ಭಾರತದ ಬೆಳವಣಿಗೆಗೆ ಟೀಂ ಇಂಡಿಯಾ ಪರಿಕಲ್ಪನೆಯ ಪ್ರಯೋಗ
ಹಿಂದಿನ ಪದ್ದತಿಯನ್ನು ರದ್ದುಗೊಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ರಚಿಸಲು ಒತ್ತು ನೀಡುತ್ತಿದ್ದಾರೆ. ಪರಂಪರಾಗತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ದೊಡ್ಡಣ್ಣನ ಸಂಬಂಧವಿತ್ತು. ಎಲ್ಲರಿಗೂ ಒಂದೇ ಸೈಜ್ ಎಂಬ ನೀತಿಯನ್ನು ವರ್ಷಾನುಗಟ್ಟಲೆ ಪಾಲಿಸಲಾಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ರಾಜ್ಯಗಳ ಸ್ಥಳೀಯ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ.
ರಾಜ್ಯಗಳನ್ನು ಮತ್ತಷ್ಟು ಸಬಲೀಕರಿಸಲು ನೀತಿ ಆಯೋಗವನ್ನು ರಚಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಏಕಮುಖ ಸಂವಹನವನ್ನು ತಪ್ಪಿಸುವ ಸಲುವಾಗಿ ಹೊಸ ಆಲೋಚನೆಗಳನ್ನು ಜಾರಿಗೆ ತರಲಾಗುತ್ತಿದೆ. ಕೇಂದ್ರ – ರಾಜ್ಯಗಳ ಸಹಭಾಗಿತ್ವದೊಂದಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರಕಾರಗಳಿಗೆ ಸ್ಪಷ್ಟವಾದ ಮಾರ್ಗದರ್ಶನ ನೀಡಲು, ನೀತಿಗಳನ್ನು ರೂಪಿಸಲು ನೀತಿ ಆಯೋಗವು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ.
ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿ, ಆದ್ಯತೆಗಳನ್ನು ಮತ್ತು ರಾಷ್ಟ್ರಿಯ ಕಾರ್ಯಸೂಚಿಯನ್ನು ಜಾರಿಗೆ ತರಲು ರಾಜ್ಯಗಳನ್ನು ಪಾಲ್ಗೊಳ್ಳುವಂತೆ ನೀತಿ ಆಯೋಗವು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ರಾಷ್ಟ್ರೀಯ ಅಜೆಂಡಾದ ಮೇಲೆ ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಿಗೆ ನೀತಿ ಆಯೋಗವು ಚೌಕಟ್ಟನ್ನು ನಿರ್ಮಿಸಿಕೊಡುತ್ತದೆ. ರಾಜ್ಯ ಸರ್ಕಾರಗಳಿಗೂ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಸ್ಪಷ್ಟವಾದ ಮತ್ತು ಸಾಂಸ್ಥಿಕವಾದ ಸಲಹೆಗಳನ್ನು ನೀಡುವ ಮೂಲಕ ಸಹಕಾರಿ ಒಕ್ಕೂಟ ವ್ಯವಸ್ಥೆ ನಿರ್ಮಿಸಲು ಆದ್ಯತೆ ನೀಡಲಾಗುತ್ತಿದೆ. ಇದರಿಂದ ಬಲಿಷ್ಟ ದೇಶ ನಿರ್ಮಿಸಲು ಸಾಧ್ಯವಾಗಲಿದೆ. ಅಲ್ಲದೆ ಗ್ರಾಮ ಮಟ್ಟದಿಂದಲೇ ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ.
ಮೈಲುಗಲ್ಲು ಹೆಜ್ಜೆ ಇಟ್ಟಿರುವ ಎನ್ ಡಿ ಎ ಸರಕಾರವು 14ನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಿದೆ. ಈ ಹಿಂದೆ 32% ತೆರಿಗೆ ಆದಾಯ ಪಾಲು ಪಡೆಯುತ್ತಿದ್ದ ರಾಜ್ಯಗಳು ಇನ್ಮುಂದೆ 42% ಪಾಲು ಪಡೆಯಲಿವೆ. ಇದರಿಂದ ಕೇಂದ್ರ ಸರಕಾರಕ್ಕೆ ಕಡಿಮೆ ಪಾಲು ಉಳಿಯಲಿದ್ದರೂ, ಒಕ್ಕೂಟ ವ್ಯವಸ್ಥೆ ಬಲಪಡಿಸಿ, ರಾಜ್ಯಗಳ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ನಿಧಿ ದೊರಕಿಸಿ ಕೊಡುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ರಾಜ್ಯ ಸರ್ಕಾರಗಳೂ ತಮ್ಮ ಆದ್ಯತೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ. ಇಂತಹ ಅಪರೂಪದ ಪಾಲು ಹೆಚ್ಚಳದಿಂದಾಗಿ ರಾಜ್ಯ ಸರ್ಕಾರಗಳು ತಮ್ಮ ಇಚ್ಚೆಗೆ ಅನುಗುಣವಾಗಿ, ಸ್ವಾಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿ ಪ್ರತಿ ರಾಜ್ಯವನ್ನೂ ಸಬಲೀಕರಿಸಲು ನೆರವಾಗಲಿದೆ. ಆರ್ಥಿಕವಾಗಿಯೂ ಆ ರಾಜ್ಯಗಳು ಬಲಿಷ್ಟವಾಗಲಿವೆ.
ಅಷ್ಟೇ ಅಲ್ಲ, ಚೀನಾ ಪ್ರವಾಸದ ವೇಳೆಗೆ ಪ್ರಧಾನ ಮಂತ್ರಿಯವರು ಇಬ್ಬರು ಮುಖ್ಯಮಂತ್ರಿಗಳನ್ನು ಕರೆದೊಯ್ದು ಹೊಸತನಕ್ಕೆ ನಾಂದಿ ಹಾಡಿದ್ದಾರೆ. ಪ್ರಾಂತೀಯ ನಾಯಕರ ವೇದಿಕೆ ಸ್ಥಾಪಿಸಿ, ಕೇಂದ್ರ-ರಾಜ್ಯಗಳ ಸಂಬಂಧಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.
ರಾಜ್ಯಗಳಿಗೆ ಭಾರೀ ಉತ್ತೇಜನ ನೀಡುವ ನಿಟ್ಟಿನಲ್ಲಿ ಮುಖ್ಯವಾಗಿ ಕಲ್ಲಿದ್ದಲು ನಿಕ್ಷೇಪಗಳಿರುವ ಈಶಾನ್ಯ ರಾಜ್ಯಗಳಿಗೆ ಹರಾಜಿನಲ್ಲಿ ಹೆಚ್ಚಿನ ಅಧಿಕಾರ ಮತ್ತು ಪಾಲು ನೀಡುವುದರೊಂದಿಗೆ ಮತ್ತೊಂದು ಹೊಸ ಮೈಲಿಗಲ್ಲು ನೆಡಲಾಗಿದೆ.