ನವೆಂಬರ್ 19, 1917ರಂದು ಸುಪ್ರಸಿದ್ಧ ಕುಟುಂಬವೊಂದರಲ್ಲಿ ಜನಿಸಿದ ಶ್ರೀಮತಿ ಇಂದಿರಾ ಗಾಂಧಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಪುತ್ರಿ . ಅವರು ಸ್ವಿಟ್ಜಲ್ಯಾಂಡ್ನ ಎಕೊಲೆ ನವೊಲೆ, ಬೆಕ್ಸ್, ಜಿನೆವಾದ ಎಕೊಲೆ ಇಂಟರ್ನ್ಯಾಷನಲ್, ಪೂನಾ ಮತ್ತು ಮುಂಬಯಿಯ ಪ್ಯೂಪಿಲ್ಸ್ ಓನ್ ಸ್ಕೂಲ್, ಬ್ರಿಸ್ಟ್ಟಾಲ್ನ ಬ್ಯಾಡ್ಮಿಂಟನ್ ಸ್ಕೂಲ್, ಶಾಂತಿನಿಕೇತನದ ವಿಶ್ವಭಾರತಿ, ಆಕ್ಸ್ಫರ್ಡ್ನ ಸೊಮರ್ವಿಲ್ಲೆ ಕಾಲೇಜ್ ಮುಂತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿಧ್ಯಾಭ್ಯಾಸ ಪೂರೈಸಿದರು. ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿ ಗೌರವಿಸಿದವು. ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಉನ್ನತ ಶ್ರೇಣಿಯನ್ನು ಪಡೆದವರು.
ಶ್ರೀಮತಿ ಇಂದಿರಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿದವರು. ಅಸಹಕಾರ ಚಳುವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡಲು 1930ರಲ್ಲಿ ಅವರು ‘ಬಾಲ ಚರಕ ಸಂಘ’ವನ್ನು ಮತ್ತು ಮಕ್ಕಳ ‘ವಾನರ ಸೇನೆ’ಯನ್ನು ಸ್ಥಾಪಿಸಿದರು. 1942ರಲ್ಲಿ ಅವರನ್ನು ಬಂಧಿಸಲಾಯಿತು. 1947ರಲ್ಲಿ ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಇಂದಿರಾ ಅವರು ದೆಹಲಿಯ ಕೋಮುಗಲಭೆ ಪೀಡಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದರು.
1942ರ ಮಾರ್ಚ್ 26ರಂದು ಇಂದಿರಾ ಫಿರೋಜ್ ಗಾಂಧಿ ಅವರನ್ನು ವಿವಾಹವಾದರು. ಬಳಿಕ ಇಬ್ಬರು ಗಂಡುಮಕ್ಕಳಿಗೆ ತಾಯಿಯಾದರು. 1955ರಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣೆ ಮತ್ತು ಕಾರ್ಯಕಾರಿಣಿ ಸಮಿತಿಗೆ ಸದಸ್ಯರಾದರು. 1958ರಲ್ಲಿ ಕಾಂಗ್ರೆಸ್ನ ಕೇಂದ್ರೀಯ ಸಂಸದೀಯ ಮಂಡಳಿಗೆ ಸದಸ್ಯೆಯಾಗಿ ನೇಮಕಗೊಂಡರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಏಕೀಕರಣ ಸಮಿತಿ ಅಧ್ಯಕ್ಷೆಯಾದರು. 1956ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆಯಾದರು. 1959ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆಯಾಗಿ 1960ರವರೆಗೆ ಸೇವೆ ಸಲ್ಲಿಸಿದರು. ಪುನಃ 1978ರಲ್ಲಿ ಇದೇ ಹುದ್ದೆಗೆ ನೇಮಕಗೊಂಡರು.
