ಪಂಡಿತ್ ಜವಾಹರ ಲಾಲ್ ನೆಹರು ನವೆಂಬರ್ 14, 1889ರಂದು ಅಲಹಾಬಾದ್ನಲ್ಲಿ ಜನಿಸಿದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಮನೆಯಲ್ಲೇ ಖಾಸಗಿ ಶಿಕ್ಷಕರಿಂದ ಪಡೆದರು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಅವರು ಇಂಗ್ಲೆಂಡಿಗೆ ತೆರಳಿದರು. ಎರಡು ವರ್ಷಗಳ ಬಳಿಕ ಅಲ್ಲಿಂದ ಹ್ಯಾರೊಗೆ ತೆರಳಿ ಕೇಂಬ್ರಿಡ್ಜ್ ವಿಶ್ವಿದ್ಯಾಲಯವನ್ನು ಸೇರಿದರು. ಅಲ್ಲಿ ಅವರು ನೈಸರ್ಗಿಕ ವಿಜ್ಞಾನದಲ್ಲಿ ಪದವಿ ಪಡೆದರು. ಅವರು 1912ರಲ್ಲಿ ಭಾರತಕ್ಕೆ ಮರಳಿ ನೇರವಾಗಿ ರಾಜಕೀಯಕ್ಕೆ ಧುಮುಕಿದರು. ವಿದೇಶಿಯರ ದಬ್ಬಾಳಿಕೆಗೆ ಒಳಗಾಗಿ ನಲುಗುತ್ತಿದ್ದ ಎಲ್ಲ ರಾಷ್ಟ್ರಗಳ ಹೋರಾಟಗಳ ಕುರಿತು ವಿದ್ಯಾರ್ಥಿಯಾಗಿದ್ದಾಗಲೆ ನೆಹರೂ ಅವರು ಆಸಕ್ತಿ ಬೆಳೆಸಿಕೊಂಡಿದ್ದರು. ಅವರು ಐಲ್ರ್ಯಾಂಡಿನ ಸಿನ್ ಫೆನ್ ಚಳುವಳಿಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರನ್ನು ಅನಿವಾರ್ಯವಾಗಿ ಕರೆತರಲಾಯಿತು..
1912ರಲ್ಲಿ ಬಂಕಿಪುರ್ ಕಾಂಗ್ರೆಸ್ನಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ ಅವರು ಬಳಿಕ 1919ರಲ್ಲಿ ಅಲಹಾಬಾದ್ನಲ್ಲಿ ನಡೆದ ಹೋಮ್ ರೂಲ್ ಲೀಗ್ನ ಕಾರ್ಯದರ್ಶಿಯಾದರು. 1916ರಲ್ಲಿ ಅವರು ಮೊತ್ತಮೊದಲ ಬಾರಿಗೆ ಮಹಾತ್ಮಾ ಗಾಂಧಿ ಅವರನ್ನು ಭೇಟಿಯಾಗಿ ಅವರಿಂದ ಅತೀವ ಸ್ಪೂರ್ತಿಗೊಳಗಾದರು. 1920ರಲ್ಲಿ ಉತ್ತರ ಪ್ರದೇಶದ ಪ್ರತಾಪಗರ್ ಜಿಲ್ಲೆಯಲ್ಲಿ ಅವರು ಮೊದಲ ಕಿಸಾನ್ ಯಾತ್ರೆಯನ್ನು ಆಯೋಜಿಸದರು. 1920-1922ರ ಅಸಹಕಾರ ಚಳುವಳಿಗೆ ಸಂಬಂಧಿಸಿದಂತೆ ಅವರನ್ನು ಎರಡು ಬಾರಿ ಬಂಧಿಸಲಾಯಿತು.
