ತಡೆಯಲು ರಚಿತವಾಗಿವೆ. ಮುಂದಿನ 5 ವರ್ಷಗಳಲ್ಲಿ 2500 ಎಂಎಲ್ ಡಿ ಸಾಮರ್ಥ್ಯದ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಯೋಜನೆಯು ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರಮುಖ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸರ್ಕಾರಿ- ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಸಂಪುಟವು ಚಿಂತನೆ ನಡೆಸುತ್ತಿದೆ. ಇದಕ್ಕೆ ಒಪ್ಪಿಗೆ ದೊರೆತಲ್ಲಿ, ಎಲ್ಲಾ ನಗರಗಳಲ್ಲಿ, ಮಾರುಕಟ್ಟೆಗಳಲ್ಲಿ ಶುದ್ಧೀಕರಣ ಪ್ರಕ್ರಿಯೆಗಳನ್ನು ನಿಗಾವಹಿಸಲು ವಿಶೇಷ ಉದ್ದೇಶ ಪಡೆಯನ್ನು ರಚಿಸಲಾಗುವುದು.
ಕೈಗಾರಿಕಾ ಮಾಲಿನ್ಯವನ್ನು ತಡೆಗಟ್ಟಲು, ಕೆಲವೊಂದು ಸುಧಾರಿತ ಅನುಷ್ಠಾನ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ನದಿಪಾತ್ರದಲ್ಲಿರುವ ಭಾರೀ ಪ್ರಮಾಣದಲ್ಲಿ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳಿಗೆ ನಿಯಂತ್ರಕ ಕ್ರಮಗಳನ್ನು ಅಳವಡಿಸಿಕೊಳ್ಳಲು ಹಾಗು ಶೂನ್ಯ-ದ್ರವ ತ್ಯಾಜ್ಯ ಸಾಧಿಸಲು ಸೂಚಿಸಲಾಗಿದೆ. ಈ ಎಲ್ಲಾ ನಿರ್ಣಯಗಳನ್ನು ಜಾರಿಗೆ ತರುವ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಯಯೋಜನೆಯನ್ನು ರೂಪಿಸಲಾಗಿದೆ. ಎಲ್ಲಾ ಕೈಗಾರಿಕೆಗಳಿಗೆ ರಿಯಲ್ ಟೈಮ್ ಆನ್ ಲೈನ್ ಮೇಲ್ವಿಚಾರಣೆ ಘಟಕಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ.
ಇವುಗಳನ್ನು ಹೊರತುಪಡಿಸಿ, ಜೀವ ವೈವಿಧ್ಯ ಸಂರಕ್ಷಣೆ, ಅರಣ್ಯೀಕರಣ ಮತ್ತು ಜಲಗುಣಮಟ್ಟ ಮೇಲ್ವಿಚಾರಣೆ ವಿಧಾನಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಮುಖ್ಯವಾದ ಕೆಲವು ಜೀವಿಗಳನ್ನು ಅಂದರೆ, ಗೋಲ್ಡನ್ ಮಹಾಸೀರ್, ಡಾಲ್ಫಿನ್ಸ್, ಘರಿಯಲ್ಸ್, ಆಮೆಗಳು ಮತ್ತಿತರ ಅಪರೂಪದ ಸಂತತಿಗಳನ್ನು ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಹಾಗೆಯೇ, ನಮಾಮಿಗಂಗೆ ಯೋಜನೆಯಡಿ 30,000 ಹೆಕ್ಟೇರ್ ಭೂಮಿಯನ್ನು ಅರಣ್ಯೀಕರಣಗೊಳಿಸಲಾಗುತ್ತಿದೆ. ಇದರಿಂದ ಮಣ್ಣಿನ ಸವಕಳಿ ನಿಯಂತ್ರಿಸಿ, ನದಿ ಪರಿಸರದ ಆರೋಗ್ಯ ಹೆಚ್ಚಾಗಲಿದೆ. ಅರಣ್ಯೀಕರಣ ಯೋಜನೆಯು 2016ರಲ್ಲಿ ಆರಂಭಗೊಳ್ಳಲಿದೆ. ಅಲ್ಲದೆ, 113 ರಿಯಲ್ ಟೈಮ್ ಜಲ ಗುಣಮಟ್ಟ ಮೇಲ್ವಿಚಾರಣಾ ಘಟಕಗಳ ಮೂಲಕ ಸಮಗ್ರವಾಗಿ ನೀರಿನ ಗುಣಮಟ್ಟವನ್ನು ಅಧ್ಯಯನ ನಡೆಸಲಾಗುತ್ತಿದೆ.