1964-1966 ವರಗೆ ವಾರ್ತಾ ಮತ್ತು ಪ್ರಸಾರ ಸಚಿವೆಯಾಗಿದ್ದರು. ಜನವರಿ 1966ರಿಂದ ಮಾರ್ಚ್ 1977ರವರೆಗೆ ಭಾರತದ ಪ್ರಧಾನಮಂತ್ರಿಯಾಗಿ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸಿದರು. ಸೆಪ್ಟೆಂಬರ್ 1967ರಿಂದ ಮಾರ್ಚ್ 1977ರವರೆಗೆ ಪರಮಾಣು ಶಕ್ತಿ ಖಾತೆಯ ಸಚಿವರಾಗಿದ್ದರು. ಸೆಪ್ಟೆಂಬರ್ 5, 1967ರಿಂದ ಫೆಬ್ರವರಿ 14, 1969ರವರೆಗೆ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಹೊಣೆಯನ್ನೂ ಹೊತ್ತರು. ಜೂನ್ 1970ರಿಂದ ನವೆಂಬರ್ 1973ರವರೆಗೆ ಗೃಹ ಸಚಿವಾಲಯದ ನೇತೃತ್ವವನ್ನು ಶ್ರೀಮತಿ. ಗಾಂಧಿ ವಹಿಸಿಕೊಂಡಿದ್ದರು. ಜೂನ್ 1972ರಿಂದ 1977 ಮಾರ್ಚ್ ತಿಂಗಳವರೆಗೆ ಬಾಹ್ಯಾಕಾಶ ಖಾತೆಯ ಸಚಿವೆಯಾಗಿದ್ದರು.ಜನವರಿ 1980ರಿಂದ ಅವರು ಯೋಜನಾ ಆಯೋಗದ ಅಧ್ಯಕ್ಷೆಯಾಗಿದ್ದರು. ಜನವರಿ 14, 1980ಕ್ಕೆ ಮತ್ತೆ ಪ್ರಧಾನ ಮಂತ್ರಿಯಾದರು.
ಕಮಲಾ ನೆಹರೂ ಸ್ಮರಣಾರ್ಥ ಆಸ್ಪತ್ರೆ, ಗಾಂಧಿ ಸ್ಮಾರಕ್ ನಿಧಿ ಮತ್ತು ಕಸ್ತೂರ ಬಾ ಮೆಮೊರಿಯಲ್ ಟ್ರಸ್ಟ್ ಹೀಗೆ ಹಲವಾರು ಸಂಸ್ಥೆಗಳ ಜತೆ ಶ್ರೀಮತಿ. ಇಂದಿರಾ ಗಾಂಧಿ ನಿಕಟ ಸಂಪರ್ಕ ಹೊಂದಿದ್ದರು. ಅವರು ಸ್ವರಾಜ್ ಭವನ ಟ್ರಸ್ಟ್ನ ಅಧ್ಯಕ್ಷೆಯಾಗಿದ್ದರು. ಬಾಲ ಸಹಯೋಗ್ , ಬಾಲ ಭವನ ಮಂಡಳಿ ಮತ್ತು ಮಕ್ಕಳ ರಾಷ್ಟ್ರೀಯ ಸಂಗ್ರಹಾಲಯಗಳ ಜತೆಯೂ ಉತ್ತಮ ಸಂಬಂಧ ಹೊಂದಿದ್ದರು. ಶ್ರೀಮತಿ ಗಾಂಧಿ ಅವರು ಅಲಹಾಬಾದ್ನಲ್ಲಿ ಕಮಲಾ ನೆಹರು ವಿದ್ಯಾಲಯವನ್ನು ಸ್ಥಾಪಿಸಿದರು. 1966-77 ಅವಧಿಯಲ್ಲಿ ಶ್ರೀಮತಿ ಗಾಂಧಿ, ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ನಾರ್ಥ್ ಈಸ್ಟರ್ನ್ ಯುನಿವರ್ಸಿಟಿಗಳಂತಹ ಬೃಹತ್ ಸಂಸ್ಥೆಗಳ ಜತೆ ಸಂಪರ್ಕ ಹೊಂದಿದ್ದರು. 1060-64ರ ಅವಧಿಯಲ್ಲಿ ಅವರು ದೆಹಲಿ ವಿಶ್ವವಿದ್ಯಾಲಯ ಕೋರ್ಟ್ ಮತ್ತು ಯುನೆಸ್ಕೋದ ಭಾರತೀಯ ನಿಯೋಗದ ಸದಸ್ಯೆಯಾಗಿದ್ದರು. ಇದೇ ಅವಧಿಯಲ್ಲಿ ಯುನೆಸ್ಕೋದ ಕಾರ್ಯನಿರ್ವಹಣಾ ಮಂಡಳಿಯ ಸದಸ್ಯೆಯಾಗಿದ್ದರು. 1962ರಲ್ಲಿ ರಾಷ್ಟ್ರೀಯ ರಕ್ಷಣಾ ಮಂಡಳಿಯ ಸದಸ್ಯೆಯಾದರು. ಸಂಗೀತ ಮತ್ತು ನಾಟಕ ಅಕಾಡೆಮಿ, ರಾಷ್ಟ್ರೀಯ ಏಕೀಕರಣ ಸಮಿತಿ, ಹಿಮಾಲಯ ಪರ್ವತಾರೋಹಣ ಸಂಸ್ಥೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಹಾಗೂ ಜವಾಹರ ಲಾಲ್ ನೆಹರೂ ಸ್ಮರಣಾರ್ಥ ನಿಧಿ ಇವುಗಳ ಜತೆ ನಿಕಟ ಸಂಬಂಧ ಹೊಂದಿದ್ದರು.