ಪಂಡಿತ್ ಜವಾಹರ ಲಾಲ್ ನೆಹರು ಸೆಪ್ಟೆಂಬರ್ 1923ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಾಮಾನ್ಯ ಕಾರ್ಯದರ್ಶಿಯಾದರು. 1926ರಲ್ಲಿ ಅವರು ಇಟೆಲಿ, ಸ್ವಿಜರ್ಲ್ಯಾಂಡ್, ಬೆಲ್ಜಿಯಮ್, ಜರ್ಮನಿ ಮತ್ತು ರಶ್ಯಾ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದರು. ಬೆಲ್ಜಿಯಮ್ನಲ್ಲಿ ತುಳಿತಕ್ಕೊಳಗಾದ ರಾಷ್ಟ್ರೀಯವಾದಿಗಳ ಕಾಂಗ್ರೆಸ್ ( ಕಾಂಗ್ರೆಸ್ ಆಫ್ ದಿ ಒಪ್ರೆಸ್ಡ್ ನಾಷನಲಿಸ್ಟ್ಸ್) ಸಮಾವೇಶಕ್ಕೆ ಹಾಜರಾದರು. ಬಳಿಕ ಬ್ರುಸೆಲ್ಸ್ನಲ್ಲಿ ನಡೆದ ಇಂಡಿಯನ್ ನಾಷನಲ್ ಕಾಂಗ್ರೆಸ್ನಲ್ಲಿ ಅಧಿಕೃತ ಪ್ರತಿನಿಧಿಯಾಗಿ ಭಾಗವಹಿಸಿದರು. 1927ರಲ್ಲಿ ಮಾಸ್ಕೋದಲ್ಲಿ ನಡೆದ ಅಕ್ಟೋಬರ್ ಸಾಮಾಜಿಕ ಕ್ರಾಂತಿಯ (ಅಕ್ಟೋಬರ್ ಸೋಶಿಯಲಿಸ್ಟ್ ರೆವೆಲ್ಯೂಷನ್) ದಶಮಾನೋತ್ಸವದಲ್ಲೂ ಭಾಗವಹಿಸಿದರು. 1926ರ ಪೂರ್ವ ಕಾಲದಲ್ಲಿ ನೆಹರು ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯದ ಗುರಿಗೆ ಕಟಿಬದ್ಧವಾಗಿರಿಸುವಲ್ಲಿ ಮದ್ರಾಸ್ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದ್ದರು. 1928ರಲ್ಲಿಸೈಮನ್ ಕಮಿಷನ್ನ ವಿರುದ್ಧ ಹೋರಾಟವೊಂದರ ನೇತೃತ್ವ ವಹಿಸಿದಾಗ ಲಕ್ನೋದಲ್ಲಿ ಅವರು ಲಾಠಿ ಚಾರ್ಜ್ಗೆ ಒಳಗಾದರು. 1928ರ ಆಗಸ್ಟ್ 29ರಂದು ಸರ್ವ ಪಕ್ಷ ಕಾಂಗ್ರೆಸ್ಗೆ ಹಾಜರಾದರು. ತಮ್ಮ ತಂದೆ ಶ್ರೀ ಮೋತಿಲಾಲ್ ನೆಹರು ಅವರ ಹೆಸರಿಡಲಾದ ಭಾರತೀಯ ಸಂವಿಧಾನಾತ್ಮಕ ಸುಧಾರಣೆಗಳ ನೆಹರೂ ವರದಿಯ ಸಹಿದಾರರಲ್ಲಿ ಒಬ್ಬರಾಗಿದ್ದರು. ಅದೇ ವರುಷ ಭಾರತವನ್ನು ಬ್ರಿಟಿಷರಿಂದ ಸಂಪೂರ್ಣವಾಗಿ ಬೇರ್ಪಡಿಸುವ ಗುರಿ ಹೊಂದಿದ್ದ ‘ಇಂಡಿಪೆಂಡೆನ್ಸ್ ಫಾರ್ ಇಂಡಿಯಾ ಲೀಗ್’ನ್ನು ನೆಹರು ಸ್ಥಾಪಿಸಿದರು ಮತ್ತು ಅದರ ಸಾಮಾನ್ಯ ಕಾರ್ಯದರ್ಶಿಯಾದರು.
1929ರಲ್ಲಿ ದೇಶದ ಸ್ವಾತಂತ್ರ್ಯವನ್ನು ಗುರಿಯಾಗಿಸಿಕೊಂಡಿದ್ದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ಲಾಹೋರ್ ಅಧಿವೇಶನದಲ್ಲಿ ಪಂಡಿತ್ ನೆಹರೂ ಚುನಾಯಿತ ಅಧ್ಯಕ್ಷರಾದರು. ಕಾಂಗ್ರೆಸ್ ಪಕ್ಷವು ಪ್ರಾರಂಭಿಸಿದ ಹಲವಾರು ಚಳುವಳಿಗಳು ಮತ್ತು ಉಪ್ಪಿನ ಸತ್ಯಾಗ್ರಹಕ್ಕೆ ಸಂಬಂಧಿಸಿದರಂತೆ ಪಂಡಿತ್ ನೆಹರು ಅವರನ್ನು 1930 ರಿಂದ 1935ರೊಳಗೆ ಹಲವು ಬಾರಿ ಬಂಧಿಸಲಾಯಿತು. ಫೆಬ್ರವರಿ 14, 1935ರಂದು ನೆಹರು ತಮ್ಮ ಜೀವನ ಚರಿತ್ರೆಯನ್ನು ಅಲ್ಮೋರಾ ಕಾರಾಗೃಹದಲ್ಲಿ ಸಂಪೂರ್ಣಗೊಳಿಸಿದರು. ಕಾರಾಗೃಹದಿಂದ ಬಿಡುಗಡೆಗೊಂಡ ಬಳಿಕ ಅವರು ಅನಾರೋಗ್ಯ ಪೀಡಿತ ತಮ್ಮ ಪತ್ನಿಯನ್ನು ಕಾಣಲು ಸ್ವಿಜರ್ಲ್ಯಾಂಡ್ಗೆ ಪ್ರಯಾಣ ಬೆಳೆಸಿದರು. ಬಳಿಕ ಅಲ್ಲಿಂದ 1936ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಲಂಡನ್ಗೆ ಪ್ರಯಾಣ ಬೆಳೆಸಿದರು. 1938ರಲ್ಲಿ ಸ್ಪೇನ್ ದೇಶ ಸಿವಿಲ್ ಯುದ್ಧವನ್ನು ಎದುರಿಸುತ್ತಿದ್ದಾಗ ನೆಹರು ಅವರು ಅಲ್ಲಿಗೆ ಭೇಟಿ ನೀಡಿದ್ದರು. ಎರಡನೆಯ ಮಹಾಯುದ್ಧ ಪ್ರಾರಂಭದ ಮುನ್ನ ಅವರು ಚೀನಾಕ್ಕೂ ಭೇಟಿ ನೀಡಿದರು.