ದೀರ್ಘಕಾಲೀನ ಯೋಜನೆಗಳಲ್ಲಿ ನದಿಗೆ ಹರಿವು ಹೆಚ್ಚಿಸುವುದು, ನೀರಿನ ಸದ್ಬಳಕೆ ಮತ್ತು ಮೇಲ್ಮೈ ನೀರಾವರಿ ಮೂಲಕ ಸಾಮರ್ಥ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಗಂಗಾನದಿಯನ್ನು ಶುದ್ಧಗೊಳಿಸುವುದು ಅದರ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಯ ಪ್ರಾಮುಖ್ಯತೆಯಿಂದಾಗಿ ಅತ್ಯಂತ ಸಂಕೀರ್ಣ ಕೆಲಸವಾಗಿದೆ. ಜಗತ್ತಿನಲ್ಲಿ ಈವರೆಗೆ ಇಂತಹ ಸಂಕೀರ್ಣ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿಲ್ಲ. ಈ ಕಠಿಣತಮ ಯೋಜನೆಯಲ್ಲಿ ವಿವಿಧ ವಲಯಗಳು ಪಾಲ್ಗೊಳ್ಳಬೇಕಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕಾಗಿದೆ.
ಗಂಗಾನದಿಯ ಶುದ್ಧೀಕರಣ ಕೆಲಸದಲ್ಲಿ ಪ್ರತಿಯೊಬ್ಬರು ಹೇಗೆ ಭಾಗಿಯಾಗಬಹುದು.. ಇಲ್ಲಿದೆ ಕೆಲವು ವಿಚಾರಗಳು.
• ಧನ ಸಹಾಯ : ಗಂಗಾ ನದಿ ಅತ್ಯಂತ ವಿಶಾಲ ಹಾಗೂ ಉದ್ದವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಜನವಸತಿಯನ್ನು ಹೊಂದಿರುವುದರಿಂದ ಗಂಗೆಯ ಪುನರುತ್ಥಾನಕ್ಕೆ ಭಾರೀ ಪ್ರಮಾಣದಲ್ಲಿ ಹಣದ ಅಗತ್ಯವಿದೆ. ಸರಕಾರವು ಈಗಾಗಲೇ ನಾಲ್ಕು ಪಟ್ಟು ಬಜೆಟ್ ಏರಿಸಿದೆ. ಕ್ಲೀನ್ ಗಂಗಾ ನಿಧಿಯನ್ನು ಸ್ಥಾಪಿಸಲಾಗಿದೆ. ಈ ನಿಧಿಗೆ ಸಾರ್ವಜನಿಕರು ಹಣವನ್ನು ಸಂದಾಯ ಮಾಡಬಹುದಾಗಿದೆ.
• ಕಡಿಮೆಗೊಳಿಸುವುದು, ಮರುಬಳಕೆ ಮತ್ತು ರಿಕವರಿ : ಬಳಸಿದ ನೀರು ಮತ್ತು ಮನೆಯ ತ್ಯಾಜ್ಯಗಳನ್ನು ಸರಿಯಾಗಿ ಸಂಸ್ಕರಿಸದೇ ಇದ್ದರೆ, ಅದು ನದಿಯನ್ನು ಸೇರುತ್ತದೆ ಎನ್ನುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಈಗಾಗಲೇ ಒಳಚರಂಡಿ ಮೂಲಸೌಕರ್ಯವನ್ನು ಸರ್ಕಾರವು ಕಲ್ಪಿಸಿದೆ. ಆದರೂ ಜನರು ನೀರಿನ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ತ್ಯಾಜ್ಯ ಸೃಷ್ಟಿಯನ್ನು ತಪ್ಪಿಸಬೇಕಾಗಿದೆ. ನೀರಿನ ಮರುಬಳಕೆ ಮತ್ತು ರಿಕವರಿ ಸೇರಿದಂತೆ ಸಾವಯವ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಬಳಕೆ ತಪ್ಪಿಸಿದರೆ ಈ ಯೋಜನೆಗೆ ಭಾರೀ ಬೆಂಬಲ ನೀಡಿದಂತಾಗುತ್ತಿದೆ.
ನಮ್ಮ ರಾಷ್ಟ್ರೀಯ ನದಿ ಗಂಗೆಯನ್ನು ಸಂರಕ್ಷಿಸಲು ನಾವೆಲ್ಲರೂ ಕೈ ಜೋಡಿಸಬೇಕಾಗಿದೆ. ಕಾರಣ, ಇದು ನಮ್ಮ ನಾಗರಿಕತೆಯ ಸಂಕೇತವಾಗಿದೆ, ಸಂಸ್ಕೃತಿ ಮತ್ತು ಪರಂಪರೆಯ ಪ್ರತಿರೂಪವಾಗಿದೆ.