ಆಗಸ್ಟ್ 1964ರಿಂದ ಫೆಬ್ರವರಿ 1967ರವರಗೆ ಇಂದಿರಾ ಗಾಂಧಿ ಅವರು ರಾಜ್ಯಸಭೆಯ ಸದಸ್ಯೆಯಾಗಿದ್ದರು. ನಾಲ್ಕು, ಐದು ಮತ್ತು ಆರನೆಯ ಅಧಿವೇಶನಗಳ ವೇಳೆಯಲ್ಲಿ ಅವರು ಲೋಕಸಭಾ ಸದಸ್ಯೆಯಾಗಿದ್ದರು. ಜನವರಿ 1980ರಲ್ಲಿ ಏಳನೆಯ ಲೋಕಸಭೆಗೆ ಅವರು ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಆಂಧ್ರ ಪ್ರದೇಶದ ಮೇಡಕ್ನಿಂದ ಚುನಾಯಿತರಾದರು. ಅವರು ಮೇಡಕ್ ಸ್ಥಾನವನ್ನು ಉಳಿಸಿಕೊಂಡು ರಾಯ್ ಬರೇಲಿಯನ್ನು ಸ್ಥಾನವನ್ನು ಬಿಟ್ಟುಕೊಟ್ಟರು. 1967ರಿಂದ 1977ರ ಅವಧಿಯಲ್ಲಿ ಶ್ರೀಮತಿ. ಗಾಂಧಿ ಅವರನ್ನು ಕಾಂಗ್ರೆಸ್ ಸಂಸದೀಯ ಸಮಿತಿಯ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಯಿತು. 1980ರ ಜನವರಿಯಲ್ಲಿ ಮತ್ತೆ ಅದೇ ಸ್ಥಾನಕ್ಕೆ ಅವರು ಆಯ್ಕೆಯಾದರು.
ಶ್ರೀಮತಿ ಇಂದಿರಾ ಗಾಂಧಿ ಅವರ ಹಿರಿಮೆಯ ಕಿರೀಟಕ್ಕೆ ಹಲವಾರು ಸಾಧನೆಗಳ ಗರಿಗಳಿದ್ದವು. ಅವರು 1972ರ ಸಾಲಿನ ಭಾರತ ರತ್ನ ಪ್ರಶಸ್ತಿ ಪುರಸ್ಕøತೆ. ಬಾಂಗ್ಲಾದೇಶದ ವಿಮೋಚನೆಗಾಗಿ ಮೆಕ್ಸಿಕನ್ ಅಕಾಡೆಮಿ ಪ್ರಶಸ್ತಿ ಅದೇ ವರುಷ ಲಭ್ಯವಾಗಿತ್ತು. 1973ರಲ್ಲಿ ಎಫ್ಎಒನ ದ್ವಿತೀಯ ವಾರ್ಷಿಕ ಪದಕ, 1976ರರಲ್ಲಿ ನಗರಿ ಪ್ರಚಾರಿಣಿ ಸಭಾ ಕೊಡಮಾಡುವ ಸಾಹಿತ್ಯ ವಚಸ್ಪತಿ (ಹಿಂದಿ) ಪ್ರಶಸ್ತಿ, 1953ರಲ್ಲಿ ಅಮೆರಿಕಾದ ಮದರ್ಸ್ ಅವಾರ್ಡ್, ರಾಜನೀತಿಯಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಇಟೆಲಿಯ ಐಸ್ಲೆಬೆಲ್ಲಾ ಡಿ ಎಸ್ಟೆ ಪ್ರಶಸ್ತಿ, ಯಾಲೆ ವಿಶ್ವವಿದ್ಯಾಲಯದ ಹೌಲ್ಯಾಂಡ್ ಮೆಮೋರಿಯಲ್ ಪ್ರಶಸ್ತಿ ಲಭಿಸಿದವು. ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪೀನಿಯನ್ ಕೈಗೊಂಡ ಸಮೀಕ್ಷೆಗಳ ಪ್ರಕಾರ ಅವರು 1967 ಮತ್ತು 1968 ಎರಡು ವರುಷಗಳಲ್ಲಿ ನಿರಂತರವಾಗಿ ಶ್ರೀಮತಿ ಇಂದಿರಾ ಗಾಂಧಿ ಫ್ರೆಂಚರ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ಮಹಿಳೆ ಎಂಬ ವಿಷಯವನ್ನು ತಿಳಿಸಿತು. 1971ರಲ್ಲಿ ಅಮೆರಿಕಾದಲ್ಲಿ ನಡೆದ ವಿಶೆಷ ಗ್ಯಾಲಪ್ ಸಮೀಕ್ಷೆ ಪ್ರಕಾರ ಅವರು ಪ್ರಪಂಚದಲ್ಲೇ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ವ್ಯಕ್ತಿ. ಪ್ರಾಣಿಗಳ ರಕ್ಷಣೆಗಾಗಿ 1971ರಲ್ಲಿ ಅಂರ್ಜೆಟಿನಾ ಸೊಸೈಟಿ ಅವರಿಗೆ ಗೌರವ ಡಿಪ್ಲೊಮಾ ಪ್ರದಾನ ಮಾಡಿತು.