ಅಕ್ಟೋಬರ್ 31, 1940ರಂದು ಭಾರತವನ್ನು ಒತ್ತಾಯಪೂರ್ವಕವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಮಾಡಿದುದರ ವಿರುದ್ಧ ನಡೆಸಿದ ವಯುಕ್ತಿಕ ಸತ್ಯಾಗ್ರಹಕ್ಕಾಗಿ ಪಂಡಿತ್ ನೆಹರು ಅವರನ್ನು ಬಂಧಿಸಲಾಯಿತು. ಇತರ ನಾಯಕರ ಜತೆ ಡಿಸೆಂಬರ್ 1941ರಲ್ಲಿ ಅವರನ್ನೂ ಬಿಡುಗಡೆ ಮಾಡಲಾಯಿತು. ಅಕ್ಟೋಬರ್ 7, 1942ರಲ್ಲಿ ಪಂಡಿತ್ ನೆಹರು ಮುಂಬಯಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನದಲ್ಲಿ ಐತಿಹಾಸಿಕ ‘ಕ್ವಿಟ್ ಇಂಡಿಯಾ’ ಮಸೂದೆಯನ್ನು ಮಂಡಿಸಿದರು. ಆಗಸ್ಟ್ 8, 1942ರಲ್ಲಿ ಅವರನ್ನು ಇನ್ನಿತರ ನಾಯಕರ ಜತೆ ಬಂಧಿಸಿ ಅಹ್ಮದ್ನಗರ ಕೋಟೆಗೆ ಕರೆದೊಯ್ಯಲಾಯಿತು. ಇದು ಅವರ ಜೀವನದ ಸುದೀರ್ಘ ಹಾಗೂ ಕೊನೆಯ ಸೆರೆವಾಸವಾಗಿತ್ತು. ಅವರು ಒಟ್ಟಾಗಿ ಒಂಭತ್ತು ಬಾರಿ ಸೆರೆವಾಸ ಅನುಭವಿಸಿದ್ದರು. ಜನವರಿ 1945ರಲ್ಲಿ ಬಿಡುಗಡೆಗೊಂಡ ಬಳಿಕ ದೇಶದ್ರೋಹದ ಆರೋಪ ಎದುರಿಸುತ್ತಿದ್ದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗಾಗಿ ನ್ಯಾಯಯುತ ಹೋರಾಟ ಆರಂಭಿಸಿದರು. 1946ರ ಮಾರ್ಚ್ ತಿಂಗಳಲ್ಲಿ ಪಂಡಿತ್ ನೆಹರು ಆಗ್ನೇಯ ಏಷ್ಯಾ ಪ್ರವಾಸವನ್ನು ಕೈಗೊಂಡರು. 1946ರ ಜುಲೈ6 ರಂದು ಅವರು ನಾಲ್ಕನೆಯ ಬಾರಿಗೆ ಕಾಂಗ್ರೆಸ್ ಪಕ್ಷದ ಚುನಾಯಿತ ಅಧ್ಯಕ್ಷರಾದರು. ಆ ಬಳಿಕ 1951ರಿಂದ 1954ರವರೆಗೆ ಮುಂದಿನ ಮೂರು ಅವಧಿಗಳಿಗೂ ಅವರು ಪಕ್ಷದ ಅಧ್ಯಕ್ಷರಾಗಿದ್ದರು.