ದಿ ಯಿಯರ್ ಆಫ್ ಚಾಲೆಂಜ್ ( 1966-69), ದಿ ಯಿಯರ್ಸ್ ಆಫ್ ಎಂಡೆವಿಯರ್ ( 1069-72) ಇಂಡಿಯಾ (ಲಂಡನ್) (1095), ‘ಇಂಡೆ ( ಲಾವುಸಾನೆ) (1979) ಮತ್ತಿತರ ಭಾಷಣ ಮತ್ತು ಬರಹಗಳ ಸಂಗ್ರಹ ಅವರ ಪ್ರಸಿದ್ಧ ಪ್ರಕಟಣೆಯನ್ನು ಸೇರಿವೆ. ಶ್ರೀಮತಿ ಗಾಂಧಿ ಅವರು ಭಾರತ ಮತ್ತು ಪ್ರಪಂಚದೆಲ್ಲೆಡೆ ಸಾಕಷ್ಟು ಪ್ರಯಾಣ ಕೈಗೊಂಡವರು. ಅಫ್ಘಾನಿಸ್ಥಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಚೀನಾ, ಶ್ರೀಲಂಕಾ ಮತ್ತು ಬರ್ಮಾಗಳಂತಹ ನೆರೆ ರಾಜ್ಯಗಳಿಗೂ ಅವರು ಭೇಟಿ ನೀಡಿದ್ದರು. ಫ್ರಾನ್ಸ್, ಜರ್ಮನ್ ಪ್ರಜಾಪ್ರಭುತ್ವ ಗಣರಾಜ್ಯ, ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಗಯಾನಾ, ಹಂಗೇರಿ, ಇರಾನ್, ಇರಾಕ್ ಮತ್ತು ಇಟೆಲಿ ರಾಷ್ಟ್ರಗಳಿಗೆ ಅಧಿಕೃತ ಭೇಟಿ ನೀಡಿದರು. ಅಲ್ಜಿರಿಯಾ, ಅರ್ಜೆಂಟಿನಾ, ಆಸ್ಟ್ರೆಲಿಯಾ, ಆಸ್ಟ್ರಿಯಾ, ಬೆಲ್ಜಿಯಮ್, ಬ್ರೆಜಿಲ್, ಬಲ್ಗೆರಿಯಾ, ಕೆನಡಾ, ಚಿಲಿ, ಜೆಕೊಸ್ಲಾವೆಕಿಯಾ, ಬೊಲಿವಿಯಾ ಮತ್ತು ಈಜಿಪ್ಟ್ಗಳಂತಹ ಅತ್ಯಧಿಕ ರಾಷ್ಟ್ರಗಳಿಗೆ ಭೇಟಿ ಮಾಡಿದವರಲ್ಲಿ ಶ್ರೀಮತಿ ಇಂದಿರಾ ಗಾಂಧಿ ಒಬ್ಬರು. ಇಂಡೊನೇಶ್ಯಾ, ಜಪಾನ್, ಜಮೈಕಾ, ಕೆನ್ಯಾ, ಮಲೆಷ್ಯಾ, ಮಾರಿಷಸ್, ಮೆಕ್ಸಿಕೊ, ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್ ನೈಜಿರಿಯಾ, ಒಮನ್, ಪೋಲ್ಯಾಂಡ್, ರುಮಾನಿಯಾ, ಸಿಂಗಾಪುರ್, ಸ್ವಿಟ್ಜರ್ಲ್ಯಾಂಡ್, ಸಿರಿಯಾ, ಸ್ವಿಡನ್, ತಾಂಜೆನಿಯಾ, ಥಯ್ಲ್ಯಾಂಡ್, ಟ್ರಿನಿಡಾಡ್ ಮತ್ತು ಟೊಬಾಗೋಗಳಂತಹ ಅಮೆರಿಕನ್, ಯುರೋಪಿಯನ್ ಮತ್ತು ಏಷ್ಯಾ ರಾಷ್ಟ್ರಗಳಿಗೆ ಇವರು ಭೇಟಿ ನೀಡಿದರು. ವಿಶ್ವ ಸಂಸ್ಥೆಯ ಮುಖ್ಯ ಕಛೇರಿಗೂ ಅವರು ಭೇಟಿ ನೀಡಿದರು.